ಧೈರ್ಯಂ ಸರ್ವತ್ರ ಸಾಧನಂ
ಈ ಭೂಮಿಯ ಮೇಲೆ ಬದುಕುವ ಸಕಲ ಸೂಕ್ಷ್ಮಾಣು ಜೀವಿಯಿಂದ ಬೃಹದಾಕಾರದ ಎಲ್ಲ ಜೀವಿಗಳಲ್ಲಿ ಹೋರಾಟ, ಸಂಘರ್ಷ ಕಂಡು ಬಂದೇ ಬರುತ್ತದೆ ಡಾರ್ವಿನ್ ಹೇಳಿದಂತೆ struggle for existence survival of fitness ಬದುಕಿಗಾಗಿ ಹೋರಾಟ, ತನ್ನ ಅಸ್ತಿತ್ವಕ್ಕಾಗಿ ಹೋರಾಟವನ್ನು ಪ್ರತಿಯೊಂದು ಜೀವಿಯು ಮಾಡೇ ಮಾಡುತ್ತದೆ.
ನೀರಾವಿಗಳು ನದಿ, ಸರೋವರ, ಕೊಳ್ಳ, ಸಮುದ್ರ ಮುಂತಾದ ದಡದಲ್ಲಿ ಹೋಗಿ ಮೊಟ್ಟೆಗಳನ್ನು ಹಾಕಿ ಪುನಃ ಮೂಲ ಸ್ಥಳಗಳಿಗೆ ಹೋಗುತ್ತವೆ. ಕಣ್ಣು ಬಿಟ್ಟ ಮರಿ ಆಮೆಗಳು ಹಿಂದೆ ಮುಂದೆ ನೋಡದೆ ಸಮುದ್ರ, ಸಾಗರಗಳಿಗೆ ಧುಮುಕುತ್ತವೆ. ದಕ್ಷಿಣ ಆಫ್ರಿಕಾದ ಖಂಡದಲ್ಲಿ ಸಲ್ಮಾನ್ ಎಂಬ ಜಾತಿಯ ಮೀನು ಇದ್ದು ಅದು ಸಮುದ್ರದಿಂದ ಸಿಹಿ ನೀರಿನ ಹೊಳೆಯ ದಂಡೆಗೆ ಬಂದು ಮೊಟ್ಟೆಗಳನ್ನು ಹಾಕಿ ಪುನಃ ತನ್ನ ವಾಸ ಸ್ಥಳಕ್ಕೆ ಹೋಗುತ್ತದೆ. ತದನಂತರ ಮೊಟ್ಟೆಯೊಡಿದ ಮರಿಗಳು ತನ್ನ ತಾಯಿಯನ್ನು ಹುಡುಕುತ್ತಾ ಒಂದು ಖಂಡದಿಂದ ಇನ್ನೊಂದು ಖಂಡ, ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಹೋಗುತ್ತವೆ. ದಾರಿ ಮಧ್ಯದಲ್ಲಿ ಅನುಭವಿಸುವ ಕಷ್ಟಗಳು ಹೇಳತೀರದು. ಆದರೂ ಕೂಡ ಹೋರಾಟಕ್ಕೆ ಸನ್ನದ್ಧರಾಗಿ ನಿಲ್ಲುತ್ತವೆ.
ಈಸಬೇಕು ಇದು ಜಯಿಸಬೇಕು ಎನ್ನುವ ಗಾದೆ ಮಾತಿನಂತೆ ಪ್ರತಿಯೊಬ್ಬ ಮನುಷ್ಯನು ತನ್ನ ಹಕ್ಕಿಗಾಗಿ ತನ್ನ ಉಳಿವಿಗಾಗಿ ಹೋರಾಟ ಮಾಡುವುದು ಅತ್ಯವಶ್ಯಕ. ಬಲಾಢ್ಯವಾದ ಆನೆಯನ್ನು ಒಂದು ಸಣ್ಣ ಇರುವೆ ಬಲಿ ತೆಗೆದುಕೊಳ್ಳುತ್ತದೆ. ಹಾಗೆ ವ್ಯವಸ್ಥೆ ಎಷ್ಟೇ ಕ್ರೂರವಾಗಿದ್ದರು ಕೂಡ ಹೋರಾಟದ ಮನೋಭಾವವನ್ನ ನಾವೆಂದಿಗೂ ಬಿಡಬಾರದು. ಯಹೂದಿ ಯರ ಪರವಾಗಿ ಹೋರಾಟ ಮಾಡಿದ ಏಸುಕ್ರಿಸ್ತ ಎಂತಹ ಕಠಿಣ ಪರಿಸ್ಥಿತಿ ಬಂದರೂ, ಶಿಲುಬೆಗೆ ಏರುವ ಸ್ಥಿತಿಯಲ್ಲಿ ಕೂಡ ತನ್ನ ಹೋರಾಟದ ಮನೋಭಾವವನ್ನ ಎಂದಿಗೂ ಬಿಡಲಿಲ್ಲ. ಸುಖದ ಸುಪ್ಪತ್ತಿಗೆಯಲ್ಲಿ ಜೀವನ ಕಳೆಯುತ್ತಿರುವ ಸಿದ್ಧಾರ್ಥ ಸಮಾಜದ ಸೇವೆಗಾಗಿ ಸರ್ವವನ್ನು ತ್ಯಾಗ ಮಾಡಿ ಅಮಾಯಕರ ಉಳಿವಿಗಾಗಿ ತನ್ನ ಬದುಕನ್ನೇ ಮುಡುಪಾಗಿಟ್ಟನು. ಮಹಮ್ಮದ್ ಪೈಗಂಬರರು ಹಿತ ಶತ್ರುಗಳಿಂದ ಅನೇಕ ತೊಂದರೆಗಳನ್ನು ಎದುರಿಸಿದರೂ ತನ್ನ ನಂಬಿದ ಜನರಿಗಾಗಿ ಹೋರಾಟ ಬಿಡಲಿಲ್ಲ. ಜಾತೀಯತೆ, ಅಂದ ಶ್ರದ್ದೆ, ವರ್ಣ ವ್ಯವಸ್ಥೆಯ ಶೋಷಣೆಯಿಂದ ನೊಂದ ಜನರನ್ನು ತಂದೆ ತಾಯಿ ಬಂಧು- ಬಳಗ ಎಂದು ಅಪ್ಪಿಕೊಂಡು ಹೋರಾಟ ಮಾಡಿದ ಜಗಜ್ಯೋತಿ ವಿಶ್ವಗುರು ಬಸವಣ್ಣನವರು ಇಡೀ ವಿಶ್ವದಲ್ಲಿಯೇ ಒಂದು ಮಹಾನ್ ಕ್ರಾಂತಿಯನ್ನು ಮಾಡಲು ಹಿಂದೇಟು ಹಾಕಲಿಲ್ಲ.
ಆರು ಮುನಿದು ನಮ್ಮ ಏನು ಮಾಡುವರು?ಊರು ಮುನಿದು ನಮ್ಮನೆಂತು ಮಾಡುವರು? ನಮ್ಮ ಕುನ್ನಿಗೆ ಕೂಸ ಕೊಡಬೇಡ. ತಳಿಗೆಯಲಿಕ್ಕಬೇಡ.ಆನೆ ಮೇಲೆ ಹೋಹವನ ಶ್ವಾನ ಕಚ್ಚ ಬಲ್ಲುದೆ, ನಮಗೆ ನಮ್ಮ ಕೂಡಲಸಂಗನುಳ್ಳನ್ನಕ್ಕ?
ಕಲ್ಯಾಣ ಕ್ರಾಂತಿಯ ಸಂದರ್ಭದಲ್ಲಿ ಸಾವಿರಾರು ಶರಣ- ಶರಣೆಯರ ಮಾರಣ ಹೋಮವಾಯಿತು. ಅವರು ಯಾರು ಹೋರಾಟದ ಕಿಚ್ಚನ್ನು ಬಿಟ್ಟು ಕೊಡಲಿಲ್ಲ. ಬಸವಣ್ಣನವರ ಹೋರಾಟ ಸನಾತನವಾದಿ, ಪಟ್ಟಭದ್ರ ಹಿತಾಸಕ್ತಿಗಳ, ರಾಜ್ಯ ಆಡಳಿತದ ವಿರುದ್ಧವೇ ಆಗಿತ್ತು. ಆದರೂ ಕೂಡ ಬಸವಣ್ಣನವರು ಅಂದಿನ ಕಂದಾಚಾರಗಳನ್ನು, ವರ್ಣವಸ್ಥೆಯನ್ನು, ವರ್ಗ ವ್ಯವಸ್ಥೆಯನ್ನು ಕಟುವಾಗಿ ಟೀಕಿಸಿದರಲ್ಲದೆ ತಮ್ಮ ಪ್ರಾಣಾರ್ಪಣೆಯನ್ನು ಎದೆಗುಂದದೆ ಮಾಡಿದರು.
ಊರ ಮುಂದೆ ಹಾಲ ಹಳ್ಳ ಹರಿಯುತ್ತಿರಲು ಓರೆಯಾವಿನ ಬೆನ್ನ ಹರಿಯಲದೇಕಯ್ಯಾ? ಲಜ್ಜೆಗೆಡಲೇಕಯ್ಯಾ? ನಾಣುಗೆಡಲೇಕಯ್ಯಾ? ಕೂಡಲಸಂಗಮದೇವನುಳ್ಳಕ್ಕ ಬಿಜ್ಜಳನ ಭಂಡಾರವೆನಗೇಕಯ್ಯಾ.
ನ್ಯಾಯ ನಿಷ್ಠುರಿ: ದಾಕ್ಷಿಣ್ಯಪರ ನಾನಲ್ಲ. ಲೋಕ ವಿರೋಧಿ: ಶರಣನಾರಿಗಂಜುವನಲ್ಲ, ಕೂಡಲಸಂಗದೇವರ ರಾಜತೇಜದಲ್ಲಿಪ್ಪನಾಗಿ
ನಾವಿಂದು ಅನುಭವಿಸುತ್ತಿರುವ ಸ್ವಾತಂತ್ರ್ಯವನ್ನು ಹಿಂದೆ ಲಕ್ಷಾಂತರ ಜನ ಸ್ವಾತಂತ್ರ ಹೋರಾಟಗಾರರ ತ್ಯಾಗ ಬಲಿದಾನದಿಂದ ಬಂದಾಗಿದೆ ದೇಶದ ಸ್ವಾತಂತ್ರ್ಯಕ್ಕಾಗಿ ನಗುನಗುತ್ತಾ ಏರಿದ ಮಹನೀಯರು ಸ್ಮರಣೀಯರಾಗಿದ್ದಾರೆ. ಕೆಲ ಪಟ್ಟ ಭದ್ರ ಸಾರಥಿಗಳಿಂದ ವ್ಯವಸ್ಥೆ ಹದಗೆಟ್ಟು ಹೋಗುತ್ತಿದ್ದರೂ ಆ ವ್ಯವಸ್ಥೆಯ ಆಡಳಿತ ನಡೆಸುವವರು ಅದ್ಯಾವ ಕಾರಣಕ್ಕೆ ಮೂಕ ವಿಸ್ಮಿತರಾಗಿ ಕುಳಿತುಕೊಂಡಿದ್ದಾರೆ ಎಂಬುದು ತಿಳಿಯುತ್ತಿಲ್ಲ. ಅನ್ಯಾಯ ಶೋಷಣೆ ದೌರ್ಜನ್ಯ ಇವುಗಳನ್ನು ಎದುರಿಸಲು ದೊಡ್ಡ ಸಮೂಹವೇ ಬೇಕೆಂಬುದೇನಿಲ್ಲ ಯಾವಾಗಲೂ ಹೋರಾಟ ಒಬ್ಬ ವ್ಯಕ್ತಿಯಿಂದ ಪ್ರಾರಂಭವಾಗಿ ಮುಂದೆ ಒಂದು ದೊಡ್ಡ ಮಹಾಸಾಗರವಾಗಿ ಬೆಂಬಲಕ್ಕೆ ಬರುತ್ತದೆ ಎಂಬ ಧ್ಯೇಯ ಆತ್ಮವಿಶ್ವಾಸ ಛಲವನ್ನ ನಾವು ಬೆಳೆಸಿಕೊಳ್ಳಬೇಕಾಗಿದೆ.
–ಆರ್.ಆರ್.ಪಟ್ಟಣ
ಮುಳಗುಂದ–ರಾಮದುರ್ಗ
9481931842