ಬದುಕು ಭಾರವಲ್ಲ 6
ಸ್ನೇಹ
ನಮ್ಮ ಬದುಕಿನಲ್ಲಿ ಮಾತು ಎಷ್ಟು ಮುಖ್ಯವೋ ಸ್ನೇಹ ಅದಕ್ಕಿಂತಲೂ ಮುಖ್ಯ.
ಹೇಗೆನ್ನುವಿರಿ ಯಾರಿಗೆ ಮಾತು ಬರುವುದಿಲ್ಲವೋ ಅವರ ಸ್ನೇಹ ಮಾಡಿದರೆ ಅವರಿಗೆ ಬದುಕು ಭಾರವಲ್ಲ ಅಲ್ಲವೇ ?
ಮನದಲ್ಲಿರುವ ಭಾವನೆಗಳನ್ನು ನಾವು ನಮ್ಮ ತಂದೆ -ತಾಯಿಗಳ ಮುಂದೆ ಹೇಳುವುದಿಲ್ಲ .ಆದರೆ ನಮ್ಮ ಆತ್ಮೀಯ ಸ್ನೇಹಿತರಲ್ಲಿ ಮಾತ್ರ ನಾವು ನಮ್ಮ ಮನದ ಬಯಕೆಯನ್ನು , ನೋವನ್ನು .ಸಂತೋಷ ವನ್ನು ಹಂಚಿಕೊಳ್ಳುತ್ತೇವೆ.
ಯಾವ ವ್ಯಕ್ತಿಗೆ ಸ್ನೇಹಿತರು ಇರುವುದಿಲ್ಲವೋ ಆತ ಮೌನವಾಗಿ ದಿನವನ್ನು ಕಳೆಯುತ್ತಾನೆ .
ಒಬ್ಬರ ಜೊತೆಗೆ ಸ್ನೇಹ ಬೆಳೆಯಬೇಕಾದರೆ ಅದು ದೇವರ ಕೊಡುಗೆ . ದೇವರೇ ಕೂಡಿಸಿದುದು ದೇವರು ಒಳ್ಳೆಯ ಸ್ನೇಹಿತರ ಪರಿಚಯ ಮಾಡಿಸಿ . ಕೊನೆಗೆ ಕೆಟ್ಟ ಸ್ನೇಹಿತರ ನಂಬಿಕೆ ದ್ರೋಹಿಗಳ ,ಪರಿಚಯವನ್ನೂ ಮಾಡಿಸಿರುತ್ತಾನೆ.
ಸ್ನೇಹಕ್ಕೆ ವಯಸ್ಸು ಧರ್ಮ, ಲಿಂಗ ಜಾತಿ , ಬಡವ ಶ್ರೀಮಂತ ಎನ್ನುವ ಭೇದ ಇರುವುದಿಲ್ಲ. ಸ್ನೇಹ ಒಂದು ಮಧುರ ಸಂಬಂಧ.
ಬರೀ ಮಾನವರಲ್ಲಿ ಅಷ್ಟೇ ಅಲ್ಲ
ಪ್ರಾಣಿ ಪಕ್ಷಿಗಳಲ್ಲಿಯೂ ಸ್ನೇಹ ಇರುತ್ತವೆ. ಬಾಲ್ಯದ ಸ್ನೇಹ ಬಹುತೇಕ ಬಹಳಷ್ಟು ಗಟ್ಟಿ ಹಾಗೂ ಕೊನೆಯವರೆಗೂ ಬದಲಾಗದೇ ಇರುವ ಸ್ನೇಹ ಆಗಿರುತ್ತದೆ . ಏಕೆ ಅಂತಾ ಸ್ವಲ್ಪ ಯೋಚಿಸಿ ನೋಡಿ
ಬಾಲ್ಯದ ಸ್ನೇಹ ನಿಷ್ಕಲ್ಮಷ ಮನದಿಂದ ಬೆರೆತ ಎರಡು ಮನಗಳ ಗಟ್ಟಿ ಮಧುರ ಸ್ನೇಹ.
ಅಲ್ಲಿ ಯಾವುದೇ ರೀತಿಯಲ್ಲಿ ಭೇದ ಭಾವ ಇರುವುದಿಲ್ಲ.
ಹೊಟ್ಟೆಕಿಚ್ಚು ಇರುವುದಿಲ್ಲ. ದೀರ್ಘ ಅವಧಿಯವರೆಗೆ ನಮ್ಮ ನಮ್ಮ ಮನಗಳು ಅರ್ಥ ಮಾಡಿ ಕೊಂಡು ಕೂಡಿ ಆಟ ಆಡಿರುತ್ತವೆ ಕೂಡಿ ಶಿಕ್ಷಣವನ್ನು ಕಲಿತಿರುತ್ತವೆ. ಹೀಗಾಗಿ ಅದರಲ್ಲಿ ಗಟ್ಟಿತನ ತಾಳಿಕೆಯಿರುತ್ತದೆ ಮಧುರ ಭಾವ ವಿರುತ್ತವೆ.
ನಮಗೆ ಬುದ್ಧಿ ಬಂದಂತೆ ನಮ್ಮ ಆಲೋಚನೆಗಳು ಬದಲಾಗುತ್ತ ಬರುತ್ತವೆ .ನಮ್ಮ ಬದಲಾವಣೆ ನಮ್ಮ ಸ್ನೇಹಿತರಿಗೆ ಇಷ್ಟ ಆಗದೇ ಇರುವುದರಿಂದ ಸ್ನೇಹ ಹೆಚ್ಚಿನ ದಿವಸ ಮುಂದುವರೆಯಲಾರದೇ ಅರ್ಧಕ್ಕೆ ನಿಲ್ಲುತ್ತವೆ.
ಕೆಲವೊಂದು ಸ್ನೇಹ ಮುಂದುವರೆದರೂ ನಿಷ್ಕಲ್ಮಷದ ಭಾವನೆ ಇರುವುದಿಲ್ಲ.
ತೋರಿಕೆಗಾಗಿಯೋ, ತಮ್ಮ ಆಸೆಯನ್ನು ಇಡೇರಿಸಿಕೊಳ್ಳು ವುದಕ್ಕಾಗಿಯೋ., ನಮ್ಮ ಜೊತೆಗೆ ಒಬ್ಬರು ಸ್ನೇಹಿತರು ಬೇಕು ಅಂತಲೋ ಸ್ನೇಹ ಮಾಡುವುದಲ್ಲ.
ಸ್ನೇಹ ಯಾವಾಗಲೂ ನಿಷ್ಕಲ್ಮಷವಾಗಿರಬೇಕು.
ಯಾವುದೇ ಫಲಾಪೇಕ್ಷೆ ಇರಬಾರದು.
ಸ್ನೇಹ ಕ್ಕೆ ಬೆಲೆ ಕಟ್ಟಲು ಬರುವುದಿಲ್ಲ
ಸ್ನೇಹ ದಲ್ಲಿ ಮೋಸ ವಂಚನೆ ಸುಳ್ಳು ದ್ರೋಹ ಇರಬಾರದು
ಜ್ಞಾನ ವಂತರ ಬುದ್ಧಿವಂತರ ಸ್ನೇಹವನ್ನು ಬೆಳೆಯಿಸಿ ಉಳಿಸಿಕೊಂಡು ಹೋಗಬೇಕು.
ನಮ್ಮಿಂದ ಸ್ನೇಹಕ್ಕೆ ಮೋಸ ಮಾಡಿ ನಡುವಲ್ಲೇ ಸ್ನೇಹವನ್ನು ಮುರಿಯಬಾರದು. ಹಾಗೂ ಮುರಿದುಕೊಳ್ಳಬಾರದು.
ಸ್ನೇಹ ದಲ್ಲಿ ನಂಬಿಕೆ ,ಮತ್ತುವಿಶ್ವಾಸ ತು೦ಬಾ ಮುಖ್ಯ ಅದನ್ನು ಉಳಿಸಿಕೊಂಡು ಹೋಗಬೇಕು.
ಸ್ನೇಹಿತರಿಗೆ ಅಪತ್ಕಾಲ ಬಂದಾಗ ನೆರವಾಗಬೇಕು.
ಒಬ್ಬ ಸ್ನೇಹಿತನ ವಿಷಯವನ್ನು ಮತ್ತೊಬ್ಬರ ಮುಂದೆ ಹೇಳಬಾರದು .
ಸ್ನೇಹದಲ್ಲಿ ಯಾವತ್ತೂ ಹೊಟ್ಟೆಕಿಚ್ಚು ಇರಬಾರದು
.ಮುಂದೆ ಯಾವುದೇ ರಂಗ ಆಗಿರಬಹುದು ಸಾಹಿತ್ಯದಲ್ಲಾದರೂ ಆಗಿರಬಹುದು ಶಿಕ್ಷಣದಲ್ಲಾದರೂ ಆಗಿರಬಹುದು .ಕ್ರೀಡೆಯಲ್ಲಾದರೂ ಆಗಿರಬಹುದು. ಶ್ರೀಮಂತಿಕೆಯಲ್ಲಾದರೂ ಆಗಿರಬಹುದು.
ಎಲ್ಲೋ ಹುಟ್ಟಿ ಎಲ್ಲೋ ಬೆಳೆದು ಯಾರ ಯಾರನ್ನೋ ನಮ್ಮ ಬದುಕಿನಲ್ಲಿ ಪರಿಚಯಿಸಿ ಸ್ನೇಹಿತರನ್ನಾಗಿ ಮಾಡಿ ನಮ್ಮಿಂದ ಅವರಿಗೆ ಅವರಿಂದ ನಮಗೆ ನೋವಾದರೂ ಆ ನೋವು ಆ ಅವಮಾನ ಆ ಸಂಕಟ ಆ ದುಃಖ ಆ ವೇದನೆ ನಮ್ಮದೆ ಅಂತಾ ತಿಳಿದುಕೊಂಡು ದೊಡ್ಡ ಮನುಷ್ಯರಾಗುವಂತೆ ಮಾಡುತ್ತಾನೆ .
ಮನುಷ್ಯರಾಗಿ ಮಾನವೀಯ ಮೌಲ್ಯದ ಸ್ನೇಹವನ್ನು ಉಳಿಸಿಕೊಂಡು ಹೋಗುವ ಜವಾಬ್ದಾರಿ ಪ್ರತಿಯೊಬ್ಬರಿಗೂ ಇರಲೇಬೇಕು.
ಹಣದ ಆಸೆಗಾಗಿಯೋ, ಅಧಿಕಾರದ ಲಾಭಿಗಾಗಿಯೋ ,ಇನ್ನಿತರೇ ವಯಕ್ತಿಕ ಆಸೆಗಾಗಿಯೋ ಸ್ನೇಹಕ್ಕೆ ಕೊಳ್ಳಿ ಇಡಬಾರದು.
ಸತ್ಯ ಶುದ್ಧ ನಡೆ ನುಡಿ ಗಳು ನಮ್ಮ ಬದುಕಿಗೆ ಅಲಂಕಾರಗಳು ಇದ್ದಂತೆ..
ಬಗಲೊಳಗಿನ ರೊಟ್ಟಿ ಗಂಟು ಇದ್ದಂತೆ ಸ್ನೇಹ
ಹಸಿವು ಆದಾಗ ಬಿಚ್ಚಿ ಬಿಚ್ಚಿ ತಿನ್ನುವಂತೆ ಸ್ನೇಹ.
ಸ್ನೇಹ ಯಾವಾಗಲೂ ಹಸಿದು ಕೊಂಡಿರುವುದಿಲ್ಲ .
ಅದಕ್ಕೆ ದಾಹ ಇರುವುದಿಲ್ಲ.
ನೆನಪಾಗಿ ಮಾತನಾಡಿದರೆ ಸಾಕು ಹಸಿವು ನಿದ್ರೆ ನೀರಡಿಕೆ ಎಲ್ಲವನ್ನು ಮರೆತು ಬಿಡುತ್ತೇವೆ. ಅದು ಬಾಲ್ಯದ ಸ್ನೇಹ ಅಂದರೆ ಸಾಕು .ನನ್ನ ಬಾಲ್ಯ ಸ್ನೇಹಿತ ಎಂದು ಪರಿಚಯಿಸುತ್ತೇವೆ.
ಸ್ನೇಹವೆಂಬುದು ನಮ್ಮ ರಕ್ತ ಸಂಬಂಧವನ್ನು ಮೀರಿಸುವಂಥಹದು.
ಸ್ನೇಹದ ನೆನಪಾದರೆ ಕಂಗಳಲ್ಲಿ ಕಂಬನಿ ತುಂಬಿ ಹರಿಯುತ್ತದೆ.
ಬೆರೆತ ಸ್ನೇಹ ಅಗಲಿ ಹೋದರೆ ಬದುಕು ಭಾರ ವಾಗುತ್ತದೆ .
ನಮ್ಮ ಬದುಕು ಭಾರವಾಗದಂತೆ ಅವರ ಭಾರವಾದ ಮನಸ್ಸಿಗೆ ಮತ್ತೆ ಸ್ನೇಹ ಬೆರೆತಾಗ ಮನಸ್ಸು ಹಗುರವಾಗುತ್ತದೆ ಮನೆ ಮತ್ತು ಮನದಲ್ಲಿ ಸಂತೋಷ ಉಕ್ಕಿ ಹರಿಯುತ್ತದೆ .ಸ್ನೇಹಿತರಿಗೆ ಸ್ನೇಹಿತರಾಗಿ ಉಳಿದು ಅವರ ಭಾರವಾದ ಬದುಕನ್ನು ಹಗುರಾಗಿಸೋಣ .
ಹೇಗೆ ಹಗುರಾಗಿಸೋದು ಎನ್ನುವ ಸ್ವಲ್ಪ ಯೋಚನೆಯನ್ನು ನೀವೂ ಮಾಡಿರಲೇಬಹುದು.
ನಾನು ನನ್ನ ತಾಯಿಯ ತವರೂರಾದ ರಾಮದುರ್ಗಕ್ಕೆ ಹೋಗಿದ್ದೆ ಅಲ್ಲೇ ನನ್ನ ಅಕ್ಕಳು ಇರುವಳು. ಅವತ್ತೇ ಬಾಗಲಕೋಟೆಯಿಂದ ನನ್ನ ಅಕ್ಕ ಳ ಮಗಳು ಬಂದಿದ್ದಳು. ಮಾರನೇಯ ದಿನ ಊರಿಗೆ ಬರುವಾಗ ರಾಮದುರ್ಗದ ಶ್ರೀ ವೆಂಕಟೇಶ್ವರ ಗುಡಿಗೆ ಹೋಗೋಣ ಬಾ ಅಂಟಿ ಎಂದಳು. ಸ್ವಲ್ಪ ಗುಡಿಯಲ್ಲಿ ಕುಂತಾಗ ಸುಮಾರು 70/ 75 ವರ್ಷದ ಹೆಂಗಸು ಬಂದಿದ್ದಳು. ಅವಳು ಯಾರು ಅನ್ನುವುದು ನನಗೆ ಗೊತ್ತಿಲ್ಲ ಆದರೆ ಅವಳು ನನ್ನನ್ನು ಗುರುತು ಹಿಡಿದು ನೀನು ಲಕ್ಷ್ಮೀಬಾಯಿ ಮಗಳು ಸಣ್ಣಾಕಿ ಸಾವಕ್ಕಾ ಅಲ್ಲ? ಎಂದಳು ಏನವಾ ಸಾವಕ್ಕಾ ನಿಮ್ಮವ್ವ ನಾನು ಗೆಳತ್ಯಾರು ಪಾಪ ನಿಮ್ಮವ್ವ ಸತ್ತದ್ದು ನನಗ ಗೊತ್ತಾಗಲಿಲ್ಲವಾ ನಿಮ್ಮವ್ವ ನಿಂದ ನಾನು ಬದುಕಿದ್ದು, ನನ್ನ ಮಕ್ಕಳಿಗೆ ನಾನ ಇವಾಗನೂ ನಿಮ್ಮ ಅವ್ವನ ಬಗ್ಗೆ ಹೇಳತೇನವಾ ನೀವೆಲ್ಲ ಬಹಳ ಸಣ್ಣಾರ ಇದ್ರಿ ನಿಮ್ಮ ಅವ್ವ ನನಗ ಮಾಡಿದ ಸಹಾಯ ನಾ ಹೇಂಗ ಮರೀಲಿ ನನಗ ಉಣ್ಣಾಕ ತಿನ್ನಾಕ ಇಲ್ದಾಗ ನಿಮ್ಮವ್ವ ಯಾರಿಗೂ ಗೊತ್ತಗಲ್ದಂಗ ನನಗ ರೊಟ್ಟಿ ಪಲ್ಯ ಕೊಡಾಕಿ ನಿಮ್ಮ ಹೊಲದಾಗ ದುಡ್ಯಾಕ ಬಂದ್ರ ಎಲ್ಲರಕ್ಕಿಂತ 10 ಪೈಸಾ ನನಗ ಜಾಸ್ತಿ ಕೊಡುತ್ತಿದ್ದಳ ನಿಮ್ಮ ಸಿಂದಿಗಿಡದಾಗ ಸಿಂದಿ ಹಣ್ಣ ಹರಿಸಿ ಕೊಡತ್ತಿದ್ದಳ ಮತ್ತ ನಿಮ್ಮ ಮನಿಗ ಶೇಂಗಾ ವಡ್ಯಾಕ ಒಂದ ಸೇರಗ ನಾಲ್ಕನೆ ನನಗ 5 ಪೈಸಾ ಜಾಸ್ತಿನ ಕೊಡುತ್ತಿದ್ದಳ ಮತ್ತ ನಮ್ಮ ಅತ್ತಿ ಕಾಟ ಗಂಡನ ಕಾಟದಿಂದ ಸೇದು ಬಾಂವ್ಯಾಗ ಜಿಕ್ಯಾಗ ಹೋದಾಗ ನಿಮ್ಮ ಅವ್ವನ ನನ್ನ ಕಾಪಾಡಿದಳು ನೀ ಎಷ್ಟ್ ದೊಡ್ಡಾಕಿ ಆಗಿ ನೌಕರಿ ಮಾಡತಿ ಅಂತ ನೋಡವಾ ನಿಮ್ಮ ಅವ್ವನನ್ನ ನೋಡದಂಗ ಆತ ನೋಡವಾ ದೇವರ ನಿನಗ ಚೆಂದಾಕಿ ಇಡ್ಲಿ ಎಂದು ಹೇಳಿದಾಗ ಅವಳ ಕಾಲಿಗೆ ನಮಸ್ಕಾರ ಮಾಡಿ ಊರಿಗೆ ಬಂದೆ .ಕಾರಿನಲ್ಲಿ ನಮ್ಮವ್ವನ ನೆನಪು ಗಂಟಲು ಕಟ್ಟಿತು.
ನೋಡಿ ಹಳೇಯ ಸ್ನೇಹ ಎಷ್ಟು ವರ್ಷ ದ ಸ್ನೇಹ ದ ನೆನಪು .ನಮ್ಮ ಸ್ನೇಹ ಇನ್ನೊಬ್ಬರ ಬದುಕಿಗೆ ಆಧಾರ ವಾಗಿರಬೇಕು.ಆಧಾರ ಆಗದಿದ್ದರೂ ಪರವಾಗಿಲ್ಲ ಆದರೆ ಕೆಟ್ಟದ್ದನ್ನೂ ಯಾವತ್ತೂ ಮಾಡಲಿಕ್ಕೆ ಹೋಗ್ಬೇಡಿ .ನಿಮ್ಮ ನಿಮ್ಮ ಸ್ನೇಹವನ್ನು ಒಮ್ಮೆ ನೆನಪಿಸಿ ಕೊಳ್ಳಿ ಯಾರ ಸ್ನೇಹ ನಮಗೆ ನಮ್ಮ ಬದುಕಿನ ಭಾರ ವನ್ನು ಇಳಿಸಿದೆ ಎಂದು .ನಿಮಗೆ ದುಃಖ ಆದಾಗ ನಿಮ್ಮ ನಿಮ್ಮ ಸ್ನೇಹ ದ ಪೋಟೋಗಳನ್ನು ನೋಡಿ ನಗು ಬರುತ್ತದೆ .ಸಂತೋಷ ಎನಿಸುತ್ತದೆ .ನನಗೆ ಮಾತ್ರ ಹಾಗೆನಿಸುತ್ತದೆ ನಿಮಗೆ ?
ಮುಂದು ವರೆಯುತ್ತದೆ ….
–ಡಾ ಸಾವಿತ್ರಿ ಮ ಕಮಲಾಪೂರ
ಪ್ರಾಚಾರ್ಯರು ಕರ್ನಾಟಕ ಪಬ್ಲಿಕ್ ಸ್ಥೂಲ