ನಾವು ಬದುಕುವ ಜೊತೆಗೆ ಇತರರನ್ನು ಬದುಕಿಸೋಣ

ಬದುಕು ಭಾರವಲ್ಲ 11

ನಾವು ಬದುಕುವ ಜೊತೆಗೆ ಇತರರನ್ನು ಬದುಕಿಸೋಣ

ಬದುಕು ಭಾರವಲ್ಲ. ನಾವು ಬದುಕುವ ರೀತಿ ತಪ್ಪುಗಳನ್ನು ಬದಲಿಸಿಕೊಂಡು ಬದುಕಿ ಸಾಧಿಸಿ ತೋರಿಸುವ ಮನಸ್ಸು ಇರಬೇಕಾದದು ಅತೀ ಅವಶ್ಯ.
ಅನೇಕ ಕಷ್ಟ ಸುಖ ಸಂತೋಷ ನೋವು ನಲಿವು ಇವುಗಳಿಂದ ಆವೃತ್ತವಾದ ಈ ಬದುಕಿನ ಬಂಡಿಯನ್ನು ಹೊಡಿಯಲೇ ಬೇಕಾಗುತ್ತದೆ .ಬದುಕಿನ ಬಂಡಿ ನಿಂತರೆ ಜೀವನವೇ ನಿಂತಂತೆ. ಪ್ರತಿಯೊಬ್ಬರ ಜೀವನದಲ್ಲಿಯೂ ಹೇಳಿಕೊಳ್ಳಲಾರದ ಅನೇಕ ಜೀವನ ದ ಘಟನೆಗಳು ನಡದೇ ಇರುತ್ತವೆ ಆದರೆ ಆನಾವರಣ ಗೊಳಿಸಿಕೊಂಡಿರುವುದಿಲ್ಲ. ಕೆಲವೊಬ್ಬರು ತಮ್ಮ ತಮ್ಮ ಜೀವನದ ಘಟನೆಗಳನ್ನು ಹೇಳಿ ಹಗುರ ಮಾಡಿಕೊಳ್ಳಲು ಪ್ರಯತ್ನಿಸುತ್ತಾರೆ.
ಎಲ್ಲರ ಮುಂದೆ ಎಲ್ಲ ವಿಷಯವನ್ನು ಹೇಳಬಾರದು .
ಹೇಳಿದರೆ ನಮ್ಮ ಗುಟ್ಟು ಹೊರ ಹೋಗುತ್ತದೆ .
ಹೇಳದೇ ಇದ್ದರೆ ಮನ ಭಾರವಾಗಿರುತ್ತದೆ. ಮನಸ್ಸು ಭಾರವಾದಾಗ ತಮ್ಮ ದುಃಖವನ್ನು ಇತರರಿಗೂ ಹೇಳಿ ಹಗುರ ಮಾಡಿಕೊಂಡ ಅನೇಕ ಉದಾಹರಣೆಗಳಲ್ಲಿ ನಮ್ಮ ಮನೆಯ ಕೆಲಸದವಳ ದುಃಖದ ಕಥೆ ಓದಿದವರ ಮನ ಮಿಡಿಯುವ ಸತ್ಯ ಘಟನೆ .

ಮೇಡಂ ರೀ ನಮಸ್ಕಾರ ರೀ ನಾಳೆ ನಿಮ್ಮ ಮನೆ ಕೆಲಸಕ್ಕ ನಾನ ಬರ್ತೀನಿ ರೀ ಏನೇನ್ ಕೆಲ್ಸ ಮಾಡ್ತಿ? ನೀವು ಏನೇನು ಹೇಳ್ತಿರಿ ಅದೆಲ್ಲ ಮಾಡ್ತೀನಿರೀ ವಗ್ಯಾನ, ಬಾಂಡಿ, ಪರ್ಷಿ ಅಡಿಗೆ ರೊಟ್ಟಿ ಎಲ್ಲ ಮಾಡ್ತೀನಿ
ಇದೆಲ್ಲ ಮಾಡ್ತೀ ಮತ್ತ ಕಾಲೇಜ ಕೆಲಸ ಯಾವಾಗ ಮಾಡ್ತಿ? ಅದನ್ನೂ ನಾನ ಮಾಡ್ತೀನ್ರೀ ಹಿಂದೆ ಇದ್ದ ಸರ್ ಮನಿ ಕೆಲಸ ನಾನ ಮಾಡ್ತೀದ್ದಿನ್ರೀ ನಿಮ್ಮನೆ ಕೆಲಸ ನಾನ ಮಾಡ್ತೀನ್ರೀ.
ಸರಿ ಅಮ್ಮ ಬಟ್ಟೆ ಮಿಷನ್ ಅದ ಅದರಲ್ಲಿ ಬಟ್ಟೆ ಹಾಕುವೆ
ಮೇಡಂ ಹಾಕಬೇಡಿ ಬಟ್ಟೆನೂ ನಾನೇ ತೊಳಿತೀನ್ರಿ
ನೀವು ಮಿಷನ್ ದಾಗ ಬಟ್ಟೆ ಹಾಕಿದ್ರ? ನಾನ್ ಹೆಂಗ ಬದಕಲಿ ಸತ್ತೋಗ್ತೀನ್ರಿ
ಸಾಯು ಮಾತು ಯಾಕ?
ಮನೆಗೆ ಬಂದು ಕಣ್ಣೀರ್ ಹಾಕಿ ತನ್ನ ಮನೆಯ ಬಗ್ಗೆ ತನ್ನ ಬದುಕಿನ ಬಗ್ಗೆ ಎಲ್ಲ ವೃತ್ತಾಂತವನ್ನು ನನ್ನ ಮುಂದೆ ಹೇಳಿದಾಗ ಭಾರವನ್ನೆಲ್ಲ ನನ್ ಮೇಲೆ ಹೊರಿಸಿದಂಗ ಆಯಿತು.
ಇರಲಿ ಬಿಡಮ್ಮ ನಾನು ಮಿಷನ್ ಜೋಡಿಸುವುದಿಲ್ಲ ಅದು ಇಟ್ಟು ಇಟ್ಟು ಕೆಟ್ಟರೂ ಪರವಾಗಿಲ್ಲ ನಾನು ಈ ಕಾಲೇಜಿನಲ್ಲಿ ಹಾಗೂ ಈ ಊರಿನಲ್ಲಿ ಇರುವವರೆಗೆ ನಿನ್ನನ್ನು ಬಿಡಿಸುವುದಿಲ್ಲ ನನ್ನ ಜೊತೆಗೆ ನೀನೂ ಬದುಕು ಎಂದೆ .
ನಾನು ಹಿಂದೆ ನಮ್ಮನೆ ಕೆಲಸದಾ ಕಿನೂ ಹೊಸ ಮಿಷನ್ ತಂದಾಗ ಇದನ್ನ ನಿನ್ನ ಹಾಗೇನೆ ಹೇಳಿದ್ಲು ನನ್ ಹೊಟ್ಟೆ ಮ್ಯಾಲ ಕಾಲ ಕೊಡಬೇಡ್ರೀ ಮೇಡಂ ಅಂದಿದ್ದು ನೆನಪು.
ಮನೆಯಲ್ಲಿ ಒಂದಲ್ಲ ಎರಡು ಬಟ್ಟೆ ತೊಳಿಯುವ ಮಿಷನ್ ಇದ್ದರೂ ಕೂಡ ನಾನು ಅವಳನ್ನು ಬಿಡಿಸಲಿಲ್ಲ .
ನಮ್ಮ ಮಕ್ಕಳೆಲ್ಲರೂ ಆಯಿ ಎಂದು ಕರೆಯುವ ನಮ್ಮ ಚಂಪವ್ವ ನಮ್ಮ ಮನೆಯ ಕೆಲಸವನ್ನು ಹದಿನೈದು ವರ್ಷ ಆಕೆಯ ಕೈಯಲ್ಲಿ ನಮ್ಮ ಮನೆಯ ಪಾತ್ರೆಗಳು ಕುಲುಕುಲು ನಗುತಿದ್ದವು. ಇವಾಗ ಪಾತಿಮಾಳ
ಬದುಕಿನ ಕಂಬನಿಯಿಂದಾಗಿ ನಮ್ಮ ಮನೆಯ ಪಾತ್ರೆಗಳೂ ಸಹ ಕಲೆ ಭರಿತವಾಗಿ ಕಂಬನಿ ಸುರಿಸುತ್ತಿವೆ ಎನ್ನುವಂತೆ ಭಾಸ ನನಗೆ. ಸರಿಯಾಗಿ ತಿಕ್ಕುವ ಪಾತ್ರೆಯನ್ನು ಉಜ್ಜುವ ಶಕ್ತಿ ಇಲ್ಲದ ಪಾತಿಮಾ ಅತ್ಯಂತ ಸಣ್ಣ ವಯಸ್ಸಿನಲ್ಲಿಯೇ ಮದುವೆಯಾಗಿ ಕುಡುಕ ಗಂಡನಿಂದ ಐದು ಜನ ಮಕ್ಕಳನ್ನು ಹೆತ್ತು ಬದುಕಿನ ಭಾರವನ್ನು ಎಳೆಯಲಾರದೆ ಆಧಾರವನ್ನೆಲ್ಲ ಪಾತಿಮಾಳ ಮೇಲೆ ಹೊರಿಸಿ ಹೆಂಡತಿ ಮಕ್ಕಳನ್ನು ನಡು ನೀರಲ್ಲೇ ಬಿಟ್ಟು ಹೋದ ಅಳಲು .

ಅವಳ ಮೇಲಿನ ಅಂತಃಕರಣ ದಿಂದಾಗಿ ನಾನು ಒಂದೊಂದು ಸಲ ಅವಳ ಕೆಲಸದಲ್ಲಿ ಕೈಗೂಡಿಕೊಂಡು ದೊಡ್ಡ ದೊಡ್ಡ ಬಟ್ಟೆಗಳನ್ನೆಲ್ಲ ನಾನೇ ತೊಳೆದು ಹಾಕುತ್ತಿರುವೆ ನಾನು ತೊಳೆದ ಬಟ್ಟೆಯನ್ನು ನೋಡಿ ಪಾತಿಮಾಳ ಮೊಗದಲ್ಲಿರುವ ಸಣ್ಣನೆಯ ನಗು ನಾನು ಅವಳ ಭಾರ ಇಳಿಸುತ್ತಿರುವೆ ಎಂದು ಅನಿಸಿತು .ನನ್ನ ಮಕ್ಕಳು ಮಮ್ಮಿ ಕೆಲಸದವಳನ್ನು ಇಟ್ಕೊಂಡು ಅವಳಿಗೆ ಸಂಬಳ ಕೊಡ್ತೀಯೋ ಇಲ್ವೋ ನೀನೆ ಮಾಡಿದ್ರೆ ?ನೀನು ಮಾಡಿದ್ರ ಮತ್ಯಾಕ ಪಾತಿಮಾ ಆಂಟಿನ ಬಿಡಿಸಿ ನೀನೇ ಕೆಲಸ ಮಾಡು ಅಂದರು. ಹಾಗಲ್ಲ ಚಿನ್ನು ನನ್ನ ಅಪ್ಪ ಹೀಗೆ ಹೇಳಿದ್ದ ಅಲ್ವಾ ಎಲ್ಲಾ ಕೆಲಸ ನೀನ ಮಾಡಿದ್ರ ಬಡವರಿಗೆ ಎಲ್ಲಿಂದ ಕೆಲಸ ಸಿಗಬೇಕು? ಅದನ್ನೆಲ್ಲ ನಾವು ಮಾಡಬಾರದು ನಾನು ಒಂದು ಹೊಸ ಮಾಪ್ಲರ್ ಹೊಲಿಯುತ್ತಿದ್ದೆ ನಿನಗ ಹೊಸ ಮಾಪ್ಲರ್ ಬೇಕಾದ್ರ ನಾ ತಂದ ಕೊಡತೀನಿ 15ರೂ ಕೊಟ್ರ ಬರತ್ತೈತಿ.ಹೊಲಿ ಬ್ಯಾಡ ಕಣ್ಣ ಕಳಕೋತಿ ತಗದ ವಗಿ ಅದನ್ನ.

ನಾವು ಬದುಕಿ ಇತರರನ್ನು ಬದುಕುವಂತೆ ಮಾಡಬೇಕವಾ
ನನ್ಪಪ್ಪನ ಮಾತುಗಳು ಅಪ್ಪನ ಆದರ್ಶ ನನಗಿಂದು .
ಪಾತಿಮಾಳ ಬದುಕಿನ ಭಾರವನ್ನು ಸ್ವಲ್ಪ ಇಳಿಸುತ್ತಿರುವೆ ಎನ್ನುವ ವಿಚಾರ ನನ್ನಲ್ಲಿ .
ನಮ್ಮ ಕಾಲೇಜಿನ ಕೆಲಸ ಮುಗಿಸಿಕೊಂಡು ನಮ್ಮ ಮನೆಯ ಕೆಲಸ ಮುಗಿಸಿಕೊಂಡು ಐದು ಮಕ್ಕಳನ್ನು ನಮ್ಮ ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿಯೇ ಕಲಿಸುವ ಪಾತಿಮಾ ನಿಜಕ್ಕೂ ಧೈರ್ಯವಂತೆ ಕುಡುಕ ಗಂಡನ ಕೆಟ್ಟ ಚಟವನ್ನು ತನ್ನ ಮಕ್ಕಳ ಮೇಲೆ ಬೀಳಬಾರದು ಮಕ್ಕಳು ಚೆನ್ನಾಗಿ ಕಲಿಯಬೇಕು ನಾನು ನಿಮ್ಮಂಥವರ ಮನೆ ಕೆಲಸ ಮಾಡಿ ನಿಮ್ಮ ಗುಣ ನಮ್ಮ ಮಕ್ಕಳಿಗೂ ಬರ್ಲಿರಿ ಮೇಡಂ. ಅನ್ನುವ ಅವಳ ಮಾತು ಎಂಥವರ ಹೃದಯವನ್ನು ಕಲಕುವಂಥದ್ದು. ಮೂರು ಹೆಣ್ಣು ಮಕ್ಕಳು ಎರಡು ಗಂಡು ಮಕ್ಕಳು ಐದು ಮಕ್ಕಳನ್ನು ಸಾಕುವ ಪಾತಿಮಾಳ ಬದುಕು ಭಾರವಾಗಿಲ್ಲ.
ನಮ್ಮನ್ನೆಲ್ಲಾ ನೋಡಿ ತನ್ನ ಜೀವನದ ಅನುಭವ ಹಂಚಿಕೊಂಡು ಬದುಕುವ ಆದರ್ಶದ ತಾಯಿ ಆಗಿರುವ ಪಾತಿಮಾಳ ಬದುಕಿನ ಹಾಗೆ ಇನ್ನೆಷ್ಟು ಜೀವಗಳು ಎಲೆಮರೆಕಾಯಿ ಆಗಿಲ್ಲ. ನಾವು ಬದುಕೋಣ ಇತರರನ್ನು ಬದುಕಿಸುವ ಬಸವಾದಿ ಶಿವ ಶರಣರ ಆಶಯ ಭಾವವನ್ನು ನಮ್ಮೆಲ್ಲ ಸಮಾಜದಲ್ಲಿರುವ ಅನೇಕ ಉಳ್ಳವರು ತಾವು ಬದುಕಿ ಇತರರನ್ನು ಬದುಕಿಸುವ ಒಂದು ಸಣ್ಣ ಪ್ರಯತ್ನ ಮಾಡಿದರೆ ಯಾರಿಗೂ ಬದುಕು ಭಾರವಾಗಲಾರದು ಅಲ್ಲವೇ ?

-ಡಾ ಸಾವಿತ್ರಿ ಮ ಕಮಲಾಪೂರ
ಪ್ರಾಚಾರ್ಯರು
ಕರ್ನಾಟಕ ಪಬ್ಲಿಕ್ ಸ್ಕೂಲ್

Don`t copy text!