ನಾ ಓದಿದ ಪುಸ್ತಕ- ಪುಸ್ತಕ ಪರಿಚಯ
ಕೃತಿ – ಅಷ್ಟೇ…
ಕವಿತೆಗಳು
(2020 ನೇ ಸಾಲಿನ ವಿಭಾ ಸಾಹಿತ್ಯ ಪ್ರಶಸ್ತಿ ಪಡೆದ ಕೃತಿ)
ಕೃತಿಕಾರರು – ದೀಪ್ತಿ ಭದ್ರಾವತಿ
“ಅನಂತ ಭಾವ ತುಂಬುವ ಅಷ್ಟೇ ಕವಿತೆಗಳು”
“ಅಷ್ಟೇ…”, ಬದುಕು ಏನೆಲ್ಲಾ ಸಂಭ್ರಮಗಳನ್ನು ಅನುಭವಿಸಿದರೂ ಕೊನೆಗೆ “ಅಷ್ಟೇ…” ತನ್ನ ಸೀಮಿತ ಪರಿಧಿಯೊಳಗೆ ಉಳಿದುಬಿಡುತ್ತದೆ. ಕನಸು ಕಾಣುವುದಾಗಿರಬಹುದು, ಅದನ್ನು ನನಸು ಮಾಡಿಕೊಳ್ಳುವಲ್ಲಿ ಪಡುವ ಶ್ರಮವಾಗಿರಬಹುದು ಎಲ್ಲದರಲ್ಲೂ ಬದುಕು ಏಕಾಂಗಿತನವನ್ನು ಅನುಭವಿಸಲೇಬೇಕು. ನಡು ನಡುವೆ ಬಂದು ಹೋಗುವ ಅದೆಷ್ಟೋ ಸಹೃದಯಗಳು ಅಂತಿಮ ಘಟ್ಟದಲ್ಲಿ, ಬದುಕಿನ ಅಂತಿಮ ಯಾತ್ರೆಯಲ್ಲಿ “ಅಷ್ಟೇ…” ಆಗಿರುತ್ತವೆ. ಇಲ್ಲಿ ಅಷ್ಟೇ… ಎಂದರೆ ಅಷ್ಟೇ… ಅಲ್ಲ, ನೂರಾರು ಅರ್ಥಗಳು, ನೀವು ನಿಮ್ಮ ನೂರಾರು ಭಾವಗಳಿಗೆ ನೂರಾರು ರೀತಿಯಲ್ಲಿ ಅರ್ಥೈಸಿಕೊಳ್ಳಬಹುದು.
ಆದರೆ ಈ “ಅಷ್ಟೇ..”ಗೆ; ನಾನು, ನೀವು ಯೋಚಿಸಿರದ ಮತ್ತೊಂದು ಆಯಾಮದ ಚಿಂತನೆಯನ್ನು ಹಿರಿಯ ಬರಹಗಾರ್ತಿ, “ಗೀರು” ಕಥಾ ಸಂಕಲನದ ಕರ್ತೃ, ಕವಯಿತ್ರಿ ವಿಭಾ ಪ್ರಶಸ್ತಿಯ ಒಡತಿ, ಸರ್ವರಿಗೂ ಹಿತ, ಒಳಿತು ಬಯಸುವ ಸಹೃದಯಿ, ಶ್ರೀಮತಿ ದೀಪ್ತಿ ಭದ್ರಾವತಿ ಅವರು ನಮ್ಮ ಚಿಂತನೆಗೆ ನೀಡಿದ್ದಾರೆ.
೨೦೨೦ ನೇ ಸಾಲಿನ “ವಿಭಾ ಸಾಹಿತ್ಯ ಪ್ರಶಸ್ತಿ” ಪಡೆದ ಈ “ಅಷ್ಟೇ…” ಕೃತಿ, ಓದುವವರಿಗೆ ತತ್ಸಮಾನ ಸಂಬಂಧಿತ ಸ್ತ್ರೀ ಸಂವೇದನೆಗಳ ಕುರಿತಾಗಿ “ಅಷ್ಟೇ…” ಔಚಿತ್ಯಪೂರ್ಣವಾಗಿ ಮನಸನ್ನು ಆವರಿಸಿಕೊಳ್ಳುತ್ತದೆ.
ಇವರ ಈ ಕೃತಿಯ ಕವಿತೆಗಳ ಓದು ಎಂದರೆ ಸುಮ್ಮನೆ ಕವನಗಳನ್ನು ಯಾವುದೇ ತಾರ್ಕಿಕ ವಿಚಾರ ಇಲ್ಲದೆ ಬಾಲಿಶವಾಗಿ ಓದಿದಂತಲ್ಲ. ಸಹೋದರಿ ದೀಪ್ತಿ ಅವರೇ ಹೇಳಿದಂತೆ,
(ಕವಯತ್ರಿ)
* “ಕವನಗಳನ್ನು ಸುಮ್ಮನೆ ಸಾದಾ ಮನಸ್ಥಿತಿಯಿಂದ ಓದುವುದಲ್ಲ, ಪರೀಕ್ಷೆಗೆ ಸಿದ್ಧವಾಗುವಾಗ ಹೇಗೆ ಅರ್ಥೈಸಿಕೊಂಡು ಮತ್ತೆ ಮತ್ತೆ ಭಾವಾರ್ಥದ ಚಿಂತನೆ ಮಾಡುತ್ತಾ ಅಧ್ಯಯನ ಮಾಡುತ್ತೇವೆಯೋ ಹಾಗೆ ಓದಬೇಕು, ಚಿಂತನಾತ್ಮಕವಾಗಿ ಓದಬೇಕು ತರ್ಕಬದ್ಧವಾಗಿ ಅವಲೋಕಿಸಬೇಕು, ಸಹ ಓದುಗರೊಂದಿಗೆ ಚರ್ಚಿಸಬೇಕು ಎನ್ನುತ್ತಾರೆ”, ಮತ್ತು ಇವರ ಈ ಕೃತಿಯ ಕವಿತೆಗಳೂ ಕೂಡ ಹಾಗೆಯೇ ಓದಿಸಿಕೊಳ್ಳುತ್ತವೆ. ಒಂದೊಂದು ಕವಿತೆಯನ್ನು ಕನಿಷ್ಟ ಮೂರು ನಾಲ್ಕು ಬಾರಿಯಾದರೂ ಏಕಮನಸ್ಸಿನಿಂದ ಓದಲೇಬೇಕು ಮತ್ತು ಅಂತರ್ಗತ ಮಾಡಿಕೊಂಡು ಅದರ ಹಿಂದಿನ ವಿಚಾರವನ್ನು ಚಿಂತಿಸಲೇಬೇಕು. ಆ”ಗಷ್ಟೇ” ಕಾವ್ಯದ ಅಂತರಾಳ ಹೃದಯಕ್ಕೆ ಅರಿವಾಗುತ್ತದೆ.
ಒಟ್ಟು ೩೬ ವಿಭಿನ್ನ ರೂಪಕಗಳ ಕವಿತೆಗಳುಳ್ಳ “ಅಷ್ಟೇ…”, ಕವನ ಸಂಕಲನ ಕಾವ್ಯದ ಹೊಸ ರೂಪವನ್ನೇ ಓದುಗನ ಕಣ್ಣ ಮುಂದೆ ಚಿತ್ರಿಸುತ್ತದೆ. ಉತ್ಕೃಷ್ಟ ಸಾಹಿತ್ಯ, ಸಂಪದ್ಭರಿತವಾದ ಪದಲಾಲಿತ್ಯ, ಅತ್ಯಾಕರ್ಷಕವಾದ ರೂಪಕಗಳು, ಸಂಕೀರ್ಣವಾದಂತಹ ವಿಚಾರಧಾರೆಗಳು,
ವರ್ತಮಾನದ ಸ್ತ್ರೀ ತಲ್ಲಣಗಳು ಮುಂದುವರೆದಂತೆ
ಕೌಟುಂಬಿಕ, ಸಾಮಾಜಿಕ, ಬದುಕಿನಲ್ಲಿ ನಿತ್ಯ ಕಾಡುವ ಭಾವಗಳ ಯಥಾವತ್ತಿಗೆ ಇಲ್ಲಿಯ ಪ್ರತಿಯೊಂದು ಕಾವ್ಯದ ಸಾಲುಗಳು ತಾಳೆ ಹಾಕಿಕೊಂಡಿವೆ. ಅಂತಹ ಕೆಲವು ಕವನಗಳ ಸಾಲುಗಳ ಕುರಿತಾದ ಚಿಕ್ಕ ಅವಲೋಕನ ಸಾಲುಗಳನ್ನು ತಮ್ಮ ಓದಿಗೆ ನೀಡುತ್ತಿದ್ದೇನೆ.
*****
ಪ್ರಥಮ ಕವಿತೆ(ಅಷ್ಟೇ…)ಯಲ್ಲೇ ಸಹೋದರಿ ದೀಪ್ತಿ ಅವರು ಪುರುಷ ಓದುಗನಿಗೆ ತನ್ನ ಜಾಣ ಮರೆವಿನ ಬಗೆಗೆ, ಸಮಯ ಸಾಧಕ ವ್ಯಕ್ತಿತ್ವದ ಕುರಿತು, ಭ್ರಷ್ಟ ವ್ಯಭಿಚಾರಿ ಮನಸ್ಥಿತಿಯ ಋಣಾತ್ಮಕ ಭಾವದ ಗುಣವನ್ನು ನೆನಪಿಸುತ್ತಾರೆ, ಬೆವರು ಸ್ರವಿಸುವಂತೆ ಮಾಡುತ್ತಾರೆ.
ಜೊತೆಗೆ ಸ್ತ್ರೀ ಓದುಗರಿಗೆ ತಮ್ಮತನದ ಅರಿವನ್ನು, ತಮ್ಮ ಪ್ರಾಮುಖ್ಯತೆಯನ್ನು ತಿಳಿಸುತ್ತಲೇ ಸಾಗುವ ಕವಯಿತ್ರಿ ಹೆಣ್ಣನ್ನು ಗಟ್ಟಿಗೊಳಿಸಲು ಪ್ರಯತ್ನಿಸುತ್ತಾರೆ.
“ವೀರ್ಯ ತಿರಸ್ಕರಿಸುವ ಹಕ್ಕು,
ಸ್ವೀಕರಿಸಿ ಪ್ರೇಮದ ಜೊತೆ ಉಸಿರು ತುಂಬುವ ತಾಕತ್ತು ನಮಗಷ್ಟೇ ಅಲ್ಲವೇನೆ?”
ಎಂದು ಎಚ್ಚರಿಸುತ್ತಲೇ, ಹೆಣ್ಣು ತಾನೇನಾದರೂ
“ಮರೆವಿನ ಗುಳಿಗೆಯಾದರೆ ವೀರ್ಯ ಸ್ಖಲಿಸುವವನಿಗೆಲ್ಲಿದೆ ಸುಖದ ಕ್ಷೇತ್ರ’,
ಒಂದೊಮ್ಮೆ ಈ ಹೆಣ್ಹಕ್ಕಿ ಬಯಲ ಹುಡುಕಿ ಹೊರಟರೆ,
“ಉಳಿಯುತ್ತದೇನಲ್ಲಿ ಹೇಳು ಮತ್ತೆ?”
ಎಂದು ಎಂದಿಗೂ ಸ್ತ್ರೀ, ಆ ಮನಸು ಮಾಡಿಲ್ಲ; ಮಾಡಳು ಕೂಡ ಅದೇ ಅವಳ ದೊಡ್ಡತನ ಎನ್ನುತ್ತಾರೆ.
ಇಲ್ಲಿ ಪ್ರತಿ ಕಾಯಗಳೂ, ಅದರೊಳಗಿನ ಪ್ರತಿ ಹೃದಯಗಳೂ ಅನಿವಾರ್ಯಕ್ಕೆ ಒಗ್ಗಿಕೊಳ್ಳುವುದು ಧರ್ಮವೇ, ಅದು ಪ್ರೇಮದ ವಿಷಯದಲ್ಲಾದರೆ ಒಂದಷ್ಟು ನೋವಿನೊಂದಿಗೆ “ಪಯಣ” ಪ್ರಾರಂಭವಾಗುತ್ತದೆ.
“ಇದೀಗ ನೋಡು,
ಎದುರು ನಿಂತು ಅಪರಿಚಿತನೊಬ್ಬ
‘ಇದೇ ಕೊನೆಯ ಬಸ್ಸೆಂದು
ಎಬ್ಬಿಸುತ್ತಿದ್ದಾನೆ’
ನನ್ನಿಂದ ಸಾಧ್ಯವಿಲ್ಲ..
ಕ್ಷಮಿಸಿ ಬಿಡು ಹತ್ತದೇ ವಿಧಿಯಿಲ್ಲ…”
ಎಂಬಲ್ಲಿ ಭಾವ ತೀವ್ರತೆಯ ಜೊತೆಗೆ ನಾವು ತುಂಬಿದ ಹೃದಯದೊಂದಿಗೆ ವಿದಾಯ ಹೇಳಿ, ಕೊನೇ ಬಸ್ಸೆಂದು ಎಚ್ಚರಿಕೆಯ ಗಂಟೆಗೆ ಕಿವಿಗೊಡುವ, ಅಗತ್ಯತೆಗೆ ಕೈ ಜೋಡಿಸಿ ಬದಲಿ ಬಸ್ಸನ್ನು ಹತ್ತಲೇಬೇಕು ವಿಳಾಸ ಬದಲಿಸಿಕೊಂಡು, ಎಂದು ಒಂದು ಕಡೆ ಸಂಕಟ ಮತ್ತೊಂದೆಡೆ ವಾಸ್ತವದ ಪ್ರತಿಬಿಂಬದ ದರ್ಶನ ಮಾಡಿಸುತ್ತಾರೆ.
ಈ ಮನದ ವಿಚಾರಗಳಿಗೆ ಪದ ಪೋಣಿಸುವುದಿದೆಯಲ್ವಾ, ಒಬ್ಬ ‘ಕವಿ’ ಪದದ ಅಸ್ತಿತ್ವವನ್ನು ಉಳಿಸುವಂತಹುದು. ಸೃಜನಾತ್ಮಕವಾಗಿ, ವ್ಯವಸ್ಥಿತವಾಗಿ ಪದಗಳನ್ನು, ಸಾಲುಗಳನ್ನು ಸೇರಿಸಿದರಂತೂ ಓದುಗನೂ ಒಂದೇ ಓದಿಗೆ ಕವಿತೆಗೆ ಮತ್ತು ಕೃತಿಕಾರನಿಗೆ ಮರುಳಾಗಿಬಿಡುತ್ತಾನೆ. ಹಂಗೆ ಮರುಳುಮಾಡುವ ಕವಿತೆ “ಕಗ್ಗತ್ತಲ ತಂತಿ”.
ದಂಡಯಾತ್ರೆ, ಸಂಗ್ರಾಮ, ಸಾಹಸಗಾಥೆಗಳ ಬಗೆಗಿನ ಇತಿಹಾಸ ಓದುವ ಮಗಳ ಮಾತುಗಳು,
ಮುಂದಿನ ಕ್ಷಣವೇ ಗುಂಡು, ದೇಶ ಪ್ರೇಮ ತುಂಬಿದ ನೆತ್ತರಿನ ಹೃದಯ ಸೀಳ ಹೊರಟ ತುಪಾಕಿನ ಎದುರಿಗೊಬ್ಬ ಯೋಧ,
ಅವನನ್ನೇ ಖಾಲಿ ರಸ್ತೆಯಲಿ ಇದಿರು ನೋಡುವ ಮುದುಕಿ.. ಕಾವ್ಯದ ಒಂದೊಂದು ಸಾಲುಗಳೂ ಓದುಗನನ ಎದೆಹೊಕ್ಕು ಭಾವುಕತೆಯನ್ನು ಹೆಕ್ಕಿ ಹೆಕ್ಕಿ ಬಿಕ್ಕಳಿಸುವಂತೆ ಮಾಡುತ್ತವೆ.
“ನಡೆದವೇನಮ್ಮ ಪ್ಲಾಸಿ ಕದನ,
ಬಾಬರನ ದಂಡಯಾತ್ರೆ, ನಾಜೀ ಸಂಘರ್ಷಗಳು?”
ಎನ್ನುವ ಮಗಳ ಪ್ರಶ್ನೆಗೆ ಹೌದು ಎನ್ನಲು, ಕುರುಹು ಅರಹುತ್ತಾಳೆ ಮಗಳು.
“ಸ್ಥಾವರ ಶಾಶ್ವತವಲ್ಲ”
ಎಂಬ ಉತ್ತರಕ್ಕೆ
“ಯುದ್ಧಗಳು ಜಂಗಮವೇನಮ್ಮ?”
ಎಂಬ ಮರುಪ್ರಶ್ನೆಗೆ ಮೂಕವಾಗುವ ತಾಯಿ, ಮಗಳ ಕಾವ್ಯಾತ್ಮಕ ಸಂಭಾಷಣೆ, ಓದುಗನನ್ನು ವಿಮರ್ಶಾತ್ಮಕವಾಗಿ ಚಿಂತನೆಗೆ ನೂಕುತ್ತದೆ. ಇಂತಹ ಚಿಂತನೆಗಳಿಗೆ ಜೀವ ತುಂಬುವ, ಮನದಲ್ಲಿ ಚಿಂತನೆಯು ಉಪಸ್ಥಿತಿ ಕಾಯ್ದುಕೊಳ್ಳುವಂತೆ ಮಾಡುತ್ತದೆ.
ಕೊನೆಗೆ
“ಕೊರಳು ದಿಗಿಲು ಬೀಳುತ್ತದೆ
ಕನಸುಗಣ್ಣಿನ ಎಳೆ ಯೋಧರು ಕಣ್ಮರೆಯಾಗುತ್ತಾರೆ
ಮುದುಕಿ ಜಗದ ದೀಪ ಆರುತ್ತದೆ
ಚರಿತ್ರೆಯ ಪುಟಗಳು ಇನ್ನಷ್ಟು
ಭರ್ತೀಯಾಗುತ್ತವೆ”
ಎಂಬೀ ಸಾಲುಗಳನ್ನು ಓದುತ್ತಿದ್ದಂತೆಯೇ
ಚರಿತ್ರೆಯ ಪುಟಗಳಿಗೆ ಅಂತ್ಯವಿಲ್ಲ. ಯುದ್ಧಗಳು ಜಂಗಮವಾಗಿ ನಿರಂತರವಾಗಿ ಇತಿಹಾಸದಲ್ಲಿ ಸೇರ್ಪಡೆಗೊಳ್ಳುತ್ತಿವೆ, ಎಂಬ ದಿಗಿಲನ್ನು ಕವಯಿತ್ರಿಯವರು ಮಾರ್ಮಿಕವಾಗಿ ಹೊರಹಾಕಿದ್ದಾರೆ. ಜೊತೆಗೆ ಅತ್ತ ಯೋಧನ ವೀರ ಮರಣ, ಇತ್ತ ರಸ್ತೆ ಶಾಶ್ವತವಾಗಿ ಮುದುಕಿ ಪಾಲಿಗೆ ಕತ್ತಲಾಗಿದ್ದು ಓದುಗನ ಹೃದಯವನ್ನು ಹಿಂಡಿದಂತಾಗುತ್ತದೆ.
ಹೆಣ್ಣು ಶಿಶುವಿನ ಜನನದ ಜೊತೆಗೆ ಭಯವೂ ಹುಟ್ಟುತ್ತದೆ. ಹೆಣ್ಣು ಬೆಳೆದಂತೆ ಕಟ್ಟುಪಾಡುಗಳೂ ಅಂಟಿಕೊಂಡೇ ಬೆಳೆಯುತ್ತವೆ. ಈ ಭಯ
“ನಿರಂತರ”ವಾಗಿದ್ದು ಬೇಲಿ ಬದಲಾದಂತೆ ವರ್ಗಾವಣೆಯೂ ಆಗುತ್ತದೆ ಎಂದು ಮಗಳು,
“ಆಗಷ್ಟೇ ಹುಟ್ಟಿದ ತನ್ನ ಮುದ್ದು
ಮಗಳ
ಬೆರಳು ಹಿಡಿದು ಹೇಳಿದಳು,
ಭಯವಾಗುತ್ತಿದೆಯಮ್ಮ..”
ಉತ್ತಮ ಪದಲಾಲಿತ್ಯದೊಂದಿಗೆ ಸಾಕ್ಷೀಕರಿಸಿ ಕಾವ್ಯ ಸೃಷ್ಟಿಸಿದ್ದಾರೆ. ಇದು ಇಷ್ಟಕ್ಕೇ ಕೊನೆಗೊಳಿಸದೆ ಮಗದೊಂದು, “ದೇವಿ ಸನ್ನಿಧಿಯಲ್ಲಿ” ಎನ್ನುವ ಕವಿತೆಯಲ್ಲಿ ಹೆಣ್ಣಿಗೂ ಹೆಣ್ಣು ದೇವರಿಗೂ ಈ ಜಗದಲ್ಲಿ ವ್ಯತ್ಯಾಸವೇನಿಲ್ಲ. ಕಟ್ಟಳೆಗಳೂ ಅಂತ ಬಂದರೆ ಅದು ಭೌತಿಕ ಸ್ತ್ರೀ”ಗಷ್ಟೇ” ಅಲ್ಲ, ಸೃಷ್ಟಿ ಕರ್ತೆ ಜಗನ್ಮಾತೆಗೂ ಹೊರತಾಗಿಲ್ಲ ಎನ್ನುತ್ತಾರೆ ಅಕ್ಕ ದೀಪ್ತಿಯವರು. ಮಂದಿರದಲ್ಲಿ ಹೆಣ್ಣು ದೇವತೆಯೊಂದಿಗೆ ಅಂತರಾಳದಲ್ಲಿ ಸಂಭಾಷಣೆ ನಡೆಸಿ ತಾಯಿ
‘ನನ್ನ ಹಾಗೆ ನಿನಗೂ ?
ನನ್ನ ಹಾಗೆಯೇ ನೀನೂ? ಅಬಲೆಯೇ,
ಹಾಗಾದರೆ
‘ಬಂದುಬಿಡು ನನ್ನೊಡನೆ, ನನಗೂ ಜೊತೆಯಾದೀತು’
ಎನ್ನುತ್ತಾರೆ ಆದರೆ,
“ಒಂದೊಮ್ಮೆ ನೀನು ನಡುರಾತ್ರಿಯಲಿ
ನನ್ನ ಸಲುವಾಗಿ ಎದ್ದು ಬಂದರೆ…
ಗಲ್ಲಿಯ ಕೀಚಕರು ನಿನ್ನನ್ನು!?”..
ಎಂದು ಎದೆಯ ದುಗುಡವನ್ನು ಹೆಚ್ಚಿಸಿಕೊಳ್ಳುತ್ತಾರೆ. ಈ ಕವಿತೆ ವರ್ತಮಾನದಲ್ಲಿ ಪುರುಷ ಕೀಚಕರ ಅಟ್ಟಹಾಸ, ಹೆಣ್ಣಿನ ಮೇಲೆ ಆಗುತ್ತಿರುವ ಲೈಂಗಿಕ ದೌರ್ಜನ್ಯವನ್ನು ನೆನದು ಖೇದ ಹುಟ್ಟಿಸುವಂತಿದೆ. ಇದಕ್ಕೆ ಕೊನೆಯೆಂದು? ಎಂಬ ಭಾವಕ್ಕೆ ಉತ್ತರವಿಲ್ಲದೆ ಓದುಗನೂ ಪರಿತಪಿಸುವಂತೆ ಮಾಡುತ್ತಾರೆ ಕವಯಿತ್ರಿ ದೀಪ್ತಿ ಅವರು.
ಪ್ರಾಚೀನ ಕಾಲದಿಂದಲೂ ಹೆಣ್ಣು, ಗಂಡಿನ ನಡುವೆ ನಮ್ಮ ಸಮಾಜದಲ್ಲಿರುವ ತಾರತಮ್ಯ ಈಗಲೂ ಚಾಲ್ತಿಯಲ್ಲಿದೆ. ಹೆಣ್ಣಿಂದಲೇ ಪೂಜೆಗೆ ಅಣಿ ಮಾಡಿಸಿಕೊಂಡು, ಹೆಣ್ಣಿಂದಲೇ ಮಡಿಯ ಪೂಜೆಗೆ ಹೂ ಕಟ್ಟಿಸಿಕೊಂಡು, ಆ ಹೆಣ್ಣನ್ನೇ ಮುಟ್ಟು, ಮೈಲಿಗೆಯೆಂದು ದೂರ ಇಡುವ ತಾರತಮ್ಯದ ಕುರಿತಾಗಿ ಖಾರವಾಗಿ ಕವಿತೆಯಲ್ಲಿ ಹೆಣ್ಮನದ ನೋವನ್ನು ಕಟ್ಟಿಕೊಟ್ಟಿದ್ದಾರೆ. ಮುಂದುವರೆದು,
“ನಮ್ಮನ್ನು ಬದಿಗಿಡುವ ಪರಂಪರೆಗಳ
ಬೇಡುತ್ತ ನಿಲ್ಲುವ ದರ್ದು
ನಮಗೂ ಬೇಕಿಲ್ಲ”,
ನೀವೇ ನಿಮ್ಮ ದೇವಾನು ದೇವತೆಗಳನ್ನು ಕಾಪಾಡಿಕೊಳ್ಳಿ. ನಮಗೇನಿಲ್ಲ ಬೇಡಿಕೊಂಡು ನಿಲ್ಲುವ ದರ್ದು ಎಂದು ಅಹಿತ ಎನಿಸುವ ಕಟ್ಟಳೆಯ ಕುರಿತಾಗಿ ಆಕ್ರೋಶವನ್ನು ವ್ಯಕ್ತಪಡಿಸುತ್ತಾರೆ.
ಇಂದಿನ ಎಲ್ಲೆ ಮೀರುತ್ತಿರುವ ಯುವ ಗಂಡು, ಹೆಣ್ಣಿನ ನಡುವೆ ಆಗುವ ಎಡವಟ್ಟನ್ನು “ಅವರು” ಕವಿತೆಯಲ್ಲಿ ಹೇಳುತ್ತಾರೆ. ಆ ಅದಕ್ಕೆ ಎನ್ನುವಲ್ಲಿ, ಆ ಅದು ತೀರಿದ ಬಳಿಕ ಒಬ್ಬರ ಮೇಲೊಬ್ಬರು ತಪ್ಪು ಹೊರಿಸಿ ಕಾಂಟ್ಯಾಕ್ಟ್ ಪಟ್ಟಿಯಲ್ಲಿ ಏನೂ ಗೊತ್ತಿಲ್ಲದಂತೆ ಉಳಿದುಬಿಡುತ್ತಾರೆ ಎಂದು ವ್ಯಂಗ್ಯ ಮಾಡುವುದರ ಜೊತೆಗೆ ತಪ್ಪುತ್ತಿರುವ ಯುವ ಜನತೆಯ ಭವಿಷ್ಯದ ಕುರಿತಾಗಿ ದುಗುಡವನ್ನೂ ವ್ಯಕ್ತಪಡಿಸುತ್ತಾರೆ.
ಅಗಸ್ತ್ಯ ಮುನಿ ತನ್ನ ಮಡದಿ ಲೋಪಾಮುದ್ರೆ ತನ್ನನ್ನು ಅಗಲಿ ಹೋಗದಂತೆ ಕಮಂಡಲದೊಳಗೆ ಬಂಧಿಸಿದ್ದು, ಅವನ ಉಪೇಕ್ಷೆಗೆ ಒಳಗಾದ ಕ್ಷಣ ಮಾತಿನಂತೆ ಲೋಪಾಮುದ್ರೆ, ಕಾವೇರಿಯಾಗಿ ಹರಿದದ್ದು ಪೌರಾಣಿಕ ಇತಿಹಾಸ. ಅಂದಿಗೂ ಇಂದಿಗೂ
“ಜಗದ ಬಾಗಿಲುಗಳು ತಾನಾಗಿಯೆ
ನೀರೆಯರಿಗೆ ತೆರೆದ ಉದಾಹರಣೆಗಳಿಲ್ಲ”,
ಮಹಿಳೆ ಸ್ವತಃ ದಿಟ್ಟ ಹೆಜ್ಜೆ ಇಡುವವರೆಗೆ ಕತ್ತಲಿಂದ ಹೊರಬರಲು ಸಾಧ್ಯವಿಲ್ಲ ಎಂದು ಕವಯಿತ್ರಿ ದೀಪ್ತಿ ಅವರು ಹೇಳುತ್ತ, ಹೊಸ ಹೆಜ್ಜೆ ಇಟ್ಟು ಹೊರಡುವುದಾದರೂ ಎಲ್ಲಿಗೆ?
“ಮೊನಚು ತೊರೆಯೊಂದು ರೇವೆಯಿಂದ ಹೊರಟು
ಠಿಕಾಣಿ ಹೂಡುತ್ತದೆ ಮತ್ತಲ್ಲಿಯೇ”
ಎಲ್ಲೇ ಅಡಿ ಇಟ್ಟರೂ ಕೊನೆಗೆ ಈ ಕತ್ತಲ ಕಮಂಡಲದ ದರ್ಶನ, ಸ್ವಾರ್ಥ ಕಣ್ಣುಗಳ ಇರಿತ ಇದ್ದೇ ಇರುತ್ತದೆ, ಅದನ್ನು ಮೀರಿ ನುಗ್ಗಿ ಹೊರಟರೆ ಕಾವೇರಿ ಹರಿದದ್ದೇ ದಾರಿ, ಲೋಪಾಮುದ್ರೆ ಕಾವೇರಿ ಆಗಲೇಬೇಕು ಎನ್ನುವ ಕವಯಿತ್ರಿಯವರ ಅಭೀಷ್ಟೆ ನ್ಯಾಯಯುತವಾಗಿದೆ.
ಸಾವು ಒಂದೇ ಆದರೂ ಸತ್ತವರಾರು? ಎನ್ನುವುದರ ಮೇಲೆ ಪದ ಪ್ರಯೋಗ ಆಗುತ್ತದೆ. ಅಂತೆಯೇ ಪತ್ರಿಕೆಯ ಶೀರ್ಷಿಕೆ ಕಂಡ ಕವಯಿತ್ರಿ ಅದರ ಕುರಿತಾಗಿ,
“ನಿನ್ನೆ ರಾತ್ರಿ ನಡೆದ ಗುಡಿನ ಚಕಮಕಿಯಲ್ಲಿ
ಒಬ್ಬ ಸೈನಿಕ ಹುತಾತ್ಮ”
“ನಿನ್ನೆ ರಾತ್ರಿ ನಡೆದ ದಾಳಿಯಲ್ಲಿ
ಒಬ್ಬ ಶತ್ರು ಸೈನಿಕನ ಸಾವು”
ಹೀಗೆ ಬರೆಯುತ್ತಾರೆ, ನಮ್ಮ ದೇಶ ರಕ್ಷಕನ ಸಾವು ನಮಗೆ ಹುತಾತ್ಮ ಎನಿಸಿದರೆ, ಎದುರಾಳಿಯದು ಕೇವಲ ಸಾವು ಮಾತ್ರ. ಇಬ್ಬರೂ ಮನುಷ್ಯರೇ ಆದರೂ ಒಂದು ಸಾವು ಸಂತಾಪ, ಮತ್ತೊಂದು ಸಾವು ಸಂಭ್ರಮ. ಇದೇ ಇಂದಿನ ಮಾನವನ ಮನಸ್ಥಿತಿ. ಜೀವಕ್ಕೆ ಮಿಡಿಯುವ ಮನಸು ಮಾಯವಾಗಿದೆ ಎಂಬ ಕವಿತೆ ಹೃದಯಕ್ಕೆ ನಾಟುತ್ತದೆ. ನಾವು ಹೀಗಿದ್ದೇವಲ್ವಾ… ! ಸರಿನಾ ? ಎನ್ನಿಸುವ ಭಾವ ಹುಟ್ಟಿಸುತ್ತದೆ.
“ಸಿಕ್ಕುವುದೇ ಬೇಡ ಕವಿತೆ”ಯಲ್ಲಿ ಮಿಲನದ ಸವಿ ಕಂಡವಳ ಮನಸು ಈ ಸ್ಪರ್ಶ ಆನಂದದಲ್ಲಿ ಮಿಂದವಳಿಗೆ ಈ ಮಹೋತ್ಸವಕ್ಕಿಂತ ಮುಂದಿನ ಕವಿತೆ ಬೇಡವೆನಿಸುವ ಭಾವ ಕವಿತೆಯಲ್ಲಿನ ಪಾತ್ರಕ್ಕೂ ಓದುಗನಿಗೂ ಉಕ್ಕಿದರೆ,
‘ಒಲವಾಗದಿರಲಿ ಎಂದುಕೊಂಡೇ
ನಿನ್ನತ್ತ ನೋಡುತ್ತೇನೆ’
‘ಥತ್’ ಇದೇನು ಪ್ರೀತಿಸುವ ವಯಸ್ಸೇ
ಎಂದುಕೊಳ್ಳುತ್ತ ನಿನ್ನಡಿಗಳಿಂದ
ಚಿತ್ತ ಬದಲಿಸುತ್ತೇನೆ..’
‘ಪ್ರೇಮಕ್ಕೂ ಕಾಲ ಮಿತಿಯೇ’
ಎಂದೆನಿಸಿ ಮತ್ತೆ
‘ಭಾವದಲೆಗಳ ತೇಲಿಬಿಡುತ್ತೇನೆ..’
‘ಹೀಗೆ ತೇಲುತ್ತ ತೇಲುತ್ತ ಮುಳುಗಿದರೆ’ “ಕ್ಷಮಿಸಿಬಿಡು” ಎಂಬ ಪ್ರೇಮೋದ್ವೇಗದ ಸಾಲುಗಳು ಓದುಗನನ್ನು ಆಕರ್ಷಿಸುತ್ತವೆ.
ಇನ್ನು “ಬಚ್ಚಿಟ್ಟ ಸದ್ದು” ಗತಕಾಲದ ಕಹಿ ಘಟನೆಯ ಮೆಲುಕಿನದ್ದಾಗಿದ್ದು,
“ಉರಿ ತಾಕುವುದು ಬರಿಯ ಚರ್ಮಕ್ಕಲ್ಲವೇ ಪುಟ್ಟಿ”
ಎಂಬಲ್ಲಿ ಸುಡುವುದು ಕೇವಲ ಬೆಂಕಿ ಮಾತ್ರವಲ್ಲ ಅದರ ಹೊರತಾಗಿ ಮನವನ್ನು ಉರಿಸುವ ಅಗ್ನಿಕುಂಡಗಳಿವೆ ಎಂಬ ಭಾವ ಮೂಡುತ್ತದೆ.
ಹೀಗೆ ಕೃತಿಯ ಪ್ರತಿ ಕವಿತೆಗಳೂ ವಿಭಿನ್ನ ನೆಲೆಯಲ್ಲಿ ಓದುಗನನ್ನು ಚಕಿತರನ್ನಾಗಿಸುತ್ತದೆ. ಈ ಕೃತಿಯ ಕವಿತೆಗಳಲ್ಲಿ ಕವಯಿತ್ರಿಯ ಸೃಜನಶೀಲತೆ ಇದೆ, ಅಂತಃಕರಣದ ಪ್ರತಿರೂಪ ಇದೆ, ನೋವನ್ನು ಕಂಡ ಮನಸಿನ ಮರಗುವಿಕೆ ಇದೆ, ಜಗದ ನಗ್ನ ಸತ್ಯಗಳ ಅನಾವರಣ ಇದೆ, ನಿತ್ಯ ಅನುಭವಿಸುವ ಭಾವದಲೆಗಳ ಮಿಡಿತ ಇದೆ.
ಇನ್ನೂ ಎಷ್ಟೇ ಹೇಳಿದರೂ ಈ ಲೇಖನದಲ್ಲಿ ಒಂದು ಅಪೂರ್ಣತೆಯಂತೂ ಇದ್ದೇ ಇದೆ. ಪ್ರತಿಯೊಂದು ಕವಿತೆಗಳನ್ನು ನಾನು ಓದಿ”ದಷ್ಟೇ”, ಭಾವ ಹೊಂದಿ”ದಷ್ಟೇ”, ಕಾವ್ಯದ ಸೊಬಗನ್ನು ಆರಾಧಿಸಿ”ದಷ್ಟೇ” ಇಲ್ಲಿ ವ್ಯಕ್ತಪಡಿಸಲು ಸಾಧ್ಯವಾಗಿಲ್ಲ. ಇದು ಸತ್ಯ ಎಂದು ಅರಿಯಬೇಕಾದವರು ಖಂಡಿತವಾಗಿ ಈ ಕೃತಿಯನ್ನು ಓದಲೇಬೇಕು, ನಾ ಓದಿದ ಅಷ್ಟೂ ಕವನ ಸಂಕಲನಗಳಲ್ಲಿ ಈ”ಅಷ್ಟೇ..”ಕೃತಿ ವಿಭಿನ್ನ ಮತ್ತು ಎತ್ತರದ್ದಾಗಿದೆ.
ಓದುಗನಲ್ಲಿ ಶಾಶ್ವತವಾಗಿ ಒಂದು ಸ್ಥಾನ ಪಡೆಯುವುದರಲ್ಲಿ ಈ ಕೃತಿ ಗೆಲ್ಲುತ್ತದೆ.
ಇಂತಹ ಮೇರು ಕೃತಿಯನ್ನು ನೀಡಿದ್ದಕ್ಕಾಗಿ ಮತ್ತು “ವಿಭಾ” ಸಾಹಿತ್ಯ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡದ್ದಕ್ಕಾಗಿ ದೀಪ್ತಿ ಅಕ್ಕನವರಿಗೆ ಅಭಿವಂದನೆಗಳನ್ನು ಅರ್ಪಿಸುವುದರೊಂದಿಗೆ ಇಂತಹ ಅನೇಕಾನೇಕ ಕವಿತೆಗಳು ಸಂಕಲನವಾಗಿ ಓದುಗನನ್ನು ಸೇರಲಿ, ಮತ್ತಷ್ಟು ಮೊಗದಷ್ಟು ಪ್ರಶಸ್ತಿಗಳು ಮುಡಿಸೇರಲಿ ಎಂದು ಹಾರೈಸುತ್ತಾ, ಕೃತಿಯ ಕುರಿತಾದ ನನ್ನ ಕೆಲವು ಅನುಭವದ ನುಡಿಗಳಿಗೆ ವಿರಾಮ ನೀಡುತ್ತೇನೆ.
-ವರದೇಂದ್ರ ಕೆ ಮಸ್ಕಿ
9945253030
ಕೃತಿಗಾಗಿ ಸಂಪರ್ಕಿಸಿ:-
– ದೀಪ್ತಿ ಭದ್ರಾವತಿ
90193 04191