ಅಮುಗೆ ರಾಯಮ್ಮ

ಅಮುಗೆ ರಾಯಮ್ಮ
ಶರಣ ಸಿದ್ಧಾಂತಕ್ಕೆ ಬದ್ಧಳಾಗಿ, ಗಾಢವಾದ ಲಿಂಗನಿಷ್ಠೆಗೆ ಹೆಸರಾದ ಶಿವಶರಣೆ ಅಮುಗೆ ರಾಯಮ್ಮ.  ಹನ್ನೆರಡನೇ ಶತಮಾನದ ಶಿವಶರಣ ಅಮುಗೆ ದೇವಯ್ಯನ ಧರ್ಮಪತ್ನಿ. ಬಿಜಾಪುರ ಮತ್ತು ಸೊಲ್ಲಾಪುರ ನಡುವಿನ ಪುಳಜೆ ಎಂಬ ಗ್ರಾಮದ, ಕಂಬಳಿ ನೆಯ್ಗೆ ಕಾಯಕದ ಈ ದಂಪತಿಗಳು, ಶರಣರಿಂದ ಇಷ್ಟಲಿಂಗ ಸಂಸ್ಕಾರ ಹೊಂದಿ ಪುಳಜೆಯಿಂದ ಹತ್ತಿರದ ಸೊನ್ನಲಿಗೆಗೆ ಬಂದು ನೆಲೆಸಿದರೆಂದು ತಿಳಿದು ಬರುತ್ತದೆ.

ಅಮುಗೆ ರಾಯಮ್ಮನ ಮೊದಲ ಹೆಸರು ವರದಾನಿಯಮ್ಮ. ಅಮುಗೆ ರಾಯಮ್ಮನ ಅಂಕಿತನಾಮ ಅಮುಗೇಶ್ವರ. ಅವಳ ೧೧೬ ವಚನಗಳು ದೊರೆತಿವೆ. ಸಮಾಜದ ಓರೆ-ಕೊರೆಗಳನ್ನು ತೀಕ್ಷ್ಣವಾಗಿ ವಿಮರ್ಶಿಸುವ ಅಮುಗೆ ರಾಯಮ್ಮನ ವಚನಗಳಲ್ಲಿ ಆತ್ಮ ನಿರೀಕ್ಷಣೆ ಧೈರ್ಯ, ನಿಷ್ಠುರತೆ ಆಧ್ಯಾತ್ಮ, ಅಭಿಮಾನ, ವಿಡಂಬನೆ, ವಿರಾಗಿಗಳ ಕಟುಟೀಕೆ ಕಂಡು ಬರುತ್ತದೆ.
ಅಮುಗೆ ರಾಯಮ್ಮನ ಜೀವನ ವೃತ್ತಾಂತ ಕೆಲವು ಶಾಸನಗಳಲ್ಲಿ ಜನಪದ ತ್ರಿಪದಿಗಳಲ್ಲಿ ರಾಘವಾಂಕ ಚರಿತ್ರೆ, ಸಿದ್ಧರಾಮ ಚಾರಿತ್ರ್ಯ ಮುಂತಾದವುಗಳಲ್ಲಿ ಸಿಗುತ್ತದೆ. ಅಮುಗೆ ರಾಯಮ್ಮ ಹಾಗೂ ದೇವಯ್ಯ ದಂಪತಿಗಳು ಕಲ್ಯಾಣಕ್ಕೆ ಬಂದು ಬಸವಗುರುವಿನ ದರ್ಶನ ಪಡೆದು ಅನುಭವ ಮಂಟಪದ ಶರಣ ಸಂಕುಲದಲ್ಲಿ ಸೇರಿಕೊಂಡು ತಮ್ಮ ಕಂಬಳಿ ನೆಯ್ಗೆಯ ಕಾಯಕ ಮಾಡುತ್ತ ಕಲ್ಯಾಣದಲ್ಲಿದ್ದು ಅನುಭವ ಗೋಷ್ಠಿಗಳಲ್ಲಿ ಭಾಗವಹಿಸುತ್ತ ವಚನ ರಚನೆ ಮಾಡಿದರು.
ನಮ್ಮ ಜೀವನದ ಸರಿ ತಪ್ಪುಗಳಿಗೆ ನಮ್ಮ ಭವಿಷ್ಯಕ್ಕೆ ನಾವೇ ಕಾರಣರು. ನಮ್ಮ ತಪ್ಪನ್ನು ನಾವೇ ತಿದ್ದಿಕೊಳ್ಳಬೇಕು. ಇನ್ನೊಬ್ಬರನ್ನು ಹೊಣೆಗಾರರನ್ನಾಗಿ ಮಾಡುವುದು ತಪ್ಪು. ಯೋಗ್ಯವಾದ ಬದುಕನ್ನು ಬದುಕಲು ನಮಗೆ ತಿಳುವಳಿಕೆ ಬೇಕು. ಅಂದಾಗಲೇ ಜೀವನದ ಪಥ ಸರಿಯಾಗಿ ಸಾಗುವದು ಎಂಬುದನ್ನು ಅಮುಗೆ ರಾಯಮ್ಮ ಈ ಕೆಳಗಿನ ವಚನದಲ್ಲಿ ಈ ರೀತಿ ಹೇಳುತ್ತಾಳೆ.
ಎನ್ನ ಕಣ್ಣೊಳಗಿನ ಕಟ್ಟಿಗೆಯ ಮುರಿದವರನಾರನು ಕಾಣೆ ಎನ್ನ ಕಾಲೊಳಗಿನ ಮುಳ್ಳ ತೆಗೆದವರಾರನು ಕಾಣೆ ಎನ್ನ ಅಂಗದಲ್ಲಿಪ್ಪ ಅಹಂಕಾರವ ಸುಡುವವರಾರನು ಕಾಣೆ ಎನ್ನ ಮನದಲ್ಲಿಪ್ಪ ಮಾಯಾ ಪ್ರಪಂಚವ ಕೆಡಿಸುವವರಾರನು ಕಾಣೆನಯ್ಯ

ಆದ್ಯರ ವೇದ್ಯರ ವಚನಗಳಿಂದ ಅರಿದೆವೆಂಬರು ಅರಿಯಲಾರರು ನೋಡ ಎನ್ನ ಕಣ್ಣೊಳಗಿನ ಕಟ್ಟಿಗೆಯ ನಾನೇ ಮುರಿಯಬೇಕು ಎನ್ನ ಕಾಲೊಳಗಿನ ಮುಳ್ಳ ನಾನೇ ತೆಗೆಯಬೇಕು ಎನ್ನ ಅಂಗದಲ್ಲಿಪ್ಪ ಅಹಂಕಾರವ ನಾನೇ ಸುಡಬೇಕು ಎನ್ನ ಮನದಲಿಪ್ಪ ಮಾಯಾ ಪ್ರಪಂಚವ ನಾನೇ ಕಳಿಯಬೇಕು ಅಮುಗೇಶ್ವರ ಲಿಂಗವ ನಾನೇ ಅರಿಯಬೇಕು
ಪ್ರತಿಯೊಬ್ಬ ವ್ಯಕ್ತಿಯು ತನ್ನ ಜೀವನದಲ್ಲಿ ಬರುವ ಎಡರು ತೊಡರುಗಳನ್ನು ತಾನೇ ಎದುರಿಸಬೇಕಾಗುತ್ತದೆ. ಅವನ ಜೀವನದ ಸುಂದರತೆಗೆ ಅವನೇ ಕಾರಣ. ತನ್ನನ್ನು ನೋಯಿಸುವ, ಕಾಡಿಸುವ, ಬಂದ ಆಪತ್ತನ್ನು ತಾನೇ ನಿವಾರಿಸಿಕೊಂಡು, ಮನಸ್ಸನ್ನು ಹತೋಟಿಯಲ್ಲಿಟ್ಟುಕೊಂಡು ತನ್ನ ವ್ಯಕ್ತಿತ್ವವನ್ನು ಒಳ್ಳೆಯ ರೀತಿಯಿಂದ ರೂಪಿಸುಕೊಳ್ಳುವ ಹೊಣೆಗಾರಿಕೆ ಅವನದೇ ಆಗಿರುತ್ತದೆ. ತನ್ನ ಕಣ್ಣೊಳಗೆ ಚುಚ್ಚಿಕೊಂಡಿರುವ ಕಟ್ಟಿಗೆಯ ಚೂರನ್ನು ತಾನೇ ತೆಗೆಯಬೇಕು. ಕಾಲೊಳಗಿನ ಮುಳ್ಳನ್ನು ತಾನೇ ತೆಗೆದುಕೊಳ್ಳಬೇಕು. ತನ್ನೊಳಗಿನ ಅಹಂಕಾರವನ್ನು ತಾನೇ ಸುಡಬೇಕು. ಮನಸ್ಸಿನೊಳಗಿರುವ ಚಂಚಲತೆಯನ್ನು ತಾನೇ ದೂರ ಮಾಡಬೇಕು. ತಾನು ಮಾಡುವ ಪ್ರಯತ್ನ ಮತ್ತು ಕಾಯಕದಿಂದ ತನ್ನ ಸಂಕಷ್ಟವನ್ನು ಪರಿಹರಿಸಿಕೊಳ್ಳಬೇಕು. ವ್ಯಾಮೋಹವನ್ನು ಬಿಟ್ಟು ದುರಾಸೆಗಳನ್ನು ದೂರಮಾಡಿ ಸಕಾರಾತ್ಮಕ ಯೋಚನೆಗಳನ್ನು ತುಂಬಿಕೊಳ್ಳಬೇಕು. ಪ್ರತಿಯೊಂದಕ್ಕೂ ಕ್ರಿಯೆ ಮುಖ್ಯ, ಅದನ್ನು ಬಿಟ್ಟು ಆದ್ಯರ, ವೇದ್ಯರ, ಅಂದರೆ ಹಿಂದಿನವರ, ತಿಳಿದವರ ಲೋಕದ ನುಡಿಗಳನ್ನು ಕೇವಲ ಕೇಳಿಸಿಕೊಳ್ಳುವದರಿಂದ ಯಾವ ಬದಲಾವಣೆಯೂ ಸಾಧ್ಯವಿಲ್ಲ. ದೇವರ ಕೃಪೆಗೆ ಪಾತ್ರರಾಗಲು ದೇವರನ್ನು ನಾವೇ ಸ್ಮರಿಸಬೇಕು. ನಮ್ಮ ಹೊಟ್ಟೆ ತುಂಬಲು ನಾವೇ ಊಟಮಾಡಬೇಕು. ಹೀಗೆ ಅಮುಗೇಶ್ವರ ಲಿಂಗವನ್ನು ಕೂಡ ನಾವೇ ಅರಿತುಕೊಳ್ಳಬೇಕು ಅಂದಾಗ ಮಾತ್ರ ಭಕ್ತಿ ಸಾಧ್ಯ ಎಂಬ ವಿಚಾರವನ್ನು ಈ ವಚನದಲ್ಲಿ ಅಮುಗೆ ರಾಯಮ್ಮ ತಿಳಿಸಿದ್ದಾಳೆ.
ಶರಣೆ ಅಮುಗೆ ರಾಯಮ್ಮ, ದುರ್ಬಲ ಮನಸ್ಸಿನ ಸ್ತ್ರೀ ಪುರುಷರಿಬ್ಬರಿಗೂ, ಆತ್ಮ ವಿಶ್ವಾಸ ತುಂಬುವ ಮತ್ತೊಂದು ವಚನ ಹೀಗಿದೆ.
ಹೆದರದಿರು ಮನವೇ ಹಿಮ್ಮೆಟ್ಟದಿರು ಮನವೇ ಹಿಡಿದ ಛಲವ ಬಿಡದಿರು ಮನವೇ ಜರಿದರೆಂದು ಝಂಕಿಸಿದರೆಂದು ಶಸ್ತç ಸಮಾಧಿ, ನೀರು, ನೇಣು, ವಿಷ, ಔಷಧದಲ್ಲಿ ಘಟವ ಬಿಡದೆ ಗುರುವಾದಡೂ, ಲಿಂಗವಾದಡೂ, ಜಂಗಮವಾದಡೂ ನೊಸಲಲ್ಲಿ ಕಣ್ಣುಳ್ಳ ಪಶುಪತಿಯಾದರೂ ತೆತ್ತಿಗರು ಕಂಡು ಒತ್ತಿ ನುಡಿಯದೆಂದು ಘಟವ ಬಿಡುವ ಘಟಕರ್ಮಿಗಳು ಏಳೇಳು ಜನ್ಮದಲ್ಲಿ ಸೂಕರನ ಹೊಟ್ಟೆಯಲ್ಲಿ ಹುಟ್ಟಿ ನೂರೊಂದು ಕುಲ, ಹದಿನೆಂಟು ಜಾತಿಯ ಅಮೇಧ್ಯವ ತಿಂದು ಹೊಲೆಯರ ಮನೆಯ ಹೊಸ್ತಿಲ ಕಾಯ್ದುಕೊಂಡಿಪ್ಪರಯ್ಯಾ ಅಮುಗೇಶ್ವರಲಿಂಗವೆ ನಿಮ್ಮಾಣೆ, ನಿಮ್ಮ ಪ್ರಮಥರಾಣೆ
ಜೀವನದಲ್ಲಿ ಕಷ್ಟ ನಷ್ಟಗಳು ಬರುವದು ಅನಿವಾರ್ಯ, ಜೊತೆಗೆ ಜೀವನದ ಹೋರಾಟದಲ್ಲಿ ಸೋಲು ಗೆಲವು ಕೂಡ ಸರ್ವೆ ಸಾಮಾನ್ಯ. ಆದರೆ, ಸೋತೆನೆಂದು ಸಾವಿಗೆ ಶರಣಾಗುವದು ಹೇಡಿತನ. ಛಲವನ್ನು ಬಿಡದೇ ಮುಂದೆ ಸಾಗಬೇಕು. ಸೋತ ಸಂದರ್ಭದಲ್ಲಿ ಧೈರ್ಯ ಮುಖ್ಯ ಆತ್ಮ ವಿಶ್ವಾಸ ಮುಖ್ಯ. ಆದರೆ ಆ ವೇಳೆಯಲ್ಲಿ ಶಸ್ತçಗಳಿಂದ ಸಾವನ್ನಪ್ಪುವದು, ಬಾವಿ ಕೆರೆಗೆ ಬಿದ್ದು ಸಾಯುವದು, ನೇಣು ಹಾಕಿಕೊಳ್ಳುವದು, ವಿಷ ಕುಡಿಯುವದು, ಹೀಗೆ ಅನೇಕ ರೀತಿಯಿಂದ ಸಾವಿಗೆ ಶರಣಾಗುವ ವಿದ್ಯಾವಂತರಿಗೆ, ಯುವ ಪೀಳಿಗೆಗೆ, ಹೆಣ್ಣುಮಕ್ಕಳಿಗೆ, ಗುರುಲಿಂಗ ಜಂಗಮರಿಗೂ ಕೂಡ ಈ ವಚನದ ಮೂಲಕ ರಾಯಮ್ಮ ಎಚ್ಚರಿಕೆ ನೀಡಿದ್ದಾಳೆ. ಈ ರೀತಿ ಸಾವನ್ನಪ್ಪಿದರೆ ಏಳೇಳು ಜನ್ಮದಲ್ಲಿ ಹಂದಿಯ ಹೊಟ್ಟಯಲ್ಲಿ ಹುಟ್ಟಿ ನೂರೊಂದು ಕುಲ ಹದಿನೆಂಟು ಜಾತಿಯ ಅಮೇಧ್ಯವ ತಿಂದು ಹೊಲೆಯರ ಮನೆಯ ಹೊಸ್ತಿಲವನ್ನು ಕಾಯ್ದುಕೊಂಡಿರಬೇಕಾಗಿರುತ್ತದೆ. ಅದಕ್ಕಾಗಿ ಯಾವುದಕ್ಕೂ ಹೆದರದೆ ಅಂಜದೆ ಹಿಡಿದ ಛಲವ ಬಿಡದೇ ಬದುಕಬೇಕು. ಇಲ್ಲದಿದ್ದರೆ ಸಾವಿನ ಪರಿಣಾಮವು ಸಾವಿನ ನಂತರವೂ ಘೋರವಾಗಿ ಕಾಡುತ್ತದೆ ಎಂದು ಇದು ಅಮಗೇಶ್ವರ ಲಿಂಗದ ಮೇಲಾಣೆ ಎಂದು ಖಡಾ ಖಂಡಿತವಾಗಿ ರಾಯಮ್ಮ ತಿಳಿಸುತ್ತಾಳೆ.
ಜೀವನದಲ್ಲಿ ಅರಿವು ಆಚಾರ ಸಂಸ್ಕಾರ ಮುಖ್ಯ. ಇದು ಇಲ್ಲದವರ ಕುರಿತು ರಾಯಮ್ಮ ಈ ರೀತಿ ಹೇಳಿದ್ದಾಳೆ.
ಕಾಗೆಯ ಮರಿ ಕೋಗಿಲೆಯಾಗಬಲ್ಲುದೆ ಆಡಿನ ಮರಿ ಆನೆಯಾಗಬಲ್ಲದೆ ಸೀಳು ನಾಯಿ ಸಿಂಹದಮರಿಯಾಗಬಲ್ಲದೆ ಅರಿವು ಆಚಾರ ಸಮ್ಯಜ್ಞಾನವರಿಯದ ನಾಮವ ಹೊತ್ತುಕೊಂಡುವ ತಿರುಗುವ ಗಾವಿಲರ ಮುಖವ ನೋಡಲಾಗದು ಅಮುಗೇಶ್ವರ
ಈ ವಚನದಲ್ಲಿ ಬಳಸಿರುವ ಪ್ರಾಣಿರೂಪಕಗಳು ತುಂಬಾ ಅರ್ಥಪೂರ್ಣವಾಗಿವೆ. ಕಾಗೆ-ಕೋಗಿಲೆ, ಆಡು-ಆನೆ, ಸೀಳುನಾಯಿ-ಸಿಂಹ ಈ ಪ್ರಾಣಿ ಪಕ್ಷಿಗಳ ಗುಣ ವಿಶಿಷ್ಠತೆಗಳನ್ನು ಅರಿತುಕೊಂಡು ರಾಯಮ್ಮ ಹೇಳಬೇಕಾದ ವಿಷಯವನ್ನು ತುಂಬಾ ಸೊಗಸಾಗಿ ಹೇಳಿದ್ದಾಳೆ. ಕಾಗೆ ಮತ್ತು ಕೋಗಿಲೆ ನೋಡಲು ಒಂದೇ ರೀತಿಯಾಗಿದ್ದರೂ ಎರಡರ ಧ್ವನಿಯಲ್ಲಿ ಅಜಗಜಾಂತರ ವ್ಯತ್ಯಾಸವಿದೆ. ಆಡು ಮತ್ತು ಆನೆಯ ರೂಪದಲ್ಲಿ ತುಂಬಾ ವ್ಯತ್ಯಾಸವಿದೆ. ನಾಯಿ ಮತ್ತು ಸಿಂಹದ ವ್ಯಕ್ತಿತ್ವದಲ್ಲೂ ವ್ಯತ್ಯಾಸವಿದೆ. ಹಾಗೆ ಭಕ್ತನಾಗಬೇಕಾದರೆ ಅರಿವು ಆಚಾರ ಸಮ್ಯಜ್ಞಾನ ಇಲ್ಲದೇ ಡಾಂಭಿಕ ಭಕ್ತಿಯಿಂದ ಭಕ್ತರೆಂದು ತಿರುಗಾಡುವ ಗಾವಿಲರನ್ನು (ದಡ್ಡ) ಈ ವಚನದಲ್ಲಿ ವಿಡಂಬಿಸಿದ್ದಾಳೆ. ದುರ್ಜನರು ತಮ್ಮ ಮೂಲಬುದ್ಧಿಯನ್ನು ಬಿಟ್ಟು ಸಜ್ಜನರಾಗಲು ಸಾಧ್ಯವಿಲ್ಲ. ಕೇವಲ ನೋಡಲು ಹಾಗೂ ವೇಷ ಭೂಷಣದಲ್ಲಿ ಒಂದೇ ಆಗಿ ಕಂಡರೂ ಅಂತರಂಗದ ವ್ಯಕ್ತಿತ್ವವೇ ಬೇರೆ. ಡಾಂಭಿಕ, ಎಂದೂ ಭಕ್ತನಾಗಲಾರ, ಡಾಂಭಿಕ ಭಕ್ತನನ್ನು ಭಗವಂತ ಎಂದೂ ಮೆಚ್ಚಲಾರ ಎಂಬುದನ್ನು ಸ್ಪಷ್ಟಪಡಿಸಿದ್ದಾಳೆ.
ಹೀಗೆ ಅಮುಗೆ ರಾಯಮ್ಮನ ವಚನಗಳಲ್ಲಿ ನಿಷ್ಠಾಭಕ್ತಿ, ಸತ್ಯ ಶುದ್ಧ ಕಾಯಕ ಎದ್ದು ಕಾಣುತ್ತದೆ. ಗಣಾಚಾರದ ಧೀರ ಶರಣೆ ರಾಯಮ್ಮ ದಾಂಪತ್ಯ ಜೀವನವನ್ನು ಒಪ್ಪಿಕೊಂಡು, ಅಪ್ಪಿಕೊಂಡು ಆಧ್ಯಾತ್ಮ ಸಾಧನೆಗೈದವಳು. ಗುರು-ಲಿಂಗ-ಪತಿ ಮೂವರೂ ಒಂದೇ ಎನ್ನುವ ಮನಸ್ಥಿತಿ ರಾಯಮ್ಮನದು. ರಾಯಮ್ಮನ ಎಲ್ಲ ವಚನಗಳು ಅಜ್ಞಾನ ಮೂಢನಂಬಿಕೆಗಳನ್ನು ಧಿಕ್ಕರಿಸುವದರ ಜೊತೆಗೆ ಅರಿವು, ಆಚಾರ, ಅನುಭಾವ ಉತ್ತಮ ನಡೆ-ನುಡಿ, ನಿಷ್ಠಾ ಭಕ್ತಿಯ ಪರಿಣಾಮಗಳ ಮೇಲೆ ಬೆಳಕು ಚೆಲ್ಲುತ್ತವೆ.

-ಡಾ|| ಶರಣಮ್ಮ ಗೊರೇಬಾಳ ಪ್ರಾಚಾರ್ಯರು, ವಿದ್ಯಾರಣ್ಯ ಪ.ಪೂ.ಕಾಲೇಜ, ಧಾರವಾಡ

Don`t copy text!