ಗುರು ಗುರುಮಹಾಂತ ಪೂಜ್ಯರು.
ಶರಣನೆಂದರೆ ಕೇವಲ ಜಪತಪಗಳಲ್ಲಿ ಮತ್ತು ಲಿಂಗಪೂಜೆಯಲ್ಲಿ ಕಳೆದು ಹೋಗುವ ಭಕ್ತನಲ್ಲ. ವೈಚಾರಿಕ ಪ್ರಜ್ಞೆಯಿಂದ ಕೂಡಿದ ಸಾಮಾಜಿಕ ಕಳಕಳಿ, ಬದ್ಧತೆ ಮತ್ತು ಜವಾಬ್ದಾರಿಯುಳ್ಳ ಒಬ್ಬ ಸಾಮಾನ್ಯ ಸದಸ್ಯ. ಅಂತವರಿಂದ ಮಾತ್ರ ಸಮಾಜದುದ್ಧಾರ ಸಾಧ್ಯ. ಅಂತಹ ಕಳಕಳಿಯುಳ್ಳ ಸದಸ್ಯನ ತನು, ಮನ, ಭಾವಗಳೆಲ್ಲವೂ ಸದಾ ಸಮಾಜದ ಹಿತಕ್ಕಾಗಿ ಮಿಡಿಯುತ್ತಿರುತ್ತವೆ.
ಅಂತಹ ಮಾನವೀಯ, ಸಮಾಜೋಧಾರ್ಮಿಕ ಕಳಕಳಿಯಿಂದ ಜೊತೆಗೆ ಬದ್ಧತೆಯಿಂದ ತನ್ನ ಮುಂದಿನ ಉತ್ತರಾಧಿಕಾರಿಯನ್ನು ತಮ್ಮ ತತ್ವ, ಉದ್ಧೇಶಗಳನ್ನು ಮುನ್ನಡೆಸಿಕೊಂಡು ಹೋಗಲು ಮಹಾಂತ ಜೋಳಿಗೆಯ ಹರಿಕಾರರು, ಬಸವ ತತ್ವ ದಂಡನಾಯಕರು, ಸಮಾಜ ಪರಿವರ್ತನೆಯ ಹರಿಕಾರರು ಆದ ಡಾ|| ಮಹಾಂತಪ್ಪನವರು ತಮ್ಮ ಉತ್ತರಾಧಿಕಾರಿಯನ್ನು ತಾವು ಬಯಸಿದ ಉನ್ನತ ವ್ಯಕ್ತಿತ್ವದ ಮಾನವೀಯ ಮೌಲ್ಯಗಲುಳ್ಳ, ಬಸವ ಭಕ್ತರು, ವಿನಯಶೀಲರು, ಮಗುವಿನ ಮನದ ಪರಮ ಪೂಜ್ಯ ಗುರುಮಹಾಂತ ಅಪ್ಪನವರನ್ನು ಬಹು ಜವಾಬ್ದಾರಿಯಿಂದ ಸಮುದ್ರದಾಳದಲ್ಲಿ ಮುತ್ತನ್ನು ಅರಸುವಂತೆ ಅರಸಿ ತಂದರು.
ಸರಳ ಸಜ್ಜನಿಕೆಯ ಸಾಕಾರ ಮೂರ್ತಿಗಳಾದ ಪರಮ ಪೂಜ್ಯ ಗುರುಮಹಾಂತಪ್ಪಗಳವರ ಕುರಿತು ಹೇಳುವುದೇಂದರೆ ಸಮುದ್ರದ ನೀರನ್ನು ಬೋಗಸೆಯಲ್ಲಿ ಹಿಡಿಯಲು ಪ್ರಯತ್ನಿಸಿದಂತೆ. ಸಮನ್ವಯ ಕವಿ ಚನ್ನವೀರ ಕಣವಿ ಯವರು ಶರಣೆ ನೀಲಾಂಬಿಕೆಯ ಕುರಿತು ಒಂದು ಕವನದಲ್ಲಿ ಹೇಳುವಂತೆ “ಸದುವಿನಯದ ತುಂಬಿದ ಕೊಡ ತಂದಳು ನೀಲಾಂಬಿಕೆ”. ಅದೇ ರೀತಿ ನಮ್ಮ ಪೂಜ್ಯರು ಕೂಡ ಸದು ವಿನಯದ ತುಂಬಿದ ಕೊಡ . ಸರಳ ಸಜ್ಜನಿಕೆಯ ಸಾಕಾರಮೂರ್ತಿಗಳು. ಸದಾ ಹಸನ್ಮುಖಿಗಳು. ದಣಿವರಿಯದ ಶಿವಯೋಗಿ, ಅರಿವಿನ ಸದ್ಗುರ, ಬಸವತತ್ವ ದಂಡನಾಯಕರು, ಬಸವಾದಿ ಶರಣರ ವೈಚಾರಿಕ ನಿಲುವಿಗೆ ಬದ್ಧರಾಗಿ ನಿಂತವರು.
ಡಾ || ಮಾಂಹತಪ್ಪನವರ ತತ್ವಗಳಿಗೆ ನಿಷ್ಟೆಯಿಂದ ನಡೆಯುತ್ತಿರುವ ನಿಷ್ಟಾವಂತ ನಾಯಕ. 20 ನೇ ಪೀಠಾಧಿಪತಿಗಳಾದ ಸಾದಾ ಬಸವ ಚಿಂತನೆಯಲ್ಲಿ ತೊಡಗಿರುವ ಸಮಾಜವನ್ನು ವೈಚಾರಿಕತೆಯತ್ತ ಮುನ್ನಡೆಸುತ್ತಿರುವ ಪರಮ ಪೂಜ್ಯ ಶ್ರೀ ಮನ್ ನಿರಂಜನ ಪ್ರಣವ ಸ್ವರೂಪಿ ಗುರುಮಹಾಂತ ಪೂಜ್ಯರು.
ನಮ್ಮ ಪೂಜ್ಯರು ಜನಿಸಿದ್ದು ಈಗಿನ ಗದಗ ಜಿಲ್ಲೆ ನರಗುಂದದಲ್ಲಿ. ಇವರು ಜನಿಸಿದಾಗ ಧಾರವಾಡದ ಪೂಜ್ಯರಾದ ಶಿವಮೂರ್ತಿ ಮಹಾಸ್ವಾಮಿಗಳು “ಜೀವನಾ ಆಗಬೇಡಪಾ, “ಶಿವನಾಗು” ಅಂತಾ ಆಶೀರ್ವದಿಸಿದ್ದರಂತೆ. ಆದ್ದರಿಂದ ಇವರಿಗೆ “ಶಿವನಾಗಪ್ಪ” ಅಂತಾ ಹೆಸರಿಟ್ಟರು. ಬಾಲ್ಯದಿಂದಲೇ ಇವರ ಮನೆಯಲ್ಲಿ ಆಧ್ಯಾತ್ಮದ ಪರಿಸರವಿತ್ತು. ಹೀಗಾಗಿ ಇವರಿಗೆ ಆಧ್ಯಾತ್ಮದಲ್ಲಿ ಒಲವು ಬೆಳೆಯಿತು. ಅವರ ಪ್ರಾಥಮಿಕ ಮತ್ತು ಪ್ರೌಢ ಮತ್ತು ಪದವಿಪೂರ್ವ ಶಿಕ್ಷಣ ನರಗುಂದದಲ್ಲಿಯೇ ಆಯಿತು. ಇವರು ಪಠ್ಯದಲ್ಲಿ ಮಾತ್ರವಲ್ಲದೆ ಪಠೇತರ ಚಟುವಟಿಕೆಗಳಲ್ಲಿಯೂ ಮುಂದಿದ್ದರು. ಮುಂದೆ ಪದವಿ ಶಿಕ್ಷಣವನ್ನು ಧಾರವಾಡದ ಮುರಘಾಮಠದ ವಸತಿ ನಿಲಯದಲ್ಲಿ ಇದ್ದು ಬಿಎ ಎಲ್ ಎಲ್ ಬಿ ಪದವಿಧರರಾದರು. ಮುರಘಾ ಮಠದಲ್ಲಿದ್ದಾಗ ಅಲ್ಲಿ ಪ್ರತಿದಿನ ಬೆಳಿಗ್ಗೆ ಎಲ್ಲ ವಿಧ್ಯಾರ್ಥಿಗಳನ್ನು ಎಬ್ಬಿಸಿ ಪ್ರಾರ್ಥನೆಗೆ ಕೂಡಿಸುವದು, ಪ್ರಸಾದ ಬಡಿಸುವದು, ಸಂಜೆ ಶಿವಾನುಭವ ಗೋಷ್ಠಿಗಳನ್ನು ಮಾಡುವದು ಪೂಜ್ಯರ ಸೇವೆಯನ್ನು ಭಕ್ತಿಯಿಂದ ಮಾಡುವದು ಇವರ ದಿನನಿತ್ಯದ ಕಾರ್ಯಗಳಾಗಿದ್ದವು. ಆಗಲೇ ಅಲ್ಲಿಯ ವಿದ್ಯಾರ್ಥಿಗಳು ಇವರನ್ನು “ಶಿವದೇವರು” ಎಂದು ಕರೆಯುತ್ತಿದ್ದರು. ಶ್ರೀ ಮುರಘಾ ಮಠದಲ್ಲಿ ಸತತ 10 ವರ್ಷಗಳ ಕಾಲ “ಅಖಿಲ ಭಾರತ ಶಿವಾನುಭವ ಸಂಸ್ಥೆಯಲ್ಲಿ” ಸಾಧಕರಾಗಿ, ಬೋಧಕರಾಗಿ, ಚಿಂತಕರಾಗಿ ಸೇವೆಗೈದರು. ಮುಂದೆ 1991 ರಲ್ಲಿ ಚಿತ್ರದುರ್ಗದ ಶ್ರೀ ಶಿವಮೂರ್ತಿ ಮುರುಘರಾಜೇಂದ್ರ ಮಹಾಸ್ವಾಮಿಗಳ ಅಪ್ಪಣೆಯ ಮೇರೆಗೆ ಧಾರ್ಮಿಕ, ಸಾಮಾಜಿಕ, ಆಧ್ಯಾತ್ಮಿಕ ಕಾರ್ಯಗಳ ಕೈಂಕರ್ಯವನ್ನು ವಹಿಸಿಕೊಂಡು ಬಸವಕೇಂದ್ರಗಳ ನಿರ್ಮಾಣ, ಮನೆಯಲ್ಲಿ ಮಹಾಮನೆ ವಚನ ಗೋಷ್ಟಿಗಳು, ಸಹಜ ಶೀವಯೋಗ ಶಿಬಿರ, ಶರಣ ಸಂಸ್ಕೃತಿ ಕಾರ್ಯಕ್ರಮಗಳು, ಬಸವೇಶ್ವರ ಗ್ರಾಮ ವಿಕಾಸ ಕಾರ್ಯಕ್ರಮಗಳು, ಬಸವತತ್ವ ಮಹಾವಿದ್ಯಾಲಯ ಪಾಠ ಪ್ರವಚನಗಳು, ವಚನ ಕಮ್ಮಟ ಪರೀಕ್ಷೆಗಳು, ಹೀಗೆ ಹತ್ತ್ತು ಹಲವಾರು ಕಾರ್ಯಕ್ರಮಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು “ಶ್ರೀ ಶಿವಮೂರ್ತಿ ಮುರುಗರಾಜೇಂದ್ರ ಪೂಜ್ಯರಿಂದ” ಜಂಗಮ ದೀಕ್ಷೆ ಪಡೆದು “ಶ್ರೀ ಸಿದ್ಧರಾಮ” ಶರಣರಾದರು. ಬಸವತತ್ವ ಪ್ರಸಾರದಲ್ಲಿ ತಮ್ಮನ್ನು ಸಂಪೂರ್ಣ ತೊಡಗಿಸಿಕೊಂಡರು. ಪೂಜ್ಯರ ಜೊತೆ ಸೇರಿ ದೇಶ ವಿದೇಶಗಳನ್ನು ಸುತ್ತುತ್ತ ಬಸವತತ್ವ ಪ್ರಾಚಾರ, ಜಾಗತಿಕ ಸೌಹಾರ್ಧತೆ, ವಿಶ್ವಶಾಂತಿ ಯಾತ್ರೆಗಳಲ್ಲಿ ಪಾಲ್ಗೊಂಡು ಬಸವ ತತ್ವ ಹೆಮ್ಮರವಾಗಿ ಬೆಳೆಯುವಲ್ಲಿ ಶ್ರಮಿಸಿದರು.
ಮುಂದೆ ಇವರು ನಮ್ಮ ಶ್ರೀಮಠಕ್ಕೆ ಪೂಜ್ಯರಾದದ್ದು ಒಂದು ಇತಿಹಾಸವನ್ನೆ ನಿರ್ಮಾಣಮಾಡಿತು. ಪರಮ ಪೂಜ್ಯ ಡಾ|| ಮಹಾಂತಪ್ಪನವರ ದಿವ್ಯ ಸಂಕಲ್ಪದಂತೆ ಜಾತಿಯಿಂದ ಜಂಗಮರಲ್ಲದವರನ್ನು ಶರಣ ಸೇವಾ ಸಂಸ್ಕಾರ ಪಡೆದವರನ್ನು ನಮ್ಮ ಮಠಕ್ಕೆ ಪೂಜ್ಯರನ್ನಾಗಿ ತರಬೇಕೆಂಬ ಸದಿಚ್ಛೆಯನ್ನು ಹೊಂದಿದ್ದರು. ಇದಕ್ಕೆ ಎಷ್ಟೊ ಜನರ ವಿರೋಧವಿತ್ತು. ಅದರ ಮಧ್ಯದಲ್ಲಿಯೂ ತಮ್ಮ ಧೃಢಸಂಕಲ್ಪವನ್ನು ಬಿಡದೆ 12/09/2004 ರಂದು ಪಾಂಡೊಮಟ್ಟಿ ಪೂಜ್ಯರ ಲಿಂಗಹಸ್ತದಿಂದ ಅತ್ಯಂತ ವಿಜೃಂಬಣೆಯಿಂದ ನಡೆದ ಸಮಾರಂಭದಲ್ಲಿ “ಸಮಾಜ ಸೇವಾ ದೀಕ್ಷೆಯನ್ನು” ಪಡೆದು ಶ್ರೀ ಸಿದ್ದರಾಮ ಶರಣರು ಶ್ರೀ ಮ ನಿ ಪ್ರ ಗುರುಮಹಾಂತ ಪೂಜ್ಯರಾದರು
ಡಾ|| ಮಹಾಂತಪಪ್ನವರು ನಡೆದುಬಂದ ದಾರಿಯಲ್ಲಿಯೇ ಮುನ್ನಡೆಯುತ್ತಿರುವ ದಣಿವರಿಯದ ಕಾಯಕಯೋಗಿ. ಶರಣ ಸಿದ್ಧಾಂತ ವಿದ್ಯಾಪೀಠದ ಮೂಲಕ ಬಸವ ತತ್ವದ ಮೂಲ ಆಚರಣೆಗಳನ್ನು ಭಕ್ತರಿಗೆ ತಿಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಶ್ರೀ ವಿಜಯ ಮಹಾಂತ ಶಿವಯೋಗಿಗಳ ಶತಮಾನೋತ್ಸವವನ್ನು ಬಹಳ ಅದ್ಧೂರಿಯಾಗಿ ಮತ್ತು ಅರ್ಥಪೂರ್ಣವಾಗಿ ನಭೂತೊ ನಭವಿಷ್ಯತಿ ಎನ್ನುವ ರೀತಿಯಲ್ಲಿ ಆಚರಿಸಿದರು.
ಕರೋನಾದ ಭೀಕರ ಸಮಯದಲ್ಲಿ ಸತತ 45 ದಿನಗಳಕಾಲ ಎಲ್ಲ ಬಡ ಜನತೆಗೆ ಪ್ರಸಾದದ ವ್ಯವಸ್ಥೆಯನ್ನು ಮಾಡಡಿಸಿದರು, ಪ್ರತಿ ಅಮವಾಸೆಯಂದು ಬೆಳಿಗ್ಗೆ ಒಂದೊಂದು ಸ್ಥಳಕ್ಕೆ ಭೇಟಿನೀಡಿ “ಮಹಾಂತ ಜೋಳಿಗೆಯ” ಮೂಲಕ ದುಷ್ಚಟಗಳನ್ನು ಬೇಡುವದು, ಮತ್ತು ಲಿಂಗವಿಲ್ಲದವರಿಗೆ ಲಿಂಗವನ್ನು ಕಟ್ಟುವದು ಮತ್ತು ರಾತ್ರಿ ಶಿವಾನುಭವ ಗೋಷ್ಟಿಯನ್ನು ನಡೆಸುವದು ಇದು ನಿರಂತರ ಪ್ರಕ್ರಿಯೆಯಾಗಿ ನಡೆದುಬಂದಿದೆ. ಪ್ರತಿ ವರ್ಷ ಶ್ರಾವಣದಲ್ಲಿ ಉತ್ತಮ ಪ್ರವಚನಕಾರರನ್ನು ಜೊತೆಗೆ ಉತ್ತಮ ಚಿಂತಕರನ್ನು ಕರೆಸಿ ಅವರಿಂದ ಅನುಭಾವವನ್ನು ನಿಡಿಸುವುದರ ಮೂಲಕ ನಮ್ಮ ಜ್ಞಾನದ ಪರೀದಿಯನ್ನು ವಿಸ್ತರಿಸಿದ್ದಾರೆ. ನಮ್ಮ ಅಕ್ಕನ ಬಳಗದ ಎಲ್ಲ ಕಾರ್ಯ ಚಟುವಟಿಕೆಗಳಿಗೆ ಮಾರ್ಗದರ್ಶಕರಾಗಿ, ಬೆನ್ನೆಲುಬಾಗಿ ನಿಂತಿದ್ದಾರೆ. ಸರಕಾರದಿಂದ ಕೊಡಮಾಡುವ ಸಂಯಮ ಪ್ರಶಸ್ತಿ, ಶ್ರೀರಮಣ ಪ್ರಶಸ್ತಿ ಅನೇಕ ಉನ್ನತ ಪ್ರಶಸ್ತಿಗಳು ನಮ್ಮ ಪೂಜ್ಯರ ಮುಡಿಯನ್ನು ಅಲಂಕರಿಸಿದೆ.
ಮಾತೃ ಹೃದಯ, ಮುಗ್ದ ಮನಸ್ಸು, ಸರಳ ವ್ಯಕ್ತಿತ್ವ, ಸದಾ ಉನ್ನತ ಚಿಂತನೆ, ಜನಸಾಮಾನ್ಯರಲ್ಲಿ ಸದಾ ಲಿಂಗಪ್ರಜ್ಞೆಯನ್ನು ಜಾಗೃತವಾಗಿಸಬೇಕೆಂಬ ತುಡಿತ, ಮೌಢ್ಯತೆಯನ್ನು ತೊಡೆದು ವೈಚಾರಿಕತೆಯನ್ನು ಬಿತ್ತುವ ಹಂಬಲ, ಸದಾ ಸಮಾಜಮುಖಿ ಚಿಂತನೆಯಿಂದ ಕೂಡಿದ ಪೂಜ್ಯರ ಉನ್ನತ ವ್ಯಕ್ತಿತ್ವ ಜಗಕೆಲ್ಲ ಮಾದರಿ. ಇಂತಹ ಪೂಜ್ಯರನ್ನು ಪಡೆದ ನಾವೇ ಧನ್ಯರು. ಶರಣು ಶರಣಾರ್ಥಿಗಳು.
–ಸವಿತಾ ಮಾಟೂರು ಇಳಕಲ್