ಮೃಡ ಭಕ್ತರ ನುಡಿಗಡಣವೆ ಕಡೆಗೀಲು..

ಅಂತರಂಗದ ಅರಿವು:೧೫

ಮೃಡ ಭಕ್ತರ ನುಡಿಗಡಣವೆ ಕಡೆಗೀಲು..

ಕಡೆಗೀಲಿಲ್ಲದ ಬಂಡಿ ಹೊಡೆಗೆಡೆಯದೆ ಮಾಣ್ಬುದೆ
ಕಡೆಗೀಲು ಬಂಡಿಗಾಧಾರ
ಈ ಕಡುದರ್ಪವೇರಿದ ಒಡಲೆಂಬ ಬಂಡಿಗೆ
ಮೃಢಭಕ್ತರ ನುಡಿಗಡಣವೆ ಕಡೆಗೀಲು ಕಾಣಾ! ರಾಮನಾಥ.
              ಜೇಡರ ದಾಸಿಮಯ*

ಕಡೆಗೀಲಿಲ್ಲದ ಬಂಡಿ ಹೊಡೆಗೆಡೆಯದೆ ಮಾಣ್ಬುದೆ
ಕಡೆಗೀಲು ಬಂಡಿಗಾಧಾರ
ಬಂಡೆಯೊಂದು ಸುರಕ್ಷಿತವಾಗಿ ಸವಾರಿ ಮಾಡಬೇಕಾದರೆ ಬಂಡಿಯ ಚಕ್ರಗಳನ್ನ ಹಿಡಿದಿಟ್ಟಿರುವ ಕೀಲು ಬಹಳ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ ಒಂದು ವೇಳೆ ಕೀಲು ಕಳಿಚಿ ಬಿಟ್ಟರೆ ಬಂಡಿಯ ಗಾಲಿಗಳು ಹುರುಳಿ ಹೋಗುತ್ತವೆ.ಅಪಘಾತ ಉಂಟಾಗುತ್ತದೆ. ಹಾಗಾಗಿ ಬಂಡಿಗೆ ಚಕ್ರಗಳಷ್ಟೆ ಕಡೆಗೀಲು ಆಧಾರ. ಅಂದರೆ ಗಾತ್ರದಲ್ಲಿ ಚಿಕ್ಕದಾದರೂ ಕೂಡ ಹಿರಿದಾದ ಪಾತ್ರವನ್ನು ಬಂಡಿಯ ಕಡೆಗೀಲು ನಿರ್ವಹಿಸುತ್ತದೆ. ಬಂಡಿ, ಬಂಡಿಯ ಚಕ್ರಗಳು ಬಂಡಿಯಲ್ಲಿ ಸವಾರಿ ಮಾಡುವವನು ಗುರಿ ಎಲ್ಲವೂ ಕಡೆಗೀಲಿನ ಮೇಲೆ ನಿರ್ಧಾರವಾಗುತ್ತದೆ.

ಈ ಕಡುದರ್ಪವೇರಿದ ಒಡಲೆಂಬ ಬಂಡಿಗೆ
ಮೃಢಭಕ್ತರ ನುಡಿಗಡಣವೆ ಕಡೆಗೀಲು ಕಾಣಾ! ರಾಮನಾಥ.
ಮನುಷ್ಯನ ದೇಹವು ಕೂಡ ಒಂದು ಬಂಡಿ ಇದ್ದ ಹಾಗೆ. ಆ ಬಂಡಿ ಕಡೂ ದರ್ಪದಿಂದ ಅಂದರೆ ಮನುಷ್ಯ ಗರ್ವದಿಂದ ವರ್ತಿಸಿದರೆ ಅವನನ್ನು ನಿಯಂತ್ರಿಸುವ ಕಡುಗೀಲು ಶರಣರ ವಚನಗಳಲ್ಲಿದೆ. ಮದವೇರಿದ ಆನೆ ಅಂಕುಶಕ್ಕೆ ಹೆದರುವಂತೆ ಮದವೇರಿ ಗರ್ವದಿಂದ ವರ್ತಿಸುವ ವ್ಯಕ್ತಿಯ ಗರ್ವವನ್ನು ಇಳಿಸಲು ಶರಣರ ನುಡಿಗಟ್ಟುಗಳು ಸಹಾಯ ಮಾಡುತ್ತವೆ. ಅನುಭಾವದಿಂದ ಬಂದ ನುಡಿಗಟ್ಟುಗಳು ಅರಿವಿನ ದೀವಿಗೆಗಳು.ಅವು ದರ್ಪವನ್ನು ಮುರಿಯುತ್ತವೆ. ಕೇಳಿದವನ ಮನಸ್ಸಿನ ಮೇಲೆ ಪರಿಣಾಮವನ್ನು ಬೀರಿ ಪರಿವರ್ತನೆ ಉಂಟುಮಾಡುತ್ತವೆ . ಶರಣರ ನುಡಿಗಳನ್ನು ಕೇಳುವುದರಿಂದ ವ್ಯಕ್ತಿತ್ವದ ದೋಷಗಳ ನಿವಾರಣೆಯಾಗುವುದು ಎನ್ನುವ ಸಂದೇಶವನ್ನು ಈ ವಚನದಲ್ಲಿ ಜೇಡರ ದಾಸಿಮಯ್ಯ ಅತ್ಯಂತ ಸುಂದರವಾಗಿ ದೇಹಕ್ಕೂ ಬಂಡಿಯ ಕಡೆಗೀಲಿಗೂ ಹೋಲಿಸಿದ್ದಾರೆ.

-ಡಾ.ನಿರ್ಮಲಾ ಬಟ್ಟಲ

Don`t copy text!