ಕಾಗೆ ಒಂದಗುಳ ಕಂಡಡೆ ಕರೆಯದೆ ತನ್ನ ಬಳಗವನು

ಅಂಕಣ:ಅಂತರಂಗದ ಅರಿವು ೧೬

 

ಕಾಗೆ ಒಂದಗುಳ ಕಂಡಡೆ ಕರೆಯದೆ ತನ್ನ ಬಳಗವನು
ಕೋಳಿ ಒಂದು ಕುಟುಕ ಕಂಡಡೆ ಕೂಗಿ ಕರೆಯದೆ ತನ್ನ ಕುಲವನೆಲ್ಲವ
ಶಿವಭಕ್ತನಾಗಿ ಭಕ್ತಿಪಕ್ಷವಿಲ್ಲದಿದ್ದಡೆ ಕಾಗೆ ಕೋಳಿಗಿಂತ ಕರಕಷ್ಟ ಕೂಡಲಸಂಗಮದೇವಾ
‌                                        -ಬಸವಣ್ಣನವರು

ಸಮಾಜ ಜೀವಿಯಾಗಿ ಬದುಕುವ ಮಾನವನು, ಸಮಾಜದಲ್ಲಿ ಇದ್ದುಕೊಂಡು ತನ್ನದೇ ಆದಂತಹ ಕೆಲವು ಕರ್ತವ್ಯಗಳನ್ನ ನಿಭಾಯಿಸಬೇಕು. ಕಾಯಕ ಮತ್ತು ದಾಸೋಹವೇ ಶರಣ‌ ಸಿದ್ದಾಂತದ ಮೂಲ. ಸಾಮಾಜಿಕ ಸಮಾನತೆಯನ್ನ ತರಬೇಕಾದರೆ
ಸಂಪತ್ತಿನ ಕ್ರೂಢೀಕರಣವನ್ನು ಶರಣರು ವಿರೋಧಿಸಿದರು. ಪ್ರಾಯೋಗಿಕವಾಗಿ ಹಂಚಿಕೊಂಡು ತಿನ್ನುಮ ಸಾಮಾಜಿಕ ಮೌಲ್ಯವನ್ನು ದಾಸೋಹ ತತ್ವದ ಮೂಲಕ ಬೆಳೆಸಿದರು.
ಶಿವಭಕ್ತನಾದವನು, ಶರಣನಾದವನು ಸರಳ ಸಾಮಾಜಿಕ ಮೌಲ್ಯಗಳನ್ನ ತನ್ನ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎನ್ನುವ ಸಂದೇಶ ಈ ವಚನದಲ್ಲಿದೆ ಬಸವಣ್ಣನವರು ಪರಿಸರದಲ್ಲಿರುವ ಪಕ್ಷಿಗಳ ವರ್ತನೆಯನ್ನು ಅವಲೋಕಿಸಿ ಅವುಗಳಿಂದಲೂ ಕೂಡ ನಾವು ಮೌಲ್ಯಗಳನ್ನು ಕಲಿಯುವುದಿದೆ ಎನ್ನುವುದನ್ನು ಹೇಳುತ್ತಾರೆ.

ಕಾಗೆ ಒಂದಗುಳ ಕಂಡಡೆ ಕರೆಯದೆ ತನ್ನ ಬಳಗವನು
ಕಾಗೆ ಆಹಾರ ಪದಾರ್ಥವನ್ನು ಕಂಡರೆ ತಾನೊಂದೇ ತಿನ್ನುವುದಿಲ್ಲ. ತನ್ನ ಕರ್ಕಶ ಧ್ವನಿಯಲ್ಲಿ ಇತರ ಕಾಗೆಗಳನ್ನು ಕರೆಯುತ್ತದೆ ಆ ಧ್ವನಿಗೆ ಪ್ರತಿಕ್ರಿಯೆಯಾಗಿ ಅದರ ಜೊತೆಗಾರರು ಬಂದು ಆ ಪದಾರ್ಥವನ್ನು ತಿನ್ನಲು ಸೇರುತ್ತಾರೆ.
ಕಾಗೆ ಆಹಾರ ಕಂಡಾಗ ಅದು ತನಗೆ ಮಾತ್ರ ಇರಲಿ ಎಂದು ಯೋಚಿಸುವುದೇ ಇಲ್ಲ. ಕಾಗೆಯಿಂದ ನಾವು ಕಲಿತುಕೊಳ್ಳಬೇಕಾದ ನೀತಿ ಎಂದರೆ ಹಂಚಿಕೊಂಡು ತಿನ್ನಬೇಕು. ಆದರೆ ಮನುಷ್ಯರಾದ ನಾವು ಎಲ್ಲವೂ ನಮಗೆ ಇರಲಿ ಎನ್ನುವ ಸ್ವಾರ್ಥ ಇರುತ್ತದೆ. ಇನ್ನೊಬ್ಬರಿಗೆ ಹಂಚಿಕೊಳ್ಳುವ ದೊಡ್ಡ ಮನಸ್ಸು ನಮಗಿರುವುದಿಲ್ಲ ಹಂಚಿಕೊಂಡರು ನಾವು ತೃಪ್ತರಾದ ಮೇಲೆ ಉಳಿದದ್ದನ್ನು ಹಂಚಿಕೊಳ್ಳಲು ಬಯಸುತ್ತೇವೆ. ವಿನಃ ಸಿಕ್ಕಿದುದರಲ್ಲಿ ಪ್ರಥಮವಾಗಿ ಹಂಚಿಕೊಳ್ಳಲು ಇಷ್ಟಪಡುವುದಿಲ್ಲ.

ಕೋಳಿ ಒಂದು ಕುಟುಕ ಕಂಡಡೆ ಕೂಗಿ ಕರೆಯದೆ ತನ್ನ ಕುಲವನೆಲ್ಲವ
ಕೋಳಿಯೂ ಕೂಡ ಆಹಾರ ಪದಾರ್ಥವನ್ನು ಕಂಡರೆ ಅದು ತಾನೊಂದೇ ತಿನ್ನದೇ ತನ್ನ ಇತರ ಕೋಳಿಗಳ ಜೊತೆಗೆ ಅಥವಾ ತನ್ನ ಮರಿಗಳೊಂದಿಗೆ ಆಹಾರವನ್ನು ತಿನ್ನುತ್ತದೆ. ದೇವರು ಅದಕ್ಕೂ ಕೂಡ ಹಂಚಿಕೊಂಡು ತಿನ್ನುವ ಬುದ್ಧಿಯನ್ನು ಕೊಟ್ಟಿದ್ದಾನೆ.

ಶಿವಭಕ್ತನಾಗಿ ಭಕ್ತಿಪಕ್ಷವಿಲ್ಲದಿದ್ದಡೆ ಕಾಗೆ ಕೋಳಿಗಿಂತಲು ಕರಕಷ್ಟ ಕೂಡಲಸಂಗಮದೇವಾ
ಶಿವಭಕ್ತನಾದವನು ಕೂಡ ಭಕ್ತಿ ಪಕ್ಷವನ್ನು ವಹಿಸಿ ಇತರರ ಜೊತೆಗೆ ಹಂಚಿಕೊಂಡು ತಿನ್ನುವ, ಮೇಲು ಕೀಳು ಎಂಬ ಭಾವನೆಯನ್ನು ತೊರೆದು ಹೊಂದಿಕೊಂಡು ಬಾಳುವ ತತ್ವವನ್ನು ಅನುಸರಿಸಬೇಕು. ಸಾಮಾನ್ಯ ಮನುಷ್ಯನಿಗಿಂತ, ಶಿವಭಕ್ತನಾದವನು ಭಿನ್ನವಾಗಿದ್ದಾನೆ. ಸಾಮಾನ್ಯ ಮನುಷ್ಯನಲ್ಲಿ ಈ ಗುಣವನ್ನ ನಾವು ನಿರೀಕ್ಷೆ ಮಾಡದೇ ಹೋದರು ಕೂಡ ಶಿವಭಕ್ತನಾದವನು ಶರಣದೀಕ್ಷೆ ಪಡೆದವನು ಮಾತ್ರ ಹಂಚಿಕೊಂಡು ತಿನ್ನಬೇಕು ಅಂದರೆ ದಾಸೋಹ ಮಾಡಬೇಕು ಹೊಂದಿಕೊಂಡು ಬಾಳಬೇಕು ಇಲ್ಲವಾದರೆ ಕಾಗೆ ಕೋಳಿಗಳಿಗಿಂತ ಕನಿಷ್ಠವಾದವರು ನಾವು. ಅವುಗಳಿಗಿರುವ ಹಂಚಿಕೊಂಡು ತಿನ್ನುವ ಬುದ್ಧಿ ನಮಗಿಲ್ಲ ಎಂದರೆ ಶಿವನು ಕೂಡ ಮೆಚ್ಚಲಾರ. ನಾವು ಭಕ್ತರೆನಿಸಿಕೊಂಡರೂ ಕೂಡ ವ್ಯರ್ಥ. ಸಮಾಜದಲ್ಲಿ ಬದುಕಬೇಕಾದಾಗ ಸಹಕಾರ ಮನೋಭಾವನೆಯನ್ನು ಹೊಂದಿರಬೇಕು ಇದೆ ನಾಗರಿಕ ಸಮಾಜದ ಮೂಲ ಗುಣ ಸಹಕಾರವಿಲ್ಲದೆ ಇದ್ದರೆ ನಾವು ಅನಾಗರಿಕರೇ ಸರಿ ಎನ್ನುವ ಸಂದೇಶವನ್ನು ಈ ವಚನ ಸಾರುತ್ತದೆ

ಡಾ. ನಿರ್ಮಲ ಬಟ್ಟಲ

Don`t copy text!