ಅರಿವೇ ಗುರು

ಅಂಕಣ:೧೯. – ಅಂತರಂಗದ ಅರಿವು

ಅರಿವೇ ಗುರು

ಅರಿವೇ ಗುರು
ಆಚಾರವೇ ಶಿಷ್ಯ
ಜ್ಞಾನವೇ ಲಿಂಗ
ಪರಿಣಾಮವೇ ತಪ
ಸಮತೆ ಎಂಬುದೇ ಯೋಗದಾಗು ನೋಡಯ್ಯ.
ಈಸುವನರಿಯದೆ ಲೋಚುಗೋಳಾದರೆ ಮಹಾಲಿಂಗ ಕಲ್ಲೇಶ್ವರ ದೇವರು ನಗುವರು
                                    -ಹಾವಿನಾಳ ಕಲ್ಲಯ್ಯ

ಶರಣರು ಆಧ್ಯಾತ್ಮಿಕ ಪದದಡೆಗೆ ಸಾಗುವ ವ್ಯಕ್ತಿ ಮೊದಲು ತನ್ನನ್ನು ತಾನು ಅರಿಯಬೇಕು ಎನ್ನುವುದಕ್ಕೆ ಹೆಚ್ಚು ಮಹತ್ವ ಕೊಟ್ಟವರು ನಡೆ-ನುಡಿ ಶುದ್ಧವಾಗಿದ್ದಲ್ಲಿ ಬೇರೆ ದೇವರನ್ನ ಪೂಜಿಸುವ ಅಗತ್ಯವಿಲ್ಲ ಎನ್ನುವ ಮೌಲ್ಯವನ್ನು ಹೇಳಿಕೊಟ್ಟವರು

ಅರಿವೇ ಗುರು
ಸರಿ ತಪ್ಪುಗಳನ್ನು ತಿಳಿಸಿ ಹೇಳುವ, ಸರಿಯಾದ ದಾರಿಯಲ್ಲಿ ನಡೆಸುವ, ಅಕ್ಷರ ಕಲಿಸಿ ಪ್ರಾಪಂಚಿಕ ಜ್ಞಾನ ನೀಡುವವನು, ಸುತ್ತಲಿನ ಪರಿಸರವನ್ನು ಪರಿಚಯಿಸಿ, ಪರಿಸರದೊಂದಿಗೆ ಹೊಂದಿಕೊಳ್ಳುವ ಗುಣಗಳನ್ನು ಕಲಿಸುವವನು ಗುರು.
ಪ್ರಾಪಂಚಿಕ ಗುರುವಿನ ಜ್ಞಾನ ಪ್ರಾಪಂಚಿಕ ಜಗತ್ತಿಗೆ ಮಾತ್ರ ಸೀಮಿತವಾಗಿರುತ್ತದೆ.ಬಹಿರಂಗ ಜ್ಞಾನವನ್ನು ಗುರು ನೀಡಿದರೆ.
ಅಂತರಂಗವನ್ನು ಅರಿಯಲು ಒಬ್ಬ ಗುರುವಿನ ಅವಶ್ಯಕತೆ ಇದೆ. ಆ ಗುರುವೇ ಅರಿವು. ತನ್ನೊಳಗಿರುವ ಪ್ರಜ್ಞೆ ಜಾಗ್ರತವಾಗಬೇಕು.ಆ ಜಾಗ್ರತ ಪ್ರಜ್ಞೆಯೇ ಗುರುವಾಗಿ ನಮ್ಮನ್ನು ಮುನ್ನಡೆಸಬೇಕು.ಅರಿವು ಗುರುವಾಗಬೇಕು.ಗುರು ಎನ್ನುವುದು ವ್ಯಕ್ತಿಯಾಗಿರದೆ.ಅಂತಶಕ್ತಿಯಾಗಿರಬೇಕು ಎನ್ನುವುದು ಶರಣ ಹಾವಿನಾಳ ಕಲ್ಲಯ್ಯನವರು ಆಶಯ.

ಆಚಾರವೇ ಶಿಷ್ಯ
ಆಚಾರ ಎಂದರೆ ನಡತೆ, ಸಮಾಜದೊಂದಿಗೆ ನಾವು ವರ್ತಿಸುವ ರೀತಿ. ಸಮಾಜದಲ್ಲಿ ಬದುಕುವ ವ್ಯಕ್ತಿ ಸಮಾಜದ ರೀತಿ ನೀತಿಗಳಿಗೆ ಅನುಗುಣವಾಗಿ ಸಮಾಜದ ನಿರೀಕ್ಷೆಗಳಿಗೆ ಅನುಗುಣವಾಗಿ ವರ್ತಿಸಬೇಕು.ಸಮಾಜದ ರೀತಿ ನೀತಿಗಳು ಮಾನವೀಯತೆಗೆ ವಿರುದ್ಧವಾದಾಗ, ಅರ್ಥವಿಲ್ಲದ ಆಚರಣೆಗಳು ಜಾರಿಯಲ್ಲಿದ್ದಾಗ ಅವುಗಳನ್ನ ಶಿಷ್ಯನ ಹಾಗೆ ಪ್ರಶ್ನಿಸಬೇಕು. ಸರಿಯಾದ ಉತ್ತರಗಳನ್ನು ತನ್ನ ಅಂತರಂಗದ ಅರಿವಿನಿಂದ ಪಡೆದುಕೊಳ್ಳಬೇಕು ಅರಿವು ಗುರುವಾಗಿ ಅವನಿಗೆ ಮಾರ್ಗದರ್ಶನ ನೀಡಬೇಕು. ಆ ಮಾರ್ಗದರ್ಶನದಲ್ಲಿ ನಡೆದಿದ್ದೇ ಆದರೆ ಆಚಾರವೇ ಶಿಷ್ಯನಾಗಿ ಗುರುವಿನ ಆಜ್ಞೆಯನ್ನು ಅನುಸರಿಸುತ್ತಾನೆ.

ಜ್ಞಾನವೇ ಲಿಂಗ

ಲಿಂಗಪೂಜೆ ಮಾಡುವುದೆ ಭಕ್ತಿ ಎಂದು ಭಾವಿಸಿದೆ, ಜ್ಞಾನ ಸಂಪಾದನೆಯೂ ಕೂಡ ಲಿಂಗ ಪೂಜೆಯೆಂದು ಅರಿಯಬೇಕು

ಲಿಂಗವನ್ನು ಕುರುಹು ಎಂದು ಭಾವಿಸಿ ಯೋಚಿಸುವ ಹಂತವನ್ನು ದಾಟಿದ ಶರಣು ಜ್ಞಾನ ಸಂಪಾದನೆ ಲಿಂಗ ಎಂದು ಭಾವಿಸಬೇಕು.
ಜ್ಞಾನವೇ ಲಿಂಗವಾಗಿ ನಮ್ಮೊಳಗೆ ನಮ್ಮಿಂದ ಪೂಜಿಸಲ್ಪಡುತ್ತದೆ. ಸಾಂಕೇತಿಕವಾದ ಲಿಂಗಕ್ಕಿಂತ ವ್ಯಕ್ತಿ ಹೊಂದಿರುವ ಜ್ಞಾನವೇ ಲಿಂಗ. ಸಮಾಜಕ್ಕೆ ಉಪಯುಕ್ತವಾಗುವಂತಹ ಜ್ಞಾನವನ್ನು ಸಂಪಾದನೆ ಮಾಡಬೇಕು ಮತ್ತು ಸಂಪಾದಿಸಿದ ಜ್ಞಾನ ಸಮಾಜದ ಹಿತಕಾಗಿ ಉಪಯೋಗವಾಗಬೇಕು ಎಂದು ಶರಣರು ಹೇಳುತ್ತಾರೆ.

ಪರಿಣಾಮವೇ ತಪ
ತಪ ಎಂದರೆ ಏಕಾಂತದಲ್ಲಿ ಕುಳಿತು ಬೇಕಾದ ವರವನ್ನ ಪಡೆಯುವ ಅಥವಾ ಕಾರ್ಯಸಿದ್ಧಿಯನ್ನು ಮಾಡಿಕೊಳ್ಳಲು ಆಚರಿಸುವ ಒಂದು ಕ್ರಮ ಅಥವಾ ವ್ರತ. ಆದರೆ ಶರಣರು ಹೇಳುವ ತಪವೇ ಬೇರೆ. ಅರಿವು ಗುರುವಾಗಿ ನಮ್ಮ ನಡತೆ ಅರಿವಿನ ಮಾರ್ಗದರ್ಶನದಲ್ಲಿ ಸಮಾಜಕ್ಕೆ ಮಾದರಿಯಾಗಬೇಕು. ಜ್ಞಾನ ಸಂಪಾದನೆಯೇ ಲಿಂಗ ಪೂಜೆಯೆಂದು ತಿಳಿಯಬೇಕ. ಈ ರೀತಿಯ ಜೀವನ ಕ್ರಮದಿಂದ ಆಗುವ ಪರಿಣಾಮವೇ ತಪ ಎಂದು ವ್ಯಾಖ್ಯಾನಿಸುತ್ತಾರೆ. ಅಂದರೆ ಶರಣರ ದೃಷ್ಟಿಕೋನದಲ್ಲಿ ತಪವು ಅತ್ಯಂತ ಸರಳವಾದ ನಿತ್ಯ ಜೀವನದ ವಿವೇಕವುಳ್ಳ ಆಚರಣೆಯಾಗಿದೆ.

ಸಮತೆ ಎಂಬುದೇ ಯೋಗದಾಗು ನೋಡಯ್ಯ.
ಯೋಗ ಎಂದರೆ ಆತ್ಮನನ್ನು ಪರಮಾತ್ಮನಲ್ಲಿ ಒಂದಾಗಿಸುವುದು ಎಂದು ಅರ್ಥ. ಆತ್ಮನನ್ನು ಪರಮಾತ್ಮನಲ್ಲಿ ಒಂದು ಮಾಡುವುದಕ್ಕಿಂತ ಮುಖ್ಯವಾದದ್ದು ಸಮಾಜದಲ್ಲಿರುವ ಭಿನ್ನತೆಯನ್ನು ಅಳಿಸಿಹಾಕಿ ಎಲ್ಲರೂ ಒಂದೇ ಎನ್ನುವ ಭಾವನೆಯಲ್ಲಿ ಒಬ್ಬರನ್ನೊಬ್ಬರು ಒಪ್ಪಿಕೊಳ್ಳುವುದು ಸಮತೆ. ಜಾತಿ ವರ್ಗಗಳನ್ನು ತಿರಸ್ಕರಿಸಿ. ಮನುಷ್ಯರೆಲ್ಲರೂ ಒಂದೇ ಎನ್ನುವ ಭಾವದಿಂದ ಸಮಾಜದಲ್ಲಿ ನಡೆದುಕೊಂಡರೆ ಅದೇ ಯೋಗ ಸಾಧನೆಯಿದ್ದಂತೆ ಎನ್ನುವುದು ಶರಣರ ಆಶಯ.

ಈಸುವನರಿಯದೆ ಲೋಚುಗೋಳಾದರೆ
ಇದೆ ಜೀವನದಲ್ಲಿ ಅರಿತುಕೊಳ್ಳಬೇಕಾದ ಮುಖ್ಯವಾದ ಸತ್ಯಗಳು ಈ ಸತ್ಯಗಳನ್ನ ಅರಿತುಕೊಂಡು ಸಾಮಾಜಿಕ ಜೀವನವನ್ನು ನಡೆಸಬೇಕು. ಸಿದ್ಧಾಂತಕ್ಕಿಂತ ಪ್ರಾಯೋಗಿಕ ಚಿಂತನೆಗಳಿಗೆ ಹೆಚ್ಚಿನ ಅವಕಾಶವನ್ನು ಕಲ್ಪಿಸಬೇಕು ಅಂದಾಗ ಮಾತ್ರ ಸಮಾಜ ಸುಧಾರಣೆಯಾಗಲು ಸಾಧ್ಯ ಇದನ್ನೇ ಅರಿಯದೆ. ಗ್ರಂಥಗಳನ್ನು ಓದಿ ಪಾಂಡಿತ್ಯವನ್ನು ಗಳಿಸಿ ಕೂದಲು ಕಳೆದುಕೊಂಡು ಸಮಾಜದಲ್ಲಿ ಪ್ರಾಯೋಗಿಕವಾಗಿ ಬದುಕದೆ ಹೋದರೆ, ಬರೀ ಸಿದ್ಧಾಂತಗಳನ್ನು ಅರಿಯುವುದರಲ್ಲಿಯೇ ತಲೆ ಕೂದಲು ಉದುರಿ ತಲೆ ಬೋಳಾದರೆ ಏನು ಉಪಯೋಗ.

ಮಹಾಲಿಂಗ ಕಲ್ಲೇಶ್ವರ ದೇವರು ನಗುವರು
ಅಂಥವರನ್ನ ಕಂಡು ಮಹಾಲಿಂಗ ಕಲ್ಲೇಶ್ವರ ನಗುತ್ತಾನೆ. ವ್ಯಂಗ್ಯ ಮಾಡುತ್ತಾನೆ ಎಂದು ಹಾವಿನಾಳ ಕಲ್ಲಯ್ಯನವರು ತುಂಬಾ ವಿಡಂಬನಾತ್ಮಕವಾಗಿ ಈ ವಚನದಲ್ಲಿ ಹೇಳಿದ್ದಾರೆ.

ನಮ್ಮ ಅರಿವು ಮತ್ತು ಆಚಾರ ಸಾಮಾಜಿಕ ಹಿತಕ್ಕಾಗಿ, ಸಾಮಾಜಿಕ ಒಳಿತಿಗಾಗಿ, ಸಾಮಾಜಿಕ ಸಮಾನತೆಗಾಗಿ ಇದ್ದಾಗ ಮಾತ್ರ ದೇವರು ಅಥವಾ ಕಲ್ಲೇಶ್ವರ ಮೆಚ್ಚಿಕೊಳ್ಳುತ್ತಾನೆ ಎನ್ನುವುದು ಈ ವಚನದ ಆಶಯ


-ಡಾ. ನಿರ್ಮಲ ಬಟ್ಟಲ

Don`t copy text!