ಬದುಕು ಭಾರವಲ್ಲ 27
ಅಬ್ಬಾ ಇದು ನಿಜವೇ? ಇದು ನಿಜವಾಗಿಯೂ ನಡೆಯಿತೇ ?
ಕಂಡದ್ದು ಕಂಡ ಹಾಗೇ ಹೇಳುವ ಗುಣ ನಮ್ಮ ಕನ್ನಡಿಗರಿಗೆ ರಕ್ತಗತವಾಗಿ ಬಂದಿದೆ .
ನೇರ ದಿಟ್ಟವಾಗಿ ಮಾತನಾಡಿದವರು ಜನರ ದೃಷ್ಟಿಯಲ್ಲಿ ತುಂಬಾ ಕೆಟ್ಟವರಾಗಿ ಕಾಣಿಸಿಕೊಳ್ಳುತ್ತಾರೆ .
ಮಾತನಾಡಿದಾತ ಮನದಲ್ಲಿ ಯಾವುದನ್ನೂ ಇಟ್ಟುಕೊಳ್ಳದೇ ತನ್ನ ಕೆಲಸ ಕಾರ್ಯವನ್ನು ಪ್ರಾಮಾಣಿಕವಾಗಿ ಮುಂದುವರೆಸಿಕೊಂಡು ಹೋಗುವುದು ದೊಡ್ಡ ವ್ಯಕ್ತಿಗಳ ಲಕ್ಷಣ ಅಲ್ಲವೇ ?
ಯಾವುದನ್ನೂ ಮನದಲ್ಲಿ ಇಟ್ಟುಕೊಳ್ಳದೇ ಮಗುವಿನಂತೆ ಕಾರ್ಯತತ್ಪರವಾದ ಮನವನ್ನು ವೈರಿಗಳು ಸಹಿಸಿಕೊಳ್ಳಲಾರರು .
ಹೇಗಾದರೂ ಮಾಡಿ ಆತನನ್ನು ಅಥವಾ ಅವಳನ್ನು ಹೇಗಾದರೂ ಮಾಡಿ ಅವಮಾನಗೊಳಿಸಬೇಕು .ಎನ್ನುವ ಕುತಂತ್ರ ಬುದ್ಧಿಯ ಜನರು ಇದ್ದೇ ಇರುವರು ಸಮಾಜದಲ್ಲಿ. ಅದಕ್ಕೇ ಹೇಳಿದ್ದಾರೆ ಪುರಂದರದಾಸರು ತೆಗಳುವರು ಇರಬೇಕು ನಮ್ಮ ಪಕ್ಕದಲ್ಲಿ ಊರಿನಲ್ಲಿರು ಹಂದಿಗಳ ಹಾಗೆ ಇರಬೇಕು ನಮಗೆ ವೈರಿಗಳಿದ್ದಾಗಲೆ ನಾವಾಗಲೇ ಶುದ್ಧರಾಗುವೆವು ಎಂದು ಎಂಥಹ ಅರ್ಥಪೂರ್ಣ ಮಾತುಗಳು .
ಎಲ್ಲಿ ಸುಧಾರಣೆಯ ಮನ ಇರುತ್ತದೆಯೋ ಅಲ್ಲಿ ತೆಗಳುವ ಶಕುನಿಗಳು ಇದ್ದೇ ಇರುವರು. ತಮ್ಮ ಕೈಚಳಕನ್ನು ತೋರಿಸಿ ನಗುವ ಕುಕಿಗಳು ಇದ್ದೇ ಇರುವರು. ನಮ್ಮ ಗೆಲುವನ್ನು ಸಹಿಸದ ದ್ರೋಹಿಗಳು ನಮ್ಮ ಜೊತೆಗೆಯೇ ಇದ್ದು ಬೆನ್ನಿಗೆ ಚೂರಿ ಹಾಕಿ ಭಂಗಗೊಳಿಸುವ ಬುದ್ದಿಗೇಡಿಗಳು. ನಮ್ಮಹಿತಶತ್ರುಗಳು ಕುತಂತ್ರಿಗಳು.
ನಮ್ಮ ಎದುರಿಗೆ ನಿಂತು ಪ್ರತಿಭಟಿಸಲು ಆಗದಿದ್ದಾಗ ಕುಂತರೂ ನಿಂತರೂ ತಲೆಯಲ್ಲಿ ಅವೇ ವಿಚಾರಗಳು ಹೇಗೆ ಅವರನ್ನು ಅವಮಾನ ಗೊಳಿಸಬೇಕು. ಇದ್ದ ಸ್ಥಾನದಿಂದ ಓಡಿಸಬೇಕು ಎಂದು ಪ್ರಾಣಿಯ ಭೇಟಿಗೆ ಹೊಂಚು ಹಾಕಿ ಕುಳಿತ ಪ್ರಾಣಿಯಂತೆ ಕುಳಿತುಕೊಂಡಿರುವ ರಾಕ್ಷಸ ಗುಣದ ಮನುಷ್ಯರನ್ನು ನಾವು ಹೇಗೆ ಮರೆಯಲು ಸಾಧ್ಯ? ನೀವೇ ಹೇಳಿ .
ಸತ್ಯ ನ್ಯಾಯ ನೀತಿ ಧರ್ಮ ಎಂದು ನಂಬಿ ನಡೆದು ಒಂದು ಕಪಾಳಕ್ಕೆ ಹೊಡೆದರೆ ಮತ್ತೊಂದು ಕಪಾಳವನ್ನು ತೋರಿಸಿ ಎಂದು ಹೇಳಿದ ಅಹಿಂಸಾವಾದಿ ಮಹಾತ್ಮಾ ಗಾಂಧೀಜಿಯವರು ಯಾರಿಗೆ ಗೊತ್ತಿಲ್ಲ ಹೇಳಿ .
ತಮಗಾಗಿ ಅಲ್ಲ ಇಡೀ ದೇಶಕ್ಕಾಗಿ ಉಪವಾಸ ಸತ್ಯಾಗ್ರಹ ಮಾಡಿ ನಮಗೆ ಸ್ವಾತಂತ್ರ್ಯವನ್ನು ತಂದು ಕೊಟ್ಟು ಸುಖವಾಗಿ ಇರಿ ಎಂದು ಹೇಳಿ ಮಣ್ಣಲ್ಲಿ ಮಣ್ಣಾಗಿ ಹೋದ ಮಹಾತ್ಮಾ ಗಾಂಧಿಯವರು ಏನನ್ನೂ ತಮ್ಮ ಜೊತೆಗೆ ತೆಗೆದುಕೊಂಡು ಹೋಗಲಿಲ್ಲ ಆದರೆ ಅವರು ಕೊಟ್ಟು ಹೋದ ಸ್ವಾತಂತ್ರ್ಯದ ಬಳುವಳಿಯನ್ನು ಯಾವತ್ತೂ ನಾವು ಮರೆಯಬಾರದು .
ದೊಡ್ಡವರ ದೊಡ್ಡ ಗುಣವೇ ಹಾಗೆ ಬೈದವರಿಗೆ ಬಯ್ಯದೇ ಹೊಡೆದವರಿಗೆ ಹೊಡೆಯದೇ ತಾವೇ ಹೊಡೆಸಿ ಒದೆಯಿಸಿಕೊಂಡು ಸುಂದರವಾದ ಬದುಕನ್ನು ಕಟ್ಟಿಕೊಳ್ಳಲು ಸತತ ಹೋರಾಟ ಮಾಡಿದ ದಿವ್ಯ ಪುರುಷ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು.
ಎಲ್ಲೋ ಓದಿದ ನೆನಪು
ಮಹಾತ್ಮ ಗಾಂಧೀಜಿಯವರು ದಕ್ಷಿಣ ಆಫ್ರಿಕಾದಲ್ಲಿದ್ದ ಕಾಲದಲ್ಲಿ ಪ್ರತಿಭಟನಾ ಮೆರವಣಿಗೆಯನ್ನು ಆಯೋಜಿಸಿದ್ದರಂತೆ .ಸರ್ಕಾರ ಮೆರವಣಿಗೆ ಮಾಡುವುದನ್ನು ನಿಷೇಧಿಸಿತ್ತಂತೆ. ರಾಷ್ಟ್ರಾಧ್ಯಕ್ಷರಾಗಿದ್ದ ಜನರಲ್ ಸ್ಮಟ್ಸ್ ಮೆರವಣಿಗೆಯು ನಡೆದ ಮಹಾತ್ಮಾ ಗಾಂಧೀಜಿಯವರಿಗೆ ಮೆರವಣಿಗೆಯನ್ನು ನಿಲ್ಲಿಸುವಂತೆ ಆಜ್ಞೆ ಮಾಡಿದ್ದನ್ನು ಮಹಾತ್ಮ ಗಾಂಧೀಜಿಯವರು ನಿರಾಕರಿಸಿದಾಗ ಸಿಟ್ಟಿಗೆದ್ದ ಸ್ಮಟ್ಸ್ ಮಹಾತ್ಮ ಗಾಂಧೀಜಿಯವರ ಎದೆಗೆ ತಾವು ಧರಿಸಿದ್ದ ಬೂಟ್ ಕಾಲಿನಿಂದಲೇ ಗಾಂಧೀಜಿಯವರ ಎದೆಗೆ ಒದ್ದಾಗ ಮಹಾತ್ಮ ಗಾಂಧೀಜಿಯವರು ಹಾಗೇ ಕೆಳಕ್ಕೆ ಬೀಳುತ್ತಾರಂತೆ ನಂತರ ಅವರನ್ನು ಬಂಧಿಸಿ ಸೆರೆಮನೆಗೆ ದೂಡಿದರಂತೆ .
ಪುಣ್ಯ ಪುರುಷನ ಎದೆಗೆ ಒದ್ದ ಪಾಪಿ ಕಾಲಿಗೆ ಮಹಾತ್ಮ ಗಾಂಧೀಜಿಯವರು ಸೆರೆಮನೆ ವಾಸ ಮುಗಿಸಿ ಬಂದು ನೇರವಾಗಿ ಸ್ಮಟ್ಸ್ ಅವರಿಗೆ ಒಂದು ಜೊತೆ ಹೊಸ ಪಾದರಕ್ಷೆಯನ್ನು ನಾನೇ ಹೊಲಿಯುವುದನ್ನು ಕಲಿತು ನಿಮಗಾಗಿ ಎರಡು ಪಾದರಕ್ಷೆಗಳನ್ನು ನಾನೇ ಹೊಲಿದು ತಂದಿರುವೆ ಒಂದು ಜೊತೆ ನನಗೆ ಮತ್ತೊಂದು ಜೊತೆ ನಿಮಗೆ ಪ್ರೀತಿಯಿಂದ ಅರ್ಪಿಸುತ್ತಿರುವೆ ಸ್ವೀಕರಿಸಿ ಎಂದು ನಗು ನಗುತ್ತ ಹೇಳಿದ್ದರಂತೆ .
ಕೊನೆಗೆ ಗಾಂಧೀಜಿಯವರು ಭಾರತಕ್ಕೆ ಬಂದು ತಮ್ಮ ಎಪ್ಪತ್ತನೇಯ ಹುಟ್ಟುಹಬ್ಬಕ್ಕೆ ಸ್ಮಟ್ಸ್ ಅವರಿಂದ ಒಂದು ಉಡುಗೊರೆ ಜೊತೆಗೆ ಒಂದು ಪತ್ರ. ಬಂದಿತ್ತಂತೆ. ಮಹಾತ್ಮರೇ ತಾವು ನನಗೆ ಬಹಳ ಹಿಂದೆ ಕೊಟ್ಟಿದ್ದ ಪಾದರಕ್ಷೆಗಳನ್ನು ಇಂದಿನವರೆಗೂ ನನ್ನ ಪೂಜಾ ಕೋಣೆಯಲ್ಲೇ ಇಟ್ಟಿದ್ದೆ , ಈ ಪಾದರಕ್ಷೆಗಳ ಮಹತ್ವ ನನಗಷ್ಟೇ ಗೊತ್ತು . ಈಗ ನನಗೆ ವಯಸ್ಸಾಗಿದೆ. ಈ ಪಾದರಕ್ಷೆಗಳನ್ನು ನಿಮಗೇ ಪುನರ್ ಅರ್ಪಿಸುತ್ತಿದ್ದೇನೆ ದಯವಿಟ್ಟು ಸ್ವೀಕರಿಸಿ ಎಂದು ಬರೆದಿತ್ತಂತೆ. ಹಾಗೇ ಓದುತ್ತಾ ಓದುತ್ತಾ ಹೋದೆ ಕಣ್ಣು ಮಂಜು ಮಂಜಾಗಿ ಬಿಕ್ಕಿತು ಮನ ಎಂಥಹ ಮಹಾನ್ ಪುರುಷರ ಎದೆಗೆ ಒದ್ದರೆಂದು ಕತ್ತಲು ಆವರಣದ ಹಾಗೇ ಆಯಿತು .ಬದುಕು ಭಾರವಾಗಿಲ್ಲ ಒಳಮನಸ್ಸು ಎಚ್ಚರಿಸಿತು.
ಆಕೆ ವಿದ್ಯಾಮಂದಿರಲ್ಲಿ ವಿದ್ಯೆ ಕಲಿಸುವ ಗುರು ಮಾತೆ ತಾಯಿ ಸ್ವರೂಪದವಳು ಮಕ್ಕಳಿಗಾಗಿ ದುಡಿದು ದೇಹ ಸವೆಸಿದ ಗುರುಮಾತೆ ತಪ್ಪಿದಲ್ಲಿ ತಿದ್ದಿ ಬುದ್ದಿ ಹೇಳಿ ಎಲ್ಲರನು ಅಪ್ಪಿ ನಡೆಯುವ ಗುರುಮಾತೆ ಎಲ್ಲರೂ ಎದುರು ನಿಂತರೂ ದಿಟ್ಟವಾಗಿ ಎದುರಿಸಿ ನಿಲ್ಲುವ ವೀರ ಚೆನ್ನಮ್ಮಳ ಮಣ್ಣಿನ ಮಗಳು ಕುತಂತ್ರಿಗಳು ವೀರ ಚೆನ್ನಮ್ಮಳ ಕನಸ್ಸಿಗೆ ಕಲ್ಲು ಹೊಡೆದು ನಗುವ ನರಿ ಬುದ್ದಿಯವರು. ಎಲ್ಲರೆದುರಿಗೆ ಟೀಕಿಸಿ ಅಳಿಸಿ ಹೆಸರಾದರೆ ನಮಗೇ ಅವಮಾನ ಹೇಗೆ ಮಾಡುವುದು ಸುಳ್ಳ ಸುಳ್ಳಿನ ಆರೋಪ ಪ್ರತ್ಯಾರೋಪದಲಿ ನಲುಗಿದ ಗುರುಮಾತೆ ಗುರು ಲಿಂಗ ಜಂಗಮರಿಗೆ ಶರಣೆಂದು ನಡೆದವರು .ದುಷ್ಟ ಕೂಪದಲಿ ಆಳ ಅರಿವಿಲ್ಲ ಎಲ್ಲರೂ ನಮ್ಮವರೇ ತಿಳಿದು ನಡೆದ ಗುರುಮಾತೆಗೆಯೇ ತಿರುಗಿ ಬಿತ್ತೊಂದು ಸಣ್ಣ ಬುದ್ದಿಯ ಸುಂಟರಗಾಳಿ.
ಎಲ್ಲರನೂ ಬಲೆಗೆ ಎಳೆದು ಆರೋಪಿಸಿತು ಒಂಟಿ ಮಂದಿರದಲ್ಲಿ ಒಂಟಿಯಾದ ಗುರುಮಾತೆಯ ಕಂಬನಿಯ ಕಡಲು ನೋಡಿ ನಕ್ಕು ಚುಚ್ಚು ಮಾತಿನ ಚಾಡಿಕೋರ ವಿಷ ಜಂತುಗಳು ಮುಕ್ಕಿದವು. ಒಂದೊಂದೇ ಮುಯ್ಯ ತೀರಿಸಲು ಹೊಂಚು ಹಾಕಿ ಬಾಯಿ ಬಾಯಿ ಬಡಿದುಕೊಂಡವು .
ಗುರು ಆಗಿ ಹೊಡೆಯುವೆ
ತಾಯಿ ಯಾಗಿ ಹೊಡೆಯುವೆ ತೊಲಗು ಆಚೆ ಮತಿ ಕೆಟ್ಟ ಹುಡುಗಿ ಕಲಿಸಿದ ವಿದ್ಯಾಮಾತೆಗೆಯೇ ಹೊಡೆದು ತಾಯವೊಡಲಿಗೆ ಕಾಲೋದ್ದು ಪರಾರಿ ಆಗಿ ನಗುವೆಯಾ ? ನಗು ನಗುತ್ತ ಕೊರೆ ಕೊರೆದು ಕೊಂಡಿತು ತನ್ನದೇ ಕರದಿಂದ .
ಗಾಯ ಮಾಡಿಕೊಳ್ಳದಿರು ಮತಿಗೇಡಿ ಬುದ್ದಿಗೇಡಿ ತಡೆ ನಾನೇ ಬರುವೆ ನಿನ್ನಲ್ಲಿಗೆ ಮಗಳೆಂದು ಗುರುವೆಂದು ಠಾಣೆಗೆ ಅಪರಾಧಿ ನಾನಲ್ಲ ಒದ್ದೋಡಿ ಬಂದ ಬುದ್ದಿಗೇಡಿ ಮಗಳು ವಿದ್ಯಾರ್ಥಿನಿ ತಾಯಿಯಾಗಿ ಮನ್ನಿಸುವೆ. ಗುರುವಾಗಿ ಮನ್ನಿಸುವೆ .ನಾನೇನು ತೊಡಿಸಲಿ ನಿನಗೆ ಒಡಲಿಗೊದ್ದು ಓಡಿದ ಸಣ್ಣ ಮತಿ ಮತಿ ಗೆಟ್ಟ ಹುಡುಗಿ ನಾನೇನು ತೊಡಿಸಲಿ ನಿನಗೆ
ಅಬ್ಬಾ ಅದೇಷ್ಷು ಸಿಟ್ಟು ಆ ಗುರುಮಾತೆಯ ಮೇಲೆ ಒಂದೊಂದೇ ಮನಗಳು ಮುತ್ತಿದವು ಕೀಟಗಳಂತೆ ಕೊರೆ ಕೊರೆದು ತಿಂದ ದೇಹದೊಳಗಿನ ರಕ್ತ ಕುಡಿದ ರಾಕ್ಷಸರು .
ಜೋರಾದ ಬಿರುಗಾಳಿ ಸಿಡಿಲು ಅಬ್ಬರಕ್ಕೆ ಮನ ನಲುಗಿತು.
ಗುರುಗಳಿಗೆ ಒದೆಯುವ ವಿದ್ಯಾರ್ಥಿಗಳು ಇನ್ನೂ ಇದ್ದಾರೆಯೇ ಅಚ್ಚರಿ ಒಂದು ಕ್ಷಣ.
ಮೋಡ ಮುಸುಕಿದ ಕತ್ತಲಿನ ವಾತಾವರಣದಿಂದ ಬೆಳಗು ಹರಿದು ಎಚ್ಚರ ಗೊಂಡಿತು ಮನ
ಅಬ್ಬಾ ಇದು ನಿಜವೇ? ನಿಜವಾಗಿಯೂ ನಡೆಯಿತೇ ?
-ಡಾ ಸಾವಿತ್ರಿ ಮ ಕಮಲಾಪೂರ
ಕವಯಿತ್ರಿ ಹಾಗೂ ಲೇಖಕಿ