ಶರಣ ಸಾಹಿತ್ಯದ ಪರಿಚಾರಕಿ ಪ್ರೇಮಕ್ಕ ಅಂಗಡಿ ಬೈಲಹೊಂಗಲ

ನಾವು- ನಮ್ಮವರು

ಪ್ರೇಮಕ್ಕ ಅಂಗಡಿ ಬೈಲಹೊಂಗಲ

ಹತ್ತನೆಯ ತರಗತಿಯನ್ನು ಪಾಸಾಗದ ಸಹೋದರಿ ಕರ್ನಾಟಕದ ಉದ್ದಗಲಕ್ಕೂ ಹಳ್ಳಿ, ನಗರ, ಪಟ್ಟಣಗಳೆಂಬ ಭೇದ ಭಾವವಿಲ್ಲದೆ ಸಾವಿರಕ್ಕೂ ಮಿಗಿಲಾಗಿ ಶರಣ ಸಂದೇಶದ ಪ್ರವಚನಗಳನ್ನು ನೀಡುತ್ತಿದ್ದಾಳೆ ಎಂದರೆ ಅದೊಂದು ಅದ್ಭುತವೇ ಸರಿ.ನೀವು ನಂಬಲಿಕ್ಕಿಲ್ಲ ಆದರೆ ಇದು ವಾಸ್ತವ. ಈ ಸಾಧನೆಯನ್ನು ಮಾಡುತ್ತಿರುವವರೇ ಬೈಲಹೊಂಗಲದ ಸಹೋದರಿ ಪ್ರೇಮಕ್ಕ ಅಂಗಡಿ .
ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕಿನ ಬೈಲವಾಡ ಗ್ರಾಮದ ಕೃಷಿ ಕುಟುಂಬದಲ್ಲಿ ಹುಟ್ಟಿದ ಪ್ರೇಮಕ್ಕ ಬಾಲ್ಯದಲ್ಲಿ ಹಸು, ಕರು, ಎತ್ತು, ರಂಟೆ-ಕುಂಟೆ,ನೇಗಿಲು, ಉತ್ತು-ಬಿತ್ತು ಗಳನ್ನು ನೋಡುತ್ತಾ ಬೆಳೆದವಳು.ಬೈಲವಾಡದ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿ ಮಾಧ್ಯಮಿಕ ಶಿಕ್ಷಣಕ್ಕಾಗಿ ಬೈಲಹೊಂಗಲದ ಎಂ.ಕೆ.ಸಿ.ಆರ್ ಗರ್ಲ್ಸ್ ಹೈಸ್ಕೂಲ್ ನಲ್ಲಿ ಓದಿದ ಪ್ರೇಮಕ್ಕ ಎಸ್.ಎಸ್ ಎಲ್.ಸಿ ಪಾಸಾದಳೋ ಇಲ್ಲವೋ ಗೊತ್ತಿಲ್ಲ ? ಹತ್ತೊಂಬತ್ತ ನೂರಾ ಎಂಬತ್ತ ಮೂರರಲ್ಲಿ ಬಿ.ಡಿ.ಸಿ.ಸಿ ಬ್ಯಾಂಕಿನ ಉದ್ಯೋಗಿಯಾಗಿದ್ದ ಶ್ರೀ ಗಂಗಪ್ಪ ನಾಗಪ್ಪ ಅಂಗಡಿ ಅವರನ್ನು ವಿವಾಹವಾಗಿ ಬೈಲಹೊಂಗಲಕ್ಕೆ ಬಂದ ಪ್ರೇಮಕ್ಕ ಉತ್ತಮ ಗೃಹಿಣಿಯಾಗಿ ಮಹೇಶ, ಬಸವರಾಜ, ಮತ್ತು ಸ್ಮಿತಾ ಎಂಬ ಮೂವರು ಮಕ್ಕಳನ್ನು ಹೆತ್ತು ಉತ್ತಮ ಸಂಸ್ಕಾರವನ್ನು ನೀಡಿ ಬೆಳೆಸಿದ ಪರಿಣಾಮ ಮೂವರು ಇಂಜಿನಿಯರ್ ಪದವೀಧರರಾಗಿ ಬೆಂಗಳೂರಿನ ಪ್ರತಿಷ್ಠಿತ ಐಟಿ ಕಂಪನಿಯ ದೊಡ್ಡ ದೊಡ್ಡ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.ಇಷ್ಟೇ ಆಗಿದ್ದರೆ ಎಲ್ಲ ಹೆಣ್ಣುಮಕ್ಕಳಂತೆ ಇವರೂ ಒಬ್ಬರು ಎಂದು ಸುಮ್ಮನಾಗುತ್ತಿದ್ದೆ.ಆದರೆ ಮನೆ ಮಕ್ಕಳು ಗಂಡ ಎಲ್ಲರನ್ನೂ ಸರಿದೂಗಿಸಿಕೊಂಡು ಕರ್ನಾಟಕದಲ್ಲಿ ಬಹು ಬೇಡಿಕೆಯ ಶರಣ ಸಂದೇಶ ಪ್ರಚಾರಕಳಾಗಿ ಬೆಳೆದು ಬರಲು ಹೇಗೆ ಸಾಧ್ಯವಾಯಿತು ? ಎನ್ನುವುದೇ ಆಶ್ಚರ್ಯ !
ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಹುಟ್ಟೂರು ಬೈಲವಾಡದ ಶ್ರೀ ವರ್ತಿ ಸಿದ್ಧಬಸವೇಶ್ವರ ಮಠದಲ್ಲಿ ಶ್ರೀ ಮಠದ ಒಡೆಯರು ಹಾಗೂ ಶ್ರೀ ಮಹಾಂತ ದುರದುಂಡೇಶ್ವರ ಮಠ ಮುರಗೋಡದ ಪೂಜ್ಯರಾದ ಶ್ರೀ ನೀಲಕಂಠ ಸ್ವಾಮೀಜಿಯವರು ನಡೆಸಿದ ಬಸವಪುರಾಣವನ್ನು ಕೇಳಿ ಪ್ರೇರಿತಳಾಗಿ ಅಂದೆ ಶ್ರೀಗಳಿಂದ ದೀಕ್ಷೆ ಪಡೆದು ಬಸವ ಸಂದೇಶ ಪ್ರವಚನಕಾರಳಾಗಿ ನಡೆದು ಬಂದ ದಾರಿ ಬಹು ರೋಚಕ.


ಹನ್ನೆರಡನೆಯ ಶತಮಾನದಲ್ಲಿ ನಡೆದ ಕಲ್ಯಾಣ ಕ್ರಾಂತಿಯ ಎಲ್ಲ ಶರಣರ ಜೀವನ ಸಾಧನೆಗಳನ್ನು ಅಧ್ಯಯನ ಮಾಡಿ ಮನನ ಮಾಡಿಕೊಂಡು ಅವರ ಹಾದಿಯಲ್ಲಿಯೇ ನಡೆಯುತ್ತ ಬಂದವಳು.ಕಲ್ಯಾಣ ಕ್ರಾಂತಿಯ ವಿಚಾರಗಳು ಇಂದಿಗೂ ಪ್ರಸ್ತುತವೆಂದು ತಿಳಿದು ಆ ವಿಚಾರಗಳನ್ನೊಳಗೊಂಡ ವಚನಗಳನ್ನು ಜನಮನಕ್ಕೆ ಮುಟ್ಟಿಸಿ.ಶರಣ ಸಮ್ಮತವಾದ ಸಮಸಮಾಜದ ನಿರ್ಮಾಣದ ಕನಸನ್ನು ಕಟ್ಟಿಕೊಂಡು ನಾಡಿನುದ್ದಕ್ಕೂ ತಿರುಗುತ್ತಿದ್ದಾಳೆ. ಶ್ರಾವಣಮಾಸ ಪರ್ಯಂತ ಬೈಲಹೊಂಗಲದಲ್ಲಿ ಪತ್ರಿ ಬಸವೇಶ್ವರ ನಗರದಲ್ಲಿ ಮುಕ್ತಾಯಕ್ಕ, ಅಜಗಣ್ಣ ಬಳಗಗಳ ಸಂಘವನ್ನು ಕಟ್ಟಿಕೊಂಡು ಪ್ರತಿ ಸೋಮವಾರ ಸಾಮೂಹಿಕ ವಚನ ಪ್ರಾರ್ಥನೆ, ವಚನ ಚಿಂತನೆ, ಲಿಂಗ, ವಿಭೂತಿ, ರುದ್ರಾಕ್ಷಿ ಧಾರಣೆ ನಿರಂತರ ನಡೆಸಿಕೊಂಡು ಬಂದಿದ್ದಾಳೆ.
ಮಹಿಳೆಯರ ಆರ್ಥಿಕ ಸಬಲತೆಗಾಗಿ ಮುಕ್ತಾಯಕ್ಕ ಮಹಿಳಾ ಸ್ವ ಸಹಾಯ ಸಂಘ ಸ್ಥಾಪನೆ.ಬಸವ ಜಯಂತಿಯ ಶತಮಾನೋತ್ಸವದ ನಿಮಿತ್ಯ ಬೈಲಹೊಂಗಲದ ಒಂದು ನೂರು ಮನೆಗಳಲ್ಲಿ ನೂರು ಬಸವತತ್ತ್ವ ಚಿಂತನ ಗೋಷ್ಠಿಗಳನ್ನು ನೆರವೇರಿಸಿದ ಕೀರ್ತಿ ಇವರದು.
ಇವರ ಆಚಾರ-ವಿಚಾರ,ವಚನಗಳ ಆಳವಾದ ಅಧ್ಯಯನ, ವಿಮರ್ಶೆ,ಶರಣ ಸಂದೇಶ ಸಾರುವ ಪ್ರವಚನ ಸಾಮರ್ಥ್ಯವನ್ನು ಕಂಡು ಬಸವ ಟಿ.ವಿ, ಚಂದನ ವಾಹಿನಿ ದೂರದರ್ಶನಗಳು ಇವರ ವಚನಾಮೃತ ಕಾರ್ಯಕ್ರಮವನ್ನು ಪ್ರಸಾರ ಮಾಡುತ್ತಿವೆ.
ಇವರ ಪ್ರವಚನದ ಕೀರ್ತಿ ಈ ನಾಡಿಗಷ್ಟೇ ಸೀಮಿತವಾಗಿಲ್ಲ. ಹೊರದೇಶದ ಸ್ವೀಡನ್ ನ ಸ್ಟಾಕ್ ಹೋಮ್ ನಲ್ಲಿ ಬಸವ ಪ್ರವಚನವನ್ನೂ ನೀಡಿ ಸೈ ಎನಿಸಿಕೊಂಡ ಹೆಗ್ಗಳಿಕೆ ಇವರದು.
ಅಂತರ್ಜಾತಿ ವಿವಾಹ, ಸಾಮೂಹಿಕ ವಿವಾಹ,ಸರಳ ಬಸವತತ್ವದ ವಿವಾಹಗಳನ್ನು ದುಂದುವೆಚ್ಚವಿಲ್ಲದೆ, ನಿರಾಡಂಬರವಾಗಿ ಪ್ರತಿಫಲಾಪೇಕ್ಷೆಯಿಲ್ಲದೆ ನೆರವೇರಿಸಿಕೊಂಡು ಬರುತ್ತಿದ್ದಾಳೆ.
ಒಮ್ಮೆ ಕೊಪ್ಪಳದಲ್ಲಿ ನಡೆದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿದ್ದ ಅಂದಿನ ಕೊಪ್ಪಳದ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಶ್ರೀ ಈಶ್ವರಚಂದ್ರ ವಿದ್ಯಾಸಾಗರವರು ಇವರ ಮಾತಿನ ಝರಿಗಳನ್ನು ಕೇಳಿ.ಅಮ್ಮಾ ಈ ಪುಟ್ಟ ದೇಹದಲ್ಲಿ ಎಂತಹ ವಿಚಾರ ಶಕ್ತಿಯನ್ನು ಹೊಂದಿದ್ದಿಯಾ.ನಿನ್ನ ಮಾತುಗಳು ಬರಗಾಲದಿಂದ ಕಾದು ಬಿರುಕುಬಿಟ್ಟ ಭೂಮಿಗೆ ನೀರುಣಿಸಿ ತಂಪಾಗಿಸಿದಂತೆ. ಎನ್ನುವ ಮಾತುಗಳನ್ನು ಮೆಚ್ಚುಗೆಯಿಂದ ಆಡಿದ್ದು ಇಂದಿಗೂ ನನಗೆ ನೆನಪಿದೆ.ಮಾತಿಗೊಂದು ವಚನಗಳನ್ನು ಹೇಳುವ ಇವರ ನೆನಪಿನ ಸ್ಮರಣಶಕ್ತಿಯನ್ನು ಮೆಚ್ಚಲೇಬೇಕು.ಅಲ್ಲಮಪ್ರಭು, ಬಸವಣ್ಣ,ಅಕ್ಕಮಹಾದೇವಿ, ಅಜಗಣ್ಣ,ಮುಕ್ತಾಯಕ್ಕ,ಹಡಪದ ಅಪ್ಪಣ್ಣ,ಮಡಿವಾಳ ಮಾಚಯ್ಯ,ಜೇಡರ ದಾಸಿಮಯ್ಯ,ನುಲಿಯ ಚಂದಯ್ಯ,ಮುಂತಾದ ವಚನಕಾರರ ವಚನಗಳನ್ನು ಪಟಪಟನೆ ಅಸ್ಖಲಿತವಾಗಿ ಪ್ರವಚನಗಳ ಮೂಲಕ ಜನರಿಗೆ ಮುಟ್ಟಿಸುವ ಪರಿಯನ್ನು ನೋಡಿದವರು, ಕೇಳಿದವರು ಆನಂದತುಂದಿಲರಾಗುತ್ತಾರೆ.
ಚಿತ್ರದುರ್ಗದ ಬೃಹನ್ಮಠ ನಡೆಸುವ ವಚನ ಕಮ್ಮಟ ಪರೀಕ್ಷೆಯ ನಿರ್ವಾಹಕರಿವರು.ನಮ್ಮ ಬಣಜಿಗ ಸಂಘಟನೆ ನಡೆಸುತ್ತಿದ್ದ “ಬಸವ ಬಾಂಧವ್ಯ ವ್ಯಕ್ತಿತ್ವ ಶಿಬಿರ”ದಲ್ಲಿ.ಯುವಕ ಯುವತಿಯರಿಗೆ ಶರಣ ಸಂದೇಶಗಳನ್ನು ನೀಡುವುದರ ಮೂಲಕ ಉದ್ದೀಪನಗೊಳಿಸಿ ಶರಣ ಮಾರ್ಗದಲ್ಲಿ ನಡೆಯುವಂತೆ ಮಾಡಿದ ಕೀರ್ತಿ ಇವರದು.ನಾನು ನಮ್ಮ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿದ್ದಾಗ ಸಮಾಜದ ಸಂಘಟನೆಯ ಸಭೆಗಳಲ್ಲಿ ಪ್ರೇಮಕ್ಕ ಅಂಗಡಿ ಇದ್ದೇ ಇರುತ್ತಿದ್ದರು.ಇವರೆಂದೂ ಸಮಾಜದ ಬಂಧುಗಳಿಗೆ ಜಾತಿವಾದಿ ಆಗುವಂತಹ ಆಗುವಂಥ ಮಾತುಗಳನ್ನು ಆಡಿದವರಲ್ಲ,ಬದಲಾಗಿ ನಮ್ಮ ಸಮಾಜ ಬಸವಣ್ಣನನ್ನು ಧರ್ಮ ಗುರು ಎಂದು ಒಪ್ಪಿಕೊಂಡಿದೆ ಬಸವಣ್ಣನ ಮಾರ್ಗದಲ್ಲಿ ನಡೆಯುವುದೇ ನಮ್ಮ ಸಂಘಟನೆಯ ಗುರಿ ಎಂದು ಹೇಳುತ್ತಾ ಸಮಾಜದ ಬಂಧುಗಳನ್ನು ಬಸವಮಾರ್ಗದಲ್ಲಿ ಮುನ್ನಡೆಯುವಂತೆ ಪ್ರೇರೇಪಿಸುತ್ತಿದ್ದರು. “ಹೂವಿನ ಜೊತೆಗೆ ನಾರು ಸ್ವರ್ಗಕ್ಕೆ ಹೋಯಿತಂತೆ” ಹಾಗೆ ನಮ್ಮ ಸಂಘಟನೆ ನಡೆಸುತ್ತಿದ್ದ ” ಬಸವ ಬಾಂಧವ್ಯವೇ ವ್ಯಕ್ತಿತ್ವ ಶಿಬಿರ”ದಲ್ಲಿ ಅಕ್ಕ ಪ್ರೇಮಕ್ಕಾ ಅಂಗಡಿ ಅವರ ಜೊತೆಗೆ ನಾನೂ ಸಹ ತರಬೇತುದಾರನಾಗಿ ಕೆಲಸ ಮಾಡಿದ್ದು ನನ್ನ ಜೀವನದ ಅತ್ಯಂತ ಸಾರ್ಥಕ ಕ್ಷಣಗಳಲ್ಲಿ ಒಂದು. ಪ್ರೇಮಕ್ಕ ಎಂದೂ ಯಾರ ಮುಂದೆಯೂ ಯಾವದಕ್ಕೂ ಕೈ ಚಾಚಿದವರಲ್ಲ.ಪ್ರೇಮಕ್ಕನ ಕೈ ಯಾವತ್ತಿಗೂ ನೀಡುವ ಕೈ.ಬೇಡುವ ಕೈಗಳನ್ನು ನೀಡುವ ಕೈಗಳನ್ನಾಗಿ ಪರಿವರ್ತಿಸುವ ಮನಸ್ಥಿತಿ ಮತ್ತು ತಾಕತ್ತು ಪ್ರೇಮಕ್ಕನದು. ತನ್ನ ಪ್ರವಚನಗಳಿಗೆ ರೇಟನ್ನು ಫಿಕ್ಸ್ ಮಾಡಿದವರಲ್ಲ.ಇಂದು ಕನ್ನಡ ನಾಡಿನಲ್ಲಿ ಬಸವ ಸಂದೇಶಗಳ ಪ್ರವಚನ ನೀಡುವ ಬೀದರನ ಅಕ್ಕ ಅನ್ನಪೂರ್ಣ,ಅಕ್ಕ ಗಂಗಾಂಬಿಕೆ, ಭದ್ರಾವತಿಯ ಅಕ್ಕ ಗಂಗಾಂಬಿಕೆ, ಮುಂತಾದವರಷ್ಟೇ ಸಮರ್ಥ ವಾಗ್ಮಿಗಳು ಇವರು.ವರ್ಷದ ಮುನ್ನೂರಾ ಅರುವತ್ತೈದು ದಿನಗಳಲ್ಲಿ ಕನಿಷ್ಠವೆಂದರೂ ಇನ್ನೂರಾ ಐವತ್ತು ದಿನಗಳನ್ನು ಪ್ರವಚನ ನೀಡುವುದರಲ್ಲಿಯೇ ಸಂತೃಪ್ತಿಯನ್ನು ಕಾಣುವ ಜೀವಿ ಪ್ರೇಮಕ್ಕ.ಬಸವ ಮಾರ್ಗದಲ್ಲಿ ನಡೆಯುವ ಕರ್ನಾಟಕದ ಸ್ವಾಮಿಗಳಿಗೆ, ಸಂತರಿಗೆ ಪ್ರೇಮಕ್ಕ ಅತ್ಯಂತ ಚಿರಪರಿಚಿತಳು.ಹಾಗಂತ ಮನೆ ಮತ್ತು ಕುಟುಂಬವನ್ನು ಅಲಕ್ಷಿಸಿ ಮುನ್ನಡೆದವಳಲ್ಲ. “ಸಂಸಾರದಲ್ಲಿದ್ದು ಸನ್ಯಾಸ ಜೀವನವನ್ನು ಸಾಗಿಸುತ್ತಿರುವ ಮಹಾಸಾದ್ವಿ” ಪ್ರೇಮಕ್ಕ ಅಂಗಡಿ.ಕಿತ್ತೂರ ಚನ್ನಮ್ಮನ ನಾಡಿನಿಂದೆದ್ದು ಬಂದ ಈ ಶರಣೆಗೆ ನಾನು ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದಾಗ ಅವರಾಡಿದ ಮಾತು ” ಅಣ್ಣಾ ಶರಣ ಜೀವನ ಸಾಗಿಸುವವರಿಗೆ ಜನನ ಮರಣ ಎರಡು ಒಂದೇ, ಅದೊಂದು ಸೃಷ್ಟಿಯ ಕ್ರಿಯೆ”. ಜನನ ಮರಣದ ನಡುವಿನ ಈ ನನ್ನ ಬದುಕು ಬಸವಣ್ಣನಿಗೆ ಅರ್ಪಿತವಾದರೆ ಸಾಕು ನಾನು ಮಹಾ ಧನ್ಯೆ ಎನ್ನುವ ಮಾತನ್ನು ವಿನಯದಿಂದ ಹೇಳಿದಳು ಪ್ರೇಮಕ್ಕ ಅಂಗಡಿ.ಇಂತಹ ಶರಣೆಯ ಜೊತೆಗೆ ನಾನು ಅವಕಾಶ ಸಿಕ್ಕಾಗ ಕೆಲಸ ಮಾಡಿದ್ದೇನಲ್ಲ ಎನ್ನುವ ಸಾರ್ಥಕ ಮತ್ತು ಸಂತೃಪ್ತಿ ಭಾವ ನನ್ನದು. ನಿನ್ನಂಥವರ ಸಂತತಿ ಈ ದಿನಗಳಲ್ಲಿ ಹೆಚ್ಚಾಗಲಿ ಅಕ್ಕಾ.ನಿನ್ನಂಥ ಮಗಳು ಮನೆಗೊಬ್ಬಳು ಜನಿಸಲಿ ಎಂದು ಹಾರೈಸುವೆ ಅಕ್ಕಾ….


ಗವಿಸಿದ್ದಪ್ಪ ವೀ. ಕೊಪ್ಪಳ

Don`t copy text!