ಪ್ರಸ್ತುತ
” ಕನಕದಾಸರ ಕೀರ್ತನೆಗಳಲ್ಲಿ ಸಾಮಾಜಿಕ ಚಿಂತನೆ ಮತ್ತು ವೈಚಾರಿಕತೆ “
೧೨ ನೆಯ ಶತಮಾನದಲ್ಲಿ ಸಮಾಜದಲ್ಲಿರುವ ವರ್ಣ,ವರ್ಗ,ಲಿಂಗ ತಾರತಮ್ಯ, ಅಸ್ಪೃಶ್ಯತೆ, ಮೂಢನಂಬಿಕೆ,ಕಂದಾಚಾರ ಅಳಿಸಿ ಸಮಾನತೆಯ ಸಮಾಜವನ್ನು ನಿರ್ಮಿಸಲು ಪ್ರಯತ್ನಿಸಿದವರು ಬಸವಾದಿ ಶರಣರು. ಅವರು ಕಟ್ಟಿದ ಕಲ್ಯಾಣ ಸಮಾಜ ಕಲ್ಯಾಣ ಕ್ರಾಂತಿಯ ನಂತರ ನಾಶ ಹೊಂದಿತು.ಮತ್ತೆ ಅದೇ ರೀತಿಯ ಕನಸುಗಳನ್ನು ಹೊತ್ತು ಅದೇ ರೀತಿಯ ಧೋರಣೆ, ಸಾಮಾಜಿಕ ಚಿಂತನೆ,ವೈಚಾರಿಕ ದೃಷ್ಟಿಕೋನದ ಮೂಲಕ ಸಮಾಜವನ್ನು ಕಟ್ಟ ಬಯಸಿದವರು ದಾಸರು.ಅದರಲ್ಲಿ ಮುಖ್ಯವಾಗಿ ಕಂಡು ಬರುವವರು ಕನಕದಾಸರು. ” ಕರ್ನಾಟಕದಲ್ಲಿ ಕೆಳವರ್ಗಗಳ ಅಭಿವೃದ್ಧಿಗೆ ಶ್ರಮಿಸಿದ ಮೊದಲ ಸಾಂಸ್ಕೃತಿಕ ನಾಯಕ ಬಸವಣ್ಣನಾದರೆ ,ಅವರ ನಂತರ ಬಂದ ಸಾಂಸ್ಕೃತಿಕ ನಾಯಕ ಕನಕದಾಸರು ” ಎಂದು ಹಿ.ಶಿ.ರಾಮಚಂದ್ರೆಗೌಡ ಅವರು ಅಭಿಪ್ರಾಯ ಪಡುತ್ತಾರೆ.
೧೫- ೧೬ ನೆಯ ಶತಮಾನದಲ್ಲಿ ಕರ್ನಾಟಕದಲ್ಲಿ ಜನಪ್ರಿಯವಾದ ಭಕ್ತಿಪಂಥದ ಮುಖ್ಯ ಹರಿಕಾರರಲ್ಲಿ ಕನಕದಾಸರು ಒಬ್ಬರು.ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲ್ಲೂಕಿನ ಬಾಡ ಗ್ರಾಮದಲ್ಲಿ ಬೀರಪ್ಪ ಮತ್ತು ಬಚ್ಚಮ್ಮ ದಂಪತಿಗಳ ಮಗನಾಗಿ ಜನಿಸಿದರು. ದಂಡನಾಯಕರಾಗಿದ್ದ ಕನಕರು ಯುದ್ಧದ ಭೀಕರ ಪರಿಣಾಮಗಳನ್ನು ನೋಡಿ ವೈರಾಗ್ಯ ಭಾವನೆ ಹೊಂದಿ ಹರಿಭಕ್ತರಾದರು.ನಂತರ ವ್ಯಾಸರಾಯರ ಶಿಷತ್ವ ವಹಿಸಿಕೊಂಡರು. ಕನ್ನಡ ಭಾಷೆಯ ಪ್ರಸಿದ್ಧ ಕೀರ್ತನಕಾರರಾದ ಕನಕದಾಸರು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅನುಪಮವಾದದ್ದು.ಇವರು ‘ ಮೋಹನ ತರಂಗಿಣಿ’ ‘ ನಳಚರಿತ್ರೆ’ ‘ ಹರಿಭಕ್ತಿಸಾರ’ ‘ ರಾಮಧ್ಯಾನ ಚರಿತ್ರೆ’ ಕೃತಿಗಳೊಂದಿಗೆ ಕೀರ್ತನೆಗಳು, ಉಗಾಭೋಗ,ಮಂಡಿಗೆ ಗಳನ್ನು ರಚಿಸಿದ್ದಾರೆ.
ಕನಕದಾಸರ ಸಾಹಿತ್ಯದಲ್ಲಿ ಅವರ ಸಮಾನತೆಯ ಸಮಾಜ ನಿರ್ಮಾಣದ ಧೋರಣೆ, ಸಾಮಾಜಿಕ ಕಳಕಳಿ, ಲೋಕವಿಮರ್ಶೆ,ಸಂಪ್ರದಾಯ ವಿರೋಧಿ ಧೋರಣೆ, ಸಾಮಾಜಿಕ ಚಿಂತನೆ ಮತ್ತು ವೈಚಾರಿಕ ಮನೋಭಾವನೆಗಳು ಕಂಡುಬರುವುದು ಅವರ ಕೀರ್ತನೆಗಳಲ್ಲಿ. ಕನಕದಾಸರು ತಮ್ಮ ಕೀರ್ತನೆಗಳಲ್ಲಿ ಜನರ ನಡುವಳಿಕೆ, ಸಮಾಜದಲ್ಲಿ ಬೇರುಬಿಟ್ಟ ರೂಢಿಗತ ಸಂಪ್ರದಾಯಗಳು, ಜಾತಿಮತ ವ್ಯವಸ್ಥೆಗಳು, ಬಡವ ಬಲ್ಲಿದ, ಮೇಲು ಕೀಳೆಂಬ ತಾರತಮ್ಯಗಳು,ಹಳಸಲ ಮೌಲ್ಯಗಳು, ಬದುಕಿನ ಆಡಂಬರ ಮೊದಲಾದ ವಿಚಾರಗಳನ್ನು ತಮ್ಮ ಕೀರ್ತನೆಗಳಲ್ಲಿ ವಿಡಂಬಿಸುತ್ತಾರೆ.ತಮ್ಮ ವಿಚಾರ ಸ್ವಾತಂತ್ರ್ಯ, ಉತ್ತಮ ವಿವೇಕ,ಪರಿಪಕ್ವ ಪ್ರಪಂಚಾನುಭವ,ಜನಭಾಷೆಯ ಅರಿವಿನಿಂದ ಸಮಾಜಕ್ಕೆ ಅವಶ್ಯಕವಾದ ನೀತಿ ತತ್ವಗಳನ್ನು ಬೋಧಿಸುತ್ತಾರೆ.ಸಾಮಾಜಿಕ ಕಳಕಳಿ, ಲೋಕದೃಷ್ಟಿ,ಹರಿತವಾದ ಮಾತುಗಳಿಂದ ಸಮಾಜದ ಕುಂದುಕೊರತೆಗಳನ್ನು ಮುಚ್ಚುಮರೆಯಿಲ್ಲದೆ ಖಂಡಿಸುತ್ತಾರೆ.
ಕನಕದಾಸರ ಬಹುರೂಪಿ ವ್ಯಕ್ತಿತ್ವದ ದರ್ಶನ ಆಗುವುದು ಅವರ ಕೀರ್ತನೆಗಳಲ್ಲಿ. ಅವರ ಕಾಲದಲ್ಲಿ ಸಮಾಜವನ್ನು ಕಾಡುತ್ತಿದ್ದ ಬಹುಮುಖ್ಯ ಸಮಸ್ಯೆ ಎಂದರೆ ಜಾತಿ ವ್ಯವಸ್ಥೆ.ಸಮಾಜದಲ್ಲಿ ವ್ಯಕ್ತಿಯ ಪಾಂಡಿತ್ಯ, ಪ್ರತಿಭೆ, ವಿದ್ವತ್ತು, ಜ್ಞಾನ ಮಾನವೀಯತೆಗಿಂತ ವ್ಯಕ್ತಿಯ ಜಾತಿಗೆ ಹೆಚ್ಚು ಬೆಲೆ ಕೊಡಲಾಗುತ್ತಿತ್ತು. ಮಹಾನ್ ಪ್ರತಿಭೆ ಹೊಂದಿದ್ದ ಕನಕದಾಸರನ್ನು ಸಹ ವ್ಯಾಸರಾಯರ ಶಿಷ್ಯವರ್ಗ,ಉಡುಪಿಯ ಅರ್ಚಕರು ಮುಕ್ತವಾಗಿ ಸ್ವೀಕರಿಸಲಿಲ್ಲ. ಆಗ ಕನಕದಾಸರು ಆ ಕುಲವನ್ನು ಕುರಿತು ಪ್ರಶ್ನಿಸುತ್ತಾರೆ. ಅದನ್ನು ಅವರ ಕೀರ್ತನೆಯ ಮೂಲಕ ನೋಡಬಹುದು.
ಕುಲ ಕುಲ ಕುಲವೆನ್ನುತಿಹರು
ಕುಲವ್ಯಾವುದು ಸತ್ಯ ಸುಖವುಳ್ಳ ಜನರಿಗೆ
ಕನಕರ ಈ ಕೀರ್ತನೆ ನಮ್ಮ ಸಾಮಾಜಿಕ ವ್ಯವಸ್ಥೆಯ ಚಿತ್ರಣವನ್ನು ನೀಡುತ್ತದೆ. ಇಲ್ಲಿ ಅವರು ” ಕುಲವ್ಯಾವುದು ಸತ್ಯಸುಖವುಳ್ಳ ಜನರಿಗೆ ? ” ಎಂದು ಪ್ರಶ್ನಿಸುವ ಮೂಲಕ ಸಮಾಜದಲ್ಲಿನ ಜಾತಿ ವ್ಯವಸ್ಥೆಯನ್ನು ಕಿತ್ತೊಗೆದು ಅದನ್ನು ಶುದ್ಧ ಮಾಡುವ ಪ್ರಯತ್ನ ಮಾಡುತ್ತಾರೆ.ಕನಕದಾಸರು ಗೊಡ್ಡು ಸಂಪ್ರದಾಯಗಳ ಸಮಾಜದಲ್ಲಿಯೇ ಬೆಳೆದರು ವೈಚಾರಿಕ ದೃಷ್ಟಿಕೋನ ಬೆಳೆಸಿಕೊಂಡವರು.ಅದಕ್ಕಗಿಯೇ
“ಕೆಸರೊಳು ತಾವರೆ ಪುಟ್ಟಲು ಅದು ತಂದು
ಬಿಸಜನಾಭನಿಗರ್ಪಿಸಲಿಲ್ಲವೆ
ಹಸುವಿನ ಮಾಂಸದೊಳುತ್ಪತ್ತಿ ಕ್ಷೀರವ
ವಸುಧೆಯೊಳಗೆ ಭೂಸುರರುಣಲಿಲ್ಲವೆ
ಮೃಗಗಳ ಮೈಯಲ್ಲಿ ಪುಟ್ಟಿದ ಕತ್ತುರಿಯ
ತೆಗೆದು ಪೂಸುವರು ದ್ವಿಜರೆಲ್ಲರು
. ಎನ್ನುತ್ತಾರೆ.ಉತ್ತಮ ಕುಲದವರು ಸಹ ಕೀಳುಮಟ್ಟದ ವಸ್ತುಗಳನ್ನು ಬಳಸುತ್ತಾರೆ ಎಂಬುದಕ್ಕೆ ಇಲ್ಲಿ ಅವರು ಕೊಡುವ ಮೂರು ಉದಾಹರಣೆಗಳು ಅವರ ವೈಚಾರಿಕ ದೃಷ್ಟಿಕೋನವನ್ನು ವ್ಯಕ್ತಪಡಿಸುತ್ತದೆ.
೧) ಕೆಸರಿನಲ್ಲಿ ಹುಟ್ಟಿದ ಕಮಲದ ಹೂವು ದೇವರಿಗೆ ಅರ್ಪಿಸುತ್ತಾರೆ.
೨) ಹಸುವಿನ ಮಾಸದಲ್ಲಿ ಹುಟ್ಟಿದ ಹಾಲನ್ನು ಎಲ್ಲ ಜಾತಿಯವರು ಸೇವಿಸುತ್ತಾರೆ.
೩)ಮೃಗದ ಮೈಯಲ್ಲಿ ಹುಟ್ಟಿದ ಕಸ್ತೂರಿಯನ್ನು ಮೇಲ್ವರ್ಗದವರು ಪೂಸಿಕೊಳ್ಳುತ್ತಾರೆ
ಈ ಕೆಸರು,ಪ್ರಾಣಿಗಳಿಂದ ಉತ್ಪತ್ತಿಯಾದ ವಸ್ತುಗಳನ್ನೆಲ್ಲ ಎಲ್ಲರೂ ಸಮನಾಗಿ ಬಳಸಿ ,ಕೆಲ ಮನುಷ್ಯರನ್ನು ಮಾತ್ರ ದೂರವಿಡುತ್ತಾರೆ.ಹಾಗಾದರೆ ಮನುಷ್ಯರ ಕುಲ ಅವುಗಳಿಗಿಂತ ಕೀಳೆ ? ಎಂದು ಪ್ರಶ್ನಿಸುತ್ತಾರೆ. ಹಾಗೆಯೇ ದೇವ ನಾರಾಯಣನ ಕುಲವನ್ನು ಕುರಿತು ಕನಕರು ಪ್ರಶ್ನಿಸುತ್ತಾರೆ. ರಾಮನಾಗಿ ಹುಟ್ಟಿದಾಗ ವಿಷ್ಣು ಕ್ಷತ್ರಿಯ, ಕೃಷ್ಣನಾದಾಗ ಗೊಲ್ಲ ,ಹಾಗೆಯೇ ಮತ್ಸ್ಯ, ಕೂರ್ಮ, ವರಾಹ ಅವತಾರ ತಾಳಿದ ಅವನನ್ನು ಪೂಜಿಸುವಾಗ ನರರು ಆ ಪ್ರಾಣಿಗಳಿಗಿಂತ ಕೀಳೆ ಎಂಬ ಪ್ರಶ್ನೆ ಅವರಲ್ಲಿದೆ.ಮನುಷ್ಯನ ಈ ಸಂಕುಚಿತ ಮನೋವೃತ್ತಿಯನ್ನು ಕನಕದಾಸರು ಖಂಡಿಸುತ್ತಾರೆ.ಪಂಚೇಂದ್ರಿಗಳ ಕುಲವನ್ನು ಪ್ರಶ್ನಿಸಿ “ಆತ್ಮಾಂತರಾತ್ಮ ನೆಲೆಯಾದಿಕೇಶವನು ಆತನೊಲಿದ ಮೇಲೆ ಯಾತರ ಕುಲ” ಎಂದು ಕುಲದ ಆಚರಣೆಯನ್ನು ವಿರೋಧಿಸುತ್ತಾರೆ.
೧೦ ನೆಯ ಶತಮಾನದಲ್ಲಿ ಪಂಪ ಹೇಳಿದ ” ಕುಲಂಕುಲಮಲ್ತು ಚಲಂಕುಲ ಗುಣಂಕುಲ ಅಭಿಮಾನವೊಂದೆ ಕುಲಂ ಅಣ್ಮುಕುಲಂ” ,ಮತ್ತು ” ಮಾನವಕುಲಂ ತಾನೊಂದೆ ವಲಂ” ಮಾತನ್ನು ಕನಕರ ಈ ಕೀರ್ತನೆಗಳು ಹೋಲುತ್ತವೆ.
” ಯಾತರವನೆಂದುಸುರಲಿ “ಎಂಬ ಈ ಕೀರ್ತನೆಯಲ್ಲಿಯೂ ಸಹ ಜಾತಿ ವ್ಯವಸ್ಥೆಯನ್ನು ವಿರೋಧಿಸುವದರೊಂದಿಗೆ ವೈಚಾರಿಕ ಅಂಶಗಳನ್ನು ಮುಂದಿಡುತ್ತಾರೆ
” ಮುಟ್ಟು ಹುಟ್ಟಿನೊಳು ನೆಟ್ಟನೆ ನಾ ಬಂದೆ
ತೊಟ್ಟಿದ್ದೆನಾಗ ತೊಗಲಬಕ್ಕಣ
ಇಷ್ಟರೊಳಗೆ ಒಂದು ವಿವರವರಿಯದಿಂಥ
ಭ್ರಷ್ಟಗೆ ನನಗಿನ್ಯಾತರ ಕುಲವಯ್ಯ ”
. ಮನುಷ್ಯರೆಲ್ಲ ಹುಟ್ಟಿದ್ದು ಮುಟ್ಟಿನ ಮೂಲಕ. ನಮ್ಮ ದೇಹ ಎಲಬು,ಚರ್ಮ, ಮಾಂಸ,ರಕ್ತಗಳಿಂದ ನಿರ್ಮಿತವಾದದ್ದು.ನವರಂಧ್ರಗಳಿಂದ ನಾವು ಹೊಲಸನ್ನು ಒಸರುವೆವು.ಹೀಗಿರುವಾಗ ಕುಲವೆಂದು ಡಂಭಾಚಾರ ಯಾಕೆ ಮಾಡುವೆ ಎಂದು ಪ್ರಶ್ನಿಸುತ್ತಾರೆ. ಯಾರು ತಮ್ಮನ್ನು ತಾವು ಕುಲಜರು ಎಂದು ಭಾವಿಸಿದ್ದಾರೊ ಅವರ ಪ್ರಾಬಲ್ಯ ಅಥವಾ ಏಕಸ್ವಾಮ್ಯಕ್ಕೆ ಸವಾಲು ಎಸೆಯುತ್ತಾರೆ.
ಜಾತಿ ವ್ಯವಸ್ಥೆ ಕೇವಲ ಕನಕದಾಸರ ವಯಕ್ತಿಕ ಪ್ರಶ್ನೆಯಲ್ಲ.ಅಲಕ್ಷಕ್ಕೊಳಗಾದ ಸಮೂಹದ ಪ್ರಶ್ನೆ.ಇಲ್ಲಿ ಅವರು ಪರಂಪರಾಗತವಾಗಿ ಬಂದ ಅಸಮಾನತೆ, ಅಹಂಕಾರ ಡಾಂಭಿಕತನಗಳಿಗೆ ಪ್ರತಿರೋಧ ಒಡ್ಡುತ್ತಾರೆ.ಆ ಮೂಲಕ ಕೆಳ ಸಮುದಾಯದವರ ಅಸಹಾಯಕತೆಗೆ ದನಿಯಾಗಿ ನಿಲ್ಲುತ್ತಾರೆ. ಶೋಷಣೆ ಮಾಡಿಸಿಕೊಳ್ಳುವುದೆ ತಮ್ಮ ಬದುಕು ಎಂದು ನಂಬಿದವರ ಬದುಕು ಬದಲಾಯಿಸಲು ಹೋರಾಡುತ್ತಾರೆ.
ಅವರ ” ಕುಲಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯನ್ನೆನಾದರೂ ಬಲ್ಲಿರಾ” ಎಂಬ ಕೀರ್ತನೆಯು ಸಹ ಜಾತಿ ವ್ಯವಸ್ಥೆಯನ್ನು ವಿರೋಧಿಸುವ ಅವರ ಕ್ರಾಂತಿಕಾರಕ ಮನೋಧರ್ಮವನ್ನು ವ್ಯಕ್ತಪಡಿಸುತ್ತದೆ. ಇವರ ‘ ರಾಮಧ್ಯಾನ ಚರಿತ್ರೆ’ ರಾಗಿ ಭತ್ತಗಳ ಸಂಕೇತದ ಮೂಲಕ ಶ್ರಮಿಕವರ್ಗ ಮತ್ತು ಅಧಿಕಾರಶಾಹಿ ವರ್ಗದ ನಡುವಿನ ತಿಕ್ಕಾಟವನ್ನೆ ಪ್ರತಿಬಿಂಬಿಸುತ್ತದೆ.
ಕನಕದಾಸರು ಸಮಾಜದ ಕುಟೀಲ ವ್ಯಕ್ತಿಗಳನ್ನು ನೇರವಾಗಿ ಕೇಳುತ್ತಾ ಅವರು ನಿರ್ವಹಿಸಬೇಕಾದ ಕರ್ತವ್ಯಗಳನ್ನು ತಿಳಿಸಿ ಅವರಿಗೆ ನೀತಿ ಬೋಧನೆ ಮಾಡುತ್ತಾರೆ.
” ಸತ್ಯವಂತರ ಸಂಗವಿರಲು ತೀರ್ಥವ್ಯಾತಕೆ
ನಿತ್ಯ ಜ್ಞಾನಿಯಾದ ಮೇಲೆ ಚಿಂತೆಯಾತಕೆ”
ದೇವರ ತೀರ್ಥ ಶ್ರೇಷ್ಠವಾದದ್ದು ಆದರೆ ಸತ್ಯವಂತರ ಸಂಗ ಅದಕ್ಕಿಂತ ಶ್ರೇಷ್ಠ. ಪರೋಪಕಾಕ್ಕೆ ಆಗದ ಧನ,ದಾನಧರ್ಮ ಮಾಡದ ಸ್ವಾರ್ಥಿ,ಲೋಭಿ ಸಿರಿವಂತ, ಡಂಭಾಚಾರಿ,ಮಾನಹೀನನಾಗಿ ಬದಕುವ ವ್ಯಕ್ತಿ, ಗುರುಹಿರಿಯರನ್ನು ಗೌರವಿಸದ ಮಕ್ಕಳು, ಪ್ರೀತಿಯಿಂದ ಎಡೆಯಿಕ್ಕದ,ಸನ್ನೆಯನ್ನರಿತು ನಡೆಯದ ಗೃಹಿಣಿ, ಮೆಚ್ಚಿದ ಹೆಣ್ಣನ್ನು ಪ್ರೀತಿಯಿಂದ ಕಾಣದ ಪುರುಷ, ಸಮರ್ಥವಾಗಿ ಆಳದ ದೊರೆ,ನೀತಿಯಿಂದ ಬಾಳದ ಸೇವಕ,ಸತ್ಯವನ್ನು ನಿರ್ವಹಿಸದ ಕುಟಿಲ ಇದ್ದು ಫಲವಿಲ್ಲ ಎಂದು ಹೇಳುವ ಮೂಲಕ ಕುಟಿಲ ವ್ಯಕ್ತಿಗಳು ಆತ್ಮವಿವರ್ಶೆ ಮಾಡಿಕೊಳ್ಳುವ ಹಾಗೆ ಮಾಡುತ್ತಾರೆ.
ಕನಕದಾಸರ ಈ ಕೀರ್ತನೆ ಇಂದಿಗೂ ಪ್ರಸ್ತುತ. ಸರಿಯಾಗಿ ರಾಜ್ಯಭಾರ ಮಾಡಿ ಪ್ರಜೆಗಳ ಸೌಖ್ಯ ಬಯಸದ ಪ್ರಧಾನಿ, ಮುಖ್ಯಮಂತ್ರಿ, ರಾಷ್ಟ್ರಕಾಯದ ಸೈನಿಕರು, ತಂದೆ ತಾಯಿಗಳನ್ನು ವೃದ್ಧಾಶ್ರಮಕ್ಕೆ ಕಳುಹಿಸುವ ಮಕ್ಕಳು ಇದ್ದು ಇಲ್ಲದ ಹಾಗೆ.
ಕನಕದಾಸರು ಸಾಧು,ಸನ್ಯಾಸಿ, ದಾಸ,ಜಂಗಮ ವೇಷಗಳ ಮೂಲಕ ಜಗತ್ತಿನಲ್ಲಿ ನಡೆಯುವ ಕಪಟ,ವಂಚನೆ, ದುರ್ವ್ಯವಹಾರ,ದುಷ್ಕೃತ್ಯ,ಡಂಭಾಚಾರಗಳನ್ನು ನಿರ್ದಾಕ್ಷಿಣ್ಯವಾಗಿ ಖಂಡಿಸುತ್ತಾರೆ.
ಜಪವ ಮಾಡಿದರೇನು ತಪವ ಮಾಡಿದರೇನು
ಕಪಟಗುಣ ವಿಪರೀತ ಕಲುಷವಿದ್ದವರು
ನೇಮವಿಲ್ಲದ ಹೇಮವೇತಕಯ್ಯಾ
ತೀರ್ಥವ ಪಡೆದವರೆಲ್ಲಾ ತಿರುನಾರಾಯಣನ ನಾಮಧಾರಿಗಳಲ್ಲ
ಜನ್ಮಸಾರ್ಥಕವಿಲ್ಲದವರೆಲ್ಲಾ ಭಾಗವತರಲ್ಲಾ
ನೇಮ ನಿತ್ಯಗಳಿಗಿಂತ ನಿರ್ಮಲವಾದ ಮನಸ್ಸು ಮುಖ್ಯ ಎಂಬ ಧೋರಣೆ ಕನಕರದ್ದು.”ಅಜ್ಞಾನಿಗಳ ಕೂಡ ಅಧಿಕ ಸ್ನೇಹಕಿಂತ ಸುಜ್ಞಾನಿಗಳ ಕೂಡ ಜಗಳವೇ ಲೇಸು ” ಎನ್ನುವ ಮೂಲಕ ಕಪಟ ವ್ಯಕ್ತಿಗಳ ಸ್ನೇಹವನ್ನು ನಿರಾಕರಿಸುತ್ತಾರೆ.
ಕನಕದಾಸರು ನೀತಿ ಹೇಳುವ ಮೂಲಕ ಸಮಾಜದ ಅಂಕುಡೊಂಕುಗಳನ್ನು ತಿದ್ದಿ ತೀಡಿ ಸಮಾಜವನ್ನು ನಯಗೊಳಿಸಿದರು.ನೀತಿ ಬೋಧನೆಯ ಧಾಟಿಯಲ್ಲಿ ಸಮಾಜದ ಅನಿಷ್ಟಗಳನ್ನು ತೊಡೆದು ಹಾಕಿ ಜನರನ್ನು ಪರಿವರ್ತನೆಗೊಳಿಸಲು ಪ್ರಯತ್ನಿಸಿದರು. ತಮ್ಮ ಚುಚ್ಚು ಮಾತುಗಳ ಮೂಲಕ ಸಮಾಜಕ್ಕೆ ಚಿಕಿತ್ಸೆ ನೀಡಿದರು. ಅವರ ಕಟುವಾದ ಮಾತುಗಳ ಹಿಂದೆ ವೈಚಾರಿಕ ಮನೋಭಾವ, ಸಾಮಾಜಿಕ ಪ್ರಜ್ಞೆ, ಮಾನವೀಯ ಅನುಕಂಪ, ಸಾಮಾಜಿಕ ಕಳಕಳಿ, ಮಾನವೀಯ ಮಿಡಿತಗಳಿವೆ.
–ಡಾ.ರಾಜೇಶ್ವರಿ ವೀ.ಶೀಲವಂತ
ಬೀಳಗಿ