ವಿಶೇಷ ಲೇಖನ
ಜಂಗಮಕ್ಕೆ ರುಚಿಯ ಸಲ್ಲಿಸುವೆ
ಕನ್ನಡ ಕಾವ್ಯ ಲೋಕದ ಮಹಿಳಾ ವಚನಕಾರರಲ್ಲಿ ಅಗ್ರಗಣ್ಯ ಹೆಸರೆಂದರೆ ಅಕ್ಕಮಹಾದೇವಿ. ಇದಕ್ಕೂ ಮೊದಲು ಮಹಿಳೆಯರ ಧ್ವನಿ ಇರಲಿಲ್ಲವೆಂದಲ್ಲ ಅವು ಯಾವವೂ ಅಕ್ಷರ ಸಂಸ್ಕೃತಿಗೆ ಸೇರ್ಪಡೆಯಾಗಿರಲಿಲ್ಲ. ಮಹಿಳಾ ಸಂಕಥನಕ್ಕೆ ಕಿರೀಟಪ್ರಾಯವಾದ ಅಕ್ಕನ ವಚನಗಳು ಮೇರು ಸಾದೃಶ್ಯವುಳ್ಳಂಥಹವುಳು. ಮಹಿಳಾ ಸ್ವಾತಂತ್ರ್ಯ ಸಮಾನತೆಯ ಆಶಯಕ್ಕೆ ಅನುಗುಣವಾಗಿ ಅಭಿವ್ಯಕ್ತಿ ಸಾಧಿಸಿದ ಅಕ್ಕನ ವಚನಗಳು ಪ್ರತಿಭಟನೆಯ ಗಟ್ಟಿಧ್ವನಿ ತಾನೊಲ್ಲದ ಬದುಕಿನಿಂದ ಸಿಡಿದು ನಡೆದ ಅವಳದು ವಿಶಿಷ್ಟವಾದ ಅನುಭಾವ ಮತ್ತು ಆಧ್ಯಾತ್ಮದ ಮಾರ್ಗ.
ಜಂಗಮವೆಂದರೆ, ಚಲನಶೀಲವಾದದ್ದು. ವಿರಕ್ತನಾದವನು ಲೋಕ ಸಂಚಾರಿ ಯಾದ ಶವಭಕ್ತನೆಂಬ ಅರ್ಥವೂ ಇದೆ. ಶರಣರ ಪ್ರಕಾರ ಜಂಗಮವೆಂಬುದು ಬದುಕು ಜಂಗಮವಾಗಿರದಿದ್ದರೆ ಸ್ಥಾವರ ಗೊಂಡರೆ ಸಾವು, ನದಿ, ನಮ್ಮೊಳಗಿನ ರಕ್ತದ ಹರಿವು ಕ್ಷಣ ಕ್ಷಣವೂ ಬದಲಾಗುವ ಭಾವಗಳ ಹರಿವು ಎಷ್ಟೊಂದು ಜಂಗಮಗಳು “ಅಕ್ಕನ ಮಾತಿನಂತೆ”
“ ಲಿಂಗ ರೂಪ ಸವಿಸುವ ಜಂಗಮಕ್ಕೆ ರುಚಿಯ ಸವಿಸುವೆ”
ಅಕ್ಕನ ಮಾತಿನಂತೆ, ತನ್ನ ಸರ್ವಸ್ವವನ್ನು ಅಂಗಲಿಂಗಕ್ಕೆ ಅರ್ಪಿಸಿ ಜಂಗಮ ಸೇವಗೆ ಸಿದ್ದಳಾದ ಅಕ್ಕನು ಜಂಗಮನನ್ನು ಹರನೆಂದು, ಚೆನ್ನಮಲ್ಲಿಕಾರ್ಜುನನೆಂದು ತಿಳಿದಂತವಳು. ಗುರುವಿನಿಂದ ಲಿಂಗ ಪಡೆದ ಅಕ್ಕ ಲಿಂಗ ದೇಹಿಯಾದ ಜಂಗಮ ಅನುಭಾವಿಯಾಗಿದ್ದಾನೆ. ಅಕ್ಕನಿಗ ಚೆನ್ನಮಲ್ಲಿಕಾರ್ಜುನ ಗುರು ಉಪದೇಶದ ಮಂತ್ರವಾಗಿದ್ದಾನೆ. ವೈದ್ಯನಾಗಿದ್ದಾನೆ ಜಂಗಮ. ಉಪದೇಶ ಅರಹುವ ಶಸ್ತ್ರ ವೈದ್ಯವೆಂದು ಭೌತಿಕ ಸತ್ಯವನ್ನು ಸ್ಪಷ್ಟಪಡಿಸುತ್ತಾಳೆ.
ನಾನುಣ್ಣದ ಮುನ್ನವ || ಜಂಗಮಕ್ಕೆ ಅಮೃತಾನ್ನದಿ
ನೈವೇದ್ಯ ನೀಡುವೆ || ನಾನುಡದ ಮುನ್ನವೆ
ಜಂಗಮಕ್ಕೆ ದೇವಾಂಗಾದಿ || ವಸ್ತ್ರವನುಡಿಸುವೆ
ನಾನು ಹೂಸಿದ ಮುನ್ನವೆ || ಜಂಗಮಕೆ ಸುಗಂದಾದಿ
ಪರಿಮಳವ ದ್ರವ್ಯವ ಹೂಸುವೆ || ನಾನು ಮುಡಿಯದ
ಮುನ್ನವೆ ಜಂಗಮಕ್ಕೆ || ಪರಿಪರಿಯ ಪುಷ್ಟವ
ಮುಡಿಸುವೆ, ನಾನು ತೊಡಿಗೆಯ || ತೊಡದ ಮುನ್ನವೆ
ಜಂಗಮಕ್ಕೆ ತೊಡಿಗೆಯ ತೊಡಿಸುವೆ ||
ನಾನಾವ ಭೋಗಿವ || ಭೋಗಿಸುವುದ ಜಂಗಮಕ್ಕೆ
ಬೋಗಿಸಲಿತ್ತ ಆ ಶೇಷ ಪ್ರಸಾದವ || ಲಿಂಗ ಕ್ಕಿತ್ತ
ಭೋಗಿಸಿದ ಬಳಿಕಲಲ್ಲದೆ || ಭೋಗಿಸಿದಡೆ ಬಸವಣ್ಣಾ
ನಿಮ್ಮಾಣೆಯಯ್ಯ || ಚೆನ್ನ ಮಲ್ಲಿಕಾರ್ಜುನ
ಅಕ್ಕ ಜಂಗಮ ವ್ಯಕ್ತಿತ್ವದ ನಿರ್ಮಾಣಕ್ಕೆ ಕಾತುರಳಾಗಿದ್ದಾಳೆ. ಜಂಗಮನು ವಿರಕ್ತನೂ ಅಲ್ಲ. ಭಕ್ತ ಮತ್ತು ಭಗವಂತನ ನಡುವೆ ಮದ್ಯವರ್ತಿಯಾಗಿ ಜ್ಞಾನವನ್ನು ನೀಡುವ ಚೈತನ್ಯ ಭರಿತನು. ಭಕ್ತಿಯ ಪರವಶದಲ್ಲಿ “ನಾನುಣ್ಣದ ಮುನ್ನವೆ……ಎನ್ನುವಲ್ಲಿ ಅನುಭಾವವೆಂಬ ಜಂಗಮನಿಗೆ ರೂಪವಿಲ್ಲ. ಲಿಂಗಾತ್ಮದಲ್ಲಿ ಅಡಗಿರುವ ಪ್ರಾಣನೇ ಚೈತನ್ಯ ರೂಪಿಯಾದ ಜಂಗಮನಿಗೆ ಅಮೃತ ಅನ್ನಾದಿ ನೈವೇದ್ಯ ನೀಡುವೆ ಎನ್ನುತ್ತಾಳೆ. ತನುವಿನ ಪ್ರಾಣ ಲಿಂಗವಾದರೆ, ಮನದ ಪ್ರಾಣ ಜಂಗಮ. ನಾನುಡದ ಮುನ್ನವೆ….. ಜಂಗಮಕ್ಕೆ ದೇವಾಂಗದ ಪರಿಶುಭ್ರವಾದ ಬಟ್ಟೆಯನ್ನು ಉಡಿಸಿ ಸಂಭ್ರಮಿಸಲು ಎನ್ನುವಲ್ಲಿ….. ಜಂಗಮಕ್ಕಿರಕಾದ ಆಂತರಿಕ ಪರಿಕಲ್ಪನೆಯಲ್ಲಿ ಸಾಮಾಜಿಕ ವ್ಯವಸ್ಥೆಯ ನಿಷ್ಠೆಯಾಗಿದೆ. ಅಕ್ಕನಿಗೆ ಜ್ಞಾನವೇ ಗುರುವಾದವನು ಆದರ್ಶಗಳ ಮೊತ್ತವಾದವನು. ಸಮಾಜದಲ್ಲಿ ಜ್ಞಾನವನ್ನೂ ಪಸರಿಸುತ್ತಾ ಅರಳಿ ವಿಕಾಸದ ಪರಿವರ್ತನೆಯ ಭಕ್ತಿಯ ರೋಮಾಂಚನವನ್ನು ಕಾಣುವ ಅಕ್ಕನಿಗೆ ಚೆನ್ನಮಲ್ಲಿಕಾರ್ಜುನನಿಗೆ ಆತ್ಮ ಚೈತನ್ಯದಿಂದ ಅಲಂಕಾರವನ್ನು ಮಾಡುತ್ತಾಳೆ.
ಜಂಗಮನನ್ನು ದೈವತ್ವದ ಸ್ಥಾನ ಕೊಟ್ಟ ಶರಣರು ಪಿಂಡಾಂಡದ ಲಿಂಗದಲ್ಲಿ ಅರಿವೆಂಬ ಜಂಗಮನನ್ನು ಕಂಡರು. ಅಕ್ಕನ ಪೂಜಾ ಕೈಂಕರ್ಯದಲ್ಲಿ ಚೆನ್ನಮಲ್ಲಿಕಾರ್ಜುನನ್ನು ಎಷ್ಠೇ ಹೊಗಳಿದರೂ ಸಾಲದು. ಚೈತನ್ಯದಾಯಿಯಾದ ಪಂಚಭೂತಾದಿ ಸಂಬಂಧಕ್ಕೆ ವಿಶ್ವವೂ ಕಾರಣ. ಜಂಗಮದಿಂದಲೇ ಹುಟ್ಟಿದ ಚಲನಶೀಲತೆ ಪಿಂಡಾಂಡದ ಪೂಜೆಯಲ್ಲಿ ಪುಷ್ಪವನ್ನು ಅರ್ಪಿಸುವ ಆತುರತೆ ಅಕ್ಕನದು. ಪ್ರಾಣ ಪುಷ್ಪದಲ್ಲಿ ಜ್ಞಾನ ಮೂರ್ತಿಯಾಗಿರುವವನು ಜಂಗಮ.
ಅಕ್ಕನಿಗೆ ಗುರುವಿನ ಕಾರ್ಯ ಉಪದೇಶವಾದರೂ ಜಂಗಮ ಸೇವಾಕಾರ್ಯ ಅನುಭಾವವಾಗಿದೆ. ಭಕ್ತಿಯ ತುರೀಯಾವಸ್ಥೆಯಲ್ಲಿ ಅಂತರಿಕ ಪೂಜೆ, ಅರಿವಿನ ಜಂಗಮದ ಪೂಜೆ, ಬಹಿರಂಗದ ಪೂಜೆಯಲ್ಲಿ “ನಾನು ತೊಡಿಗೆಯ ತೊಡದ ಮನ್ನವೇ ಜಂಗಮಕ್ಕೆ ತೊಡಿಗೆಯ ತೊಡಿಸುವೆ ಎನ್ನುತ್ತಾಳೆ”. ಚನ್ನಮಲ್ಲಿಕಾರ್ಜುನನ್ನು ಪತಿಯಾಗಿ ಕಂಡೆ ಅಕ್ಕ ಭೋಗದ ತನ್ಮಯತೆಯ ಪಾಲು ಜಂಗಮನಿಷ್ಟ ಸಾಧನೆಯಿಂದ ಪಡೆಯಬಹುದಾದ ಆಧ್ಯಾತ್ಮಿಕ ನಿಲುವು ಅಕ್ಕನದು.
ಶರಣರು ಬಸವಣ್ಣನನ್ನು ದೇವರಾಗಿ ಕಂಡಂತೆ ಅಕ್ಕನು ಸಹಿತ ಗುರು ಲಿಂಗ ಜಂಗಮ ಸ್ಥಾನದಲ್ಲಿ ಕಂಡಂತವಳು. ಜಂಗಮನಿಗೆ ಒಕ್ಕು ಮಿಕ್ಕ ಪ್ರಸಾದವನ್ನು ಅರ್ಪಿಸುವುದಿಲ್ಲ. ಶೇಷ ಪ್ರಸಾದ ಲಿಂಗಕ್ಕಿತ್ತು ಭೋಗಿಸಿ ಬಳಿಕವೇ ನಾನು ಸೇವಿಸುವೆ, ನಿಮ್ಮ ಮೇಲೆ ಆಣೆ ಮಾಡುವೆ ಸತ್ಯವೆಂದು ನಿಸ್ಸಂಕೋಚವಾಗಿ ಜಂಗಮ ಧರ್ಮವನ್ನು ಪ್ರೀತಿಸುತ್ತಾಳೆ.
ಅಕ್ಕ ಭೌತಿಕ ಆಸೆಗಳಿಂದ ಹೊರಬಂದು ಆತ್ಮೀಯತೆಯಿಂದ ಜಂಗಮ ವ್ಯವಸ್ಥೆಗೆ ದೈವಾನುಭೂತಿ ಕೊಡುತ್ತಾಳೆ. ಅಕ್ಕನ ಮಾನೋಭೂಮಿಕೆಯಲ್ಲಿ ಜಂಗಮನು ಜ್ಞಾನಾನು ಸಂಧಾನನಾಗಿದ್ದಾನೆ.
–ಡಾ.ಸರ್ವಮಂಗಳ ಸಕ್ರಿ
ರಾಯಚೂರು
9449946839
—————————–_——–_
ಕ್ಣಣ ಕ್ಷಣದ ಸುದ್ದಿಯನ್ನು
ತಾವು ವೀಕ್ಷಿಸಲು
*e-ಸುದ್ದಿ ಅಂತರಜಾಲ ಪತ್ರಿಕೆ ನೋಡಿ.*
ಪ್ರತಿದಿನದ ಮತ್ತು ಯಾವ ದಿನಾಂಕದ ಪತ್ರಿಕೆ ನೊಡಬಯಸಿವಿರೊ ಆ ದಿನದ ಸುದ್ದಿ ಓದಬಹುದು.
ಅದಕ್ಕಾಗಿ
ನಿವು ಮಾಡಬೆಕಾಗಿರೊದು
*ಬೆಲ್ ಬಟನ್ ಒತ್ತಿ ಸಬ್ ಸ್ಕ್ರೈವ್ ಆಗಿ ಮತ್ತು ನಮ್ಮವಾಟ್ಸಪ್ ಗ್ರೂಪಗೆಸೇರಲುಬಯಸಿದರೆವಾಟ್ಸ್ ಪ್ ಸಿಂಬಲ್ ಮೆಲೆ ಕ್ಲಿಕ್ ಮಾಡಿ*
🙏🙏🙏🙏🙏🙏