ಕವಿತೆ
ಆ (ಕನಕ) ಕಿಂಡಿಯಲಿ
e-ಸುದ್ದಿ, ರಾಯಚೂರು
ಭೂಮಂಡಲದೊಳಗಿನ
ಅಸಮಾನತೆಯ ಲಾವ
ಕುದಿಕುದಿದು ಭಕ್ತಿಯ
ಆಕರ್ಷಣೆಗೆ ಹೊರಬಂತು
ಆ ಕಿಂಡಿಯಲಿ
ಅಡಗಿದ್ದ ಸತ್ಯಕ್ಕೆ
ಹರದಾರಿಯಾಯ್ತು
ಅಡಗಿಸಿಟ್ಟವರ ಕುಲದ
ನೆಲೆಯ ಬುಡವ ಅದುರಿತ್ತು
ಆ ಕಿಂಡಿಯಲಿ
ಮೋಹನ ತರಂಗಿಣಿ
ರಾಮ ಧ್ಯಾನ ಚರಿತೆ
ಹರಿದಾಸ ಸಾಹಿತ್ಯ
ಹರಿದು ಬಂದಿತ್ತು
ಆ ಕಿಂಡಿಯಲಿ
“ನಾನು” ಹೋದರೆ ಹೋಗುವೆ
ಎನುವ ನಿಜವ ಹೊರ ತಂದಿತ್ತು
“ಬಾಡ” ದ ಕೀರ್ತನೆಗಳ ಮೋಡ
ಧಾರಾಕಾರವಾಗಿ ಸುರಿದಿತ್ತು ಧರೆಗೆ
ಆ ಕಿಂಡಿಯಲಿ
ಅದು ವಿಶ್ವದ ಯೋನಿ
ಪ್ರಸವವಾಯಿತು ಅಂದು ಅಲ್ಲಿ
ನವ ಚಿಂತನೆಯ ಚಿಗುರು
ಶ್ರೀಕೃಷ್ಣ ತಿರುಗಿದ ಬೆಚ್ಚ ಬೆರಗಾಗಿ
ತನ್ನ ಭಕ್ತನ ನೋಡಲು
ಆ ಕಿಂಡಿಯಲಿ
–ಡಾ ಸುರೇಶ ಸಗರದ
ಹೃದಯ ರೋಗ ತಜ್ಞರು
ರಾಯಚೂರು 9448139339