ಮೂರ ಹೊರಿಸಿ ಮುಕ್ತಳಾದ ಅಕ್ಕ

ವಚನ – 31

ಮೂರ ಹೊರಿಸಿ ಮುಕ್ತಳಾದ ಅಕ್ಕ

ಮೂರು ತಪ್ಪ ಹೊರಿಸಿ ಬಂದವಳಿಗೆ
ಇನ್ನಾರ ಕೊಂಡು ಕೆಲಸವೇತಕ್ಕೆ?
ಹೊಗದಿಹೆನೆ ಹೋಗಿಹೆನೆ ಜ್ಞಾನಕ್ಕೆ ಹಾನಿ
ಅರೆಗೋಣ ಕೊಯ್ದವನಂತೆ ಇನ್ನೇವೆ?
ಈ ಗುಣವ ಬಿಡಿಸಾ ಎನ್ನ ತಂದೆ ಚೆನ್ನಮಲ್ಲಿಕಾರ್ಜುನಾ.

ಅಕ್ಕಮಹಾದೇವಿಯ ಇಡೀ ಜೀವನದ ಚಿತ್ರಣ ಅವಳ ವಚನಗಳಿಂದ ತಿಳಿದು ಬರುತ್ತದೆ. ಉಡುತಡಿಯಿಂದ ಕದಳಿಯವರೆಗಿನ ಪಯಣದ ದಾಖಲೆಗಳಿಗೆ ಅವಳ ವಚನಗಳೇ ಸಾಹಿತ್ಯದ ರೂಪದಲ್ಲಿ ಸಾಕ್ಷಿಯಾಗಿವೆ. ಈಗ ದೊರೆತಿರುವ ನಾಲ್ಕುನೂರಾ ಮೂವತ್ನಾಲ್ಕು ವಚನಗಳು ಬೇಕಾದಷ್ಟು ಮಾಹಿತಿಯನ್ನು ಒದಗಿಸುತ್ತವೆ.

ಮಹಾದೇವಿಯ ಸೌಂದರ್ಯಕ್ಕೆ ಮಾರು ಹೋದ ಕೌಶಿಕ ಮಹಾರಾಜನು, ಸಾಮಂತರನ್ನು ಕಳುಹಿಸಿ, ಹಿಂಸೆ ನೀಡುತ್ತ, ಒತ್ತಾಯಪೂರ್ವಕವಾಗಿ, ಅರಮನೆಗೆ ಕರೆಸಿಕೊಳ್ಳುತ್ತಾನೆ. ತಂದೆ ತಾಯಿಗೆ ಹಿಂಸೆಯಾಗಬಾರದು ಎನ್ನುವ ಉದ್ದೇಶದಿಂದ ಅಕ್ಕಮಹಾದೇವಿ ಹೋಗಿರುತ್ತಾಳೆ. ಹುಟ್ಟು ವೈರಾಗ್ಯ ಹೊಂದಿದ್ದ ಅಕ್ಕನಿಗೆ ರಾಜನಾಗಲಿ, ರಾಜವೈಭವವಾಗಲಿ ಆಕರ್ಷಿಸುವುದಿಲ್ಲ. ಅರಮನೆಯಿಂದ ತನ್ನನ್ನು ಬಿಡುಗಡೆಗೊಳಿಸಿಕೊಳ್ಳುವ ಬಗೆಯನ್ನು ತಿಳಿದಿರುತ್ತಾಳೆ.

ಕೌಶಿಕ ಮಹಾರಾಜನಿಂದ ಬಿಡುಗಡೆ ಹೊಂದಲು ಅಕ್ಕ ಮೂರು ಶರತ್ತುಗಳನ್ನು ವಿಧಿಸುತ್ತಾಳೆ. ಒಂದು, ಅಕ್ಕಮಹಾದೇವಿ ಲಿಂಗ ಪೂಜೆಯಲ್ಲಿ ನಿರತಳಾಗಿದ್ದಾಗ ತೊಂದರೆ ಕೊಡಬಾರದು. ಎರಡು, ಗುರುಗಳು ಆಗಮಿಸಿದಾಗ ಅವರ ಪಾಠ, ಪ್ರವಚನಕ್ಕೆ ಅಡ್ಡಿಯಾಗಬಾರದು. ಮೂರು, ಜಂಗಮರ ಸೇವೆಯಲ್ಲಿದ್ದಾಗ ಭಂಗ ತರಬಾರದು. ಇದನ್ನು ಮೀರಿ ರಾಜ ನಡೆದುಕೊಂಡಿದ್ದೇ ಆದರೆ ತಾನು ಸ್ವತಂತ್ರಳು. ಆಗ ರಾಜನ ಅರಮನೆಯಿಂದ ಹೊರ ಹೋಗಲು ತಾನು ಆನುಮತಿ ಪಡೆದಂತೆ ಎಂದು ಮೊದಲೇ ತಿಳಿಸಿರುತ್ತಾಳೆ. ಅದರಂತೆ ರಾಜ ಮೂರೂ ಶರತ್ತುಗಳನ್ನು ಕ್ರಮೇಣವಾಗಿ ಉಲ್ಲಂಘಿಸುತ್ತಾ ಬರುತ್ತಾನೆ. ಅಕ್ಕ ತನ್ನ ಮಾತಿನ ಪ್ರಕಾರ ಸ್ವತಂತ್ರಳಾಗುತ್ತಾಳೆ. ಹೀಗೆ ಅರಮನೆಯಿಂದ ಹೊರ ಬಂದ ಸಂದರ್ಭದಲ್ಲಿ ಹೇಳಿದ ವಚನವಿದು.

ಈ ಘಟನೆಯಿಂದ ಅಕ್ಕನ ಸ್ವತಂತ್ರ ಮನೋಧರ್ಮದ ದರ್ಶನವಾಗುತ್ತದೆ. ಅವಳು ತನಗೆ ಬೇಕಾದಂತೆ ತನ್ನ ಬದುಕನ್ನು ರೂಪಿಸಿಕೊಳ್ಳುವ ಸಾಮರ್ಥ್ಯ ಹೊಂದಿರುವುದು ಗಮನಾರ್ಹ. ರಾಜನ ಪಟ್ಟದ ರಾಣಿ ಆಗಿರಬಹುದಾದರೂ ಅದರಲ್ಲಿ ಅಸಕ್ತಿ ಇರುವುದಿಲ್ಲ. ಜನ್ಮತಃ ಪಕ್ವವಾಗಿದ್ದ ತನ್ನೊಳಗಿನ ಮನಸ್ಸನ್ನು ಇನ್ನೂ ಗಟ್ಟಿ ಮಾಡಿಕೊಂಡು ಮೂರು ಶರತ್ತುಗಳನ್ನು ವಿಧಿಸಿ, ಅದರಲ್ಲಿ ರಾಜ ಸೋಲುವಂತೆ ಮಾಡುತ್ತಾಳೆ.

ಹೀಗೆ ಎಲ್ಲವನ್ನೂ ತ್ಯಜಿಸಿ ಅರಮನೆಯಿಂದ ಹೊರ ಬಂದವಳಿಗೆ ಒಂದೇ ಒಂದು ಹುಡುಕಾಟವಿರುತ್ತದೆ. ಅದು ಚೆನ್ನಮಲ್ಲಿಕಾರ್ಜುನನ ಹುಡುಕಾಟವೆಂದು ನಮಗೆ ಮೇಲ್ನೋಟಕ್ಕೆ ಅನಿಸುವುದು ಸಹಜ. ಆದರೆ ಅಕ್ಕನ ಆಂತರಿಕ ಹುಡುಕಾಟದ ಗುಟ್ಟನ್ನು ನಾವು ಸುಲಭವಾಗಿ ತಿಳಿದುಕೊಳ್ಳಲು ಸಾಧ್ಯವಾಗದು. ಮೊದಲಿಗೆ ಶರಣರ ಸಂಗ ಬಯಸಿ ಕಲ್ಯಾಣದತ್ತ ಪಯಣಿಸುತ್ತಾಳೆ. ಇಂತಹ ವಿಚಾರಧಾರೆಯ ಅಕ್ಕನಿಗೆ ಜನಸಾಮಾನ್ಯರ ಕುರಿತು ಯಾವುದೇ ಆಸಕ್ತಿ ಇರುವುದಿಲ್ಲ. ರಾಜನಿಗೇ ಮೂರು ತಪ್ಪು ಹೊರಿಸಿ ಬಂದವಳಿಗೆ ಇನ್ನು ಯಾರಿಂದ ಏನು ಕೆಲಸವಿರಲು ಸಾಧ್ಯ? ಅವಳ ಈ ಗಟ್ಟಿ ನಿರ್ಣಯ ಸಾಮಾನ್ಯರಿಗೆ ವಿಶಿಷ್ಟ ಧೈರ್ಯ ಎನಿಸಿದ್ದು ಸಹಜ.

ರಾಜನ ಆಜ್ಞೆಯನ್ನು ಮೀರಬಾರದೆಂಬ ಒಂದೇ ಒಂದು ಕಾರಣಕ್ಕಾಗಿ ಅಕ್ಕ ಅರಮನೆಯನ್ನು ಪ್ರವೇಶಿಸುತ್ತಾಳೆ. ತನ್ನ ಹೆತ್ತವರು ಸಮಸ್ಯೆಯಲ್ಲಿ ಸಿಲುಕಿಯಾರು ಎನ್ನುವ ಕಾಳಜಿಯೂ ಅವಳಲ್ಲಿರುತ್ತದೆ. ರಾಜ ಕರೆಯಲು ಕಳುಹಿಸಿದಾಗ ಹೋಗದೆ ಇದ್ದರೆ ರಾಜಧರ್ಮಕ್ಕೆ ಅಪಚಾರವೆಸಗಿದಂತೆಂದು ಭಾವಿಸುತ್ತಾಳೆ. ರಾಜ ಮತ್ತವನ ರಾಜ್ಯದ ಮೇಲೆ ಅಕ್ಕನಿಗೆ ಯಾವ ಸಂಬಂಧವೂ ಇರುವುದಿಲ್ಲ. ಅವನಿಂದ ಜಾಣತನದ ಬಿಡುಗಡೆ ಹೊಂದ ಬೇಕಾಗಿರುತ್ತದೆ ಅಷ್ಟೆ. ಹಾಗಾಗಿ ಜಾಣತನದಿಂದ ತನ್ನನ್ನು ಅರಮನೆಯಿಂದ ಬಿಡುಗಡೆ ಮಾಡಿಕೊಳ್ಳುತ್ತಾಳೆ. ಮಹಾರಾಜನ ಈ ಕೃತ್ಯದಲ್ಲಿ ಭಾಗಿಯಾಗಿದ್ದು ಎಂದರೆ ಅದು ತನ್ನ ಜ್ಞಾನಕ್ಕೆ ಮಾಡಿದ ಹಾನಿ ಎಂದು ಭಾವಿಸುತ್ತಾಳೆ.
ಈ ಜಾಣತನದ ಹಿಂದೆ ಸದುದ್ದೇಶದ ಆತ್ಮವಿಶ್ವಾಸ ಅಡಗಿರುತ್ತದೆ. ಇದನ್ನು ಸಾತ್ವಿಕ ಸಾಮರ್ಥ್ಯ ಎಂದು ಗುರುತಿಸಬಹುದು. ಈ ಸಾತ್ವಿಕ ಸಾಮರ್ಥ್ಯ ಇದ್ದರೆ ಮಾತ್ರ ಅಧ್ಯಾತ್ಮ ಮಾರ್ಗದ ಹಾದಿ ಹಿಡಿಯಲು ಸಾಧ್ಯ.

ಅಕ್ಕನಿಗೆ ಅರಮನೆ ವಾಸವು ಸೆರೆಮನೆ ವಾಸಕ್ಕೆ ಸಮಾನವಾಗಿರುತ್ತದೆ. ಅಲ್ಲಿದ್ದಷ್ಟು ಕಾಲ ಅವಳ ಆಲೋಚನೆ, ಆಸಕ್ತಿ, ಆಚರಣೆ, ಎಲ್ಲವೂ ಅಸಹಜವಾಗಿ ಜರುಗಿದಂತೆ ಭಾಸವಾಗುತ್ತದೆ. ತನಗೆ ಬೇಕಾದುದನ್ನೇ ಮಾಡುತ್ತಾಳೆ. ಆದರೂ ಅನಗತ್ಯ ಅಡಚಣೆಯನ್ನು ಅನುಭವಿಸುತ್ತಾಳೆ. ಆ ಸಮಯಕ್ಕೆ ಅದು ಅನಿವಾರ್ಯವಾಗಿರುತ್ತದೆ. ಆ ಸ್ಥಿತಿಯನ್ನು ಅರೆಗೋಣ ಕೊಯ್ದ ಸ್ಥಿತಿಗೆ ಹೋಲಿಸುತ್ತಾಳೆ.

ಆ ಅರಮನೆಯಲ್ಲಿರುವಂಥ ಸಂದರ್ಭವು ಅಕ್ಕನಿಗೆ ದುಃಸ್ವಪ್ನವಾಗಿ ಕಾಡುತ್ತದೆ. ಅದರಿಂದ ಹೊರ ಬರುವುದು ತ್ರಾಸದಾಯಕವೆನಿಸಿ ಕೊರಗುತ್ತಾಳೆ. ತನ್ನ ಚೆನ್ನಮಲ್ಲಿಕಾರ್ಜುನನಲ್ಲಿ ‘ನೀನೇ ತಂದೆ, ನೀನಲ್ಲದೆ ಮತ್ತೆ ಯಾರೂ ಇದನ್ನು ಅರ್ಥೈಸಿಕೊಳ್ಳಲು ಸಾಧ್ಯವಿಲ್ಲ. ನನ್ನಲ್ಲಿರುವ ಈ ದೌರ್ಬಲ್ಯವನ್ನು ಹೋಗಲಾಡಿಸಲು ನಿನಗೇ ಸಾಧ್ಯ. ನನ್ನ ಈ ಗುಣವನ್ನು ನೀನೇ ಬಿಡಿಸಬೇಕು ದೇವಾ’ ಎಂದು ನಿವೇದಿಸಿಕೊಳ್ಳುತ್ತಾಳೆ.

ಇಂದಿನಂತೆಯೇ ಅಂದಿನ ಸಾಮಾಜಿಕ ವ್ಯವಸ್ಥೆಯೂ ಇತ್ತು. ಪ್ರಸ್ತುತಕ್ಕಿಂತಲೂ ಒಂದು ಕೈ ಮೇಲೇ ಇರಬಹುದು. ಆಗಲೂ ಹೆಣ್ಣಿಗೆ ಮದುವೆ ಮುಕ್ತಿಯ ಪಥವೆಂದು ನಂಬಿದ್ದರು. ಹೆಣ್ಣು ಗಂಡಿನ ಅಸರೆ ಇಲ್ಲದೆ ಬದುಕು ನಡೆಸಲು ಸಾಧ್ಯವೇ ಇಲ್ಲವೆಂದು ತಿಳಿದ ಸಂದರ್ಭ.
ಕಾಮಿಗಳು, ಕ್ರೂರಿಗಳು, ಅಸಹಾಯಕ ಹೆಣ್ಣನ್ನು ದುರುಪಯೋಗ ಪಡಿಸಿಕೊಳ್ಳಬಹುದೆಂಬ ಭೀತಿ ಇದ್ದ ಆ ಹೊತ್ತಿನಲ್ಲಿ ಅಧ್ಯಾತ್ಮ ಮಹಿಳೆಗಲ್ಲವೆಂದು ಪರಿಗಣಿಸಿದ್ದರು. ಆದರೆ ಅಕ್ಕ ಅಂತಹ ಭೀತಿಯಿಂದ ಭಿನ್ನವಾಗಿ ಬದುಕಿ, ದೈಹಿಕವಾಗಿ, ಮಾನಸಿಕವಾಗಿ ಮುಕ್ತಳಾಗಿ ಮಾದರಿಯಾದಳು. ಅನೇಕ ಸಾಮಾಜಿಕ ಸಂಕಷ್ಟ ಮತ್ತು ಭೀತಿಯಿಂದ ಒದ್ದಾಡುವ ಆಧುನಿಕ ಸ್ತ್ರೀ ಕುಲಕ್ಕೆ ಅಕ್ಕನ ಧೈರ್ಯ ಮತ್ತು ಮುಕ್ತವಾಗುವ ಬಗೆ ಅನುಕರಣೀಯ. ಅರಿಷಡ್ವರ್ಗಗಳ ಗೆದ್ದ ಎಲ್ಲರಿಗೂ ಮುಕ್ತಿ ಸಾಧ್ಯ. ಇಲ್ಲಿ ಗಂಡು, ಹೆಣ್ಣು ಎಂಬ ವ್ಯತ್ಯಾಸ ಬೇಡ ಎಂಬುದನ್ನು ಅಕ್ಕ ನಿರೂಪಿಸಿದ್ದಾಳೆ.‌

ಸಾಮಾಜಿಕ ಆರೋಪಗಳಿಂದ ಮುಕ್ತವಾಗಬೇಕಾದರೆ ದಿಟ್ಟ ನಿಲುವಿನ ಪ್ರದರ್ಶನ ಅತ್ಯಗತ್ಯ ಕೂಡ ಎನ್ನುವುದನ್ನು ಅಕ್ಕ ಈ ವಚನದಲ್ಲಿ ಪರೋಕ್ಷವಾಗಿ ಎಚ್ಚರಿಸುತ್ತಾಳೆ. ಇಲ್ಲಿ ಬಳಸಿರುವ ಕಠಿಣ ರೂಪಕ ಅಕ್ಕನಿಗೆ ಇರುವ ಸಾಮರ್ಥ್ಯವನ್ನು ವಿವರಿಸಿ, ಸ್ಪಷ್ಟ ನಿಲುವನ್ನು ಕಣ್ಣ ಮುಂದೆ ಕಟ್ಟಿಕೊಡುತ್ತದೆ.‌ ರಾಜನ ದರ್ಪವನ್ನು ಲೆಕ್ಕಿಸದ ನನಗೆ ನೀವ್ಯಾವ ಲೆಕ್ಕ ಎಂಬ ಧೈರ್ಯ, ತಾಕತ್ತು ಕೇವಲ ಹೆಣ್ಣಿಗಲ್ಲ, ಪ್ರತಿಯೊಬ್ಬರಿಗೂ ಬೇಕು ಎಂಬ ಸಾಲುಗಳ ಅನುರಣನ ನಮ್ಮ ಅಭಿಮಾನ.

ಸಿಕಾ

Don`t copy text!