ಮಡದಿಯ ಪ್ರಾಣಕ್ಕೆ ಮೊಲೆ ಮುಡಿ ಇದ್ದಿತೆ ?

ಅಂತರಂಗದ ಅರಿವು…೭ ವಿಶೇಷ ವಚನ ವಿಶ್ಲೇಷಣೆ

 

ಮಡದಿಯ ಪ್ರಾಣಕ್ಕೆ
ಮೊಲೆ ಮುಡಿ ಇದ್ದಿತೆ ?
ಒಡೆಯರ ಪ್ರಾಣಕ್ಕೆ ಇದ್ದಿತ್ತೆ ಎದ್ನೋಪವೀತ ?
ಕಡೆಯಲ್ಲಿದ್ದ ಅಂತ್ಯಜನು ಹಿಡಿದಿದ್ದನೆ ಪ್ರಾಣದಲ್ಲಿ ಹಿಡಿಗೋಲ?
ನೀ ತೊಡಕಿಕ್ಕಿದ ತೊಡಕನೀ ಲೋಕದ ಜಡತ್ತ ಬಲ್ಲರೈ ರಾಮನಾಥ

ಜೇಡರ ದಾಸಿಮಯ್ಯ

ಜೇಡರ ದಾಸಿಮಯ್ಯ ಈ ವಚನದಲ್ಲಿ ಸಾಮಾಜಿಕ ಅಸಮಾನತೆಯನ್ನು ವೈಚಾರಿಕವಾಗಿ ಪ್ರಶ್ನಿಸುತ್ತಾನೆ.

ಮಡದಿಯ ಪ್ರಾಣಕ್ಕೆ
ಮೊಲೆ ಮುಡಿ ಇದ್ದಿತೆ ?
ಲಿಂಗ ಅಸಮಾನತೆಯನ್ನು ಪ್ರಶ್ನಿಸುವ ಪರಿ ವಿಭಿನ್ನವಾಗಿದೆ.
ಮಾನವನ ದೇಹಕ್ಕೆ ಜೈವಿಕವಾಗಿ ಬಂದಂತಹ ಗುರುತುಗಳನ್ನ ಆಧರಿಸಿ ನಾವು ಗಂಡು ಹೆಣ್ಣು ಎಂದು ಭೇದ ಮಾಡುತ್ತೇವೆ. ಸ್ತ್ರೀಯ ದೈಹಿಕ ಚಿಹ್ನೆಗಳಾದ ಮೊಲೆ ಮುಡಿಗಳು ಕಂಡೊಡನೆ ಹೆಣ್ಣು ಎಂದು ಭೇದವೆಣಿಸುತ್ತೇವೆ. ದೇಹಕ್ಕೆ ಚೈತನ್ಯಾತ್ಮಕವಾದಂತ ಪ್ರಾಣಕ್ಕೆ ಯಾವ ಗುರುತಿದೆ. ಕಣ್ಣಿಗೆ ಕಾಣದ ಪ್ರಾಣಕ್ಕೆ ಆಕಾರ ಗುರುತುಗಳನ್ನ ಆಧರಿಸಿ ಹೆಣ್ಣು ಗಂಡು ಎಂದು ಭೇದವೆಣಿಸಲು ಸಾಧ್ಯವೇ ? ಎನ್ನುವ ಪ್ರಶ್ನೆ ಜೇಡರ ದಾಸಿಮಯ್ಯನದು. ದೇಹದಲ್ಲಿ ಪ್ರಾಣವೇ ಮುಖ್ಯ.ಪ್ರಾಣಕ್ಕೆ ಇದು ಗಂಡಿನ ಪ್ರಾಣ.ಇದು ಹೆಣ್ಣಿನ ಪ್ರಾಣ ಎಂಬ ಲಿಂಗ ತಾರತಮ್ಯ ಮಾಡಲಾಗದು ಎನ್ನುವ ವಿಷಯವನ್ನು ಸ್ಪಷ್ಟಪಡಿಸುತ್ತಾನೆ.
ಪ್ರಸ್ತುತ ಕಾಲಘಟ್ಟದಲ್ಲಿಯೂ ಈ ಪ್ರಶ್ನೆಗೆ ಉತ್ತರವನ್ನು ಹುಡುಕಬೇಕಾಗಿದೆ.

ಒಡೆಯರ ಪ್ರಾಣಕ್ಕೆ ಇದ್ದಿತ್ತೆ ಎದ್ನೋಪವೀತ ?
ನಿರಾಕಾರವಾದಂತಹ ಪ್ರಾಣ ಎಲ್ಲರಲ್ಲಿಯೂ ಒಂದೇ ಹೇಗೆ ಲಿಂಗವನ್ನ ಆಧರಿಸಿ ಪ್ರಾಣವನ್ನ ಬೇರ್ಪಡಿಸಲಾಗದೊ ಹಾಗೆಯೇ ಅಂತಸ್ಥನ್ನು ಆಧರಿಸಿ ಪ್ರಾಣವನ್ನ ಗುರುತಿಸಲು ಸಾಧ್ಯವಿಲ್ಲ. ಒಡೆಯ ಅಥವಾ ಯಜಮಾನ ಎಂದ ಮಾತ್ರಕ್ಕೆ ಅವನ ಪ್ರಾಣಕ್ಕೆ ಅವನ ಕುಲ, ಅವನ ಅಂತಸ್ಥಿನ ಸೂಚಿಸುವ ಚಿನ್ನೆಯಾದ ಜನಿವಾರ ಇರಲು ಸಾಧ್ಯವೆ. ಪ್ರಾಣನು ನಿರಾಕಾರ. ಜನಿವಾರ ದೇಹಕ್ಕೆ ಮಾತ್ರ

ಕಡೆಯಲ್ಲಿದ್ದ ಅಂತ್ಯಜನು ಹಿಡಿದಿದ್ದನೆ ಪ್ರಾಣದಲ್ಲಿ ಹಿಡಿಗೋಲ?
ಕೆಳಕುಲದ ಮನುಷ್ಯ ಎಂದು ಗುರುತಿಸಲು ಅವನ ಪ್ರಾಣದಲ್ಲಿ ಏನಾದರೂ ಅವನ ಜಾತಿ, ವೃತ್ತಿಯನ್ನು ಸೂಚಿಸುವ ಕುರುಹುಗಳು ಅಥವಾ ಸಾಧನಗಳು ಕಂಡು ಬರುತ್ತವೆಯೆ?. ಆ ಸಾಧನ ಅಥವಾ ಕುರುಹುಗಳನ್ನ ಅವಲಂಬಿಸಿ ಇದು ಅಂತ್ಯಜನ ಪ್ರಾಣವೆಂದು ಭೇದ ಮಾಡಲು ಸಾಧ್ಯವೇ. ಜಾತಿಯ ಅಸಮಾನತೆ ಪ್ರಾಣಕ್ಕೆ ಇಲ್ಲ

ನೀ ತೊಡಕಿಕ್ಕಿದ ತೊಡಕನೀ ಲೋಕದ ಜಡತ್ತ ಬಲ್ಲರೈ ರಾಮನಾಥ
ಚೈತನ್ಯಾತ್ಮಕವಾದ ಪ್ರಾಣಕ್ಕೆ ಯಾವ ಬಂಧನಗಳು ಅಡೆತಡೆಗಳು ಇಲ್ಲ ಅದು ಸ್ತ್ರೀಯಲ್ಲಿದ್ದರೂ ಒಂದೇ, ಪುರುಷನಲ್ಲಿದ್ದರೂಒಂದೇ.
ಆಳುವವನಲ್ಲಿದ್ದರು ಒಂದೇ ಆಳಿನಲ್ಲಿದ್ದರು ಒಂದೇ. ಈ ಅಸಮಾನತೆಗಳೆಲ್ಲ ನಾವು ಮಾಡಿಕೊಂಡಿರುವ ತೊಡಕುಗಳೆ ಹೊರತು ದೇವರ ಸೃಷ್ಟಿಯಲ್ಲ. ಈ ತತ್ವವನ್ನ ಲೋಕದ ಚೈತನ್ಯ ಹೀನವಾದ ಜನರು ಹೇಗೆ ಅರ್ಥಮಾಡಿಕೊಳ್ಳಲು ಸಾಧ್ಯ .
ಸಾಮಾಜಿಕ ಜಡತ್ವ ಹೋಗಿ ಸಾಮಾಜಿಕ ತೊಡಕುಗಳು ನಿವಾರಣೆಯಾಗಿ ಸಮಾಜ ಶ್ರೇಯೋಭಿವೃದ್ಧಿಯನ್ನ ಸಾಧಿಸಬೇಕಾದರೆ ಈ ತೊಡಕುಗಳು ನಿವಾರಣೆಯಾಗಬೇಕು ಎನ್ನುವ ಆಶಯವೂ ಕೂಡ ದಾಸಿಮಯ್ಯ ವ್ಯಕ್ತಪಡಿಸುತ್ತಾನೆ. ತನ್ನ ಪ್ರಶ್ನೆಗಳ ಮೂಲಕ ನಮ್ಮನ್ನು ಚಿಂತನೆಗೆ ಇಡು ಮಾಡುತ್ತಾನೆ.


ಡಾ. ನಿರ್ಮಲ ಬಟ್ಟಲ

Don`t copy text!