ಆದ್ಯ ವಚನಕಾರ ಜೇಡರ ದಾಸಿಮಯ್ಯ

ವಾರದ ವಿಶೇಷ ಲೇಖನ

ಆದ್ಯ ವಚನಕಾರ ಜೇಡರ ದಾಸಿಮಯ್ಯ

ನಿಮ್ಮ ಶರಣರ ಸೂಳ್ನುಡಿಯನಿತ್ತಡೆ ನಿಮ್ಮನಿತ್ತೆ ” ಒಡಲೆಂಬ ಬಂಡಿಗೆ ಮೃಡ ಶರಣರ ನುಡಿಗಡಣವೆ ಕಡೆಗೀಲು ” ಎಂಬ ಉಲ್ಲೇಖಗಳು ಜೇಡರ ದಾಸಿಮಯ್ಯನ ವಚನಗಳಲ್ಲಿಯೇ ಬರುವುದರಿಂದ ಅವರಿಗಿಂತ ಪೂರ್ವದಲ್ಲಿ ವಚನಕಾರರು ಇದ್ದರೆಂಬುದು ಸಾಬೀತಾಗುವುದಾದರೂ ಜೇಡರ ದಾಸಿಮಯ್ಯನನ್ನೇ ಆದ್ಯ ವಚನಕಾರ ಎಂದು ಕರೆಯುವ ಪ್ರತೀತಿ ಬೆಳೆದುಕೊಂಡು ಬಂದಿದೆ. ಮಾದಾರ ಚೆನ್ನಯ್ಯ, ಡೋಹರ ಕಕ್ಕಯ್ಯ , ಕೆಂಭಾವಿ ಭೋಗಣ್ಣ, ಚಿಮ್ಮಲಿಗೆಯ ಚಂದಿಮರಸ, ಕೊಂಡಗುಳಿ ಕೇಶಿರಾಜ ಮೊದಲಾದವರು ಜೇಡರ ದಾಸಿಮಯ್ಯನವರ ಹಿರಿಯ ಸಮಕಾಲೀನರಾಗಿದ್ದಾಗಲೂ ಆದ್ಯ ವಚನಕಾರ ಎಂದು ಕರೆಯುವುದಕ್ಕೆ ಮುಖ್ಯ ಕಾರಣವೆಂದರೆ ದಾಸಿಮಯ್ಯನ ವಚನ ಪ್ರಬುದ್ಧತೆ , ವಚನ ಸುಂದರತೆ ಮತ್ತು ವಚನ ಸೂತ್ರತೆ ಎಂದೆನಿಸುತ್ತದೆ. ಪಂಪಕವಿಗಿಂತ ಪೂರ್ವದಲ್ಲಿ ಎಷ್ಟೋ ಕವಿಗಳು ಕನ್ನಡ ಸಾಹಿತ್ಯದಲ್ಲಿದ್ದರೂ ಆತನ ಮಹಾ ಕವಿತ್ವಕ್ಕಾಗಿ ಆತನನ್ನೇ ಆದಿಕವಿ ಎಂದು ಕರೆದ ರೀತಿಯಲ್ಲಿ ನಮ್ಮ ಜೇಡರ ದಾಸಿಮಯ್ಯನವರಿಗೂ ಇಂಥ ಅಗ್ಗಳಿಕೆ ಸಂದಿರಬೇಕು. ಬಸವ ಪೂರ್ವ ಯುಗದವರಲ್ಲಿ ಹೆಚ್ಚಿನ ಸಂಖ್ಯೆಯ ವಚನಗಳು ದೊರೆತದ್ದೆಂದರೆ ಜೇಡರ ದಾಸಿಮಯ್ಯನೇ.

ಕ್ರಿ. ಶ. 1148 ರಷ್ಟು ಹಿಂದಿನ ಶಾಸನವೊಂದರಲ್ಲಿ ಜೇಡರ ದಾಸಿಮಯ್ಯನ ಹೆಸರಿನ ಉಲ್ಲೇಖ ಬರುತ್ತದೆ. ಕ್ರಿ. ಶ. 1060 ರ ಸುಮಾರಿಗೆ ಈಗಿನ ಹೈದ್ರಾಬಾದ್ ಸಮೀಪದ ಪೊಟ್ಟಲ ಕೆರೆಯಲ್ಲಿ ಆಳುತ್ತಿದ್ದ ಜಯಸಿಂಹನ ಹೆಂಡತಿ ಸುಗ್ಗಲಾದೇವಿಗೆ ದೀಕ್ಷಾಗುರು ಈ ಜೇಡರ ದಾಸಿಮಯ್ಯ. ದಾಸಿಮಯ್ಯನ ಒಂದು ವೈಶಿಷ್ಟ್ಯವೆಂದರೆ ಈತನ ಭಕ್ತಿ. ವ್ಯಕ್ತಿತ್ವಕ್ಕೆ ಮಾರುಹೋಗಿ ನೇಯ್ಗೆ ಕಾಯಕದವರೆಲ್ಲರೂ ಸಂಘಟಿತರಾಗಿ ಈತನ ಗುರುತ್ವವನ್ನು ಒಪ್ಪಿ ಶಿವಭಕ್ತರಾದರು. ದಾಸನ ಕುಲದವರೆಂದು ಹೇಳಿಕೊಳ್ಳಲು ಅವರೆಲ್ಲರೂ ಹೆಮ್ಮೆ ಪಟ್ಟುಕೊಂಡರು. ಅದಕ್ಕಾಗಿಯೇ ಬಸವಣ್ಣನವರು ” ದೇವಾ ನಿಮ್ಮ ಪೂಜಿಸಿ ದಾಸನ ಕುಲ ದೇಸಿವಡೆಯಿತ್ತು “ ಎಂದು ಕೀರ್ತಿಸಿದರಲ್ಲದೆ ; ಸ್ವತ: ದಾಸಿಮಯ್ಯನವರು ಕೂಡ ” ದಾಸನ ಕುಲವಾದಾತ ಈಶಂಗಲ್ಲದೆ ಶರಣೆನ್ನ , ಆಶೆ ಮಾಡ ನೋಡ ಅನ್ಯ ದೈವಂಗಳಿಗೆ “ ಎಂದು ಅಭಿಮಾನ ಪೂರ್ವಕ ಹೇಳಿಕೊಂಡರು. ಅಂತಹ ಒಂದು ಧರ್ಮ ಜಾಗೃತಿ ಕಾರ್ಯ ಜೇಡರ ದಾಸಿಮಯ್ಯನಿಂದ ನಡೆಯಿತು.

ಕ್ರಿ. ಶ. 1040 ರ ಸುಮಾರಿಗೆ ಈಗಿನ ಕಲ್ಬುರ್ಗಿ ಜಿಲ್ಲೆಯ ಮುದನೂರಿನ ರಾಮಯ್ಯ ಮತ್ತು ಶಂಕರಮ್ಮ ಎಂಬ ಜೇಡರ ದಂಪತಿಗಳ ಪುಣ್ಯ ಗರ್ಭದಿಂದ ಉದಿಸಿದ ದಾಸಿಮಯ್ಯ ಎಳೆವರೆಯದಲ್ಲಿಯೇ ಲಿಂಗಾರ್ಚನೆ
ಜಂಗಮ ಸೇವೆಯಿಂದ ಆಕರ್ಷಿತನಾಗಿದ್ದ. ಉಚ್ಚಕುಲದವನಲ್ಲವೆಂಬ ತಿರಸ್ಕಾರವನ್ನು ಆತನೂ ಎದುರಿಸಬೇಕಾಯಿತು. ತಮಗಿಷ್ಟ ಬಂದಷ್ಟು ಕಾಲ ರಾಮನಾಥಲಿಂಗವನ್ನು ಪೂಜಿಸಲು ಪೂಜಾರಿ ಬ್ರಾಹ್ಮಣರು ದೇವಾಲಯದೊಳಕ್ಕೆ
ಬಿಡುತ್ತಿರಲಿಲ್ಲ. ಆದರೆ ನಿಜವಾದ ಭಕ್ತಿಯುಕ್ತನಾದ ದಾಸಿಮಯ್ಯ ರಾಮನಾಥನ ದರ್ಶನಕ್ಕೆ ಹೋದಾಗ ದೇವಾಲಯದ ಬಾಗಿಲು ಬೀಗ ಹಾಕಿದ್ದರೂ ತಾನಾಗಿ ತೆರೆದುಕೊಳ್ಳುತ್ತಿತ್ತು. ಇದನ್ನೇ ಅಂಬಿಗರ ಚೌಡಯ್ಯ “ಕೆತ್ತಿದ್ದ ಮುಚ್ಚಳು ಜೇಡಂಗೆ ತೆರೆವಾಗ ಇಕ್ಕಿದ ಜನಿವಾರ ಬೀಯವಾದವು. “ ಎಂದು ಛೇಡಿಸಿದ್ದಾನೆ. ಉಚ್ಛಕುಲದವರ ತಾರತಮ್ಯ ಭಾವನೆಗಳಿಂದ ನೊಂದುಕೊಂಡ ಜೇಡರ ದಾಸಿಮಯ್ಯ ಕುಲ -ಜಾತಿಗಳನ್ನು ಉಚ್ಚಾಟಿಸಿ ಅನೇಕ ವಚನಗಳನ್ನು ಬರೆದಿದ್ದಾನೆ. ” ಕುಲ ಛಲವ ಬಿಟ್ಟು ದೇವರನೊಲಿಸಿದ ಶರಣರಿಗೆ ತಲೆವಾಗುವೆ “ ಎಂದಿದ್ದಾನೆ. ಬ್ರಾಹ್ಮಣರೇನಾದರೂ ಹುಟ್ಟುತ್ತಲೇ ಜನಿವಾರ ಧರಿಸಿ ಹುಟ್ಟುವರೇ ? ಅಸ್ಪೃಶ್ಯರೇನಾದರೂ ಹುಟ್ಟುತ್ತಲೇ ಸಂಬಳಿಗೋಲು ಹಿಡಿದು ಹುಟ್ಟುವರೇ ? ಎಂದು ಪ್ರಶ್ನಿಸಿದ್ದಾನೆ. ಈ ಪ್ರಶ್ನೆಗಳೇ ಮುಂದೆ ಬಸವಣ್ಣನವರ ತಲೆ ತಿಂದು ದೊಡ್ಡ ಕ್ರಾಂತಿಯುಂಟು ಮಾಡಲು ಕಾರಣವಾದವು.

ದಾಸಿಮಯ್ಯನದು ನೇಯ್ಗೆ ಕಾಯಕವೆಂಬುದಕ್ಕೆ ” ಉಂಕಿಯ ನಿಗುಚಿ – ಸರಿಗೆಯ ಸಮಗೊಳಿಸಿ.
ಎಂಬ ಆತನ ವಚನವೇ ನಿದರ್ಶನವಾಗಿದೆ. ನೇಯ್ದ ಬಟ್ಟೆಗಳನ್ನು ಮಾರಿ ಜಂಗಮ ದಾಸೋಹ ನಡೆಸುತ್ತಿದ್ದ ಈತ ಒಮ್ಮೆ ದೊಡ್ಡ ಗಣಪರ್ವ ಮಾಡಬೇಕೆಂದು ಬಹಳ ಬೆಲೆ ತರುವ ಸುಂದರ ರೇಷ್ಮೆ ವಸ್ತ್ರ ನೇಯ್ದು ಸಿದ್ಧಾಪುರ ಸಂತೆಗೆ ಮಾರಲು ಹೋದಾಗ ಶಿವ ಜಂಗಮ ವೇಷ ಧರಿಸಿ ಬಂದು ಆ ಅಮೂಲ್ಯ ವಸ್ತುವನ್ನು ದಾನವಾಗಿ ಬೇಡಿದ. ತನ್ನ ಗಣಪರ್ವದ ಮುಖ್ಯ ಉದ್ದೇಶವೂ ಜಂಗಮ ಸಂತೃಪ್ತಿಯೇ ಆದುದರಿಂದ ದಾಸಿಮಯ್ಯ ಹಿಂದೆ ಮುಂದೆ ನೋಡದೆ ವಸ್ತ್ರವನ್ನು ಕೊಟ್ಟು ಬಿಟ್ಟ. ದೇವರು ಮತ್ತೂ ಪರೀಕ್ಷಿಸಬೇಕೆಂದು ಆತನ ಕಣ್ಣೆದುರೇ ಆ ಅಮೂಲ್ಯ ಬಟ್ಟೆಯನ್ನು ಚಿಂದಿ ಚಿಂದಿ ಮಾಡಿ ಎಸೆದಾಗ ದಾಸಿಮಯ್ಯ ಕಿಂಚಿತ್ತೂ
ಕ್ರೋಧಗೊಳ್ಳಲಿಲ್ಲ. ದಾನಗೈದ ವಸ್ತುವನ್ನು ಏನಾದರೂ ಮಾಡಿಕೊಳ್ಳಲಿಯೆಂದು ನೆಮ್ಮದಿಯಿಂದಲೇ ಇದ್ದ. ಈತನ ನಿರ್ಮೋಹ ಭಕ್ತಿಗೆ ಮೆಚ್ಚಿದ ಈಶ್ವರ ದಾಸಿಮಯ್ಯನಿಗೆ ತವನಿಧಿಯನ್ನು ಕರುಣಿಸಿದ. ಸವೆಯಲಾರದ ಸಂಪತ್ತು ಅವರದಾಯಿತು.

ಸಂಸಾರ ಹೇಯವಲ್ಲ, ಅದರಲ್ಲೂ ಮಧುರ ದಾಂಪತ್ಯಕ್ಕೆ ದಾಸಿಮಯ್ಯ ಬಹಳ ಮಹತ್ವ ಕೊಟ್ಟಿದ್ದ. ” ಸತಿ-ಪತಿಗಳೊಂದಾದ ಭಕ್ತಿ ಹಿತವಾಗಿಪ್ಪುದು ಶಿವಂಗೆ , ಸತಿ-ಪತಿಗಳೊಂದಾಗದ ಭಕ್ತಿ ಅಮೃತದೊಳು ವಿಷ ಬೆರೆಸಿದಂತೆ “
ಎಂದು ಖಚಿತವಾಗಿ ನಂಬಿದ್ದ. ಅಂತೆಯೇ ಅನುರೂಪ ಸತಿಗೋಸುಗ ಒಂದು ಬಿಕ್ಕಟ್ಟಿನ ಪರೀಕ್ಷೆಯೊಡ್ಡಿ ಸುಮಾರು ದಶಕಗಳನ್ನು ಕಾಯ್ದು, ಮರಳು ಬೆರೆತ ಅಕ್ಕಿಯಿಂದ ಉರವಲು ಕಟ್ಟಿಗೆಯಿಲ್ಲದೆ ನೆಲಕಬ್ಬುಗಳ ಸಹಾಯದಿಂದ ಪಾಯಸ ಮಾಡಿ ನೀಡುವವಳೇ ಸತಿಯಾಗಬೇಕೆಂದು ನಾಡೆಲ್ಲ ಸಂಚರಿಸಿದ. ಕೊನೆಗೆ ಕಲ್ಬುರ್ಗಿ ಜಿಲ್ಲೆ ಆಫಜಲಪುರ ತಾಲೂಕಿನ ಗೊಬ್ಬೂರು ಗ್ರಾಮದ ದುಗ್ಗಳೆ ಈ ಪರೀಕ್ಷೆಯಲ್ಲಿ ಗೆದ್ದು ಕೈ ಹಿಡಿದಳು. ಗಂಡನೊಡನೆ ವೃಥಾ ವಾದಿಸಿ ಕಾದದ ಪತಿಭಕ್ತಿ ಆಕೆಯದು. ದುಗ್ಗಳೆಯೂ ಉತ್ತಮ ವಚನಕಾರಳು. ” ದಾಸಯ್ಯ ಪ್ರಿಯ ರಾಮನಾಥ “ ಎಂಬುದು ಆಕೆಯ ಅಂಕಿತ. ಎರಡೇ ವಚನಗಳು ಸಿಕ್ಕಿವೆ.

ಜೇಡರ ದಾಸಿಮಯ್ಯ ಅತ್ಯುತ್ತಮ ವಿಚಾರವಂತ. ಅನೇಕ ವಿಷಯಗಳಲ್ಲಿ ಮಹಾನುಭಾವ ಬಸವಣ್ಣನವರು ದಾಸಿಮಯ್ಯನವರ ನೂತನ ವಿಚಾರಗಳ ಅಸ್ತಿ ಭಾರದ ಮೇಲೆಯೇ ಆಚಾರಗಳ ದಿವ್ಯ ಸೌಧವನ್ನು ಕಟ್ಟಿದರು ಎನಿಸುತ್ತದೆ. ಹೆಣ್ಣು -ಗಂಡು ಸಮಾನ, ನಡುವೆ ಸುಳಿವ ಆತ್ಮಕ್ಕೆ ಗಂಡುತನ ಅಥವಾ ಹೆಣ್ಣುತನ ಇಲ್ಲವೆಂದು ಮೊಟ್ಟಮೊದಲಿಗೆ ಹೇಳಿದಾತನೇ ದಾಸಿಮಯ್ಯ. ಶುಭದಿನ -ಶುಭವಾರಗಳ ಜಂಜಡವೇ ಬೇಡ ತಿಳಿದವನಿಗೆ ಅಥವಾ ನೈಜ ಭಕ್ತನಿಗೆ ಮುಂಜಾವೇ ಅಮಾವಾಸ್ಯೆ, ಸಂಜೆ ಸಮಯವೇ ಹುಣ್ಣಿಮೆ, ಮಟ ಮಟ ಮಧ್ಯಾಹ್ನವೇ ಸಂಕ್ರಾಂತಿ ಎಂಬುದು ದಾಸಿಮಯ್ಯನವರ ವೈಜ್ಞಾನಿಕ ನಿಲುವು. ಖಗೋಳ ಶಾಸ್ತ್ರ ಪ್ರಗತಿ ಹೊಂದದ ಒಂಬೈನೂರು ವರ್ಷ ಪೂರ್ವವೇ ದಾಸಿಮಯ್ಯನವರು ಈ ಭೂಮಿಯನ್ನು ಎಂಟು ದಿಕ್ಕಿನಲ್ಲಿ ಆನೆಗಳು ಹೊತ್ತಿವೆಯೆಂದರೆ ಆನೆಗಳನ್ನು ಯಾವುದು ಹೊತ್ತಿದೆi ಎಂದು ಪ್ರಶ್ನೆ ಮಾಡಿದ ಧೀಮಂತರವರು. ಮಾಂಸದಲ್ಲಿ ಹಾಲು , ಹಾಲಿನಲ್ಲಿ ತುಪ್ಪ , ಮೊಗ್ಗಿನಲ್ಲಿ ಕಂಪು , ಎಳ್ಳಿನಲ್ಲಿ ಎಣ್ಣೆ ಮರೆಯಾಗಿರುವ ರೀತಿಯಲ್ಲಿ ಪರಮಾತ್ಮ ಸರ್ವವ್ಯಾಪಿಯಾಗಿದ್ದಾನೆಂದು ದೇವರ ಅಸ್ತಿತ್ವವನ್ನು ತೋರಿ ಎಲ್ಲ ಶರಣರಿಗೆ ಮಾರ್ಗದರ್ಶಿಯಾದಾತ ಜೇಡರ ದಾಸಿಮಯ್ಯ.

ವಚನ ವಿಶ್ಲೇಷಣೆ

ಕಡಿಗೀಲಿಲ್ಲದ ಬಂಡಿ ಹೊಡೆಗೆಡುವುದು ಮಾಬುದೇ ?
ಕಡೆಗೀಲು ಬಂಡಿಗಾಧಾರ !
ಕಡುದರ್ಪವೇರಿದ ಒಡಲೆ0ಬ ಬಂಡಿಗೆ
ಮೃಡ ಶರಣರ ನುಡಿಗಡಣವೇ ಕಡೆಗೀಲು ಕಾಣಾ ರಾಮನಾಥ !

ಮಹಾನುಭಾವ ಬಸವಣ್ಣನವರಿಗಿಂತ ಪೂರ್ವಿಕರಾದ ಮುದನೂರಿನ ಜೇಡರ ದಾಸಿಮಯ್ಯನವರು ಶರಣರ ವಚನಗಳ ಮಹತ್ವವನ್ನು ಶ್ರೀ ಸಾಮಾನ್ಯರಿಗೆ ಅಚ್ಚಕನ್ನಡ ಶಬ್ದಗಳಲ್ಲಿ ಮನಗಾಣಿಸುತ್ತಿದ್ದಾರೆ
ಒಂದೇ ಒಂದು ಸಂಸ್ಕೃತ ಶಬ್ದವಿಲ್ಲದೆ, ಒಂದೇ ಒಂದು ತದ್ಭವ
ಶಬ್ದವಿಲ್ಲದೆ ಅಚ್ಚಗನ್ನಡದಲ್ಲಿ ಹಳ್ಳಿಗರ ಕೃಷಿ ಉಪಕರಣಗಳನ್ನೇ ಉಪಮಾನವಾಗಿ ಬಳಸಿ ಸುಂದರವಾದ ಮತ್ತು ಅರ್ಥಗರ್ಭಿತವಾದ ವಚನವೊಂದನ್ನು ಬರೆದುದು ಜೇಡರ ದಾಸಿಮಯ್ಯನವರ ವೈಶಿಷ್ಟ್ಯವಾಗಿದೆ. ವಚನ ಸಾಹಿತ್ಯಕ್ಕೆ
ಜೇಡರ ದಾಸಿಮಯ್ಯನವರೇ ಸಧ್ಯಕ್ಕೆ ಆದ್ಯರೆಂದು ಭಾವಿಸಲಾಗುತ್ತಿದೆ. ಆದರೆ ಅವರೇ ತಮ್ಮ ಪೂರ್ವಿಕರ ನುಡಿ ಸಮೂಹ ಅರ್ಥಾತ್ ವಚನಗಳ ಮಹತ್ವವನ್ನು ಬಗೆದುಂಬಿ ಬಣ್ಣಿಸ
ಬೇಕಾದರೆ ಈ ಸಾಹಿತ್ಯದ ಮೂಲ ಎಲ್ಲಿರಬಹುದೆಂದು ಸಂಶೋಧಿಸಬೇಕಾಗುತ್ತದೆ. ದಾಸಿಮಯ್ಯನವರು ತಮಗಿಂತ ಪೂರ್ವದಲ್ಲಿದ್ದ ಕೊಂಡಗುಳಿ ಕೇಶಿರಾಜ ಮತ್ತು ಅವರ ಸ್ನೇಹಿತ ಬೇಡರ ಕುಲದ ತೆಲುಗು ಜೊಮ್ಮಯ್ಯ ಇವರ ವಚನಗಳನ್ನು ದೃಷ್ಟಿಯಲ್ಲಿಟ್ಟುಕೊಂಡೇ ಅವು ಒಡಲೆಂಬ ಬಂಡಿಗೆ ಕಡೆಗೀಲು ಇದ್ದಂತೆ ಎಂದು ಹೇಳುತ್ತಿರಬೇಕೆಂದು ಕಾಲಮಾನದ ದೃಷ್ಠಿಯಿಂದ ಊಹಿಸಬಹುದಾಗಿದೆ

ಬಂಡಿಯ ತುಂಬ ನಾವು ದವಸ ಧಾನ್ಯಗಳನ್ನು ಹೇರುತ್ತೇವೆ. ದಷ್ಟ ಪುಷ್ಟವಾದ ಎತ್ತುಗಳನ್ನು ಅದನ್ನು ಎಳೆಯಲು ಕಟ್ಟುತ್ತೇವೆ. ಮಜಬೂತಾದ ಬಂಡಿ, ಶಕ್ತಿಶಾಲಿ ಎತ್ತುಗಳು ಇದ್ದಾಗ್ಯೂ ಮುಖ್ಯವಾದ ಕಡೆಗೀಲುಗಳು ಎಡಕ್ಕೆ ಬಲಕ್ಕೆ ಇರದಿದ್ದರೆ ಬಂಡಿ ಒಂದು ಹೆಜ್ಜೆ ಮುನ್ನಡೆಯದೆ ಕೆಳಗೆ ಉರುಳಿ ಬೀಳುತ್ತಡೆ. ಅದೇ ರೀತಿ ನಮ್ಮ ದೇಹವೆಂಬ ಬಂಡಿಯೂ ಇದೆ. ದುರ್ದೈವವಶಾತ್ ಅದರ ಮೇಲೆ ಸದ್ಗುಣಗಳ ಸರಕು ಹೇರದೆ ನಾವು ಕಡುದರ್ಪದ ಚೀಲಗಳನ್ನು ಹೇರಿದ್ದೇವೆ. ಬುದ್ಧಿ -ಜ್ಞಾನಗಳ ಎತ್ತುಗಳನ್ನೂ ಹೂಡಿದ್ದೇವೆ. ಆದರೆ ವಚನ ಸಾಹಿತ್ಯವೆಂಬ ಕಡೆಗೀಲುಗಳನ್ನು ಇಡದಿದ್ದರೆ ಬಂಡಿ ಒಗ್ಗಾಲಾಗಿ ಬಿದ್ದು ಬಿಡುತ್ತದೆ. ನಿಜವಾಗಿಯೂ ಶಿವಶರಣರ ವಚನಗಳು ಸಂಸಾರಿಗರ ಸುಗಮ ರಥಕ್ಕೆ ಕಡೆಗೀಲುಗಳಾಗಿ ಕೆಲಸ ನಿರ್ವಹಿಸುತ್ತವೆ. ಇದು ವಚನಕಾರ ಜೇಡರದಾಸಿಮಯ್ಯ ವಚನ ಸಾಹಿತ್ಯಕ್ಕೆ ನೀಡಿದ ಅಪೂರ್ವ ಮನ್ನಣೆ.

ವಚನ ಸಾಹಿತ್ಯವನ್ನು ಮಹಾನುಭಾವ ಬಸವಣ್ಣನವರು ಬೆಲ್ಲದ ಕೆಸರು, ಸಕ್ಕರೆಯ ಮಳಲಿರುವ ಹಾಲ ತೊರೆಗೆ ಹೋಲಿಸಿದರೆ ಇದೇ ದಾಸಿಮಯ್ಯ ನವರು ಮತ್ತೊಂದು ಸಂದರ್ಭದಲ್ಲಿ , ಆನೆ, ಸಂಪತ್ತು , ಹಿರಿದಾದ ರಾಜ್ಯ ಕೊಟ್ಟರೂ ತಾವು ವಚನ ಸಾಹಿತ್ಯವನ್ನು ಬಿಡುವುದು ಸಾಧ್ಯವಿಲ್ಲ ಎಂಬ ಮಾತನ್ನು ಅಭಿಮಾನ ಪೂರ್ವಕವಾಗಿ ಹೇಳಿದ್ದಾರೆ. ಚೆನ್ನಬಸವಣ್ಣನವರು ಅಮೃತ ಕುಂಡದಿಂದ ಅಮೃತವನ್ನು ಮೊಗೆದು ತರುವುದಕ್ಕೆ ಈ ವಚನಗಳು ಶಬ್ದ ಸೋಪಾನಗಳು ಮಾತ್ರವಲ್ಲ ; ಕತ್ತಲಲ್ಲಿ ನಡೆಯುವುದಕ್ಕೆ ಜ್ಯೋತಿ ಸ್ವರೂಪಗಳು ಎಂದು ಬಗೆದುಂಬಿ ವಿವರಿಸಿದ್ದಾರೆ. ವಚನಗಳು ನಿರ್ಮಲ ಹೃದಯದಿಂದ ಮೂಡಿಬರುತ್ತವೆಯಾದುದರಿಂದ ಅವು ಆಸ್ವಾದಿಸುವವರ ಹೃದಯಗಳನ್ನೂ ನಿರ್ಮಲಗೊಳಿಸುತ್ತವೆಯೆ0ಬ ಮಾತನ್ನು ಬಹಳ ಚಮತ್ಕಾರಿಕವಾಗಿ ಹೇಳಿದ್ದಾರೆ. ಸಂಸಾರ ವಿಷಯಗಳು ತುಂಬಿದ ಮನಸ್ಸಿನಲ್ಲಿ ವಚನಗಳು ನೆಲೆಯೂರಲಾರವು ಎಂಬ ಮಾತನ್ನೂ ಹೇಳಿದ್ದಾರೆ. ಅವರ ಅಭಿಪ್ರಾಯವೆಂದರೆ ” ಸಂಸಾರ ವಿಷಯ ರಸವ ತನ್ನ ಹೃದಯ ಕೂಪದಲ್ಲಿ ತುಂಬಿ ಕೊಂಡಿಪ್ಪ ಜೀವರ ಕಾಯದಲಿ ವಚನಾಮೃತ ತುಂಬಿದರೆ ಭಿನ್ನ ಘಟ್ಟದಲ್ಲಿ ಉದಕವೆರೆದಂತೆ.

ಸುಧಾ ಪಾಟೀಲ್
ಬೆಳಗಾವಿ

Don`t copy text!