ಚಂದಿಮರಸರ ವೈಚಾರಿಕ ಪ್ರಜ್ಞೆಯ ಅನುಸಂಧಾನ
12 ನೇ ಶತಮಾನದ ಶರಣ ಚಂದಿಮರಸರು ವಚನ ಸಾಹಿತ್ಯದ ಇತಿಹಾಸದಲ್ಲಿಯೇ ವಿಶಿಷ್ಟವಾದ ಶರಣರು. ಬಸವಣ್ಣನವರಿಗಿಂತ ಹಿರಿಯ ವಚನಕಾರನೆಂದು ಕವಿ ಚರಿತ್ರೆಕಾರರು ಅಭಿಪ್ರಾಯಪಟ್ಟಿದ್ದಾರೆ. ಆದರೆ ಕೆಲ ಚರಿತ್ರೆಕಾರರು ಚಂದಿಮಾರಸನು ಕೆಂಭಾವಿ ಭೋಗಣ್ಣನ ಸಮಕಾಲಲೀನ ನಾಗಿರಬೇಕೆಂಬುದನ್ನು ಸ್ಪಷ್ಟಪಡಿಸಿದ್ದನ್ನು ಕಾಣಬಹುದು. ಕೆಂಬಾವಿ ಬೋಗಣ್ಣನ ಕಾಲ ಕ್ರಿ ಶ 1020 ಎಂಬ ಅಭಿಪ್ರಾಯವನ್ನು ತಳ್ಳಿಹಾಕಿ ಹಿರಿಯ ಶರಣನೆಂಬ ಹೇಳಿಕೆಗಳಿವೆ. ಇವರ ಕಾಲ ಕ್ರಿ ಶ 1160.
ಚಂದಿಮರಸನು ಕೃಷ್ಣಾ ನದಿ ತೀರದ ಚಿಮ್ಮಲಿಗೆ ಈತನ ಹುಟ್ಟೂರು. ಚಿಮ್ಮಲಿಗೆಯಲ್ಲಿ ಈ ಶರಣರ ಗುಡಿಯನ್ನು ಈಗಲೂ ಕಾಣಬಹುದು. ಚಂದಿಮರಸರು ಬಸವಣ್ಣನವರಿಗಿಂತ 140 ವರ್ಷಗಳ ಹಿಂದೆ ಇದ್ದರೆಂಬ ಊಹೆಗೆ ಇವರ ವಚನಗಳ ಮೂಲಕ ಸಮರ್ಥನೆ ಮಾಡಲು ಸಾಧ್ಯವಾಗುವುದಿಲ್ಲ. ಚಂದಿಮರಸರ ಗುರು ನಿಜಗುಣದೇವಾ ಎಂಬ ಊಹೆಯನ್ನು ಮಹಾದೇವಿಯಕ್ಕನ ಒಂದು ವಚನದಲ್ಲಿ ಕಾಣಬಹುದು. ನಿಜಗುಣರನ್ನು ಆರೂಢ ಸ್ಥಲ ಎಂದು ಹೇಳಿ ಚಂದಿಮರಸರನ್ನು ಗೌರವಿಸಿದ್ದನ್ನು ಈ ವಚನದಲ್ಲಿ ಕಾಣಬಹುದು.
ಬಸವಣ್ಣನ ಭಕ್ತಿ | ಚೆನ್ನಬಸವಣ್ಣನ ಜ್ಞಾನ
ಮಡಿವಾಳಯ್ಯನ ನಿಷ್ಠೆ | ಪ್ರಭುದೇವರ ಜಂಗಮ ಸ್ಥಲ
ಅಜಗಣ್ಣನ ಐಕ್ಯ ಸ್ಥಲ | ನಿಜಗುಣನ ಆರೂಢ ಸ್ಥಲ
ಸಿದ್ದರಾಮಯ್ಯನ | ಸಮಾಧಿ ಸ್ಥಲ
ಇಂತಿವರ ಕರುಣ ಪ್ರಸಾದ | ಎನಾಗಾಯಿತ್ತು ಚೆನ್ನಮಲ್ಲಿಕಾರ್ಜುನ
ನಿಜಗುಣಯೋಗಿ ಇವರಿಂದ ದೀಕ್ಷೆ ಪಡೆದುವವಶರಣ ಧರ್ಮದ ಸಂಸ್ಕಾರವನ್ನು ಪಡೆದು ನಿಜ ಶರಣನಾದ ಎಂಬ ಖಚಿತ ಅಭಿಪ್ರಾಯ ಕೊಡಬಹುದು. ಸಿಮ್ಮಲಿಗೆಯ ಚೆನ್ನರಾಮ ಎಂಬ ಅಂಕಿತದ ಮೂಲಕ 160 ವಚನಗಳನ್ನು ಬರೆದಿದ್ದಾನೆ. ಆಧ್ಯಾತ್ಮ ಅನುಭಾವ ಆತ್ಮ ತತ್ವ ಶರಣ ಸ್ತುತಿಯ ವಚನಗಳು ಶರಣ ಸಾಹಿತ್ಯದಲ್ಲಿಯೇ ಭದ್ರ ಸ್ಥಾನವನ್ನು ಪಡೆದ ಸಾಹಿತಿಕ ತಾತ್ವಿಕ ವಚನಗಳಾಗಿವೆ.
ಚಂದಿಮರಸರು ಗುಲ್ಬರ್ಗ ಜಿಲ್ಲೆಯ ಕೆಂಭಾವಿಯಲ್ಲಿ ಅರಸನಾಗಿದ್ದು ಜೇಡರ ದಾಸಿಮಯ್ಯರಿಗಿಂತ ಹಿರಿಯನಿರಬೇಕು ಎಂಬ ಅಭಿಪ್ರಾಯ ಡಾ ಡಿ.ಎಲ್ ನರಸಿಂಹಾಚಾರ್ಯರ ಈ ಮಾತನ್ನು ನಿರಾಕರಿಸುವಂತಿಲ್ಲ. ಶರಣ ಭೋಗಣ್ಣನ ಪ್ರಭಾವಕ್ಕೆ ಒಳಗಾಗಿ ಅರಸೊತ್ತಿಗೆಯನ್ನು ತ್ಯಜಿಸಿ ಶ್ರೇಷ್ಠ ವಚನಕಾರನಾಗಿದ್ದ.
ಚಂದಿಮರಸ ವಚನ ಮನಸ್ಸುಗಳ ಗೆದ್ದ ಶರಣನೆಂದು ಸಮರ್ಥಿಸುವ ಪ್ರಯತ್ನ ಈ ಲೇಖನದ್ದಾಗಿದೆ. ಇಲ್ಲಿಯ ವಚನಗಳ ವ್ಯಾಖ್ಯಾನಗಳು ಆ ಕಾಲದ ಪ್ರತಿರೋಧಗಳು ಅರ್ಥೈಸಿ ಹೇಳುವ ಸಾಕಷ್ಟು ಸವಾಲುಗಳು ನನ್ನ ಮುಂದೆ ಕಾಡುತ್ತವೆ. ವೈದಿಕ ಸಾಹತ್ಯದ ಅಬ್ಬರದಲ್ಲಿ ಕ್ರಿ ಶ 11 ರಿಂದ 12 ನೇ ಶತಮಾನವು ಸ್ವಲ್ಪ ಮಂಕಾಯಿತೇ? ಎಂಬ ಪ್ರಶ್ನೆ ಕಾಡುತ್ತದೆ. ಏಕೆಂದರೆ ಚಂದಿಮರಸನು ಬ್ರಾಹ್ಮಣನಾಗಿದ್ದು ನಂತರ ಶರಣಾಗಲು ಕಾರಣ ಅಂದು ಕಂಡು ಬಂದ ಮಡಿವಂತಿಕೆ ವ್ಯವಸ್ಥೆಯ ದರ್ಶನಗಳು ತನ್ನನ್ನು ಏಕಾಂಗಿಯಾಗಿಸಿ ಹೊಸಕಿ ಹಾಕಬಹುದೆಂಬ ಭಯ ನಿರಾಶೆ ಕಾಡಿರಬೇಕು. ಏಕೆಂದರೆ ವೈಷ್ಣವ ಸಾಹಿತ್ಯದಲ್ಲಿ ಸಂಸಾರ ಬೇರೆ ಮೋಕ್ಷ ಬೇರೆಯಾಗಿ ಕಂಡರು. ಹರಿಯು ಬವ ಬಂಧನಗಳನ್ನು ಬಿಡಿಸಬೇಕು ಎನ್ನುವುದು ಭಕ್ತರ ಅಳಲಾಗಿತ್ತು. ಆದರೆ ಶರಣರು ಅನುಭಾವಿಕ ನೆಲೆಯಿಂದ ಅಂಗ ಲಿಂಗ ಸಂಬಂಧದಲ್ಲಿ ದೇವರನ್ನು ಕಂಡು ಅದ್ವೈತವನ್ನು ಹೇಳಿದರು. ದ್ವೈತಿಯಾದ ಚಂದಿಮರಸ ಸಂಸಾರಿಕ ಬದುಕನ್ನು ಆಶಾವಾದಿತನದಿಂದ ನೋಡಿರಬೇಕು. ವೈದಿಕ ವ್ಯವಸ್ಥೆಯ ಗೊಂದಲಗಳನ್ನು ದಾಟಿ ಸಾಮಾನ್ಯರಲ್ಲಿ ಸಾಮಾನ್ಯ ಶರಣನಾಗಿ ಬದುಕಿ ತೋರಿಸಿದವನಾಗಿದ್ದ.
ಬುದ್ಧಿವಂತಿಕೆ ಮತ್ತು ತರ್ಕವಾದಗಳನ್ನೇ ಬಂಡವಾಳ ಮಾಡಿಕೊಂಡು ಮತ್ತೊಬ್ಬರನ್ನು ಹೀಯಾಳಿಸುತ್ತಾ ಮುಗ್ಧ ಜನರನ್ನು ಶೋಷಿಸುತ್ತಾ ತಾವೇ ಭಗವಂತನ ಪ್ರತಿರೂಪವೆಂದು ಹೇಳಿಕೊಂಡ ಕಾಲದಲ್ಲಿ ಚಂದಿಮರಸನು ಶರಣರ ಆಡಂಬರರಹಿತ ಸರಳ ಜೀವನಕ್ಕೆ ಮಾರುಹೋಗಿದ್ದ..
ಎಕ್ಕಸಿಕ್ಕಗೆಡದವನೆ ಅದ್ವೈತಿ | ಆನೇನೆಂಬೆನಯ್ಯ
ತಾನಲ್ಲದನ್ಯವಿಲ್ಲವೆಂದರಿದ | ನಿಜಗುಣ ಶಿವಯೋಗಿ
ಎನುವನು | ತಾನರಿಯಬಲ್ಲನೆ ಹೇಳಾ
ಇನ್ನು ಸ್ತುತಿ | ನಿಂದೆಗೆಡೆಯುಂಟೆ?
ನಿಜಗುಣನಲ್ಲಿ ತಿಳಿದ ತಿಳಿವು ನೀನೇ | ಸಿಮ್ಮಲಿಗೆಯ ಚೆನ್ನರಾಯ
ದ್ವೈತ ಅದ್ವೈತ ಒಳ ಸುಳುಹುಗಳು ಒಂದು ನಿರ್ದಿಷ್ಟ ಚೌಕಟ್ಟಿನಲ್ಲಿ ಪ್ರಕಟಗೊಂಡದ್ದನ್ನು ಕಾಣಬಹುದು. ಅದ್ವೈತವೆನ್ನುವುದು ಆಧ್ಯ್ಯಾತ್ಮಿಕ ಅವಕಾಶವನ್ನು ಗಟ್ಟಿಗೊಳಿಸುವ ಮತ್ತು ನಮ್ಮ ವಿವೇಚನಾ ಚರ್ಚೆಗೆ ಮರುಶೋಧನ ಪರಿಶ್ರಮವದು. ಚಂದಿಮರಸ ಶರಣನಾದರು ತತ್ವಗಳ ಸಾಮಿಪ್ಯದಲ್ಲಿ ಅದ್ವೈತ ಎನ್ನುತ್ತಾನೆ. ಏಕೆಂದರೆ ಅದ್ವೈತವೆಂದರೆ ಗುರುವಾದ ನಿಜಗುಣರನ್ನು ಶಿವ ಕಾಯದ ಮೂಲಕ ಕಂಡವನಾಗಿದ್ದನು. ವೇದ ಉಪನಿಷತ್ತುಗಳನ್ನು ಬಿಡಂಬನಾತ್ಮಕವಾಗಿ ಅಲ್ಲಗಳದವನಾಗಿದ್ದನು. ದ್ವೈತ ಅದ್ವೈತದ ಈ ಹೇಳಿಕೆಗಳು ಗಣಾಚಾರದ ಆದರ್ಶವಾದ ಗಳಾಗಿವೆ. ಈ ಹಿನ್ನೆಲೆಯಲ್ಲಿ ಸಮಾಜದ ಧಾರ್ಮಿಕ ತಿಕ್ಕಾಟಗಳನ್ನು ಪರೀಕ್ಷಿಸುತ್ತಾನೆ ಪರಂಪರೆಯ ಅಶೋತ್ತರಗಳನ್ನು ಪ್ರಶ್ನಿಸುತ್ತಾನೆ.
“ಎಕ್ಕಸಿಕ್ಕ ಗೆಡೆದವನೇ ಅದ್ವೈತಿ ಆನೇನೆಂಬೆನಯ್ಯಾ” ಭಕ್ತಿಭಾವುಕತೆಗೆ ಅರ್ಥವಂತಿಕೆಯ ಸಮರ್ಥನೆಯು ಹೌದು. ಅದ್ವೈತ ಎಂಬುದು ತಪವಾಗಿದೆ. 12 ನೇ ಶತಮಾನದಲ್ಲಿ ಬಸವಾದಿ ಶರಣರ ಸ್ವಾಮಿಪ್ಯಕ್ಕೆ ಬಂದವರೆಲ್ಲ ಶರಣರೆ ಆಗಿದ್ದರು. ಬ್ರಾಹ್ಮಣನಾದ ಶಂಕರ ದಾಸಿಮಯ್ಯ, ಬಿಬ್ಬಿ ಬಾಚರಸ, ಚಂದಿಮರಸರು ಯಾವ ದಾರ್ಶನಿಕ ವಚನಕಾರರಿಗೂ ಹೋಲಿಸಲು ಸಾಧ್ಯವಾಗುವುದಿಲ್ಲ. ವಚನ ಸಾಹಿತ್ಯದ ತಾತ್ವಿಕ ದಾರಿಗಳೇ ಗಟ್ಟಿಯಾಗಿರುವಾಗ ಇನ್ನೊಂದು ಪಂಥಗಳ ಅವಶ್ಯಕತೆ ಇವರಿಗೆ ಬೇಕಾಗಿರಲಿಲ್ಲ. ಈ ಧರ್ಮದಲ್ಲಿ ಕಂಡುಬರುವ ತತ್ವ ಆಧ್ಯಾತ್ಮ ಅಷ್ಟಾವರಣಗಳು ಮತ್ತು ಸದಾಚಾರಗಳಲ್ಲಿ ಲೌಕಿಕ ಮತ್ತು ಪಾರಮಾರ್ಥಿಕತೆಯ ಸ್ವಾತಂತ್ರ್ಯವೇ ಅಹುದಾಗಿರುವಾಗ ಮತ್ತೊಂದು ಸಾಹಿತ್ಯದ ಹಂಗು ಇವರಿಗಿರಲಿಲ್ಲ. ಈ ಅದ್ವೈತ ಎನ್ನುವುದು ಭಕ್ತಿ ಮಾರ್ಗದ ವಚನ ಮನಸ್ಸುಗಳ ಆಯ್ಕೆಯ ಆಶಯವಾಗಿದೆ.
ವಚನಕಾರನಾದ ಸಿದ್ದರಾಮಯ್ಯ ಒಂದೆಡೆ ಹೇಳುವಂತೆ ಸ್ಮೃತಿಗಳು ಸಮುದ್ರದ ಪಾಲಾಗಲಿ, ಶೃತಿಗಳು ವೈಕುಂಠ ಸೇರಲಿ, ಪುರಾಣಗಳು ಅಗ್ನಿಯ ಸೇರಲಿ. ಆಗಮಗಳು ವಾಯುವ ಹೊಂದಲಿ. ಇವೆಲ್ಲಾ ಶರಣ ಧರ್ಮದಲ್ಲಿ ದ್ವೈತ ಅದ್ವೈತ ಮನಸ್ಥಿತಿಗಳು ಸೂತಕದ ಪರಿಕಲ್ಪನೆಯನ್ನು ವಿಂಗಡಿಸಿ ನೋಡುವ ಅಭಿನ್ನ ವಿವರಗಳಾಗಿವೆ.
ಅನುಭಾವ ಎನ್ನುವುದು ವ್ಯಕ್ತಿ ವಿಶಿಷ್ಟ ಸಾಧನೆಯ ಹಂತವದು. ಒಂದು ಸೂಕ್ಷ್ಮತೆಯನ್ನು ಗಮನಿಸಬೇಕು. ದ್ವೈತಭಾವದ ವೈದಿಕರು ಭಕ್ತಿ ಜ್ಞಾನ ವೈರಾಗ್ಯಬೇಕೆಂದು ದೇವರನ್ನು ಪ್ರಾರ್ಥಿಸಿದ್ದಾರೆ. ಆದರೆ ಕೆಲ ಸಂತರು ಜ್ಞಾನ ಯೋಗ ಭಕ್ತಿ ಯೋಗ ಕರ್ಮ ಯೋಗದಲ್ಲಿ ತಲ್ಲೀನರಾಗುತ್ತಾ ಬಂದಿದ್ದಾರೆ. ಈ ಮೂರೂ ಯೋಗಗಳ ತತ್ವಗಳನ್ನು ಅಳಸಿಕೊಂಡು ಬದುಕು ಮಾಡಿದ್ದಾರೆ.
ಅಂದು ವೈದಿಕರು ಶ್ರಮವನ್ನು ತಪ್ಪಿಸಿಕೊಳ್ಳುತ್ತಾ ದುಡಿಮೆಯನ್ನು ಇತರರ ಹೆಗಲಿಗೆ ಹಾಕುತ್ತಾ ಸಾಗಿದವರು. ತಮಗೆ ಸಮಯ ಸಿಕ್ಕಾಗ ಆಧ್ಯಾತ್ಮಿಕ ಜಿಜ್ಞಾಸೆ ಮಾಡಬೇಕೆಂಬ ಸೋಮಾರಿತನದ ವರ್ಗವದು. ಹೀಗಾಗಿ ಅವೈದಿಕ ಸಂತರು ಕಾಯಕದ ಹಿರಿತನವನ್ನು ವಿಶಾಲವಾಗಿಸಿದರು. ವೈದಿಕರ ಪಾಪ ಪುಣ್ಯ ಕರ್ಮಗಳನ್ನು ಖಂಡಿಸಿದವರೆ ಕೆಳವರ್ಗದ ಶರಣರಾಗಿದ್ದರು. ಹೀಗಾಗಿ ಶಿವ ಸಾಕ್ಷಾತ್ಕಾರಕ್ಕೆ ಕರ್ಮಠ ಆಚರಣೆಗಳ ಅವಶ್ಯಕತೆ ಇರಲಿಲ್ಲ. ಯಾವುದೇ ಆಧ್ಯಾತ್ಮಿಕ ಮಧ್ಯವರ್ತಿಗಳ ಶಾಸ್ತ್ರ ಗ್ರಂಥಗಳ ಸಹಾಯ ಶರಣ ಧರ್ಮದವರಿಗೆ ಬೇಕಾಗಿರಲಿಲ್ಲ. ಇಂತಹ ಹಲವಾರು ಸರಳ ಆಚರಣೆಗಳು ಚಂದಿಮರಸನಿಗೆ ಆಕರ್ಷಣೆಯಾಗಿ ಕಂಡಿರಬೇಕು.
ಮಣ್ಣ ಕಳೆದು ಮಡಿಕೆ ಇಲ್ಲ | ಹೊನ್ನ ಕಳೆದು ತೊಡುಗೆ ಇಲ್ಲ
ತನ್ನ ಕಳೆದು ಜಗವಿಲ್ಲ | ತಾನೇ ತನ್ನಿಂದನ್ಯವಿಲ್ಲ
ಸುಖ ದುಃಖ ಬಂದ ಮೋಕ್ಷಗಳಿಲ್ಲದೆ | ನಾಹಂ ಎಂದೆದೆನಿಸಲಿಲ್ಲ
ಕೋಹಂ ಎಂದೆನಲಿಲ್ಲ | ಸೋಹಂ ಎಂದೆನಿಸಲಿಲ್ಲ
ನುಡಿಗೆ ಎಡೆಯೆನಿಸಿ | ಏನೂ ಇಲ್ಲದ
ಸಚ್ಚಿದಾನಂದ ನಿತ್ಯಪರಿಪೂರ್ಣ | ನೀನೆ ಸಿಮ್ಮಲಿಗೆಯ ಚೆನ್ನರಾಮ
ಹೆಣ್ಣು ಹೊನ್ನು ಮಣ್ಣು ಲೌಕಿಕ ಬದುಕಿನ ಆಮಿಷ ಶಬ್ದಗಳಾಗಿ ಭೋಗವನ್ನು ಬಯಸುತ್ತವೆ. ಹೊನ್ನು ಸಂಸಾರಿಕ ಪ್ರಜ್ಞೆಯಲ್ಲಿ ಈ ದೇಹದ ಅಲಂಕಾರ ಹೆಚ್ಚಿಸುವುದು. ಆದರೆ ಶ್ರೀಮಂತಿಕೆಯ ಪ್ರದರ್ಶನದಲ್ಲಿ ಹೊನ್ನು ಅಶಾಶ್ವತ ಮಣ್ಣಿನ ಬಗ್ಗೆ ಆಸೆ ಉಂಟಾದರೂ ಮನ ಹೆಣ್ಣಿನ ಅಗತ್ಯತೆಯನ್ನು ಬಯಸುತ್ತದೆ. ಮನದ ಹುಚ್ಚಾಟಗಳಿಗೆ ಈ ಕಾಯದೊಳಗೆ ಅಡಗಿರುವ ಚಂಚಲವಾದ ಮನಸ್ಸು ಅದು. ಇದೊಂದು ರೀತಿಯಲ್ಲಿ ಮಾನಸಿಕ ವಿವೇಚನಾ ಶಕ್ತಿಯಾಗಿದೆ. ಶರಣ ಸಿದ್ದರಾಮನ ಈ ವಚನ ಇದನ್ನೇ ಬಿಂಬಿಸುತ್ತದೆ.
ಭಕ್ತನ ಮನ ಹೆಣ್ಣಿನೊಳಗಾದಡೆ ವಿವಾಹವಾಗಿ ಕೊಡುವುದು ಭಕ್ತನ ಮನ ಮಣ್ಣಿನೊಳಗಾದಡೆ ಕೊಂಡು ಆಲಯ ಮಾಡುವುದು. ಹೆಣ್ಣು ಹೊನ್ನು ಮಣ್ಣು ಕಾಯದ ತೊಡುಗೆಗಳಲ್ಲ. ಹೀಗಾಗಿ ಅನುಭವದ ಮುಂದಿನ ಪಥಕ್ಕೆ ಅನುಭಾವಿಗಳ ಭಕ್ತಿಗಿಂತ ಸತಿಪತಿಗಳ ಭಕ್ತಿ ಶ್ರೇಷ್ಠ ಎಂದು ಎಚ್ಚರಿಸಿದ್ದಾರೆ ಶರಣರು.
ಸಂಸಾರ ಮತ್ತು ಬ್ರಹ್ಮಚರ್ಯ ಅದು ಏನೇ ಆಗಲಿ ಅಧ್ಯಾತ್ಮದ ಸೋಹಂ ಭಾವದ ಅವಕಾಶವಾಗಿದೆ. ಹೆಣ್ಣು ಹೊನ್ನು ಮಣ್ಣು ಮಡಿಕೆ ವಿಶೇಷ ಅರ್ಥವನ್ನು ಕೊಡುವುದರ ಜೊತೆಗೆ (ನಾಹಂ) ನಾನು ಎಂಬ ಪ್ರಜ್ಞೆ (ಕೋಹಂ) ಕೊಡುವ ಭಾವ ಅನಿರೀಕ್ಷಿತವಾಗಿ ತಿರುವ ಪಡೆಯುತ್ತದೆ. ಕೋಹಂ ಅಹಂಕಾರವಾಗಿ ವ್ಯಕ್ತಿತ್ವ ನಾಶವಾಗುತ್ತದೆ. ನುಡಿಗೆ ಎಡೆ ಎನಿಸುವ ನಿರಾಳ ಭಾವವು ಅಧ್ಯಾತ್ಮದ ಸುಖಿಭಾವ. ತಾಯಿ ಭಾವವಾಗಿ ಅನುಭಾವಿಕ ನೆಲೆಯಲ್ಲಿ ಎಚ್ಚರಿಸುತ್ತದೆ. ಶರಣ ಧರ್ಮದ ನಿಜ ಕಾಳಜಿ ಎಂದರೆ ಶರಣರ ಲಿಂಗಾಂಗ ಸಾಮರಸ್ಯವಾಗಿದೆ. ಶರಣರ ಆಧ್ಯಾತ್ಮಿಕ ಪಥದಲ್ಲಿ ಸಾಧನೆಯ ಆರಂಭದಿಂದ ಹಿಡಿದು ಕೊನೆಯ ಹಂತದವರೆಗೆ ಇಷ್ಟಲಿಂಗ ಅವಿಭಾಜ್ಯ ಅಂಗವಾಗಿ ಒಳ ನೋಟದ ಮೂಲಕ ಭೌತಿಕ ಆಗುಹೋಗುಗಳನ್ನು ಎಚ್ಚರಿಸುತ್ತದೆ.
ಲಿಂಗಚಾರ ಎಂಬ ಮಾತನ್ನು ಎರಡು ರೀತಿಯಲ್ಲಿ ಅರ್ಥೈಸಲು ಸಾಧ್ಯವಿದೆ. ಲಿಂಗದ ಸಿದ್ಧಿಗಾಗಿ ಇರುವ ಆಚಾರ ಮತ್ತು ಲಿಂಗವೇ ಆಚಾರ ಎರಡು ಗ್ರಹಿಕೆಗಳು ಲಿಂಗಚಾರದ ಎರಡು ಮುಖಗಳು. ಅಂಗದ ಮೇಲೆ ಲಿಂಗವಿದ್ದರೆ ಇನ್ನೊಂದರ ಚಿಂತೆ ಬೇಡ ಎಂಬ ವಾದ ಶರಣರದು. ಅಂಗವೆಂದರೆ ಜೀವ ಲಿಂಗವೆಂದರೆ ಶಿವ. ಜೀವಾತ್ಮ ಪರಮಾತ್ಮನ ಸಮಾಗಮವನ್ನೇ ಲಿಂಗಾಂಗ ಸಾಮರಸ್ಯ ಎಂದು ಹೇಳಬಹುದು.
ಅಂಗದೊಳಗೆ ಲಿಂಗನಾಗಿ | ಬಂದಲಿಂಗವೆನಿತು
ಪೂಜಿಸಿ ಮುಕ್ತಿಯ | ಪಡೆವೆನಯ್ಯಾ
ಸೃಷ್ಟಿಯಲ್ಲಿ | ಹುಟ್ಟಿ ನಷ್ಟ ವಹ
ಲಿಂಗವನೆಂತು | ಮುಟ್ಟಿ ಪೂಜಿಸಿ
ಮುಕ್ತಿಯ | ಪಡೆವೆನಯ್ಯಾ
ಕಿಚ್ಚುಕಿಚ್ಚ ಸುಡುವುದೇ | ಅಯ್ಯಾ
ಈ ಕಷ್ಟವ ಕಂಡು | ಮುಟ್ಟಲಂಜಿ
ನಿಮ್ಮಲ್ಲಿಯೇ | ನಿಂದೆ ಸಿಮ್ಮಲಿಗೆಯ ಚೆನ್ನರಾಮ
(ಸಂ ವ ಸಂ – ವ ಸಂ-549)
ಶರಣ ಧರ್ಮವನ್ನು ಪ್ರೀತಿಸಿದ ಚಂದಿಮರಸನಂತಹ ಶರಣರು ತಮ್ಮ ಮೂಲ ಸಂಸ್ಕೃತಿಯನ್ನು ಬಿಟ್ಟುಕೊಡಲು ಸಾಧ್ಯವಾಗಿಲ್ಲ. ಈ ಸಂದರ್ಭದಲ್ಲಿ ವಚನ ಸಂಸ್ಕೃತಿ ಮತ್ತು ಹಳೆಯ ಜೀವನ ವಿಧಾನಗಳ ನಡುವೆ ಭಿನ್ನತೆಯನ್ನು ಸ್ಪಷ್ಟಪಡಿಸಬಹುದು. ಅಂಗದೊಳಗೆ ಲಿಂಗನಾಗಿ ಬಂದೆ ಈ ಸಾಲುಗಳು ಶರಣರ ಕ್ರಾಂತಿಯ ಆಶಯದಲ್ಲಿ ಐಕ್ಯತೆಯನ್ನು ಕಾಣಲು ಸಾಧ್ಯವಾಗುತ್ತದೆ. ಸೂಕ್ಷ್ಮ ಶರೀರದ ಅಂಗದಲ್ಲಿ ಲಿಂಗವನ್ನು ಸಮರಸಗೊಳಿಸುವವನೆ ಅಂಗಲಿಂಗಿಯಾಗುವನು. ಲಿಂಗವೆನಿತು ಪೂಜಿಸಿ ಮುಕ್ತಿ ಪಡೆವೆನಯ್ಯಾ. ಶರಣರ ಸಾಮೂಹಿಕ ಧೋರಣೆಯಲ್ಲಿ ಪ್ರತೀ ಲಿಂಗಾಯಿತ ಶರಣರಿಗೆ ಇಷ್ಟಲಿಂಗವೆನ್ನುವ ಕುರುಹು ಅರಿವಿನ ಸಂಘಟನೆಯಾಗಿತ್ತು. ಅನ್ಯಧರ್ಮೀಯ ಶರಣರಿಗೆ ಲಿಂಗದೀಕ್ಷೆ ಪಡೆದುಕೊಳ್ಳಬೇಕೆಂಬ ಭಾವುಕ ಮನಸ್ಥಿತಿಯಾಗಿತ್ತು. ಮುಕ್ತಿಯನ್ನು ಪಡೆಯಬೇಕಾದರೆ ಲಿಂಗಭಾವದಿಂದ ಪ್ರಾಣಲಿಂಗವಾಗಬೇಕು. ಬಸವಣ್ಣನವರ ವಚನದಂತೆ ಸ್ಥಾವರಕ್ಕೆ ಅಳಿವುಂಟು ಜಂಗಮಕ್ಕಳಿವಿಲ್ಲ. ಅಂದಿನ ಶೈವರ ಅಭಿಮತದಂತೆ ಸ್ಥಾವರ ಪೂಜೆ ಮಾಡಿದರೆ ಸ್ವರ್ಗವನ್ನುಕಾಣಬಹುದೆಂದು ಸಿದ್ದಾಂತವಾದರೆ ಇಷ್ಟಲಿಂಗ ಪೂಜೆ ದೇಹಭಾವವನ್ನು ಪ್ರೇರೇಪಿಸುತ್ತದೆ. ಕಿಚ್ಚು ಕಿಚ್ಚ ಸುಡುವುದೇ ಅಯ್ಯಾ ಚಂದಿಮರಸ ಲಿಂಗವನ್ನು ಕಿಚ್ಚು ಎನ್ನಬೇಕಾದರೆ ಲಿಂಗದೀಕ್ಷೆಯನ್ನು ಜೋಪಾನವಾಗಿಟ್ಟುಕೊಳ್ಳುವ ಕಾತರತೆ ಜೊತೆಗೆ ಭಯ ನಕಾರಾತ್ಮಕವಾಗಿ ಮನಸ್ಸು ವಿಚಲಿತವಾಗಿರಬೇಕು.
ಈ ಕಷ್ಟವ ಕಂಡು ಮುಟ್ಟಲಂಜಿ ನಿಮ್ಮಲ್ಲಿಯೇ ಅಂಜಿ ನಿಮ್ಮಲ್ಲಿಯೇ ನಿಂದೆ ಧರ್ಮಗಳ ಆಶಯಗಳಲ್ಲಿ ಒಂದು ಇನ್ನೊಂದರೊಳಗೆ ಹೊಕ್ಕು ಪರಸ್ಪರ ಜೀರ್ಣಿಸಿಕೊಳ್ಳುವತ್ತ ವಾಲುತ್ತವೆ. ಇವೆಲ್ಲ ಮಧ್ಯಕಾಲೀನ ಧರ್ಮಗಳಲ್ಲಿ ತುಂಬಾ ಚಿರಪರಿಚಿತವಾಗಿ ಕಂಡುಬರುತ್ತವೆ. ಹೀಗಾಗಿ ಚಂದಿಮರಸನಿಗೆ ಲಿಂಗವೆಂಬ ಭಾವ ಆಧ್ಯಾತ್ಮ ಶೋಧದ ಅನುಭಾವವಾದ ಪ್ರೀತಿಯಾಗಿದೆ.
ತೃತೀಯ ಲಿಂಗಿಗಳ ಬಗ್ಗೆ ಪ್ರಪ್ರಥಮವಾಗಿ ಮಾತನಾಡಿದವರೆಂದರೆ ಚಂದಿಮರಸನಾಗಿದ್ದ. ಈ ಶರೀರದ ಬೌತಿಕ ಸ್ಥಿತಿ ಮತ್ತು ಅದರೊಳಗೆ ಕಾಣದೆ ಇರುವ ಅಗೋಚರ ನೆಲೆಗಳ ಕುರಿತು ಮಾತನಾಡುತ್ತಾನೆ.
ಇಂದ್ರಜಾಲ ಗಾಂಧರ್ವ ನಗರಾದಿಗಳ
ಹುಸಿ ಎಂದು | ಕಾಣಬಹುದಲ್ಲದೆ
ಪ್ರಾಮಾಣಿಸಬಾರದು | ಸ್ತ್ರೀಯಲ್ಲ ಪುರುಷನಲ್ಲ ನಪುಂಸಕನಲ್ಲ
ಆತ್ಮನೆಂದು | ಅರಿಯಬಹುದಲ್ಲದೆ
ಕಾಣಿಸಬಾರದು | ದೇಹಾದಿ ಗುಣ ಧರ್ಮ
ಕರ್ಮOಗಳು ತಾನಲ್ಲ | ಇವು ತನ್ನವಲ್ಲವೆಂದು
ತಿಳಿಯಬಹುದು | ಅದು ಮಾಯಾಮಯ
ಪ್ರಾರಂಭ ಕೆಡೆ ಕೆಡುಗು | ನೀತಿ ಕ್ರಮದಿಂದ
ಬೋಧ್ಯದೀಪ್ತಿ ತಾನೆಂದು | ಅರಿದರಿವು
ನೀನೇ ಸಿಮ್ಮಲಿಗೆಯ | ಚೆನ್ನರಾಮಾಂಗವ ದುಃಖವೂ ಇಲ್ಲ
(ಸಂ ವ ಸಂ- ವ ಸಂ -561)
ಒಂದು ಸ್ಥೂಲ ಚೌಕಟ್ಟಿನಲ್ಲಿ ವಿಮರ್ಶೆ ಮಾಡುವುದಾದರೆ ಚಂದಿಮರಸನ ಈ ರಹಸ್ಯ ರೂಪಕಗಳು ಪ್ರತಿಮೆಗಳು ಇಂದ್ರಜಾಲ ಗಂಧರ್ವರನ್ನು ಕುರಿತು ಹೇಳುವ ಭೌತಿಕ ಮತ್ತು ಮಾನಸಿಕ ಇಂದ್ರಿಯಗಳ ವಿಜ್ಞಾನದ ಅನುಭವವಿದಾಗಿದೆ. ಗಂಧರ್ವರು ಮೂಲತಃ ಜಾದುಗಾರರು. ವಶೀಕರಣ ಮಾಡುವ ಇಂದ್ರಜಾಲ ವಿದ್ಯೆಗಳ ಪ್ರಕರಣಗಳ ವಾಸ್ತವತೆಯನ್ನು ವ್ಯಾಖ್ಯಾನಿಸುತ್ತಾನೆ. ಚಂದಿಮರಸನಿಗೆ ಸಮಾಜದಲ್ಲಿ ನಡೆಯುವ ಇಂಥಹ ಇಂದ್ರಜಾಲಗಳ ಬಗ್ಗೆ ಆತಂಕ ಮತ್ತು ಕಳವಳವನ್ನು ವ್ಯಕ್ತಪಡಿಸುತ್ತಾನೆ. ಇದೊಂದು ರೀತಿಯಲ್ಲಿ ತಂತ್ರಲೋಕವಾಗಿದೆ. ಶರೀರವನ್ನು ಗಾಂಧರ್ವರು ಭೋಗವಾಗಿ ನೋಡಿದ್ದರು. ಸ್ಪುರದ್ರೂಪಿಗಳಾದ ಗಾಂಧರ್ವರು ಸ್ತ್ರೀ ವಶೀಕರಣ ವಿಧ್ಯೆ ಬಲ್ಲವರು. ಪ್ರೇಮ ವಿವಾಹದ ಮೂಲಕ ಗಾಂಧರ್ವ ವಿವಾಹ ಮಾಡಿಕೊಳ್ಳುವ ಆತುರಗಾರರು ಇವರಾಗಿದ್ದರು. ಸಮಾಜ ಬಾಹಿರ ಕೃತ್ಯಗಳಿಗೆ ಜನರು ರಕ್ಕಸರಿಗೆ ಹೆದರಿದಂತೆ ಗಾಂಧರ್ವ ಇಂದ್ರಜಾಲ ಜನರಿಗೆ ಹೆದರುತ್ತಿದ್ದರು.
ಅಂದು ವಚನ ಶಾಸ್ತ್ರದ ತಾತ್ವಿಕತೆಗಳು ಗಟ್ಟಿಯಾದಂತೆಲ್ಲ ಇವರ ಸಮಾಜ ಬಾಹಿರ ಕೃತ್ಯಗಳಿಗೆ ಅವಕಾಶವಿಲ್ಲದಂತಾಗಿತ್ತು. ಕೃತಕವಾಗಿ ಲಿಂಗ ಬದಲಾವಣೆ ಹೊಂದಿದವರು ತೃತೀಯ ಲಿಂಗಿಗಳು. ಅಂದು ರಾಜ ಮನೆತನದ ಮಹಿಳೆಯರ ಯೋಗಕ್ಷೇಮವನ್ನು ಅವರ ಅವಶ್ಯಕತೆಗಳನ್ನು ಅಂತಃಪುರದಲ್ಲಿ ನೋಡಿಕೊಳ್ಳುವವರು ತೃತೀಯ ಲಿಂಗಿಗಳಾಗಿದ್ದರು ಎಂದು ಇತಿಹಾಸ ಹೇಳುತ್ತದೆ. ಇವರನ್ನು ಮಂಗಳ ಮುಖಿಯರೆಂದು, ಎಂದು ಕರೆಯಲಾಗುತ್ತದೆ.
ಈ ದೇಹಾದಿ ಗುಣ ಕರ್ಮಂಗಳು ತಾನಲ್ಲ. ಈ ದೇಹ ಮಾನಸಿಕ ಶರೀರದಿಂದ ಆವೃತವಾಗಿದೆ. ಇದಕ್ಕೆ ಪ್ರಾಣಶಕ್ತಿಯ ಅರಿವಿದೆ. ಈ ದೇಹದ ಪ್ರತಿ ಜೀವಕೋಶವು ಜಾಗೃತಾವಸ್ಥೆಯಲ್ಲಿ ಇರುತ್ತದೆ. ಪುರುಷರ ಸಮರ್ಥನೆಗೆ ಪೂರಕವಾಗಿ ಮಹಿಳೆಯರ ಮಾನಸಿಕ ಶಕ್ತಿಯು ಸಹಿತ ಚಟುವಟಿಕೆಯಿಂದ ಕೂಡಿರುತ್ತದೆ. ಪಂಚಭೂತಗಳಿಂದ ಆವೃತವಾದ ಈ ದೇಹಕ್ಕೆ ಮನಸ್ಸಿಗೆ ತನ್ನದೇ ಆದ ಭಾವನೆಗಳಿರುತ್ತವೆ. ಸಂತಾನೋತ್ಪತ್ತಿಗೆ ಕಾರಣವಾದ ಈ ದೇಹದ ಗುಣ ಧರ್ಮಗಳು ಸದಾ ಕಾರ್ಯ ನಿರ್ವಹಿಸುತ್ತಿರುತ್ತವೆ. ಎಲ್ಲವನ್ನು ಗ್ರಹಿಸುವ ಈ ಮನಸ್ಸು ಸ್ತ್ರೀ ಮತ್ತು ಪುರುಷ ಸ್ವಭಾವವನ್ನು ಎಷ್ಟು ಪ್ರಮಾಣದಲ್ಲಿ ಅವಲಂಬಿತವಾಗಿರುತ್ತದೆ. ಈ ಸ್ವಭಾವಗಳು ಭೌತಿಕತೆಯನ್ನು ಮೀರಿ ಬೆಳೆದಿರುತ್ತದೆ. ಅಲ್ಲಿ ಪುರುಷ ಮತ್ತು ಸ್ತ್ರೀ ಎಂಬ ಭೇದ ಇರುವುದಿಲ್ಲ. ದೈಹಿಕವಾಗಿ ಪುರುಷನಾದರು ಮಾನಸಿಕವಾಗಿ ನಾನು ಹೆಣ್ಣು ಎಂಬುದು ಖಚಿತವಾಗುತ್ತದೆ. ಸ್ತ್ರೀಯಲ್ಲ ಪುರುಷನಲ್ಲ ನಪುಂಸಕನಲ್ಲ ಆತ್ಮನೆಂಬುದ ತಿಳಿಯಬಹುದಲ್ಲದೆ ಕಾಣಿಸಬಾರದು. ಪುರುಷನಾಗಿ ಹೆಣ್ಣಿನ ಹಾವಭಾವಗಳು ಅತಿರೇಕವಾದಾಗ ಹೆಣ್ಣಿಗ ಹೇಡಿ ಅಂಜುಬುರುಕ ಎಂದು ಜರಿಯುವ ಈ ಸಮಾಜದಲ್ಲಿ ಅಭದ್ರತೆ ಕಾಡಿದಾಗ ಮನ ಮತ್ತು ದೇಹದ ಮನೋಧರ್ಮಕ್ಕೆ ತಕ್ಕಂತೆ ವರ್ತಿಸಲು ಪ್ರಾರಂಭಿಸುತ್ತಾರೆ. ವಂಶೋದ್ಧಾರಕನೆಂದು ಪ್ರೀತಿಸುವ ನಮ್ಮ ಸಮಾಜದಲ್ಲಿ ನಡೆ ನುಡಿ ಯಲ್ಲಿ ಹೆಣ್ಣಾದಾಗ ಸಹಜವಾಗಿಯೇ ಹೆತ್ತವರಿಗೆ ನೋವಾಗುತ್ತದೆ.
ತೃತೀಯ ಲಿಂಗಗಳಾಗಿ ಹೊಸ ಪ್ರಪಂಚಕ್ಕೆ ಕಾಲಿಟ್ಟಾಗ ಮಾಯಾಮಯ ಪ್ರಾರಂಭ ಕಡೆ ಕೆಡಗು ನೀತಿಕ್ರಮದಿಂದ ಭೋದ್ಯ ದೀಪ್ತಿ ತಾನೆಂದು ಅರಿದರಿವು ನೀನೇ ಸಿಮ್ಮಲಿಗೆಯ ಚೆನ್ನರಾಮ. ಈ ಸನ್ನಿವೇಶಗಳು ಸಂಸಾರಿಕ ಬದುಕಿನಲ್ಲಿ ಅಡಕವಾಗಿರುವ ವೈರುಧ್ಯಗಳಾಗಿವೆ. ತಾವು ಮಾಡದ ತಪ್ಪಿಗೆ ಕುಟುಂಬ ಮತ್ತು ಸಮಾಜದ ನಿರ್ಲಕ್ಷಕ್ಕೆ ಒಳಗಾದ ಅತಂತ್ರ ಜೀವನ ಇವರದ್ದು. ಮಹಾಭಾರತದ ದ್ರುಪದನ ಮಗಳು ಶಿಖಂಡಿನಿ ವೀರನಾದ ಅರ್ಜುನ, ಊರ್ವಶಿಯ ಶಾಪದಿಂದ ಹೆಣ್ಗಾಗುವುದು. ನಾಟ್ಯ ಕಲಿಸುವ ಬೃಹನ್ನಳೆಯಾಗಿ ಗುರುತಿಸಿ ಕೊಂಡದ್ದು. ಹರಿಹರರ ಕಾಮದಿಂದ ಹುಟ್ಟಿದ ಅಯ್ಯಪ್ಪಯ್ಯನ ಕಥೆ. ಇವೆಲ್ಲಾ ಪುರಾಣ ಕಥೆಗಳಾದರೂ ಸಮಾಜವನ್ನು ಎಚ್ಚರಿಸಿದ ತದಾತ್ಮಕತೆ ಇಲ್ಲಿದೆ.
ಚಂದಿಮರಸನು ತೃತೀಯ ಲಿಂಗಗಳ ಬಗ್ಗೆ ಮಾತನಾಡುವಾಗ ನಂಬಿಕೆ ಮತ್ತು ವೈಚಾರಿಕತೆಯ ಬೆಂಬಲವನ್ನು ಕಾಣಬಹುದು. ಇದೊಂದು ರೀತಿಯಲ್ಲಿ ಇಂದ್ರಜಾಲ ಮಹೇಂದ್ರಜಾಲ ಸ್ತ್ರೀಯಲ್ಲ ಪುರುಷನಲ್ಲ ನಪುಂಸಕನಲ್ಲ ಆತ್ಮನೆಂದು ಸಮರ್ಥಿಸುವ ಹೊಸ ಮೀಮಾಂಸ ತರ್ಕವಿದಾಗಿದೆ. ಚಂದಿಮರಸ ಕವಿಯು ಹೌದು ಅನುಭಾವಿಯೂ ಹೌದು. ತನ್ನ ವೈಚಾರಿಕ ಪ್ರಜ್ಞೆಯ ಅನುಸಂಧಾನದಲ್ಲಿ ಸ್ವತಂತ್ರನು. ಹೀಗಾಗಿ ವಚನ ಅಭ್ಯಾಸಿಗರಿಗೆ ಶರಣ ಸಂಸ್ಕೃತಿಯನ್ನು ಗೌರವಿಸಿದ್ದರಿಂದ ಆಪ್ತನಾಗುತ್ತಾನೆ.
-ಡಾ. ಸರ್ವಮಂಗಳ ಸಕ್ರಿ
ಕನ್ನಡ ಉಪನ್ಯಾಸಕರು
ರಾಯಚೂರು.