ವಾರದ ವಿಶೇಷ ವಚನಕಾರ ಪರಿಚಯ-ವಚನ ವಿಶ್ಲೇಷಣೆ
ಚೊಕ್ಕ ವಿಚಾರಗಳ ಡೋಹರ ಕಕ್ಕಯ್ಯ
ಅಪ್ಪ , ಬೊಪ್ಪ , ಹಿರಿಯಯ್ಯ, ಚಿಕ್ಕಯ್ಯ ಎಂದು ಮಹಾನುಭಾವ ಬಸವಣ್ಣನವರಿ0ದ ಹೊಗಳಿಸಿಕೊಂಡ ಶರಣ ಡೋಹರ ಕಕ್ಕಯ್ಯ ಸಾಮಾನ್ಯ ವ್ಯಕ್ತಿಯಾಗಿರಲಿಲ್ಲ. ವರ್ಗ, ವರ್ಣ , ಗೋತ್ರ , ಮೊದಲಾದ ವೈದಿಕ ಕಲ್ಪನೆಗಳಿಗೂ ವೀರಶೈವ ಧರ್ಮಕ್ಕೂ ಸಂಬಂಧವೇ ಇಲ್ಲ. ಆದರೂ ಕೆಲವರು ಲಿಂಗವಂತರಿಗೆ
ಗೋತ್ರ ಪುರುಷರ ಬಗ್ಗೆ ವಿಚಾರಿಸಿದರೆ ಲಿಂಗಧಾರಿಗಳು ತಮಗೆ ಗೋತ್ರ ಪುರುಷರು ಇಲ್ಲವಲ್ಲ ಎನ್ನುವಂಥ ಸನ್ನಿವೇಶವೇನೂ ಇಲ್ಲವೆಂದು ದಿಟ್ಟತನ -ಧೈರ್ಯದಿಂದ ಡೋಹರ ಕಕ್ಕಯ್ಯನು ನಮ್ಮ ಗೋತ್ರಪುರುಷ, ಮಾದಾರ ಚೆನ್ನಯ್ಯನು ನಮ್ಮ ಗೋತ್ರಪುರುಷ ಎಂದು ಧಾರಾಳವಾಗಿ ಹೇಳಬಹುದೆಂದೂ ಬಸವಣ್ಣನವರೇ ಅಪ್ಪಣೆ ಕೊಡಿಸಬೇಕಾದರೆ ಡೋಹರ ಕಕ್ಕಯ್ಯ ಅತ್ಯಂತ ಪೂಜ್ಯ ವ್ಯಕ್ತಿಯಾಗಿದ್ದನೆ0ಬುದು ಇದರಿ0ದ ವ್ಯಕ್ತವಾಗುತ್ತದೆ.
ನಮ್ಮ ಹಿಂದಿನ ಪುರಾಣ ಕಾವ್ಯಗಳು ಡೋಹರ ಕಕ್ಕಯ್ಯನು ಮಾಳವದೇಶದಿಂದ ಬಂದು ಕಲ್ಯಾಣದಲ್ಲಿ ನೆಲೆಸಿದನೆಂದು ಉಲ್ಲೇಖಿಸುತ್ತವೆ. ಆಫ್ಗಾನಿಸ್ತಾನದಿಂದ ಮರುಳಶಂಕರ
ದೇವ, ಒರಿಸ್ಸಾದಿಂದ ಸುಜ್ಞಾನಿದೇವ, ಗುಜರಾತದಿಂದ ಆದಯ್ಯಶೆಟ್ಟಿ ಬಂದಿರಬೇಕಾದರೆ ಡೋಹರ ಕಕ್ಕಯ್ಯ ಮಾಳವ ಪ್ರಾಂತದಿಂದ ಬಂದುದು ಆಶ್ಚರ್ಯಕರ ಸಂಗತಿಯೇನೂ ಅಲ್ಲ. ಮೇಲೆ ಉಲ್ಲೇಖಿಸಿದವರೆಲ್ಲ ಕನ್ನಡದಲ್ಲಿ ವಚನಗಳನ್ನು ಬರೆದಂತೆ ಡೋಹರ ಕಕ್ಕಯ್ಯನೂ ಕನ್ನಡದಲ್ಲಿ ಬಹಳ ಸುಂದರವಾದ ವಚನಗಳನ್ನು ಬರೆದಿದ್ದಾನೆ. ಆದರೆ ಸಧ್ಯಕ್ಕೆ ಆರೇ ವಚನಗಳು ಸಿಕ್ಕಿವೆ. ಆತನ ಅಂಕಿತ ” ಅಭಿನವ ಮಲ್ಲಿಕಾರ್ಜುನ ”
ಚರ್ಮ ಹದ ಮಾಡುವ ಕಾಯಕದಿಂದ ಆತ ಅಸ್ಪೃಶ್ಯ ಡೋಹರ ಜಾತಿಯಲ್ಲಿ ಹುಟ್ಟಿದ್ದನೆಂದು ಗೊತ್ತಾಗುತ್ತದೆ. ಕಾಯಕ ಅಸ್ಪೃಶ್ಯವಾದುದೆಂದು ಆತ ತನ್ನ ಕಾಯಕವನ್ನೇನೂ ತ್ಯಜಿಸಿದವನಲ್ಲ. ಆತ ಚರ್ಮದ ಕಾಯಕ ತ್ಯಜಿಸಿದರೂ ಉಚ್ಚಕುಲದವರು ಹುಟ್ಟಿನಿಂದ ಬಂದ ಕಷ್ಟಕುಲದವನೆಂಬ ಹಣೆಪಟ್ಟಿಯನ್ನು ಅಳಿಸುತ್ತಿರಲಿಲ್ಲ, ಎಂದ ಮೇಲೆ ಕಾಯಕ ಏಕೆ ಬಿಡಬೇಕು ? ಅಲ್ಲದೆ ನಿಷ್ಠಾಪೂರ್ಣ ಕಾಯಕ ದೇವರಿಗೆ ಸಂಬಂಧಿಸಿದುದು. ದೇವರಲ್ಲಿ ಜಾತಿಸೂತಕಗಳು ಇಲ್ಲವೇ ಇಲ್ಲ. ಆದರೂ ಡೋಹರ ಕಕ್ಕಯ್ಯನಿಗೆ ತನ್ನ ಹುಟ್ಟಿನ ಬಗೆಗೆ ಬೇಜಾರು ಇದೆ
ತಾನು ಇಂಥಲ್ಲಿಯೇ ಹುಟ್ಟಬೇಕೆಂದು ಅರ್ಜಿ ಹಾಕಿಕೊಂಡಿಲ್ಲವಾದರೂ ಸರ್ವ ಶಕ್ತ ದೇವರು ತನ್ನನ್ನು ಕೀಳುಕುಲದಲ್ಲಿ ಏಕೆ ಹುಟ್ಟಿಸಿದ ? ತಾನೂ ಎಲ್ಲರಂತೆ ಪರಾತ್ಪರ ಪರಮಾತ್ಮನನ್ನು ಕೈಮುಟ್ಟಿ ಪೂಜಿಸುವ0ತಿಲ್ಲವಲ್ಲ ? ಮಹಾನುಭಾವ ಬಸವಣ್ಣನೇನೋ ಕಲ್ಯಾಣದಲ್ಲಿ ಧರ್ಮದ ಬಾಗಿಲನ್ನು ಎಲ್ಲರಿಗೂ ತೆರೆದು ಲಿಂಗವನ್ನು ಎಡಗೈಯಲ್ಲಿ ಇರಿಸಿಕೊಂಡು ಬಲಗೈಯಲ್ಲಿ ಪೂಜಿಸುವ ಸೌಲಭ್ಯ ಕಲ್ಪಿಸಿದ. ಅಂತಹ ದಯಾಳು ಬಸವಣ್ಣ ಹುಟ್ಟಿರದಿದ್ದರೆ ಏನು ಗತಿಯಿತ್ತು ?
ಈ ಭಾವನೆಗಳನ್ನೆಲ್ಲ ಡೋಹರ ಕಕ್ಕಯ್ಯ ನಿರ್ಭಿಡೆಯಿಂದ ತನ್ನ ಅನಿಸಿಕೆಯ ವಚನಗಳಲ್ಲಿ ತೋಡಿಕೊಂಡಿದ್ದಾನೆ.
ಎನ್ನನು ಕಷ್ಟಕುಲದಲ್ಲಿ ಹುಟ್ಟಿಸಿದೆಯಯ್ಯಾ ಎಲೆ ಲಿಂಗ ತಂದೆ !
ಕೆಟ್ಟೆನಯ್ಯ ನಿಮ್ಮನು ಮುಟ್ಟಿಯೂ ಮುಟ್ಟದಿಹೆನು
ಎನ್ನ ಕೈ ಮುಟ್ಟದಿರ್ದಡೆ ಮನ ಮುಟ್ಟಲಾರದೇ ಅಭಿನವ ಮಲ್ಲಿಕಾರ್ಜುನಾ !
ಶಕ್ತಿಶಾಲಿಗಳಾದವರು ದೇವರನ್ನು ಕೈ ಮುಟ್ಟಿ ಪೂಜಿಸಲು ಅಡ್ಡಿ ಪಡಿಸಬಹುದು. ಆದರೆ ಮನಮುಟ್ಟಿ ಪೂಜಿಸಲಿಕ್ಕೆ ಯಾರದೇನು ಅಡ್ಡಿ ?
ಕಲ್ಯಾಣದ ಕ್ರಾಂತಿಯ ದಿನಗಳಲ್ಲಿ ಕಕ್ಕಯ್ಯ ಮಹತ್ವದ ಪಾತ್ರ ವಹಿಸಿದ್ದನು. ತನ್ನ ವೃದ್ಯಾಪ್ಯವನ್ನು ಪರಿಗಣಿಸದೆ ವಚನ ಸಾಹಿತ್ಯ ರಕ್ಷಣೆಯ ಪಡೆಯಲ್ಲಿ ವೀರಯೋಧನಾಗಿ ಅಳಿಯ ಬಿಜ್ಜಳನ ಸೇನೆಯೊಡನೆ ಕಾದಿದನು. ಇನ್ನೇನು ಉಳುವಿ ಬಂದಿತೆಂದು ಸಂಭ್ರಮಿಸುವಾಗಲೇ
ವೈರಿಗಳ ಸೇನೆಯ ಕೈ ಮೇಲಾಗುತ್ತಿರುವುದನ್ನು ಕಂಡು ಅರಸು ಸೇನೆಯ ಒತ್ತಡ ಕಡಿಮೆ ಮಾಡಲು ತಾನೊಂದು ಶರಣ ಪಡೆಯ ಸೇನಾಪತಿಯಾಗಿ ಬೆಳಗಾವಿ ಜಿಲ್ಲೆ ಕಡೆ ಹೊರಳಿದನು
ಅರಸು ಸೇನೆಯೊಡನೆ ಕಾದುತ್ತ ಕಕ್ಕಯ್ಯ ಹುತಾತ್ಮನಾದನು. ಅದೇ ಇಂದು ಕಕ್ಕೇರಿಯಾಗಿದೆ. ಕಲ್ಯಾಣ ಕ್ರಾಂತಿಗೆ ಬಲಿಯಾದವರು ಕೇವಲ ಹರಳಯ್ಯ ಮತ್ತು ಮಧುವಯ್ಯ ಮಾತ್ರವಲ್ಲ , ಕಕ್ಕಯ್ಯ , ಗಂಗಾ0ಬಿಕೆ
ಮೊದಲಾದವರು ವಚನ ಸಾಹಿತ್ಯ ರಕ್ಷಣಾರ್ಥ ಬಲಿಯಾದವರಿದ್ದಾರೆ.
ವಚನ ವಿಶ್ಲೇಷಣೆ
ಆಶೆ , ಆಮಿಷವಳಿದು , ಹುಸಿ ವಿಷಯ0ಗಳೆಲ್ಲ ಹಿಂಗಿ
ಸಂಶಯ ಸಂಬಂಧ ನಿಸ್ಸ0ಬ0ಧವಾಯಿತ್ತಯ್ಯಾ
ಎನ್ನ ಮನದೊಳಗೆ ಘನ ಪರಿಣಾಮವ ಕಂಡು
ಮನಮಗ್ನವಾಯಿತ್ತಯ್ಯಾ , ಅಭಿನವ ಮಲ್ಲಿಕಾರ್ಜುನಾ
ಪ್ರಭುದೇವರ ಕರುಣದಿಂದಾನು ಬದುಕಿದೆ.
ನಮ್ಮ ಶಿವಶರಣರು ವಿಚಾರಶೀಲರು , ವಿನಯಶೀಲರು ಮತ್ತು ಸೌಜನ್ಯಶೀಲರು. ತಮ್ಮ ಬೆಳವಣಿಗೆಗೆ ತಾವೇ ಕಾರಣವಾಗಿದ್ದರೂ ಬೇರೆಯವರು ಮುಖ್ಯ ಕಾರಣವೆಂದು ಹೇಳಿ ಅವರಿಗೂ ಸಂತೋಷ ನೀಡುವವರು, ತಾವೂ ಸಂತೋಷ ಪಡುವವರು. ಈ ಒಂದು ಸಂಸ್ಕೃತಿಯನ್ನು ನಾವು ಎಲ್ಲ ಶರಣರಲ್ಲಿ ಕಾಣುತ್ತೇವೆ. ಒಬ್ಬರನ್ನು ಚರ್ಚೆಗೆ ಎಳೆಯಬೇಕಾದಾಗ ಅವರ ಹೆಸರನ್ನು ತೆಗೆದುಕೊಂಡು ತಮ್ಮ ಅಭಿಪ್ರಾಯವನ್ನು ದಾಖಲಿಸುದುದನ್ನು ಶೂನ್ಯ ಸಂಪಾದನೆಯಲ್ಲಿ ತುಂಬಾ ಕಾಣುತ್ತೇವೆ.
ಪ್ರಸ್ತುತ ವಚನದಲ್ಲಿ ಡೋಹರ ಕಕ್ಕಯ್ಯನವರು ಪ್ರಭುದೇವರ ಕರುಣದಿಂದ ತಾವು ಬದುಕಿದುದಾಗಿ ಅತ್ಯಂತ ವಿನಯವಂತಿಕೆಯಿಂದ ಅರುಹಿದ್ದಾರೆ. ಆದರೆ ಡೋಹರ ಕಕ್ಕಯ್ಯನವರು ಸ್ವಯಂ ಮಹಾನುಭಾವರಾಗಿದ್ದರು. ಕಕ್ಕಯ್ಯ ನವರು ಸ್ವಯಂ ಶುದ್ಧ ಪ್ರಸಾದಿಗಳು , ಸಿದ್ಧ ಪ್ರಸಾದಿಗಳು ಮತ್ತು ಪ್ರಸಿದ್ಧ ಪ್ರಸಾದಿಗಳು.
ಆಸೆ – ಆಮಿಷಗಳು ಅಳಿದು ಹುಸಿ ವಿಷಯ0ಗಳು ಹಿಂಗಿ ದೇವರ ಅಸ್ತಿತ್ವ ಬಗೆಗಿನ , ಅಷ್ಟಾವರಣಗಳ
ಮಹತ್ವದ ಬಗೆಗಿನ , ಪಂಚಾಚಾರಗಳ ಪಾಲನೆ ಬಗೆಗಿನ
ಸಂದು ಸಂಶಯ ನಿಸ್ಸ0ಬ0ಧವಾಗುವುದೇ ಪರಿಪೂರ್ಣತ್ವ. ಏನಾದರೂ ಗೆಲ್ಲಬಹುದು, ಮತ್ತೇನನ್ನಾದರೂ ಸಾಧಿಸಬಹುದು. ಆದರೆ ಆಸೆ ಆಮಿಷಗಳನ್ನು ಅಳಿಯುವುದು ಬಹಳ ದುಸ್ತರವಾದುದು. ಆಶೆಗಳ
ಸರಮಾಲೆಯೇ ಮನುಷ್ಯನನ್ನು ಕಾಡುತ್ತಿರುತ್ತದೆ. ಆಶೆಯೂ ಒಂದು ಮಿತಿಯಲ್ಲಿರುವುದಿಲ್ಲ. ತನಗೆ ನಿಭಾಯಿಸಲಿಕ್ಕೆ ಆಗುತ್ತದೆಯೋ ಇಲ್ಲವೋ ಎಂಬ ಲೆಕ್ಕಾಚಾರದಲ್ಲಿ ತೊಡಗದೆ ಮನುಷ್ಯ ಹಂಬಲಿಸುತ್ತಾನೆ. ತಾನು0ಬುದು ಹಿಡಿಯಕ್ಕಿ, ತಾ ಕುಡಿಯುವುದು ಒಂದಾವಿನ ಹಾಲು , ಪವಡಿಸುವದರ್ಧ ಮಂಚ. ಇಷ್ಟಿದ್ದರೂ ಬಯಸುವದೋ ಅಪರಿಮಿತ ಅಗಣಿತ. ಸಮಪ್ರಮಾಣವಿಲ್ಲದ ಲೆಕ್ಕಾಚಾರಕ್ಕೆ ನಿಲುಕದ ಮನುಷ್ಯನ ಅತಿ ಆಶೆಬುರುಕುತನವನ್ನೇ ಅಲ್ಲಮಪ್ರಭುಗಳು ಈ ಕೆಳಗೆ ಉಲ್ಲೇಖಿಸಿದ ವಚನದ ಮುಖಾಂತರ ಸಂಕೇತಿಸುತ್ತಿರಬಹುದೆನಿಸುತ್ತದೆ.
ಮಾನದ ತೋರಿಹ ಆಕಳಿಗೆ , ಕೊಳಗದ ತೋರಿಹ ಕೆಚ್ಚಲು,
ತಾಳೆಮರದುದ್ದವೆರಡು ಕೋಡುಗಳು ,
ಅದು ಕೆಟ್ಟು ಮೂರು ದಿನ , ಅದನರಸಲು ಹೋಗಿ ಆರು ದಿನ ,
ಅಘಟಿತ ಘಟಿತ ಗುಹೇಶ್ವರಾ ಅರಸುವ ಬಾರೈ !
ಇದು ಸಾಧ್ಯವೇ ? ಒಮ್ಮನದಳತೆಯ ಆಕಳಿಗೆ ಒಕ್ಕಳದಳತೆಯ ಕೆಚ್ಚಲು ಇರುವುದು ಎಂತು ಸಾಧ್ಯ ? ತಾಳೆ
ಮರಗಳಷ್ಟು ಉದ್ದ ಕೋಡುಗಳಿರುವುದೂ ಸಾಧ್ಯವಿಲ್ಲ. ಆದರೂ ಮನುಷ್ಯ ಹಾಗೆ ಭಾವಿಸಿಕೊಂಡಿರುತ್ತಾನೆ. ತನಗಿರುವುದು ನೂರು ವರ್ಷ ಆಯುಷ್ಯವಾದರೂ , ನಾಲ್ಕು ತಲೆಮಾರಿನಲ್ಲಿ ಗಳಿಸಲಾಗಲಾರದಷ್ಟು ತನ್ನೊಂದು ತಲೆಮಾರಿನಲ್ಲಿಯೇ ಗಳಿಸಬಯಸುತ್ತಾನೆ. ಸಾಧ್ಯಾಸಾಧ್ಯತೆಯ ಪರಿಗಣನೆಯೇ ಇಲ್ಲ. ಇಂತಹ ದುರಾಸೆಯ ಆಕಳು ಕಳೆದು ಮೂರು ದಿವಸವಾಗಿದೆಯಂತೆ. ಆ ಕಳೆದುದನ್ನು ಆರು ದಿವಸಗಳಿಂದ ಹುಡುಕಲಾಗುತ್ತಿದೆಯಂತೆ. ಎಂತಹ ನಗೆಪಾಟಲಿನ ಸಂಗತಿ. ನಮ್ಮಲ್ಲಿ ಎಷ್ಟು ಜನರಿಲ್ಲ , ಶೀತಜ್ವರ ಬರಬಹುದೆಂದು ತಿಂಗಳು ಮುಂಚಿ ನಿಂದಲೂ ಔಷಧಿ ಇಟ್ಟು ಕೊಂಡಿರುವವರು. ರೋಗ ಬಂದು ಮೂರು ದಿನವಾಯಿತು. ಅವರು ಔಷಧಿ ತಂದು ಆರು ದಿನವಾಯ್ತು
ಎಂಬ ಮಾತನ್ನು ನಾವು ಹಲವು ಸಲ ಕೇಳುತ್ತೇವೆ. ಇಂಥ ದುರಾಸೆ ದೂರಾಲೋಚನೆಗಳಿಂದ ದೂರ ಇರುವುದೇ ಡೋಹರ ಕಕ್ಕಯ್ಯನವರು ಹೇಳುವ ಸಂಶಯ ಸಂಬಂಧ ನಿಸ್ಸ0ಬ0ಧವಾಯಿತೆ0ಬ ಮಾತು
ಮನಸ್ಸಿನ ನೆಮ್ಮದಿಯೇ ನಿಜವಾದ ನೆಮ್ಮದಿ. ಮನ ಪರಮಾತ್ಮನಲ್ಲಿ ಮಗ್ನವಾಗಿರುವುದೇ ನಿಜವಾದ ಶ್ರೀಮಂತಿಕೆ. ಮನೆಯಲ್ಲಿ ಚೀಲ ಚೀಲ ಕಾಳುಗಳು ತುಂಬಿ ಮನದಲ್ಲಿ ಹಪಾಹಪಿಯಿದ್ದರೆ ಅದಕ್ಕಿಂತ ಬಡತನ ಮತ್ತೊಂದಿಲ್ಲ. ಆಶೆಯಿದ್ದಲ್ಲಿ ಪರಿಣಾಮವಿಲ್ಲ. ಪರಿಣಾಮವಿಲ್ಲದಲ್ಲಿ ಶಾಂತಿಯಿಲ್ಲ. ಶಾಂತಿಯಿಲ್ಲದಲ್ಲಿ ದೇವರ ಧ್ಯಾನವಿಲ್ಲ. ದೇವರ ನೆನಹು ಇಲ್ಲದಲ್ಲಿ ಮುಕ್ತಿಯಿಲ್ಲ.
–ಸುಧಾ ಪಾಟೀಲ್
ಬೆಳಗಾವಿ