ಅಕ್ಕ ನಾಗಮ್ಮ

ಅಕ್ಕ ನಾಗಮ್ಮ

ಹನ್ನೆರಡನೆಯ ಶತಮಾನದ ಶಿವಶರಣೆಯರಲ್ಲಿ ಅಗ್ರಗಣ್ಯಳಾದ ಶಿವಶರಣೆ ಅಕ್ಕನಾಗಮ್ಮ ಮಾದರಸ ಮತ್ತು ಮಾದಲಾಂಬಿಕೆಯವರ ಮಗಳು, ಅಣ್ಣ ಬಸವಣ್ಣನವರ ಸಹೋದರಿ. ಅಕ್ಕನಾಗಮ್ಮನವರ ಪತಿಯ ಹೆಸರು ಶಿವದೇವ ಎಂಬುದಾಗಿತ್ತು ಎಂದು ತಿಳಿದು ಬರುತ್ತದೆ.

ಗುರು ಕಪ್ಪಡಿ ಸಂಗಮದ ಜಾತವೇದ ಸ್ವಾಮಿಗಳು. ಭೀಮಕವಿಯ ಬಸವ ಪುರಾಣ ದಲ್ಲಿ, ವಿರೂಪಾಕ್ಷ ಪಂಡಿತರ ಚೆನ್ನಬಸವ ಪುರಾಣ ದಲ್ಲಿ, ಪುರಾತನ ದೇವಿಯರ ತ್ರಿಪದಿ ಗ್ರಂಥಗಳಲ್ಲಿ ಅಕ್ಕನಾಗಮ್ಮನ ಹೆಸರನ್ನು ಕಾಣುತ್ತೇವೆ.

ಅಕ್ಕನಾಗಮ್ಮನನ್ನು ಅಕ್ಕನಾಗಾಯಿ, ನಾಗಲಾಂಬಿಕೆ, ನಾಗಮ್ಮ ಎಂದು ಕರೆಯಲಾಗಿದೆ. ಬಾಗೇವಾಡಿಯ ಇಂಗಳೇಶ್ವರ ಇವಳ ಜನ್ಮಸ್ಥಳವಾಗಿದೆ. ಕಾಲ 1160.

ಬಸವಣ್ಣಪ್ರಿಯ ಚೆನ್ನಸಂಗಯ್ಯಎಂಬ ಅಂಕಿತನಾಮದಲ್ಲಿ ಅಕ್ಕನಾಗಮ್ಮನವರು ರಚಿಸಿದ ಸುಮಾರು 15 ವಚನಗಳು ಲಭ್ಯವಾಗಿವೆ.

ಅಕ್ಕನಾಗಮ್ಮನವರ ಜೀವನದಲ್ಲಿ ಬಂದಂತಹ ಎಡರು-ತೊಡರು, ಸವಾಲುಗಳು, ಅವುಗಳನ್ನು ಎದುರಿಸಿದ ರೀತಿ-ನೀತಿ ಎಲ್ಲ ಈ ವಚನಗಳಲ್ಲಿ ಬಿಂಬಿತವಾಗಿವೆ. ಅಣ್ಣ ಬಸವಣ್ಣನವರ ಸ್ತುತಿಪರವಾದ ವಚನಗಳು, ಅದರ ಜೊತೆ ಜೊತೆಗೆ ಇತರ ಶರಣರ ಪ್ರಸ್ತಾಪವನ್ನೂ ಕೂಡಾ ನಾವು ಈ ವಚನಗಳಲ್ಲಿ ಕಾಣುತ್ತೇವೆ.

ಮಹಾಮನೆ ಮತ್ತು ಅನುಭವ ಮಂಟಪದ ಜೀವಾಳವಾಗಿ, ಅನ್ನಪೂರ್ಣೆಯಾಗಿ ಅನುಕರಣೀಯ ಸೇವೆಯನ್ನು ನೀಡಿದ ಶ್ರೇಯಸ್ಸು ಶರಣೆ ಅಕ್ಕನಾಗಮ್ಮನವರದ್ದಾಗಿದೆ. ಕಲ್ಯಾಣ ಕ್ರಾಂತಿಯ ನಂತರ ಶರಣರು ಬೇರೆ ಬೇರೆ ದಿಕ್ಕಿನತ್ತ ಸಾಗಿದರು. ಅಕ್ಕನಾಗಮ್ಮ ಕೂಡ ತಾವೂ ಒಂದು ಶರಣಪಡೆಯ ನೇತೃತ್ವ ವಹಿಸಿ ಉಳವಿಯ ಕಡೆಗೆ ಪ್ರಯಾಣ ಬೆಳೆಸಿದರು. ಹರಳಯ್ಯ ಮತ್ತು ಮಧುವರಸರ ಮರಣ ದಂಡನೆಯ ನಂತರ ಭುಗಿಲೆದ್ದ ಗೊಂದಲಗಳ ಗೂಡಿನಲ್ಲಿ ಶರಣರಿಗೆ ಮಾರ್ಗದರ್ಶನ ನೀಡಿ ಧೈರ್ಯ ತುಂಬಿದ ಎದೆಗಾರ್ತಿ ಅಕ್ಕನಾಗಮ್ಮ. ಕಲ್ಯಾಣದಿಂದ ಉಳವಿಗೆ ವಚನಗಳ ಹಸ್ತಪ್ರತಿಗಳ ಕಟ್ಟುಗಳನ್ನು ಹೊತ್ತ ಶರಣರ ಪಡೆಯ ಮುಂದಾಳತ್ವ ವಹಿಸಿ ಧೈರ್ಯದಿಂದ ಮುನ್ನಡೆಸಿದಳು.

ಬಸವಣ್ಣನವರ ಭವಿಷ್ಯ ರೂಪಿಸುವಲ್ಲಿ ಕೂಡಾ ನಾಗಲಾಂಬಿಕೆ ಮಹತ್ವದ ಪಾತ್ರ ವಹಿಸುತ್ತಾಳೆ. ಗುರು ರೇವಣಸಿದ್ಧೇಶ್ವರರ ಮಾರ್ಗದರ್ಶನದಲ್ಲಿ ಬಾಲ್ಯಜೀವನದಲ್ಲಿ ಬಾಗೇವಾಡಿಯ ಇಂಗಳೇಶ್ವರದಲ್ಲಿಯೇ ಶಿವಭಕ್ತಿ ಮತ್ತು ಯೋಗಸಾಧನೆಯಲ್ಲಿ ತೊಡಗುತ್ತಾಳೆ. ಅಕ್ಕನಿಗಿಲ್ಲದ ಉಪನಯನ ನನಗೂ ಬೇಡವೆಂದು ಬಸವಣ್ಣನವರು ಧಿಕ್ಕರಿಸುತ್ತಾರೆ. ಬಸವಣ್ಣನವರ ಅನೇಕ ಕ್ರಾಂತಿಕಾರಕ ಬದಲಾವಣೆಗಳಿಗೆ ಅಕ್ಕನಾಗಮ್ಮ ಪ್ರೇರಣೆಯ ಸ್ರೋತ್ರವಾಗಿದ್ದಾಳೆ.

ಉಳವಿಯಿಂದ ಹೊರಟು ಚಿಕ್ಕಮಗಳೂರು ಜಿಲ್ಲೆ ಎಣ್ಣೆಹೊಳೆ ತೀರದ ತರೀಕೆರೆಯಲ್ಲಿ ವಯೋಸಹಜ ಧರ್ಮದಿಂದ ಬಳಲಿದ್ದ ಅಕ್ಕನಾಗಮ್ಮನವರು ಶಿವಯೋಗಸಾಧನೆ ಮಾಡುತ್ತ ಒಂದು ದಿನ ಬೆಳಕಿನಲ್ಲಿ ಬೆಳಕಾಗಿ ಲೀನವಾಗುವಳು.

ಅಕ್ಕನಾಗಮ್ಮನವರ ವಚನಗಳು ಆತ್ಮನಿವೇದನೆಯ ರೂಪದಲ್ಲಿದ್ದು ಅನೇಕ ಶರಣರನ್ನು ಅವಳು ತನ್ನ ವಚನಗಳಲ್ಲಿ ಸ್ಮರಿಸಿದ್ದಾಳೆ. ಅಂತೆಯೇ ಅಕ್ಕನಾಗಮ್ಮನವರ ಸಮಕಾಲೀನ ಶರಣರೂ, ಅನೇಕ ವಚನಕಾರರೂ ಕೂಡಾ ತಮ್ಮ ವಚನಗಳಲ್ಲಿ ಅಕ್ಕನಾಗಮನನ್ನು ಸ್ಮರಿಸಿದ್ದಾರೆ. ನನ್ನವ್ವೆ ನಾಗಾಯಿ ಎಂದು ಮರುಳಶಂಕರದೇವರು ನುಡಿದರೆ, ಎನ್ನ ಮುದ್ದಾಡಿಸಿದರಯ್ಯ ಅಕ್ಕನಾಗಮ್ಮನವರು ಎಂದು ಕೋಲ ಶಾಂತಯ್ಯನವರು ಹೇಳಿದ್ದಾರೆ. ಅಕ್ಕನಾಗಮ್ಮನ ಪ್ರಸಾದವ ಕೊಂಡು ಎನ್ನ ಅಂತರಂಗ ಶುದ್ಧಿಯಾಯಿತಯ್ಯ ಎಂದು ಆಯ್ದಕ್ಕಿ ಲಕ್ಕಮ್ಮ ಹೇಳಿದರೆ,

ಸಂಗಯ್ಯನಲ್ಲಿ ಸ್ವಯಂಲಿಂಗಿಯಾದೆಯಾ ಅಕ್ಕನಾಗಮ್ಮ ತಾಯೆ? ಎಂದು ನೀಲಮ್ಮನವರು ನೆನದಿದ್ದಾರೆ.

12 ನೆಯ ಶತಮಾನದಲ್ಲಿ ವಚನ ಸಾಹಿತ್ಯವನ್ನು ರಕ್ಷಿಸಲು ಬಿಜ್ಜಳ ದೊರೆಗಳೆದುರಿನಲ್ಲಿ ಹೋರಾಡಿದ, ವಚನ ಹಾಗೂ ಧರ್ಮ ರಕ್ಷಣೆಗೆ ಜೀವನಪೂರ್ತಿ ಗಂಧದ ಕೊರಡಿನಂತೆ ಜೀವತೇದ ಅಕ್ಕನಾಗಮ್ಮನವರ ಜೀವನ ಹೋರಾಟ ಇಂದಿನ, ಮುಂದಿನ ಪೀಳಿಗೆಗೆ ದಾರಿದೀಪವಾಗಿದೆ. ಅಕ್ಕನಾಗಮ್ಮ ತಮ್ಮ ವಚನದಲ್ಲಿ ಅಣ್ಣ ಬಸವಣ್ಣನ ಕುರಿತು,

ಬಸವಣ್ಣಾ, ನೀವು ಮರ್ತ್ಯಕ್ಕೆ ಬಂದು ನಿಂದಡೆ
ಭಕ್ತಿಯ ಬೆಳವಿಗೆ ದೆಸೆದೆಸೆಗೆಲ್ಲಾ ಪಸರಿಸಿತ್ತಲ್ಲಾ!
ಅಯ್ಯಾ, ಸ್ವರ್ಗ- ಮರ್ತ್ಯ -ಪಾತಾಳದೊಳಗೆಲ್ಲಾ
ನಿಮ್ಮ ಭಕ್ತಿಯ ಬೆಳವಿಗೆಯ ಘನವನಾರು ಬಲ್ಲರು?
ಅಣ್ಣಾ, ಶಶಿಧರನಟ್ಟಿದ ಮಣಿಹ ಪೂರೈಸಿತ್ತೆಂದು
ನೀವು ಲಿಂಗೈಕ್ಯವಾದೊಡೆ ನಿಮ್ಮೊಡನೆ ಭಕ್ತಿ ಹೋಯಿತ್ತಯ್ಯಾ!
ನಿಮ್ಮೊಡನೆ ಅಸಂಖ್ಯಾತ ಮಹಾಗಣಂಗಳು ಹೋದರಣ್ಣಾ
ಮರ್ತ್ಯ ಲೋಕದ ಮಹಾಮನೆ ಶೂನ್ಯವಾಯಿತ್ತಲ್ಲಾ ಬಸವಣ್ಣಾ
ಎನ್ನನೊಯ್ಯದೆ ಹೋದೆಯಲ್ಲಾ ಪಂಚಪರುಷ ಮೂರ್ತಿ ಬಸವಣ್ಣಾ
ಬಸವಣ್ಣಪ್ರಿಯ ಚೆನ್ನಸಂಗಯ್ಯಂಗೆ

ಎಂದು ಹಲುಬುತ್ತಾಳೆ. ಹೀಗೆ ಬಸವಣ್ಣನವರ ಸ್ತುತಿಪರವಾದ ವಚನಗಳಲ್ಲಿ ಅಕ್ಕನಾಗಮ್ಮನ ಹೃದಯಸ್ಪರ್ಶಿ ನುಡಿಗಳು ವ್ಯಕ್ತವಾಗಿವೆ. ಕಲ್ಯಾಣಕ್ರಾಂತಿಯ ನಂತರ ಬಸವಣ್ಣನವರು ಕಲ್ಯಾಣ ತ್ಯಜಿಸಿ ಕೂಡಲಸಂಗಮಕ್ಕೆ ಹೋಗಿ ಸಂಗಮನಾಥನಲ್ಲಿ ಐಕ್ಯವಾಗುತ್ತಾರೆ. ಸಂತಾಪ, ದುಃಖ, ತಳಮಳ, ಹಲುಬುವಿಕೆಯ ಜೊತೆಜೊತೆಗೆ ಪರಿಪರಿಯಾಗಿ ಬಸವಣ್ಣನವರಲ್ಲಿರುವ ಸದ್ಗುಣಗಳನ್ನು ಹಿರಿಮೆ ಗರಿಮೆಯನ್ನು ಕೊಂಡಾಡುತ್ತ, ವಿಲಪಿಸುವ, ಯಾತನಾಮಯ ಯಾಚನೆಯ ಭಾವ, ಆರ್ದ್ರ ಹೃದಯದ ವೇದನೆ-ಸಂವೇದನೆ ಈ ವಚನದಲ್ಲಿ ಬಿಂಬಿತವಾಗಿದೆ:

ಬಸವಣ್ಣಾ, ನೀವು ಮರ್ತ್ಯಕ್ಕೆ ಬಂದು ನಿಂದೆಡೆ
ಭಕ್ತಿಯ ಬೆಳವಿಗೆ ದೆಸೆದೆಸೆಗೆಲ್ಲಾ ಪಸರಿಸಿತ್ತಲ್ಲಾ

ಅಣ್ಣ ಬಸವಣ್ಣನವರಿಂದಲೇ ಈ ಭೂಮಿಗೆ ಭಕ್ತಿಯ ಬೆಳಕು ಬಂದಿತ್ತೆಂದು ಹೇಳುತ್ತಾಳೆ. ಗುರು-ಲಿಂಗ-ಜಂಗಮ ಪೂಜೆಗೆ, ಅಂಗಾಂಗ ಸಾಮರಸ್ಯ ಸುಧೆಗೆ ಬಸವಣ್ಣನೇ ಮೊದಲಿಗನೆಂದು ನುಡಿಯುತ್ತಾಳೆ.

ಅಯ್ಯಾ, ಸ್ವರ್ಗ-ಮರ್ತ್ಯ ಪಾತಾಳದೊಳಗೆಲ್ಲಾ
ನಿಮ್ಮ ಭಕ್ತಿಯ ಬೆಳವಿಗೆಯ ಘನವನಾರು ಬಲ್ಲರು?

ಮರ್ತ್ಯಕ್ಕಿಳಿದ ಮಹಾಬೆಳಕೊಂದು ಬೆಳಕಿನಲ್ಲಿ ಲೀನವಾಯಿತು. ತ್ರಿಲೋಕಗಳಲ್ಲಿ ಅಂದರೆ ಸ್ವರ್ಗ, ಭೂಲೋಕ, ಪಾತಾಳ ಲೋಕದಲ್ಲಿ ಪಸರಿಸಿರುವ ಭಕ್ತಿಯ ಬೆಳಕು ಅದ್ಭುತವಾದದ್ದು, ಅನನ್ಯವಾದದ್ದು, ಅಪಾರವಾದದ್ದು ಎಂದು ಹೇಳಿದ್ದಾಳೆ. ಮೂರು ಲೋಕಗಳಲ್ಲಿ ಭಕ್ತಿಯ ಏಳಿಗೆಯಾಗಿ ಜೀವನ ಪಾವನವಾಯಿತು. ಇದು ಯಾರಿಗೆ ತಾನೇ ಗೊತ್ತಿಲ್ಲ ಎಂದು ಪ್ರಶ್ನಿಸುತ್ತಾಳೆ.

ಅಣ್ಣಾ, ಶಶಿಧರನಟ್ಟಿದ ಮಣಿಹ ಪೂರೈಸಿತ್ತೆಂದು
ನೀವು ಲಿಂಗೈಕ್ಯವಾದೊಡೆ ನಿಮ್ಮೊಡನೆ ಭಕ್ತಿಹೋಯಿತ್ತಯ್ಯಾ!

ಆ ಪರಶಿವನು ಅಂದರೆ ಶಶಿಧರನು ಒಂದು ಒಳ್ಳೆಯ ಪುಣ್ಯಕಾರ್ಯಕ್ಕಾಗಿ ನಿಮ್ಮನ್ನು ಭೂಲೋಕಕ್ಕೆ ಕಳುಹಿದರು. ಆ ನಿಮ್ಮ ಕಾರ್ಯ ಸಂಪನ್ನಗೊಂಡ ನಂತರ, ನೀವು ಲಿಂಗೈಕ್ಯರಾದ ಬಳಿಕ ನಿಮ್ಮ ಜೊತೆ ಜೊತೆಯಲ್ಲೇ ಆ ಭಕ್ತಿಯೂ ಹೋಯಿತು. ಅಸಂಖ್ಯಾತ ಶಿವಶರಣ-ಶರಣೆಯರನ್ನು ಕಳೆದುಕೊಂಡ ಈ ಲೋಕ ಅನಾಥವಾಯಿತು ಎಂದಿದ್ದಾಳೆ.

ನಿಮ್ಮೊಡನೆ ಅಸಂಖ್ಯಾತ ಮಹಾಗಣಂಗಳು ಹೋದರಣ್ಣಾ
ಮರ್ತ್ಯ ಲೋಕದ ಮಹಾಮನೆ ಶೂನ್ಯವಾಯಿತ್ತಲ್ಲಾ ಬಸವಣ್ಣಾ

ಬಸವಣ್ಣನೆಂಬ ಬೆಳಕು ಬೆಳಕಿನಲ್ಲಿ ಲೀನವಾದಾಗ, ಆ ದಿವ್ಯ ಭಕ್ತಿಯ ಬೆಳಕಿನ ಪ್ರಭೆಯಲ್ಲಿ ಮಿಂದಂಥ ದಿವ್ಯಾತ್ಮರಾದ ಶರಣರೂ ಕೂಡಾ ಆ ಬೆಳಕನ್ನು ಹಿಂಬಾಲಿಸಿ ಅದರಲ್ಲೇ ಅವರೂ ಲೀನವಾಗುತ್ತಾರೆ. ಆಗ ಅಕ್ಕನಾಗಮ್ಮ ನಿಮ್ಮನ್ನೆಲ್ಲ ಕಳೆದುಕೊಂಡು ಮಹಾಮನೆ ಶೂನ್ಯವಾಯಿತು, ನಾವೆಲ್ಲ ಅನಾಥರಾದೆವು ಎಂದು ಅಂತರಂಗದ ಅಳಲನ್ನು ಪರಿಪರಿಯಾಗಿ ನಿವೇದಿಸಿದ ಭಾವ ಹೃದಯವಿದ್ರಾವಕವಾಗಿದೆ.

ಎನ್ನನೊಯ್ಯದೆ ಹೋದೆಯಲ್ಲಾ ಪಂಚಪರುಷ ಮೂರ್ತಿ ಬಸವಣ್ಣಾ
ಬಸವಣ್ಣಪ್ರಿಯ ಚೆನ್ನಸಂಗಯ್ಯಂಗೆ

ಬಸವಣ್ಣನವರು ಐಕ್ಯರಾದಾಗ ಅವರ ಅಗಲಿಕೆ ಅಕ್ಕನಾಗಮ್ಮನವರಿಗೂ ವೇದನೆ ನೀಡಿ ದುಃಖ ಉಂಟು ಮಾಡುತ್ತದೆ. ಜಗತ್ತು ಜ್ಞಾನದ ಬೆಳಕನ್ನು ಕಳೆದುಕೊಂಡಾಗ ಕತ್ತಲಾವರಿಸಿ ರೋದನೆ ಮುಗಿಲು ಮುಟ್ಟಿದೆ ಎಂದು ಸಂತಾಪ ವ್ಯಕ್ತಪಡಿಸಿದ್ದಾರೆ. ಅನುಭವ ಮಂಟಪ ಕತ್ತಲೆಯಲ್ಲಿ ಲೀನವಾಗಿ ಮಹಾಮನೆ ಶೂನ್ಯವಾಯಿತು ಎಂದಿದ್ದಾರೆ. ಒಡಹುಟ್ಟಿದ ತಮ್ಮ, ಜ್ಞಾನದ ದೀವಿಗೆ, ಸ್ತ್ರೀ ಕುಲೋದ್ಧಾರಕ ಬಸವಣ್ಣನವರನ್ನು ಏಕೆ ಕರೆದೊಯ್ದೆ ಎನ್ನನೊಯ್ಯದೆ ಎಂದು ನುಡಿಯುತ್ತಾರೆ.

ಪಂಚಪರುಷ ಎಂದರೆ ಹಸ್ತಪರುಷ, ದೃಷ್ಟಿಪರುಷ, ವಾಕ್‍ಪರುಷ, ಮನಪರುಷ, ಭಾವಪರುಷ. ಮುಟ್ಟಿದ್ದೆಲ್ಲ ಪವಿತ್ರ, ನೋಡಿದ್ದೆಲ್ಲ ಪವಿತ್ರ. ಅವರ ಮನಸ್ಸನ್ನು ಅರಿತವರು ಅವರ ಭಾವನೆಗಳಿಗೆ ಸ್ಪಂದಿಸುವವರೆಲ್ಲರೂ ಪವಿತ್ರರಾಗುತ್ತಿದ್ದರು.
ಬಸವಣ್ಣನವರು ಪಂಚಪರುಷ ಮೂರ್ತಿ ಎಂದು ಸಕಲ ಸದ್ಗುಣ ಸಂಪನ್ನರಾದ ವಿಶ್ವಗುರು ಬಸವಣ್ಣನವರನ್ನು ಕೊಂಡಾಡಿದ್ದಾರೆ.

ಆತ್ಮೀಯ ಜೀವಭಾವವೊಂದನ್ನು ಕಳೆದುಕೊಂಡು ತೀವ್ರ ದುಃಖಪಡುವ ರೀತಿ, ತಾಯಿ ಮಗನನ್ನು ಕಳೆದುಕೊಂಡಂತೆ, ಹಸುವೊಂದು ತನ್ನ ಎಳೆಗರುವನ್ನು ಅಗಲಿ ಅನುಭವಿಸುವ ನೋವು, ತಲ್ಲಣಗಳ ಮಹಾಪೂರ ಈ ವಚನದಲ್ಲಿ ಹರಿದು ಬಂದಿದೆ. ಪ್ರೀತಿಪಾತ್ರರಾದವರೊಬ್ಬರು ನಮ್ಮಿಂದ ಬಹುದೂರ ಹೋದಾಗ ಆಗುವ ಎದೆ ಸುಡುವ ವ್ಯಥೆಯ ಅನಾವರಣವೇ ಈ ವಚನವಾಗಿದೆ ಎಂದು ಹೇಳಬಹುದು. ಅಚಲ ನಂಬಿಕೆ, ಅಗಾಧ ಪ್ರೀತಿಯ ಒಡಲಾಳದ ನೋವು, ಅಕ್ಕ-ತಮ್ಮನ ಸೋದರ ಸಂಬಂಧದ ಅಗಲಿಕೆಯ ತಾಪದ ತೀವ್ರತೆಯನ್ನು ನಾವು ಈ ವಚನದಲ್ಲಿ ಕಾಣುತ್ತೇವೆ.

ಅಕ್ಕನಾಗಮ್ಮನವರ ಇನ್ನೆರಡು ವಚನಗಳು:

೧) *ಮನದೊಡೆಯ ಮಹಾದೇವ ಮನವ ನೋಡಿಹನೆಂದು*
*ಮನುಜರ ಕೈಯಿಂದ ಒಂದೊಂದು ನುಡಿಸುವನು*
*ಇದಕ್ಕೆ ಕಳವಳಿಸದಿರು ಮನವೇ……*
*ಕಾತರಿಸದಿರು ತನುವೇ*……
*ನಿಜವ ಮರೆಯದಿರು ಕಂಡ್ಯಾ*
*ನಿಶ್ಚಿಂತನಾಗಿರು ಮನವೇ*…..
*ಬಸವಣ್ಣಪ್ರಿಯ ಚೆನ್ನಸಂಗಯ್ಯನು
ಬೆಟ್ಟದಣಿತಪರಾಧವನು ಒಂದು ಬೊಟ್ಟಿನಲಿ ತೊಡೆವನು

೨)ಎನ್ನ ಕುಲಸೂತಕವ ಕಳೆದಾತ ಬಸವಣ್ಣ
ಎನ್ನ ಛಲಸೂತಕವ ಕಳೆದಾತ ಬಸವಣ್ಣ
ಎನ್ನ ತನುಸೂತಕವ ಕಳೆದಾತ ಬಸವಣ್ಣ
ಎನ್ನ ಮನಸೂತಕವ ಕಳೆದಾತ ಬಸವಣ್ಣ
ಎನ್ನ ನೆನಹುಸೂತಕವ ಕಳೆದಾತ ಬಸವಣ್ಣ
ಎನ್ನ ಭಾವಸೂತಕವ ಕಳೆದಾತ ಬಸವಣ್ಣ
ಎನ್ನ ಅರುಹು ಮರುಹಿನ ಸಂದು ಸಂಶಯವ ಬಿಡಿಸಿದಾತ ಬಸವಣ್ಣ
ಎನ್ನ ತನ್ನೊಳಗೆ ಇಂಬಿಟ್ಟುಕೊಂಡಾತ ಬಸವಣ್ಣ
ತನ್ನ ಎನ್ನೊಳಗೆ ಇಂಬಿಟ್ಟುಕೊಂಡಾತ ಬಸವಣ್ಣ
ನಿಜದ ನಿರ್ವಲಯ ಬಾಗಿಲ ನಿಜವ ತೋರಿದಾತ ಬಸವಣ್ಣ
ಬಸವಣ್ಣಪ್ರಿಯ ಚೆನ್ನಸಂಗಯ್ಯನ ಹೃದಯಕಮಲದಲ್ಲಿ
ನಿಜ ನಿವಾಗಿಯಾಗಿರಿಸಿದ ಎನ್ನ ತಂದೆ ಸಂಗನಬಸವಣ್ಣನು

ಶ್ರೀಮತಿ ಇಂದಿರಾ ಮೋಟೆಬೆನ್ನೂರ
ಬೆಳಗಾವಿ.

Don`t copy text!