ಹೆತ್ತ ಕರುಳು ಹೊತ್ತ ಹೆಗಲಿಗೆ ಭಾರವಾಗದ ಬದುಕು

ಬದುಕು ಭಾರವಲ್ಲ ಸಂಚಿಕೆ 20

ಹೆತ್ತ ಕರುಳು ಹೊತ್ತ ಹೆಗಲಿಗೆ ಭಾರವಾಗದ ಬದುಕು

ಜಗತ್ತಿನಲ್ಲಿ ಅಪಾರವಾದ ಪ್ರೀತಿಯನ್ನು ಗೆದ್ದಿರುವಳು ತಾಯಿ .ತಾಯಿಯಂತ ಪ್ರೀತಿ ವಾತ್ಸಲ್ಯ ವನ್ನು ಬೇರೆಯವರಿಂದ ಪಡೆದುಕೊಳ್ಳಲು ಸಾಧ್ಯವಿಲ್ಲ. ಸಾಧ್ಯವಿದ್ದರೂ ಕೂಡ ಅದು ತೋರಿಕೆಯ ಪ್ರೀತಿ ಆಂತರಿಕವಾದದ್ದು ಅಲ್ಲ ನಮ್ಮನ್ನು ಹೆತ್ತು ಸಾಕಿ ಸಲುಹಿದ ಈ ತಾಯಿಯ ಫ್ರೀತಿಯನ್ನು ಯಾವ ನೆಂಟರಿಷ್ಟರಿಂದ ಪಡೆದುಕೊಳ್ಳಲು ಆಗಲಾರದು .

ತಾಯಿಯ ಪ್ರೀತಿ ಪರಿಶುದ್ಧ ಹಾಗೂ ನಿಷ್ಕಲ್ಮಷವಾದದ್ದು .ಬೇರೆ ಎಷ್ಟೇ ನೆಂಟರಿಷ್ಟರನ್ನು ನಾವು ಹಣಕೊಟ್ಟು ಪಡೆದುಕೊಳ್ಳಬಹುದು ಆದರೆ ತಾಯಿಯನ್ನು ಹಣಕೊಟ್ಟು ಪಡೆದುಕೊಳ್ಳಲು ಸಾಧ್ಯವಿಲ್ಲ.
ನಮಗೆ ಕಾಯಿಲೆ ಬಂದಾಗ ಅವ್ವ ಳ ಆರೈಕೆ ಹೇಳತೀರದು .
ಇಂಥಹ ಮಹಾನ್ ದೇವತೆಯ ಸ್ವರೂಪ ತಾಯಿಗೆ ಕಾಯಿಲೆ ಆದರೆ ಹೆತ್ತ ಮಕ್ಕಳು ಆ ತಾಯಿಯನ್ನು ಆರೈಕೆ ಮಾಡುವುದು ದೇವರಿಗೆ ನಾವು ಮಾಡುವ ಸೇವೆ ಎಂದು ತಿಳಿದು ವಯಸ್ಸಾದ ಆ ತಾಯಿಯನ್ನು ಆರೈಕೆ ಮಾಡಿದರೆ ಆ ಜೀವ ಇನ್ನಷ್ಟು ವರ್ಷ ಸಂತೋಷ ದಿಂದ ಬದುಕು ಭಾರವಾಗಿಲ್ಲ ಎಂದು ತಿಳಿದು ಬದುಕುತ್ತದೆ.
ಇದಕ್ಕೆ ಪ್ರಸ್ತುತ ಉದಾಹರಣೆ ನಮ್ಮ ತಾಯಿ ಹಾಗೂ ನಮ್ಮ ಅತ್ತೆಯನ್ನು ಆರೈಕೆ ಮಾಡುವ ರೀತಿ ಜಗತ್ತಿನಲ್ಲಿ ನಾನು ಯಾವ ಮಕ್ಕಳಿಂದ ಕಂಡಿಲ್ಲ.ಮುಂದೆ ಕಾಣುತ್ತೇವೆಯೋ ಗೊತ್ತಿಲ್ಲ. 9 ಮಕ್ಕಳನ್ನು ಹೆತ್ತ ನಮ್ಮ ಅತ್ತೆ ಅಲ್ಲವ್ವ ಒಬ್ಬ ಶಿಕ್ಷಣಾಧಿಕಾರಿಯ ಹೆಂಡತಿಯಾದರೂ ತೋಟ ಹಾಗೂ ಮನೆಯ ಕೆಲಸ ದಲ್ಲಿ ಎತ್ತಿದ ಕೈ ಹಾಗೆ ಮಕ್ಕಳನ್ನು ಅಷ್ಟೇ ಅಲ್ಲದೇ ಮೊಮ್ಮಕ್ಕಳನ್ನು ಸಾಕಿ ಸಲುಹಿದ ಜೀವ ಕಾಯಿಲೆಯಿಂದ ಬಿದ್ದಾಗ ಯಾವ ಮಕ್ಕಳಿಗೆ ನೋವು ಆಗುವುದಿಲ್ಲ ಹೇಳಿ .
ತಾಯಿಯ ನೋವು ತಮ್ಮ ನೋವೇ ಎಂದು ತಿಳಿದು ಆರೈಕೆ ಮಾಡುವ ಜೀವ ಇಂಥಹ ಮಕ್ಕಳನ್ನು ನಾನು ಕಂಡಿಯೇ ಇಲ್ಲ.
ಅಳುವ ಚಿಕ್ಕ ಮಗುವನ್ನು ಸಮಾಧಾನ ಮಾಡಿ ಅದರ ಮಲ ಮೂತ್ರವನ್ನು ಹೇಸಿಗೆ ಎಂದು ದೂರ ನಿಲ್ಲದೇ ಆರೈಕೆ ಮಾಡುವ ಪ್ರತಿ ಕುಟುಂಬದಲ್ಲಿಯೂ ಇಂಥಹ ಮಕ್ಕಳು ಇದ್ದರೆ ಬಹುಶಃ ಯಾವ ಅನಾಥಾಶ್ರಮ ಇರಲಿಕ್ಕಿಲ್ಲ ಅನಿಸುತ್ತದೆ .
ಇಂಥಹ ಮಕ್ಕಳನ್ನು ಪಡೆದ ತಾಯಿಯು ನಿಜಕ್ಕೂ ಪುಣ್ಯ ವಂತೆ ನಮ್ಮ ಅತ್ತೆ.
ಆದರೆ ನಮ್ಮ ತಾಯಿಯ ಕಥೆ ಹೇಳುವುದೇ ಬೇಡ ಹೇಳಿದರೆ ಓದಿದವರ ಕಂಗಳು ತೇವ ಗೊಳ್ಳುವವು.

ನಮ್ಮ ತಾಯಿಯನ್ನು ಕಳೆದುಕೊಂಡ ದುಃಖ ನಮಗೆ .
ಹೆತ್ತ ಕರುಳು ಬಯಲಲ್ಲಿ ಬಯಲಾಗಿ ಹೋಯಿತು.
ಹೊತ್ತ ಹೆಗಲು ತನ್ನ ಬದುಕು ಭಾರವಾಗದೇ ಇರುವಂತೆ ನೋಡಿಕೊಳ್ಳುವ ಆದರ್ಶ ಮಗಳು ನನ್ನ ಅಕ್ಕ ಅನ್ನಪೂರ್ಣ. ಯಾವ ಗಂಡು ಮಕ್ಕಳು ಈ ಜಗತ್ತಿನಲ್ಲಿ ಇದ್ದಾರೋ ಇಲ್ಲವೋ ಗೊತ್ತಿಲ್ಲ ನನಗೆ ನಮ್ಮ ಅಕ್ಕಳು ಮಾಡುವ ನಮ್ಮ ತಂದೆಯ ಆರೈಕೆಯನ್ನು ನೋಡಿದವರಿಗೆ ಹೊಟ್ಟೆಕಿಚ್ಚು ಆಗಬಹುದೇನೋ ಆ ತರ ನನ್ನ ಅಕ್ಕ ನನ್ನ ತಂದೆಯವರನ್ನು ಒಂದು ಚಿಕ್ಕ ಮಗುವಿನ ಹಾಗೆ ಜೋಪಾನ ಮಾಡುವ ಆದರ್ಶ ಮಗಳು .ನಾವೆಲ್ಲರೂ ಉದ್ಯೋಗಸ್ಥ ರು ಎಂದು ನಿಮಗೆ ಸರಿಯಾಗಿ ಆರೈಕೆ ಮಾಡಲು ಆಗುವುದಿಲ್ಲ ಎಂದು .ನಮ್ಮ ತಂದೆಯವರನ್ನು ಕರೆದುಕೊಂಡು ಹೋಗಿ ಸಾಕುವ ಇಂಥಹ ಹೆಣ್ಣು ಮಕ್ಕಳು ಮುಂದೆ ಹುಟ್ಟುವವರೋ ಇಲ್ಲೋ ಗೊತ್ತಿಲ್ಲ. ಗಂಡು ಮಕ್ಕಳು ಮಾಡದ ಕೆಲಸವನ್ನು ತನ್ನ ಒಂದು ಕುಟುಂಬದ ಜವಾಬ್ದಾರಿಯ ಜೊತೆಗೆ ತಂದೆಯನ್ನು ದೇವರಂತೆ ಕಾಣುವ ಆದರ್ಶ ಮಗಳು ನನ್ನ ಅಕ್ಕ ಅನ್ನಪೂರ್ಣ.
ಹುಬ್ಬಳ್ಳಿಯ ಸಿಟಿ ಪರಿಸರದ ನೆಲೆಯಲ್ಲಿ ತಂದೆಯವರನ್ನು ಸಾಕುವ ಇಂಥಹ ಮಕ್ಕಳು ನಿಜಕ್ಕೂ ಕೋಟಿಗೊಬ್ಬರು ಎಂದರೂ ಅಚ್ಚರಿಯಿಲ್ಲ .
ಮೊನ್ನೆ ನಾನು ಇಲೆಕ್ಷಣ ಕೆಲಸದ ನಿಮಿತ್ತ ತೆರಳುತ್ತಿದ್ದಾಗ ತನ್ನ ತಾಯಿಯ ಬಗ್ಗೆ ಹೇಳುತ್ತ ಕಂಬನಿ ಸುರಿಸಿ ಮನಸ್ಸಿನ ಭಾರವನ್ನು ಕಡಿಮೆ ಮಾಡಿಕೊಂಡರು ಯಾಕೆ ಅಳುತ್ತಿದ್ದಿರಿ ಎಂದೆ.ಎನ ಮಾಡುವುದು ಮೆಡಂ ಮನೆಯಲ್ಲಿ ಕಾಯಿಲೆಯಿಂದ ನರಳುವ ತಾಯಿ ಫಕ್ಕದಲ್ಲಿಯೇ ಅಣ್ಣ ಅತ್ತಿಗೆ ಇದ್ದಾರೆ ಆದರೆ ನೋಡಿಕೊಳ್ಳುವುದಿಲ್ಲ ಇಲೆಕ್ಷಣ ಡ್ಯೂಟಿ ತಪ್ಪಿಸುವ ಹಾಗಿಲ್ಲ ಎಂದರು .ನಮ್ಮ ತಾಯಿ ಕೂಗಿದರೆ ಬಾಯಿಗೆ ಹೊಡೆಯುವರು ಬಟ್ಟೆ ಬಾಯಲ್ಲಿ ತುರುಕುವರು ಊಟ ಕೊಡುವುದಿಲ್ಲ. ನಿದ್ದೆ ಮಾಡಲು ಕೊಡದ ಈ ಮುದುಕಿಯನ್ನು ಎತ್ತ ಹಾಕಿ ಎಲ್ಲಿಯಾದರೂ ಒಗೆದು ಬರ್ರಿ ಎಂದು ಅಣ್ಣ ನಮ್ಮ ಅವ್ವ ಮಲಗಿದ ಹಾಸಿಗೆ ಜೊತೆಗೆನೆ ನಮ್ಮವ್ವನನ್ನು ಗಾದಿ ಜೊತೆಗೆನೇ ಹಾಗೆ ಸುತ್ತಿ ಬಿಟ್ಟ .ಎಂದು ಹೇಳಿದಾಗ ನನ್ನ ತಾಯಿಯ ನೆನಪು ನನಗೂ ಬಂದು ಇಬ್ಬರೂ ಅಳುವುದನ್ನು ನೋಡಿದವರು ಎನೇನ್ನುವರು ಎಂದು ತಿಳಿದು ಕಂಬನಿ ವರೆಸಿಕೊಂಡೆವು .

ವಯಸ್ಸಾದ ತಂದೆ ತಾಯಿಯರನ್ನು ಸಾಕುವ ಜವಾಬ್ದಾರಿ ಅದು ಹೆಣ್ಣಿರಲಿ ಗಂಡಿರಲಿ ಭೇದವಿಲ್ಲದೇ ಸಾಕಿದರೆ ವಯಸ್ಸಾದವರಿಗೆ ತಮ್ಮ ಬದುಕು ಭಾರವಾಗಲಾರದು ಅಲ್ಲವೇ

 

-ಡಾ ಸಾವಿತ್ರಿ ಮ ಕಮಲಾಪೂರ
ಪ್ರಾಚಾರ್ಯರು
ಕರ್ನಾಟಕ ಪಬ್ಲಿಕ್ ಸ್ಕೂಲ್

Don`t copy text!