ಬಿಜ್ಜರಗಿಯ ಬೆಳಕು

ಬಿಜ್ಜರಗಿಯ ಬೆಳಕು

ಸರಳ ಸಜ್ಜನಿಕೆಯ ಸಾಕಾರ ಮೂರ್ತಿ
ಜನ ಮಾನಸದಿ ನೆಲೆಸಿಹ ದಿವ್ಯಸ್ಫೂರ್ತಿ
ಭಕ್ತಿ ಜ್ಞಾನಿ ನಿಸರ್ಗಪ್ರೇಮಿ ಶಾಂತಮೂರ್ತಿ
ಅಧ್ಯಾತ್ಮದರಿವ ಬಿತ್ತರಿಸಿದ ತತ್ವಜ್ಞಾನಿಯ ಕೀರ್ತಿ
ಕರುನಾಡ ತುಂಬುಕ್ಕಿ ಬೆಳಕಾಯ್ತು ಬಿಜ್ಜರಗಿ….

ಕಿಸೆಯಿಲ್ಲದ ಅಂಗಿ ತೊಟ್ಟ ಮಹಾಸಂತ
ಮಾನವ ಲೋಕಕೆ ಬಂದನೀತ ದೇವದೂತ
ಕಾರುಣ್ಯಕಡಲ ಜ್ಞಾನದೊಡಲ ಸಾವಿಲ್ಲದ ಸಂತ
ನಡೆದಾಡುವ ದೇವನಾದ ಕಲಿಯುಗದ ಸಂತ
ಮಹಾ ಮಾನವತಾವಾದಿ ಸರ್ವೋದಯ ಚಿಂತಕ..

ನಡೆ ನುಡಿ ಒಂದಾಗಿ ನಡೆದ ಮಹಾಮಹಿಮರು
ಶರಣವಾಣಿಯ ಪ್ರತೀಕ ಉಪಮಾತೀತರು
ನನ್ನದೆಂಬ ಮಮಕಾರ ತೊರೆದ ಘನಮಹಿಮರು
ಪದಗಳಿಗೆ ದೊರಕದ ಮಹಾ ಚೈತನ್ಯ ಸ್ವರೂಪರು
ಸಿರಿಯಾಸೆ ಆಮಿಷಗಳೆಲ್ಲೆಯನು ಮೀರಿದವರು…

ಅಧ್ಯಾತ್ಮದರಿವಿನ ನುಡಿಮುತ್ತುಗಳ ಬಿತ್ತುತ
ಅನುಭಾವದಮೃತದ ಧಾರೆಯನು ಉಣಿಸುತ
ಜ್ಞಾನ ಜ್ಯೋತಿ ಬೆಳಗಿಸಿ ಬಿತ್ತುತ ನಿಸರ್ಗ ಪ್ರೀತಿ
ಕರುನಾಡ ಮನಮನೆ ಬೆಳಗಿದ ದಿವ್ಯ ಜ್ಯೋತಿ
ವಿಜಯಪುರದ ಜ್ಞಾನ ಯೋಗಾಶ್ರಮದಿ
ನೆಲೆಸಿದ ಕಾಯಕಯೋಗಿ ಜ್ಞಾನಯೋಗಿ…..

ಸುರಿಸುತ್ತ ಅನುಭಾವದ ಅಮೃತದ ನುಡಿಮುತ್ತು
ಪ್ರಕೃತಿ ಪ್ರವಚನಗಳ ಸುರಿಮಳೆ ಮೂರು ಹೊತ್ತು
ಮನುಜ ಮನಗಳಿಗೆ ನೀಡುತ ಜ್ಞಾನದ ತುತ್ತು
ಕತ್ತಲೆ ಮುಸುಕಿದ ಬದುಕಿಗೆ ಹೊಸ ದಾರಿ ಬೆಳಕು
ತೋರುತ ಸಾಗಿದ ಪುಣ್ಯಾತ್ಮರು ದಿವ್ಯಾತ್ಮರು…

ಜಗದಗಲ ಮುಗಿಲಗಲ ಮಧುರ ಆಲಾಪ
ನಿಮ್ಮಮೃದು ನುಡಿಯಲೇಪ ಮಾರ್ದನಿಯ ಧೂಪ…
ನೆನೆದವರ ಮನದಂಗಳದ ನಂದಾದೀಪ
ಶರಣ ತತ್ವದ ಮೇರು ಶಿಖರ ಚೈತನ್ಯ ರೂಪ
ನೊಂದ ಮನಗಳಿಗೆ ತೋರುತ ಪ್ರವಚನಗಳ ದಾರಿದೀಪ
ಜ್ಞಾನ ದೀಪ ಬೆಳಗಿದ ನೀವು ಜ್ಯೋತಿ ಸ್ವರೂಪ…

ಮನದ ತಿಮಿರ ತೊಳೆದ ದಿವ್ಯ ಜ್ಞಾನ ಗಂಗೆ
ವಿಜಯಪುರದಿ ಉದಯಿಸಿದ ಜ್ಞಾನಿ ಸೂರ್ಯನಂತೆ..
ನಿತ್ಯ ನಿರ್ಮಲ ಜ್ಞಾನ ದಾಸೋಹ ನೀಡುತ
ಸರಳ ನುಡಿ ಮಾಲೆಯ ಸೂಜಿಗಲ್ಲಲಿ ಸೆಳೆಯುತ
ಬಯಲಲ್ಲಿ ಬಯಲಾದ ಭುವಿಯ ಚಿದ್ಬೆಳಕಿಗೆ
ಗುರು ಸಿದ್ಧೇಶ್ವರ ಸ್ವಾಮಿ ಪೂಜ್ಯರಿಗೆ ಶರಣು ಶರಣೆಂಬೆ…

_ಶ್ರೀಮತಿ ಇಂದಿರಾ ಮೋಟೆಬೆನ್ನೂರ. ಬೆಳಗಾವಿ

Don`t copy text!