ದೇವರ ಮಗಳು – ಭಿಮಪುತ್ರಿ
(ಸಾಂದರ್ಭಿಕ ಚಿತ್ರ)
(ನೀಳ್ಗತೆ)
ಅಮ್ಮನಿಗೆ ಅದ ಚಿಂತಿ. ಮುತ್ತು ಹಿಂಗ್ಯಾಕ ಮಾಡಕತ್ಯಾನ ? ಮೂರು ಹೆಣ್ಮಕ್ಕಳ ನಂತರ ಗಂಡು ಹುಟ್ಡಿದರ ಮುತ್ತು ಹುಟ್ಟಿದಂಗ ಅಂತಾರ. ಇಲ್ಲಿ ಆಗಿದ್ದು ಅದೇ. ಅದ ಖುಷೀಗೇ ಅವನಿಗೆ ಮುತ್ತು- ಮತ್ತು ರಾಜ್ ಅಂತ ಹೆಸರಿಟ್ಟಿದ್ದು. ಅಷ್ಟಕ್ಕೂ ಮತ್ತುರಾಜ್ ಅನ್ನೋದು ತನ್ನ ನೆಚ್ಚಿನ ಹೀರೋ ತಾನು ಆರಾಧಿಸೋ ದೈವ ಡಾ|| ರಾಜಕುಮಾರ್ ರ ಮೂಲ ಹೆಸರಲ್ಲವೇ. ಜೊತೆಗೆ ಮೂರು ಹೆಣ್ಮಕ್ಕಳಾದ ಮೇಲೆ ಹುಟ್ಡಿರೋನಲ್ವ ? ಮುತ್ತಿದ್ದಂಗೆ ಅಂತ ಮುತ್ತು ಅನ್ನೋ ಹೆಸರಿಟ್ಡಿದ್ದರು ಪದ್ದಮ್ಮ.
ಆದ್ರೆ ಮೊದಲೆಲ್ಲ ಚೆನ್ನಾಗೇ ಇದ್ದ ಮುತ್ತು, ಬರತಾ ಬರತಾ ವಿಚಿತ್ರವಾಗಿ ನಡಕೋಳೋಕೆ ಶುರು ಮಾಡಿದ್ದ. ಶಾಲೆ ಬಿಟ್ಟ ಮೇಲೆ ಬೇರೆ ಹುಡುಗ್ರ ಥರಾ ಕಬಡ್ಡಿನೋ, ಕ್ರಿಕೆಟ್ಡೋ, ಚಿನ್ನಿ ದಾಂಡುನೋ ಆಡೋಕೆ ಹೋಗೋ ಬದ್ಲು, ಅಮ್ಮನಿಗೆ ಪಾತ್ರೆ ತೊಳೆಯೋದ್ರಲ್ಲಿ, ಬಟ್ಟೆ ಒಗೆಯೋದ್ರಲ್ಲಿ ಸಹಾಯ ಮಾಡ್ತಿದ್ದ. ಆರಂಭದಲ್ಲಿ ಅಮ್ಮನಿಗೆ ತುಂಬಾ ಖುಷಿಯಾಗುತ್ತಿತ್ತು. “ನನ್ನ ಮಗ ಮುತ್ತು ಉಳಿದ ಗಂಡು ಹುಡಗರಂಗ ಉಡಾಳರ ಥರ ಓಣಿ ಓಣಿ ತಿರಗ್ಯಾಡಿ ಸಿಕ್ಕಿಸಿಕ್ಕಿದ್ದ್ ಆಟ ಆಡಿ ಬರೋ ಮಗ ಅಲ್ಲವಾ ಯವ್ವ. ಭಾಳ ಒಳ್ಳೆವ್ನು. ನನಗ ಹೆಲ್ಪ್ ಮಾಡತೈತಿ ಕೂಸು, ನನ ಬಂಗಾರ” ಅಂತ ಮುತ್ತು ಕೊಡತಿದ್ಲು. ಆದರ ಯಾವಾಗ ತನ ಮಗ ಮುತ್ತುವಿನದು ಅತೀ ಆಗ್ತಾ ಇದೆ ಅಂತ ಅನಸಾಕ ಶುರುವಾತ್ ನೋಡು ಅವಾಗ್ಲಿಂದ ಅಮ್ಮನಿಗೂ ಕಸಿವಿಸಿ ಶುರುವಾಗ್ಲಿಕ್ಕೆ ಹತ್ತಿತು. ಅಮ್ಮನ ಉತ್ತರವಿಲ್ಲದ ಪ್ರಶ್ನೆ ,
“ನನ್ನ ಮುತ್ತು ಹಿಂಗ್ಯಾಕ ಆಡಾಕತ್ಯಾನ ?”. ಕೊರಗುತ್ತಲೇ ಇದ್ದಳು ಪದ್ದಮ್ಮ. ಮೊದಲೇ ಅಮ್ಮನದು ಅಂತರ್ಜಾತೀಯ ಪ್ರೇಮ ವಿವಾಹ. ಸಮಾಜದ ಸಹಜ, ಸಾರ್ವರ್ತ್ರಿಕ ಮನಸ್ಥಿತಿಯ ಕೈಗನ್ನಡಿಯಂತೆ ತಾವು ಉಚ್ಚಕುಲದವರು ಅಂದುಕೊಂಡವರ ಮನೆಯಲ್ಲಿ ಹುಟ್ಟಿದವಳು ಈ ಪದ್ದಮ್ಮ. ಆದರೆ ಈ ಪ್ರೀತಿ ಜಾತಿ ಕೇಳಿ ಹುಟ್ಟುತ್ತಾ ? ಖಂಡಿತ ಇಲ್ಲ. ಅದಕ್ಕೆ ಗೊತ್ತಿರುವುದು ಹೃದಯದ ಭಾಷೆ ಮಾತ್ರ. ಹೃದಯದ ಭಾಷಾ ನಿಘಂಟಿನಲ್ಲಿ ಈ ಧರ್ಮ, ಜಾತಿ ಅನ್ನೋ ಪದಗಳಿಗೆ ಜಾಗವೇ ಇಲ್ಲ. ಹೀಗಾಗಿ ಪದ್ದಮ್ಮಳ ಹೃದಯ ವೀಣೆ ಕರಿಯಪ್ಪನ ಪ್ರೀತಿಗೆ ಕರಗಿತು. ಪ್ರೇಮನಾದವ ಹೊಮ್ಮಿಸಿತು. ಇದರ ಫಲವಾಗಿ ಮದುವೆ, ಮೂರು ಮಕ್ಕಳು ಅವೂ ಹೆಣ್ಣೇ. ಮೊದಲೇ “ಕೀಳು ಜಾತಿಯವನನ್ನ ಕಟಗೊಂಡ್ಲ್ ನೋಡ್” ಅಂತ ಉರಿದು ಕೊಳ್ಳುತ್ತಿದ್ದ ಅವಳ ತವರು ಮನೆಯವರಿಗೆ ಮೂರು ಮಕ್ಕಳು ಅವೂ ಹೆಣ್ಣೇ, ಸಹಿಸಿಕೊಳ್ಳಲಾಗಲಿಲ್ಲ. ಹೀಗಾಗಿ ಶಾಶ್ವತವಾಗಿ ತಮ್ಮ ತಲಬಾಗಲನ್ನು ಬಂದ್ ಮಾಡಿಬಿಟ್ಟರು ಪದ್ದಮ್ಮಳ ಪಾಲಿಗೆ.
ಇದೇ ಕೊರಗಿನಲ್ಲಿದ್ದ ಪದ್ದಮ್ಮನಿಗೆ ಆಶಾಕಿರಣ ಅಂತ ಗೋಚರಿಸಿದ್ದು ಮತ್ತುವಿಗೆ ಜನ್ಮ ನೀಡಿದ ಮೇಲೇ. ಅವನ ಹುಟ್ಡು ಪದ್ದಮ್ಮನಿಗೆ ಮರು ಜನ್ಮ ನೀಡಿತ್ತು. ಅವಳ ಖುಷಿಗೆ ಪಾರವೇ ಇರಲಿಲ್ಲ. ಆದರೆ ಅವನ ಬೆಳವಣಿಗೆ ಅವಳನ್ನು ಮತ್ತೆ ಚಿಂತೆಯ ಕೂಪಕ್ಕೆ ತಳ್ಳಿತ್ತು. ಇದೇ ಚಿಂತೆಯಲಿ ಕೊರಗುತ್ತಲೇ ಇದ್ದಳು ಪದ್ದಮ್ಮ. ಅವನು ಅವನಲ್ಲ, ದೇವರ ಮಗ, ಅಲ್ಲಲ್ಲ ಅವಳು ದೇವರ ಮಗಳು. ಅಂತ ಗೊತ್ತಾಗೋ ಹೊತ್ತಿಗೆ ಪದ್ದಮ್ಮಳ ಪ್ರಾಣ ಪಕ್ಷಿ ಹಾರಿಹೋಗಿತ್ತು….
ಅಮ್ಮನನ್ನು ಕಳೆದು ಕೊಂಡು ಅರ್ಧ ತಬ್ಬಲಿಯಾದ ಮುತ್ತುವನ್ನು ಕರಿಯಪ್ಪ ಒಬ್ಬ ಶಿಕ್ಷಕರ ಮನೆಯಲ್ಲಿ ಬಿಟ್ಟ. ಆ ಶಿಕ್ಷಕರಿಗೆ ಮನೆಗೆಲಸ ಮಾಡಲು ಒಬ್ಬ ಹುಡುಗ ಸಿಕ್ಕಂತಾಯ್ತು. ಮುತ್ತುವಿನ ಶಿಕ್ಷಣದ ಹಾದಿಯೂ ಸುಗಮವಾಯಿತು. ಮುತ್ತು ಅತ್ಯಂತ ನಿಷ್ಠೆಯಿಂದ ಆ ಶಿಕ್ಷಕರ ಮನೆಕೆಲಸ ಮಾಡುತ್ತಾ ಇದ್ದ. ಶಿಕ್ಷಕರ ಹೆಂಡತಿಗೂ ಅಚ್ಚುಮೆಚ್ಚಿನವನಾದ. ಹತ್ತನೇ ತರಗತಿಯವರೆಗೂ ಮುತ್ತುವಿನ ಓದು ಅಬಾಧಿತವಾಗೇ ನಡೆದಿತ್ತು. ಆದರೆ ಇವನ ವರ್ತನೆಯಲ್ಲಿ ಬದಲಾಗುತ್ತಲೇ ಇತ್ತು. ಮೊದ ಮೊದಲು ಹೆಂಗರುಳಿನ ಹುಡುಗ ಅಂತ ತಿಳಕೊಂಡಿದ್ರು ಆ ಶಿಕ್ಷಕರು. ಆದರೆ ಬರೀ ಕರುಳು ಅಷ್ಟೇ ಅಲ್ಲ ದೇಹವೂ ಹೆಣ್ತನದ ಕಡೆ ವಾಲುತ್ತಿದೆ ಅಂತ ಮುತ್ತುವಿಗೆ ಮಾತ್ರ ಗೊತ್ತಾಗುತ್ತಿತ್ತು. ಎಲ್ಲ ಹುಡುಗ್ರು ಕಬಡ್ಡಿ, ವ್ಹಾಲಿಬಾಲ್ , ಕ್ರಿಕೆಟ್ ಹೀಗೆ ಬೇರೆ ಬೇರೆ ಆಟ ಆಡಬೇಕು ಅಂದುಕೊಳ್ಳುತ್ತಿದ್ದರೆ , ಮುತ್ತುವಿಗೆ ಪಾತ್ರೆ ತೊಳೀಬೇಕು, ಬಟ್ಟೆ ಒಗೀಬೇಕು, ಅಡುಗೆ ಮಾಡುವ ಅದರಲ್ಲೂ ಚಪಾತಿ, ರೊಟ್ಟಿ ಮಾಡೋ ಕೆಲಸ ಮಾಡಬೇಕು ಅನಿಸ್ತಿತ್ತು. ಒಂದಿನ ಆ ಶಿಕ್ಷಕರೂ ಮತ್ತು ಅವರ ಹೆಂಡತಿ ಬೇರೆ ಊರಿಗೆ ಹೋಗಿದ್ದರು. ಅವತ್ತು ಅವರ ಮನೆಯಲ್ಲಿ ಮುತ್ತು ಒಬ್ಬನೇ.ಅವನೇ ರಾಜಾ ಅಲ್ಲಲ್ಲ ರಾಣಿ ! ಅವತ್ತು ಮುತ್ತುವಿಗೆ ಖುಷಿಯೋ ಖುಷಿ. ಮೇಷ್ಟ್ರ ಹೆಂಡತಿಯ ಸೀರೆ ಉಟ್ಕೊಂಡೂ, ಹೆಣ್ಮಕ್ಳ ಥರಾ ತಲೆ ಬಾಚ್ಕೊಂಡೂ, ಮೇಕಪ್ ಮಾಡಿಕೊಂಡೂ , ಜೋರಾಗಿ ಲಿಪ್ ಸ್ಟಿಕ್ ಹಚ್ಕೊಂಡು ಹುಡುಗಿಯಂತೆ ಕನ್ನಡಿಯ ಮುಂದೆ ಕುಣಿದಾಡಿಬಿಟ್ಟಿದ್ದ ಮುತ್ತು. ಇವನ ವರ್ತನೆ ಅತೀಯಾದಾಗ ಆ ಶಿಕ್ಷಕರು ಬೇಸರಗೊಂಡು, ಕರಿಯಪ್ಪನನ್ನು ಕರೆದು, “ನಿನ್ನ ಮಗ ಹೆಂಗೆಂಗೋ ಆಡ್ತಾನಪಾ,…..ಅವನ್ನ ನಿಮ್ಮನಿಗೆ ಕರಕೊಂಡ ಹೋಗಿಬುಡು” ಅಂತ ಮನೆಯಿಂದ ಹೊರ ಹಾಕಿದರು. ದಾರಿಕಾಣದಾಯಿತು ಕರಿಯಪ್ಪನಿಗೆ. ಮುದ್ದಿನ ಮಡದಿ ಪದ್ದಮ್ಮಳನ್ನು ಕಳೆದು ಕೊಂಡ ದುಃಖದಿಂದ ಆತ ಇನ್ನೂ ಹೊರಬಂದಿರಲಿಲ್ಲ. ಅಂಥಾದರೊಳಗೆ ಮತ್ತುವಿನ ಈ ಹೆಣ್ಣಾಟ. ಗರಬಡಿದವನಂತಾದ ಕರಿಯಪ್ಪ. ಮಾನಸಿಕವಾಗಿ ಕುಗ್ಗಿಹೋದ. ಇದೇ ನೆಪದಲ್ಲಿ ಹಾಸಿಗೆ ಹಿಡಿದವನು ಮೇಲೆ ಏಳಲೇ ಇಲ್ಲವನು. ಕೆಲವೇ ದಿನಗಳಲ್ಲಿ ಪ್ರೀತಿಯ ಪತ್ನಿ ಪದ್ದಮ್ಮಳನ್ನು ಕೂಡಿಕೊಂಡ. ಪ್ರೀತಿಸುತ್ತಿದ್ದ ಜೀವಗಳೆರಡು ಆತ್ಮ ರೂಪದಲ್ಲಿ ಈಗ ಸ್ವರ್ಗಸ್ಥ! ಪರಿಣಾಮ ಮುತ್ತು ಈಗ ಅಕ್ಷರಶಃ ಅನಾಥ ! ಇವನ ವರ್ತನೆ ನೋಡಿ ಸಹೋದರಿಯರೂ ಸೇರಲಿಲ್ಲ. ಒಂದು ರಾತ್ರಿ ಆ ಸಹೋದರಿಯರು, “ನಿನ್ನಿಂದ ನಮಗೆ ತೊಂದರೆ, ಇವತ್ತೇ ಕೊನೆ. ನಾಳೆಯಿಂದ ನಿನ್ ದಾರಿ ನೀ ನೋಡ್ಕೋ. ಈ ಮನೇಲಿ ನಿನಗ ಜಾಗ ಇಲ್ಲ” ಅಂತ ಸ್ಪಷ್ಟವಾಗಿ ಹೇಳಿಬಿಟ್ಟರು. ಮುತ್ತುವಿನ ಬದುಕೀಗ ಬೀದಿಪಾಲು. ನೋವಿನಲ್ಲೇ ಮುತ್ತು ಒಂದು ಗಟ್ಟಿ ನಿರ್ಧಾರ ಮಾಡಿದ.
ತಾನು ಹುಟ್ಟಿದ ಮನೆ. ಒಡಹುಟ್ಟಿದವರಾರೂ ಸೇರುತ್ತಿಲ್ಲ. ಬೇಡವಾದವರ ಮನೆಯ ಹಾಸಿಗೆ ತುಂಬ ಮುಳ್ಳು ಮುಳ್ಳು. ಆ ರಾತ್ರಿಯೂ ಆ ಮನೆಯಲ್ಲಿ ಉಳಿಯ ಬೇಕೆನಿಸಲಿಲ್ಲವನಿಗೆ. ಹೊರಟುಬಿಡಬೇಕು. ಅದೇ ಗಟ್ಟಿ ನಿರ್ಧಾರ. ಆದರೆ ಅಂತಹ ಸರಹೊತ್ತಿನಲ್ಲಿ ಹೋಗುವುದಾದರೂ ಎಲ್ಲಿಗೆ ? ಗೊತ್ತಿಲ್ಲ. ಆದರೆ ನಿರ್ಧಾರ ಸಡಿಲಿಸಲಿಲ್ಲ.
“ಅಕ್ಕಾ ನಾಳೆ ಯಾಕ್ರೇ ಇವತ್ತಾ, ಈಗಾ ಹೋಗ್ತೀನಿ. ನಿಮ್ಮದೊಂದೊಂದು ಹಳೇದಾದ್ರೂ ಪರವಾಗಿಲ್ಲ, ಡ್ರಸ್ಸೋ….ಸೀರೇನೋ ಕೊಡ್ರೇ….. ಅಕ್ಕಂದಿರ ಮುಂದೆ ಅಂಗಲಾಚಿದ. ಅವರು ಅಸಹ್ಯ ಪಟ್ಟುಕೊಳ್ಳುತ್ತಾ ತಮ್ಮದೊಂದೊಂದು ಡ್ರೆಸ್ಸೂ, ಸೀರೆ ಬಿಸಾಕಿದರು. ಎದೆಗವಚಿಕೊಂಡವನೇ ಹೊರಟು ನಿಂತ. ಅವನಿಗೆ ಆಶ್ರಯ ನೀಡಿದ್ದು ಊರ ಹೊರಗಿನ ದ್ಯಾಮವ್ವನ ಗುಡಿ. ಮಲಗಿದ ತುಂಬ ಹೊತ್ತಿನ ವರೆಗೆ ನಿದ್ದೆ ಸುಳಿಯಲಿಲ್ಲ. ಒದ್ದಾಡುತ್ತಾ ಕಣ್ಮುಚ್ಚಿದವನಿಗೆ ಯಾವಾಗ ನಿದ್ದೆ ಹತ್ತಿತ್ತೋ…. ಗೊತ್ತಿಲ್ಲ. ಬೆಳಿಗ್ಗೆ ಯಾರೋ ಬಾರಿಸಿದ ಗಂಟೆಯ ನಾದ ಇವನನ್ನು ಎಚ್ಚರಿಸಿತು. ಗಂಟೆ ಬಾರಿಸಿದವರು ಆ ದೇವಸ್ಥಾನದ ಪೂಜಾರಿಯೇ ಆಗಿದ್ದರು. ಅವರೂ ಇವನಿಗೆ ಪರಿಚಿತರಾಗಿದ್ದರು. ಇವನನ್ನು ನೋಡಿದ ಕೂಡಲೇ , “ಯಾಕೋ ಮುತ್ತು ಇಲ್ಲಿ ಮಲಗಿದ್ದೀಯಾ” ಎಂದು ವಿಚಾರಿಸಿದರು. ಮುತ್ತು ನಡೆದಿದ್ದೆಲ್ಲವನ್ನೂ ಅವರಿಗೆ ಹೇಳಿದ. ಇವನ ವೃತ್ತಾಂತವನ್ನೆಲ್ಲಾ ಕೇಳಿದ ಪೂಜಾರರು ಮೌನಿಯಾದರು. ಒಂದರ್ಧ ಗಂಟೆ ಗರ್ಭಗುಡಿಯೊಳಗೆ ಧ್ಯಾನಸ್ಥರಾದರು. ದೇವಿ ದ್ಯಾಮವ್ವ ಅವರಿಗೇನು ಆಜ್ಞಾಪಿಸಿದಳೋ ಹೊರಗೆ ಬಂದು “ಮುತ್ತು ಅಲ್ಲೇ ಬಾವಿಕಡೆ ಹೋಗಿ ಸ್ನಾನ ಮಾಡಿ ಬಾ. ನಿನ್ನ ಈ ಡ್ರೆಸ್ ಕಳಚು. ತಗೋ ಅಮ್ಮನ ಈ ಸೀರೆ ಉಟ್ಕೊಂಡ್ ಬಾ. ಇನ್ನು ಮುಂದೆ ನೀ ದೇವರ ಮಗಳು” ಅನ್ನುತ್ತಾ ದೇವಿಗೆ ಉಡಿಸುತ್ತಿದ್ದ ಸೀರೆಯನ್ನು ಮುತ್ತುವಿಗೆ ಕೊಟ್ಟರು. ಮುತ್ತುವಿಗೆ ಖುಷಿಯಾಯಿತು. ಅವರು ಹೇಳಿದಂತೆಯೇ ಮಾಡಿದ. ಅಧಿಕೃತವಾಗಿ ಸೀರೆ ಉಟ್ಟುಕೊಳ್ಳುವಾಗ ಮೈ ಜುಂ ಎನ್ನುತ್ತಿತ್ತು, ಪುಳಕ ಗೊಂಡಿತ್ತು. ಒಳಗೊಳಗೇ ಆನಂದ. ತಲೆ ಸ್ನಾನ ಮಾಡಿ ದೇವಿಯ ಮುಂದೆ ಬಂದು ನಿಂತಾಗ ಹೊಸ ಜಗತ್ತಿಗೆ ಪ್ರವೇಶಿಸುತ್ತಿರುವ ಅನುಭವ. ಪೂಜಾರರು ದೇವಿಯ ಪೂಜೆ ಮಾಡಿದ ನಂತರ ಇವನನ್ನೂ ಗರ್ಭಗುಡಿಯೊಳಗೆ ಕರೆದರು. ಒಂದು ಮಣೆಯ ಮೇಲೆ ಇವನನ್ನು ಕುಳ್ಳರಿಸಿ ಇವನಿಗೂ ಪೂಜೆ ! ಮೈ ರೋಮಾಂಚನವಾಗುತ್ತಿತ್ತು. ಸಾಕ್ಷಾತ್ ದೇವಿ ಆವಾಹನೆಯಾದ ಅನುಭವ ! ಸಣ್ಣಗೆ ಒಳಗೊಳಗೇ ಕಂಪಿಸುತ್ತಿದ್ದ ಇವನ ಮೈ ಜೋರಾಗಿ ನಡುಗಲು ಆರಂಭಿಸಿತು. ಪೂಜಾರಿಯ ಪಾಲಿಗೆ ಮುತ್ತು ಸಾಕ್ಷಾತ್ ದೇವತೆಯೇ. ನಡೆಯಿತು ಇವನಿಗೂ ಅಭಿಷೇಕ, ಭಂಡಾರದರ್ಪಣೆ. ಈಗವನು ಕುಂಕುಮಾಂಕಿತ ! “ಇನ್ನು ಮುಂದೆ ನಿನ್ನ ರಕ್ಷಣೆ ಈ ಅಮ್ಮನದು. ಇವತ್ತಿನಿಂದ ನೀನು ಮುತ್ತು ಅಲ್ಲ ರಕ್ಷಿತಾ” ಎಂದು ಹೊಸ ನಾಮಕರಣ ಮಾಡಿದರು ಆ ಪೂಜಾರಿ. ದೇವಿಗೊಮ್ಮೆ ಪೂಜಾರರಿಗೊಮ್ಮೆ ಸಾಷ್ಟಾಂಗ ಪ್ರಣಾಮಗಳನ್ನು ಸಲ್ಲಿಸಿ ಹೊರ ನಡೆದಳು ರಕ್ಷಿತಾ !
ರಕ್ಷಿತಾ ಅಪ್ರತಿಮ ಸುಂದರಿ. ಹೆಣ್ಣಾಗಿ ಹುಟ್ಟಲಿಲ್ಲವಷ್ಟೇ. ಭಗವಂತ ಯಾವ ಹೆಣ್ಣಿಗೂ ಕಡಿಮೆ ಇಲ್ಲದಷ್ಟು ಸೌಂದರ್ಯ ರಾಶಿಯನ್ನು ತುಂಬಿ ಅವಳನ್ನು ಭೂಮಿಗೆ ಕಳಿಸಿದ್ದ. ಆದರೆ ಕಿಲಾಡಿ ಅವನು. ಅವಳನ್ನು ಗಂಡಾಗಿ ಹುಟ್ಡಿಸಿ ಅವಳ ಮನಸ್ಸು, ಹೃದಯಯದ ತುಂಬ ಹೆಣ್ತನವನೇ ತುಂಬಿ ಸೃಷ್ಟಿಸಿದ್ದ. ಅವಳ ದೇಹ ಸೌಂದರ್ಯವೋ ಕರ್ಪೂರದ ಗೊಂಬೆಗೆ ಎರಕಹೊಯ್ದಂತಿತ್ತು. ರಕ್ಷಿತಾಗೆ ತನ್ನ ಶಾಲಾ ದಿನಗಳು ನೆನಪಾದವು. ಅವಳು ಓದಿನಲ್ಲೂ ಜಾಣೆಯಾಗಿದ್ದಳು. ತರಗತಿಯಲ್ಲಿ ತನ್ನೆಲ್ಲ ಸಹಪಾಠಿಗಳಿಗಿಂತ ಮುಂದು.ಭಾಷಣ ಸ್ಪರ್ಧೆ, ಚರ್ಚಾ ಸ್ಪರ್ಧೆ ಗಳಲ್ಲಿ ಇವಳನ್ನು ಮೀರಿಸುವವರಿರಲ್ಲ. ಆದರೆ ಅವಳ ವರ್ತನೆ, ಸಹಪಾಠಿಗಳು ಅವಳನ್ನು ಹೀಯಾಳಿಸುವ ರೀತಿ ಅವಳನ್ನು ಹಿಂಡಿ ಹಿಪ್ಪೆ ಮಾಡುತ್ತಿದ್ದವು. ಶಾಲೆಯಲ್ಲಿ ಗಂಡು ಹುಡುಗರ ಜೊತೆ ಕೂಡುತ್ತಿದ್ದ ಇವನನ್ನು ಗೆಳೆಯರು “ಲೇ ಹೆಣ್ಯಾ…..” ಎಂದೇ ಮಾತನಾಡಿಸುತ್ತಿದ್ದರು. ತರಗತಿಯ ಡೆಸ್ಕ್ ನಲ್ಲಿ ಗಂಡು ಹುಡುಗರ ಪಕ್ಕ ಕುಳಿತಿರುತ್ತಿದ್ದ ಅಕ್ಷತಾಳಿಗೆ ಆ ಹುಡುಗರ ಗಡಸು ತೊಡೆ ತಾಗಿದ ಕೂಡಲೆ ಏನೋ ಕಸಿವಿಸಿಯಾಗುತ್ತಿತ್ತು. ತಾನು ಹೆಣ್ಣು, ಹೆಣ್ಮಕ್ಕಳ ಜೊತೆ ಕೂಡಬೇಕಿತ್ತು ಎನಿಸುತ್ತಿತ್ತು ಅವಳಿಗೆ ಆದರೆ ಅವಕಾಶವಿರಲಿಲ್ಲ. ಈಗ ಅವೆಲ್ಲವೂ ಮುಗಿದ ಅಧ್ಯಾಯ. ನಾನೀಗ ಹೆಣ್ಣು. ದೇವರ ಮಗಳು. ಅಂದುಕೊಳ್ಳುತ್ತಾ ದ್ಯಾಮವ್ವನ ಗುಡಿಯಿಂದ ಹೊರ ನಡೆಯುತ್ತಿದ್ದಳು ರಕ್ಷಿತಾ. ಅಷ್ಟರಲ್ಲಿ ಇವಳನ್ನು ನೋಡಿದ ಇಬ್ಬರು ಪಡ್ಡೆ ಹುಡುಗರಲ್ಲೊಬ್ಬ, “ಲೇ…. ಅಲ್ನೋಡಲೇ ಹೊಸ ಫಿಗರ್ರು…. ಸೂಪರ್ ಐತಲಲೇ ಯಾರಿದು….?” ಅಂದ. “ಲೇ ಫಿಗರ್ ಅಲ್ಲಲೇ ಅದು ಚಕ್ಕಾ!!!!” ಅಂದ ಮತ್ತೊಬ್ಬ. ಎದೆಗೇ ಚುಚ್ವಿದಂತಾತು ರಕ್ಷಿತಾಗೆ. ಶಾಲಾ ದಿನಗಳಲ್ಲಿ ಹೆಣ್ಯಾ…..ಇವತ್ತಿನಿಂದ ಚಕ್ಕಾ…… ಅನಿಸಿಕೊಳ್ಳಬೇಕು. ದೇವರೇ ಏನಪ್ಪಾ ಈ ಜೀವನ ಅನಿಸುತ್ತಿತ್ತವಳಿಗೆ.
ಅಕ್ಕಂದಿರು ಕೊಟ್ಟ ಹಳೇ ಡ್ರೆಸ್ಸು ತೊಟ್ಟುಕೊಂಡರೇನೇ ಇಷ್ಟೊಂದು ಸುಂದರಿಯಾಗಿ ಕಾಣುವ ತಾನು ಇನ್ನು ಚೆಂದ ಚೆಂದ ತೊಡುಗೆಗಳನ್ನು ತೊಟ್ಟುಕೊಂಡರೆ ಅದೆಷ್ಟು ಸುಂದರವಾಗಿ ಕಾಣಬಹುದು ? ಒಳಗೊಳಗೇ ಖುಷಿಯಾಗುತ್ತಿತ್ತವಳಿಗೆ. ಹಸಿವಿನಲ್ಲೂ ಆತ್ಮ ರತಿ ! ಅಸಲು ದ್ಯಾಮವ್ವ ಗುಡಿಯಲ್ಲಿ ಪೂಜಾರಿಯವರು ನೀಡಿದ್ದ ತುಸು ಪ್ರಸಾದವನ್ನು ತಿಂದದಷ್ಟೇ. ಹೊಟ್ಟೆಯೊಳಗೆ ಹಸಿವಿನ ರಿಂಗಣ. ಏನಪ್ಪಾ ಮಾಡೋದೂ ಎಂದುಕೊಳ್ಳುತ್ತಾ ಹೆಜ್ಜೆ ಹಾಕುತ್ತಿದ್ದಳು. ಮುಂದೆ ಬಂದ ಸರ್ಕಲ್ ನಲ್ಲಿದ್ದ ಹೊಟೆಲ್ ಮುಂದೆ ಏಳೆಂಟು ಜನರ ಸಮೂಹ. ರಕ್ಷಿತಾಳೊಳಗೆ ಏನೋ ಒಂಥರಾ ನಡುಕ. ಬೇರೆ ದಾರಿಯೇ ಇಲ್ಲ. ಹೊಟ್ಟೆ ಪಾಡು, ಚಪ್ಪಾಳೆ ತಟ್ಟಲೇ ಬೇಕು. ಅವರು ಅಪ್ಪ ಮಗ. ಅವರ ಮುಂದೆ ತಟ್ಟಿದ ಚಪ್ಪಾಳೆ ವ್ಯರ್ಥವಾಗಲಿಲ್ಲ. ಆ ತಂದೆ ಐವತ್ತು ರೂಪಾಯಿ ನೀಡಿದರು. ರಕ್ಷಿತಾ ಆ ಹುಡುಗನ ತಲೆ ನೇವರಿಸುತ್ತಾ “ಎಕ್ಸಾಮ್ ಗೆ ಹೊರಟಿದ್ದಿಯಾ ಮಗಾ ?” ಆಪ್ತವಾಗಿ ಕೇಳಿದಳು. “ಹೌದು ನೀಟ್ ಬರೀಲಿಕ್ಕೆ ಹೊರಟಿದ್ದೀನಿ” ಅಂದ. “ಡಾಕ್ಟರ್ ಆಗ್ತೀಯಾ ಬಿಡು ಮಗಾ” ಎನ್ನುತ್ತಾ ಅವರಪ್ಪ ಕೊಟ್ಟಿದ್ದ ಐವತ್ತು ರುಪಾಯಿಯನ್ನು ಒಂದು ತುದಿಯಲ್ಲಿ ಕಚ್ಚಿ ಅದನ್ನಷ್ಟೇ ಮಡಿಚಿ, “ಇಟ್ಕ ಮಗಾ ಒಳ್ಳೇದಾಗ್ತದೆ” ಎನ್ನತ್ತಾ ಆ ಹುಡುಗನಿಗೆ ವಾಪಾಸು ಕೊಟ್ಟಳು ರಕ್ಷಿತಾ ಅದನ್ನು ಪಡೆದ ಅವರು, ರಕ್ಷಿತಾ ಕಚ್ವಿ ಕೊಟ್ಟ ಐವತ್ತು ರುಪಾಯಿಯನ್ನು ಗೌರವದಿಂದ ನೋಡುತ್ತಾ ಪ್ರೀತಿಯಿಂದ ಅದನ್ನು ತಮ್ಮ ಪರ್ಸ್ ನಲ್ಲಿ ಇಟ್ಡುಕೊಂಡರು. ಮತ್ತು ರಕ್ಷಿತಾಗೆ ಈ ಬಾರಿ ನೂರು ರೂಪಾಯಿ ಕೊಟ್ಟರು. ರಕ್ಷಿತಾಳ ಕಮಾಯಿ ಹೀಗೆ ಶುರುವಾಯಿತು. ಹಸಿವಾಗಿದ್ದರಿಂದ ಒಂದೆರಡು ಇಡ್ಲಿ ತಿಂದರಾಯ್ತು ಎಂದು ರಕ್ಷಿತಾ ಇಡ್ಲಿ ತಿನ್ನಲು ಕುಳಿತಳು. ಆಗ ಪಕ್ಕದಲ್ಲಿ ಬಂದು ಕುಳಿತವಳು ರಕ್ಷಿತಾಳ ಸಹವರ್ತಿ. ಮತ್ತೊಬ್ಬ ಚಕ್ಕಾ ! ಅವಳು ಅದೂ ಇದೂ ಮಾತಾಡುತ್ತಾ ತಮ್ಮ ಗುಂಪು, ತಮ್ಮ ನಾಯಕಿಯ ವಿವರ, ಎಲ್ಲ ನೀಡಿದಳು. ಈ ಜಗತ್ತಿನಲ್ಲಿ ತಾನೊಬ್ಬಳೇ ಬದುಕಲು ಅವಕಾಶವಿಲ್ಲ, ತಮ್ಮ ಸಂಘಕ್ಕೆ ಸೇರಬೇಕು, ಆ ನಾಯಕಿ ಏರಿಯಾ ಹಂಚತಾರೆ, ಅಲ್ಲಿ ಕೆಲಸಮಾಡಬೇಕು ಎನ್ನುವ ವಿವರ ನೀಡಿದಳು. ರಕ್ಷಿತಾಳನ್ನು ತಮ್ಮ ನಾಯಕಿಗೆ ಪರಿಚಯಿಸಿದಳು. ಆ ನಾಯಕಿ ತಮ್ಮ ಸಂಘದ ರೂಲ್ಸುಗಳನ್ನು ಹೇಳಿದಳು. ಇವಳ ಸೌಂದರ್ಯ ನೋಡಿ ಆ ನಾಯಕಿ ಇವಳನ್ನು ಅಲಾಟ್ ಮಾಡಿದ್ದು ಟೋಲ್ ಗೇಟ್ ಗೆ. ರಕ್ಷಿತಾಳ ಬದುಕಿನ್ನು ಟೋಲ್ ಗೇಟ್ ನ ಕರಾಳ ಕತ್ತಲಲ್ಲಿ !
ಪ್ರತೀ ದಿನ ಟೋಲ್ ಗೇಟ್ ನಲ್ಲಿ ಚಪ್ಪಾಳೆ ತಟ್ಟೀ ತಟ್ಟೀ ರಕ್ಷಿತಾಳ ಕೈ ಕೆಂಪಗಾದವೇ ಹೊರತು ಬದುಕಿನ ಬಣ್ಣ ಬದಲಾಗಲೇ ಇಲ್ಲ. ಅದರ ಕಪ್ಪು ಶುಭ್ರವಾಗಲೇ ಇಲ್ಲ. ಎರಡನೇ ದಿನವೇ ಇವರ ತಂಡದ ನಾಯಕಿ ರಕ್ಷಿತಾಳಿಗೆ ಹೊಸ ಟಾಸ್ಕ್ ನೀಡುದಳು. ಅದು ಕಾದ ಕಬ್ಬಿಣದಂತಾಗಿರುವ ಕುಡುಕ ಕಾಮುಕರ ದೇಹ ತೃಷೆ ತೀರಿಸುವ ಟಾಸ್ಕು ! ಅಬ್ಬಾ ! ಭಯಂಕರ, ಅಸಹ್ಯಕರ. ವಿಧಿಯಿಲ್ಲ. ಒಪ್ಪದಿದ್ದರೆ ನಾಳೆ ಚಪ್ಪಾಳೆ ತಟ್ಟಲೂ ಜಾಗವಿಲ್ಲ. ಅನಿವಾರ್ಯ ಒಪ್ಪಿದಳು ಸ್ವಪ್ನ ಸುಂದರಿ ರಕ್ಷಿತಾ. ಅದು ಯಾಂತ್ರಿಕ ಕೆಲಸ. ತಾನೊಂದು ಯಂತ್ರ. ಸುಂದರವಾದ ಯಂತ್ರವಷ್ಟೇ. ಬಂದವನು ತನ್ನ ಕಾಮ ತೃಷೆ ತೀರಿಸಿಕೊಳ್ಳುತ್ತಾನೆ. ಇಪ್ಪತ್ತು ನಿಮಿಷ ಅಬ್ಬಬ್ಬಾ ಅಂದರೂ ಅರ್ಧ ಗಂಟೆ. ಉರಿದುರಿದು ದಣಿದ ಬಳಿಕ ಸೋತು ಹೊರಡುತ್ತಾನೆ. ಕೈ ತುಂಬ ಕಾಸು ! ಸಾಕಲ್ಲವೇ ? ಇದೇ ಸರಿ ಎನಿಸಿಬಿಟ್ಟಿತು ರಕ್ಷಿತಂಗೂ. ಒಂದು ದಿನ ಒಂಟಿಯಾಗಿ ಕುಳಿತು ತನ್ನ ಜೀವನದ ಕುರಿತು ಯೋಚಿಸೀ ಯೋಚಿಸಿ. ಬೋರ್ಗರೆದು ಅತ್ತುಬಿಟ್ಟದ್ದಳು ರಕ್ಷಿತಾ. ಅಂದಿನಿಂದ ಒಂಟಿಯಾಗುರುವುದನ್ನೇ ಬಿಟ್ಟುಬಿಟ್ಟಳು. ಇವಳ ಸೌಂದರ್ಯಕ್ಕೆ ಮರುಳಾದ ಕೆಲವು ಕಾಮುಕರು ಖಾಯಂ ಗಿರಾಕಿಗಳಾಗಿದ್ದರು. ಆದರೆ ಅವರ ಕಾಮದಾಟವೋ ರಣಹಿಂಸಾತ್ಮಕ ! ಡಬ್ಬಲ್ ಯಾಕೆ, ತ್ರಿಬ್ಬಲ್ ದುಡ್ಡು ಕೇಳಿದರೂ ಕೊಟ್ಟುಬಿಡುವ ರಕ್ಕಸರವರು ಆದರೆ ಅವರು ಹೇಳಿದಂತೆ ಕೇಳಬೇಕು. ಕಚ್ಚುವುದು, ಚಿವುಟುವುದು, ಎಲ್ಲಂದರಲ್ಲಿ ಹಿಚುಕುವುದು ಅವರಿಗೆ ತೀಟೆ. ಇವಳಿಗೋ ಹಿಂಸೆ. ಅವರು ಕೊಡುವ ದುಡ್ಡಿಗೆ ಇವಳು ಅವರ ಆ ಎಲ್ಲ ಕ್ರೌರ್ಯವನ್ನು ಸಹಿಸಿಕೊಳ್ಳುವ ಸಹನಾ ಮೂರ್ತಿ. ರಕ್ಷಿತಾಳ ಕಮಾಯಿ ಜೋರಾಗುತ್ತಿತ್ತು. ಇವಳ ಗಳಿಕೆ, ಇವಳನ್ನೇ ಹುಡುಕಿಕೊಂಡು ಬರುವ ಗಿರಾಕಿಗಳನ್ನು ಕಂಡು ಇವಳ ಸಹವರ್ತಿಗಳಿಗೆ ಹೊಟ್ಟೆಕಿಚ್ಚು. ಇನ್ನೂ ಇವಳು ಇಲ್ಲೇ ಮುಂದುವರಿದರೆ ತಮಗ್ಯಾವ ಗಿರಾಕಿಯೂ ಬರುವುದಿಲ್ಲ. ತಮ್ಮನ್ನು ಕೇಳುವವರಿಲ್ಲ ಎಂಬುದನ್ನು ಅರಿತ ಅವರು ಇವಳನ್ನು ಹೇಗಾದರೂ ಮಾಡಿ ಸಾಗ ಹಾಕಬೇಕು ಎಂದು ಉಪಾಯ ಮಾಡಿದರು. ಇವಳಿಗೆ ಮುಂಬಯಿನ ಆಸೆ ತೋರಿಸಿದರು. ಇವಳ ಸೌಂದರ್ಯಕ್ಕೆ ಅಲ್ಲಿ ಗಂಟೆಗೆ ಐದು ಸಾವಿರ ದುಡಿಯಬಹುದು ಎಂದು ಆಸೆ ಹುಟ್ಟಿಸಿದರು. ಅವರ ಈ ಯಾವ ಪ್ರಲೋಭನೆಗೂ ರಕ್ಷಿತಾ ಜಗ್ಗಲಿಲ್ಲ. ಆ ಟೋಲ್ ಗೇಟ್ ಬಿಟ್ಟು ಹೋಗಲಿಲ್ಲ.
ಹೀಗೊಂದು ಸಂಜೆ ರಕ್ಷಿತಾಳ ಆ ಟೋಲ್ ಗೇಟ್ ಸಹವರ್ತಿಯೊಬ್ಬಳು ನಾಲ್ಕು ಜನ ಪಡ್ಡೆ ಹುಡುಗರನ್ನು ಕರೆದು ಕೊಂಡು ಬಂದ್ಲು. “ಲೇ ರಕ್ಷೀ ನೀನಾ ಬೇಕಂತ್ ನೋಡ್ಲೇ ಇವರಿಗೆ”……. ಲಜ್ಹೆಗಲ್ಲಿ ಜಾಗವೇ ಇಲ್ಲ. ನಾಲ್ಕು ಜನ ಆಗೊಲ್ಲ ಅಂದ್ರೂ “ಇಪ್ಪತ್ತು ಸಾವಿರ ಕೊಡ್ತೇವೆ ಬಾ” ಅಂದ್ರು. “ಒಬ್ಬೊಬ್ರಾಗೇ ಬರಬೇಕು” ಅನ್ನೋದು ಇವಳ ಕಂಡೀಷನ್ನು. ಆಯ್ತು ಬಾ ಎಂದವರು ಕತ್ತಲಲ್ಲಿ ಅವಳೊಂದಿಗೆ ಕರಗಿ ಹೋದರು. ಆ ಕತ್ತಲಲ್ಲಿ ಅವರಿಂದ ಹಿಂಸೆಯ ಪರಾಕಾಷ್ಠೆ !!! ಮನುಷ್ಯರೇ ಅಲ್ಲವರು ಮೃಗಗಳಿಗಿಂತಲೂ ಕ್ರೂರ. ನಾಲ್ಕೂ ಜನರಿಂದ ಇವಳ ಮೇಲೆ ಒಮ್ಮಿಗೇ ಅಟ್ಯಾಕ್…. , ಕೂಗಿದಳು…. ಚೀರಿದಳು. ನಿರ್ಜನ ಪ್ರದೇಶ. ಕೇಳುವವರಿಲ್ಲ ಇವಳ ಆಕ್ರಂದನವನ್ನು ಯಾರೂ. ಇನ್ನೂ ಚೀರದಂತೆ ಒಬ್ಬ ತನ್ನ ಕರ್ಚೀಫಿನಿಂದ ಇವಳ ಬಾಯಿ ಕಟ್ಟಿದ. ಮತ್ತೊಬ್ಬ ಕೈಗಳನ್ನು ಹಿಂದಕ್ಕೆಳೆದು ಕಟ್ಟಿದ. ಮುಂದಿನದೆಲ್ಲ ಅವರದೇ ಆಟ, ಅಟ್ಟಹಾಸ ! ಕೂದಲು ಜಗ್ಗುವವನಾರೋ, ಎಲ್ಲೆಂದರಲ್ಲಿ ಕಚ್ಚುವವನಾರೋ……ಮುಂದಿನದು…… ಉಫ್……ಅಸಹ್ಯ ! ಹೇಳಲಾಗದು ಗಂಡಸರ ಕ್ರೌರ್ಯ ! ಅದೆಷ್ಟು ಹೊತ್ತು ಆ ಹಿಂಸೆಯನ್ನು ಅನುಭವಿಸಿದಳೋ ರಕ್ಷಿತಾ, ಆ ದೇವರಿಗೇ ಗೊತ್ತು. ಇವಳಿಗೆ ಎಚ್ಚರವಾದಾಗ ಸುತ್ತಲೂ ಕತ್ತಲು ಕಗ್ಗತ್ತಲು. ಇವಳು ಬರೀ…..ಬೆತ್ತಲು ! ತಡಕಾಡಿದಳು ಹುಡುಗಿ, ತನ್ನ ಬಟ್ಟೆಗಳನ್ನು ಹುಡುಕಿದಳು, ಅವು ಸಿಗಲಿಲ್ಲ. ತನ್ನ ಮೊಬೈಲ್ ? ಅದೂ ಸಿಗುತ್ತಿಲ್ಲ ! ಪಾಪಿಗಳು ಎಲ್ಲವನ್ನೂ ಹೊತ್ತೊಯ್ದಿದ್ದರು. ಮಾಡುವುದೇನು. ? ಸತ್ತು ಬಿಡೋಣ ಅಂದುಕೊಂಡಳು, ಸಾಯಲೂ ಅಲ್ಲಿ ಅವಕಾಶವಿಲ್ಲ. ರಕ್ಷಿತಾ ಅಲ್ಲೇ ಇದ್ದ ಗಿಡ ಗಂಟೆಗಳ ತಪ್ಪಲನ್ನು ಕಿತ್ತುಕೊಂಡಳು. ಅವೇ ಅವಳ ಮೈ ಮುಚ್ಚಲು ಆಧಾರ. ಅಳುತ್ತಾ ಅಳುತ್ತಾ ತಪ್ಪಲಿನಿಂದ ದೇಹ ಮುಚ್ಚಿಕೊಂಡೇ ರೋಡಿಗೆ ಬಂದಳು. ಪುಣ್ಯಾತ್ಮ ಒಬ್ಬ ಆಟೋ ಡ್ರೈವರ್ ಇವಳ ಪಾಡು ನೋಡಿ ಆಟೋ ನಿಲ್ಲಿಸಿದ. ತನ್ನ ಖಾಕೀ ಜಾಕೆಟ್ ನ್ನು ಇವಳ ಮೈಮೇಲೆ ಹೊದಿಸಿದ. ಮನೆಯವರೆಗೂ ತಂದು ಬಿಟ್ಟ. ರಕ್ಷಿತಾ ಅಳುತ್ತಿದ್ದಳು. ಅಳುತ್ತಿದ್ದಳು ಮಾತ್ರ. ಆಗ ಅಪರಾತ್ರಿ ಹೊತ್ತು. ಜಗತ್ತೆಲ್ಲ ಮಲಗಿದೆ. ರಕ್ಷಿತ ಮಾತ್ರ ಹೊಟ್ಟೆ ತುಂಬ ಅತ್ತಳು. ಅತ್ತಳು ಅತ್ತಳು…… ಇವಳ ಬೆತ್ತಲು ಬಯಲಾಗಲಿಲ್ಲ, ಎಂದಿನಂತೆ ಬೆಳಗಾಯಿತು. ಅಂದೇ ನಿರ್ಧರಿಸಿದಳು ಇನ್ನು ಟೋಲ್ ಗೇಟ್ ನ ಸಹವಾಸ ಸಾಕು ಅಂತ. ಅಂದಿನಿಂದ ಆ ಕಡೆ ಮುಖ ಮಾಡಿಯೂ ಮಲಗಲಿಲ್ಲವಳು. ಆ ಟೋಲ್ ಗೇಟ್ ನ ಸಹವರ್ತಿಗಳಿಗೋ ಒಳಗೊಳಗೇ ಖುಷಿ. ತಮ್ಮ ವ್ಯಾಪಾರವಿನ್ನು ಅಬಾಧಿತ ಎಂಬ ಸೆಕ್ಯೂರ್ಡ್ ಫೀಲಿಂಗ್. ಸೌಜನ್ಯಕ್ಕೂ ಇವಳನ್ನು ಮಾತನಾಡಿಸಲು ಬರಲಿಲ್ಲವರು ಯಾರೂ.
ಎರಡು ದಿನ…….. ಮೂರು ದಿನ…….. ಒಂದು ವಾರವಾಯ್ತು ಆ ಕರಾಳ ರಾತ್ರಿ ಸರಿದು. ರಕ್ಷಿತಾ ಮನೆ ಬಿಟ್ಟು ಕದಲಲೇ ಇಲ್ಲ. ಎಷ್ಡು ದಿನ ಹೀಗೇ ಮನೇಲಿರೋದು. ಮುಂದೆ ?……. ಟೋಲ್ ಗೇಟ್ ಸೇರಿದ ಏಳೆಂಟು ತಿಂಗಳಲ್ಲಿ ಲಕ್ಷ ಲಕ್ಷ ಕಮಾಯಿಸಿದ್ದೇನೋ ನಿಜ. ಕಾಮುಕ ಜಗತ್ತು. ಅವಳು ಮಂಗಳಮುಖಿ, ಆದರೂ ಪ್ರತೀ ದಿನ ನಾಲ್ಕೈದು ಸಾವಿರ ರೂಪಾಯಿಗಳ ದುಡಿಮೆಗೆ ಅವಕಾಶ ನೀಡಿತ್ತು. ಅವಳ ಆದಾಯ, ಬ್ಯಾಂಕ್ ಬ್ಯಾಲೆನ್ಸ್ ಗೆ ಕೊರತೆಯಿರಲಿಲ್ಲ. ದುಡ್ಡಿನ ಹಿಂದೆ ಬಿದ್ದವಳಿಗೆ ನೆಮ್ಮದಿಯನ್ನು ಹುಡುಕಬೇಕು ಅಂತನೂ ಅನಿಸಿರಲಿಲ್ಲ. ಆದರೆ ಆ ಕರಾಳ ರಾತ್ರಿ, ಈ ಕ್ರೂರ ಕಾಮುಕ ಜಗತ್ತು ಇವಳ ಕಣ್ಣು ತೆರೆಸಿತ್ತು. ಇದೆಂಥಾ ಜೀವನವಪ್ಪಾ ಅನ್ನಿಸಿತವಳಿಗೆ. ತನಗಿರುವ ಜಾಣ್ಮೆ, ಕ್ಯಾಲಿಬರ್ ಗೆ ಏನೆಲ್ಲಾ ಸಾಧಿಸಬಹುದಿತ್ತಲ್ಲ ಎಂದು ತನ್ನನ್ನು ತಾನೇ ಪ್ರಶ್ನಿಸಿಕೊಂಡಳು. ಗಟ್ಟಿಗಿತ್ತಿ ಅವಳು, Past is past ಮುಂದಾದರೂ ಚೆಂದದ ಬದುಕು ಬದುಕಬಹುದಲ್ಲವೇ? ಎಂದು ತೀರ್ನಾನಿಸಿದಳು. ಅವಳ ಈ ಮನ ಮಂಥನ ಕ್ಕೆ ಥಟ್ಟನೆ ಹೊಳೆದದ್ದು – “ಬೆಳಕು”………. ಬೆಳಕು ಸಮಾಜ ಸೇವಾ ಸಂಸ್ಥೆ. ಆ ಸಂಸ್ಥೆಯಲ್ಲಿ ಕಸ ಗುಡಿಸುವ ಕೆಲಸವಾದರೂ ಸೈ. ಸೇರಿಕೊಳ್ಳುವ, ನೆಮ್ಮದಿಯ ಬದುಕು ಬಾಳುವ ಎಂದು ನಿರ್ಧರಿಸಿದಳು. ಮುಂದೆ ಮರುಭೂಮಿಯಲ್ಲಿನ ಒಯಾಸಿಸ್ ನಂತೆ ನೊಂದವಳ ಬದುಕನ್ನು ಬಂಗಾರವಾಗಿಸುತ್ತೆ ಆ ಸಂಸ್ಥೆ ಎಂದು ಯಾರೂ ಎಣಿಸಿರಲಿಲ್ಲ. ಬಟ್ ನಡೆದದ್ದು ಅದೇ. ಆರಂಭದಲ್ಲಿ ರಿಶಪ್ಶನಿಸ್ಟ್ ಥರಾ ಕೆಲಸ. ತಿಂಗಳಿಗೆ ಕೇವಲ ಒಂದು ಸಾವಿರ ರೂಪಾಯಿ ಸಂಬಳ ! ಗಂಟೆಗೆ ಸಾವಿರ ರೂಪಾಯಿ ದುಡಿಯುತ್ತಿದ್ದವಳಿಗೆ ಒಂದು ಸಾವಿರ ರೂಪಾಯಿ ಎಣಿಸಲು ಒಂದು ತಿಂಗಳು ಕಾಯಬೇಕು. ಆದರೆ ತಿಂಗಳ ಕೊನೆಗೆ ರಕ್ಷಿತಾಳ ಕೈಗೆ ಒಂದು ಸಾವಿರ ರೂಪಾಯಿ ಜೊತೆಗೆ ಬೊಗಸೆ ತುಂಬಾ ನೆಮ್ಮದಿ.
ಮೊದಲೇ ಜಾಣೆಯಾಗಿದ್ದ, ಚೆಂದದ ಮಾತುಗಾರ್ತಿಯಾಗಿದ್ದ ರಕ್ಷಿತಾಳನ್ನು “ಬೆಳಕು” ಸಂಸ್ಥೆಯ ಸಂಚಾಲಕರು ಬಲು ಬೇಗ ಗುರುತಿಸಿದರು. ಒಂದು ಸುದಿನ ಆ ಸಂಸ್ಥೆಯಿಂದ ಆಯೋಜಿಸಲ್ಪಟ್ಟ ಕಾರ್ಯಕ್ರಮದಲ್ಲಿ ಇವಳೇ ಮುಖ್ಯ ಭಾಷಣಕಾರ್ತಿ. “ಭಾರತದ ಸಂವಿಧಾನದಲ್ಲಿ ಮಹಿಳೆಯರ ಪಾತ್ರ” ಎಂಬ ವಿಷಯದ ಕುರಿತು ಅಕ್ಷತಾಳ ಮಾತು. ಅದ್ಭುತವಾಗಿತ್ತು. ಜೈ ಭೀಮ್ ಎಂದು ಮಾತು ಆರಂಭಿಸಿದವಳ ಅರ್ಧ ಗಂಟೆಗೂ ಹೆಚ್ಚು ಅಸ್ಖಲಿತ ಮಾತು ನೆರೆದಿದ್ದ ಪ್ರೇಕ್ಷಕರನ್ನು ದಿಗ್ಮೂಢರನ್ನಾಗಿಸಿತ್ತು. ಜೈ ಭೀಮ್ ಎಂದೇ ಅವಳು ಮಾತು ಮುಗಿಸಿದ ನಂತರದ ಐದು ನಿಮಿಷಗಳು ಪ್ರೇಕ್ಷಕರ ಕರತಾಡನವೇ ! ಮುಂದಿನದು ಊಹಿಸಲಸಾಧ್ಯ ಬೆಳವಣಿಗೆ. ಆ ಸಂಸ್ಥೆಯ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ, ಬಹು ಬೇಡಿಕೆಯ ವ್ಯಕ್ತಿಯಾದಳು ರಕ್ಷಿತಾ. ಬದುಕು ಬದಲಾಯಿಸುವ ಮೆಂಟರ್ ಆಗಿ, ಅದ್ಭುತ ಮೋಟಿವೇಶನಲ್ ಸ್ಪೀಕರ್ ಆಗಿ, ಸಮಾಜದಲ್ಲಿ ತನ್ನದೇ ಛಾಪು ಮೂಡಿಸಿದಳು. ಇವಳ ವಿಚಾರ ಧಾರೆಗಳೆಲ್ಲವೂ ಸಮಾಜದ ಓರೆಕೋರೆಗಳು, ಅಂಬೇಡ್ಕರ ಸಂವಿಧಾನ ಕೊಟ್ಟ ನಂತರವೂ ಬದಲಾಗದ ಮನಸ್ಥಿತಿ ಗಳ ವಿರುದ್ಧ ಇರುತ್ತಿದ್ದವು. ಅಂಬೇಡ್ಕರ್ ರನ್ನು ಅರೆದು ಕುಡಿದಿದ್ದ ಅವಳ ರಕ್ತದ ಕಣ ಕಣದಲ್ಲೂ ಅಂಬೇಡ್ಕರ್ ನೆಲೆಗೊಂಡಿದ್ದರು. ಅವಳ ಭೀಮ ಚಿಂತನೆಗಳು, ಅವಳು ಅದನ್ನು ಪ್ರಸ್ತುತ ಪಡಿಸುತ್ತಿದ್ದ ರೀತಿ, ಅಮೋಘವಾಗಿರುತ್ತಿತ್ತು. ಅವಳದೊಂದು ಅಭಿಮಾನಿ ಬಳಗವೇ ಹುಟ್ಡಿಕೊಂಡಿತ್ತು. ಸಂಸ್ಥೆಯ ಆಶಯದಂತೆ ಯಾವ ರಾಜಕೀಯ ವಾಸನೆಯೂ ತಾಗದಂತೆ ಸಮಾಜ ಸೇವಾ ಕೈಂಕರ್ಯದಲ್ಲಿ ತೊಡಗಿದ ರಕ್ಷಿತಾಳ ಕುರಿತು “ಬೆಳಕು” ಸಂಸ್ಥೆಯ ಅಧ್ಯಕ್ಷರಿಗೆ ವಿಶೇಷ ಪ್ರೀತಿ. ಅವರು ಇವಳನ್ನು “ಭಿಮಪುತ್ರಿ” ಎಂದೇ ಕರೆಯುತ್ತಿದ್ದರು. ಎಂಬತ್ತು ದಾಟಿದರೂ ಸಮಾಜಮುಖಿ ಚಿಂತನೆ ಮಾಡುತ್ತಿದ್ದ ಆ ಹಿರಿಯ ಅಧ್ಯಕ್ಷರೆಂದರೆ ರಕ್ಷಿತಾಳಿಗೆ ವಿಶೇಷ ಗೌರವ. ಕಳೆದುಕೊಂಡಿದ್ದ ಅಪ್ಪನನ್ನು ಅವರಲ್ಲಿ ಕಂಡಿದ್ದಳವಳು.
ರಕ್ಷಿತಾಳ ಜನಪ್ರಿಯತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಾ ಬಂತು. ಜೊತೆಗೆ ಅಭಿಮಾನಿಗಳ ಸಂಖ್ಯೆಯೂ ಕೂಡ. ಇದೇ ಅವಳಿಗೆ ಮುಳುವಾಯಿತಾ ? ನೀವೇ ನೋಡಿ. ಒಂದು ದಿನ ಅಭಿಮಾನಿಯೊಬ್ಬ, “ಅಕ್ಕ ನೀನೇಕೆ ರಾಜಕೀಯ ಕ್ಕೆ ಬರಬಾರದು ? “ ಎನ್ನುತ್ತಾ ಅವಳಲ್ಲಿ ಹೊಸ ಆಸೆಯನ್ನು ಚಿಗುರೊಡಿಸಿದ. ಮೊದಮೊದಲು ಬೇಡ ಅನಿಸಿತ್ತವಳಿಗೆ. ಆದರೆ ಅಭಿಮಾನಿಗಳ ಒತ್ತಾಸೆ, ನಾವೇ ದುಡ್ಡನ್ನು ತಲಾ ಇಷ್ಟಿಷ್ಟು ಅಂತ ಹಾಕಿ, ಜನರಿಂದ ಒಂದಷ್ಟು ಕಲೆಕ್ಟ್ ಮಾಡಿ ನಿಮ್ಮನ್ನು ಗೆಲ್ಲಿಸ್ತೇವೆ ಅನ್ನೋ ಭರವಸೆ ಅವಳ ಮನಸಲ್ಲಿ ಹೌದಲ್ಲ ? ಯಾಕಾಗಬಾರದು ? ಅನಿಸಿತು. ಇವಳ ಅಂಬೇಡ್ಕರ ಸಿದ್ಧಾಂತವನ್ನು ಯಾವ ರಾಜಕೀಯ ಪಕ್ಷಗಳೂ ಪಾಲಿಸುತ್ತಿಲ್ಲ. ಕಾರಣ ಯಾವ ಪಕ್ಷವೂ ಬೇಡ. ಸ್ವತಂತ್ರ ಅಭ್ಯರ್ಥಿಯಾಗಿಯೇ ರಾಜಕೀಯ ಜೀವನ ಪ್ರಾರಂಭಿಸುವುದು ಎಂದು ತೀರ್ಮಾನಿಸಿದಳು. ಪರಿಣಾಮ ರಾಜಕೀಯದ ಅಆಇಈ ಗೊತ್ತಿಲ್ಲದ ರಕ್ಷಿತಾ ನಗರಸಭಾ ಸದಸ್ಯೆಯಾಗುವ ಆಸೆಯಿಂದ ಪಕ್ಷೇತ್ತರ ಅಭ್ಯರ್ಥಿಯಾಗಿ ಕಣದಲ್ಲಿ. ಆರಂಭದಲ್ಲಿ ಒಂದು ಪೈಸೇನೂ ಖರ್ಚು ನೀ ಮಾಡಬ್ಯಾಡಾ ಅಕ್ಕಾ ಅಂದಿದ್ದ ಕಾರ್ಯಕರ್ತರು, ಈಗ, “ಅಕ್ಕಾ ಛಾ ಕುಡಿಸಲಕ್ಕಾದ್ತೂ ಬೇಕಲ್ಲಕ್ಕಾ” ……
“ಅಕ್ಕಾ ಗಾಡಿಗೆ ಪೆಟ್ರೋಲ್ ಬ್ಯಾಡನು ಅಕ್ಕಾ” ಎನ್ನತ್ತಾ ರಕ್ಷಿತಾಳಿಂದ ದುಡ್ಡು ಪೀಕಲು ಶುರು ಮಾಡಿದರು. ವಿರೋಧಿ ಬಣದವರೋ ದುಡ್ಡನ್ನು ನೀರಿನಂತೆ ಖರ್ಚು ಮಾಡುತ್ತಿದ್ದರು. ಅಷ್ಟು ಹಣ ಖರ್ಚು ಮಾಡಲು ಇವಳ ಹತ್ರ ದುಡ್ಡಾದರೂ ಎಲ್ಲಿದೇ ? ಟೋಲ್ ಗೇಟ್ ನ ಕರಾಳ ರಾತ್ರಿಗಳಲ್ಲಿ ಗಳಿಸಿದ ಒಂದಷ್ಡು ಬಿಟ್ಟರೆ ಬೇರೆ ಏನಿದೆ ಇವಳ ಹತ್ರ ? ಸಮಾನತೆಯ ಸೂತ್ರ ಸಾರುವ ಅಂಬೇಡ್ಕರ್ ತತ್ವ ಮಾತ್ರ. ಅದೋ ಆ ರಾಜಕೀಯ ದೊಂಬರಾಟದಲ್ಲಿ ಕೋಣನ ಮುಂದೆ ಬಾರಿಸುವ ಕಿನ್ನರಿಯಂತೆ. ರಾಜಕೀಯದ, ಪ್ರಚಾರದ ಕಾವು ರಂಗೇರುತ್ತಲೇ ಇತ್ತು. ಇವಳ ಟೋಲ್ ಗೇಟ್ ಹಣ ಖಾಲಿಯಾಗುತ್ತಲೇ ಇತ್ತು. ಇವಳ ಕಾರ್ಯಕರ್ತರು ಹಗಲೆಲ್ಲ ಇವಳ ಹಿಂದೆ ಹಿಂದೆ. ರಾತ್ರಿ ವಿರೋಧಿ ಬಣಗಳ ಪಾರ್ಟಿಗಳ ನಡುವೆ. ಫಲಿತಾಂಶ ದ ದಿನ ಮುಗ್ಗರಿಸಿತ್ತು ಮುಗ್ಧೆ. ಬ್ಯಾಂಕ್ ಬ್ಯಾಲೆನ್ಸ್ ನ್ನೆಲ್ಲ ಖಾಲಿ ಮಾಡಿಕೊಂಡು ಕಣ್ಣೀರಾಗಿತ್ತು ನೀರೆ. ಮೂರು ದಿನ ಮಲಗಿದವಳು ಮೇಲೇಳಲಿಲ್ಲ. ಕೈಯಲ್ಲಿ ಉಳಿದದ್ದು ಕೆಲವೇ ಕೆಲವು ಸಾವಿರ ರೂಪಾಯಿ ಗಳು ಮಾತ್ರ. ಮುಂದಿನ ಬದುಕು ? ಬ್ಯಾಂಕ ಬ್ಯಾಲೆನ್ಸ್ ಅಂತೂ ಖಾಲಿ. ಕೈಲಿರುವ ಹಣ ಹೆಚ್ಚೆಂದರೆ ಒಂದು ವಾರ ಹೊಟ್ಟೆ ತುಂಬಿಸಬಹುದು. ಮುಂದೆ ? ಆ ಟೋಲ್ ಗೇಟ್ ನರಕದಿಂದ ಗೌರವಯುತ ಬದುಕು ಕೊಟ್ಟದ್ದು “ಬೆಳಕು”. ಆ ಸಂಸ್ಥೆಯ ಅಧ್ಯಕ್ಷರಿಗೆ ರಕ್ಷಿತಾ ಅಂದರೆ ಅಚ್ಚು ಮೆಚ್ಚು. ಆದರೆ ಅವರೆಂದೂ ತಮ್ಮ ತತ್ವ ಸಿದ್ಧಾಂತದೊಡನೆ ರಾಜಿಯಾದವರಲ್ಲ. ಇವಳನ್ನು ಸಂಸ್ಥೆಗೆ ಸೇರಿಸಿಕೊಳ್ಳುವಾಗ ಅವರು ಹಾಕಿದ್ದ ಮೊದಲ ಕಂಡೀಷನ್ನೇ ಅದು.
“ನಮ್ಮದು ರಾಜಕೀಯೇತರ ಸೇವಾ ಸಂಸ್ಥೆ. ಇಲ್ಲಿ ರಾಜಕೀಯದ ವಾಸನೆ ಯಾವ ದಿಕ್ಕಿನಿಂದಲೂ ಬರಬಾರದು” ಎಂದು. ಯಾವಾಗ ರಕ್ಷಿತಾ ರಾಜಕೀಯಕ್ಕೆ ಎಂಟ್ರಿ ಕೊಟ್ಟಳೋ ಆಗ ಆ ಅಧ್ಯಕ್ಷ ಗೋವಿಂದರಾಜು ತುಸು ಬೇಸರದಿಂದ ಆದರೆ ಗೌರವಯುತವಾಗೇ ಇವಳನ್ನು ಸಂಸ್ಥೆಯಿಂದ ಬಿಡುಗಡೆ ಗೊಳಿಸಿದ್ದರು. ಹೀಗಾಗಿ “ಬೆಳಕು” ವಿನ ಬಾಗಿಲು ಇವಳ ಪಾಲಿಗೆ ಮುಚ್ಚಿದಂತೆಯೇ. ಚಿಂತಿಸುತ್ತಲೇ ಇದ್ದಳು. ಕಾಲ ಸರಿಯುತ್ತಲೇ ಇತ್ತು. ಮರುದಿನವೇ ಆಘಾತಕಾರಿ ಸುದ್ದಿ ! “ಬೆಳಕು” ಸಂಸ್ಥೆಯ ಅಧ್ಯಕ್ಷ ಗೋವಿಂದರಾಜು ಇನ್ನಿಲ್ಲ ! ಎರಡನೆಯ ಬಾರಿಗೆ ತಂದೆಯನ್ನು ಕಳೆದುಕೊಂಡ ಸಂಕಟ. ಆಳವಾದ ನೋವಿನಲ್ಲೇ ತಂದೆ ಸಮಾನರ ಅಂತಿಮ ದರ್ಶನ, ಅಂತಿಮ ಯಾತ್ರೆ. ಮತ್ತೆ ಕತ್ತಲು. ಆ ರಾತ್ರಿ ಅವಳ ಹತ್ತಿರ ಉಳಿದದ್ದು ಕೊನೆಯ ನೂರು ರೂಪಾಯಿಯ ನೋಟು. ಈಗವಳ ಮುಂದಿರುವ ಆಯ್ಕೆ ಎರಡೇ……. ಸಾವು ಇಲ್ಲವೇ ಆ ನರಕ ಸದೃಶ ಟೋಲ್ ಗೇಟ್. ಜೀವನ ಪ್ರೀತಿಸುವವಳಿಗೆ ಸಾಯಲು ಆಗದು. ಇನ್ನು ಆ ನರಕ. ಹಿಂಸೆ, ಕುಡುಕರ, ಗಾಂಜಾ ಸೇವಿಸಿ ರಕ್ಕಸರಂತೆ ಮುಗಿಬೀಳುತ್ತಿದ್ದವರ ಬಾಯಿಯಿಂದ ಬರುತ್ತಿರುವ ಘಾಟು ವಾಸನೆ !!! ಅಬ್ಬಬ್ಬಾ …… ನಿದ್ದೆ ಹೇಗೆ ತಾನೇ ಸುಳಿದೀತು ? ಮುರುದಿನ ಎದ್ದವಳೇ ಇಪ್ಪತ್ತು ರೂಪಾಯಿ ಹಾಲು ಹತ್ತು ರೂಪಾಯಿ ಬ್ರೆಡ್ಡು ತಂದಳು. ಉಳಿದ ಎಪ್ಪತ್ತು ರೂಪಾಯಿಯನ್ನು ಎತ್ತಿಟ್ಡುಕೊಳ್ಳಲೇ ಬೇಕು. ಆಟೋ ಚಾರ್ಜ್ ಗೆ. ದೂರದ ಟೋಲ್ ಗೇಟ್ ಗೆ ! ಹೋಗಲಿಕ್ಜೆ.
ಮರುದಿನ ತನಗೆ ಸಿಂಗಾರ ಸಂಭ್ರಮ. ಮನೆಯಲ್ಲಿ ಅಳಿದುಳಿದ ಪೌಡರ್ರು, ಲಿಪ್ ಸ್ಟಿಕ್ಕೂ…. ಕನ್ನಡಿಯ ಮುಂದೆ ನಿಂತು ಅದೇ ವಯ್ಯಾರ ತಂದುಕೊಂಡಳು. ತಾನು ತ್ರಿಪುರ ಸುಂದರಿಯೇ. ಈ ಭಾವ ಅವಳ ಮುಖದ ಮೇಲೆ ಕೃತಕ ನಗುವನ್ನಾದರೂ ತರಿಸಿತು. ಬ್ರೆಡ್ಡು ಹಾಲು ಸೇವಿಸಿದವಳೇ ಸರ್ವಾಲಂಕೃತಳಾಗಿ ಆಟೋ ಸ್ಟ್ಯಾಂಡಿಗೆ ನಡೆದಳು. ಆ ಆಟೋ ಡ್ರೈವರ್ ಇವಳು ಕೇಳುವ ಮೊದಲೇ ಟೋಲ್ ಗೇಟ್ ಗಾ ಅಕ್ಕ ಅಂದ. ತಗೆದು ಬಾರಿಸಬೇಕೆನಿಸಿತು. ಹಾಗೆ ಮಾಡಲಿಲ್ಲ. ಸುಮ್ಮನೇ ಆಟೋ ಹತ್ತಿದಳು ಮಹಾ ಮೌನಿಯಾಗಿ. ಆಟೋ ನಾಲ್ಕು ಹೆಜ್ಜೆ ಹೋಗಿತ್ತೇನೋ, ಇವಳ ಮೊಬೈಲ್ ಗೆ ವಾಟ್ಸಪ್ ಮೆಸೇಜ್ ಬಂದ ರಿಂಗಣ. ನೋಡಿದಳು. ಪೂರ್ಣ ಓದಿದಳು. ಕೂಡಲೇ ಆಟೋ ಡ್ರೈವರ್ ನ ಭುಜ ಮುಟ್ಟಿ “ಅಣ್ಣಾ ಗಾಡಿ ರಿವರ್ಸ್ ತಗೋ” ಅಂದ್ಲು
ಅವ , “ಎಲ್ಲಿಗಕ್ಕಾ…..”
” ನಾ ಹೇಳ್ತೇನೆ ನಡಿ. ರಿವರ್ಸ್ ತಗೋ”.
ಆ ಮೆಸೇಜ್ “ಬೆಳಕು” ನಿಂದ ಬಂದಿತ್ತು. ಅದರ ಕಾರ್ಯದರ್ಶಿ ಕಳಿಸಿದುದಾಗಿತ್ತು. ಅದು ಹೀಗಿತ್ತು,
“ರಕ್ಷಿತಾ ಅವರೇ, ನಮ್ಮ ಬೆಳಕು ಸಂಸ್ಥೆಯ ಅಧ್ಯಕ್ಷರಾದ ಗೋವಿಂದರಾಜು ಸರ್ ತೀರಿಹೋದುದು ತಮಗೂ ಗೊತ್ತಿರುವ ವಿಷಯವೇ. ಮೊನ್ನೆ ನಮ್ಮ ಆಫೀಸಿನ ಫೈಲ್ ತಗೆದು ನೋಡುತ್ತಿದ್ದಾಗ ಅವರೇ ಬರೆದ ಪತ್ರ ನಮಗೆ ಸಿಕ್ಕಿತು. ಅದರಲ್ಲವರು ಈ ಸಂಸ್ಥೆಯನ್ನು ನಿಮಗೆ ಒಪ್ಪಿಸಲು ಸೂಚಿಸಿದ್ದಾರೆ. ಆದರೆ ಒಂದು ಕಂಡೀಶನ್ನನ್ನೂ ಹಾಕಿದ್ದಾರೆ. ಅದೆಂದರೆ ನೀವು ರಾಜಕೀಯದಿಂದ ದೂರವಿರಬೇಕು. ನಿಮಗಿಷ್ಟವಿದ್ದರೆ,ಮತ್ತು ನಮ್ಮ ಸರು ಹಾಕಿದ ಕಂಡೀಷನ್ ಒಪ್ಪುವಿರಾದರೆ ನೀವು ಯಾವಾಗ ಬೇಕಾದರೂ ಸಂಸ್ಥೆಗೆ ಬರಬಹುದು. ಈ ಸಂಸ್ಥೆ ನಿಮ್ಮದು” ಎಂದಿತ್ತು.
ರಕ್ಷಿತಾಳ ಪಾಲಿಗೆ “ಬೆಳಕು” ಎರಡನೇ ಬಾರಿಗೆ ಬೆಳಕಾಗಿ ಪುನರ್ ಜನ್ಮ ನೀಡಿತ್ತು. “ಬೆಳಕು” ಸಂಸ್ಥೆಯ ಮುಂದೆ ಆಟೋ ನಿಂತಾಗ ಇವಳ ಮುಖದಲ್ಲೊಂದು ಬೆಳಕು. ತನ್ನಲ್ಲಿದ್ದ ಕೊನೇ ಎಪ್ಪತ್ತು ರೂಪಾಯಿ ಯನ್ನು ಆಟೋದವನ ಕೈಗಿತ್ತಳು. ಅದಕ್ಕವನು, “ಅಕ್ಕಾ ನಲವತ್ತು ಸಾಕು ತಗಳಿ ಮೂವತ್ತು” ಎನ್ನತ್ತಾ ಮೂವತ್ತು ರೂಪಾಯಿಗಳನ್ನು ಮರಳಿಸಲು ಬಂದ. “ಬೇಡಣ್ಣ ನೀನೇ ಇಟ್ಕೋ ನಿಮ್ಮ ಋಣ ಭಾಳ ಇದೆ” ಅಂದಳು. ಅವನಿಗರ್ಥವಾಗಲಿಲ್ಲ. ರಕ್ಚಿತಾಳದೀಗ ಖಾಲಿ ಕೈ ಅಲ್ಲಲ್ಲ ಸ್ವಚ್ಛ ಕೈ, ಸ್ವಚ್ಛ ಮನಸು. ತಲೆ ತುಂಬಾ ಬುದ್ಧ-ಬಸವ-ಅಂಬೇಡ್ಕರ್ ರ ಉದಾತ್ತ ಚಿಂತನೆಗಳು. ದಿಟ್ಟ ಹೆಜ್ಜೆ ಹಾಕಿದಳು ನಗುನಗುತ್ತಾ ಬೆಳಕಿನೆಡೆಗೆ.
✍️ ಆದಪ್ಪ ಹೆಂಬಾ ಮಸ್ಕಿ
Wonderful story Hemba!!! Keep writing