ಆಯ್ದಕ್ಕಿ ಲಕ್ಕಮ್ಮ

ಆಯ್ದಕ್ಕಿ ಲಕ್ಕಮ್ಮ

ಕಾಯಕ ತತ್ವವೇ ಮೈವೆತ್ತಿ ನಿಂತ ಪುಣ್ಯಾಂಗನೆ ಆಯ್ದಕ್ಕಿ ಲಕ್ಕಮ್ಮ. ಕಾಯಕ ತತ್ವವನ್ನು ಪೂರ್ಣ ಸ್ವರೂಪದಲ್ಲಿ ನಿತ್ಯಜೀವನದಲ್ಲಿ ನಿರಂತರವಾಗಿ ಯಥಾರ್ಥವಾಗಿ ಆಚರಣೆಯಲ್ಲಿ ತಂದ ಮಹಾ ಸಾಧ್ವಿ ಶಿರೋಮಣಿ, ಅನುಭವದ ಖಣಿ, ಶಿವಾನುಭವ -ಲೋಕಾನುಭಾವಗಳ ಸುಂದರ ಸಮನ್ವಯದ ಪ್ರತೀಕ, ಕ್ರಿಯಾಜ್ಞಾನಗಳ ಸಮ ಸಮುಚ್ಚಯದ ಸಂಕೇತ. ಪ್ರಪಂಚ ಸುಖದೊಡನೆ ಪಾರಮಾರ್ಥ ಸಾಧನೆಯ ಗೌರಿಶಂಕರ ಶಿಖರವನ್ನೇರಿದ ಪುಣ್ಯದ ಮೂರ್ತಿ, ಕಟ್ಟುನಿಟ್ಟಿನ ಶಿಸ್ತಿನ ಭಕ್ತೆ.

ರಾಯಚೂರು ಜಿಲ್ಲೆಯ ಲಿಂಗಸೂಗುರು ತಾಲೂಕಿನಲ್ಲಿರುವ ಅಮರೇಶ್ವರ ಇಂದಿಗೂ ಜಾಗೃತ ಪುಣ್ಯಕ್ಷೇತ್ರವಾಗಿ ವಿರಾಜಿಸುತ್ತಿದೆ. ಅವಿಮುಕ್ತ ಕ್ಷೇತ್ರವಾಗಿ ನೋಡುಗರ ಕಣ್ಸೆಳೆಯುತ್ತಿದೆ. ಪ್ರತಿವರ್ಷವೂ ಇಲ್ಲಿ ಜಾತ್ರಾ ಮಹೋತ್ಸವವು ಜರಗುತ್ತದೆ. ಈ ಪುಣ್ಯಕ್ಷೇತ್ರದಿಂದಲೇ ಸತಿಪತಿಗಳು ಒಂದಾಗಿ ಚಂದಾಗಿ ಬಸವಾದಿ ಪ್ರಮಥರ ಕೀರ್ತಿಯನ್ನು ಕೇಳಿ ಕಲ್ಯಾಣಕ್ಕೆ ಬಂದರೆಂದು ಹೇಳಲಾಗುತ್ತದೆ. ಅವರೇ ಆಯ್ದಕ್ಕಿ ಮಾರಯ್ಯ ದಂಪತಿಗಳು.

ಪತಿ ಮಾರಯ್ಯನೂ ಶ್ರೇಷ್ಠ ವಚನಕಾರ ಮತ್ತು ಮಹಾನುಭಾವಿ. ಅವನ ಐವತ್ತೆಂಟು ವಚನಗಳು ಉಪಲಬ್ಧವಿವೆ.  ಈ ವಚನಗಳನ್ನು ಅವಲೋಕಿಸಿದರೆ ಆತನ ಜಿಜ್ಞಾಸೆ ವ್ಯಕ್ತವಾಗುತ್ತದೆ. ಸತಿಗೆ ತಕ್ಕ ಪತಿ. ಅದೊಂದು ಅಪರೂಪದ ಅಪೂರ್ವ ದಾಂಪತ್ಯ. ಕನ್ನಡ ಸಾಹಿತ್ಯ ಪ್ರಪಂಚದಲ್ಲಿ ಆಯ್ದಕ್ಕಿ ಲಕ್ಕಮ್ಮ ಮಾರಯ್ಯನವರು ಶಾಸನದಂತೆ ಅಚ್ಚಳಿಯದೆ ಉಳಿದಿದ್ದಾರೆ. ಬನವಾಸಿ ಮಧುಕೇಶ್ವರ ದೇವಾಲಯದ ಶಿಲಾ ಮಂಟಪದಲ್ಲಿ ಕೆತ್ತಿದ ಶರಣರ ವಿಗ್ರಹಗಳ ಸಾಲಿನಲ್ಲಿ ಆಯ್ದಕ್ಕಿ ಮಾರಯ್ಯನವರ ವಿಗ್ರಹವೂ ಇದೆ. ಉಭಯತರರಲ್ಲಿ ಅವಿನಾಭಾವ ಸಂಬಂಧ ಪೂರಕ, ಪೋಷಕ.

ಲಕ್ಕಣ ದಂಡೇಶನ ಶಿವತತ್ವ ಚಿಂತಾಮಣಿಯಲ್ಲಿ – ಆಯ್ದಕ್ಕಿ ಮಾರಯ್ಯ ತಂದೆ ಭಕ್ತರ ಮನೆಯೊಳಾಯ್ದು ತಂದಾ ಧಾನ್ಯದಿಂದ ಬಲಿ ಮಾಡಿ ಮಾಯ ಜಂಗಮ ರೂಪಿಲಭವ ಬರೆ ಸಲಿಸುತಿಹ ನೊಂದಿನಂ ಬಾರದಿರಲು
ಸಾಯಸಂಬಡು ತಲಾರೋಗಿಸಲ್ ಸತಿಸಹಿತ
ಲಾಯಿರುಳು ಶಿವಬರಲು ವುದ್ಧರಿಸಿತಂದಿಕ್ಕೆ
ವಾಯು ಸಖನೇತ್ರನೊಲಿದಿತ್ತ ಗಣಪದವನ
ಚರಣಾ೦ಬುಜಕ್ಕೆ ಶರಣು…. ಹೀಗೆ
ಆಯ್ದಕ್ಕಿ ಲಕ್ಕಮ್ಮ ಮಾರಯ್ಯನವರ ವರ್ಣನೆ ಸುಂದರವಾಗಿ ಮೂಡಿ ಬಂದಿದೆ.

ಕಲ್ಯಾಣದ ಮಹಾಮನೆಯ ಅಂಗಳದಲ್ಲಿ ಬಿದ್ದ ಅಕ್ಕಿಯನ್ನು ಆಯ್ದು ಜಂಗಮದಾಸೋಹವನ್ನು ಆಯ್ದಕ್ಕಿ ಲಕ್ಕಮ್ಮ ಮಾರಯ್ಯ ದಂಪತಿಗಳು ನಡೆಸುತ್ತಿದ್ದರು. ಪರೀಕ್ಷಕನಾದ ಬಸವಣ್ಣ ಒಂದು ದಿನ ಎಂದಿಗಿಂತ ಹೆಚ್ಚು ಅಕ್ಕಿಯನ್ನು ಅಂಗಳದಲ್ಲಿ ಚೆಲ್ಲಿಸುತ್ತಾರೆ. ಇದನರಿಯದ ಮಾರಯ್ಯ ಅವನ್ನೆಲ್ಲ ಸಂತೋಷದಿಂದ ಆಯ್ದು ತಂದು ಹೆಂಡತಿಯ ಕೈಯಲ್ಲಿ ಕೊಡುತ್ತಾನೆ. ದಿನಕ್ಕಿಂತ ಹೆಚ್ಚು ಅಕ್ಕಿಯನ್ನು ಆಯ್ದು ತಂದಾಗ ಲಕ್ಕಮ್ಮನಿಗೆ ಸಂದೇಹವಾಗುತ್ತದೆ.

ಒಮ್ಮನವ ಮೀರಿ ಇಮ್ಮನದಲ್ಲಿ ತಂದಿರಿ,
ಇದು ನಿಮ್ಮ ಮನವೋ,
ಬಸವಣ್ಣನ ಅನುಮಾನದ ಚಿತ್ತವೋ?
ಈ ಮಾತು ಮಾರಯ್ಯಪ್ರಿಯ ಅಮರೇಶ್ವರ ಲಿಂಗಕ್ಕೆ ಸಲ್ಲದ ಬೋನ
ಅಲ್ಲಿಯೇ ಸುರಿದು ಬನ್ನಿ

ಎಂಥಹ ಅಪರೂಪದ ಅವೀಸ್ಮರಣೀಯ ಮಾತು… ಇಂದಿನ ಹೆಣ್ಣುಮಕ್ಕಳು ಅಗತ್ಯವಾಗಿ ಅರಿಯಬೇಕಾದ ವಚನವಿದು. ಇನ್ನೂ ತನ್ನಿ, ಇನ್ನೂ ತನ್ನಿ ಎಂದು ಕೇಳುವ ಹೆಂಡಂದಿರ ಮಧ್ಯೆ ಆಯ್ದಕ್ಕಿ ಲಕ್ಕಮ್ಮನ ಈ ಕೂಗು ಅದೆಷ್ಟು ಅಪ್ಯಾಯಮಾನ.

ಮುಂದುವರೆದು ಲಕ್ಕಮ್ಮ ಹೇಳುತ್ತಾಳೆ…
ಆಸೆಯೆ೦ಬುದು ಅರಸಿಂಗಲ್ಲದೆ,
ಶಿವಭಕ್ತರಿಗು೦ಟೆ ಅಯ್ಯಾ
ರೋಷವೆಂಬುದು ಯಮದೂತರಿಗಲ್ಲದೆ,
ಅಜಾತರಿಗುಂಟೆ ಅಯ್ಯಾ
ಈಸಕ್ಕಿಯಾಸೆ ನಿಮಗೇಕೆ… ಈಶ್ವರನೊಪ್ಪ
ಮಾರಯ್ಯಪ್ರಿಯ ಅಮರೇಶ್ವರಲಿಂಗಕ್ಕೆ
ದೂರ ಮಾರಯ್ಯ.
ಆಯ್ದಕ್ಕಿ ಲಕ್ಕಮ್ಮನ ಹಿರಿಮೆಗೆ ಇಷ್ಟು ಸಾಲದು,
ಅವಳ ಒಂದೊಂದು ಮಾತು ಮುತ್ತಿನ ಮಾಣಿಕ್ಯದಂತೆ, ಸ್ಪಟಿಕದ ದೀಪ್ತಿಯಂತೆ.

ಅನುಭವಮಂಟಪದ ಚಿಂತನಾಗೋಷ್ಠಿಯಲ್ಲಿ ಮೈಮರೆತಿದ್ದ ತನ್ನ ಪತಿರಾಯ ಮಾರಯ್ಯನನ್ನು ಅವಳು ಎಚ್ಚರಿಸುವ ಪರಿ ಅದೆಂತು…
ಕಾಯಕ ನಿಂದಿತ್ತು ಹೋಗಯ್ಯಾ ಎನ್ನಾಳ್ದನೆ,
ಭಾವಶುದ್ಧವಾಗಿ ಮಹಾಶರಣರ
ತಿಪ್ಪೆಯ ತಪ್ಪಲ ಅಕ್ಕಿಯ ತಂದು
ನಿಶ್ಚೈಸಿ ಮಾಡಬೇಕು
ಮಾರಯ್ಯಪ್ರಿಯ ಅಮರೇಶ್ವರ ಲಿಂಗಕ್ಕೆ,
ಬೇಗ ಹೋಗು ಮಾರಯ್ಯ
ಇಂತಹ ಅದೆಷ್ಟೋ ಅಣಿಮುತ್ತುಗಳು ಆಯ್ದಕ್ಕಿ ಲಕ್ಕಮ್ಮನ ಶಬ್ದ ಭಂಡಾರದಲ್ಲಿವೆ.

ಭಕ್ತಂಗೆ ಬಡತನವುಂಟೆ, ನಿತ್ಯಂಗೆ ಮರಣ ಉಂಟೆ,
ಶಿವಭಕ್ತರಿಗೆ ಬಡತನವಿಲ್ಲ, ಸತ್ಯರಿಗೆ ದುಷ್ಕರ್ಮವಿಲ್ಲ,
ಕೂಟಕ್ಕೆ ಸತಿಪತಿ ಎಂಬ ನಾಮವಿಲ್ಲದೆ
ಅರಿವಿಂಗೆ ಬೇರೊಂದೊಡಲುಂಟೆ
ಹೀಗೆ ಆಯ್ದಕ್ಕಿ ಲಕ್ಕಮ್ಮನ ಅನುಭವದ ನುಡಿಗಳು ಎಲ್ಲರನ್ನೂ ತಲುಪುತ್ತವೆ. ಅವಳ ಮುತ್ತಿನಂಥ ಮಾತುಗಳು ಮನೋಹರವಾಗಿವೆ, ಮನೋಜ್ಞವಾಗಿವೆ, ಅರ್ಥಪೂರ್ಣವಾಗಿವೆ, ಚಿಂತನಮೌಲ್ಯಗಳನ್ನು ಹೊತ್ತು ನಿಂತಿವೆ. ಲಕ್ಕಮ್ಮನ ವೈಚಾರಿಕ ಅನುಭಾವ, ಪೂರ್ಣ ವಿಚಾರಧಾರೆ , ಆಕೆಯ ಸ್ವತಂತ್ರ ಮನೋಧರ್ಮವನ್ನು ಪ್ರತಿಬಿಂಬಿಸಿ ನಿಂತಿವೆ.

ಗರ್ವದಿಂದ ಮಾಡುವ ಭಕ್ತಿ ದ್ರವ್ಯದ ಕೇಡು,
ನಡೆಯಿಲ್ಲದ ನುಡಿ ಅರಿವಿ೦ಗೆ ಹಾನಿ,
ಕೊಡದೆ ತ್ಯಾಗಿ ಎನಿಸಿಕೊಂಬುದು
ಮುಡಿಯಿಲ್ಲದ ಶೃಂಗಾರ, ಧೃಢವಿಲ್ಲದ ಭಕ್ತಿ, ಅಡಿ ಒಡೆದ ಕುಂಭದಲ್ಲಿ ಸುಜಲವ ತುಂಬಿದೆ,
ಮಾರಯ್ಯ ಪ್ರಿಯ ಅಮರೇಶ್ವರ ಲಿಂಗವ
ಮುಟ್ಟದ ಭಕ್ತಿ
ಮಾಡುವ ಮಾಟವುಳ್ಳನ್ನಕ್ಕ
ಬೇರೊಂದು ಪದವನರಸಲೇತಕ್ಕ,
ದಾಸೋಹವೆಂಬ ಸೇವೆಯ ಬಿಟ್ಟು ನೀಸಲಾರದೆ
ಕೈಲಾಸವೆಂಬ ಆಸೆ ಬೇಡ,
ಮಾರಯ್ಯ ಪ್ರಿಯ ಅಮರೇಶ್ವರ
ಲಿಂಗವಿದ್ದ ಠಾವೇ ಕೈಲಾಸ
ಹೀಗೆ ತನ್ನ ಪತಿಯಾದ ಮಾರಯ್ಯನ ಮನದ ಮರವೆಯ ಮುಸುಕನ್ನು , ಅಜ್ಞಾನದ ತಿಮಿರನ್ನು ತಿಳಿಗೊಳಿಸುವ ವಚನಗಳು ಲಕ್ಕಮ್ಮನ ಅನುಭವ – ಅನುಭಾವಗಳ ಎತ್ತರ ಬಿತ್ತರವನ್ನು ಎತ್ತಿ ಹೇಳುತ್ತವೆ.

ವಚನ ಧರ್ಮದ ನೀತಿಯ ಪತಾಕೆ ಇಲ್ಲಿ ಗುಡುಗುಡಿಸುತ್ತದೆ, ವಿಜೃಂಭಿಸುತ್ತದೆ. ಕೈಲಾಸವೆಂಬುದು ಎಲ್ಲಿಯೂ ಇಲ್ಲ, ಮಾಡುವ ಕಾಯಕವೇ ಕೈಲಾಸವೆಂಬ ಮಾತು ಜೀವಂತ ಜನಾಂಗದ ಲಕ್ಷಣವಾಗಿದೆ. ಇದೊಂದು ಮಾತನ್ನು ಆಚರಣೆಗೆ ತಂದರೆ ಸಾಕು ಸಮಾಜವು ಸುಖದ ಸಾಗರವಾಗುವುದು, ಮಾನವತೆಯ ಮಹಾಮಂದಾರ ಸುಳಿಸುಳಿದು ಸೂಸುವುದು, ವಿಶ್ವಸಂಸ್ಕೃತಿಯ
ಪರಿಮಳ ಹರಡುವುದು. ಸುಜ್ಞಾನಪ್ರಭೆಯಿಂದ
ಬೆಳಗಿನಿಂತ ಲಕ್ಕಮ್ಮನಂತಹ ಮಹಿಳೆ ಲಕ್ಷ್ಮಕ್ಕೊಬ್ಬರಾದರೂ ಹುಟ್ಟಿದರೆ ಸಮಾಜ ಸಮೃದ್ಧವಾಗುತ್ತದೆ, ಜ್ಞಾನದ ಅಲೆ, ಶಾಂತಿಯ ನೆಲೆ ಆಗುತ್ತದೆ.

ಆಸೆಯನ್ನು ಜೈಸಿ , ಭವಪಾಶವನ್ನು ಕತ್ತರಿಸಿ, ಕೈಲಾಸವನ್ನು ಕಾಯಕದಲ್ಲಿ ಕಂಡ ಅವರ ನೆನಹು ನಂದಾದೀಪ ” ಎನ್ನುವ ಡಾ. ಸಿದ್ಧಯ್ಯ ಪುರಾಣಿಕರ ಮಾತುಗಳು ನಿಜಕ್ಕೂ ಲಕ್ಕಮ್ಮನ ವ್ಯಕ್ತಿತ್ವವನ್ನು ಕಟ್ಟಿಕೊಡುತ್ತವೆ.

ಸುಧಾ ಪಾಟೀಲ್
ಬೆಳಗಾವಿ

Don`t copy text!