ನೆಲಮೂಲದ ದೇಸಿ ಸೊಗಡು- ಸಿದ್ಧರಾಮಯ್ಯ
ಕಳೆದ ಮೂರು ದಶಕಗಳಿಂದ ನಾನು ಗಮನಿಸುತ್ತ ಖುಷಿ ಪಡುವ ವ್ಯಕ್ತಿತ್ವ ಸಿದ್ರಾಮನಹುಂಡಿಯ ಸಿದ್ರಾಮಯ್ಯ ಅವರದು.
ಅತಿ ಹೆಚ್ಚು ಬಾರಿ ಬಜೆಟ್ ಮಂಡನೆ ಮಾಡಿದ್ದು, ತಮ್ಮದಲ್ಲದ ಕಾಂಗ್ರೆಸ್ ಪಕ್ಷಕ್ಕೆ ಜೀವ ತುಂಬಿ, ಮುಖ್ಯಮಂತ್ರಿಯಾಗಿ ಐದು ವರ್ಷದ ಅವಧಿ ಮುಗಿಸಿದಕ್ಕಿಂತ ವಿಭಿನ್ನವಾದ ಹತ್ತಾರು ಸಂಗತಿಗಳಿವೆ.
ಭ್ರಷ್ಟಾಚಾರ ರಾಜಕೀಯ ಅನಿವಾರ್ಯತೆ, ಅದಕ್ಕೆ ಸಿದ್ರಾಮಯ್ಯ ಹೊರತಲ್ಲ ಆದರೆ ಇತರರ ಹಾಗೆ ಧನದಾಹಿಯಲ್ಲ. ಕೇವಲ ತಾವು ಅಧಿಕಾರ ಹಿಡಿದು, ಸುತ್ತಲಿರುವವರ ಕೈ ಕೊಳೆ ಮಾಡುವಷ್ಟು ನಿರ್ಲಿಪ್ತ ಜಾಣತನ.
ಮೋಜು, ಮಸ್ತಿ, ರಸಿಕತೆಯಿಂದ ದೂರ ಇರುವ ಸಂತರೂ ಅಲ್ಲ. ಒಂದು ಕಡೆಯಿಂದ ಪಟೇಲರಂತೆ, ಮತ್ತೊಂದು ಕಡೆಯಿಂದ ದೇವೇಗೌಡರಂತೆ ಕಂಡರೂ ಅವರಿಬ್ಬರೂ ಅಲ್ಲ. ಪಟೇಲರ ವಿನೋದ ಪ್ರಜ್ಞೆ, ಅಧಿಕಾರ ನಿರ್ಮೋಹ ಇರದಿದ್ದರೂ ದೇವೇಗೌಡರ ಹಾಗೆ ಗೊಂದಲದ ಗೂಡಲ್ಲ.
ಇಡೀ ದೇಶ ಮೋದಿ ಪ್ರಭಾವ ಮತ್ತು ಭೀತಿಯಿಂದ ನಲುಗಿ ಅವರ ವಿರುದ್ಧ ದನಿ ಎತ್ತಲು ಹೆದರುವ ವಾತಾವರಣ ಇದ್ದಾಗಲೂ ಹರಿತವಾಗಿ,ವ್ಯಂಗ್ಯವಾಗಿ ಟೀಕಿಸಲು ಇಡಿ,ಐಟಿ ಭಯ ಇಲ್ಲದ್ದೇ ಮುಖ್ಯ ಕಾರಣ.
ವಿರೋಧ ಪಕ್ಷ ಮತ್ತು ಮಾಧ್ಯಮಗಳ ಮೂಲಕ ನಿರಂತರ ಲೇವಡಿ ಮತ್ತು ಟ್ರೋಲಿಗೆ ಒಳಗಾದರೂ ಜಗ್ಗಲಿಲ್ಲ ಬಗ್ಗಲಿಲ್ಲ. ಬಾಯಿ ತಪ್ಪಿ ಆಡಿದ ಮಾತುಗಳನ್ನು ಪದೇ ಪದೇ ತೋರಿಸಿದರು ಮನಸಿಗೆ ಹಚ್ಚಿಕೊಳ್ಳದ ಧೈರ್ಯಶಾಲಿ.
ಜಾತಿವಾದಿ ಎಂಬ ಕಳಂಕ ಮತ್ತು ಜಿಲೇಬಿ ವಿರೋಧಿ ಎಂಬ ಮಾತು ಅರ್ಧ ಸತ್ಯವಾದರು, ನಂಬಿದವರ ಕೈಹಿಡಿಯುವ ಔದಾರ್ಯ. ಹೌದು ಜಾತಿವಾದಿ ಇದ್ದರೆ ತಪ್ಪೇನು? ಹಿಂದುಳಿದ ಸಮಾಜದ ತಮ್ಮವರಿಗೆ ರಾಜಕೀಯ ಪ್ರಜ್ಞೆ ಮೂಡಿಸಿ,ಆರ್ಥಿಕ ಸಂಪನ್ಮೂಲದ ಅರಿವು ಹೆಚ್ಚಿಸಿದ ಕಾರಣದಿಂದಾಗಿ ಇಂದಿಗೂ ‘ಆ’ ಸಮಾಜದ ಪ್ರಶ್ನಾತೀತ ನಾಯಕ. ಅಹಿಂದ ಪರಿಕಲ್ಪನೆಯನ್ನು ಗಟ್ಟಿಗೊಳಿಸಿಕೊಂಡು ಮತ್ತು ಸಂಘ ಪರಿವಾರದ ಮೌಲ್ಯವನ್ನು ಖಂಡಿಸುವ ದಿಟ್ಟತನ ಇತರ ನಾಯಕರಲ್ಲಿ ಅಷ್ಟಾಗಿ ಕಾಣುವುದಿಲ್ಲ. ಅದಕ್ಕೆ ಮೂಲ ಕಾರಣ ರಾಜಕೀಯ ಸೋಲಿನ ಭಯ. ಆದರೆ ಸಿದ್ರಾಮಯ್ಯ ಅವರಿಗೆ ಆ ಸೋಲನ್ನು ತಪ್ಪಿಸಿಕೊಳ್ಳುವ ಆತ್ಮವಿಶ್ವಾಸ ಈಗ ಗಟ್ಟಿಯಾಗಿದೆ.
ತಮ್ಮನ್ನು ನಂಬಿದ ವ್ಯಕ್ತಿಗಳನ್ನು ಸೈದ್ಧಾಂತಿಕವಾಗಿ ಕೈ ಹಿಡಿಯುವ ಎದೆಗಾರಿಕೆ. ಉದಾಹರಣೆಗೆ ತಮ್ಮ ಮಾಧ್ಯಮ ಸಲಹೆಗಾರ ದಿನೇಶ್ ಅಮಿನಮಟ್ಟು ಅವರನ್ನು ತಮ್ಮದೇ ಕ್ಯಾಬಿನೆಟ್ ಸಹೋದ್ಯೋಗಿಗಳು ವಿರೋಧ ಮಾಡಿದರೂ ಅವರನ್ನು ಕೈ ಬಿಡಲಿಲ್ಲ. ಇದೊಂದು ಸಣ್ಣ ಉದಾಹರಣೆ ಅಷ್ಟೇ!
ಇಡೀ ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲಿ ಇರುವ ಗತಕಾಲದ ಗೆಳೆಯರು ಮತ್ತು ರಾಜಕೀಯ ವ್ಯಕ್ತಿಗಳ ನಿರಂತರ ಸಂಪರ್ಕ. ಪ್ರತಿಯೊಬ್ಬರನ್ನೂ ಹೆಸರಿಡಿದು ಕರೆಯುವ ಸ್ಮರಣ ಶಕ್ತಿ. ಯಾರನ್ನಾದರೂ ರಾಜಕೀಯವಾಗಿ ಮುಗಿಸಬೇಕು ಎಂದುಕೊಂಡರೆ ಬೆನ್ನು ಹತ್ತಿ ಹೊಡೆಯುವ ತಂತ್ರಗಾರಿಕೆ.
ಸೋಷಿಯಲ್ ಮೀಡಿಯಾದ ಅವಿವೇಕಿಗಳು ಅತ್ಯಂತ ಹೇಯವಾಗಿ ತೇಜೋವಧೆ ಮಾಡಿದರೂ, ಹೆಚ್ಚು ಫ್ಯಾನ್ ಫಾಲೋವರ್ ಹೊಂದಿದ ಟ್ರೋಲ್ ಹೀರೋ. ಸಿದ್ರಾಮುಲ್ಲಾ ಖಾನ್, ನಿದ್ದೆರಾಮಯ್ಯ ಎಂಬ ಮೂದಲಿಕೆಯ ಮಾತುಗಳಿಗೆ ಸಂದರ್ಭ ಬಂದಾಗ ಉತ್ತರ ಕೊಟ್ಟ ಮತ್ತು ಕೊಡುವ ಸಹನೆ.
ದೇವೇಗೌಡರ ಕುಟುಂಬ ರಾಜಕೀಯ ದ್ವೇಷ ಮಾಡುತ್ತಲೇ ರೇವಣ್ಣನವರ ಕುಟುಂಬಕ್ಕೆ ಶಕ್ತಿ ತುಂಬುವ ವಿರೋಧಾಭಾಸ. ತಮ್ಮನ್ನು ಕಾಂಗ್ರೆಸ್ಸಿಗೆ ಕರೆ ತಂದ ಕುಲ ಬಾಂಧವರನ್ನು ನಿಧಾನವಾಗಿ ಹಿಂದಿಕ್ಕಿದ್ದನ್ನು ದ್ರೋಹ ಎನ್ಮಬಹುದೆ? ಕಾಂಗ್ರೆಸ್ ಪಕ್ಷದ ಜೀ ಹುಜೂರ್ ಸಂಸ್ಕೃತಿಗೆ ಕಡಿವಾಣ ಹಾಕಿ, ದೆಹಲಿ ನಾಯಕರಿಗೆ ರಾಜ್ಯದ ತಾಕತ್ತನ್ನು ತೋರಿಸಿದ ಸ್ವಾಭಿಮಾನಿ. ಸೋನಿಯಾ ಗಾಂಧಿ ಮತ್ತು ರಾಹುಲ್ ಅವರಿಗೆ ಕನ್ನಡದ ಶಕ್ತಿ ಪರಿಚಿಸಿದ ಹಿರಿಮೆ.
ಲಿಂಗಾಯತರು, ಗೌಡರು ಮತ್ತು ಬ್ರಾಹ್ಮಣರೊಂದಿಗೆ ಸೇಫ್ ಅಂತರ ಮತ್ತು ಸ್ನೇಹ ಇಟ್ಟುಕೊಂಡು ಒಳಗೊಳಗೆ ಶಕ್ತಿಶಾಲಿಯಾಗಿ ಬೆಳೆಯುವ ಮಹಾ ಚಾಣಾಕ್ಷ. ಮಾತು ಮತ್ತು ನಡೆಯಲಿ ದೇಸಿ ಸೊಗಡು. ಜಾತ್ರೆ, ಹಬ್ಬಗಳಲ್ಲಿ ರಾಜಕೀಯ ಅಧಿಕಾರದ ಅಹಮಿಕೆ ಮರೆತು ಗೆಳೆಯರೊಂದಿಗೆ ಕುಣಿದು ಕುಪ್ಪಳಿಸುವ ಸಹಜತೆ.
ಸುಂದರ ಯುವತಿಯೊಬ್ಬಳು ಕೆನ್ನೆಗೆ ಮುತ್ತು ಕೊಟ್ಟದ್ದು, ತಮ್ಮ ಪಕ್ಷದ ಕಾರ್ಯಕ್ರಮದಲ್ಲಿ ನಿರೂಪಕಿಯನ್ನು ದಿಟ್ಟಿಸಿ ನೋಡಿದ್ದು, ಅಬ್ಬಾ! ಈ ಇಳಿ ಪ್ರಾಯದಲ್ಲೂ ಇತರರು ಅಸೂಯೆ ಪಡುವ ಜೀವನೋತ್ಸಾಹ!
ಲಿಂಗಾಯತ ಸ್ವತಂತ್ರ ಧರ್ಮದ ವಿಷಯದಲ್ಲಿ ಅವರು ತೆಗೆದುಕೊಂಡ ನಿರ್ಣಯ ಖಂಡಿತವಾಗಿ ಧರ್ಮ ಒಡೆಯುವ ಉದ್ದೇಶ ಅಲ್ಲ. ಬಿಜೆಪಿ ಲಿಂಗಾಯತರನ್ನು ದುರ್ಬಲಗೊಳಿಸುವ ಪ್ರತಿ ತಂತ್ರ, ಆದರೆ ಆಳ ಅಧ್ಯಯನದ ಕೊರತೆ ಇರುವ ಕೆಲವು ಕಾಂಗ್ರೆಸ್ ನಾಯಕರು ಇದನ್ನು ಪಕ್ಷದ ಸೋಲಿಗೆ ಕಾರಣ ಎಂದು ವ್ಯಾಖ್ಯಾನಿಸಿದ್ದು ಅವೈಜ್ಞಾನಿಕ.
ಬಸವ,ಲೋಹಿಯಾ, ಅಂಬೇಡ್ಕರ್ ಚಿಂತನೆಗಳನ್ನು ಸರಿಯಾಗಿ ಗ್ರಹಿಸಿ, ಅಗತ್ಯಕ್ಕೆ ತಕ್ಕಂತೆ ಪ್ರತಿಪಾದಿಸುವ ವೈಚಾರಿಕ ಸಮತೋಲನ. ಈ ಮೌಲ್ಯಗಳನ್ನು ವರ್ತಮಾನದ ರಾಜಕೀಯದಲ್ಲಿ ಆಚರಿಸಲಾಗದಿದ್ದರೂ, ಅದನ್ನು ಅರಿತು ಸಮಯಕ್ಕೆ ತಕ್ಕಂತೆ ಪ್ರತಿಪಾದಿಸುವ ಅಪರೂಪದ ಪಾರ್ಲಿಮೆಂಟೇರಿಯನ್. ಈಗಿನ ರಾಜಕಾರಣಿಗಳು ಪತ್ರಿಕೆ ಓದುವ ಸಹನೆ ಕಳೆದುಕೊಂಡು, ಬೌದ್ಧಿಕ ದಿವಾಳಿಯಾಗಿರುವ ಹೊತ್ತಿನಲ್ಲಿ ಇವರ ವೈಚಾರಿಕ ವಾದಗಳನ್ನು ಕೇಳಬೇಕು ಎನಿಸುತ್ತದೆಯಲ್ಲ ಅದೇ ವಿಶಿಷ್ಟ.
ಇದೇನು ಬರೀ ಸಿದ್ರಾಮಯ್ಯ ವ್ಯಕ್ತಿತ್ವದ ಏಕಮುಖ ತುತ್ತೂರಿ ಎಂದು ಬೈಯ್ಕೋಬೇಡಿ. ಕೆಲವು ತಕರಾರುಗಳು ಇವೆ… ಕಾಂಗ್ರೆಸ್ ಕುಟುಂಬ ರಾಜಕೀಯ ವಿರೋಧಿಸಿ ಮಗನನ್ನು ಶಾಸಕನನ್ನಾಗಿ ಮಾಡಿದ್ದು, ಮೊಮ್ಮಗನನ್ನು ಉತ್ತರಾಧಿಕಾರಿ ಎಂದು ಪರಿಚಯಿಸಿದ್ದು, ಬಾಡಿ ಲ್ಯಾಂಗ್ವೇಜ್ ಬದಲಾಯಿಸಿಕೊಳ್ಳದೇ ಇದ್ದದ್ದು, ಟೀಕಿಸುವ ಭರದಲ್ಲಿ ದೇಶದ ಪ್ರಧಾನಿಗಳನ್ನು ಏಕವಚನದಲ್ಲಿ ಕರೆದದ್ದು, ತಮ್ಮ ಸುತ್ತ ಇರುವ ಕಡು ಬ್ರಷ್ಟರನ್ನು ರಾಜಕೀಯ ಉದ್ದೇಶದಿಂದ ನಿಯಂತ್ರಣ ಮಾಡದೇ ಹೋದದ್ದು, ಹಳೆ ಮೈಸೂರು ಭಾಗದಲ್ಲಿ ಜಾತಿವಾದಿ ಎಂದು ಗುರುತಿಸಿಕೊಂಡದ್ದು, ಅದನ್ನು ಸರಿಪಡಿಸುವ ಪ್ರಯತ್ನ ಮಾಡದೇ ಹೋದದ್ದು, ಲೋಕಾಯುಕ್ತ ದುರ್ಬಲ ಗೊಳಿಸಿದ್ದು… ಹೀಗೆಯೇ ಸಿದ್ದು,ಸಿದ್ದು ಎಂದು ಗೊಣಗುವಂತೆ ಮಾಡಿದ ನಿರಾಸೆಯ ಮಧ್ಯೆ, ನಮ್ಮ ಮಧ್ಯೆದ ಜನಪರ,ಜನಪ್ರಿಯ, ಜನನಾಯಕ,ಮಾಸ್ ಲೀಡರ್ ನಮ್ಮ ಸಿದ್ರಾಮಯ್ಯ ಅವರು.
-ಪ್ರೊ.ಸಿದ್ದು ಯಾಪಲಪರವಿ.
9448358040.