ಬರಬಾರದೇ ನೀನು…?

ಪುಸ್ತಕ ಪರಿಚಯ

ಕೃತಿ ಶೀಷಿ೯ಕೆ …….ಬರಬಾರದೇ ನೀನು…?(ಗಜಲ್ ಗಳ ಸಂಕಲನ )

ಲೇಖಕರು : ಎ. ಹೇಮಗಂಗಾ ಮೊ.೮೯೭೦೯೩೧೨೫೮
ಪ್ರಕಾಶಕರು : ಶ್ರೀ. ಸಾಯಿ ಪ್ರಕಾಶನ
ಮೈಸೂರು ಮೊ.೭೯೭೫೩೦೧೫೮೧
ಪ್ರಕಟಿತ ವರ್ಷ. ೨೦೨೨
ಬೆಲೆ : ೧೭೫ ₹
ಪುಸ್ತಕಕ್ಕೆ ಸಂಪಕಿ೯ಸಬೇಕಾದ ಮೊ.ನಂ.೮೯೭೦೯೩೧೨೫೮

ಬದುಕು ಸಾಹಿತ್ಯ ಮತ್ತು ಸಂಗೀತವನ್ನು ಗಾಢವಾಗಿ ಪ್ರೀತಿಸುವ ಎ.ಹೇಮಗಂಗಾ , ಮೈಸೂರು ಇವರು ಕನ್ನಡ ಸಾಹಿತ್ಯ ಲೋಕದಲ್ಲಿ ಚಿರಪರಿಚಿತರಾಗಿದ್ದು, ಈಗಾಗಲೇ ಆಧುನಿಕ ವಚನಗಳು ಮತ್ತು ಭಾವಗೀತೆಗಳನ್ನು ಬರೆದು ಮುಕ್ತ ವಚನಾಮೃತ ಹಾಗೂ ಹೃದಯಗಾನಎಂಬ ಎರಡು ಸಂಕಲನಗಳನ್ನು ಪ್ರಕಟಿಸಿ ಕನ್ನಡ ಸಾಹಿತ್ಯ ಲೋಕಕ್ಕೆ ಅರ್ಪಿಸಿದ್ದಾರೆ. ಹೇಮಗಂಗಾ ಅವರು ಮೈಸೂರು ವಿಶ್ವವಿದ್ಯಾಲಯದ ಭೌತಶಾಸ್ತ್ರ ವಿಭಾಗದಲ್ಲಿ ಸ್ನಾತಕೋತ್ತರ ಪದವೀಧರೆಯಾಗಿದ್ದು (1983 ರಲ್ಲಿ ವಿಶ್ವವಿದ್ಯಾಲಯಕ್ಕೆ ಮೂರನೇ ಸ್ಥಾನ ಪಡೆದವರು ) ಇವರು ಸಿತಾರ್ ವಾದಕಿಯಾಗಿಯೂ ಖ್ಯಾತಿ ಪಡೆದಿದ್ದಾರೆ . ಅಲ್ಲದೆ ರಾಜ್ಯಮಟ್ಟದ ಸಿರಿಗನ್ನಡ ವೇದಿಕೆಯ ಸಂಸ್ಥಾಪಕ ಕಾರ್ಯದರ್ಶಿಯಾಗಿ, ಜಿಲ್ಲಾಧ್ಯಕ್ಷರಾಗಿ ಹಾಗೂ ರಾಜ್ಯಾಧ್ಯಕ್ಷರಾಗಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ ಅನುಭವವನ್ನು ಹೊಂದಿದ್ದಾರೆ. ಅನೇಕ ಪ್ರತಿಷ್ಠಿತ ಸಂಘ – ಸಂಸ್ಥೆಗಳ ಜೊತೆ ಒಡನಾಟವಿದೆ.‌ಸಂಸ್ಕೃತಿ ಪೋಷಕರೂ ಹೌದು. ಕಳೆದ ಎರಡು ದಶಕಗಳಿಂದ ಸಂಘಟನಾ ಕಾರ್ಯದಲ್ಲಿ ಗಂಭೀರವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದು ಸಾಹಿತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದ್ದಾರೆ . ಇವರ ಅನೇಕ ಗಜಲ್ ಗಳು ಖ್ಯಾತ ರಾಗಸಂಯೋಜಕರು ಮತ್ತು ಗಾಯಕರಾದ ಶ್ರೀ . ಅತಿಶಯ್ ಜೈನ್ ರಿಂದ ರಾಗ ಸಂಯೋಜನೆಗೊಂಡಿದ್ದು ತಮ್ಮ ಮಾಧುರ್ಯದಿಂದ ಯೂ-ಟ್ಯೂಬ್ ವೀಕ್ಷಕರ ಮೆಚ್ಚುಗೆಗೆ ಪಾತ್ರವಾಗಿವೆ.

‘ಗಜಲ್ ‘ ಒಂದು ಅರಬ್ಬಿ ಶಬ್ದವಾಗಿದ್ದು ಇದರ ಅರ್ಥ ಹೆಂಗಸಿನೊಡನೆ ಮಾತನಾಡುವುದು ಎಂದಾಗುತ್ತದೆ. ಗಜಲ್ ಅರಬ್ಬಿಯ ಶಬ್ದವಾದರೂ ಅದು ಅಲ್ಲಿ ಕಾವ್ಯವಾಗಿ ಬೆಳೆಯದೆ ಇರಾನ್ ದೇಶಕ್ಕೆ ಹೋಗಿ ಅಲ್ಲಿಯ ಪಾರ್ಸಿ ಭಾಷೆಯಲ್ಲಿ ಪ್ರೇಮ ಕಾವ್ಯವಾಗಿ ಜನರ ಮನ ಸೆಳೆಯಿತು. ಭಾರತಕ್ಕೆ ಬಂದು ಇಲ್ಲಿ ಉರ್ದು ಭಾಷೆಯಲ್ಲಿ ಗಜಲ್ ದೇಶಾದ್ಯಂತ ಹಬ್ಬಿ ‘ಉರ್ದು ಕಾವ್ಯ ಸಾಹಿತ್ಯದ ರಾಣಿ ‘ ಎಂದು ಮೆರೆಯಿತು . ಗಜಲ್ ಸ್ಥಾಯಿ ಗುಣವಾದ ಪ್ರೀತಿ, ಪ್ರೇಮ ,ವಿರಹ ,ಅನುರಾಗ ,ಸಂಧಾನ ,ಅನುಸಂಧಾನ ,ಸೂಫಿ ಭಕ್ತಿ , ಭಾವ ಪರವಶತೆಯನ್ನು ಒಳಗೊಂಡು ಲೌಕಿಕದಿಂದ ಅಲೌಕಿಕದ ಕಡೆ ಕೊಂಡ್ಯೊಯುವ ಕಾವ್ಯವಾಗಿದೆ .ಇದು ಹೃದಯದ ಕಾವ್ಯವಾಗಿದ್ದು ಒಂದು ಹೃದಯ ಇನ್ನೊಂದು ಹೃದಯಕ್ಕೆ ತಟ್ಟುವಂತೆ ಪಿಸುಮಾತಲಿ ತನ್ನ ಪ್ರೀತಿಯನ್ನು ಹಂಚಿಕೊಳ್ಳುವ ಪ್ರೇಮ ಕಾವ್ಯವಾಗಿದೆ. ಮೊದಮೊದಲು ಮೇಲೆ ಹೇಳಿದ ವಿಷಯಗಳ ಬಗ್ಗೆ ಗಜಲ್ ಗಳು ರಚನೆಯಾಗುತ್ತಿದ್ದು ಕಾಲಾಂತರದಲ್ಲಿ ಬದಲಾವಣೆಯಾಗಿ ಇಂದು ಎಲ್ಲಾ ವಿಷಯಗಳಲ್ಲಿ ಗಜಲ್ ನ್ನು ರಚನೆ ಮಾಡುತ್ತಿದ್ದಾರೆ. ಸಾಮಾಜಿಕ ಕಳಕಳಿ ,ಮಹಿಳಾ ಸಂವೇದನೆ ,ಜಾತಿ, ಧರ್ಮದ ಹಾಗೂ ಪರಿಸರ ಪ್ರೇಮ, ದೇಶ ಪ್ರೇಮ, ವ್ಯಕ್ತಿ ಚಿತ್ರಣದ ಬಗ್ಗೆ ಗಜಲ್ ಗಳು ರಚನೆಯಾಗುತ್ತಿವೆ. ಇಂದು ಭಾರತದ ಎಲ್ಲಾ ಭಾಷೆಯಲ್ಲಿ ಗಜಲ್ ಗಳ ರಚನೆ ನಡೆದಿದೆ.ಕನ್ನಡದಲ್ಲೂ ಗಜಲ್ ರಚನೆಯು ಭರದಿಂದ ಸಾಗಿದೆ. ಕನ್ನಡ ಗಜಲ್ ರಚನೆಗೆ ಬೇಕಾಗುವ ಛಂದಸ್ಸನ್ನು ಡಾ.ಶಾಂತರಸರು ಸಿದ್ಧಪಡಿಸಿದ್ದು ಅವರನ್ನು ಕನ್ನಡ ಗಜಲ್ ನ ಹರಿಕಾರರೆಂದು ಹೇಳಲಾಗುತಿದೆ.ಇಂದು ವಯಸ್ಸಿನ ಭೇದವಿಲ್ಲದೆ ಎಲ್ಲಾ ಕನ್ನಡ ಕವಿಗಳು ಗಜಲ್ ರಚನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಎ ಹೇಮಗಂಗಾ ಅವರ ಕೃತಿ *ಬರಬಾರದೇ ನೀನು..?* ಎಂಬ ಚೊಚ್ಚಲ ಗಜಲ್ ಗಳ ಸಂಕಲನದಲ್ಲಿ ಒಟ್ಟು ೮೦ ಗಜಲ್ ಗಳಿವೆ.ಕೃತಿಯನ್ನು ತಮ್ಮ ಗುರುಗಳು ಮತ್ತು ಸಿರಿಗನ್ನಡ ವೇದಿಕೆಯ ಸಂಸ್ಥಾಪಕ ಅಧ್ಯಕ್ಷರಾದ ಕೀರ್ತಿಶೇಷ ಶ್ರೀ.ಎಂ.ಎಸ್. ವೆಂಕಟರಾಮಯ್ಯನವರಿಗೆ ಭಕ್ತಿಪೂರ್ವಕವಾಗಿ ಅರ್ಪಿಸಿದ್ದಾರೆ.

ಈ ಸಂಕಲನಕ್ಕೆ ಶ್ರೇಷ್ಠ ಗಜಲ್ ಕಾರರಾದ ಡಾ. ಗೋವಿಂದ ಹೆಗಡೆ ಅವರು ಮೌಲಿಕವಾದ ವಿಮರ್ಶಾತ್ಮಕವಾದ ಮುನ್ನುಡಿಯನ್ನು ಬರೆದು ಸಂಕಲನದ ಮೌಲ್ಯವನ್ನು ಹೆಚ್ಚಿಸಿದ್ದಾರೆ .ಇನ್ನೊಬ್ಬ ಶ್ರೇಷ್ಠ ಗಜಲ್ ಕಾರರಾದದ ಡಾ.ಮಲ್ಲಿನಾಥ ತಳವಾರ ಅವರು ತುಲನಾತ್ಮಕವಾದ ಬೆನ್ನುಡಿಯನ್ನು ಬರೆದು ಬೆನ್ನು ತಟ್ಟಿದ್ದಾರೆ. ಜೊತೆಗೆ, ಗಜಲ್ ನ ಹುಟ್ಟು, ಬೆಳವಣಿಗೆಗಳ ಬಗ್ಗೆ ಅವರೇ ವಿಸ್ತ್ರತವಾಗಿ ಬರೆದಿರುವ ಗಜಲ್ ಸಾಹಿತ್ಯ ಪರಂಪರೆ ಎಂಬ ಶೀರ್ಷಿಕೆಯುಳ್ಳ ಲೇಖನವನ್ನು ಇಲ್ಲಿ ಪ್ರಕಟಿಸಲಾಗಿದೆ. ನಿಸ್ಸಂಶಯವಾಗಿ ಈ ಲೇಖನವು ಗಜಲ್ ರಚನಕಾರರಿಗೆ ಬಹಳ ಸಹಕಾರಿಯಾಗಿದೆ. ನನ್ನ ಹಾಗೂ ಖ್ಯಾತ ಲೇಖಕ ಶ್ರೀ. ಸಿದ್ಧರಾಮ ಹೊನ್ಕಲ್ ಅವರ ಶುಭಹಾರೈಕೆಗಳಿವೆ. ಹೇಮಗಂಗಾರ ಸಾಧನೆಗಳನ್ನು ತಮ್ಮ ಲೇಖನದ ಮೂಲಕ ಮೈಸೂರಿನ ಪ್ರಸಿದ್ಧ ಕವಿ ಶ್ರೀ. ಎಂ.ಬಿ. ಸಂತೋಷ್ ಪರಿಚಯಿಸಿದ್ದಾರೆ. ಸಂಕಲನದ ಮುಖಪುಟ ಚಿತ್ರವನ್ನು ಕಲಾಕಾರ ಶ್ರೀ.ಸತೀಶ್, ಮೈಸೂರು ಅವರು ಸುಂದರವಾಗಿ ಮತ್ತು ಅರ್ಥಪೂರ್ಣವಾಗಿ ರಚಿಸಿ ಸಂಕಲನಕ್ಕೆ ಮೆರುಗು ನೀಡಿದ್ದಾರೆ.

ಹೇಮಗಂಗಾ ಅವರ ಬರಬಾರದೇ ನೀನು..? ಎಂಬ ಸಂಕಲನದ ಗಜಲ್ ಗಳನ್ನು ಓದುತ್ತಾ ಹೊರಟಂತೆ ಅಲ್ಲಿ ವಿವಿಧ ವಿಷಯಗಳ ಗಜಲ್ ಗಳು ನಮ್ಮ ಗಮನ ಸೆಳೆಯುತ್ತವೆ. ಪ್ರೀತಿ ,ಪ್ರೇಮ ,ವಿರಹ, ಸಂಧಾನ ,ಕನಸು ,ಆತ್ಮ ಸಂಗಾತಿಯ ಹುಡುಕಾಟ ,ಸಾಮಾಜಿಕ ಕಳಕಳಿ ,ಪರಿಸರ ಪ್ರೇಮ, ದೇಶ ಪ್ರೇಮ ,ವ್ಯಕ್ತಿ ಚಿತ್ರಣ( ಗುರುವಿನ ಬಗ್ಗೆ, ಬುದ್ಧ, ಅಂಬೇಡ್ಕರ್ ,ಗಾಂಧಿ ,ಅಕ್ಕ ) ಹೀಗೆ ಅನೇಕ ವಿಷಯದ ಗಜಲ್ ಗಳು ಓದುಗರನ್ನು ಚಿಂತನೆಗೆ ಹಚ್ಚುತ್ತವೆ. ಹೇಮಗಂಗಾ ಅವರ ಗಜಲ್ ಗಳಲ್ಲಿ ನೋವಿನ ಆರ್ದ್ರತೆಯೇ ಹೆಚ್ಚಾಗಿದೆ. ಸಂಗಾತಿಯೊಂದಿಗೆ ಬಾಳುವಾಗ ಮುನಿಸು,ದುಃಖ, ದುಮ್ಮಾನ, ವಿಷಾದ ಮತ್ತು ತಲ್ಲಣಗಳನ್ನು ಹುಟ್ಟುಹಾಕುವ ಅನೇಕ ಗಜಲ್ ಗಳನ್ನು ನಾವು ಇಲ್ಲಿ ಕಾಣುತ್ತೇವೆ .ಇವರ ತಖಲ್ಲುಸ್ ” ಹೇಮ ” ಎಂದು ಉಪಯೋಗಿಸಿದ್ದಾರೆ .ಬಹಳಷ್ಟು ಗಜಲ್ ಗಳ ಮಕ್ತಾದಲ್ಲಿ ತಖಲ್ಲುಸ್ ನ್ನು ಬಳಸದೇ ಇರುವುದನ್ನು ಗಮನಿಸಬಹುದು. ಸಂಕಲನದಲ್ಲಿ ಬಹು ಕಾಫಿಯಾ ಗಜಲ್ ,ಜುಲ್ ಕಾಫಿಯಾ ಗಜಲ್ ,ಸಂಪೂರ್ಣ ಮತ್ಲಾ ,ಕಾಫಿಯಾನ ಗಜಲ್ ಗಳಿದ್ಜು ಅವು ಓದುಗುರಿಗೆ ತಿಳಿಯಲೆಂದು ಹೆಸರನ್ನು ನಮೂದಿಸಿದ್ದಾರೆ.

ಮಧುರ ಒಡನಾಟದ ನೆನಪುಗಳು ಬೆಂಬಿಡದೆ ಕಾಡುತಿವೆ ಬರಬಾರದೇ ನೀನು
ಇರುಳಲಿ ರಾತ್ರಿರಾಣಿ ಸುಮಗಳು ಘಮಲು ಹರಡುತಿವೆ ಬರಬಾರದೇ ನೀನು

ಮೇಲಿನ ಗಜಲ್ ನಲ್ಲಿಯ *”ಬರಬಾರದೇ ನೀನು”* ಎಂಬ ರದೀಫ್ ಅನ್ನೇ ಹೇಮಗಂಗಾ ಅವರ ತಮ್ಮ ಸಂಕಲನದ ಶೀರ್ಷಿಕೆಯಾಗಿ ಇಟ್ಟಿದ್ದಾರೆ. ಆತ್ಮ ಸಂಗಾತಿ ,ಬಾಳ ಸಂಗಾತಿ ಬದುಕಿನಿಂದ ದೂರಾದಾಗ ಮನನೊಂದು ಅವನ ಬರುವಿಕೆಗಾಗಿ ಕಾಯುತ್ತಾ , ಹಂಬಲಿಸುತ್ತಾ ,ಜೊತೆಯಲ್ಲಿ ಕಳೆದ ಮಧುರ ಗಳಿಗೆಗಳ ನೆನಪು ಭೂತವಾಗಿ ಕಾಡುತ್ತವೆಂದು , ಆತನ ಬರುವಿಗಾಗಿ ಪ್ರಕೃತಿ ಸಿಂಗರಿಸಿ ಕಾಯುತ್ತಿದೆಯೆಂದು ಹೇಳುತ್ತಾ , ‘ ಬರಬಾರದೇ ನೀನು….’ ಎಂದು ಹೃದಯ ಆರ್ದ್ರತೆಯಿಂದ ವಿನಂತಿಸಿಕೊಳ್ಳುತ್ತದೆ . ಗಜಲ್ ನಲ್ಲಿ ಒಂಟಿತನದ ವಿರಹದ ತಾಪ ಎದ್ದು ಕಾಣುತ್ತಿದೆ. ಉತ್ತಮವಾದ ರೂಪಕಗಳಿಂದ ಈ ಗಜಲ್ ನ್ನು ಹೆಣೆದಿದ್ದಾರೆ.

ಬೆಳದಿಂಗಳ ರಾತ್ರಿಯೊಂದನು ನಿನ್ನ ಜೊತೆಯಲಿ ಕಳೆಯಬೇಕಿದೆ
ತಿಂಗಳ ತಿಳಿಬೆಳಕ ತಂಪಲಿ ಹರವಾದ ನಿನ್ನೆದೆಗೆ ಒರಗಬೇಕಿದೆ

ಪ್ರಿಯತಮೆ ತನ್ನ ಪ್ರಿಯಕರನೊಡನೆ ಸದಾ ಜೊತೆಯಾಗಿ ಇರಬೇಕೆಂದು ಬಯಸುವ ಮನದ ನೂರು ಭಾವನೆಗಳನ್ನು ವಿವಿಧ ರೂಪಕಗಳೊಂದಿಗೆ ಬಿಂಬಿಸಿದ್ದಾರೆ. ‘ ಬೆಳದಿಂಗಳ ರಾತ್ರಿಯನ್ನು ನಿನ್ನೊಂದಿಗೆ ಕಳೆಯಬೇಕಿದೆ, ತಿಂಗಳ ಬೆಳಕ ತಂಪಿನಲ್ಲಿ ವಿಶಾಲವಾದ ನಿನ್ನೆದೆಗೆ ಒರಗಿ ಸಮಯ ಕಳೆಯಬೇಕಿದೆ, ಜಗದ ಜಂಜಾಟವನ್ನು ಮರೆತು ನಿನ್ನ ತೋಳ ಸೆರೆಯಲ್ಲಿ ಮೈಮರೆಯಬೇಕಿದೆ ‘ ಎಂದು ತನ್ನ ಕನಸುಗಳನ್ನು ಬಿತ್ತರಿಸುವ ಗಜಲ್ ಕಾರ್ತಿ ಮಕ್ತಾದಲ್ಲಿ ‘ ನನ್ನ ಕನಸುಗಳೆಲ್ಲ ಈಡೇರುತ್ತವೆಯೋ ಇಲ್ಲವೋ ಯಾರು ಬಲ್ಲರು, ವಿಧಿ ಲಿಖಿತ ಏನೆಂದು ತಿಳಿಯದಾಗಿದೆ ‘ ಎಂದು ಹೇಳುತ್ತಾ ‘ ಪ್ರೇಮ ಸಂಯೋಗದಿ ನಿನ್ನಲ್ಲೇ ಶಾಶ್ವತವಾಗಿ ಲೀನವಾಗಬೇಕಿದೆ ‘ಎಂಬ ಮನದ ಬಯಕೆಯನ್ನು ಸುಂದರವಾಗಿ ಗಜಲ್ ನಲ್ಲಿ ವಿವರಿಸಿದ್ದಾರೆ.

ವಿರಹ ಹೃದಯಕೆ ಹೊರೆಯಾಗುತಿದೆ ತೊರೆದು ಹೋಗದಿರು ನನ್ನ
ಸನಿಹ ನೀನಿರದ ಕೊರಗು ಕೊರೆಯುತಿದೆ ತೊರೆದು ಹೋಗದಿರು ನನ್ನ

ಸ್ಪರ್ಧೆಯೊಂದರಲ್ಲಿ ಪ್ರಥಮ ಬಹುಮಾನವನ್ನು ಪಡೆದಿರುವ ಇದು ಒಂದು ವಿರಹದ ಗಜಲ್ ಆಗಿದ್ದು ನಲ್ಲೆ ತನ್ನ ನಲ್ಲನಿಗೆ ‘ನನ್ನ ತೊರೆದು ಹೋಗದಿರು’ ಎಂದು ಬಿನ್ನವಿಸಿಕೊಳ್ಳುತ್ತಾಳೆ. ವಿರಹ. ಏಕಾಂಗಿ ಬದುಕು, ಬಿಸಿ ಅಪ್ಪುಗೆಯ ಕಾಡುವ ನೆನಪುಗಳು, ಅಧರ ಮಧು ಕುಡಿಯುವ ಹಂಬಲ, ವಿರಹಿಣಿಯ ಅಸಹನೀಯ ನೋವು – ಇವೆಲ್ಲವನ್ನೂ ಸಮರ್ಥವಾಗಿ ಬಿಂಬಿಸಿರುವ ಗಜಲ್ ಕಾರ್ತಿ ‘ ಬುವಿಯೊಂದು ಗೋಲ ಮರಳಲೇಬೇಕು ನನ್ನೆಡೆಗೆ’ ಎಂಬ ಆಶಯವನ್ನೂ ವ್ಯಕ್ತಪಡಿಸಿದ್ದಾರೆ.

ಕಾವಿಧಾರಿ ಕಾಮುಕನಲ್ಲವೆಂಬುದು ಹುಸಿಯಾಗಿದೆ ಈಗ
ಸರ್ವಸುಖದ ಪರಿತ್ಯಾಗಿಯೆಂಬುದು ಹುಸಿಯಾಗಿದೆ ಈಗ

ಇದು ಒಂದು ಸಾಮಾಜಿಕ ಕಳಕಳಿಯ ಹಾಗೂ ಚಿಂತನೆಗೆ ಹಚ್ಚುವ ಗಜಲ್ ಆಗಿದೆ. ಇಂದು ಸಮಾಜದಲ್ಲಿ ಧಮಾ೯ಧಿಕಾರಿಗಳು, ಧರ್ಮಪೀಠದ ಮೇಲೆ ಕಾವಿ ಉಡುಪು ಧರಿಸಿ ಜಗದ್ಗುರುಗಳು ಎನಿಸಿಕೊಂಡವರು ಜನರಿಗೆ ಸರ್ವ ಸುಖ ಪರಿತ್ಯಾಗ ಮಾಡಿದ ಶ್ರೇಷ್ಠ ಪೂಜ್ಯ ವ್ಯಕ್ತಿ ಎಂದು ತೋರಿಸುವ ಗೋಮುಖ ವ್ಯಾಘ್ರಗಳಾಗಿ ಪಂಚೇಂದ್ರಿಯಗಳನ್ನು ಹತೋಟಿಯಲ್ಲಿಟ್ಟುಕೊಳ್ಳದ ಕಾಮುಕರಾಗಿ ತಮ್ಮ ಮಹಿಳಾ ಭಕ್ತರನ್ನು ಲೈಂಗಿಕ ದೌರ್ಜನ್ಯಕ್ಕೆ ಒಳಪಡಿಸುವುದನ್ನು ಖಂಡಿಸಿ ಅವರ ಮುಖವಾಡವನ್ನು ಕಳಚುವ ಪ್ರಯತ್ನ ಮಾಡಿದ ಗಜಲ್ ಇದಾಗಿದೆ. ಗಜಲ್ ಕಾರ್ತಿ ಸರಳ ರೂಪಕಗಳೊಂದಿಗೆ ತುಲನಾತ್ಮಕವಾಗಿ ಗಜಲನ್ನು ರಚಿಸಿದ್ದಾರೆ.

ದೇಶದ ಗಡಿಗಳ ಕಾಯುತ್ತಿದ್ದೇವೆ ಜೀವಗಳ ಒತ್ತೆಯಿಟ್ಟು
ಶತ್ರು ವಿನಾಶಕ್ಕೆ ಪಣ ತೊಟಿದ್ದೇವೆ ಜೀವಗಳ ಒತ್ತೆಯಿಟ್ಟು

ಇದು ದೇಶ ಭಕ್ತಿಯ ಗಜಲ್ ಆಗಿದ್ದು ಗಜಲ್ ಕಾರ್ತಿ ಪರಕಾಯ ಪ್ರವೇಶವೆಂಬಂತೆ ಸೈನಿಕರ ತೊಂದರೆಯನ್ನು , ನೋವುಗಳನ್ನು ಮತ್ತು ಅದೆಲ್ಲವನ್ನು ಮರೆತು ದೇಶದ ಗಡಿ ಕಾಯುವ ಕಾಯಕದಲ್ಲಿರುವ ಬದ್ಧತೆಯನ್ನು ಸುಂದರ ರೂಪಕಗಳೊಂದಿಗೆ ಚಿತ್ರಿಸಿದ್ದಾರೆ.

ಹೇಮಗಂಗಾ ಅವರ ಗಜಲ್ ಸಂಕಲನ ಬರಬಾರದೇ ನೀನು…? ಎಂಬ ಕೃತಿಯಲ್ಲಿ ಇಂತಹ ಇನ್ನೂ ಅನೇಕ ಗಜಲ್ ಗಳು ಚಿಂತನೆಗೆ ಹಚ್ಚುತ್ತವೆ. ಹಾಗೂ ಸರಳವಾಗಿ ಓದಿಸಿಕೊಂಡು ಹೋಗುತ್ತವೆ. ಇದು ಇವರ ಮೊದಲ ಗಜಲ್ ಸಂಕಲನವಾದರೂ ಗಜಲ್ ರಚನೆಗೆ ಪಾಲಿಸಬೇಕಾದ ನಿಯಮಗಳನ್ನು ಮತ್ತು ಛಂದಸ್ಸನ್ನು ಅರಿತು ತೂಕಬದ್ಧವಾಗಿ ಗಜಲ್ ಗಳನ್ನು ರಚಿಸಿದ್ದಾರೆ .ಕೆಲವು ಗಜಲ್ ಗಳು ಸ್ವಲ್ಪ ವಾಚ್ಯವಾಗಿದ್ದು ಮತ್ತು ಬೆಹರ್ ( ಗಜಲ್ ನ ಮಿಸ್ರಾ ಸಾಲು) ಉದ್ದವಾಗಿದ್ದು ಕಂಡು ಬರುತ್ತದೆ. ಗಜಲ್ ಒಂದು ಹಾಡುಗಬ್ಬವಾದ ಕಾರಣ ಸಾಲುಗಳು ಚಿಕ್ಕವಾಗಿದ್ದರೆ ಹಾಡಲು ಚೆನ್ನಾಗಿ ಬರುತ್ತವೆ. ಕನ್ನಡ ಭಾಷೆಯಲ್ಲಿ ಪ್ರೌಢಿಮೆ ಹೊಂದಿರುವ ಹಾಗೂ ಗಜಲ್ ಕಾರ್ತಿಯಾಗಿ ಹೆಸರು ಮಾಡಿರುವ ಹೇಮಗಂಗಾ ಅವರು ಮುಂದಿನ ಸಂಕಲನದಲ್ಲಿ ಇವುಗಳನ್ನು ಗಮನದಲ್ಲಿ ಇಟ್ಟುಕೊಂಡು ಮತ್ತಷ್ಟು ಸತ್ವಯುತ ಗಜಲ್ ಗಳ ಸಂಕಲನವನ್ನು ಪ್ರಕಟಿಸುತ್ತಾರೆ ಎಂಬ ಭರವಸೆಯೊಂದಿಗೆ ಶುಭ ಹಾರೈಸುತ್ತಾ ನನ್ನ ಬರಹಕ್ಕೆ ವಿರಾಮ ನೀಡುತ್ತೇನೆ.

 

ಪ್ರಭಾವತಿ ಎಸ್ ದೇಸಾಯಿ
ವಿಜಯಪುರ

Don`t copy text!