ನಗು

ನಗು
(ಇಂದು ವಿಶ್ವ ನಗುವಿನ ದಿನವಂತೆ… ಅದಕೆ ನನ್ನ ಈ ನಗು ಕವಿತೆಯಂತೆ..)

ನಗಬೇಕು ಇರುಳಲ್ಲಿ
ಬಾನು ಚಂದಿರನ ಮುಡಿದಂತೆ..
ನಗಬೇಕು ಹೂವರಳಿ
ಗಂಧ ಪರಿಮಳವು ಬಿರಿದಂತೆ….

ಮಲ್ಲಿಗೆಯ ಅಂಬಿನಲಿ
ಸಂಜೆ ಮೊಗ್ಗರಳಿ ಸುರಿದಂತೆ…
ಬಳ ಬಳನೆ ಕೆಳಗಿಳಿವ
ರಾಶಿ ಬಕುಳ ಪುಷ್ಪಗಳಂತೆ….

ಕೆಸರೆಲ್ಲ ಕೆಳಗಿಳಿದ
ತಿಳಿಗೊಳದ ನೀರಂತೆ .
ದೂರದಲಿ ತೇಲಿ ಬರುತಿಹ
ಸವಿ ಗಾನದಲೆಯಂತೆ….

ಕಲ್ಮಶವೇ ಇಲ್ಲದಿಹ
ಮುದ್ದು ಮಗು ಮನದಂತೆ…
ಮುಗಿಲಿಂದ ನೆಲಕಿಳಿವ
ಮಳೆ ಹನಿಯ ಎಳೆ ಎಳೆಯಂತೆ..

ಮಂಜು ಮಬ್ಬಲಿ ತೂರಿ
ತಬ್ಬಿದಾ ಹೊಂಗಿರಣದಂತೆ..
ಕಾರಿರುಳ ಹಾದಿಯಲಿ ದಾರಿ
ತೋರಿಹ ನಕ್ಷತ್ರದ ತಿಳಿ ಬೆಳಕಿನಂತೆ…

ನೋವ ಬಗ್ಗೆಯನೊಡೆದು
ನಗೆ ಕಾರಂಜಿ ಚಿಮ್ಮಿಬರಲಿ…
ಮೊಗದ ನಗುವುದು ಜಗದ
ನೋವನ್ನೇ ಮರೆಸಿಬಿಡಲಿ…

ನೋವ ಉರಿ ಬೇಗೆಗೆ ಬಳಲಿ
ನಗೆ ಮಲ್ಲಿಗೆ ಮುದುರದಿರಲಿ…
ಸೊಗದ ಮೊಗದಲಿ ನೋವಿರದ
ನಗೆಯ ಶಶಿಯುದಿಸಿ ಬರಲಿ….

ಇಂದಿರಾ ಮೋಟೆಬೆನ್ನೂರ. ಬೆಳಗಾವಿ

Don`t copy text!