ಅಬಾಬಿಗಳು
ನಕ್ಷತ್ರಗಳೆಲ್ಲ ನಭದಿ
ನಗುತಿವೆ ನನ್ನ ನೋಡಿ
ಮರುಳ ನೀನೆಂದು
ಬೇಗಂ…
ಮುಹಬ್ಬತ್ ಅರಿಯದಾದೆಯಲ್ಲ…?
******************
ಖಾಲಿ ತಲೆಯಲ್ಲೀಗ
ಶೈತಾನೀ ಖಯಾಲ್ ಗಳು
ಅಂಕೆಯಿಲ್ಲದೆ ಕುಣಿದು
ಬೇಗಂ..
ಮಂಕಾಗಿದೆ ಈ ಮನಸು..
***********************
ಕಣ್ತುಂಬುವಂಥ ಚೆಲುವು
ಚಿಗುರಿಸಿ ಎದೆಯಲೊಲವು
ಹಸಿರಾಗಿಸಿದೆ ಭಾವ
ಬೇಗಂ..
ಅರಳಬಲ್ಲದೇ ಪ್ರೀತಿ ಮೊಗ್ಗು…?
************************
ನಿನ್ನ ಕಣ್-ಕಾಸಾರದಲಿ
ಮೂಡಿದೆ ನನ್ನ ಬಿಂಬ
ಮುಚ್ಚದಿರು ಎವೆ ಇನಿತು
ಬೇಗಂ..
ತುಂಬಿಕೊಳುವೆ ಎನ್ನ ಹೃದಯದಿ..
*********************
ಬರೆಯುತಲಿ ಒಲವಿನೋಲೆ
ಚದುರಿದವು ಪದಗಳೆಲ್ಲ
ಕಣ್ಣ ಹನಿಗಳುದುರಲ
ಬೇಗಂ..
ನಿನ್ನ ಮಧುರ ನೆನಪುಗಳಲ್ಲಿ…
*************************