ಅಂತರಂಗದ ಅರಿವು ೧೭-ವಿಶೇಷ ಲೇಖನ
ಆಸೆ, ಆಮಿಷ, ತಾಮಸ, ಹುಸಿ, ವಿಷಯ, ಕುಟಿಲ, ಕುಹಕ, ಕ್ರೋಧ, ಕ್ಷುದ್ರ, ಮಿಥ್ಯೆ- ಇವನೆನ್ನ ನಾಲಗೆಯ ಮೇಲಿಂದತ್ತ ತೆಗೆದು ಕಳೆಯಯ್ಯಾ. ಅದೇಕೆಂದಡೆ, ನಿನ್ನತ್ತಲೆನ್ನ ಬರಲೀಯವು ಇದು ಕಾರಣ ಇವೆಲ್ಲವ ಕಳೆದು ಎನ್ನ ಪಂಚೈವರ, ಭಕ್ತರ ಮಾಡು ಕೂಡಲಸಂಗಮದೇವಾ
ಬಸವಣ್ಣನವರ ಈ ವಚನ ಆತ್ಮ ವಿಮರ್ಶೆಯ ವಚನವಾಗಿದೆ. ಸನ್ಮಾರ್ಗದಲ್ಲಿ ನಡೆಯಬೇಕಾದರೆ ದಾರಿಗೆ ಬರುವ ಅಡ್ಡಿ ಆತಂಕಗಳನ್ನು ತೊಡೆದು ಹಾಕಬೇಕು. ಅಂತಹ ಅಡ್ಡಿ ಆತಂಕಗಳನ್ನು ಬಸವಣ್ಣನವರು ಪಟ್ಟಿ ಮಾಡುತ್ತಾರೆ. ಒಬ್ಬ ವ್ಯಕ್ತಿಯಲ್ಲಿ ಧನಾತ್ಮಕ ಮತ್ತು ಋಣಾತ್ಮಕ ಅಂಶಗಳಿರುತ್ತವೆ. ಯಾವಾಗ ಧನಾತ್ಮಕ ಅಂಶಗಳ ಮೇಲೆ ಋಣಾತ್ಮಕ ಅಂಶಗಳ ಹಿಡಿತ ಜಾಸ್ತಿ ಆದಾಗ ಋಣಾತ್ಮಕ ಅಂಶಗಳೇ ವರ್ತನೆಯಲ್ಲಿ ಪ್ರಧಾನವಾಗಿ ಪ್ರಕಟಗೊಳ್ಳುತ್ತವೆ. ಸಾಧಕನ ಸಾಧನೆಗೆ ಅವು ಅಡ್ಡಿ ಬರುತ್ತವೆ. ಆದ್ದರಿಂದ ಬಸವಣ್ಣನವರು ಅವುಗಳನ್ನ ನಿವಾರಿಸಿ ಸನ್ಮಾರ್ಗದಲ್ಲಿ ನಡೆಸುವಂತೆ ಮಾಡು ಎಂದು ಕೂಡಲಸಂಗಮನಲ್ಲಿ ನಿವೇದಿಸಿಕೊಳ್ಳುತ್ತಾರೆ.
ಆಸೆ, ಆಮಿಷ, ತಾಮಸ, ಹುಸಿ, ವಿಷಯ, ಕುಟಿಲ, ಕುಹಕ, ಕ್ರೋಧ, ಕ್ಷುದ್ರ, ಮಿಥ್ಯೆ- ಇವನೆನ್ನ ನಾಲಗೆಯ ಮೇಲಿಂದತ್ತ ತೆಗೆದು ಕಳೆಯಯ್ಯಾ
ಆಸೆ: ಕಂಡದ್ದೆಲ್ಲವೂ ನನ್ನದಾಗಬೇಕು ಎನ್ನುವ ಮನುಷ್ಯನ ಗುಣ. ಹಪಹಪಿತನ
ಆಮಿಷ : ತನ್ನ ಕಾರ್ಯ ಸಾಧನೆಗಾಗಿ ಇನ್ನೊಬ್ಬರಿಗೆ ಪ್ರಚೋದಿಸುವುದು. ಅಥವಾ
ಪ್ರಚೋದನೆಗೆ ಒಳಗಾಗುವುದು.
ತಾಮಸ : ಜಡತ್ವ, ಅಜ್ಞಾನ
ಹುಸಿ : ಕಾರ್ಯ ಸಾಧನೆಗಾಗಿ ಸುಳ್ಳು ಹೇಳುವುದು.
ವಿಷಯ: ಭೋಗದಲ್ಲಿ ಅತಿಯಾದ ಆಸಕ್ತಿಯನ್ನು ಹೊಂದಿರುವುದು.
ಕುಟಿಲ: ಜಾಣತನದಿಂದ ಮೋಸಗೊಳಿಸುವುದು. ಇನ್ನೊಬ್ಬರಿಗೆ ಕೆಟ್ಟದಾಗುವಂತೆ ತಂತ್ರಗಳನ್ನ ರೂಪಿಸುವುದು.
ಕುಹಕ: ವ್ಯಂಗ್ಯ ಕುಚೆಷ್ಟ ಕುಚೋದ್ಯ.ಇನ್ನೊಬ್ಬರಿಗೆ ವ್ಯಂಗವಾಗಿ ಮಾತನಾಡುವುದು.
ಕ್ರೋಧ: ಕೆರಳುವುದು. ಸಣ್ಣಪುಟ್ಟ ವಿಷಯಗಳಿಗೆ ಆಕ್ರೋಶಗೊಳ್ಳುವುದು.
ಕ್ಷುದ್ರ: ಕೃಪಣತನ, ಅಂದರೆ ಜಿಪುಣತನ ಮಾಡುವುದು.
ಮಿತ್ಯ: ಅಸತ್ಯ ನುಡಿಯುವುದು.
ಮೇಲಿನ ಈ ಎಲ್ಲ ಗುಣಗಳನು ನಾಲಿಗೆಯನ್ನು ಕಾರ್ಯಚಟುವಟಿಕೆಯ ಸ್ಥಾನವಾಗಿ ಮಾಡಿಕೊಂಡು ಇತರರಿಗೆ ನೋವು ಉಂಟು ಮಾಡುತ್ತವೆ. ಇವುಗಳನ್ನು ನಾಲಿಗೆಯ ಮೇಲಿಂದ
ತೆಗೆದು ಅವು ಮತ್ತೆ ಅಲ್ಲಿ ಸುಳಿಯದಂತೆ ಮಾಡಯ್ಯ. ಅವುಗಳ ಕಾರ್ಯ ಚಟುವಟಿಕೆಯನ್ನು ನಿಷ್ಕ್ರಿಯ ಮಾಡು.
ಅದೇಕೆಂದಡೆ, ನಿನ್ನತ್ತಲೆನ್ನ ಬರಲೀಯವು ಇದು ಕಾರಣ ಇವೆಲ್ಲವ ಕಳೆದು ಎನ್ನ ಪಂಚೈವರ, ಭಕ್ತರ ಮಾಡು ಕೂಡಲಸಂಗಮದೇವಾ,
ಕೂಡಲಸಂಗಮದೇವ ನಿನ್ನಲ್ಲಿ ಶರಣನಾಗಿ ನಾನು ಬರಬೇಕೆಂದರೆ ಈ ಅವಗುಣಗಳು ನನ್ನನ್ನ ನಿಮ್ಮ ಕಡೆಗೆ ಬರದಂತೆ ತಡೆಯುತ್ತವೆ. ಆದ್ದರಿಂದ ಅವುಗಳನ್ನ ನಾಲಿಗೆಯಿಂದ ಕಿತ್ತೊಗೆದು, ನನ್ನನ್ನು ಶುದ್ಧನನ್ನಾಗಿ ಮಾಡು. ನಿನ್ನಡೆಗೆ ಸಾಗಿ ಬರಲು ಅನುವು ಮಾಡಿಕೊಡು. ಅಷ್ಟೇ ಅಲ್ಲದೆ ಕಣ್ಣು, ಕಿವಿ ,ಮೂಗು, ನಾಲಿಗೆ ಮತ್ತು ತ್ವಚೆ.ಈ ಪಂಚೇಂದ್ರಿಯಗಳನ್ನು ಕೂಡ ನಿನ್ನ ಶಿಷ್ಯನನ್ನಾಗಿ ಮಾಡು ಅಂದರೆ ನಿನ್ನ ಆಜ್ಞೆಯನ್ನು ಅನುಸರಿಸುವಂತೆ ಮಾಡು ಎಂದು ಬೇಡಿಕೊಳ್ಳುತ್ತಾರೆ.
-ಡಾ. ನಿರ್ಮಲ ಬಟ್ಟಲ