ಮ—– ಸ್ವಾಮೀಜಿಗಳು
ಮ—– ಸ್ವಾಮೀಜಿಗಳು ಎಂದು ಬಿಟ್ಟ ಜಾಗದಲ್ಲಿ ಲೇಖನ ಓದಿದ ಮೇಲೆ ತಾವೇ ನಿಮಗೆ ಸರಿಯೆನಿಸಿದ ಶಬ್ದವನ್ನು ತುಂಬಿಕೊಳ್ಳಿರಿ.
ಮಾನ್ಯರೆ,
ಮೊದಲನೆಯದಾಗಿ ಮಠ ಪರಂಪರೆ ಲಿಂಗಾಯತ ಧರ್ಮದಲ್ಲಿ ಇಲ್ಲಾ.ಮನೆಗಳೆಲ್ಲ ಮಠಗಳಾಗಬೇಕು,ಮನೆಯೊಡಯನೆ ಮಠಾಧೀಶರಾಗಬೇಕು.
ಮಠವೇಕೋ ಪರ್ವತವೇಕೋ,ಜನವೇಕೋ ನಿರ್ಜನವೇಕೋ ಚಿತ್ತ ಸಮಾಧಾನವುಳ್ಳ ಶರಣಂಗೆ? ಮತ್ತೆ ಹೊರಗಣ ಚಿಂತೆ ಧ್ಯಾನ ಮೌನ ಜಪತಪವೇಕೋ ತನ್ನ ತಾನರಿದ ಶರಣಂಗೆ ಗುಹೇಶ್ವರಾ?
ಹಾಗಂತ ಸಂಪೂರ್ಣವಾಗಿ ನಾನು ಪರಮ ಪೂಜ್ಯರೆನಿಸಿದ, ಲಿಂಗಾಯತ ಧರ್ಮ ಉಳಿಸಿ ಬೆಳೆಸಿದ, ಬೆಳೆಸುತ್ತಿರುವ ಸ್ವಾಮಿಜಿಗಳ ಬಗೆಗೆ ಬರೆಯುತ್ತಿಲ್ಲ. ಹೌದಪ್ಪನ ಚೌಡಿಯೊಳಗ ಹೌದಪ್ಪ,ಅಲ್ಲಪ್ಪನ ಚೌಡಿಯೊಳಗ ಅಲ್ಲಪ್ಪ ಎನ್ನುತ್ತಿರುವ ಮ—- ಸ್ವಾಮಿಜಿಗಳ ಬಗೆಗೆ ಹೇಳುತ್ತಿರುವೆ.
ವೇಷವ ಹೊತ್ತು ಹಿರಿಯರು ಈಶ್ವರಧ್ಯಾನದಲ್ಲಿರಬೇಕು.ವೇಷವ ತೋರಿ ಗ್ರಾಸಕ್ಕಾಗಿ ಆಶೆಮಾಡಿ,ಲೋಗರ ಮನೆಯ ಕಾಯ್ದು,ಗ್ರಾಸವ ಪಡೆದು ಉದರವ ಹೊರೆವ ವೇಷವು ವೇಶಿಯಿಂದಲೂ ಕರಕಷ್ಟ ಕಾಣಾ ರಾಮನಾಥ
ಸ್ವಾಮಿಗಳ ಸನ್ನಿಧಾನಕ್ಕೆ ಬರುವ ಯಾವುದೇ ಪಕ್ಷದ, ಯಾವುದೇ ತೆರನಾದ ನೀಚ ಕೆಲಸ ಮಾಡಿದ ರಾಜಕಾರಣಿಗಳಿಗೆ ಶಾಲು ಹೊದಿಸಿ, ಫಲಪುಷ್ಪ ನೀಡಿ ಅವರಿಗೆ ಆಶೀರ್ವಾದ ಮಾಡುವ ಮ—- ಸ್ವಾಮಿಜಿಗಳ ಬಗೆಗೆ ಹೇಳುತ್ತಿರುವೆ.
ಲೋಕದ ಡೊಂಕ ನೀವೇಕೆ ತಿದ್ದುವಿರಿ? ನಿಮ್ಮ ನಿಮ್ಮ ತನುವ ತನುವ ಸಂತೈಸಿಕೊಳ್ಳಿ; ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ.ನೆರೆಮನೆಯ ದುಃಖಕ್ಕೆ ಅಳುವವರ ಮೆಚ್ಚ ಕೂಡಲಸಂಗಮದೇವ
ಲಿಂಗಾಯತ ಸ್ವತಂತ್ರ ಧರ್ಮ ವಿರೋಧಿಸಿದವರಿಗೂ ಸ್ವಾಗತಿಸುವ, ಗೌರವಿಸುವ ಮ —– ಸ್ವಾಮಿಗಳು, ಚುನಾವಣೆಯಲ್ಲಿ ಬೀದಿಗಿಳಿದು ಪ್ರಚಾರ ಮಾಡದೆ,ಬೆಂಬಲ ಸೂಚಿಸದೆ ಚುನಾವಣೆಯಲ್ಲಿ ಬಹುಮತ ಬಂದ ಪಕ್ಷಗಳಿಗೆ ಕೇಳದೆ ಉಚಿತ ಸಲಹೆ,ಒತ್ತಡ ಹಾಕುವುದು ಪ್ರಜಾಪ್ರಭುತ್ವ ಒಕ್ಕೂಟ ವ್ಯವಸ್ಥೆಯ ಮೇಲೆ ಮಾಡುವ ದೌರ್ಜನ್ಯ ಅಲ್ಲವೇ? ನೂರೆಂಟು ಧರ್ಮ,ಜಾತಿಗೊಬ್ಬ ಮ—- ಸ್ವಾಮಿಗಳು *ಪ್ರಜಾಪ್ರಭುತ್ವವನ್ನು ಮಜಾ ಪ್ರಭುತ್ವ* ಎಂದು ಭಾವಿಸಿರುವುದು ತಪ್ಪು.ಬಹುತೇಕ ಮಠಗಳ ವ್ಯಾಜ್ಯ ಕೋರ್ಟ್ ನಲ್ಲಿ ಇತ್ಯರ್ಥ ಆಗದೆ ತ್ರಿಶಂಕು ಸ್ಥಿತಿಯಲ್ಲಿ ಇರುವಾಗ, ನೂರೆಂಟು ಹಗರಣದಲ್ಲಿ ಸಿಲುಕಿರುವ ಮಠಾಧೀಶರು ಯಾವ ನೈತಿಕ ಮೌಲ್ಯ ಇಟ್ಟುಕೊಂಡು ಸರಕಾರ ರಚನೆಯಲ್ಲಿ ಸ್ವಜಾತಿ, ಸ್ವಧರ್ಮದ ನಾಯಕನ ಪಟ್ಟ ಕಟ್ಟಲು ಹೋರಾಟ ಮಾಡುತ್ತಿರುವುದು ಯೋಗ್ಯವೇ? ಬಹುತೇಕ ರಾಜಕಾರಣಿಗಳಿಗೆ ಧಾರ್ಮಿಕ ಬದ್ಧತೆ ಇಲ್ಲ.ಅವರಿಗೆ ಚುನಾವಣೆಯಲ್ಲಿ ಆರಿಸಿ ಬರುವುದೊಂದೆ ಮುಖ್ಯ ಗುರಿಯಾಗಿರುತ್ತದೆ.
ಒಳಗೆ ಕುಟಿಲ ಹೊರಗೆ ವಿನಯವಾಗಿ ಭಕ್ತರೆನಿಸಿಕೊಂಬವರ ಬಲ್ಲ ನೊಲ್ಲನಯ್ಯಾ ಲಿಂಗವು! ಅವರು ಸತ್ ಪಥಕ್ಕೆ ಸಲ್ಲರು ಸಲ್ಲರಯ್ಯಾ. ಒಳಹೊರಗೊಂದಾಗದವರಿಗೆ ಅಳಿಯಾಸೆದೋರಿ ಬೀಸಾಡುವನವರ ಜಗದೀಶ ಕೂಡಲಸಂಗಮದೇವ!
ಅವರ ತಾಳಕ್ಕೆ ತಕ್ಕಂತೆ ಕುಣಿಯುತ್ತಿರುವ ಮ—- ಸ್ವಾಮಿಜಿಗಳಿಂದ ಆಯಾ ಮಠಗಳ ಭವ್ಯ ಪರಂಪರೆಗೆ ಧಕ್ಕೆ ತಂದಂತಾಗುವುದಿಲ್ಲವೇ?
ಮ—– ಸ್ವಾಮೀಜಿಗಳು ಧರ್ಮ ಅಸ್ಮಿತೆಗಾಗಿ ಹೋರಾಟ ಮಾಡಲಿ ಬೆಂಬಲ ಸೂಚಿಸಲಿ ಆದರೆ ಘನತೆ ಗೌರವವನ್ನು ಬಿಟ್ಟು ಮಾತನಾಡುವುದನ್ನು ಬಿಟ್ಟು ಬಿಡಲಿ ಇದು ಯಾವುದೇ ಧರ್ಮದ ಗುರುಗಳಿಗೆ ಶೋಭೆಯಲ್ಲ.
ಮಾಡುವಂತಿರಬೇಕು ಮಾಡದಂತಿರಬೇಕು ಮಾಡುವ ಮಾಟದೊಳಗೆ ತಾನಿಲ್ಲದಂತಿರಬೇಕು ಕೂಡಲಸಂಗಮದೇವರ ನೆನೆವುತ್ತ ನೆನೆವುತ್ತ ನೆನೆಯದಂತಿರಬೇಕು
ರವೀಂದ್ರ. ಆರ್. ಪಟ್ಟಣ.
ಮುಳಗುಂದ —- ರಾಮದುರ್ಗ.
9481931842