ಲಿಂಗಾಯತ ಧರ್ಮದ ಸಂಸ್ಕಾರಗಳು

ಲಿಂಗಾಯತ ಧರ್ಮದ ಸಂಸ್ಕಾರಗಳು

ಶರಣರ ಸಂಸ್ಕಾರಗಳು
ಶರಣರು ತಮ್ಮವೇ ಆದ ಕೆಲವು ಸಂಸ್ಕಾರಗಳನ್ನು ರೂಪಿಸಿಕೊಂಡಿದ್ದಾರೆ. ಅವುಗಳಲ್ಲಿ ಮುಖ್ಯವಾದವು ಜನ್ಮ ಸಂಸ್ಕಾರ, ಲಿಂಗದೀಕ್ಷಾ ಸಂಸ್ಕಾರ, ವಿವಾಹ ಸಂಸ್ಕಾರ ಮತ್ತು ಅಂತ್ಯ ಸಂಸ್ಕಾರ. ಇವು ಅನೇಕ ಅಂಶಗಳಲ್ಲಿ ಸಾಂಪ್ರದಾಯಿಕ ಹಿಂದೂ (ವೈದಿಕ) ಸಂಸ್ಕಾರಗಳಿಂದ ಭಿನ್ನವಾಗಿವೆ.

ಜಾತಕರ್ಮ, ಶುಭಕರ್ಮ, ಪ್ರೇತಕರ್ಮವ
ಮಾಡುವರು ಲೋಕದ ಮನುಜರು.
ಅದೆಂತೆಂದಡೆ:
ಈರಿಲು, ಮೂವಟ್ಟಲು; ಹಸೆ-ಹಂದರ ತೊಂಡಿಲು ಬಾಸಿಂಗ;
ಹಣೆಯಕ್ಕಿ ಹೆಣನ ಸಿಂಗಾರ ಶ್ರಾದ್ಧಕೂಳು
ಈ ಪರಿಯ ಮಾಡುವನೇ ಶಿವಭಕ್ತ? (ಅಲ್ಲ)
ಅದೆಂತೆಂದಡೆ:
ಹುಟ್ಟಿದ ಮಕ್ಕಳಿಗೆ ಲಿಂಗಧಾರಣೆ,
ನೆಟ್ಟನೆ ವಿವಾಹದಲ್ಲಿ ಶಿವಗಣಂಗಳ ಪ್ರಸಾದ,
ದೇವರಪಾದಕ್ಕೆ ಸಂದಲ್ಲಿ ಶಿವಭಕ್ತಂಗೆ ವಿಭೂತಿ ವೀಳೆಯೊಗೊಟ್ಟು
ಸಮಾಧಿಪೂರ್ಣನಂ ಮಾಡುವುದೆ ಶಿವಾಚಾರ.
ಲೋಕದ ಕರ್ಮವ ಮಾಡಿದಡೆ ಆತ ಭಕ್ತನಲ್ಲ,
ಲಿಂಗದೂರ ಅಘೋರನರಕಿಯಯ್ಯಾ ಕೂಡಲಚೆನ್ನಸಂಗಮದೇವಾ. (ಸ.ವ.ಸ.-೩/೧೨೨೯)

ಸಂಸ್ಕಾರ: ಒಂದು ವಸ್ತುವಿನಲ್ಲಿರುವ ಅವಗುಣಗಳನ್ನ ತೊಳೆದು, ಶುದ್ಧಗೊಳಿಸಿ, ಅದಕ್ಕೆ ಚೇತನ, ಕಾಂತಿ, ತುಂಬಿಸಿ ಹೊಳಪು ನೀಡುವುದೇ ಸಂಸ್ಕಾರದ ಮೂಲ ಅರ್ಥ. ಸಂಸ್ಕಾರದಿಂದ ವಸ್ತುವು ತನ್ನ ಹೊಸ ರೂಪಕ್ಕೆ ಕಾರಣವಾಗುತ್ತದೆ ಮತ್ತು ಬಳಸಲು ಉಪಯುಕ್ತವಾಗುತ್ತದೆ. ಉದಾಹರಣೆಗೆ. ಕಲ್ಲಿಗೆ ಸಂಸ್ಕಾರ ಕೊಟ್ಟಾಗ ಒಂದು ಉತ್ತಮ ಮೂರ್ತಿಯಾಗಬಲ್ಲದು. ಕಟ್ಟಿಗೆಗೆ ಸಂಸ್ಕಾರ ಕೊಟ್ಟಾಗ ಒಂದು ಕುರ್ಚಿ ಅಥವಾ ಮೇಜು ಆಗುವುದು. ಅದೆ ತರಹ ಮನುಷ್ಯ ಹುಟ್ಟಿದಾಗ ಒಂದು ಪ್ರಾಣಿಯಾಗಿರುತ್ತಾನೆ ಅವನಿಗೆ ಸಂಸ್ಕಾರ ಕೊಟ್ಟಾಗ ಮಾನವನಾಗಿ ಸಮಾಜಕ್ಕೆ ಉಪಯುಕ್ತನಾಗುತ್ತಾನೆ. ಆದ್ದರಿಂದ ಮನುಷ್ಯನಿಗೆ ಸಂಸ್ಕಾರಗಳು ಅಗತ್ಯ. ಉತ್ತಮ ಸಂಸ್ಕಾರಗಳು ಮನುಷ್ಯನನ್ನು ದೈವತ್ವದೆಡೆಗೆ ಕೊಂಡೊಯ್ಯುತ್ತವೆ.

ಸಂಸ್ಕಾರ: ಯಾವ ಕ್ರಿಯೆಯಿಂದ ಮನುಷ್ಯನ ಆಂತರಿಕ ದೋಷ ನಿವಾರಣೆ ಆಗಿ ಸದ್ಗುಣ ವಿಕಸಿಸಿ ಶಕ್ತಿ ಸಂವರ್ಧನೆ ಆಗುತ್ತೋ ಅದು ಸಂಸ್ಕಾರ. ಎಲ್ಲ ಸಂಸ್ಕಾರಗಳನ್ನ ಗುರುಗಳು, ಮಗುವಿನ ತಂದೆ ತಾಯಿ ಮತ್ತು ಬಂಧುಗಳು ಮಾಡುವುದಿರುತ್ತದೆ. ಲಿಂಗಾಯತ ಧರ್ಮದಲ್ಲಿ ಈ ಕೆಳಗಿನ ಸಂಸ್ಕಾರಗಳನ್ನು ಮಾಡಲಾಗುತ್ತದೆ.

ಹುಟ್ಟಿದಾಕ್ಷಣವೆ ಲಿಂಗಸ್ವಾಯತವ ಮಾಡಿ,
ಶಿಶುವ ತನ್ನ ಶಿಶುವೆಂದು ಮುಖವ ನೋಡುವದು ಸದಾಚಾರ.
ಅದಲ್ಲದೆ, ಬರಿಯ ವಿಭೂತಿಯ ಪಟ್ಟವ ಕಟ್ಟಿ,
ಗುರುಕಾರುಣ್ಯವಾಯಿತ್ತೆಂದು
ಅನುಸರಣೆಯಲ್ಲಿ ಆಡಿಕೊಂಬುದು ಕ್ರಮವಲ್ಲ.
ಅದೇನು ಕಾರಣವೆಂದಡೆ, ತಾ ಲಿಂಗದೇಹಿಯಾದುದಕ್ಕೆ ಕುರುಹು.
ಲಿಂಗವುಳ್ಳವರೆಲ್ಲರ ತನ್ನವರೆನ್ನಬೇಕಲ್ಲದೆ,
ಲಿಂಗವಿಲ್ಲದವರ ತನ್ನವರೆಂದಡೆ, ತನ್ನ ಸದಾಚಾರಕ್ಕೆ ದ್ರೋಹಬಹುದು,
ಸಮಯಾಚಾರಕ್ಕೆ ಮುನ್ನವೇ ಸಲ್ಲ.
ಇದು ಕಾರಣ, ಲಿಂಗಸ್ವಾಯತವಾಗಿಹುದೆ ಪಥವಯ್ಯಾ,
ನಾಗಪ್ರಿಯ ಚೆನ್ನರಾಮೇಶ್ವರಾ. – ಶಿವನಾಗಮಯ್ಯ 135

ಬಾಹ್ಯ ಆಚರಣೆಯಲ್ಲಿ ವಿಭೂತಿ ಹಚ್ಚಿ ಲಿಂಗವ ಕಟ್ಟುವುದು ಸದಾಚಾರವಲ್ಲ ,ಹುಟ್ಟಿದ ಶಿಶುವು ತನ್ನದೆಂದು ಅದನ್ನು ಜಗತ್ತಿಗೆ ಅರ್ಪಿಸುವುದು ಮತ್ತು ಜಗತ್ತಿನ ಸುಖ ದುಃಖಗಳಿಗೆ ಪೂರಕವಾಗಿ ಮಗುವನ್ನು ಅಣಿ ಪಡಿಸುವುದು ಪೋಷಕರ ಆದ್ಯ ಕರ್ತವ್ಯವಾಗಿದೆ

ಎನ್ನ ವ್ರತದ ನೇಮ ಅಡಿ ಆಕಾಶದೊಳಗಾದ ವ್ರತಸ್ಥರು ಕೇಳಿರೆ.
ನಮ್ಮ ನಿಮ್ಮ ವ್ರತಕ್ಕೆ ಸಂಬಂಧವೇನು ?
ಲೆಕ್ಕವಿಲ್ಲದ ವ್ರತ, ಕಟ್ಟಳೆಯಿಲ್ಲದ ನೇಮ, ಇವನೆಷ್ಟು ಮಾಡಿದಡೆ ಏನು ?
ತನ್ನ ಮನೆಗೆ ಕಟ್ಟಳೆ ಇರಬೇಕು.
ಎನ್ನ ಲಿಂಗವಂತೆಗೆ ಸೂತಕಮಾಸ ತಡೆದಲ್ಲಿ,
ಗರ್ಭವೆಂಬುದು ತಲೆದೋರಿದಲ್ಲಿಯೆ ಆತ್ಮ ಚೇತನಿಸುವನ್ನಕ್ಕ
ಆಕೆಯ ಉದರದ ಮೇಲೆ ನಿಹಿತ ಲಿಂಗವಿರಬೇಕು.
ನವಮಾಸ ತುಂಬಿ ಆಕೆಯ ಗರ್ಭದಿಂದ ಉಭಯಜಾತತ್ವವಾಗಲಾಗಿ
ಚೇತನ ಬೇರಾದಲ್ಲಿ ಗುರುಕರಜಾತನಮಾಡಬೇಕು.
ಇಂತೀ ಇಷ್ಟರ ಕ್ರೀಯಲ್ಲಿ ಸತತ ವ್ರತ ಇರಬೇಕು.
ಕಂಥೆಯ ಬಿಡುವನ್ನಕ್ಕ ಶರಣರ ಕೈಯಲ್ಲಿ ಅಂತಿಂತೆಂಬ ಶಂಕೆಯ ಹೊರಲಿಲ್ಲ.
ಇಂತೀ ವ್ರತದಲ್ಲಿ ನಿಶ್ಶಂಕನಾಗಬಲ್ಲಡೆ
ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಲ್ಲಿ ಸಮಶೀಲವಂತನೆಂಬೆ.- ಅಕ್ಕಮ್ಮ -೫/೪೫೬

1) ಗರ್ಭಲಿಂಗಧಾರಣೆ- (ಸೀಮಂತ)
2) ಲಿಂಗಧಾರಣೆ-ನಾಮಕರಣ
3) ಜಾವಳ(ಪ್ರಥಮ ಜವುಳ )
4) ಅನ್ನ ಪ್ರಸಾದ ಸ್ವಿಕಾರ
5) ವಿದ್ಯಾರಂಭ -ವಚನಾಭ್ಯಾಸ
6) ಶಾಲು ಹೊದಿಸುವುದು-ಕಿರುಗುಣಿ-ಇಷ್ಟಲಿಂಗ ದೀಕ್ಷೆ
7) ಮೈನೆರೆಯುವಿಕೆ-ಶುದ್ಧಿಕರಣ
8) ಕ್ರೀಯಾ ಮೂರ್ತಿ ದೀಕ್ಷೆ- (ಜಂಗಮ ದೀಕ್ಷೆ) (ಅಯ್ಯಾಚಾರ)
9) ವಿವಾಹ (ಪುನರ್ ವಿವಾಹ-ವಿಧವಾವಿವಾಹ-ವಯಸ್ಕರ ವಿವಾಹ)
10 ವಿಭೂತಿ ವೀಳ್ಯ
11) ಲಿಂಗೈಕ್ಯ ಸಂಸ್ಕಾರ
12 ) ಐಚ್ಚಿಕ ವಿಧಿಗಳು: ದತ್ತು ಸ್ವಿಕಾರ, ಷಷ್ಠಬ್ದಿ, ವಿವಾಹ ವಾರ್ಷಿಕೋತ್ಸವ , ಹುಟ್ಟು ಹಬ್ಬ, ಪುನಃಶ್ಚೇತನ, ಗಣಾಚಾರ ದೀಕ್ಷೆ.

ಮೇಲಿನ ಸಂಸ್ಕಾರಗಳು ಮನುಷ್ಯ ಹುಟ್ಟಿನಿಂದ ಲಿಂಗೈಕ್ಯನಾಗುವವರೆಗೆ ಮಾಡುವುದಿರುತ್ತದೆ

ಈ ಕೆಳಗಿನ ಸಂಸ್ಕಾರಗಳನ್ನು ಯಾವುದೆ ಹೊಸ ಕೆಲಸ ಅಥವಾ ಉದ್ಘಾಟನೆ, ಅಂಗಡಿ ಪ್ರಾರಂಭಕ್ಕೆ ಗೃಹ ಪ್ರವೇಶ ( ಗುರು ಪ್ರವೇಶ ) ಅಂದರೆ ಅರಿವು ಆಚಾರದ ಪ್ರವೇಶವೆಂದರ್ಥ .

1 –ಹೊಲ ಖರೀದಿ ಮಾಡಿ ಭೂಮಿ ಪೂಜೆ ಮಾಡುವ ಸಂದರ್ಭದಲ್ಲಿ
ಶರಣರ ವಚನಗಳ ಪಠಣದ ಮೂಲಕ ಕೃಷಿ ಕಾಯಕವ ಮಾಡುವ ಶರಣರ ಸ್ಮರಣೆ ಮಾಡುವುದು.ಒಕ್ಕಲಿಗ ಮುದ್ದಣ್ಣನವರ ಸ್ಮರಣೆ ಮತ್ತು ವಚನ ಪ್ರಾರ್ಥನೆ ಮತ್ತು ಅನುಸಂಧಾನ ಮಾಡುವುದು .

2 –ಹೊಸ ಮನೆಯ ಕಟ್ಟಡ ಗೃಹ ಪ್ರವೇಶವನ್ನು ಹೇಗೆ ಆಚರಿಸಬೇಕು ?

ಹೊಸದಾಗಿ ಕಟ್ಟಿದ ಮನೆಯಲ್ಲಿ ಗುರು ಪ್ರವೇಶವನ್ನು ಮಾಡುವುದು. ಬಸವ ತಂದೆಯ ಭಾವ ಚಿತ್ರವನ್ನು ಮನೆಯ ಹಾಲಿನಲ್ಲಿ ಇತ್ತು ಅದಕ್ಕೆ ತಕ್ಕ ಮಟ್ಟ ಹೂವು ಪುಷ್ಪ ಏರಿಸಿ .ವಚನಗಳ ಕಟ್ಟನ್ನು ಮುಂದೆ ಇಟ್ಟು ಶರಣರ ಅರಿವಿನ ವಚನಗಳ ಪಠಣ ಮತ್ತು ಅನುಸಂಧಾನ ಮಾಡುವುದು

3 –ಅಂಗಡಿ ಪೂಜೆ
ವ್ಯಾಪಾರ ಮಾಡುವ ವರ್ತಕರು ಬಸವ ಧರ್ಮಿಯರ ಶರಣರ ವಚನಗಳನ್ನು ಅಂಗಡಿಯ ತಕ್ಕಡಿ ಪಕ್ಕದಲ್ಲಿ ಇಟ್ಟು ಅನುಸಂಧಾನ ಮಾಡಬೇಕು .ಶರಣ ಆದಯ್ಯನ ವಚನಗಳ ಪಠಣ ಮತ್ತು ವಿಶ್ಲೇಷಿ ಗುರು ಮಂತ್ರವಾದ ಶ್ರೀ ಗುರು ಬಸವಲಿಂಗಾಯನಮಃ ಪಠಿಸಬೇಕು .

4-ಭಾವಿ ಪೂಜೆ ಮತ್ತು ಬೋರ್ ಪೂಜೆ

ಹೊಲದಲ್ಲಿ ಕೊಳವೆ ಭಾವಿ ಬೋರ ಅಥವಾ ಭಾವಿಯನ್ನು ಅಗೆದಲ್ಲಿ
ಭಾವಿಯ ಅಥವಾ ಕೊಳವೆ ಭಾವಿಯ ನೀರನ್ನು ಪಡೆದುಕೊಂಡು ಹೊಲದಲ್ಲಿ ಶರಣರ ಭಾವ ಚಿತ್ರಗಳನ್ನಿಟ್ಟು ,ಅವರ ವಚನಗಳ ಪಠಣ ಮತ್ತು ಅಧ್ಯಯನದ ರೂಪದ ವಿಶ್ಲೇಷಣೆ ಅತ್ಯಗತ್ಯ.

ಮೇಲಿನ ಎಲ್ಲಾ ಆಚರಣೆಗಳು ನಮ್ಮ ಸಂತಸ ಸಂಭ್ರಮಕ್ಕೆ ಮಾತ್ರ .ಒಟ್ಟಾರೆ ಪ್ರತಿಯೊಂದು ಕ್ರಿಯೆಗಳಲ್ಲಿ ಶರಣರನ್ನು ಸ್ಮರಿಸುವ ವ್ಯವಧಾನ ನಮ್ಮದಾಗಿರಬೇಕು.
ಶರಣರು ಎಂದು ಕಡ್ಡಾಯ ಮತ್ತು ಕಟ್ಟಳೆಗಳನ್ನು ರೂಪಿಸಿಲ್ಲ ,ಹೀಗಾಗಿ ಮಠೀಯ ವ್ಯವಸ್ಥೆ ಲಿಂಗಾಯತ ಧರ್ಮದ ಮೂಲ ಸ್ವರೂಪವನ್ನು ವೀರರೊಪ ಗೊಳಿಸುವ ಮತ್ತು ವೈದಿಕತೆಯನ್ನು ಮತ್ತೆ ಶರಣ ಧರ್ಮದಲ್ಲಿ ತಂದು ತುರುಕುವ ಯತ್ನದಲ್ಲಿದ್ದಾರೆ ಹೀಗಾಗಿ ಇಲ್ಲಿ ನಡೆಯುವ ಎಲ್ಲ ಆಚರಣೆಗಳು ರೀತಿ ನೀತಿ ನಿಜಾಚರಣೆಗಳು ಯಾವುದೇ ಮಧ್ಯವರ್ತಿಗಳಿಲ್ಲದೆ ಭಕನು ತಾನೇ ಇಂತಹ ನಿಜಾಚರಣೆಗಳ ಮುಂದಾಳತ್ವವನ್ನು ವಹಿಸ ಬೇಕು ಅರಿವೇ ಗುರು ಆಚಾರವೇ ಲಿಂಗ ಅನುಭಾವವೇ ಜಂಗಮ.

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ

Don`t copy text!