ಕುಟುಂಬಗಳ ಅಂತರರಾಷ್ಟ್ರೀಯ ದಿನ.

ಮೇ 15-ಕುಟುಂಬಗಳ ಅಂತರರಾಷ್ಟ್ರೀಯ ದಿನ(International Day of Families) :

ಇಂದು ಕುಟುಂಬಗಳ ಅಂತರರಾಷ್ಟ್ರೀಯ ದಿನ.

ಗಂಡ ಹೆಂಡತಿ ಹಾಗೂ ಮಕ್ಕಳಿರುವ ಒಂದು ಮನೆಯನ್ನು ಕುಟುಂಬ ಎಂದು ಕರೆದರೆ ,

ರಕ್ತ ಸಂಬಂಧಿಗಳ ಸಮೂಹ ಒಂದೇ ಮನೆಯಲ್ಲಿ ವಾಸಿಸುತ್ತಾ ಒಂದೇ ಒಲೆಯಲ್ಲಿ ತಯಾರಿಸಿದ ಅಡುಗೆಯನ್ನು ಸೇವಿಸುತ್ತಾ ಆಸ್ತಿಯ ಮೇಲೆ ಸಮಾನವಾದ ಒಡೆತನವನ್ನು ಹೊಂದಿರುತ್ತ ಮತ್ತು ಕುಟುಂಬದ ಪೂಜಾ ಕಾರ್ಯಗಳಲ್ಲಿ ಸಾಮೂಹಿಕವಾಗಿ ಪಾಲ್ಗೊಳ್ಳುತ್ತಾ ಬರುವಂತಿದ್ದಲ್ಲಿ ಅದನ್ನು ಅವಿಭಕ್ತ ಕುಟುಂಬವೆನ್ನಬಹುದು.

ಅವಿಭಕ್ತ ಕುಟುಂಬದ ಪ್ರತಿಯೊಬ್ಬ ಸದಸ್ಯನೂ ಕುಟುಂಬದ ಒಟ್ಟು ಹಿತಾಸಕ್ತಿಗಳಿಗೆ ಪೂರಕವಾಗಿ ನಡೆದುಕೊಳ್ಳುವ ಹೊಣೆಯುಳ್ಳವನಾಗಿರುತ್ತಾನೆ. ಕುಟುಂಬದ ಕಲ್ಯಾಣಕ್ಕಾಗಿ ಶ್ರಮಿಸುವುದು ಆತನ ಕರ್ತವ್ಯ ಅಂತೇಯೇ ಪ್ರತಿಯೊಬ್ಬ ಸದಸ್ಯನ ಸಂರಕ್ಷಣೆ ಸಂಕೋಚಣೆ ಹಾಗೂ ಯೋಗ ಕ್ಷೇಮವು ಕುಟುಂಬದ ಹೊಣೆಯಾಗಿರುತ್ತದೆ.

ಕುಟುಂಬದ ಹಿರಿಯ ಸದಸ್ಯನು ಅಂದರೆ ಯಜಮಾನನು ಸಾಮಾನ್ಯವಾಗಿ ಈ ಎಲ್ಲಾ ಅಂಶಗಳ ಬಗ್ಗೆ ವಿಶೇಷ ಗಮನ ಹರಿಸುವವನಾಗಿದ್ದು ಎಲ್ಲಾ ವಿಷಯಗಳಲ್ಲೂ ಉಳಿದವರಿಗೆ ಮಾದರಿಯೂ ಮಾರ್ಗದರ್ಶಕನು ಆಗಿರುತ್ತಾನೆ. ಹಿಂದೂ ಅವಿಭಕ್ತ ಕುಟುಂಬವು ಸ್ವಯಂ ಪರಿಪೂರ್ಣವಾಗಿದ್ದ ಕಾಲವೊಂದು ಇತ್ತು ಆಗ ಅದು ತನ್ನ ಸದಸ್ಯರುಗಳ ಆರ್ಥಿಕ ಶೈಕ್ಷಣಿಕ ಮನೋರಂಜನಾತ್ಮಕ ರಕ್ಷಣಾತ್ಮಕ ಮುಂತಾದ ಅಗತ್ಯತೆಗಳನ್ನು ಪೂರೈಸುವಲ್ಲಿ ಸಮರ್ಥವಾಗಿತ್ತು. ಆದರೆ ಇಂದಿನ ಬದಲಾದ ಪರಿಸರದಲ್ಲಿ ಈ ಸ್ವಯಂ ಪರಿಪೂರ್ಣತೆ ಅಸಾಧ್ಯವಾಗಿದೆ. ಶಿಕ್ಷಣ ಮತ್ತು ಉದ್ಯೋಗವನ್ನು ಪಡೆಯುವ ಕಾರಣದಿಂದ ಕುಟುಂಬದ ಸದಸ್ಯರುಗಳು ಕುಟುಂಬವನ್ನು ಬಿಟ್ಟು ಹೊರಗಡೆ ಹೋಗುವುದು ಇಂದು ಅನಿವಾರ್ಯವಾಗಿದೆ. ಕೃಷಿಕ ಸಮಾಜಗಳಲ್ಲಿ ಅದು ಎಲ್ಲರಿಗೂ ಕೆಲಸ ಒದಗಿಸುತ್ತದೆ ಹಾಗೂ ಕೃಷಿ ಕಾರ್ಯಗಳ ನಿರ್ವಹಣೆಗೆ ದೊಡ್ಡ ಕುಟುಂಬ ಇನ್ನಷ್ಟು ಅನುಕೂಲಕರವಾಗಿರುತ್ತದೆ. ಧಾರ್ಮಿಕ ಕಾರ್ಯ ಚಟುವಟಿಕೆಗಳಿಗೆ ಅದು ಪ್ರೋತ್ಸಾಹಕಾರಕವಾಗಿದೆ ಸದಸ್ಯರಲ್ಲಿ ಸಹಕಾರಿ ಮನೋಭಾವವನ್ನು ಮೂಡಿಸುವ ಜೊತೆಗೆ ಖರ್ಚುಗಳ ಉಳಿತಾಯದಲ್ಲಿ ಸಹಾಯಕವಾದ ಆರ್ಥಿಕ ಪ್ರಗತಿಗೆ ಪೋಷಕವಾಗಿದೆ. ಸಾಮಾಜಿಕ ನಿಯಂತ್ರಣದಲ್ಲಿ ಸಹಾಯಕವಾಗಿದ್ದ ಅದು ಭದ್ರತೆಯ ಭರವಸೆ ಮೂಡಿಸುತ್ತದೆ ಹಿರಿಯರ ಬೆಂಬಲವು ಕುಟುಂಬಕ್ಕಿತ್ತು. ವಿಮಾ ಕಂಪನಿಯಂತೆ ಅಪತ್ಕಾಲದಲ್ಲಿ ಸದಸ್ಯರಿಗೆ ಅದು ರಕ್ಷಣೆ ಹಾಗೂ ನೆರವಿನತ್ತ ಬಂದಿದೆ.
ಭಾರತೀಯ ಕುಟುಂಬವು ಸಾಂಪ್ರದಾಯಿಕವಾಗಿ ಪಿತೃ ಪ್ರಧಾನವಾದದ್ದು. ಈಗಿನ ಬದಲಾದ ಸನ್ನಿವೇಶದಲ್ಲಿ ಸ್ತ್ರೀ-ಪುರುಷ ಸಂಬಂಧಗಳು ವ್ಯಕ್ತಿ ವಾದದ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳ ಪ್ರಭಾವಕ್ಕೆ ಒಳಗಾಗಿವೆ.

ಹಿಂದೆ ಕಾಣ ಬರುತ್ತಿದ್ದ ಅಂತರ ಈಗ ಕಡಿಮೆಯಾಗಿದೆ ಮಾವನ ಎದುರು ಕಾಣಿಸಿಕೊಳ್ಳದೆ ಇರುವ ಮುಖಕೊಟ್ಟು ಮಾತನಾಡದೆ ಇರುವ ಸೀರಿಯ ಮುಸುಕನ್ನು ಹಾಕಿಕೊಂಡು ಮಾವನ ಸಮ್ಮುಖದಲ್ಲಿ ಇರಬೇಕಾದ ಸ್ಥಿತಿ ಈಗ ಸೊಸೆಯಾದವಳಿಗೆ ಇರುವುದಿಲ್ಲ. ಅತ್ತೆ ಸೊಸೆಯರ ಸಂಬಂಧದಲ್ಲಿ ಈ ಹಿಂದೆ ಕಾಣು ಬರುತ್ತಿದ್ದ ತೊಡಕುಗಳು ಹಾಗೂ ಸಮಸ್ಯೆಗಳು ಬಹಳಷ್ಟು ತಗ್ಗಿವೆ.

ಗಂಡ ಹೆಂಡಿರ ದಾಂಪತ್ಯ ಸಂಬಂಧದ ಪ್ರಭಾವದಿಂದಾಗಿ ಅತ್ತೆ ಸೊಸೆಯರ ಸಂಬಂಧಗಳಲ್ಲಿ ಉದ್ಭವವಾಗುತ್ತಿದ್ದ ಸಮಸ್ಯೆಗಳು ಕಡಿಮೆಯಾಗಿವೆ ಸೊಸೆಯಂದಿರನ್ನು ಶೋಷಿಸುವ ಕೆಲಸದಾಳಿನಂತೆ ದುಡಿಸುವ ಪರಕೀಯ ಎಂಬಂತೆ ದೂರವಿರಿಸುವ ಸಮಯ ಸಿಕ್ಕಿದಾಗ ಹಂಗಿಸಿ ಅವಮಾನಿಸುವ ಅತ್ತೆಂದಿರಲ್ಲಿ ಬಹಳಷ್ಟು ಸುಧಾರಣೆ ಕಾಣಿಸುತ್ತಿದೆ. ಗ್ರಾಮೀಣ ಕುಟುಂಬದಲ್ಲಿ ಅತ್ತೆಯ ಪ್ರಾಧಾನ್ಯತೆ ನಗರ ಪರಿಸರದಲ್ಲಿ ಅತ್ತೆ ಸೊಸೆಯರು ಬೇರೆ ಬೇರೆ ಮನೆಗಳಲ್ಲಿ ವಾಸವಾಗಿರುವ ಸ್ಥಿತಿ ಸೊಸೆಯಂದಿರು ಉದ್ಯೋಗದಲ್ಲಿರುವುದು.

ಅತ್ತೆ ಸೊಸೆಯಂದಿರರ ಸಂಬಂಧದ ತೊಡಕುಗಳು ಬಹಳಷ್ಟು ತಗ್ಗಿಸಿವೆ . ಅವಿಭಕ್ತ ಕುಟುಂಬಗಳಲ್ಲಿ ಸ್ತ್ರೀಯರಿಗೆ ಪ್ರತ್ಯೇಕ ಅಸ್ತಿತ್ವವೇ ಇಲ್ಲದಂತೆ ನೋಡಿಕೊಳ್ಳುತ್ತಿದ್ದ ದಿನಗಳು ಗ್ರಾಮೀಣ ಪ್ರದೇಶದಲ್ಲಿ ಪುರುಷ ಪ್ರಧಾನತೆ ಇಂದಿಗೂ ಮುಂದುವರೆದಿದ್ದರೂ ನಗರಗಳಲ್ಲಂತೂ ಸ್ತ್ರೀ ಪುರುಷ ಸಂಬಂಧಗಳು ಮೆಲ್ಲನೆ ಸಮಾನತೆಯತ್ತ ಹೊರಳುತ್ತಿವೆ. ಉದ್ಯೋಗಗಳಲ್ಲಿದ್ದು ದುಡಿದು ಸಂಪಾದಿಸುವ ಸ್ತ್ರೀಯರಿರುವ ಕುಟುಂಬಗಳು ಹೆಚ್ಚು ಬೇಗನೆ ಸಮಾನತೆಯತ್ತ ಸಾಗುತ್ತಿವೆ .ಮಕ್ಕಳ ಶಿಕ್ಷಣ ಆಸ್ತಿ ಕೊಳ್ಳುವಿಕೆ ಮಾರಾಟ ಮಾಡುವಿಕೆ ಹೆಚ್ಚಿನ ಮೊತ್ತದ ಹಣ ತೊಡಗಿಸುವಿಕೆ ಮಕ್ಕಳ ಉದ್ಯೋಗ ಮದುವೆ ಇಂಥ ವಿಚಾರಗಳಲ್ಲಿ ಪತ್ನಿಯ ಅಭಿಪ್ರಾಯಕ್ಕೆ ಮಣ್ಣನೇ ಇದೆ ಈ ಬಗ್ಗೆ ನಿರ್ಣಯ ಕೈಗೊಳ್ಳುವಾಗ ಆಕೆಯ ಸಹಭಾಗಿತ್ವ ಅಗತ್ಯವೆನ್ನುವ ಸ್ಥಿತಿಯಿದೆ .ಆಸ್ತಿಯ ಹಕ್ಕುಗಳು ರಾಜಕೀಯ ಹಕ್ಕುಗಳು ಹಾಗೂ ವ್ಯಕ್ತಿ ಸ್ವಾತಂತ್ರ್ಯ ಸ್ತ್ರೀಯರಿಗೆ ಲಭ್ಯವಾಗಿದೆ ಈಗಿನ ಬದಲಾದ ಪರಿಸ್ಥಿತಿಯಲ್ಲಿ
ವಿವಾಹದ ನಿರ್ಧಾರವನ್ನ ವಿವಾಹ ಹುಡುಗ ಹುಡುಗಿಯರಿಗೆ ಬಿಡಲಾಗುತ್ತಿದೆ ಅವರ ಒಪ್ಪಿಗೆ ನಂತರ ಹಿರಿಯರು ವಿವಾಹದ ವ್ಯವಸ್ಥೆ ಮಾಡುವುದು ಈಗ ಸಾಮಾನ್ಯ
ಹಿರಿಯರ ಒಪ್ಪಿಗೆ ಪಡೆದ ಪ್ರೇಮ ವಿವಾಹಗಳ ಸಂಖ್ಯೆಯು ಅಧಿಕಗೊಳ್ಳುತ್ತಿವೆ ವಿವಾಹ ಕಾಯ್ದೆಗಳ ಪ್ರಭಾವದಿಂದ ವಿವಾಹದ ವಯಸ್ಸು ಕೂಡ ಈಗ ಏರಿದೆ. ವಿವಾಹವನ್ನು ಈ ಹಿಂದಿನಂತೆ ಸಾಂಪ್ರದಾಯಕ ಮಾದರಿಯಲ್ಲಿಯೇ ಮಾಡಬೇಕೆಂಬ ಒತ್ತಾಯವು ಈಗಿಲ್ಲ .ಅದರಲ್ಲಿ ಆಧುನಿಕತೆ ಅಂಶಗಳು ತೀರ ಸಹಜವಾಗಿವೆ ತಮ್ಗೆ ಸೂಕ್ತ ಕಂಡವರನ್ನು ಸಂಗಾತಿಗಳನ್ನಾಗಿ ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ಮನೆಯ ಮಕ್ಕಳಿಗೆ ಇದೆ .
ಅದಕ್ಕೆ ಅಂತರ್ಜಾತಿಯ ಅಂತರ್ಧರ್ಮೀಯ ವಿವಾಹಗಳ ಪ್ರಕರಣಗಳು ಇಲ್ಲಿ ಅಪರೂಪ
ಗಂಡ ಹೆಂಡಿರ ದಾಂಪತ್ಯ ಸಂಬಂಧವು ಈ ಹಿಂದಿನಂತೆ ಅಲಕ್ಷಕ್ಕೆ ಒಳಗಾಗಿಲ್ಲ ಅದಕ್ಕೆ ಈಗ ರಕ್ತ ಸಂಬಂಧದಷ್ಟೇ ಮಹತ್ವ ಬಂದಿದೆ ಕುಟುಂಬದ ಯಶಸ್ಸು ಈ ಸಂಬಂಧದ ನ್ಯೂನತೆಯ ಮಟ್ಟವನ್ನು ಹೊಂದಿಕೊಂಡಿದೆ ಎಂದು ಹೇಳಬಹುದು .ಈಗಿನ ಕುಟುಂಬಗಳಲ್ಲಿ ಹಿಂದಿನ ಕಟ್ಟುನಿಟ್ಟು ಶಿಸ್ತು ಸಾಂಪ್ರದಾಯಿಕತೆ ಅಷ್ಟಾಗಿ ಕಾಣಿಸದು ಈಗ ಕೌಟುಂಬಿಕ ಹೊಂದಾಣಿಕೆ ಸಾಮರಸ್ಯ ಹಾಗೂ ಯಶಸ್ಸಿಗೆ ಮಾತ್ರ ಪ್ರಾಧಾನ್ಯತೆ ನೀಡಲಾಗುತ್ತಿದೆ. ವ್ಯಕ್ತಿಯ ಕೌಟುಂಬಿಕ ಸದಸ್ಯತ್ವ ವಯಸ್ಸು ವ್ಯಕ್ತಿಗತ ಪ್ರತಿಭೆ ಆಸಕ್ತಿ ಹಾಗೂ ಅಭಿರುಚಿಗೆ ಈಗ ಮಹತ್ವ ಬರುತ್ತಿದೆ. ಇದರಿಂದ ಶಿಕ್ಷಣ ಪಡೆಯುವಕೆ ಉದ್ಯೋಗ ಗಳಿಸಿಕೊಂಡು ಸಂಪಾದಿಸುವಿಕೆ ಸಂಪಾದನೆಯನ್ನು ಅನುಭವಿಸುವಿಕೆ ವಿವಾಹವಾಗುವಿಕೆ ಎಲ್ಲದರಲ್ಲೂ ಹಳೆಯ ಮಾದರಿಯ ಬದಲು ವ್ಯಕ್ತಿ ಸ್ವಾತಂತ್ರ್ಯವನ್ನು ಪಾಲಿಸುವ ಕಡೆಗೆ ಒಲವು ಮೂಡುತ್ತಿದೆ. ಬೆಳೆಯುತ್ತಿರುವ ಈ ವ್ಯಕ್ತಿ ಸ್ವಾತಂತ್ರ್ಯದ ಹಾಗೂ ಪ್ರಜಾಪ್ರಭುತ್ವದ ಭಾವನೆಗಳು. ಕುಟುಂಬದ ಪರಂಪರಾಗತ ನಿಯಮಗಳನ್ನು ದುರ್ಬಲಗೊಳಿಸುತ್ತಿವೆ ಅದು ಈ ಹೊಸ ಭಾವನೆಗಳಿಗೆ ಹೊಂದಿಕೊಳ್ಳುತ್ತಿವೆ

ಕೌಟುಂಬಿಕ ಸಂಬಂಧಗಳು ಇವಾಗ ಸಡಿಲಗೊಳ್ಳುತ್ತವೆ. ಮನೆ ದೇವರ ಫೋಟೋಗಳು ಮನೆತನದ ಹಿರಿಯರ ಫೋಟೋಗಳು ಈಗ ಎಷ್ಟೋ ಕಡೆ ಕಾಣಿಸುವುದಿಲ್ಲ. ಕುಟುಂಬದ ಪೂರ್ವಿಕರ ಹೆಸರುಗಳೇ ಸದಸ್ಯರುಗಳಿಗೆ ತಿಳಿದಿಲ್ಲ .ವಂಶಾವಳಿಯ ಸರಮಾಲೆಯನ್ನು ಕಂಠಪಾಠ ಮಾಡುವ ಬರೆಯಿಸಿ ಇಡುವ ಕ್ರಮ ಈಗ ಇಲ್ಲ ಈಗಿನವರಿಗೆ ಅವು ಬೇಕಿಲ್ಲ .ಮನೆತನದ ಕ್ರಮಗಳ ವಿಶೇಷ ಸಮಾರಂಭಗಳ ದೇವರ ಕಾರ್ಯ ಹಾಗೂ ನಿಯಮನಿಷ್ಠೆಗಳ ಬಗ್ಗೆ ತಾತ್ಸಾರ ಭಾವನೆ ಹೆಚ್ಚಾಗಿದೆ.
ತೀರಿಕೊಂಡವರ ಬಗ್ಗೆ ಶ್ರದ್ಧೆ ಕಡಿಮೆಯಾಗಿದೆ ಹಾಗೆ ಕಾಲವಾದ ಹಿರಿಯರನ್ನು ಶ್ರದ್ಧಾ ಭಕ್ತಿಯಿಂದ ನೆನಪಿಸಿಕೊಂಡು ಮಾಡಬೇಕಾದ ಶ್ರಾದ್ದಗಳು ಅರ್ಥಹೀನವಾದ ಕ್ರಿಯಾ ವಿಧಿಗಳಾಗಿವೆ.
ಕುಟುಂಬದ ಸದಸ್ಯರಿಂದ. ಪ್ರತಿ ಕುಟುಂಬದಲ್ಲಿರುವ ಸದಸ್ಯರು ಒಗ್ಗಟ್ಟಿನಿಂದ ಕಾರ್ಯತತ್ಪರರಾದರೆ ಕುಟುಂಬದ ಜೊತೆಗೆ ಸಮಾಜವೂ ಅಭಿವೃದ್ಧಿಯ ಪಥದತ್ತ ಸಾಗುವುದು .
ಕುಟುಂಬದ ಜವಾಬ್ದಾರಿಯು ಆ ಮನೆಯ ತಂದೆಗೋ ತಾಯಿಗೋ ಅಥವಾ ಹಿರಿಯ ಮಗನಿಗೋ ಇದ್ದರೆ ಕೆಲವೊಂದು ಅವಿಭಕ್ತ ಕುಟುಂಬದಲ್ಲಿ ಅಜ್ಜನೋ ಅಜ್ಜಿಯೋ ಕುಟುಂಬದ ಹಿರಿಯ ಸದಸ್ಯರಾಗಿ ಕಾರ್ಯ ನಿರ್ವಹಣೆಯ ಜವಾಬ್ದಾರಿಯನ್ನು ಹೊತ್ತಿರುತ್ತಾರೆ .
ಪ್ರತಿ ಕುಟುಂಬದ ದ ಸದಸ್ಯರೆಲ್ಲರೂ ಉತ್ತಮ ಶಿಕ್ಷಣ, ಉತ್ತಮ ಆರೋಗ್ಯ ಉತ್ತಮ ಸಂಸ್ಕಾರ ಹೊಂದಿ ಸಮಾಜದ ಅಭಿವೃದ್ಧಿಯ ಕೆಲಸ ಕಾರ್ಯಗಳಲ್ಲಿ ತಮ್ಮ ನ್ನು ತಾವು ತೊಡಗಿಸಿಕೊಂಡರೆ ಜನರ ದುಃಖಕ್ಕೆ ಸ್ಪಂದಿಸುವ ಕುಟುಂಬವನ್ನುಜನರು ಹೆಚ್ಚು ಇಷ್ಟ ಪಡುತ್ತಾರೆ .

ಕುಟುಂಬದಲ್ಲಿ ಒಬ್ಬ ಸದಸ್ಯರಾದರೂ ಜನರಿಗೆ ಜನರಿಗಾಗಿ ಜನೋಪಯೋಗಿ ಕೆಲಸ ಮಾಡುತ್ತ ಬಂದರೆ ಜನರ ಕಂಗಳಿಗೆ ದೇವರಾಗಿ ಕಾಣುತ್ತಾನೆ .
ಮೊದಲಿನ ಕಾಲದ ಜನರು ತಾವೂ ಬದುಕಿ ಇತರರನ್ನೂ ಬದುಕಿಸುವ ಬಸವ ತತ್ವವನ್ನು ಪರಿಪಾಲಿಸಿಕೊಂಡು ನಡೆಯುವ ಜನರಿದ್ದರು ಇವಾಗ ಕುಟುಂಬದ ಸದಸ್ಯರು ಬದಲಾಗುತ್ತಿದ್ದಾರೆ. ಸ್ವಾರ್ಥ ನಂಬಿಕೆ ಪ್ರೀತಿ ವಿಶ್ವಾಸ ವನ್ನು ಕಳೆದುಕೊಂಡು ದ್ವೇಷ ಮತ್ಸರ ತುಂಬಿಕೊಂಡ ಮನಗಳು ಒಗ್ಗಟ್ಟಿನಿಂದ ಕೆಲಸ ಕಾರ್ಯ ಮಾಡಲು ಹಿಂದೇಟು ಹಾಕುತ್ತಿದೆ .
ತಂದೆ ತಾಯಿಯ ಗುರು ಹಿರಿಯ ಮೇಲಿನ ಭಕ್ತಿಭಾವ ಕಡಿಮೆ ಆಗುತ್ತಿದೆ .ಹೆತ್ತ ಮಕ್ಕಳೇ ತಂದೆ ತಾಯಿಯನ್ನು ಸರಿಯಾಗಿ ಸಾಕಿ ಸಲಹುತ್ತಿಲ್ಲ .ಸಮಾಜದಲ್ಲಿ ವೃದ್ಧಾಶ್ರಮ ಅನಾಥಾಶ್ರಮ ಗಳು ಹುಟ್ಟಿಕೊಳ್ಳುತ್ತಿವೆ .
ಕುಟುಂಬವು ಮಾನವ ಸಮಾಜದ ಮೊದಲ ಅಗತ್ಯ ಕೋಶವಾಗಿದೆ” ಎಂದು ಪೋಪ್ ಜಾನ್ 23 ಅವರ ನುಡಿಯಂತೆ ದೇವರು ಕೊಟ್ಟಿರುವ ಅತ್ಯಮೂಲ್ಯ ಮತ್ತು ಉತ್ಕೃಷ್ಟವಾದ ಉಡುಗೊರೆಗಳಲ್ಲಿ ಕುಟುಂಬ ಒಂದು. ಕುಟುಂಬದ ಸದಸ್ಯರನ್ನು ಪ್ರೀತಿಸಿ ಮತ್ತು ಗೌರವಿಸಿ . ಗೌರವಿಸಿಸಿದಾಗ ಮಾತ್ರ ಈ ದಿನಕ್ಕೆ ಒಂದು ಮೆರಗು ಸಿಗುತ್ತದೆ.ಆದ್ದರಿಂದ ಇಂದಿನ ವಿಭಕ್ತ ಕುಟುಂಬಕ್ಕೆ ಕುಟುಂಬದ ಮಹತ್ವವನ್ನು ತಿಳಿಸುವ ಸಲುವಾಗಿ ಮೇ 15 ರಂದು ಕುಟುಂಬಗಳ ಅಂತರರಾಷ್ಟ್ರೀಯ ದಿನವನ್ನು ಆಚರಿಸಲಾಗುತ್ತದೆ.
UN ಜನರಲ್ ಅಸೆಂಬ್ಲಿಯು 1993 ಸಭೆಯ ನಿರ್ಣಯದೊಂದಿಗೆ ಈ ದಿನವನ್ನು ಘೋಷಿಸಿತು. *ಅಂತರರಾಷ್ಟ್ರೀಯ ದಿನವು ಕುಟುಂಬಗಳಿಗೆ ಸಂಬಂಧಿಸಿದ ಸಮಸ್ಯೆಗಳ ಅರಿವನ್ನು ಉತ್ತೇಜಿಸಲು ಮತ್ತು ಕುಟುಂಬಗಳ ಮೇಲೆ ಪರಿಣಾಮ ಬೀರುವ ಸಾಮಾಜಿಕ, ಆರ್ಥಿಕ ಮತ್ತು ಜನಸಂಖ್ಯಾ ಪ್ರಕ್ರಿಯೆಗಳ ಜ್ಞಾನವನ್ನು ಹೆಚ್ಚಿಸಲು ಅವಕಾಶವನ್ನು ಒದಗಿಸುತ್ತದೆ.

ಕುಟುಂಬವು ಒಡೆಯಲು ನಮ್ಮ ನಮ್ಮ ಮನಸ್ಸೇ ಕಾರಣವಾಗುತ್ತವೆ .ಕುಟುಂಬದಲ್ಲಿ ಹುಳಿ ಹಿಂಡುವ ಕೆಲಸ ಮಾಡುವವರಿಂದ ದೂರ ಇರಿ .
ಮೊದಲು ನಿಮ್ಮ ನಿಮ್ಮ ಕುಟುಂಬದ ಪ್ರತಿ ಸದಸ್ಯರನ್ನೂ ಪ್ರೀತಿಯಿಂದ ಕಾಣಿ .ನಂಬಿಕೆ ವಿಶ್ವಾಸ ನಮ್ಮ ಜೀವನದ ಅಸ್ತ್ರ ಗಳಾಗಲಿ.
ಒಗ್ಗಟ್ಟಿನಿಂದ ಕೆಲಸ ಕಾರ್ಯ ವನ್ನು ಹಂಚಿಕೊಂಡು ಮಾಡಿ
ಉತ್ತಮ ಆರೋಗ್ಯ ಕ್ಕೆ ಉತ್ತಮ ಕುಟುಂಬ ಕಾರಣವಾಗುತ್ತದೆ .ಹೊರಗಿನ ತಿಂಡಿ ತಿನಿಸುಗಳನ್ನು ತಿನ್ನುವುದನ್ನು ಕಡಿಮೆ ಮಾಡಿ .
ಕುಟುಂಬದ ಸದಸ್ಯರೆಲ್ಲರೂ ವಾರಕ್ಕೊಮ್ಮೆ ತಿಂಗಳಿಗೊಮ್ಮೆ ಯಾದರೂ ಹೊರಗಿನ ಪರಿಸರ ಇಲ್ಲವೇ ಬಂಧು-ಬಳಗ ಇಲ್ಲವೇ ಸ್ನೇಹಿತರ ಮನೆಗೋ ಹೋಗಿ ಬನ್ನಿ.
ಕುಟುಂಬ ಯಾವಾಗಲೂ ನಗು ನಗುತ್ತಿದ್ದರೆ ಇಡೀ ಸಮಾಜವೇ ನಕ್ಕತ್ತೇ ಅಲ್ಲವೇ ?

ಡಾ ಸಾವಿತ್ರಿ ಮ ಕಮಲಾಪೂರ
ಪ್ರಾಚಾರ್ಯರು

Don`t copy text!