ಗಝಲ್
ಅರುಣೋದಯ ಕಾಲದಿ ಇಳೆಗೆ ಕಿರಣಗಳು ತರುವುದು ಆರಂಭ
ಚರಣದ ಸಾಲುಗಳ ಮೊದಲು ಪಲ್ಲವಿಯು ಕಳೆ ತೋರುವುದು ಆರಂಭ.
ಸೃಷ್ಟಿಯ ಚರಾಚರಗಳಲಿ ದಿನವೂ ಹೊಸತು ಕಾಣುವುದು ಸಹಜವಲ್ಲವೇ
ವೃಷ್ಟಿಯು ಸುರಿದು ನಿಂತರೂ ಮರದಿ ಹನಿಗಳ ಸಂಗೀತ ಬೀರುವುದು ಆರಂಭ.
ಕೌಮುದಿ ರಾತ್ರಿಯಲಿ ಚಂದಿರನ ನೋಡುವುದೇ ಕಣ್ಣುಗಳಿಗೆ ಹಬ್ಬವು.
ಕೌದಿಯ ಹೊದ್ದು ಮಲಗಿದರೆ ತಾರೆಗಳ ಎಣಿಸದೆ ಮೀರುವುದು ಆರಂಭ.
ಕೋಳಿ ಕೂಗದ ಮುನ್ನ ಏಳದಿರೆ ಬೆಳಗಿನ ಹೊತ್ತು ಕೈಗೆ ಸಿಗಲಾರದು
ಚಾಳಿ ಬಿಡದ ಹೊರತು ಬಾಳು ಬಂಗಾರವಾಗದೇ ಸೋರುವುದು ಆರಂಭ.
ಹೇಗೇಗೋ ಸಾಗಿದರೆ ಗುರಿ ಮುಟ್ಟುವ ದಾರಿ ದೂರವಾಗುವುದು ಜಯಾ
ಹೋಗುವ ಊರ ಅರಿಯದಿರೆ ಮನದಿ ಚಿಂತೆ ದೂರುವುದು ಆರಂಭ.
–ಜಯಶ್ರೀ ಭ ಭಂಡಾರಿ.
ಬಾದಾಮಿ.