ಸೋಮವಾರದ ವಿಶೇಷ ಲೇಖನ ಮಾಲೆ
ಆಪ್ತ ಕಾರ್ಯದರ್ಶಿ ಹಡಪದ ಅಪ್ಪಣ್ಣ
ಹಡಪದ ಅಪ್ಪಣ್ಣ, ಮಹಾನುಭಾವ ಬಸವಣ್ಣನವರ ಆಪ್ತ ಕಾರ್ಯದರ್ಶಿ ಮತ್ತು ಅನುಭವ ಮಂಟಪದ ಪ್ರಧಾನ ಕಾರ್ಯದರ್ಶಿ. ಅಪ್ಪಣ್ಣನವರ ಗಮನಕ್ಕೆ ಬರದೆ ಮತ್ತು ಅಪ್ಪಣ್ಣನವರ ಅಪ್ಪಣೆಯಿಲ್ಲದೆ ಅಂದಿನ ಕಲ್ಯಾಣದಲ್ಲಿ ಒಂದು ಹುಲ್ಲುಕಡ್ಡಿಯೂ ಅಲುಗಾಡುತ್ತಿರಲಿಲ್ಲ ಎಂಬಂತಹ ಪರಿಸ್ಥಿತಿಯಿದ್ದರೂ ಅಪ್ಪಣ್ಣ ಯಾವಾಗಲೂ ಹಿನ್ನೆಲೆಯಲ್ಲಿಯೇ ಉಳಿಯಲು ಯತ್ನಿಸುತ್ತಿದ್ದನು. ಮಹಾಮಂತ್ರಿ ಬಸವಣ್ಣನವರನ್ನು ಎಲ್ಲ ಸಂದರ್ಭಗಳಲಿಯೂ ಎಲ್ಲ ಸನ್ನಿವೇಶಗಳಲ್ಲಿಯೂ ನೆರಳಿನ0ತೆ ಅನುಸರಿಸಿಧವನೆಂದರೆ ಹಡಪದ ಅಪ್ಪಣ್ಣ.
ಹಾಗೆಂದು ಹಡಪದ ಅಪ್ಪಣ್ಣ ಬಸವಣ್ಣನವರ ಸ್ತುತಿ-ಪಾಠಕನೂ ಆಗಿರಲಿಲ್ಲ ; ಹೊಗಳು ಭಟ್ಟ0ಗಿಯೂ ಆಗಿರಲಿಲ್ಲ. ಸಂಸ್ಕೃತ ನಾಟಕಗಳಲ್ಲಿನ ರಾಜರ ಸ್ನೇಹಿತರಂತೆ ವಿಧೂಷಕನೂ ನರ್ಮಸಚಿವನೂ ಆಗಿರಲಿಲ್ಲ. ಸ್ವಧರ್ಮ ಪರಾಯಣತೆಯಿಂದಲೂ ಕರ್ತವ್ಯ ಪಾಲನೆಯಿಂದಲೂ ತನ್ನ ವ್ಯಕ್ತಿತ್ವವನ್ನು ಕಾಪಾಡಿಕೊಂಡಿದ್ದನು
ಬಸವಣ್ಣ ಮತ್ತು ಚೆನ್ನಬಸವಣ್ಣ ಇಬ್ಬರೂ ಆತನ ಆರಾಧ್ಯ ಪುರುಷರಾಗಿದ್ದರು. ಅಂತೆಯೇ ತನ್ನ
ವಚನಾ0ಕಿತವನ್ನು ” ಬಸವ ಪ್ರಿಯ ಕೂಡಲ ಚೆನ್ನಬಸವಣ್ಣ “ ಎಂದು ಇರಿಸಿಕೊಂಡಿದ್ದನು. ಈ ಇಬ್ಬರಲ್ಲದೆ
ತನ್ನ ದೀಕ್ಷಾಗುರು ಚೆನ್ನಮಲ್ಲೇಶ್ವರರನ್ನೂ ಹಡಪದ ಅಪ್ಪಣ್ಣ ಬಹಳ ಸಲ ಸ್ಮರಿಸಿದ್ದಾನೆ. ಈಗ ಅವರ 243 ವಚನಗಳು ಲಭಿಸಿವೆ.
ಹಡಪದ ಅಪ್ಪಣ್ಣ ಒಳ್ಳೆಯ ಅನುಭಾವಿಯೂ , ಸಮರ್ಥ ರಾಯಭಾರಿಯೂ ಆಗಿದ್ದನೆ0ಬುದು ಅಲ್ಲಮಪ್ರಭುಗಳು ಮೊಟ್ಟಮೊದಲನೆಯ ಬಾರಿಗೆ ಬಸವಣ್ಣನವರ ಮಹಾಮನೆಗೆ ಬಂದ ಪ್ರಸಂಗದಿಂದ ಗೊತ್ತಾಗುತ್ತದೆ. ಈ ಸಂದರ್ಭದಲ್ಲಿ ಬಂದವರನ್ನು ಕರೆತರುವಲ್ಲಿ ತನ್ನದೇ ನಡವಳಿಕೆ ಸರಿ ಇರಲಿಕ್ಕಿಲ್ಲ ಎಂದು ಭಾವಿಸಿ ಬಸವಣ್ಣನವರಿಗೆ ಹೀಗೆ ಅರಿಕೆ ಮಾಡಿಕೊಂಡನು.
ನಿಮ್ಮ ಶರಣರ ಮನೆಯ ಸಲಿಗೆಯ ಬಂಟ ನಾನಲ್ಲಯ್ಯ
ತನುಮನಧನ ಹಿಂದಿಕ್ಕಿಕೊಂಡ ವಂಚಕ ನಾನಯ್ಯಾ
ನಿಮ್ಮ ಶರಣರು ಎನ್ನಿಚ್ಛೆಗೆ ಬಪ್ಪರೇ ?……
ಹಣೆಯ ಹೊಣೆಯ ತೋರಿ ಉದರವ ಹೊರೆವ ಹಡಪಿಗ ನಾನಯ್ಯ
ನೀವೇ ಹೋಗಿ ಬಿಜಯ0ಗೈಸಿಕೊಂಡು ಬಾರಾ ಸಂಗನ ಬಸವಣ್ಣಾ !
ಈ ಪ್ರಸಂಗದಿಂದ ತಿಳಿದುಕೊಳ್ಳಬೇಕಾದುದಿಷ್ಟೆ ; ಹಡಪದ ಅಪ್ಪಣ್ಣನು ರೋಮ ರೋಮಗಳಲ್ಲಿಯೂ ಸ್ವಾಮಿಭಕ್ತಿಯನ್ನು ತುಂಬಿಕೊಂಡು ಎಂತಹ ಹೊಣೆಯರಿತ ಆಪ್ತ ಸಹಾಯಕನಾಗಿದ್ದನೆಂಬುದನ್ನು.
ಅನುಭವ ಮಂಟಪಕ್ಕೆ ಯಾರು ಯಾರು ಬಂದಿದ್ದಾರೆ ? ಯಾರು ಯಾರು ವಿಳಂಬದಿಂದ ಬರುವವರಿದ್ದಾರೆ , ಅವರ ಬರವಿಗೆ ಕಾಯಬೇಕೋ , ಕಾರ್ಯಕಲಾಪ ಆರಂಭಿಸಬೇಕೋ ಎಂಬುದನ್ನು ನಿರ್ಧರಿಸುವುದು ಅಪ್ಪಣ್ಣನದೇ ಕೆಲಸ. ಮೋಳಿಗೆ ಮಾರಯ್ಯನವರಂತಹ ಹಿರಿಯ ಅನುಭಾವಿಗಳು ಅನುಭವಮಂಟಪಕ್ಕೆ ಬಂದಿರದಿದ್ದರೆ ಅಂಥವರ ಮಠಕ್ಕೆ ಎಡತಾಕಲೂ ಅಪ್ಪಣ್ಣ ಹಿಂಜರಿಯುತ್ತಿರಲಿಲ್ಲ. ಬಸವಣ್ಣನವರು ಅಲ್ಲಮಪ್ರಭುಗಳಿಗೆ ಮಾತ್ರ ಪ್ರಾಧಾನ್ಯತೆ ಕೊಡುತ್ತಾರೆಂದು ಉಳಿದ ಜಂಗಮರು ಮುನಿಸುಗೊಂಡರೆ ಅವರನ್ನು ಸಮಾಧಾನ ಮಾಡಿ ಕರೆತರುವವನೂ ಅಪ್ಪಣ್ಣನೇ. ಹೀಗಾಗಿ ಬಸವಣ್ಣನವರ ವೈಯಕ್ತಿಕ ಜೀವನದಲ್ಲಿಯೂ , ಕೌಟು0ಬಿಕ ಬದುಕಿನಲ್ಲಿಯೂ, ಸಾರ್ವಜನಿಕ ಚಟುವಟಿಕೆಗಳಲ್ಲಿಯೂ ಆತ ಅನಿವಾರ್ಯವಾದ ವ್ಯಕ್ತಿಯಾಗಿದ್ದನು.
ಕಲ್ಯಾಣದಲ್ಲಿ ಕ್ರಾಂತಿ ಸನ್ನಾಹವಾಗಿ ಬಸವಣ್ಣನವರು ರಾಜಾಜ್ಞೆಯಂತೆ ಕಲ್ಯಾಣದಿಂದ ತೆರಳಲು ಸಿದ್ಧರಾದಾಗ ನೆರಳಿನಂತೆ ಅನುಸರಿಸಿದವನು ಹಡಪದ ಅಪ್ಪಣ್ಣ. ಕೂಡಲ ಸಂಗಮಕ್ಕೆ ತಲುಪಿದ ನಂತರ ಲಿಂಗಾ0ಗ ಸಾಮರಸ್ಯ ವಿಧಾನವನ್ನು ನೀಲಮ್ಮನವರಿ0ದ ತಿಳಿದುಕೊಳ್ಳಬೇಕೆನಿಸುತ್ತದೆ ಬಸವಣ್ಣನವರಿಗೆ. ತಮ್ಮ ಮನದಿಚ್ಛೆಯನ್ನು ತಿಳಿಸದೆ ನೀಲಮ್ಮನವರನ್ನು ಕರೆಕಳಿಸುತ್ತಾರೆ
ಒಟ್ಟಿಗೆ ಲಿಂಗೈಕ್ಯರಾಗಲು ಕರೆಕಳುಹಿರಬೇಕೆಂದು ಭಾವಿಸಿದ ನೀಲಮ್ಮನವರು ಅಲ್ಲಿದ್ದ ಸಂಗಯ್ಯ ಇಲ್ಲಿಲ್ಲವೇ ? ಎಂದು ಪ್ರಶ್ನಿಸುತ್ತಾರೆ. ” ನಾನಾರ ಸಾರುವನೆಂದು ಚಿಂತಿಸಲೇಕಯ್ಯಾ ? ಎಂದು ಕೇಳಿ ಕಲ್ಯಾಣವನ್ನು ಬಿಡಲು ನಿರಾಕರಿಸಿದರೂ ಕೊನೆಗೆ ಹಡಪದ ಅಪ್ಪಣ್ಣನವರ ಆಗ್ರಹಕ್ಕೆ ಮಣಿದು ಕೂಡಲ ಸಂಗಮಕ್ಕೆ ಹೊರಡಲು ತಯಾರಾಗುತ್ತಾರೆ.
ನೀಲಮ್ಮ ಮತ್ತು ಹಡಪದ ಅಪ್ಪಣ್ಣ
ಮಾರ್ಗದಲ್ಲಿ ಕೂಡಲಸಂಗಮ ಸಮೀಪದ ತಂಗಡಗಿವರೆಗೆ ಬಂದು ವಿಶ್ರಮಿಸಿರುತ್ತಾರೆ. ಆಚೆ ದಡದಲ್ಲಿರುವುದೇ ಕೂಡಲಸಂಗಮ. ಬಹುಶಃ ನದಿ ತುಂಬಿ ಹರಿಯುತ್ತಿತ್ತೋ ಅಥವಾ ನೀಲಮ್ಮನವರೇ ಪತಿಯೊಂದಿಗಿನ ಲಿಂಗೈಕ್ಯಕ್ಕಿಂತ ಮುತೈದೆ ಲಿಂಗೈಕ್ಯ ಶ್ರೇಷ್ಠವೆಂದು ಭಾವಿಸಿದರೋ ಅಪ್ಪಣ್ಣ ಕಣ್ಣಾರೆ ನೋಡು ನೋಡುತ್ತಿರಲು ನೀಲಮ್ಮ ತಮ್ಮ ಇಷ್ಟಲಿಂಗದಲ್ಲಿ ಅಡಗುತ್ತಾರೆ.
ಈ ವಾರ್ತೆಯನ್ನು ಅಣ್ಣನವರಿಗೆ ಬೇಗನೆ ತಿಳಿಸಬೇಕೆಂದು ಕೃಷ್ಣಾ ನದಿಯನ್ನು ಈಜಿ ಹಡಪದ ಅಪ್ಪಣ್ಣ ಕೂಡಲಸಂಗಮಕ್ಕೆ ಬರುತ್ತಾನೆ. ಲಿಂಗಾ0ಗ ಸಾಮರಸ್ಯದ ಯಾವ ಯೌಗಿಕ ವಿಧಾನಕ್ಕೋಸುಗ ನೀಲಮ್ಮನವರನ್ನು ಕರೆಕಳುಹಿದ್ದರೋ ಅದನ್ನು ಅರುಹದೆ ಬಯಲಾದಳಲ್ಲಾ ಎಂದು ಬಸವಣ್ಣನವರು ವಿಷಾದಪಟ್ಟರೂ ಲಿಂಗದಲ್ಲಿ ಅಡಗುವ ವಿಧಾನವನ್ನು ಅಪ್ಪಣ್ಣ ತಿಳಿದುಕೊಂಡಿರಬಹುದೆಂದು ಆತನನ್ನು ಕೇಳಿದರು. ಒಂದು ಉಲ್ಲೇಖದ ಪ್ರಕಾರ ತಮ್ಮ ಇಷ್ಟಲಿಂಗದಲ್ಲಿ ಸಮರಸಗೊಳ್ಳುವ ರೀತಿಯನ್ನು ಮಹಾನುಭಾವ ಹಡಪದ ಅಪ್ಪಣ್ಣ ತಮ್ಮ ಇಷ್ಟಲಿಂಗದಲ್ಲಿ ಸಮರಸಗೊಂಡೇ ಪ್ರಾತ್ಯಕ್ಷಿಕೆ ತೋರಿದರೆಂದು ಹೇಳಲಾಗುತ್ತದೆ. ತಮಗೋಸುಗ ಸಂಪೂರ್ಣ ಪ್ರಾಣಾರ್ಪಣೆಯನ್ನೇ ಮಾಡಿದ ಹಡಪದ ಅಪ್ಪಣ್ಣನ ತ್ಯಾಗಜೀವನಕ್ಕೆ ಮನ ಮರುಗಿದ ಬಸವಣ್ಣನವರು ಅವರ ಸಮಾಧಿಯನ್ನು ಲಿಂಗಾ0ಗ ಸಾಮರಸ್ಯದ ಗುರು ನೀಲಮ್ಮನವರ ಸಮಾಧಿ ಸಮೀಪದಲ್ಲಿಯೇ ಮಾಡಬೇಕೆಂದು ಆದೇಶಿಸಿ ತಾವು ಕೂಡಲ ಸಂಗಮದಲ್ಲಿಯೇ ಅಪ್ಪಣ್ಣನು ತಿಳಿಸಿದ ಪ್ರಕಾರ ಲಿಂಗಾ0ಗ ಸಾಮರಸ್ಯ ಸಾಧಿಸಿದರೆಂದು ತಿಳಿಸಲಾಗಿದೆ.
ಹಡಪದ ಅಪ್ಪಣ್ಣನ ಪತ್ನಿ ಲಿಂಗಮ್ಮ ಕೂಡ ಉತ್ತಮ ವಚನಕಾರಳು. ಹಡಪದ ಲಿಂಗಮ್ಮನ ” ಭೋಧೇಯ ವಚನಗಳು ” ಎಂದು ಕರೆಸಿಕೊಂಡಿವೆ. ” ಅಪ್ಪಣ್ಣಪ್ರಿಯ ಚೆನ್ನಬಸವಣ್ಣ ” ಎಂಬ ಅಂಕಿತದಲ್ಲಿ 113 ವಚನಗಳು ಲಭಿಸಿವೆ.
ವಚನ ವಿಶ್ಲೇಷಣೆ
ಆರೂ ಇಲ್ಲದ ಅರಣ್ಯದೊಳಗೆ ನಾನಡಿಯಿಟ್ಟು ನಡೆಯುತ್ತಿರೆ
ಮುಂದೆ ಮಹಾಸರೋವರವ ಮತ್ತದರೊಳಗೆ ಮೃಗವ ಕಂಡೆ,
ಆ ಮೃಗಕ್ಕೆ ಕೊಂಬು0ಟು, ತಲೆಯಿಲ್ಲ, ಬಾಯಿಯು0ಟು, ಕಣ್ಣಿಲ್ಲ ,
ಕೈಯು0ಟು, ಬೆರಳಿಲ್ಲ , ಕಾಲು0ಟು
ಹೆಜ್ಜೆಯಿಲ್ಲ
ಅದ ಕಂಡು ನಾನು ಹವ್ವನೆ ಹಾರಿ ಹೆದರಿ ಕೆಳಗೆ ಬಿರ್ದೆನಯ್ಯಾ !
ಎನ್ನ ಹೆತ್ತ ತಾಯಿ ಬಂದು ಎತ್ತಿ ಕುಳ್ಳಿರಿಸಿ, ಚಿತ್ತ ಮೂಲಾಗ್ನಿಯ
ಒತ್ತಿ ಉರುಹಿದರೆ , ಎಲ್ಲವೂ ಸುಟ್ಟು ಬಯಲಾದವು.
ಬಟ್ಟ ಬಯಲೊಳಗೆ ಮತ್ತೆ ಮುಂದೆ ನಡೆದಾಗ
ಮತ್ತೊಂದು ಮೃಗವ ನಾ ಕಂಡೆ , ಅದಕೆ ತಲೆಯು0ಟು, ಕೊಂಬಿಲ್ಲ,
ಕಣ್ಣು0ಟು , ಬಾಯಿಯಿಲ್ಲ ; ಹಸ್ತವುಂಟು, ಕೈಯಿಲ್ಲ ; ಹೆಜ್ಜೆಯು0ಟು, ಕಾಲಿಲ್ಲ.
ಈ ಮೃಗವ ನಾನಪ್ಪಿಕೊಳ್ಳಹೋದರೆ ನಾ ಮುಟ್ಟದ ಮುನ್ನವೇ ಎನ್ನ ನುಂಗಿತ್ತು.
ನುಂಗಿದ ಮೃಗ ಲಿಂಗದೊಳಗಡಗಿತ್ತು. ಬಸವಪ್ರಿಯ ಕೂಡಲ ಚೆನ್ನಬಸವಣ್ಣ.
ಮಹಾನುಭಾವ ಬಸವಣ್ಣನವರ ಆಪ್ತ ಕಾರ್ಯದರ್ಶಿಗಳಾಗಿದ್ದ ಹಡಪದ ಅಪ್ಪಣ್ಣನವರು ಮಾಯೆ ಮತ್ತು ಜ್ಞಾನ ಅಥವಾ ಅರುಹು ಮತ್ತು ಮರಹುಗಳ ವ್ಯತ್ಯಾಸ -ವೈಶಿಷ್ಟ್ಯಗಳನ್ನು ಪ್ರಸ್ತುತ ವಚನದಲ್ಲಿ ಅದ್ಭುತವಾದ ಬೆಡಗಿನಿಂದ ನಿರೂಪಿಸುತ್ತಿರುವರು. ಆರೂ ಇಲ್ಲದ ಅರಣ್ಯದೊಳಗೆ ಎಂದರೆ ಈ ಜಗತ್ತು. ಈ ಜಗತ್ತಿನಲ್ಲಿ ಜನರೇನೋ ಬಹಳ ಸಂಖ್ಯೆಯಲ್ಲಿ ಇರುವರು. ಆದರೆ ನನ್ನವರು ಎಂಬುವವರು ಯಾರೂ ಇರುವುದಿಲ್ಲ. ಸಂಕಟಕ್ಕಾಗದವರು ಸಹಸ್ರ ಸಂಖ್ಯೆಯಲ್ಲಿ ಇದ್ದರೆ ಏನು ಉಪಯೋಗ ? ” ಆರಿಗಾರೂ ಇಲ್ಲ
ಕೆಟ್ಟವಂಗೆ ಕೆಳೆಯಿಲ್ಲ ” ಎಂದು ಬಸವಣ್ಣನವರೇ ಹೇಳಿದ್ದಾರೆ. ಇದ್ದವರೆಲ್ಲರೂ ತಮ್ಮ ಸ್ವಾರ್ಥಕ್ಕಾಗಿ ನಮ್ಮನ್ನು ಸುತ್ತುವರೆದಿರುತ್ತಾರೆ ವಿನಃ ಅವರು ನಮ್ಮವರಲ್ಲ. ಅದಕ್ಕಾಗಿಯೇ ಶರಣ ಹಡಪದ ಅಪ್ಪಣ್ಣನವರು ಈ ಜಗತ್ತಿಗೆ ಆರೂ ಇಲ್ಲದ ಅರಣ್ಯ ಎಂದು ಕರೆದಿರುವರು.
ಅರಣ್ಯದೊಳಗಿನ ಸರೋವರವೆಂದರೆ ಸಂಸಾರ. ಆ ಸರೋವರದೊಳಗಣ ಮೃಗವೇ ಮಾಯೆ ಅಥವಾ ತಾಪತ್ರಯ. ಮಾಯೆಗೆ ಕೊಂಬು0ಟು, ತಲೆಯು ಇಲ್ಲ ಎಂದರೆ ಅದು ಸಾರಾಸಾರ ವಿಚಾರ ಮಾಡದೆ ಸಿಕ್ಕಾಪಟ್ಟೆ ಇರಿಯುತ್ತದೆ. ಹೀಗಾಗಿ ಸಂಸಾರ ಸಾಗರವೆಂಬುದು ದುಃಖದ ಆಗರವಾಗಿದೆ. ನಾವು ತಪ್ಪು ಮಾಡಿದರೂ ನಾವೇ ಕಷ್ಟ ಅನುಭವಿಸುತ್ತೇವೆ. ಮತ್ತೊಬ್ಬರು ತಪ್ಪು ಮಾಡಿದರೂ ನಮಗೆ ಕಷ್ಟ ತಪ್ಪಿದ್ದಲ್ಲ. ಸುಖವೆಂಬುದು ಮಾಯೆಯ ಪ್ರತಾಪದಲ್ಲಿ ಯಾವಾಗಲೋ ಒಮ್ಮೆ ಬಂದು ಹೋಗುವ ನೆರಳು. ಆದರೆ ದುಃಖವೆಂಬುದು ಯಾವಾಗಲೂ ನಮ್ಮ ಜೊತೆಗಿರುವ0ಥದ್ದು ಯಾಕೆಂದರೆ ಮಾಯೆಗೆ ತಲೆಯಿಲ್ಲ, ಕೊಂಬು0ಟು.
ಇದೇ ರೀತಿ ಮಾಯೆಗೆ ಕೈಯು0ಟು, ಬೆರಳಿಲ್ಲವಾದ್ದರಿಂದ ಅದು ನಮ್ಮನ್ನು ಎತ್ತಿ ಹಿಡಿಯಲಾರದು. ಅದಕ್ಕೆ ಎತ್ತಿ ಒಗೆಯುವ ಕೈಚಳಕ ಗೊತ್ತೇ ಹೊರತಾಗಿ ಜೀವಿಗಳನ್ನು ನಿತ್ತರಿಸುವ ಅನುಕಂಪ ಅದಕ್ಕಿರುವುದಿಲ್ಲ. ಅದು ನಮ್ಮನ್ನು ಮುಕ್ತಿಯ ದಾರಿಗೆ ಕರೆದೊಯ್ಯಲಾರದು, ಯಾಕೆಂದರೆ ಅದಕ್ಕೆ ಬೆರಳುಗಳಿಲ್ಲ. ಕೈಹಿಡಿದು ಮುನ್ನಡೆಸೆನ್ನನು ಎಂದು ಅದಕ್ಕೆ ಪ್ರಾರ್ಥಿಸುವಂತಿಲ್ಲ .
ಅದರಂತೆ ಮಾಯೆಗೆ ಕಾಲು0ಟು, ಹೆಜ್ಜೆ ಇಲ್ಲ ಅಂದರೆ ಅದು ನಾವು ಹೋದಲ್ಲಿಗೆ ಬಂದು ಕಾಡುತ್ತಿರುತ್ತದೆ. ಅದಕ್ಕೆ ಹೆಜ್ಜೆ ಇಲ್ಲವಾದ್ದರಿಂದ ಅದು ಬಂದ ಸುಳುಹೂ ನಮಗೆ ಗೊತ್ತಾಗುವುದಿಲ್ಲ. ” ಬಿಟ್ಟೆನೆಂದರೂ ಬಿಡದೀ ಮಾಯೆ , ಬಿಡದಿದ್ದರೆ ಬೆಂಬತ್ತಿತ್ತು ಮಾಯೆ ” ಎನ್ನುವ ರೀತಿಯಲ್ಲಿ ನಮಗೆ ಸುಳುಹು ಕೊಡದೆ ಬೆನ್ನು ಹತ್ತಿಯೇ ಇರುತ್ತದೆ. ಶ್ರಮಣ0ಗೆ ಶ್ರಮಣಿಯಾಗಿ, ಶರಣನಿಗೆ ಶರಣೆಯಾಗಿ , ಯತಿಗೆ ಪರಾಕಿಯಾಗಿ , ಯೋಗಿಗೆ ಯೋಗಿಣಿಯಾಗಿ ಬೆನ್ನು ಹತ್ತಿರುತ್ತದೆ. ಇಂಥ ಕ್ರೂರ ಮಾಯೆಯಿಂದ ಹವ್ವನೆ ಹಾರಿ ಬೀಳದವರಾರು ?
ಇ0ತಹ ಸಂದಿಗ್ಧ ಪರಿಸ್ಥಿತಿಯಿಂದ ಪಾರು ಮಾಡುವವರೂ ಇದ್ದಾರೆ. ಎಂತಹ ಜಟಿಲ ಸಮಸ್ಯೆಗೂ ಪರಿಹಾರ ಉಂಟೇ ಉಂಟು. ನಾವು ಎಷ್ಟು ಅಧೋಗತಿಗಿಳಿದರೂ ಉದ್ಧರಿಸುವ
ಕರುಣಾಮೂರ್ತಿಗಳು ಬಂದೇ ಬರುತ್ತಾರೆ. ಪಾರಾಗುವ ಅಭೀಪ್ಸೆ ನಮ್ಮಲ್ಲಿ ತೀವ್ರತರ ಆಗಿರಬೇಕು ಅಷ್ಟೆ. ” ನಂಬಿಕರೆದಡೆ ಓ ಎನ್ನನೇ ಶಿವನು ? ” ಸಾಕ್ಷಾತ್ ತಾಯಿ ಸ್ವರೂಪಿಯಾದ ಶ್ರೀಗುರು ಅಂಥ ದಟ್ಟ ಅರಣ್ಯದಲ್ಲಿಯೂ ಸಿಕ್ಕೇ ಸಿಗುತ್ತಾನೆ. ಕಣ್ಣರಿಯದಿದ್ದರೂ ಕರುಳರಿಯದೇ ? ಎಂಬ ಭಾವಕ್ಕೆ ತಕ್ಕಂತೆ ನಾವು ಕಷ್ಟದಲ್ಲಿದ್ದುದನ್ನು ತಿಳಿದು ಮತ್ತು ಮಾಯೆಯ ದವಡೆಗೆ ಸಿಲುಕಿದುದನ್ನು ಅರಿದು ಕರುಣಾ ಮೂರ್ತಿಯಾದ ಶ್ರೀಗುರುವು ನಾವಿದ್ದಲ್ಲಿಗೆ ಬರುತ್ತಾನೆ. ಆತನು ಬಂದು ಚಿತ್ತದ
ಮೂಲ ಅಗ್ನಿಯನ್ನು ಎಂದರೆ ನಮ್ಮಲ್ಲಿ ಅಡಕವಾಗಿರುವ ತಿಳಿವಿನ ಜ್ಯೋತಿಯನ್ನು ಬೆಳಗಿಸುತ್ತಾನೆ. ಸಮರ್ಥ ಗುರುವಾದವನು ಮಾಯೆಯ ಸಂಕಷ್ಟಗಳಲ್ಲಿ ದಗ್ಧರಾದ ನಮಗೆ ಹೊಸದಾಗಿ ಅವಯವಗಳನ್ನಾಗಲಿ
ಯಂತ್ರಗಳನ್ನಾಗಲಿ ನಮಗೆ ಜೋಡಿಸುವುದಿಲ್ಲ. ಕವಿದ ಮುಸುಕನ್ನು ಸರಿಸಿ ಸತ್ಯ ಯಾವುದು ? ಮಿಥ್ಯ ಯಾವುದು ? ಎಂಬುದನ್ನು ನಮಗೆ ಹೇಳಿಕೊಡುತ್ತಾನೆ. ಇಷ್ಟು ದಿನ ಮಿಸುಕಾಡದಂತೆ ಬಿಗಿಯಾಗಿದ್ದ ಬಂಧನಗಳೆಲ್ಲವೂ ಗುರುಕೃಪೆಯಿಂದ ತಾನಾಗಿ ಕಳಚಿ ಬೀಳುತ್ತವೆ. ನೀರಿನಲ್ಲಿರುವ ತಾವರೆಯಂತೆ , ನಾಲಿಗೆಯ ಮೇಲಿರುವ ತುಪ್ಪದಂತೆ ಸಂಸಾರದಲ್ಲಿ ಇದ್ದರೂ ಇರದಂತೆ ಜೀವನ ಸಾಗಿಸುವ ಉಪಾಯವನ್ನು ಹೇಳಿಕೊಟ್ಟಾಗ ನಮ್ಮ ಭವಾರಣ್ಯವೆಂಬುದು ತಾನೇ ಸುಟ್ಟು ಭಸ್ಮವಾಗುತ್ತದೆ.
ಗುರು ಕಾರುಣ್ಯ ಸಹಿತ ಬಟ್ಟಬಯಲಲ್ಲಿ ನಡೆದಾಗ ಎದುರಾಗುವ ಮತ್ತೊಂದು ಮೃಗವೆಂದರೆ ಅರುಹು ಅಥವಾ ಸಮ್ಯಕ್ ಜ್ಞಾನ. ಅದಕ್ಕೆ ತಲೆಯಿರುತ್ತದೆ, ಕೊಂಬುಗಳಿರುವುದಿಲ್ಲ. ಜ್ಞಾನದ ಬಲದಿಂದ ಅಜ್ಞಾನದ ಕೇಡಾಗುತ್ತದೆ ವಿನಹ ಜ್ಞಾನದಿಂದ ಘಾಸಿಗೊಳಗಾದವರು ಯಾರೂ ಇಲ್ಲ. ಜ್ಞಾನವು ನಮಗೆ ಸದ್ ಸದ್ವಿವೇಚನಾ ಶಕ್ತಿಯನ್ನು ನೀಡುವುದರಿಂದ ಒಮ್ಮೊಮ್ಮೆ ಕಷ್ಟ ಬಂದರೂ ಅವು ಕಷ್ಟವೆಂದು ಅನಿಸುವುದಿಲ್ಲ. ಗುರುವು ನಮಗೆ ಪ್ರಸಾದ ಭಾವನೆಯನ್ನು ಜಾಗೃತಗೊಳಿಸಿರುತ್ತಾನೆಯಾದುದರಿಂದ ” ಸುಖ ಬಂದರೆ ಪುಣ್ಯದ ಫಲವೆನ್ನೆನು , ದುಃಖ ಬಂದರೆ ಪಾಪದ ಫಲವೆನ್ನೆನು ” ಎಂಬ ಧೈರ್ಯ ನಮ್ಮಲ್ಲಿ ಬಂದು , ಕುಸಿದು ಬೀಳುವ ಪ್ರಶ್ನೆಯೇ ಉಧ್ಬವಿಸುವುದಿಲ್ಲ .
ಜ್ಞಾನಕ್ಕೆ ಕಣ್ಣು0ಟು, ಬಾಯಿಯಿಲ್ಲ ಎಂಬ ವರ್ಣನೆ ಬಹಳ ಮಾರ್ಮಿಕವಾಗಿದೆ. ನಮಗೆ ಒಪ್ಪು ಯಾವುದು , ತಪ್ಪು ಯಾವುದು ಎಂಬುದು ಸರಿಯಾಗಿ ಕಾಣಬರುತ್ತದೆ . ನಮ್ಮಲ್ಲಿ ಜ್ಞಾನ ಅಳವಟ್ಟಿರುವುದರಿಂದ ನಿಜವಾದ
ಆಪತ್ತಿಗರಾರು ? ನಮಗೆ ಆಪತ್ತು ತರುವವರಾರು ಎಂಬುದು ಸ್ಪಷ್ಟವಾಗಿ ಗೋಚರಿಸುತ್ತಿರುವುದರಿಂದ ಎಡಹಿ ಬೀಳುವ ಪ್ರಶ್ನೆಯೇ ಇಲ್ಲ. ಜ್ಞಾನಕ್ಕೆ ಬಾಯಿಯಿಲ್ಲವೆಂದರೆ ಜ್ಞಾನಿಯಾದವನು ಮೌನಿಯಾಗುತ್ತಾನೆ. ಅಜ್ಞಾನಿಗಳೇ ಬಡಬಡಿಸುತ್ತಾರೆ ವಿನಃ ಜ್ಞಾನಿಗಳಾದವರು ತುಂಬಿದ ಸರೋವರದಂತೆ ಶಾಂತರಾಗಿರುತ್ತಾರೆ.
ಇದೇ ರೀತಿ ಜ್ಞಾನಕ್ಕೆ ಹಸ್ತವುಂಟು, ಕೈಯಿಲ್ಲವೆಂದರೆ ಅದು ನಮ್ಮನ್ನು ಎತ್ತಿ ಹಿಡಿಯುತ್ತದೆ, ಎತ್ತಿ ಹಿಡಿದ ಅನುಭವ ನಮಗಾಗುತ್ತದೆ. ಜ್ಞಾನಕ್ಕೆ ಕೈಯಿಲ್ಲವಾದ್ದರಿಂದ ಕೈಕೊಡುವ ಪ್ರಶ್ನೆಯೂ ಇಲ್ಲ , ಕೈ ಬಿಡುವ ಪ್ರಶ್ನೆಯೂ ಇಲ್ಲ. ಒಂದು ಕೈ ನೋಡುವ ಪ್ರಶ್ನೆಯೂ ಇಲ್ಲ. ನಮ್ಮ ಮೇಲೆ ಕೈ ಮಾಡುವ ಪ್ರಶ್ನೆಯಂತೂ ಇಲ್ಲವೇ ಇಲ್ಲ.
ಜ್ಞಾನಕ್ಕೆ ಹೆಜ್ಜೆಯು0ಟು, ಕಾಲಿಲ್ಲವೆಂದರೆ ನಮ್ಮ ಜ್ಞಾನದ ಮಟ್ಟಕ್ಕನುಗುಣವಾಗಿ ನಮಗೆ ಸತ್ಫಲಗಳು ದೊರೆಯುತ್ತ ಹೋಗುತ್ತವೆ. ಅದನ್ನು ಆರಾಧಿಸಿದಷ್ಟು ಹೆಚ್ಚು ಹೆಚ್ಚು ಫಲಗಳು ದೊರೆಯುತ್ತವೆ. ಅದಕ್ಕೆ ಕಾಲಿಲ್ಲವಾದ್ದರಿಂದ ಅದು ನಮ್ಮನ್ನು ಬಿಟ್ಟು ಹೋಗುವುದೇ ಇಲ್ಲ. ಒಮ್ಮೆ ಪ್ರಾಪ್ತ ಮಾಡಿಕೊಂಡರೆ ಸದಾ ನಮ್ಮ ಜೊತೆ ಉಳಿದಿರುತ್ತದೆ. ಹಂಚಿದಷ್ಟು ದ್ವಿಗುಣವಾಗುತ್ತದೆ . ಲಕ್ಷ್ಮಿ ಚಂಚಲೆ, ಒಂದು ಕಡೆ ನೆಲಸದವಳು, ಆದರೆ ಸರಸ್ವತಿ ಕಾಲಿಲ್ಲದವಳು, ಎಲ್ಲಿಯೂ ಹೋಗುವುದಿಲ್ಲ ಎಂಬುದು ಇದೇ ಅರ್ಥದಲ್ಲಿಯೇ.
ಇಂಥ ಜ್ಞಾನ ಮೃಗವನ್ನು ಅಪ್ಪಿಕೊಳ್ಳಲು ಹೋದಾಗ ನಾವು ಮುಟ್ಟುವ ಮುನ್ನವೇ ತಾನೇ ನಮ್ಮನ್ನು ನುಂಗುತ್ತದೆ. ಜ್ಞಾನದೊಳಗೆ ನಾವೋ ನಮ್ಮೊಳಗೆ
ಜ್ಞಾನವೋ ಎಂಬ ತಾದಾತ್ಮ್ಯ ಭಾವ ತಲೆದೋರುತ್ತದೆ. ಈ ಸಮ್ಯಗ್ ಜ್ಞಾನ ಸ್ವರೂಪದಲ್ಲಿ ನಾವು ಮಹಾಲಿಂಗದಲ್ಲಿ ಐಕ್ಯವಾಗುವುದರಲ್ಲಿ ಸಂದೇಹವಿಲ್ಲ. ಹೀಗೆ ಶರಣ ಹಡಪದ ಅಪ್ಪಣ್ಣನವರು ಮರಹು -ಅರುಹಿನ ಮಹಾತ್ಮೆಯನ್ನು ಬಹಳ ಮಾರ್ಮಿಕವಾಗಿ ಈ ವಚನದಲ್ಲಿ ನಿರೂಪಿಸಿರುವರು.
–ಸುಧಾ ಪಾಟೀಲ್
ಬೆಳಗಾವಿ