ಅಂಕಣ 21-ಅಂತರಂಗದ ಅರಿವು
ಹಲವು ಕಾಲ ಹಂಸನ ಸಂಗವಿದ್ದರೇನೂ…..
ಹಲವು ಕಾಲ ಹಂಸನ ಸಂಗವಿದ್ದರೇನೂ ಬಕ ಶುಚಿಯಾದ ಬಲ್ಲುದೇ?
ಕಲ್ಪತರುವಿನ ಸಂಘದಲ್ಲಿದ್ದರೇನು ಕೊರಡು ಕೊನರಾಗಿ ಫಲಿಸುವುದೇ ?
ಗಂಗಾ ನದಿಯೊಳಗೆ ಪಾಷಾಣವಿದ್ದರೇನು ಮೃದುವಾಗ ಬಲ್ಲುದೇ ?
ಕಾಶಿ ಕ್ಷೇತ್ರದಲ್ಲಿ ಶುನಕವಿದ್ದರೇನೂ, ಅದರ ಕ್ಷೀರ ಪಂಚಾಮೃತಕ್ಕೆ ಸಲ್ಲುವುದೇ?
ತೀರ್ಥದಲ್ಲಿ ಗಾರ್ದಭವಿದ್ದರೇನೂ ಕಾರಣಿಕನಾಗಬಲ್ಲದೆ?
ಖಂಡದ ಹಾಲೊಳಗೆ ಒಂದು ಇದ್ದಲ್ಲಿ ಇದ್ದರೇನು ಬಿಳುಪಾಗಬಲ್ಲದೆ?
ಕೂಡಲಸಂಗಮದೇವ ನಿಮ್ಮ ಶರಣರ ಸಂಘವಿದ್ದಡೇನು ಅಸಜ್ಜನನು ಸದ್ಭಕ್ತನಾಗಬಲ್ಲನೆ?
-ಬಸವಣ್ಣನವರು
ಬಸವಣ್ಣನವರ ಈ ವಚನವು ವ್ಯಕ್ತಿಯ ವ್ಯಕ್ತಿತ್ವದಲ್ಲಿರುವ ಮೂಲ ದೋಷಗಳನ್ನು ಸಂಗದಿಂದ, ಸ್ಥಳಗಳ ಪ್ರಭಾವದಿಂದ, ವ್ಯಕ್ತಿಗಳ ಸಹವಾಸದಿಂದ, ಬದಲಾಯಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ
ಹಲವು ಕಾಲ ಹಂಸನ ಸಂಗವಿದ್ದರೇನೂ ಬಕ ಶುಚಿಯಾಗಬಲ್ಲುದೇ?
ಹಂಸ ಶುದ್ಧ ಬಿಳುಪಿನ ಪಕ್ಷಿ . ಬಕ ಬೂದು ಮತ್ತು ಕಪ್ಪು ಬಣ್ಣದ ಪಕ್ಷಿ. ಹಂಸ ಮತ್ತು ಬಕ ಪಕ್ಷಿಗಳು ನೀರಿನಲ್ಲಿ ವಾಸ ಮಾಡುವ ಹಕ್ಕಿಗಳಾಗಿದ್ದರೂ ಅವುಗಳು ಹೊಂದಿರುವ ಬಣ್ಣದಲ್ಲಿ ವ್ಯತ್ಯಾಸವಿದೆ. ಬಕಪಕ್ಷಿಯು ತಾನು ಹಂಸದಂತೆ ಶುಭ್ರವಾದ ಬಿಳಿ ಬಣ್ಣವನ್ನು ಪಡೆಯಲು ಹಂಸ ಪಕ್ಷಿಯ ಸಂಗ ಮಾಡಿ ಅದರ ಜೊತೆಗಿದ್ದರೆ ಅದರ ಬಣ್ಣ ಬಿಳುಪಾಗಲು ಸಾಧ್ಯವೆ…? ಬಕ ಹಂಸನಂತ ಶುಭ್ರ ವಾಗಿ ಕಾಣಲು ಸಾಧ್ಯವೆ…? ಸಾಧ್ಯವಿಲ್ಲ ಏಕೆಂದರೆ ಸಹವಾಸದಿಂದ ಬಾಹ್ಯ ಗುಣಲಕ್ಷಣಗಳು ಬದಲಾಗುವುದಿಲ್ಲ.
ಕಲ್ಪತರುವಿನ ಸಂಗದಲ್ಲಿದ್ದರೇನು ಕೊರಡು ಕೊನರಾಗಿ ಫಲಿಸುವುದೇ ?
ಕಲ್ಪತರು ಎಂದರೆ ಬೇಡಿದ್ದನ್ನು ನೀಡುವ ವೃಕ್ಷ. ಅಥವಾ ತೆಂಗಿನ ಮರ ತೆಂಗಿನ ಮರಗಳ ಸಾಲಿನ ಮಧ್ಯೆ ಒಂದು ಕೊರಡು ನಿಂತರೆ ಅದು ತೆಂಗಿನ ಮರದಂತೆ ಫಲವನ್ನ ಕೊಡುವುದೇ…? ಸಾಧ್ಯವಿಲ್ಲ. ಏಕೆಂದರೆ ಕೊರಡು ಕೊನರಲು ದೇವನ ಒಲುಮೆ ಬೇಕು. ಕಲ್ಪವೃಕ್ಷದ ಪಕ್ಕದಲ್ಲಿದ್ದ ಮಾತ್ರಕ್ಕೆ ಅದು ಕೋನರಲಾರದು, ಫಲವನ್ನ ನೀಡಲಾರದು, ಏಕೆಂದರೆ ಕಲ್ಪವೃಕ್ಷಕ್ಕೆ ಕೇಳುವ ಚೈತನ್ಯ ಕೊರಡಿನೊಳಗೆ ಇಲ್ಲ.
ಗಂಗಾ ನದಿಯೊಳಗೆ ಪಾಷಾಣವಿದ್ದರೇನು ಮೃದುವಾಗ ಬಲ್ಲುದೇ ?
ಪವಿತ್ರವಾದ ಗಂಗಾ ನದಿಯೊಳಗೆ ಇದ್ದ ಮಾತ್ರಕ್ಕೆ ಕಲ್ಲು ಮೃದುವಾಗಲು ಸಾಧ್ಯವೇ…? ಸಾಧ್ಯವಿಲ್ಲ. ಕಲ್ಲಿನ ಮೂಲಗುಣ ಕಠಿಣತ್ವ. ಅದು ಎಂಥದ್ದೇ ನೀರಲ್ಲಿ ಇದ್ದರೂ ಕೂಡ ಅದಕ್ಕೆ ಮೃದುತನ ಬರಲು ಸಾಧ್ಯವಿಲ್ಲ.
ಕಾಶಿ ಕ್ಷೇತ್ರದಲ್ಲಿ ಶುನಕವಿದ್ದರೇನೂ, ಅದರ ಕ್ಷೀರ ಪಂಚಾಮೃತಕ್ಕೆ ಸಲ್ಲುವುದೇ?
ಕಾಶಿ ಪವಿತ್ರವಾದ ಕ್ಷೇತ್ರ ಆ ಪವಿತ್ರ ಕ್ಷೇತ್ರದಲ್ಲಿ ಇದ್ದ ಮಾತ್ರಕ್ಕೆ ನಾಯಿ ಪವಿತ್ರವಾಗಲಾರದು. ಕಾಶಿಯಲ್ಲಿ ವಾಸವಾಗಿದೆ ಎನ್ನುವ ಕಾರಣಕ್ಕೆ ನಾಯಿಯ ಹಾಲನ್ನ ಪಂಚಾಮೃತಕ್ಕೆ ಬಳಸುವುದಿಲ್ಲ ಬಳಸಲಾಗದು ಏಕೆಂದರೆ ನಾಯಿಯ ಮೊಲೆಯ ಹಾಲು ನಾಯಿಯ ಮರಿಗಳಿಗೆಲ್ಲದೆ ಪಂಚಾಮೃತಕ್ಕೆ ಸಲ್ಲದಯ್ಯ ಎಂದು ಬಸವಣ್ಣನವರು ಇನ್ನೊಂದು ವಚನದಲ್ಲಿ ಹೇಳಿದ್ದಾರೆ
ತೀರ್ಥದಲ್ಲಿ ಗಾರ್ದಭವಿದ್ದರೇನೂ ಕಾರಣಿಕನಾಗಬಲ್ಲದೆ?
ತೀರ್ಥವೆಂದರೆ ಪುಣ್ಯಜಲದ ಸ್ಥಾನ. ಪುಣ್ಯ ಜಲ ಉತ್ಪತ್ತಿಯಾಗುವ ಸ್ಥಾನದಲ್ಲಿ ಇದ್ದ ಮಾತ್ರಕ್ಕೆ ಕತ್ತೆಯ ಬುದ್ಧಿಶಕ್ತಿ ಬದಲಾಗುವುದಿಲ್ಲ. ಕತ್ತೆಯು ಚುರುಕಾಗಿ ಕೆಲಸ ಮಾಡುವ ಪ್ರವೃತ್ತಿಯನ್ನ ಅದು ಪಡೆಯಲು ಸಾಧ್ಯವಿಲ್ಲ ಏಕೆಂದರೆ ಕತ್ತೆಗೆ ಕಾರಣೀಕನಂತೆ ಚುರುಕುತನ ಬರಲು ಸಾಧ್ಯವಿಲ್ಲ.
ಖಂಡದ ಹಾಲೊಳಗೆ ಒಂದು ಇದ್ದಲ್ಲಿ ಇದ್ದರೇನು ಬಿಳುಪಾಗಬಲ್ಲದೆ?
ದೊಡ್ಡ ಪಾತ್ರೆಯ ತುಂಬಾ ಗಟ್ಟಿ ಹಾಲನ್ನು ಸುರಿದು ಅದರೊಳಗೆ ಒಂದು ಚೂರು ಇದ್ದಲ್ಲಿಯನ್ನು ಹಾಕಿದರೆ ಇದ್ದಲಿ ಹಾಲಿನ ಗುಣವನ್ನ ಪಡೆದು ಬೆಳ್ಳಗಾಗಲು ಸಾಧ್ಯವೇ…? ಸಾಧ್ಯವಿಲ್ಲ. ಏಕೆಂದರೆ ಇದ್ದಲ್ಲಿಯನ್ನು ಎಷ್ಟೇ ಪ್ರಮಾಣದ ಹಾಲಿನಲ್ಲಿ ಹಾಕಿದರು ಹಾಲಿನ ಬಿಳುಪನ್ನು ಹೀರಿಕೊಳ್ಳುವ ಗುಣ ಇದ್ದರೆ ಇಲ್ಲ. ಅದು ತನ್ನ ಮೂಲ ಕಪ್ಪಾದ ಬಣ್ಣವನ್ನು ಬಿಡಲಾಗುವುದಿಲ್ಲ.
ಕೂಡಲಸಂಗಮದೇವ ನಿಮ್ಮ ಶರಣರ ಸಂಗವಿದ್ದಡೇನು ಅಸಜ್ಜನನು ಸದ್ಭಕ್ತನಾಗಬಲ್ಲನೆ?
ಕೂಡಲ ಸಂಗಮದೇವನ ಶರಣರ ಜೊತೆಗಿರುವ ಅಸಜ್ಜನ ಅಂದರೆ ಅನಾಗರೀಕ ಗುಣ , ವರ್ತನೆಯನ್ನು ಹೊಂದಿದ ವ್ಯಕ್ತಿ ,ಸದ್ಭಕ್ತ ನಾಗಲು ಸಾಧ್ಯವೇ…? ಸಾಧ್ಯವಿಲ್ಲ. ಏಕೆಂದರೆ ಅವನ ಮೂಲ ಪ್ರವೃತ್ತಿಗಳನ್ನ ಮೀರಿ ಅವನು ತನ್ನನ್ನು ತಾನು ಬದಲಾಯಿಸಿಕೊಳ್ಳಲು ಸಾಧ್ಯವಿಲ್ಲ ಸಂಗದಿಂದ ಅಂತಹ ಮೂಲ ಪ್ರವೃತ್ತಿಗಳನ್ನ ಬದಲಾಯಿಸಲು ಸಾಧ್ಯವಿಲ್ಲ. ತನ್ನನ್ನು ತಾನು ಬದಲಾಯಿಸಿಕೊಳ್ಳಬೇಕು ಎನ್ನುವ ಮಾನಸಿಕ ಸಿದ್ಧತೆಯ ಬೇಕಾಗುತ್ತದೆ ಅಂತ ಮಾನಸಿಕ ಸಿದ್ಧತೆ ಅಸಜನನಾದವನಲ್ಲಿ ಕಾಣುವುದು ಅಸಾಧ್ಯ ಎನ್ನುತ್ತಾರೆ ಬಸವಣ್ಣನವರು.
-ಡಾ. ನಿರ್ಮಲ ಬಟ್ಟಲ