ಮೇಲುಕೋಟೆ ದೇವಸ್ಥಾನ ಹಾಗೂ ಕಲ್ಯಾಣಿ

ಬೆಂಗಳೂರಿನಿಂದ ಸುಮಾರು 120 ಕೀ. ಮೀ ದೂರದಲ್ಲಿದೆ. ಮಂಡ್ಯ ಜಿಲ್ಲೆಯ ಪಾoಡವಾಪುರ ತಾಲೂಕಿಗೆ ಸೇರಿದ ಮೇಲುಕೋಟೆ ಪುಣ್ಯ ಕ್ಷೇತ್ರ. ಸಮುದ್ರ ಮಟ್ಟದಿಂದ 3.600 ಅಡಿ ಎತ್ತರದಲ್ಲಿರುವದರಿಂದ ಗಿರಿಧಾಮ ಕೂಡ ಆಗಿದೆ. ಮೇಲುಕೋಟೆಯು 101ದೇಗುಲ 101ಕಲ್ಯಾಣಿಗಳಿರುವ ಸುಂದರ ಬೀಡು. ಇಲ್ಲಿಯ ಆರಾಧ್ಯದೈವ ಚೆಲುವ ನಾರಾಯಣ ಸ್ವಾಮಿ.
ಇತಿಹಾಸದ ಪ್ರಕಾರ ಶ್ರೀ ರಾಮಾನುಜಾಚಾರ್ಯರು ಸುಮಾರು 14 ವರ್ಷಗಳ ಕಾಲ ಇಲ್ಲಿದ್ದರು. ಹಾಗಾಗಿ ಇದು ವೈಷ್ಣವರ ಪ್ರಮುಖ ಕೇಂದ್ರ.
ಭವ್ಯ ಇತಿಹಾಸಿಕ ಕೇಂದ್ರ. ಕೃತ ಯುಗದಲ್ಲಿ ದತ್ತಾಚಾರ್ಯರು ವೇದ ಉಪದೇಶಿಸಿದ್ದರಿಂದ ಈ ಪ್ರದೇಶಕ್ಕೆ ವೇದಾದ್ರಿ ಎಂದೂ ಕರೆಯಲಾಗುತ್ತದೆ. ಬ್ರಹ್ಮದೇವರು ನಿತ್ಯ ಪೂಜೆಗಾಗಿ ನಾರಾಯಣ ವಿಗ್ರಹ ಬೇಕೆಂದಾಗ… ವಿಷ್ಣುವು ನಾರಾಯಣನ ಸುಂದರ ಮೂರ್ತಿ ನೀಡುತ್ತಾರೆ. ಅದೇ ಮೂರ್ತಿಯನ್ನು ಬ್ರಹ್ಮದೇವರು ತಮ್ಮ್ ಮಾನಸ ಪುತ್ರರಾದ ಸನತ ಕುಮಾರರಿಗೆ ನೀಡುತ್ತಾರೆ. ಮುಂದೆ ಅವರು ಮೇಲುಕೋಟೆಯಲ್ಲಿ ಪ್ರತಿಷ್ಠಾಪಿ ಸುತ್ತಾರೆ. ಇದನ್ನು ಯದುಶೈಲ, ದಕ್ಷಿಣದ ಬದರಿ ಎಂದೂ ಪ್ರಸಿದ್ಧವಾಗಿದೆ.

 

ಮೇಲುಕೋಟೆಯ ನಾರಾಯಣ ಮೂರ್ತಿ ಅತಿ ಸುಂದರವಾಗಿದೆ ಹಾಗಾಗಿ ಚೆಲುವ ನಾರಾಯಣ ಸ್ವಾಮಿ ಎಂದೂ ಕರೆಯುತ್ತಾರೆ.ಕನ್ನಡ ನಾಡಿನಲ್ಲಿ ವಿಶಿಷ್ಟಾಧ್ವಯತ ಸಂಪ್ರದಾಯಕ್ಕೆ ಮೇಲುಕೋಟೆ ಕೇಂದ್ರ ಸ್ಥಾನವಾಯಿತು. ಹುತ್ತದಲ್ಲಿ ಹುದು ಗಿರುವ ಮೂರ್ತಿಯನ್ನು ಶ್ರೀ ರಾಮಾನುಜಾಚಾರ್ಯರು ತಮ್ಮ ಶಿಷ್ಯನಾದ ಹೊಯ್ಸಳ ರಾಜ ವಿಷ್ಣುವರ್ಧನನ ಸಹಾಯದಿಂದ ಪುನಃ ಪ್ರತಿಷ್ಠಾಪಿಸುತ್ತಾರೆ.ದೇವಾಲಯದ ಉತ್ಸವ ಮೂರ್ತಿಯನ್ನು ಶೆಲ್ವ ಪಿಳ್ಯ ರಾಯ ಎನ್ನುತ್ತಾರೆ.
. ಮೊಘಲರು ಆಕ್ರಮಣ ಮಾಡಿದಾಗ ಈ ಉತ್ಸವ ಮೂರ್ತಿಯನ್ನು ದೆಹಲಿಗೆ ತೆಗೆದು ಕೊಂಡು ಹೋಗುತ್ತಾರೆ. ನಂತರ ರಾಮಾನುಜಾಚಾರ್ಯರ ಕನಸನಲ್ಲಿ..ಈ ಉತ್ಸವ ಮೂರ್ತಿ ಸುಲ್ತಾನನ ಮಗಳ ಬಳಿ ಇರುವದು ತಿಳಿದು ಅವರೂ ದೆಹಲಿಗೆ ಹೋಗುತ್ತಾರೆ. ಅಂತಃ ಪುರ ಪ್ರವೇಶಿಸುತ್ತಿದ್ದಂತೆ ಉತ್ಸವ ಮೂರ್ತಿ ಹಾರಿ ಬಂದು ಅವರ ತೊಡೆ ಅಲಂಕರಿಸಿತ್ತಂತೆ. ನಂತರ ಆಚಾರ್ಯರ ಜೊತೆ ಸುಲ್ತಾನನ ಮಗಳು ಮೇಲುಕೋಟೆಗೆ ಬಂದು ಮೂರ್ತಿಯಲ್ಲಿ ಐಕ್ಯಳಾದಳಂತೆ. ಈಗಲೂ ಆ ಮೂರ್ತಿಯ ಪಾದದಡಿ ಸುಲ್ತಾನನ ಮಗಳ ವಿಗ್ರಹವಿದೆಯಂತೆ. ಹಾಗಾಗಿ ಇಲ್ಲಿ ದೆಹಲಿ ಉತ್ಸವ ನಡೆಯುತ್ತದೆ. ಮೈಸೂರ್ ಅರಸರ ಆರಾಧ್ಯದೈವ. ಅರಸರೇ ಕಲಾತ್ಮಕ ಮಂಟಪ ಕಟ್ಟಿಸಿದ್ದಾರೆ. ವೈರಮುಡಿ ಉತ್ಸವ ಮಾರ್ಚ್ ದಂದು ನಡೆಯುತ್ತದೆ. ವೈರಮುಡಿ ಎಂದರೆ ವಜ್ರದ ಕಿರೀಟ. ಈ ವೈರಮುಡಿ ಕಿರೀಟವನ್ನು ಸೂರ್ಯನ ಬಿಸಿಲಿನಲ್ಲಿ ನೋಡಬಾರದು ಎಂಬುದು ಧಾರ್ಮಿಕ ಕಟ್ಟಳೆ. ಹಾಗಾಗಿ ಈ ಉತ್ಸವ ರಾತ್ರಿ ಪ್ರಾರಂಭವಾಗಿ ಬೆಳಕು ಹರಿಯುವ ಮುನ್ನ ಸಂಪನ್ನ ಗೊಳ್ಳುತ್ತದೆ. ಗರುಡವಾಹನದಲ್ಲಿ ವೈರಮುಡಿಯ ನಾರಾಯಣಸ್ವಾಮಿಯ ಮೆರವಣಿಗೆ ನಡೆಯುತ್ತದೆ.ಇಲ್ಲಿ ನೂರಕ್ಕೂ ಹೆಚ್ಚು ಕಲ್ಯಾಣಿಗಳಿವೆ. ಕಲ್ಯಾಣಿ ತೀರದಲ್ಲಿರುವ ಬೆಟ್ಟದ ಮೇಲಿರುವ ಯೋಗಾ ನರಸಿಂಹ ಮತ್ತೊಂದು ಆಕರ್ಷಣೆ. ಪುರಾಣಗಳ ಪ್ರಕಾರ ಈ ಮೂರ್ತಿಯನ್ನು ಭಕ್ತ ಪ್ರಲ್ಹಾದ ಪ್ರತಿಷ್ಠಾಪಿಸಿದ್ದಾನೆ ಎನ್ನಲಾಗುತ್ತದೆ.ಮೇಲುಕೋಟೆ ಚೆಲುವ ನಾರಾಯಣ ಸ್ವಾಮಿಯ ಕೃಪಾಕಟಾಕ್ಷ ಎಲ್ಲರಿಗೂ ದೊರೆಯಲಿ ಎಂದು ಪ್ರಾರ್ಥಿಸುತ್ತೇನೆ.

✍️ಶ್ರೀಮತಿ. ವಿದ್ಯಾ ಹುಂಡೇಕರ.

Don`t copy text!