ನಾ ಓದಿದ ಪುಸ್ತಕ- ಪುಸ್ತಕ ಪರಿಚಯ
ಬಾಂಧವ್ಯ
(ಕಾದಂಬರಿ)
ಕೃತಿಕಾರರ ಹೆಸರು : ಶ್ರೀಮತಿ ಸುಮ ಉಮೇಶ್
ಅಬ್ಬಾ!! ಬಾಂಧವ್ಯದ ತಂತು ಕಣ್ಣಿನಲ್ಲಿ ಧಾರಾಕಾರವಾಗಿ ಹನಿ ಉದುರಿಸಿದವು. ಈ “ಬಾಂಧವ್ಯ” ಓದುಗನನ್ನು ಭಾವೋದ್ವೇಗಕ್ಕೆ ಒಳಪಡಿಸುತ್ತದೆ. ನನ್ನ ಕಣ್ಣಾಲೆಗಳು ಹನಿಗೂಡುತ್ತಲೇ ಇವೆ. ಈ ಕಾದಂಬರಿಯಲ್ಲಿ ಬರುವ ನಿಂಗಿಯನ್ನು, ಆರತಿಯನ್ನು ನೆನೆದು ಮನ ಮೌನವಾಗುತ್ತಿದೆ. ಇವರ ಬಗೆಗೆ ಹೇಳಲೂ ಅಕ್ಷರಗಳೂ ಆರ್ದ್ರವಾಗುತ್ತಿವೆ.
ಕಾದಂಬರಿಯಲ್ಲಿ ಪ್ರೇಮದ ಬಂಧದ ಹರಿವು ಹೃದಯಕ್ಕೆ ಸಂಜೀವಿನಿಯಾದಂತಾಗಿದೆ. ಈ ಕಾದಂಬರಿಯನ್ನು ಓದುತ್ತಾ ಸಾಗಿದರೆ ಪೂರ್ಣವಾಗಿ ಓದಿ ಮುಗಿಸುವವರೆಗೂ ಮನಸಿಗೆ ವಿಶ್ರಾಂತಿ ಬೇಕೆನಿಸುವುದಿಲ್ಲ ಬದಲಿಗೆ ಇರುವ ಬಳಲಿಕೆ ಕೂಡ ಸ್ರವಿಸುವಷ್ಟು ದಿವ್ಯೌಷಧವಾಗಿ ಇದು ಓದುಗನನ್ನು ಆವರಿಸುತ್ತದೆ.
ಒಂದೇ ದಿನದಲ್ಲಿ ಓದಿಸಿಕೊಳ್ಳುವಷ್ಟು ಆಪ್ತಭಾವ ಮೂಡಿಸುವ ಕಥಾವಸ್ತು. ಪ್ರತಿಯೊಂದು ಪಾತ್ರಗಳೂ ಸುಂದರವಾಗಿ ಮನಸಿಗೆ ತಾಟುವಂತಿವೆ, ಸನ್ನಿವೇಶಗಳ ಸೃಷ್ಟಿಯಂತೂ ಮೊದಲೇ ಹೇಳಿದ ಹಾಗೆ ಭಾವನಾತ್ಮಕವಾಗಿವೆ.
ಕಾದಂಬರಿಯ ಕಥಾವಸ್ತುವಿನ ಚಿಕ್ಕ ಅವಲೋಕನ
ಸರಸಮ್ಮ, ರಾಜಪ್ಪ ದಂಪತಿಗಳ ಒಬ್ಬಳೇ ಮಗಳು ಅನ್ನಪೂರ್ಣ ಮೃದು ಸ್ವಭಾವದವಳು, ರಾಘವೇಂದ್ರರಾಯರನ್ನು ಮದುವೆಯಾಗಿ ಮೊದಲ ಮಗುವಿಗೆ ಜನ್ಮ ನೀಡಿ ಮಗು ಅಕಾಲಿಕವಾಗಿ ಮರಣ ಹೊಂದಿದ ತರುವಾಯ ಅವಳ ಮನೋವ್ಯಾಧಿ ಪ್ರಾರಂಭ.
ಅನಾಥಳಾದ ನಿಂಗಿ, ಸರಸಮ್ಮ ರಾಜಪ್ಪ ದಂಪತಿಗಳು ಸಾಕಿಕೊಂಡು ವಿದ್ಯೆ ಕಲಿಸಲು ಪ್ರಯತ್ನಿಸಿದರೂ ಅದರೆಡೆ ಆಕರ್ಷಣೆ ಇಲ್ಲದೆ ಮನೆಗೆಲಸದಲ್ಲೇ ತಲ್ಲೀನಳಾದ ಚೂಟಿ, ಸ್ವಾಭಿಮಾನಿ ಹುಡುಗಿ. ರಾಜಪ್ಪನ ಮನೆಯಲ್ಲೇ ಕೆಲಸಕ್ಕಿದ್ದ ಭೈರನನ್ನು ಪ್ರೇಮಸಿ ಮದುವೆ ಆದವಳಿಗೆ ಚೊಚ್ಚಲ ಗರ್ಭಾವಸ್ಥೆಯಲ್ಲೇ ವಿಧಿ ಕೇಡು ಬಯಸಿ ಭೈರನನ್ನು ಬರಸೆಳೆದು ವೈಧವ್ಯ ನೀಡಿತ್ತು. ಯಾರಿಗಾಗಿ ಬದುಕಬೇಕೆಂಬ ನಿಂಗಿಗೆ ಧೈರ್ಯ ತುಂಬಿದ್ದು ಮನೆಯೊಡತಿ ಸರಸಮ್ಮ. ಸರಸಮ್ಮಳ ಮಗಳು (ನಿಂಗಿಯ ಪ್ರೀತಿಯ ಪೂರ್ಣಕ್ಕ) ಅನ್ನಪೂರ್ಣಳ ಎರಡನೇ ಹೆರಿಗೆ, ನಿಂಗಿಯ ಮೊದಲ ಹೆರಿಗೆ ದಿನಗಳ ಅಂತರದಲ್ಲಿ ಆಗಿ, ಪೂರ್ಣಳ ಎರಡನೇ ಮಗುವೂ ಸತ್ತು ಹುಟ್ಟುತ್ತದೆ. ಇತ್ತ ಹೆತ್ತ ಮಗುವಿಗೆ ಹಾಲು ಕುಡಿಸುವ ಅದೃಷ್ಟವೂ ಇಲ್ಲದೇ ಹೋದ ನತದೃಷ್ಟ ನಿಂಗಿಯ ಎದೆಯಲ್ಲಿ ಹಾಲಿಲ್ಲ. ಅತ್ತ ಎರಡನೇ ಮಗು ಸತ್ತ ಸುದ್ದಿ ತಿಳಿದರೆ ಅನ್ನಪೂರ್ಣ ಬದುಕುವ ಭರವಸೆಯಿಲ್ಲ, ಬದುಕಿದರೂ ಹುಚ್ಚಿಯಾಗುವ ಆತಂಕ ವೈದ್ಯರಿಂದ ಮೊದಲೇ ಬಂದಿತ್ತು. ಸರಸಮ್ಮನ ಸಮಯೋಚಿತ ಸ್ವಾರ್ಥ, ಪ್ರೀತಿ, ಅನಿವಾರ್ಯತೆಯಿಂದ ನಿಂಗಿಯ ಮಗುವೇ ಪೂರ್ಣಳ ಮಗು ಎಂದಾಯಿತು. ಗಂಡನನ್ನೂ ಕಳೆದುಕೊಂಡ ನಿಂಗಿಗೆ ಮಗುವನ್ನೂ ದೂರಮಾಡಿಕೊಳ್ಳುವ ಸಂಕಟ. ಬೇಡ ಎನ್ನಲೂ ಅಸಾಧ್ಯದ ಸಂದರ್ಭ. ಅಂತೂ ಅನ್ನಪೂರ್ಣ ದಂಪತಿಗಳಿಗೆ ಸಂತೋಷ. ನಿಂಗಿಗೆ ದುಃಖ.
ಒಮ್ಮೆ ರಾತ್ರೋರಾತ್ರಿ ನಿಂಗಿ ಮನೆಯಲ್ಲಿರುವಾಗ ಒಬ್ಬ ಗಂಡಸು ಡಬಡಬ ಬಾಗಿಲು ಬಡೆಯುತ್ತಾನೆ, ತೆರೆದರೆ ಒಂದು ಮಗುವನ್ನು ಎತ್ತಿಕೊಂಡು ಒಳಬಂದವವನೇ ಮಗುವಿಗೆ ಹಾಲು ಬೇಕಿತ್ತು ಎಂದ್ಹೇಳಿ, ಹಾಲು ತರುವುದರೊಳಗೆ ಮಗುನ ಅಲ್ಲೇ ಬಿಟ್ಟು ಪರಾರಿಯಾಗುತ್ತಾನೆ. ದಿನಗಳು, ವಾರಗಳುರುಳಿದರೂ ಮತ್ತೆ ಅವನು ಬರುವುದೇ ಇಲ್ಲ. ಗಂಡ ಮಗುವನ್ನು ದೂರಮಾಡಿಕೊಂಡ ನಿಂಗಿಗೆ ಈ ಮಗು(ಹೆಣ್ಣು ಮಗು)ವೇ ಆಸರೆ, ಭರವಸೆಯಾಗುತ್ತದೆ. ಗಂಡನ ಸಮಾಧಿ ಮುಂದೆ ನಿಂತು ಇದೇ ನಮ್ಮಿಬ್ಬರು ಮಗು, ನಿನ್ನ ನನ್ನ ಆಸೆಯಂತೆ ಇದಕ್ಕೆ ವಿದ್ಯೆ ಕೊಡಿಸಿ ದೊಡ್ಡ ವ್ಯಕ್ತಿಯನ್ನಾಗಿಸುತ್ತೇನೆಂದು ಪಣತೊಟ್ಟು, ಕಷ್ಟಪಟ್ಟು, ಇಷ್ಟಪಟ್ಟು, ಬೆವರು ಸುರಿಸಿ ಓದಿಸುತ್ತಾಳೆ. ಇತ್ತ ನಿಂಗಿಯ ಮಗಳು(ಭಾರತಿ) ಸಿರಿವಂತರ ಮನೆಯಲ್ಲಿ ಸಕಲ ಸೌಭಾಗ್ಯಗಳೊಂದಿಗೆ ಬೆಳೆಯುತ್ತದೆ. ಅನ್ನಪೂರ್ಣಳ ಮನೆಯಲ್ಲಿಯೇ ಕೆಲಸ ಮಾಡುವ ನಿಂಗಿಗೆ ತನ್ನ ಕಣ್ಣ ಮುಂದೆ ತನ್ನ ಸ್ವಂತ ಮಗಳಿದ್ದರೂ ಮುದ್ದಾಡುವಂತಿಲ್ಲ, ಉಣಿಸುವಂತಿಲ್ಲ. ನೋಡಿ ಖುಷಿಪಡುವುದಷ್ಟೆ. ಹೀಗೆ ಮುಂದುವರೆದ ಕಥೆಯಲ್ಲಿ ನಿಂಗಿಯ ಸಾಕು ಮಗಳು ಆರತಿ(ಈ ನಾಮಕರಣವೂ ರೋಚಕವಾಗಿ ಚಿತ್ರಿತವಾಗಿದೆ) ಐ.ಎ.ಎಸ್ ಅಧಿಕಾರಿಯಾಗುತ್ತಾಳೆ. ಸ್ವಂತ ಮಗಳು ಪದವಿ ಮುಗಿಸಿ ಮದುವೆಯಾಗಿ ಸುಖದಿಂದಿರುತ್ತಾಳೆ. ಸುಮಾರು ಇಪ್ಪತ್ತೈದು ವರ್ಷದ ಬಳಿಕ ಅಂದು ಆ ಹಸುಗೂಸನ್ನು ಬಿಟ್ಟು ಹೋದವ ಮತ್ತೆ ಕಾರ್ಯಕ್ರಮದಲ್ಲಿ ಎದುರಾಗುತ್ತಾನೆ. ಆ ಮಗುವನ್ನು ಏಕೆ ಬಿಟ್ಟು ಹೋದ? ಎಲ್ಲಿಗೆ ಹೋದ? ಹೆತ್ತ ಮಗುವನ್ನು ಬಿಡಲು ಹೇಗೆ ಮನಸು ಬಂತು? ಅಂತಹ ಅನಿವಾರ್ಯತೆ ಏನಿತ್ತು? ಎಲ್ಲದಕ್ಕೂ ಉತ್ತರ ಕಾದಂಬರಿಗಾರ್ತಿ ಶ್ರೀಮತಿ ಸುಮ ಉಮೇಶ್ ಅವರು ಕಣ್ಣಿಗೆ ಕಟ್ಟುವಂತೆ, ಮನದಲ್ಲೇ ದೃಶ್ಯೀಕರಿಸಿಕೊಳ್ಳುವಂತೆ ಬರೆಯುತ್ತಾರೆ.
ತಾನು ಹೆತ್ತ ಮಗಳನ್ನು ಪರರಿಗೆ ಒಪ್ಪಿಸುವ ತಾಯಿಯ ಹೃದಯದ ಆರ್ತನಾದ ಓದುಗನನ್ನು ಭಾವನಾತ್ಮಕವಾಗಿ ಹಿಡಿಯುತ್ತದೆ. ತಾನು ಸಾಕಿದ ಮಗಳನ್ನು ಇಪ್ಪತ್ತೈದು ವರ್ಷಗಳ ತರುವಾಯ ಹೆತ್ತವರಿಗೆ ಮತ್ತೆ ಹಸ್ತಾಂತರಿಸುವ ಸಂದರ್ಭ ಎದುರಾದಾಗ ಮನದ ತಾಕಲಾಟಕ್ಕೆ ಬಿದ್ದ ನಿಂಗಿ ನ್ಯಾಯಯುತವಾದ ನಿರ್ಧಾರಕ್ಕೆ ಬರುತ್ತಾಳೆ. ಎಲ್ಲಿಯೂ ಸ್ವಾರ್ಥ ಅವಳನ್ನು ಆವರಿಸುವುದಿಲ್ಲ. ತನ್ನ ಕರ್ತವ್ಯ ತಾನು ಪಾಲಿಸಿದ್ದೇನಷ್ಟೇ ಎಂದುಕೊಳ್ಳುತ್ತಾಳೆ.
ಮಗಳ ಗುರುಗಳಾದ ಮೂರ್ತಿ ಎಂಬ ಶಿಕ್ಷಕರ ನುಡಿಯಂತೆ ಸಮಾಜಮುಖಿಯಾಗಿ ಸೇವೆ ಸಲ್ಲಿಸುತ್ತಾಳೆ. ಅನಕ್ಷರಸ್ಥಳಾಗಿದ್ದ ನಿಂಗಿ ಅಕ್ಷರಸ್ಥಳಾಗಿ ಕಥೆ, ಕಾದಂಬರಿ ಓದುವಷ್ಟು ಸಬಲಳಾಗುತ್ತಾಳೆ, ಸ್ವಯಂ ಉದ್ಯೋಗ ಕೈ ಹಿಡಿಯುತ್ತದೆ. ಸ್ತ್ರೀ ಶಕ್ತಿ ಮಹಿಳಾ ಸಂಘಗಳ ಸಹಕಾರ ಮಹಿಳೆಗೆ ಹೇಗೆ ಸಹಕಾರಿ ? ಮತ್ತು ಏಕೆ ಅವಶ್ಯಕ ?ಎಂಬುದನ್ನೂ ನಾವು ಈ ಕಾದಂಬರಿಯಲ್ಲಿ ಕಾಣುತ್ತೇವೆ. ಹೆಚ್ಚಿನದಾಗಿ, ಉನ್ನತ ಅಧಿಕಾರಿಯಾದರೂ ಸರಳತೆ ಮೈಗೂಡಿಸಿಕೊಂಡ ನಿಂಗಿಯ ಮಗಳು ಆರತಿ ಮೆಚ್ಚುಗೆಯಾಗುತ್ತಾಳೆ, ಗುರುವಿಗೆ ತಕ್ಕ ಶಿಷ್ಯೆ, ತಾಯಿಗೆ ತಕ್ಕ ಮಗಳು ಎನಿಸುತ್ತಾಳೆ.
ಅಧಿಕಾರಿಯ ತಾಯಿಯಾಗಿಯೂ ಕೊನೆಯವರೆಗೂ ಅನ್ನಪೂರ್ಣ(ಪೂರ್ಣಕ್ಕ)ನವರ ಮನೆಗೆಲಸ ಬಿಡದುದಕ್ಕೆ ಕಾರಣ ಈ ಬಾಂಧವ್ಯ. ಜಾತಿ, ಶ್ರೀಮಂತಿಕೆ, ಹುದ್ದೆ, ಅಧಿಕಾರಗಳಾಚೆಯೂ ಪ್ರೇಮ ಸೃಷ್ಟಿಯಾಗುವುದಕ್ಕೆ ಕಾರಣವೇ ಈ ಬಾಂಧವ್ಯ. ಓದುತ್ತಾ ಹೋದಂತೆ ಮನಸು ರೋಧಿಸುತ್ತದೆ, ಒಂದು ಹಂತದಲ್ಲಿ ಅಯ್ಯೋ ಇದು ಸರಿ ನಾ? ಎನಿಸಿದರೆ ಮರುಕ್ಷಣ ಹೌದು ಸರಿಯಾಗಿದೆ ಎಂದು ನೆಮ್ಮದಿ ಮೂಡುತ್ತದೆ.
ರೋಚಕ ತಿರುವುಳ್ಳ ಕಾದಂಬರಿಯ ಅಂತ್ಯ ನಿಜಕ್ಕೂ ಓದುಗನು ಊಹಿಸಲು, ನಿರೀಕ್ಷಿಸಲು ಸಾಧ್ಯವಿಲ್ಲ. ಎಲ್ಲ ಅನುಮಾನಗಳಿಗೆ ಪರಿಹಾರವೇ ಈ ಕಾದಂಬರಿಯ ಓದು. ಅಂತ್ಯ ಪ್ರತಿ ಓದುಗನಿಗೂ ಇಷ್ಟವಾಗುತ್ತದೆ. ಪಾತ್ರಗಳು ತೆಗೆದುಕೊಳ್ಳುವ ನಿರ್ಧಾರಕ್ಕೆ ಚಕಾರ ಎತ್ತಲು ಸಾಧ್ಯವೇ ಇಲ್ಲವೆಂಬಂತೆ ಕೃತಿಕಾರರು ಅತ್ಯಂತ ಸೂಕ್ಷ್ಮದೃಷ್ಟಿಯಿಂದ, ಜಾಣತನದಿಂದ ಕಥೆ ಹೆಣೆದಿದ್ದಾರೆ.
ಇನ್ನು ನಡು ನಡುವೆ ಬರುವ, ದೇವಮ್ಮ, ದೇವಮ್ಮನ ಮಗಳು, ಪುಟ್ಟಜ್ಜಿ, ರಾಘವೇದ್ರರಾಯರ ಚಿಕ್ಕಪ್ಪ, ಶ್ರೀಹರಿ ಅವನ ಹೆಂಡತಿ ಪಾತ್ರಗಳು ಕಾದಂಬರಿಗೆ ನ್ಯಾಯ ಒದಗಿಸಿವೆ. ಸರಿಯಾದ ನಿರ್ದೇಶಕನ ಕೈಗೆ ಈ ಕಾದಂಬರಿ ಸಿಕ್ಕರೆ ಖಂಡಿತ ಚಲನಚಿತ್ರವಾಗುವುದರಲ್ಲಿ ನನಗಂತೂ ಸಂಶಯವಿಲ್ಲ.
ಕೃತಿಕಾರರಾದ ಶ್ರೀಮತಿ ಸುಮ ಉಮೇಶ್ ಅವರು ಇದರಂತೆ ಇನ್ನೂ ಹೆಚ್ಚು ಹೆಚ್ಚು ಕಾದಂಬರಿಗಳನ್ನು ಓದುಗರಿಗೆ ನೀಡಲಿ ಎಂದು ಆಶಿಸುತ್ತೇನೆ. ಇದು ಇವರ ಚೊಚ್ಚಲ ಕಾದಂಬರಿಯಂತೆ, ಚೊಚ್ಚಲ ಕೃತಿಯೂ ಹೌದು ಎಂದರೆ ನಂಬಲಸಾಧ್ಯವಾದರೂ ಸತ್ಯ ಎಂದು ನಂಬಲೇಬೇಕು. ಕೃತಿಯ ನಿರೂಪಣೆ, ಸನ್ನಿವೇಶಗಳ ಹೊಂದಾಣಿಕೆ, ಪಾತ್ರಗಳ ಹೆಣೆಯುವಿಕೆ ನೋಡಿದರೆ ಮೊದಲ ಕೃತಿ ಎಂಬುದನ್ನು ಅರಗಿಸಿಕೊಳ್ಳಲಸಾಧ್ಯ. ಅಷ್ಟು ಪ್ರಬಲವಾದ ಸಾಹಿತ್ಯ ರಚನೆಯ ಕೃತಿ ಇದು.
ಕೃತಿಕಾರರಿಗೆ ಶುಭವಾಗಲಿ
ಎಲ್ಲ ಓದುಗರೂ ಕೃತಿಯನ್ನು ಕೊಂಡು ಓದಿ ಪ್ರೋತ್ಸಾಹಿಸಿ.
“ಧನ್ಯವಾದಗಳೊಂದಿಗೆ”
– ವರದೇಂದ್ರ ಕೆ ಮಸ್ಕಿ
9945253030
ಕೃತಿಗಾಗಿ ಸಂಪರ್ಕಿಸಿ
-ಶ್ರೀಮತಿ ಸುಮ ಉಮೇಶ್
9035287970