ನೀ ಬರೆಸಿಹ ಭೇದಕ್ಕೆ ಬೆರಗಾದನಯ್ಯ

ಅಂಕಣ:೨೦-ಅಂತರಂಗದ ಅರಿವು

ನೀ ಬರೆಸಿಹ ಭೇದಕ್ಕೆ ಬೆರಗಾದನಯ್ಯ

ಮರದೊಳಗೆ ಮಂದಾಗ್ನಿಯ ಉರಿಯದಂತಿರಿಸಿದೆ
ನೊರೆವಾಲೊಳಗೆ ತುಪ್ಪವ
ಕಂಪಿಲ್ಲದಂತಿರಿಸಿದೆ
ಶರೀರದೊಳಗೆ ಆತ್ಮನನಾರೂ
ಕಾಣದಂತಿರಿಸಿದೆ
ನೀ ಬೆರೆಸಿಹ
ಭೇದಕ್ಕೆ ಬೆರಗಾದೆನಯ್ಯಾ ರಾಮನಾಥಾ

                   -ಜೇಡರ ದಾಸಿಮಯ್ಯ
ಈ ವಚನದಲ್ಲಿ ಜೇಡರ ದಾಸಿಮಯ್ಯನವರು ಸೃಷ್ಟಿ ರಚನೆಯ ವೈಶಿಷ್ಟ್ಯ ಮತ್ತು ವೈರುಧ್ಯಗಳನ್ನ ತಿಳಿಸಿದ್ದಾರೆ.

ಮರದೊಳಗೆ ಮಂದಾಗ್ನಿಯ ಉರಿಯದಂತಿರಿಸಿದೆ
ಮರದೊಳಗೆ , ಮರದ ಅಸ್ತಿತ್ವವನ್ನೇ ನಾಶ ಮಾಡುವ ಬೆಂಕಿಯಿದೆ. ಆದರೆ ಅದು ಉರಿಯುವುದಿಲ್ಲ. ಮರ , ಗಾಳಿ, ನೆರಳು ಮತ್ತು ಫಲವನ್ನು ನೀಡುತ್ತದೆ. ಅದರಲ್ಲಿ ತೇವಾಂಶವಿದೆ.ಆ ತೇವಾಂಶದಲ್ಲಿಯೂ ಬೆಂಕಿ ಸುಪ್ತವಾಗಿರುವದು. ಅದೇ ಮರ ಜೋರಾದ ಗಾಳಿಯ ರಭಸಕ್ಕೆ ಇನ್ನೊಂದು ಮರದ ಸಂಪರ್ಕಕ್ಕೆ ಬಂದು, ಘರ್ಷಣೆಗೆ ಒಳಗಾದರೆ ಬೆಂಕಿ ಹೊತ್ತಿಕೊಳ್ಳುತ್ತದೆ. ಆ ಕಿಚ್ಚು ಇಡೀ ಕಾಡನ್ನೇ ಬೆಂಕಿಗೆ ಆಹುತಿ ಮಾಡುತ್ತದೆ. ಆದರೆ ಮರದಲ್ಲಿಯ ಬೆಂಕಿ ಅಲ್ಲಿಯವರೆಗೆ ಕಾಣುವುದಿಲ್ಲ ಇದು ಸೋಜಿಗದ ಸಂಗತಿಯೇ ಸರಿ. ಅದೇ ರೀತಿ ಮನುಷ್ಯನಲ್ಲಿ ಅಡಗಿರುವ ಅಮಾನುಷ ಗುಣಗಳು, ಸುಪ್ತ ಬಯಕೆಗಳು ವರ್ತನೆಯಲ್ಲಿ ಪ್ರಕಟವಾಗುವುದಿಲ್ಲ.
ಪರಿಸ್ಥಿತಿಯ ಸಂಘರ್ಷಕ್ಕೆ ಒಳಪಟ್ಟಾಗ ಅವು ಪ್ರಕಟವಾಗುತ್ತವೆ.
ಒಳ್ಳೆಯವನಾಗಿ ಕಾಣುವ ವ್ಯಕ್ತಿಯ ನೈಜ ರೂಪ ಕಂಡು ಆಶ್ಚರ್ಯಪಡುವಂತಾಗುತ್ತದೆ.

ನೊರೆವಾಲೊಳಗೆ ತುಪ್ಪವ
ಕಂಪಿಲ್ಲದಂತಿರಿಸಿದೆ
ನೊರೆ ಹಾಲನ್ನ ನೋಡಿದಾಗ ಅದರಲ್ಲಿ ನಮಗೆ ತುಪ್ಪ ಕಾಣುವುದಿಲ್ಲ.ಮೂಸಿಸಿದರೂ ಹಾಲಿನಲ್ಲಿ ತುಪ್ಪದ ಕಂಪು ಮೂಗಿಗೆ ಗ್ರಹಿಕೆಯಾಗುವುದಿಲ್ಲ. ಆದರೆ ತುಪ್ಪ ತಯಾರಾಗುವುದು ಹಾಲಿನಿಂದ. ಹಾಲು ಹಲವಾರು ಪ್ರಕ್ರಿಯೆಗೆ ಒಳಪಡುತ್ತದೆ. ಹಾಲು ಕಾಯಿಸಿ ,ಕೆನೆ ತೆಗೆದು, ಕೆನೆಗೆ ಹೆಪ್ಪು ಹಾಕಿ, ಹೆಪ್ಪು ಕಟೆದು ಬೆಣ್ಣೆ ತೆಗೆದು, ಬೆಣ್ಣೆ ಕಾಯಿಸಿ ತುಪ್ಪವನ್ನು ಪಡೆಯುತ್ತೇವೆ. ತುಪ್ಪದ ಘಮ ಹಾಲಿನಲ್ಲಿ ಕಾಣಲಾಗದು. ಹಾಗೆಯೇ ಆಧ್ಯಾತ್ಮಿಕ ಸಾಧನೆ ಕೂಡ. ಸಾಮಾನ್ಯ ಶರಣನಾಗಬೇಕಾದರೆ, ಹಲವಾರು ಮಜಲುಗಳನ್ನ ದಾಟಬೇಕು. ಮನಸ್ಸು ಮತ್ತು ದೇಹವನ್ನು ಶರಣತ್ವದ ಕಡೆಗೆ ಹದಗೊಳಿಸಬೇಕಾದರೆ, ಕಾಯಕ, ದಾಸೋಹ, ಸಮಾನ ಭಾವ, ಸಹಬಾಳ್ವೆ, ಸಾಮಾಜಿಕ ಸೇವೆ ಮುಂತಾದ ಮೌಲ್ಯಗಳನ್ನು, ಗುರು ಲಿಂಗ ಜಂಗಮ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಇದೊಂದು ಆಂತರಿಕ ಮತ್ತು ಬಾಹ್ಯ ಪ್ರಕ್ರಿಯೆ.ಈ ಪ್ರಕ್ರಿಯೆಗೆ ಮನುಷ್ಯ ಒಳಪಡುತ್ತಾ ಸಾಗುಬೇಕು. ಅಂದಾಗ ಸಾಮಾನ್ಯ ಮನುಷ್ಯನ ಶರಣನಾಗುತ್ತಾನೆ. ಪ್ರಕ್ರಿಯೆಗೆ ಒಳಪಟ್ಟಾಗ ಹಾಲು ತುಪ್ಪದ ಕಂಪಿನ್ನು ಸೂಸುವಂತೆ ಶರಣತ್ವ
ಕ್ರೀಯೆಯಲ್ಲಿ ಪ್ರಕಟಗೊಳ್ಳುತ್ತ ದೈವತ್ವದ ಕಡೆಗೆ ಸಾಗುತ್ತದೆ.

ಶರೀರದೊಳಗೆ ಆತ್ಮನನಾರೂ
ಕಾಣದಂತಿರಿಸಿದೆ
ಈ ಶರೀರದಲ್ಲಿ ಆತ್ಮವಿದೆ. ಅದು ಯಾರ ಕಣ್ಣಿಗೂ ಕಾಣುವುದಿಲ್ಲ. ಶರೀರದ ಅಸ್ತಿತ್ವ
ಆತ್ಮದಲ್ಲಿದೆ. ಅದರ ರೂಪರೇಷೆಗಳನ್ನ ಹೇಳಲು ಬರುವುದಿಲ್ಲ. ಶರೀರದಲ್ಲಿ ಅದರ ಸ್ಥಾನವನ್ನು ಗುರುತಿಸಲಾಗುವುದಿಲ್ಲ. ಆದರೆ ಅದರ ಅಸ್ತಿತ್ವ ಮಾತ್ರ ನಿಜ. ಅದನ್ನ ಅಲ್ಲಗಳೆಯಲಾಗುವುದಿಲ್ಲ. ಆತ್ಮ ಇದೆ ಎನ್ನುವ ಸತ್ಯವನ್ನ, ಅದು ಕಣ್ಣಿಗೆ ಕಾಣದಿದ್ದರೂ ನಾವು ಒಪ್ಪಿಕೊಳ್ಳುತ್ತೆವೆ. ಆತ್ಮ ಶುದ್ದಿ, ಆತ್ಮ ಜ್ಞಾನ, ಆತ್ಮ ಶೋಧನೆ ಮತ್ತು ಆತ್ಮ ಸಾಕ್ಷಾತ್ಕಾರವೇ ಜೀವನದ ಪರಮೋಚ್ಚ ಸಾಧನೆ ಎಂದು ನಂಬುತ್ತೇವೆ. ಚೈತನ್ಯ ಸ್ವರೂಪವಾದ ಆತ್ಮ ದೇಹದಲ್ಲಿದ್ದಾಗ ಮಾತ್ರ ದೇಹಕ್ಕೆ ಬೆಲೆ. ಹೀಗೆ ಅಸ್ತಿತ್ವ ಮತ್ತು ವಿನಾಶ ಒಂದರಲ್ಲಿ ಅಡಗಿದೆ

ನೀ ಬೆರೆಸಿಹ ಭೇದಕ್ಕೆ ಬೆರಗಾದೆನಯ್ಯಾ ರಾಮನಾಥಾ
ಈ ರೀತಿ ಒಂದರಲ್ಲಿ ಒಂದನ್ನು ಅಡಗಿಸಿ ಸೃಷ್ಟಿ ಮಾಡಿರುವ ಸೃಷ್ಟಿಕರ್ತನ ಚತುರತೆಗೆ, ಜಗತ್ತಿನ ವ್ಯಾಪಾರಕ್ಕೂ ಮನುಷ್ಯನ ಮನೋಜಗತ್ತಿಗು ಸಂಬಂಧ ಕಲ್ಪಿಸುವ, ಸೃಜನಶೀಲತೆಗೆ ಸಾಮಾನ್ಯನಾದ ನಾನು ಬೆರಗಾಗುತ್ತಿದ್ದೇನೆ ಎಂದು ಜೇಡರ ದಾಸಿಮಯ್ಯನವರು ಹೇಳುತ್ತಾರೆ.

-ಡಾ. ನಿರ್ಮಲ ಬಟ್ಟಲ

Don`t copy text!