ವ್ಯೋಮ ಮೂರ್ತಿ ಅಲ್ಲಮ ಪ್ರಭುದೇವ

ವಾರದ ವಿಶೇಷ ಲೇಖನ

ವ್ಯೋಮ ಮೂರ್ತಿ ಅಲ್ಲಮ ಪ್ರಭುದೇವ

ಶಿವಮೊಗ್ಗ ಜಿಲ್ಲೆಯ ಬಳ್ಳಿಗಾವಿಯ ಸುಜ್ಞಾನಿ ಮತ್ತು ನಿರಹಂಕಾರರ ಉದರದಲ್ಲಿ ಅಲ್ಲಮಪ್ರಭು ಶಿವಾನುಗ್ರಹದಿಂದ ಶಿವಸ್ವರೂಪಿಯಾಗಿಯೇ ಜನಿಸಿದನು. ತಾಯಿ-ತಂದೆಯರು ನಿರ್ಮಲ ಭಾವದಿಂದ ಅಂಗ ಗುಣಗಳನ್ನೆಲ್ಲ ಅಳಿದುಕೊಂಡು, ಲಿಂಗ ಗುಣಗಳನ್ನಳವಳಿಸಿಕೊಂಡು, ಕರಣ ವೃತ್ತಿಗಳನ್ನು ಹಿಂಗಿಸಿಕೊಂಡು ಪುತ್ರಾಪೇಕ್ಷೆಯಿಂದ ನವಮಾಸ ಏಕೋಭಾವದಿಂದ ತಪಸ್ಸು ಮಾಡಿದರಾಗಿ ಜಾತನಲ್ಲದ ಮತ್ತು ಅಜಾತನೂ ಅಲ್ಲದ ನಿರ್ದೇಹ ಶಿಶು ಅವರ ಮಡಿಲಲ್ಲಿ ಕಾಣಿಸಿಕೊಂಡಿತು. ಮಮತೆಯಿಂದ ಎತ್ತಿಕೊಂಡರೆ ಕೂಸು ಕೈಯೊಳಗಿತ್ತು. ಆದರೆ ಕಿಂಚಿತ್ತೂ ಭಾರವಿರಲಿಲ್ಲ. ಕೂಸು ಮೊಲೆಯು0ಡರೂ ಸೋಂಕಿನ ಅನುಭವವಿರಲಿಲ್ಲ. ಲೌಕಿಕರಂತೆ ತಾವು ಇಹಪರ ಸುಖ ಕೊಡುವ ಮಗನಾಗಬೇಕೆಂದು ಬಯಸದೆ ಮುಕ್ತಿಪ್ರದ ಮಗುವಾಗಲಿಯೆಂದು ಅಪೇಕ್ಷಿಸಿದುದರಿಂದ ಕೂಸಿನ ಸ್ವರೂಪ ಹೀಗಿರಬಹುದೆಂದು ತಂದೆ -ತಾಯಿಗಳು ಕಿಂಚಿತ್ತೂ ಚಿಂತಿಸಲಿಲ್ಲ. ಚಾಮರಸ ಕವಿ ಬಣ್ಣಿಸಿದಂತೆ ” ಈ ಶಿಶುವೇತರೊಳಗಿಹನಲ್ಲ , ಹೊರಗಿಹನಲ್ಲ ಭಾವಿಸಲು ಇಲ್ಲದಿರುತಿಹನಲ್ಲ ಮತ್ತು ಎಲ್ಲ ಜಾಡ್ಯದ ಜಂಜಡಂಗಳನಲ್ಲವೆನಿಸುವ ಬಾಲಕಗೆ ಬಳಿಕ ” ಅಲ್ಲಮಪ್ರಭು “ ವೆಂದು ಹೆಸರು ಕೊಟ್ಟರು.

ಅತ್ಯಗಾಧ ರೀತಿಯಲ್ಲಿ ಬೆಳೆದ ಅಲ್ಲಮಪ್ರಭು ಕೂಡ ತನ್ನ ಹೆಸರಿಗೆ ತಕ್ಕಂತೆ ತನ್ನ ಮುಂದೆ ಸಕಲ ಶಕ್ತಿವಂತರು , ಯುಕ್ತಿವಂತರು, ಕುಲವಂತರು , ರೂಪವಂತರು , ಧನವಂತರು , ಘನವಂತರು , ಏನೇನೂ ಅಲ್ಲವೆನಿಸುವ ರೀತಿಯಲ್ಲಿ ಬೆಳೆದನು. ಆತನೋದದ ವೇದ ಶಾಸ್ತ್ರ ಪುರಾಣಾಗಮಗಳು ಆತನ ತುದಿನಾಲಿಗೆಯ ಮೇಲಿದ್ದವು. ಸತ್ಕ್ರೀಕಳಾಪಗಳು ತಾನಾಗಿ ಕೈಯೇರಿ ನೆರವೇರುತ್ತಿದ್ದವು. ದೈವದತ್ತವಾದ ಈ ಜ್ಞಾನ ಸಮೃದ್ಧಿ, ಅಜ್ಞಾನಿಗಳ ಮತ್ತು ಅರೆಜ್ಞಾನಿಗಳ ಭ್ರಮಾನಿವಾರಣೆಗೆ ಸದ್ವಿನಿಯೋಗವಾಗಬೇಕೆಂದು ನಿಜವಾದ ಅರ್ಥದಲ್ಲಿ ಜಂಗಮ ಕಾಯಕ ಕೈಗೊಂಡು ಮುಮುಕ್ಷುಗಳಿದ್ದಲ್ಲಿಗೆ ಮತ್ತು ಜಿಜ್ಞಾಸುಗಳಿದ್ದಲ್ಲಿಗೆ ತಾನಾಗಿ ಹರಿದುಹೋಗಿ ಅವರ ಶಂಕಾತುರಗಳನ್ನು ನಿವಾರಿಸಿ ಅವರನ್ನು ಮುನ್ನಡೆಸುವುದೇ ಅಲ್ಲಮಪ್ರಭುವಿನ ಗುರಿಯಾಯಿತು. ಇದೇ ದೃಷ್ಠಿಯಿಂದಲೇ ಅವರನ್ನು ಅಂಕುಶ ರಹಿತ ಶಿವನ ಮದಕರಿಯೆಂದು ಕರೆಯಲಾಗಿದೆ.

ಇಂತಹ ಅಪೂರ್ವಜ್ಞಾನಿ ಅಲ್ಲಮನು ಜೀವನದಲ್ಲೊಮ್ಮೆ ದೇವ – ದಾನವ – ಮಾನವರನ್ನು ದಾವಣಿಯ ದನವಾಗಿ ಕಟ್ಟುವ ಮಾಯೆಯನ್ನು ಸಂದರ್ಶಿಸಬೇಕಾಯಿತು. ಆಕೆಯ ಪ್ರತಾಪ ಈ ವೈರಾಗ್ಯಮೂರ್ತಿಯ ಮುಂದೆ ನಡೆಯದೆ ಮಾಯಾ ಕೋಲಾಹಲಿಗ ಎನಿಸಿದನು.

ತಮ್ಮ ಜಂಗಮ ಕಾಯಕದಲ್ಲಿ ಮೊದಲು ಗೊಗ್ಗಯ್ಯನೆಂಬ ಕೃಷಿಕನನ್ನು ಕಂಡು ಬಾಹ್ಯ ಕೃಷಿಯೊಡನೆ ಅಂತರಂಗ ಕೃಷಿಯೂ ನಡೆಯಬೇಕೆಂದು ಹೇಳಿದನು. ಮುಕ್ತಾಯಕ್ಕಳನ್ನು ಸಂಧಿಸಿ ತನ್ನರಿವೇ ತನಗೆ ಗುರುವಾಗಬೇಕೆಂದು ಅರುಹಿದನು. ಮುಂದೆ ಅನಿಮಿಷಾರ್ಯನಿಂದ ಪೇಳಲಿಲ್ಲದ ಬಿನ್ನಪ, ಮುಟ್ಟಲಿಲ್ಲದ
ಹಸ್ತ -ಮಸ್ತಕ ಸಂಯೋಗ , ಕೇಳಲಿಲ್ಲದ ಕರ್ಣಮಂತ್ರ , ಆಗಮವಿಲ್ಲದ ದೀಕ್ಷೆ ಪಡೆದು ಗುರುಕರ ಸಂಜಾತನಾದನು. ಸೊನ್ನಲಿಗೆಯ ಸಿದ್ಧರಾಮನ ಲೋಕೋಪಕಾರ್ಯವನ್ನು ಬಿಡಿಸಿ ಆತ್ಮೋದ್ಧಾರದ ಮಾರ್ಗ ಅರುಹಿದನು. ಸಿದ್ಧರಾಮೇಶ್ವರನನ್ನು
ಕಲ್ಯಾಣಕ್ಕೆ ಕರೆದುಕೊಂಡು ಬಂದು ಚೆನ್ನಬಸವಣ್ಣನಿಂದ ಲಿಂಗ ದೀಕ್ಷಾ ಕೊಡಿಸಿ ಕಟ್ಟೆಯ ಕಲ್ಲನ್ನು ಕಟ್ಟೆಗೆ ಜೋಡಿಸಿದನು.

ಕಲ್ಯಾಣದಲ್ಲಿ ಪರಮ ಪ್ರಸಾದಿ ಮರುಳ ಶಂಕರ ದೇವನಿಗೆ ಮುಕ್ತಿ ಕರುಣಿಸಿ ಮಹಾದೇವಿಯಕ್ಕಳಿಗೆ ಕದಳಿಯ ದಾರಿ ತೋರಿಸಿ , ಬಸವಾದಿ ಶಿವಶರಣರಿಗೆ ಇಷ್ಟಲಿಂಗಾನುಸಂಧಾನದ ಭೇದ ತಿಳಿಸಿ ಮತ್ತೆ ಸಂಚಾರ ಹೊರಟನು
ನಾಥ ಪಂಥದ ಗೋರಕ್ಷನಾಥನಿಗೆ ಕಾಯ ಬಲಿದೊಡೆ ಮಾಯೆ ಬಲಿಯುವದೆಂದು ತಿಳಿಸಿ ನಿರ್ದೇಹಿಯಾಗುವ ಬೆಡಗನ್ನು ಹೇಳಿಕೊಟ್ಟನು. ಹಲವು ಕಾಡುಬೇಟೆಗಾರರಿಗೆ ಕಾಯಕಾಂತಾರದಲ್ಲಿನ ವಿಷಯಾದಿ ಮೃಗಗಳ ಬೇಟೆಯಾಡಬೇಕೆಂದು ತಿಳಿಸಿ , ವೈದಿಕರಿಗೆ ಪ್ರಾಣಿಗಳನ್ನು ಆಹುತಿ ಕೊಡುವುದಕ್ಕಿಂತ ಅಂತರಂಗದಲ್ಲಿನ ಆಶೆ ಆಮಿಷಗಳನ್ನು ಆಹುತಿಕೊಡುವ ಯಜ್ಞಗಳನ್ನು ಕೈಕೊಳ್ಳಬೇಕೆಂದು ತಿಳಿಸಿ , ಪುನಃ ಕಲ್ಯಾಣಕ್ಕೆ ಮರಳಿದನು.

ಕಲ್ಯಾಣದ ಬಸವಣ್ಣನವರು ಅಲ್ಲಮ ಪ್ರಭುವಿನ ಮನಸ್ಸನ್ನು ಸೂರೆಗೊಂಡಿದ್ದರು. ಬಸವಣ್ಣನವರ ವ್ಯಕ್ತಿತ್ವಕ್ಕೆ ಮಾರು ಹೋಗಿ ಹಂಬಲಿಟ್ಟು ಕಲ್ಯಾಣಕ್ಕೆ ಪ್ರಭು ಧಾವಿಸುತ್ತಿದ್ದನು. ಬಸವಣ್ಣನವರು ವಿನೂತನವಾಗಿ ಸೃಜಿಸಿದ ಶೂನ್ಯ ಸಿಂಹಾಸನದ ಪ್ರಥಮಾಧಿಪತಿಯಾಗಿ ಹಲವರ ಹತ್ತು ಸಂದೇಹಗಳಿಗೆ ಸಮರ್ಪಕ ಸಮಾಧಾನ ನೀಡಿದನು. ಅನುಭವ ಮಂಟಪದಲ್ಲಿ ಪ್ರಭುವಿನ ನಿರ್ಣಯವೇ ಅಂತಿಮವಾಗುತ್ತಿತ್ತು
ಕಲ್ಯಾಣದಲ್ಲಿ ನಡೆದ ವಿಲೋಮ ವರ್ಣ ಸಂಕರಕ್ಕೆ ಪ್ರಭುವಿನ ಒಪ್ಪಿಗೆಯಿದ್ದಿತು. ಅವಧಿ ಅಳಿದು, ವ್ಯವಧಾನ ಉಳಿದಾಗ ಪ್ರಭುವು ಎಲ್ಲ ಶರಣರಿಗೆ ಅವರವರ ಕೆಲಸ ತಿಳಿಸಿ ಶ್ರೀಶೈಲದ ಕಡೆಗೆ ಹೋದರು. ಆದರೂ ಅವರ ಸಮಾಧಿಗಳನ್ನು ಕಲ್ಯಾಣದಲ್ಲಿಯೂ , ಬಿಜಾಪುರ ಜಿಲ್ಲೆಯ ತೇರದಾಳದಲ್ಲಿಯೂ , ರಾಯಚೂರು ಜಿಲ್ಲೆಯಲ್ಲಿಯೂ ಕಾಣುತ್ತೇವೆಯೆಂದರೆ ಚಾಮರಸ ಕವಿಯು ಹೇಳಿದಂತೆ ಅವರದು ಸತ್ತವರ ಚರಿತ್ರೆಯಲ್ಲ, ನಿಜವಾಗಿಯೂ ಬಯಲೊಡಲಿಗರಾಗಿದ್ದ ಅವರು ಇಂದಿಗೂ ಬಯಲಿನಲ್ಲಿ ಬಯಲಾಗಿ ಬಯಲ ಸ್ಥಿತಿಯಲ್ಲಿ ಇದ್ದಾರೆ.

ಎರಡೆ0ಬತ್ತು ಕೋಟಿ ವಚನಗಳನ್ನು ಬರೆದುದಾಗಿ ತಾವೇ ಹೇಳಿದರೂ ಸಧ್ಯಕ್ಕೆ ಕೇವಲ 1645 ವಚನಗಳು ಸಿಕ್ಕಿವೆ
ಇವರ ವಚನಾ0ಕಿತ ” ಗುಹೇಶ್ವರ “

ವಚನ ವಿಶ್ಲೇಷಣೆ

ಅಗ್ಘವಣಿಯ ತಂದು ಮಜ್ಜನವ ಮರೆದವನ
ಪುಷ್ಪವನು ತಂದು ಪೂಜೆಯ ಮರೆದವನ
ಓಗರವ ತಂದು ಅರ್ಪಿತವ ಮರೆದವನ
ಲಿಂಗವನು ಕಂಡು ತನ್ನ ಮರೆದವನ
ಮಹಾಘನ ಒಳಗೊಂಡಿತ್ತು ಗುಹೇಶ್ವರಾ !

ದೇವರ ಪೂಜೆ , ಧ್ಯಾನ , ನೈವೇದ್ಯಗಳೆ0ಬವು ನಮ್ಮ ಆತ್ಮ ಶುದ್ಧಿಗಾಗಿ ಮತ್ತು ದೇವರ ಬಗೆಗಿನ ನಮ್ಮ ಕೃತಜ್ಞತೆಯ ದ್ಯೋತಕವಾಗಿ ಕೈಕೊಳ್ಳುವಂಥವುಗಳೇ ವಿನಹ ಕಂದಾಚಾರಗಳಲ್ಲ , ಮೂಢ ಸಂಪ್ರದಾಯಗಳಲ್ಲ. ವಿಷಾಧದ ಸಂಗತಿಯೇನೆ0ದರೆ ಪೂಜೆ ಮೊದಲಾದವುಗಳು ಹೇಗೆ ನಡೆಯಬಾರದೋ ಹಾಗೆ ನಡೆಯುತ್ತಿವೆ , ಹೇಗೆ ನಡೆಯಬೇಕೋ ಹಾಗೆ ನಡೆಯುತ್ತಿಲ್ಲ.

ನೀರನ್ನು ಒಯ್ದು ಲಿಂಗಕ್ಕೆ ಎರೆಯುವುದನ್ನು ಮರೆತವರು , ಪುಷ್ಪವನ್ನು ಒಯ್ದು ಏರಿಸದೆ ವಾಪಸು ತರುವವರು , ನೈವೇದ್ಯವನ್ನು ಅರ್ಪಿಸಲು ಮರೆತು ಬಂದವರು ಅದೆಷ್ಟು ಜನ ಸಿಗುವುದಿಲ್ಲ ನಮಗೆ ? ಕಾಮ ಕ್ರೋಧಾದಿ ಅರಿಷಡ್ವರ್ಗಗಳಿಂದ ಬಳಲುವವರು , ಸಂಸಾರ ತಾಪತ್ರಯಗಳಲ್ಲಿ ಕೊರಗುವವರು , ದೇವರು ಅಸ್ತಿತ್ವದಲ್ಲಿಯೇ ಇಲ್ಲ ಎಂಬಂತಹ ನಾಸ್ತಿಕರು ಪೂಜಾದಿ ಕರ್ಮಗಳನ್ನು ಕಂದಾಚಾರವೆಂದು ಭಾವಿಸಿ ಒಂದನ್ನು ಮಾಡುವುದು ಒಂದನ್ನು ಮರೆಯುವುದು ನಡೆಸಿರುತ್ತಾರೆ. ಅಂಥ ಅನ್ಯ ಚಿಂತಾಕ್ರಾಂತರಿಗೆ ಅಲ್ಲಮ ಪ್ರಭುಗಳ ಅಭಿಪ್ರಾಯದ ಪ್ರಕಾರ ದೇವರು ಒಲಿಯುತ್ತಾನೇನು ? ಅದು ಸಾಧ್ಯವಿಲ್ಲ.

ಒಂದು ವೇಳೆ ನಾವು ಯಾವುದನ್ನೂ ಮರೆಯದೆ ನೀರಿನಿಂದ ಲಿಂಗಕ್ಕೆ ಮಜ್ಜನ ಮಾಡಿಸಿದರೂ ನಮ್ಮ ಮನಸ್ಸು ಲಿಂಗದ ಕಡೆ ಇರುವುದಿಲ್ಲ , ನೀರಿನೆಡೆಗೆ ಇರುತ್ತದೆ. ನೀರು ಪರಿಶುದ್ಧವಾಗಿದೆಯೋ ಇಲ್ಲವೋ ? ನಾವು ತಂದ ನೀರು ಮೀನಿನೆ0ಜಲು ಆಗಿರಲಿಕ್ಕಿಲ್ಲವಷ್ಟೇ ? ಪೂಜೆಯ ನೀರನ್ನು ಎಲ್ಲಿ ಇಡಬೇಕು ? ನೆಲದ ಮೇಲೆ ಇಡಬೇಕೋ ? ಗದ್ದಿಗೆಯ ಮೇಲೆ ಇಡಬೇಕೋ ? ಎಂಬಂತಹ
ಜಿಜ್ಞಾಸೆಗಳಲ್ಲಿ ನಮ್ಮ ಮನತೊಡಗಿ ಮುಖ್ಯವಾದ ದೇವರ ಧ್ಯಾನವೇ ಮರೆತು ಹೋಗುತ್ತದೆ. ಅಲ್ಲಮ ಪ್ರಭುಗಳು ಹೇಳುವುದೇನೆಂದರೆ ನಮ್ಮ ಮನಸ್ಸಿನ ತುಂಬ ದೇವರು ಎಷ್ಟೊಂದು ವ್ಯಾಪಿಸಿಕೊಳ್ಳಬೇಕೆಂದರೆ ಮಜ್ಜನಕ್ಕೆರೆಯುವುದೂ ಮರೆತು ಹೋಗಬೇಕು. ಮಳೆ ಹೊಳೆಗಳನ್ನು
ಸೃಷ್ಟಿಸಿದ ಪರಮಾತ್ಮನಿಗೆ ನಾವು ಎರೆಯುವ ನೀರಿಂದ ಆಗಬೇಕಾದುದೇನಿದೆ ?

ಇದೇ ರೀತಿ ನಮ್ಮ ಭಕ್ತಿಯ ಪರವಶತೆಯಲ್ಲಿ ಪುಷ್ಪಗಳನ್ನೊಯ್ದರೂ ಪೂಜೆ ಮರೆತು ಹೋಗಬೇಕು. ಉಸಿರೆ ಪರಿಮಳವಾಗಿರಲು ಕುಸುಮದ ಹಂಗೇಕೆ ? ಎಂಬಂತೆ ನಮ್ಮ ಭಾವದಲ್ಲಿ ಭಕ್ತಿಯ ಮಕರಂದ ಉಂಟಾಗಿ ಅದೇ ದೇವರಿಗೆ ಅರ್ಪಿತವಾಗಬೇಕು.

ನಿತ್ಯ ತೃಪ್ತನಾದ ಪರಮಾತ್ಮನಿಗೆ , ಆನಂದ ಸಾಗರನಾದ ಪರಮಾತ್ಮನಿಗೆ ನಮ್ಮ ನೈವೇದ್ಯದಿಂದ ಆಗಬೇಕಾದುದೇನಿದೆ ? ಬೆಟ್ಟಕ್ಕೆ ಚಳಿಯಾದಡೆ ಹೊದಿಸುವವರಾರು
ಬಯಲೆ ಬತ್ತಲೆ ನಿಂತರೆ ಉಡಿಸುವವರಾರು ? ಎಂಬಂತೆ ಸ್ವತಃ ಪರಮಾತ್ಮ ಹಸಿದರೆ ಉಣಿಸುವವರಾರು ? ಇದೆಲ್ಲವನ್ನು ಅರಿತಾಗ ಎಲ್ಲವೂ ವ್ಯರ್ಥವೆನಿಸಿ ಒಯ್ದ ಅಡಿಗೆ ವಾಪಸ್ ತರುವಂತಾಗುತ್ತದೆ. ಅಂಥ ಪರಿಪೂರ್ಣ ಜ್ಞಾನ ಅವಶ್ಯವೆಂಬುದು ಓಗರವ ತಂದು
ಅರ್ಪಿತವ ಮರೆದವನ ಒಳಗೊಂಡಿತ್ತು ಲಿಂಗ ಎಂಬುದು ಮತಿಥಾರ್ಥ.

ಲಿಂಗವನ್ನು ನೋಡಿದ ಕೂಡಲೇ ಅಥವಾ ದೇವರ ಪ್ರತಿಮೆಯನ್ನು ದರ್ಶಿಸಿದ ಕೂಡಲೇ ನಮ್ಮಲ್ಲಿ ಎಷ್ಟೊಂದು ಭಕ್ತಿ ಉಕ್ಕಿ ಉಕ್ಕಿ ಹರಿಯಬೇಕೆಂದರೆ ತನ್ನನ್ನೂ ಮರೆಯಬೇಕು , ಆನಂದದಿಂದ ಕುಣಿಕುಣಿದಾಡಬೇಕು. ಸ್ವಾರ್ಥವಿಲ್ಲದ , ಅಸಮಾಧಾನವಿಲ್ಲದ , ಆಶೆಯಿಲ್ಲದ
ಲಾಲಸೆತನವಿಲ್ಲದ ಸ್ಥಿತಿಯಲ್ಲಿ ಮಾಡುವ ಪೂಜೆಯೇ ದೇವರ ಒಲವು ಗಳಿಸಲು ಸಾಧ್ಯವಾಗುತ್ತದೆ.

ಸುಧಾ ಪಾಟೀಲ್
ಬೆಳಗಾವಿ

Don`t copy text!