ಅಂತರಂಗದ ಅರಿವು:14
ತನ್ನ ಗುಣವ ಹೊಗಳಬೇಡ
ತನ್ನ ಗುಣವ ಹೊಗಳಬೇಡ
ಇದಿರ ಗುಣವ ಹಳಿಯಬೇಡ
ಕೆಮ್ಮನೊಬ್ಬರ ನುಡಿಯಬೇಡ
ನುಡಿದು ನುಂಪಿತನಾಗಬೇಡ
ಇದಿರ ಮುನಿಯಿಸಬೇಡ
ತಾ ಮುನಿಯಬೇಡ
ತಾನು ಬದುಕವೈಸುದಿನ
ಸಮತೆ ಸಮಾಧಾನ ತುಂಬಿ
ತುಳುಕದಿರಬೇಕು
ಮಹಾಲಿಂಗ ಕಲ್ಲೇಶ್ವರದೇವರ
ನಿಚ್ಚಳ ನಿಜವರಿದಡೆ
ಬಚ್ಚಬರಿಯ ಸಹಜ ಸಮಾಧಾನವಳವಟ್ಟಿರಬೇಕು*
-ಹಾವಿನಾಳ ಕಲ್ಲಯ್ಯ
ಲೋಕದಲ್ಲಿ ಸಮಾಧಾನಿಯಾಗಿ ಬದುಕುವುದು ಒಂದು ಸಾಧನೆ.
ಅದು ಎಲ್ಲರಿಗೂ ಸಾಧ್ಯವಿಲ್ಲ.
ಅಸಾಧ್ಯವಾದುದನ್ನು ಸಾಧ್ಯ ಮಾಡಿಕೊಳ್ಳಬೇಕಾದರೆ, ಶರಣು ಪಥವನ್ನು ಹಿಡಿಯಬೇಕು.
ಇತರರೊಂದಿಗೆ ಹೇಗೆ ವರ್ತಿಸಬೇಕು ಎನ್ನುವುದನ್ನು ತಿಳಿಯಬೇಕು.
ಅದಕ್ಕೆ ಶರಣು ಹಾವಿನಾಳ ಕಲ್ಲಯ್ಯನವರು
ಸರಳ ಸೂತ್ರಗಳನ್ನು ಈ ವಚನದಲ್ಲಿ ತಿಳಿಸಿದ್ದಾರೆ .
ತನ್ನ ಗುಣವ ಹೊಗಳಬೇಡ
ತನ್ನಲ್ಲಿರುವ ಒಳ್ಳೆಯ ಗುಣಗಳನ್ನ, ತನ್ನ ನಡೆನುಡಿಗಳನ್ನು ಬೇರೆಯವರು ಗುರುತಿಸಿ ಪ್ರಶಂಸಿಸಿದರೆ ಸರಿ.
ಅದರ ಬದಲಾಗಿ ನಮ್ಮನ್ನ ನಾವೆ ಹೊಗಳಿದರೆ
ಅದು ಅಹಂಕಾರ ವಾಗುತ್ತದೆ.
ಇದಿರ ಗುಣವ ಹಳಿಯಬೇಡ
ನಮ್ಮ ಎದುರಿಗಿರುವ ವ್ಯಕ್ತಿಯ ಗುಣಗಳನ್ನು ಹಿಯಾಳಿಸಿ ಅವಮಾನಿಸಬಾರದು.
ಕೆಮ್ಮನೊಬ್ಬರ ನುಡಿಯಬೇಡ
ಸುಮ್ಮನೆ ಇನ್ನೊಬ್ಬರ ಬಗ್ಗೆ ಟೀಕೆ ಮಾಡುವುದು.ಆಡಿಕೊಳ್ಳುವುದು.
ಕಥೆ ಕಟ್ಟುವುದು ಮಾಡಬಾರದು
ನುಡಿದು ನುಂಪಿತನಾಗಬೇಡ
ಯಾರಿಗಾದರೂ ವಚನ ಕೊಟ್ಟು ನಂತರ ಜಾರಿಕೊಳ್ಳಬಾರದು. ಮೊದಲು ನುಡಿದು ನಂತರ ನಾನು ಆ ಮಾತನ್ನು ಆಡಿಯೇ ಇಲ್ಲ ಎಂದು ನುಣಿಚಿಕೊಳ್ಳಬಾರದು. ನುಡಿದಂತೆ ನಡೆಯಬೇಕು.
ಇದಿರ ಮುನಿಯಿಸಬೇಡ
ಬೇರೆಯವರಿಗೆ ನಮ್ಮ ಮಾತಿನಿಂದ ಅಥವಾ ಕೃತಿಯಿಂದ ಸಿಟ್ಟು ಬರುವ ಹಾಗೆ ವರ್ತಿಸಬಾರದು.
ತಾ ಮುನಿಯಬೇಡ
ತಾನು ಕೂಡ ಇನ್ನೊಬ್ಬರ ಜೊತೆಗೆ ಕೋಪ ಮಾಡಿಕೊಳ್ಳಬಾರದು.
ಕೋಪ ಇಬ್ಬರು ವ್ಯಕ್ತಿಗಳ ಮನಸ್ಥಿತಿಯನ್ನು ಹಾಳುಮಾಡುತ್ತದೆ ಸಂತೋಷವನ್ನು ಕೆಡಿಸುತ್ತದೆ. ಆವೇಶವನ್ನು ಉಂಟುಮಾಡುತ್ತದೆ ಆವೇಶದಲ್ಲಿ ತೊಂದರೆಗಳು, ಅನಾಹುತಗಳು ಆಗುವ ಸಾಧ್ಯತೆ ಗಳಿರುತ್ತವೆ ಅದಕ್ಕೆ ಅವಕಾಶ ಮಾಡಿಕೊಡಬಾರದೆಂದರೆ ಅನವಶ್ಯಕವಾಗಿ ಇತರರ ಮೇಲೆಯೂ ಕೋಪ ಮಾಡಿಕೊಳ್ಳಬಾರದು
ತಾನು ಬದುಕವೈಸುದಿನ
ಸಮತೆ ಸಮಾಧಾನ ತುಂಬಿ
ತುಳುಕದಿರಬೇಕು
ನಾವು ಬದುಕುವಷ್ಟು ದಿನವೂ ಎಲ್ಲರನ್ನು ಒಂದೇ ದೃಷ್ಟಿಯಲ್ಲಿ ಕಾಣಬೇಕು ಕೋಪ ತಾಪಗಳಂತಹ ಭಾವಗಳಿಂದ ಮುಕ್ತವಾಗಿರಬೇಕು. ಮನದಲ್ಲಿ ಸಮಾಧಾನ ತುಂಬಿರಬೇಕು. ಕೋಪ. ಅಸಹನೆ, ದ್ವೇಷ ಭಾವಗಳು ತುಳಕಬಾರದು ಅಂದರೆ ಹೊರಗೆ ಬರಬಾರದು.
ಮಹಾಲಿಂಗ ಕಲ್ಲೇಶ್ವರದೇವರ
ನಿಚ್ಚಳ ನಿಜವರಿದಡೆ
ಬಚ್ಚಬರಿಯ ಸಹಜ
ಸಮಾಧಾನವಳವಟ್ಟಿರಬೇಕು
ಇದುವೇ ವ್ಯಕ್ತಿಯೊಬ್ಬ ಬದುಕಿನಲ್ಲಿ ಮಾಡಬೇಕಾದ ಪಾರದರ್ಶಕವಾದ ಸತ್ಯ ಕಾರ್ಯಗಳು. ವ್ಯಕ್ತಿ ಸಮಾಜದಲ್ಲಿ ಪಾರದರ್ಶಕತೆಯಿಂದ ನಡೆದುಕೊಂಡಿದ್ದೆ ಆದರೆ
ಅವನು ಸಮಾಧಾನವಾಗಿರುತ್ತಾನೆ. ಸಮಾಧಾನಿಯಾದವನ ಮನಸ್ಸಿನಲ್ಲಿ ಮಹಾಲಿಂಗಶ್ವರ ಕಲ್ಲೇಶ್ವರ ದೇವರು ಕಾಣುತ್ತಾನೆ. ದೇವರನ್ನ ಹುಡುಕುವ ಅವಶ್ಯಕತೆ ಇಲ್ಲ. ಎಂದು ಹಾವಿನಾಳ ಕಲ್ಲಯ್ಯನವರು ಹೇಳಿದ್ದಾರೆ
-ಡಾ. ನಿರ್ಮಲ ಬಟ್ಟಲ