ಸಂಗದಿಂದಲ್ಲದೆ ಅಗ್ನಿ ಹುಟ್ಟದು

ಅಕ್ಕನೆಡೆಗೆ –ವಚನ – 30

ಸಂಗದಿಂದಲ್ಲದೆ ಅಗ್ನಿ ಹುಟ್ಟದು

 

ಸಂಗದಿಂದಲ್ಲದೆ ಅಗ್ನಿ ಹುಟ್ಟದು
ಸಂಗದಿಂದಲ್ಲದೆ ಬೀಜ ಮೊಳೆದೋರದು
ಸಂಗದಿಂದಲ್ಲದೆ ದೇಹವಾಗದು
ಸಂಗದಿಂದಲ್ಲದೆ ಸರ್ವಮುಖದೋರದು ಚೆನ್ನಮಲ್ಲಿಕಾರ್ಜುನಯ್ಯಾ
ನಿಮ್ಮ ಶರಣರ ಅನುಭಾವ ಸಂಗದಿಂದಾನು ಪರಮಸುಖಿಯಾದೆನಯ್ಯಾ.

ಸಂಗ‘ ಎನ್ನುವ ಪದ ಸಹವಾಸ ಎಂದಾಗುತ್ತದೆ. ಇನ್ನೊಂದು ಅರ್ಥದಲ್ಲಿ ಗುಂಪು ಅಥವಾ ಸಮೂಹವನ್ನು ಸೂಚಿಸುತ್ತದೆ. ನಂತರ ಅದು ಒಳ್ಳೆಯದೊ? ಅಥವಾ ಕೆಟ್ಟದೊ? ಎನ್ನುವ ಪ್ರಶ್ನೆ ಹುಟ್ಟಿಸುತ್ತದೆ. ಒಂದಕ್ಕಿಂತ ಎರಡು ಅಥವಾ ಅದಕ್ಕಿಂತ ಹೆಚ್ಚಾದಾಗ ಅದು ಸಮೂಹ. ಆ ಸಮೂಹದ ಪ್ರಜ್ಞೆಯೇ ಸಂಗದ ಪ್ರತಿಫಲ. ಅಕ್ಕಮಹಾದೇವಿ ತನಗೆ ದೊರೆತ ಸತ್ಸಂಗದಿಂದ ಸುಖಿಯಾಗುವುದಷ್ಟೇ ಅಲ್ಲ, ಪರಮ ಸುಖಿಯಾದುದನ್ನು ಈ ವಚನದಲ್ಲಿ ತಿಳಿಸಲಾಗಿದೆ. ಹಾಗೆಯೇ ಎಂತಹ ಸಂಗವನ್ನು ನಾವು ಬಯಸಬೇಕು, ಬಳಸಬೇಕು ಎನ್ನುವುದನ್ನೂ ಮಾರ್ಗದರ್ಶಿಸುವ ವಚನವಿದು ಎಂದು ನಾವು ಪರಿಭಾವಿಸಿದರೆ, ನಮ್ಮ ಜೀವನದ ಮಟ್ಟವನ್ನು ಖಂಡಿತ ಎತ್ತರಕ್ಕೊಯ್ಯಬಹುದು.

ಸಂಗದಿಂದಲ್ಲದೆ ಅಗ್ನಿ ಹುಟ್ಟದು

ಅಗ್ನಿ ಅಥವಾ ಬೆಂಕಿಯನ್ನು ಪಡೆಯಬೇಕಾದರೆ ಎರಡು ಕಲ್ಲು ತೆಗೆದುಕೊಂಡು, ಒಂದಕ್ಕೊಂದು ಘರ್ಷಿಸಿದಾಗ, ಬೆಂಕಿಯ ಕಿಡಿ ಹುಟ್ಟುತ್ತದೆ. ಎರಡು ಕಲ್ಲುಗಳ ಸಂಗದಿಂದ ಇದು ಸಾಧ್ಯವಾಯಿತು.
ಕಟ್ಟಿಗೆಯಲ್ಲಿ ಅಗ್ನಿ ಅಡಗಿರುತ್ತದೆ, ನಿಜ. ಆದರೆ ಅಗ್ನಿಯ ಸ್ಪರ್ಶವಾಗದೆ ಅದು ಉರಿಯಲು ಆಗುವುದಿಲ್ಲ.
ಇನ್ನೊಂದು ಸುಂದರ ಉದಾಹರಣೆ, ಒಂದು ದೀಪದಲ್ಲಿ ಎಣ್ಣಿ ಹಾಕಿ, ಬತ್ತಿ ಹೊಸೆದಿಟ್ಟರೆ ಸಾಲದು. ಅದು ಬೆಳಗಲು ಇನ್ನೊಂದು ದೀಪದ ಸಂಗ ಮಾಡಲೇ ಬೇಕು. ದೀಪದಿಂದ ದೀಪ ಹಚ್ಚಿದಾಗ ಬೆಳಕಿನೆಡೆಗೆ ಸಾಗಲು ಸಾಧ್ಯ.
ಅದಕ್ಕಾಗಿ ಬೆಳಕನ್ನು ಕಾಣಲು ಸತ್ಸಂಗ ಅವಶ್ಯಕವೆಂದು ಅಕ್ಕ ಹೇಳುತ್ತಾಳೆ.

ಸಂಗದಿಂದಲ್ಲದೆ ಬೀಜ ಮೊಳೆದೋರದು

ನಿಸರ್ಗದಲ್ಲಿ ಲೆಕ್ಕವಿಲ್ಲದಷ್ಟು ವಿಸ್ಮಯಗಳಿವೆ. ಅದರಲ್ಲಿ ಈ ಭೂಮಿ, ಮನುಷ್ಯ, ಪ್ರಾಣಿ, ಪಕ್ಷಿಗಳೂ ಬಹುದೊಡ್ಡ ಅಚ್ಚರಿ. ಮಣ್ಣಿನಲ್ಲಿ ಒಂದು ಬೀಜ ಬಿತ್ತಿದರೆ ಸಾಕು, ಮೊದಲು ಪಡೆಯುವುದೇ ಮಣ್ಣಿನ ಸಂಗ. ನಂತರ ನೀರು, ಗಾಳಿ, ಸೂರ್ಯನ ಕಿರಣಗಳು, ಇತ್ಯಾದಿ. ಈ ತರಹ ಸಂಗವಿಲ್ಲದಿದ್ದರೆ ಬೀಜವೂ ಮೊಳಕೆಯೊಡೆಯುವುದಿಲ್ಲ.

ಸಂಗದಿಂದಲ್ಲದೆ ದೇಹವಾಗದು

ಈ ಪ್ರಕೃತಿಯಲ್ಲಿ ಮನುಷ್ಯ, ಪ್ರಾಣಿ, ಪಶು, ಪಕ್ಷಿಗಳು ವಿಭಿನ್ನ ಆಕಾರದ ದೇಹಗಳನ್ನು ಹೊಂದಿವೆ. ಎಲ್ಲದರಲ್ಲೂ ಗಂಡು ಮತ್ತು ಹೆಣ್ಣು ಎಂಬ ಎರಡು ಜಾತಿಗಳು. ಇವುಗಳ ಸಂಗದಿಂದಲೇ ಇನ್ನೊಂದು ಜೀವದ ಉದ್ಭವವಾಗಿ, ಜೀವ ಜಗತ್ತು ಮುಂದುವರಿಯುತ್ತಲೇ ಇದೆ. ಹೀಗೆ ಒಂದು ದೇಹ ರಚನೆಯಾಗಿ, ಜನ್ಮ ತಾಳಬೇಕಾದರೂ ಸಂಗ ಅವಶ್ಯಕ.

ಸಂಗದಿಂದಲ್ಲದೆ ಸರ್ವಮುಖದೋರದು

ಈ ಸೃಷ್ಟಿಯ ನಿಯಮವನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ, ನಿಸರ್ಗದ ಪ್ರತಿಯೊಂದು ವಸ್ತುವಿನ ಚಲನಶೀಲತೆ ಇನ್ನೊಂದರ ಮೇಲೆ ನಿರ್ಭರವಾಗಿರುವುದು ಕಂಡು ಬರುತ್ತದೆ. ಕೆಲವೊಮ್ಮೆ ಆಗುವ ವಿಕೋಪಗಳನ್ನು ಹೊರತುಪಡಿಸಿ, ಸೃಷ್ಟಿಯ ಎಲ್ಲಾ ಕ್ರಿಯೆಗಳು ಒಂದಕ್ಕೊಂದು ಪೂರಕವಾಗಿದೆ. ಈ ಜಗತ್ತು ಏಕತಾನತೆಯಿಂದ ಮುಂದುವರಿಯುತ್ತಿರುವುದರ ಗುಟ್ಟು ಇದೇ. ಇದಕ್ಕೆ ಸುಂದರವಾದ ಒಂದು ಉದಾಹರಣೆ ಎಂದರೆ ‘ಜಲ ಚಕ್ರ’ (‘Water Cycle’). ಭೂಮಿಯ ಮೇಲಿರುವ ನೀರು ಆವಿಯಾಗಿ, ಆಕಾಶದಲ್ಲಿ ಮೋಡವಾಗಿ, ಶೇಖರಿಸಿಟ್ಟುಕೊಂಡು, ಮತ್ತೆ ಮಳೆಯಾಗಿ ಭೂಮಿಯ ಮೇಲೆಯೇ ಸುರಿಯುತ್ತದೆ.

ಪಂಚಭೂತಗಳಾದ ಪೃಥ್ವಿ, ಅಪ್ಪು, ಅಗ್ನಿ, ವಾಯು, ಆಕಾಶ ಎಲ್ಲವೂ ಒಂದಕ್ಕೊಂದು ಪೂರಕ. ಹಾಗೆಯೇ ಮನುಷ್ಯನಲ್ಲಿರುವ ಪಂಚೇಂದ್ರಿಯಗಳೂ ಒಂದಕ್ಕೊಂದು ಪೂರಕ. ಒಂದು ಹೊಸ ಸೃಷ್ಟಿಯಾಗಬೇಕಾದರೆ ಇನ್ನೊಂದರ ಸಂಗ ಅತ್ಯವಶ್ಯಕ ಎನ್ನುವುದು ಒಪ್ಪಲೇ ಬೇಕಾದ ಮಾತು. ಆ ಕಾರಣಕ್ಕಾಗಿ ಮನುಷ್ಯನ ಅಂಗಾಂಗಗಳು ಒಂದಕ್ಕೊಂದು ಪೂರಕವಾಗಿ ಸಹಕರಿಸುವುದನ್ನು ಗಮನಿಸಬಹುದು. ಅದೇ ರೀತಿ ಪ್ರಕೃತಿಯೂ ಇರುವುದನ್ನು ನೋಡುತ್ತೇವೆ. ಹೀಗಿರುವಾಗ ಮನುಷ್ಯ ಮತ್ತು ಪ್ರಕೃತಿಯೂ ಒಂದಕ್ಕೊಂದು ಸಹಕಾರಿಯಾಗಿರುವುದು ನಿಸರ್ಗದ ನಿಯಮ.

ಈ ಜಗತ್ತನ್ನು ಆವರಿಸಿರುವ ಪಂಚ ಭೂತಗಳು ಮತ್ತು ನಮ್ಮೊಳಗೇ ಇರುವ ಪಂಚ ಇಂದ್ರಿಯಗಳು, ಪ್ರತಿಯೊಂದರ ಅನುಭವ ಆಗಬೇಕಾದರೆ, ಪ್ರತಿ ಹಂತದಲ್ಲೂ ಸಂಗ ಇರಲೇ ಬೇಕು. ಅದಕ್ಕಾಗಿಯೇ ಅಕ್ಕ ಹೇಳುವುದು, ಸಂಗವಿಲ್ಲದಿದ್ದರೆ ಸರ್ವ ಸುಖ ಅನುಭವಿಸಲು ಸಾಧ್ಯವಿಲ್ಲ.

ಚೆನ್ನಮಲ್ಲಿಕಾರ್ಜುನಯ್ಯಾ ನಿಮ್ಮ ಶರಣರ ಅನುಭಾವ ಸಂಗದಿಂದಾನು ಪರಮಸುಖಿಯಾದೆನಯ್ಯಾ

ಮೇಲಿನ ಎರಡು ಸಾಲುಗಳಲ್ಲಿ ಎರಡು ಪದಗಳು ಪ್ರಮುಖವಾಗುತ್ತವೆ. ಅವು ‘ಅನುಭಾವ’ ಮತ್ತು ‘ಪರಮಸುಖಿ’.
‘ಅನುಭವ ಮತ್ತು ಅನುಭಾವ’ ಹಾಗೂ ‘ಸುಖಿ ಮತ್ತು ಪರಮಸುಖಿ’ ಈ ಪದಗಳನ್ನು ಉಚ್ಛರಿಸುವಾಗ ಬಹಳ ಹತ್ತಿರವೆನಿಸುತ್ತವೆ. ಆದರೆ ಅರ್ಥದಲ್ಲಿ ಅಜಗಜಾಂತರ.

‘ಅನುಭವ ಮತ್ತು ಅನುಭಾವ’ಗಳ ವ್ಯತ್ಯಾಸವನ್ನು ಗ್ರಹಿಸುವ ಪ್ರಯತ್ನ ಮಾಡಿದರೆ, ಪಂಚೇಂದ್ರಿಯಗಳಾದ ಕಣ್ಣು, ಕಿವಿ, ಮೂಗು, ಬಾಯಿ, ಚರ್ಮದ ಮೂಲಕ ಲಭ್ಯವಾಗುವ ಸುಖ, ದುಃಖ, ಕಷ್ಟ, ಕಾರ್ಪಣ್ಯಗಳು ‘ಅನುಭವ’ ಎನಿಸಿಕೊಳ್ಳುತ್ತವೆ. ಹೀಗೆ ಮನುಷ್ಯನಿಗಾಗುವ ಸಂತೋಷ ಪಂಚೇಂದ್ರಿಯಗಳ ಮುಖಾಂತರ ಅನುಭವಕ್ಕೆ ಬರುತ್ತದೆ, ಇದು ಸುಖ. ಈ ಸುಖವು ‘ಕ್ಷಣಿಕ’ ಆಗಿರುತ್ತದಲ್ಲದೆ, ಅದರಲ್ಲಿ ನಿರಂತರತೆ ಕಾಪಾಡಿಕೊಳ್ಳಲು ಸಾಧ್ಯವಾಗುವುದಿಲ್ಲ.

ಅದೇ ರೀತಿ ಈ ಪಂಚೇಂದ್ರಿಯಗಳನ್ನು ದಾಟಿ ಅಂತರಂಗ ಬಹಿರಂಗದ ದರ್ಶನವಾಗುವ ಒಂದು ಸ್ಥಿತಿ ಇರುತ್ತದೆ, ಅದು ಅನುಭಾವ. ಅತ್ಮ ಪರಮಾತ್ಮಗಳ ಮಿಲನದ ದರ್ಶನ. ಇದನ್ನು ಶರಣರು ‘ಬಯಲು’ ಎಂದು ಕರೆದರು. ಶರಣರ ‘ಲಿಂಗಾಂಗ ಸಾಮರಸ್ಯ’ ಇಷ್ಟಲಿಂಗದ ಪೂಜೆಯ ಫಲವಾಗಿ ಕಂಡು ಬರುತ್ತದೆ. ಈ ರೀತಿ ಅಂತರಂಗ ಬಹಿರಂಗದ ಮೂಲಕ ಬಯಲ ದರ್ಶನವಾಗಿ, ‘ಅರಿವೆ ಗುರು’ ವಾಗಿ, ಸಾಮರಸ್ಯದ ಸುಖ ಪ್ರಾಪ್ತವಾದಾಗ, ಅದು ಅನಂತ, ಅನನ್ಯ, ಅಗಾಧ. ಅದೇ ಪರಮಸುಖ.

ಇಂತಹ ಅನುಭಾವ ಮತ್ತು ಪರಮಸುಖವನ್ನು ಅಕ್ಕ ಶರಣರ ಸಂಗದ ದಿವ್ಯತೆಯಲ್ಲಿ ಕಂಡುಕೊಳ್ಳುತ್ತಾಳೆ. ಅದನ್ನೇ ಈ ಸಾಲುಗಳಲ್ಲಿ ಕಾಣುತ್ತೇವೆ.

ಸ್ವತಃ ಬಸವಣ್ಣ ಶರಣರ ಸಂಗವನ್ನು ತನ್ನ ವಚನದಲ್ಲಿ ಹೀಗೆ ವರ್ಣಿಸುತ್ತಾನೆ,
ಮಡಕೆಯ ಮಾಡುವಡೆ ಮಣ್ಣೆ ಮೊದಲು
ತೊಡಿಗೆಯ ಮಾಡುವಡೆ ಹೊನ್ನೆ ಮೊದಲು
ಶಿವಪಥವನರಿವಡೆ ಗುರುಪಥವೆ ಮೊದಲು
ಕೂಡಲಸಂಗಮದೇವರನರಿವಡೆ
ಶರಣರ ಸಂಗವೆ ಮೊದಲು’
ಅನುಭಾವ ಮತ್ತು ಪರಮಸುಖದ ಗುಟ್ಟು ಶರಣರ ಸಂಗದಲ್ಲಿ ಅಡಗಿದೆ ಎನ್ನುವ ಮಾತನ್ನು ಪನರ್ ಮನನವಾಗಿಸುವ ವಚನವಿದು.

ಸಂಗಗಳು ಯಾವತ್ತೂ ಎರಡಿರುತ್ತವೆ ಎನ್ನುವ ಮಾತಿಗೆ ಬಸವಣ್ಣನ ಇನ್ನೊಂದು ವಚನ ಸಾಕ್ಷಿ,
ಸಾರ ಸಜ್ಜನರ ಸಂಗ ಲೇಸು ಕಂಡಯ್ಯಾ,
ದೂರ ದುರ್ಜನರ ಸಂಗವದು ಭಂಗವಯ್ಯಾ
ಸಂಗವೆರಡುಂಟು
ಒಂದ ಹಿಡಿ ಒಂದ ಬಿಡು
ಮಂಗಳಮೂರ್ತಿ ನಮ್ಮ ಕೂಡಲಸಂಗನ ಶರಣರು’
ಹೀಗೆ ಇಡೀ ಜಗತ್ತಿನಲ್ಲಿ ಶರಣರ ಸಂಗ ಅತ್ಯಂತ ಶ್ರೇಷ್ಟ ಮತ್ತು ಉತ್ಕೃಷ್ಟವಾದುದು. ಇದನ್ನೇ ಅಕ್ಕ ಉಡುತಡಿಯಿಂದ ಕಲ್ಯಾಣಕ್ಕೆ ಬಂದು ತಾನು ಅನುಭಾವಿಸಿ, ನಮಗೂ ಉಣಬಡಿಸಿದ ವಚನ. ಶರಣರು ಅರಿಷಡ್ವರ್ಗಗಳನ್ನು ಮೀರಿ ನಿಂತವರು. ಇದನ್ನು ಅರಿಯಲು ಶರಣರ ವಚನ ಸಾಹಿತ್ಯದ ಆಳಕ್ಕೆ ಇಳಿಯುವ, ಇನ್ನೂ ಆಳಕ್ಕೆ ಇಳಿಯುವ ಪ್ರಯತ್ನ ಮಾಡೋಣ ಬನ್ನಿ.

ಸಿಕಾ

Don`t copy text!