ಮೂರು ದಶಕದ ದಾಂಪತ್ಯ ಮತ್ತು ಉತ್ತರದಾಯಿತ್ವ
ಒಬ್ಬ ವ್ಯಕ್ತಿಯ ಬದುಕಿನಲ್ಲಿ ಮೂರು ದಶಕದ ಪಯಣವೆಂದರೆ ಸುದೀರ್ಘವೇ ಸರಿ. ಬಾಲ್ಯ ಮುಗಿಸಿ ಯೌವನಕೆ ಕಾಲಿಟ್ಟ ಕೂಡಲೇ ಬರೀ ಕನಸುಗಳು, ಆ ಕನಸುಗಳಲಿ ಪ್ರೇಮದ ಒಳಗಡಗಿರುವ ಕಾಮವೂ ಹೌದು. ಆದರೆ ಪ್ರೀತಿ, ಪ್ರೇಮ ಮತ್ತು ಕಾಮ ಅಸ್ಪಷ್ಟವಾಗಿ ಇರುವಾಗಲೇ ಯೌವನ ಮುಗಿದು ಹೋಗುತ್ತದೆ. ಗಂಡ ಪೊಸೆಸ್ಸಿವ್ ಆಗಿ ಹೆಂಡತಿಯನ್ನು ಕಾಡುವ ಹೊತ್ತಿನಲ್ಲಿ ಮಕ್ಕಳು ಪ್ರವೇಶ ಮಾಡಿ, ಅಮಲು ಇಳಿದು ಹೋಗುತ್ತದೆ.
ಒಂದು ದಶಕ ಮುಗಿಯುವುದರೊಳಗೆ ಹೆಂಡತಿ ಡಾಮಿನೇಟ್ ಆಗಿ ಆಕೆ ಪೊಸೆಸ್ಸಿವ್ ಆದಂತೆ ವರ್ತಿಸುತ್ತಾಳೆ. ಮಕ್ಕಳ ಶಿಕ್ಷಣ, ಆರೋಗ್ಯ, ಈ ಮಧ್ಯೆ ಸ್ವಂತಕ್ಕೊಂದು ಮನೆ ಎನ್ನುವದರೊಳಗೆ ಎರಡನೇ ದಶಕವೂ ಮುಗಿದು ಹೋಗಿರುತ್ತದೆ. ತಿಂಗಳ ಕಂತುಗಳು, ಆರ್ಥಿಕ ಒತ್ತಡ, ವೈಯಕ್ತಿಕವಾಗಿ ಏನೋ ಸಾಧಿಸಬೇಕು ಎಂಬ ಗೊಂದಲದಲ್ಲಿ ಬದುಕೇ ಮುಗಿಯುವ ಹಂತ ತಲುಪಿ, ಅಷ್ಟೊತ್ತಿಗೆ ಮಕ್ಕಳ ಮದುವೆಯ ದೃಶ್ಯಗಳು ಕಾಡಲಾರಂಭಿಸುತ್ತವೆ.
ಆ ಕಾಲದಲ್ಲಿ ಗಂಡು ಹುಟ್ಟುವ ತನಕ ಮಕ್ಕಳ ಪ್ರಯತ್ನ ಸಾಗಿರುತ್ತಲೇ ಇತ್ತು. ಈಗ ಕಾಲ ಬದಲಾಗಿದೆ. ಎರಡು ಮಕ್ಕಳಿಗೆ ಪೂರ್ಣ ವಿರಾಮ.
ವೃತ್ತಿ ಮತ್ತು ಪ್ರವೃತ್ತಿಯ ಕಾರಣದಿಂದ ನಾನು ಸದಾಕಾಲವೂ ಲೋಕ ಸಂಚಾರಿ. ಮದುವೆಯಾದ ಒಂದು ವಾರದಲ್ಲಿ ಇಲಕಲ್ ಮಠದ ಪರಮಪೂಜ್ಯ ಶ್ರೀ ಮಹಾಂತ ಅಪ್ಪಗಳು ಬಾಗಲಕೋಟೆ ಬಳಿ ಆಯೋಜಿಸಿದ್ದ ಶಿವಾನುಭವ ತರಬೇತಿ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯ ಪಾತ್ರ ನಿರ್ವಹಣೆಗೆ ಹೆಂಡತಿ ಸಮೇತ ಹೋದೆ. ಹೀಗಾಗಿ ಹನಿಮೂನ್ ಭಾವ ಆವರಿಸಲಿಲ್ಲ. ಖಾಸಗಿ ನೌಕರಿಯ ಖಾಯಂಗೊಳಿಸಲು ನಾಲ್ಕು ವರ್ಷ ಬೆಂಗಳೂರು ದಂಡಯಾತ್ರೆ ಬೇರೆ.
ಬದುಕಿನಲ್ಲಿ ದಾಂಪತ್ಯದ ಅರಿವು ಅರಳುವುದರೊಳಗೆ ಬದುಕು ಮುಗಿದೇ ಹೋಗಿ ಬರೀ ಅನಿವಾರ್ಯ ಹೊಂದಾಣಿಕೆ ಉಳಿದಿರುತ್ತದೆ. ಯಾರಿಗೆ ಯಾರು ಹೊಂದಿಕೊಂಡರು ಎಂಬುದು ಯಾರಿಗೂ ಅರ್ಥವಾಗುವುದೇ ಇಲ್ಲ.
ಹಾಗೆ ಪ್ರಾಮಾಣಿಕವಾಗಿ ನೋಡಿದರೆ ಹೆಂಡತಿ ಭಯಂಕರ ಹೊಂದಿಕೊಂಡಿರುತ್ತಾಳೆ, ಹಾಗೆ ಹೊಂದಿಕೊಳ್ಳದೇ ಹಟ ಮಾಡುವ ಸಂಸಾರದ ಅವಾಂತರಗಳನ್ನು ಕಂಡಿದ್ದೇನೆ. ಕೆಲವರು ವಿನಾಕಾರಣ ಭಯಂಕರ ಹೊಂದಿಕೊಂಡ ನಾಟಕವಾಡುತ್ತಾರೆ.
ಸಾರ್ವಜನಿಕ ಜೀವನದ ಪ್ರಚಾರದ ಪ್ರಭಾವ ಬೇರೆ ಕಾಡುತ್ತ ನಮ್ಮ ವೈಯಕ್ತಿಕ ಬದುಕನ್ನು ಕಸಿದುಕೊಂಡು, ಮನೆ, ಮನೆಯೊಡತಿ ಮತ್ತು ಮಕ್ಕಳಿಗೆ ಸಮಯ ಕೊಡಲಿಲ್ಲ ಎಂಬ ಅಳುಕು ಬೇರೆ, ಇದನ್ನು ತೀರಾ ಎಮೋಶನಲ್ ಆಗಿ ತೆಗೆದುಕೊಂಡರೆ ವಿನಾಕಾರಣ ಪಾಪ ಪ್ರಜ್ಞೆ ಒಕ್ಕರಿಸುತ್ತದೆ. ಆದರೆ ಬದುಕು ಹಾಗೆ ಇರುವುದಿಲ್ಲ ಹೊಂದಾಣಿಕೆ ಜೊತೆ ಜೊತೆಗೆ ಆಂತರಿಕ ಅಹಮಿಕೆ ಮತ್ತು ಒದ್ದಾಟವೂ ಇರುತ್ತದೆ.
ಇತ್ತೀಚೆಗೆ ನಮ್ಮ ಕುಟುಂಬದ ಹಿರಿಯ ಹಿತೈಷಿಗಳಾದ ಡಾ.ಜಿ.ಬಿ.ಪಾಟೀಲ ಮಾತಿನ ಮಧ್ಯೆ ಕೇಳಿದರು, ‘ನೀವು ಅಕಸ್ಮಾತ್ ಕ್ಷಮೆ ಕೇಳುವ ಪ್ರಸಂಗ ಬಂದರೆ ನಿಮ್ಮ ಹೆಂಡತಿಗೆ ಕೇಳಬೇಕಲ್ಲ, ಓಡಾಟದ ಭರದಲ್ಲಿ ಮನೆಗೆ ಸಮಯ ಕೊಟ್ಟಿಲ್ಲ ಎಂಬ ಕಾರಣದಿಂದ’ ಎಂದಾಗ ಇರಬಹುದು ಎಂದು ನಕ್ಕೆ.
ವಿನಯ ಮತ್ತು ಅಹಮಿಕೆಯ ಮೀರಿ ದಾಂಪತ್ಯ ಇರಬೇಕು ಆದರೆ ಹಾಗಾಗುವುದಿಲ್ಲ, ವೈಯಕ್ತಿಕವಾಗಿ ಹೇಳುವುದಾದರೆ ನನ್ನ ಕೆಲವು ಮಿತಿಗಳನ್ನು ರಕ್ಷಿಸುವ ಭರದಲ್ಲಿ ಮನೆಗೆ ಸರಂಡರ್ ಆಗಲೇಬೇಕು ಎನಿಸಿತು, ಆದೆ ಕೂಡ!,ಒಂದಿಷ್ಟು ಅಳುಕಿನಿಂದ.
ನಮ್ಮ ಮಿತಿ ಮತ್ತು ಸಾಮರ್ಥ್ಯ ಸರಿಯಾಗಿ ಗೊತ್ತಿದ್ದರೆ, ಅಕ್ಕನ ವಚನದ ಸಾಲಿನಂತೆ ‘ನಿಜವನರಿತು ನಿಶ್ಚಿಂತನಾಗಿರಬೇಕು’ ಆದರೆ ಹಿಪೋಕ್ರಸಿ ಇಲ್ಲದೆ ಬದುಕುವ ಪ್ರಯತ್ನ ವೈಯಕ್ತಿಕ ಬದುಕಿನಲ್ಲಿ ಕೂಡ ಅಷ್ಟು ಸುಲಭವಲ್ಲ. ಆದರೂ ನಮ್ಮ ತಪ್ಪು ಗೊತ್ತಿದ್ದರೂ ಸಮರ್ಥಿಸುವ ಹುಂಬತನ ಇದ್ದೇ ಇರುತ್ತದೆ. ಸಾರ್ವಜನಿಕ ಜೀವನದ ಅನೇಕ ಸೋಗಲಾಡಿತನದಂತೆ ವೈಯಕ್ತಿಕ ಬದುಕು ಅದೇ ಹಾದಿ ಹಿಡಿಯುತ್ತದೆ. ತುಂಬಾ ಕಾನ್ಷಿಯಸ್ ಆಗಿ ಕ್ಷಮೆ ಕೇಳಿ ಪಾರಾಗುತ್ತೇವೆ ಅಷ್ಟೇ!
ಸುಖ, ದುಃಖದ ಸಮತೋಲನದ ಪಯಣದಲಿ ನೋವೇ ಹೆಚ್ಚು, ಅದಕ್ಕೆ ಕಾರಣ ‘ಹಾಸಿಗೆ ಇದ್ದಷ್ಟು ಕಾಲು ಚಾಚದ ನನ್ನ ಗುಣ ಸ್ವಭಾವ’ ಆದರೆ ಇದರ ಬಗ್ಗೆ ನನಗೆ ಅಷ್ಟೇನೂ ಬೇಸರವಾಗಲಿ, ಪಶ್ಚಾತ್ತಾಪವಾಗಲಿ ಇಲ್ಲ ಎಂಬುದೇ ಸಮಾಧಾನಕರ.
‘ಮದುವೆಯ ಕುರಿತು ನನಗೆ ಇರುವ, ಒಂದಿಷ್ಟು ವೈಯಕ್ತಿಕ ಮತ್ತು ಸಾರ್ವತ್ರಿಕ ವಿಷಯಗಳ ಗೊಂದಲವೇ ಈ ಬರಹ.’
‘ಬದುಕಿನಲ್ಲಿ ತುಂಬಾ ಪ್ಲ್ಯಾನ್ ಮಾಡಿದರೆ ಅನುಭವಿಸುವುದು ಕಷ್ಟ. ವಿಪರೀತ ನಿಯಮಗಳನ್ನು ಹೇರಿಕೊಂಡರೆ ಎಲ್ಲವೂ ನೀರಸ. ಬಂದದ್ದ ಸ್ವೀಕರಿಸಿ, ಸಹಜವಾಗಿ ಸಾಗಬೇಕು’ ಎಂದು ನಂಬಿದವ ನಾನು.
‘ಶರಣಾರ್ಥಿ’ ಸಂಸ್ಕೃತಿಗನುಗುಣವಾಗಿ ಕಾಯಕ-ದಾಸೋಹ-ಅನುಭಾವದ ನೆಲೆಯಲ್ಲಿ ದಾಸೋಹ ಸಾಂಗವಾಗಲು ಕಾರಣವಾಗಿ,ಅದೇ ಸಂಸ್ಕಾರವನ್ನು ಮಕ್ಕಳಾದ ಮುನ್ನುಡಿ ಹಾಗೂ ಅಭಿವ್ಯಕ್ತಿಯ ತಲೆಯಲ್ಲಿ ಧಾರೆಯೆರೆದು, ನನ್ನ ಮೈಗಳ್ಳತನ,ಸ್ವಾರ್ಥ, ಭಯಂಕರ ತಿರುಗಾಟ, ವ್ಯಕ್ತಿ ಕೇಂದ್ರಿತ ಕೆಲಸಗಳು, ತಿಕ್ಕಲು ಸೃಜನಶೀಲತೆ, ಆರ್ಥಿಕ ಅಶಿಸ್ತನ್ನು ಸಹಿಸಿಕೊಂಡು ಮೂರು ದಶಕಗಳ ಕಾಲ ನನ್ನೊಂದಿಗೆ ಸಾಗಿರುವ ಶ್ರೀಮತಿ ರೇಖಾಗೆ ಕಲ್ಯಾಣ ಮಹೋತ್ಸವದ ಶುಭಾಶಯಗಳು. ಮನದುಂಬಿ ಹಾರೈಸಿದ ತಮಗೆಲ್ಲ ಶರಣು ಶರಣಾರ್ಥಿ.
– ಸಿದ್ದು ಯಾಪಲಪರವಿ, ಕಾರಟಗಿ.
9448358040