ಅಕ್ಕನ ಅಂತರಾಳದ ಕೋರಿಕೆ

ಅಕ್ಕನೆಡೆಗೆ

ವಚನ – 35

ಅಕ್ಕನ ಅಂತರಾಳದ ಕೋರಿಕೆ

ಅಳಿಸಂಕುಲವೇ ಮಾಮರವೇ ಬೆಳುದಿಂಗಳೇ ಕೋಗಿಲೆಯೇ
ನಿಮ್ಮನೆಲ್ಲರನೂ ಒಂದ ಬೇಡುವೆನು
ಎನ್ನೊಡೆಯ ಚೆನ್ನಮಲ್ಲಿಕಾರ್ಜುನದೇವ ಕಂಡರೆ
ಕರೆದು ತೋರಿರೆ

ಅಕ್ಕಮಹಾದೇವಿ ಉಡುತಡಿಯಿಂದ ಕಲ್ಯಾಣಕ್ಕೆ ಪಯಣ ಬೆಳೆಸಿ, ಶರಣರ ಸಾಂಗತ್ಯದಲ್ಲಿ ಅನುಭಾವದ ಆಳಕ್ಕಿಳಿದು, ಅಂತರಂಗದ ಅರಿವಿನ ರಾಜಮಾರ್ಗ ಕಂಡುಕೊಳ್ಳುತ್ತಾಳೆ. ತನ್ನ ಹುಡುಕಾಟದಲ್ಲೇ ಶ್ರೀಶೈಲದ ಚೆನ್ನಮಲ್ಲಿಕಾರ್ಜುನನ ಬಳಿ ಸಾಗುತ್ತಾಳೆ. ಕಲ್ಯಾಣದ ಶರಣರೆಲ್ಲರೂ ಮಗಳನ್ನು ಪತಿ ಗೃಹಕ್ಕೆ ಕಳುಹಿಸುವಂತೆ ಭಾವಿಸುತ್ತಾರೆ. ಹಾಗೆ ಚೆನ್ನಮಲ್ಲಿಕಾರ್ಜುನನನ್ನು ಅರಸುತ್ತ ಒಂಟಿಯಾಗಿ ಸಾಗುವ ಮಾರ್ಗ ಮಧ್ಯದಲ್ಲಿ ರಚಿಸಿದ ವಚನ ಇದಾಗಿರಬಹುದೆಂದು ಹೇಳಬಹುದು.

ಶ್ರೀಶೈಲಕ್ಕೆ ಹೋಗುವಾಗ ಗೊಂಡಾರಣ್ಯವನ್ನು ಪ್ರವೇಶಿಸಿ, ಗುಡ್ಡಗಳ ನಡುವೆ ಹಾದು, ಕಾಡುಗಳ ದಾಟಿ ಹೋಗುತ್ತಾಳೆ. ಆಗ ಅಕ್ಕ ರಚಿಸಿದ ಅನೇಕ ವಚನಗಳು ಪ್ರಕೃತಿಯೊಂದಿಗೆ ಸಂವಾದಿಸಿದ ಭಾವಚಿತ್ರಣವನ್ನು ಕಣ್ಣಿಗೆ ಕಟ್ಟುತ್ತವೆ.

ಅಕ್ಕ ದೈಹಿಕವಾಗಿ ಶ್ರೀಶೈಲ ಪ್ರವೇಶಿಸಿದರೂ, ಹಂತ ಹಂತವಾಗಿ ದೇಹಾತೀತವಾಗುತ್ತ ಸಾಗುತ್ತಾಳೆ. ಹಸಿವು, ನೀರಡಿಕೆ, ನಿದ್ರೆಗಳನ್ನು ಮರೆತು ಚೆನ್ನಮಲ್ಲಿಕಾರ್ಜುನನದೇ ಧ್ಯಾನದಲ್ಲೇ ಮುಂದುವರಿಯುತ್ತಾಳೆ. ಆಗ ನಿಸರ್ಗದ ಪ್ರತಿಯೊಂದು ಚರಾಚರಗಳನ್ನು ಮಾತನಾಡಿಸುತ್ತ, ಅದೊಂದು ರೀತಿಯ ಅವಿನಾಭಾವ ಸಂಬಂಧ ಬೆಳೆದು, ತಾನು ಬೇರೆಯಲ್ಲ, ಈ ಪ್ರಕೃತಿ ಬೇರೆಯಲ್ಲ ಎನ್ನುವ ಭಾವ ಮೂಡಿರುತ್ತದೆ. ಈ ಮಧ್ಯದಲ್ಲಿ ರಚಿಸಲಾದ ಅನೇಕ ವಚನಗಳು ನಿಸರ್ಗದ ಹಲವು ಮುಖಗಳನ್ನೊಳಗೊಂಡಿವೆ. ಪ್ರಕೃತಿಯಲ್ಲಡಗಿರುವ ಎಲ್ಲಾ ಕೌತುಕಗಳೂ ಕಾವ್ಯದ ವಸ್ತುಗಳೇ ಆಗಿವೆ.

ಕಾಡಿನಲ್ಲಿ ಅರಳಿ ನಿಂತ ಹೂಗಳ ಮಕರಂದ ಹೀರಲು ಬಂದ ದುಂಬಿಗಳ ಹಿಂಡನುದ್ದೇಶಿಸಿ ಮೊದಲು ಕೇಳುತ್ತಾಳೆ. ನಂತರ ಮಾವಿನ ಮರಗಳನ್ನು, ಬೆಳ್ಳಗೆ ಬೆಳಕು ಚೆಲ್ಲಿದ ಚಂದಿರನನ್ನು, ಕೊನೆಗೆ ಕೋಗಿಲೆ, ಹೀಗೆ ಅವರೆಲ್ಲರಲ್ಲಿ ಒಂದು ಮಾತನ್ನು ನಿವೇದಿಸಿಕೊಳ್ಳುತ್ತಾಳೆ. “ಎನ್ನೊಡೆಯ ಚೆನ್ನಮಲ್ಲಿಕಾರ್ಜುನದೇವ ಕಂಡರೆ, ಕರೆದು ತೋರಿರೆ” ಎಂದು.

ಇಂತಹ ಘೋರಾರಣ್ಯದಲ್ಲಿ ಚೆನ್ನಮಲ್ಲಿಕಾರ್ಜುನ ನೆಲೆಸಿದ್ದಾನೆ. ಅವನನ್ನು ಅಲ್ಲೇ ಇರುವ ದುಂಬಿಗಳು, ಮಾವಿನ ಮರಗಳು, ಚಂದಿರ, ಕೋಗಿಲೆ ಕಂಡೇ ಕಂಡಿರುತ್ತಾರೆ ಎನ್ನುವ ನಂಬಿಕೆ ಅಕ್ಕನಲ್ಲಿ ದೃಢವಾಗಿರುತ್ತದೆ. ಇದು ಈ ವಚನದಲ್ಲಿ ಕಂಡುಬರುವ ಒಂದು ಓದಿನ ಗ್ರಹಿಕೆ. ಇದರಾಚೆಗೆ ಆಳಕ್ಕಿಳಿದು ನೋಡುವ ಪ್ರಯತ್ನ ಮಾಡಬಹುದು. ಅದಕ್ಕೆ ಹಡಪದ ಲಿಂಗಮ್ಮನ ವಚನ ಸಹಕಾರಿ. ವಚನ ಹೀಗಿದೆ,
ಕಾಯವೆಂಬ ಕದಳಿಯನೆ ಹೊಕ್ಕು
ನೂನ ಕದಳಿಯ ದಾಂಟಿ
ಜೀವಪರಮರ ನೆಲೆಯನರಿದು
ಜನನಮರಣವ ಗೆದ್ದು
ಭವವ ದಾಂಟಿದಲ್ಲದೆ ಘನವ ಕಾಣಬಾರದೆಂದರು
ನಮ್ಮ ಅಪ್ಪಣ್ಣಪ್ರಿಯ ಚೆನ್ನಬಸವಣ್ಣ”

ಲಿಂಗಮ್ಮನ ವಚನ ಮತ್ತು ಪಂಚೇಂದ್ರಿಯಗಳಾದ ಕಣ್ಣು, ಕಿವಿ, ಮೂಗು, ಬಾಯಿ, ಚರ್ಮ ಇವುಗಳ ಹಿನ್ನೆಲೆಯಲ್ಲಿ ಅಕ್ಕನ ಮೇಲಿನ ವಚನ ಅವಲೋಕಿಸಿದಾಗ, ಅದೇ ವಚನ ಭಿನ್ನವಾಗಿ ಗೋಚರಿಸುತ್ತದೆ.

ಮನುಷ್ಯನ ದೇಹದಲ್ಲಿ ಅಳಿಸಂಕುಲದಂತೆ ಅಸಂಖ್ಯಾತ ನರನಾಡಿಗಳು ಕೂಡಿರುತ್ತವೆ. ಕಿವಿಗಳ ಮೂಲಕ ತನ್ನ ಶರೀರದ ಒಳಹೊರಗಿನ ಮಾತನ್ನು ಕೇಳುವ ಆತ್ಮಕೋಗಿಲೆ ನೆಲೆಸಿರುತ್ತದೆ. ಅಘ್ರಾಣಿಸುವ ಶಕ್ತಿಯುಳ್ಳ ಮೂಗು ಮಾಮರದಂತೆ ಅಚಲವಾಗಿ ನಿಂತಿರುತ್ತದೆ. ಅರಿವಿನ ಕೇಂದ್ರವಾಗಿ, ತನ್ಮೂಲಕ ಜ್ಞಾನದ ಬೆಳಕನ್ನು ಬೆಳದಿಂಗಳಂತೆ ಚೆಲ್ಲುವ, ಬೀರುವ, ಮಿಂಚಿನ ಕಣ್ಣುಗಳಿವೆ. ಇವುಗಳೆಲ್ಲ ಇನ್ನಷ್ಟು ಚುರುಕಾಗಿ ಚೆನ್ನಮಲ್ಲಿಕಾರ್ಜುನನನ್ನು ತೋರಿಸಲಿ ಎಂದು ಅಕ್ಕ ನಿಸ್ಪೃಹವಾಗಿ ಬಯಸುತ್ತಾಳೆ. ಇಲ್ಲಿ ಚೆನ್ನಮಲ್ಲಿಕಾರ್ಜುನ ಎಂದರೆ ಅರಿವಿನ ಸಂಕೇತ! ಅಕ್ಕನ ಆಂತರಿಕ ಪಯಣದ ಗಮ್ಯ. ಅದನ್ನು ತಲುಪುವ ತಹತಹವೇ ಈ ವಚನದ ಆಶಯ.

ಅಕ್ಕನ ಇಡೀ ಜೀವಪಯಣದ ಹಾದಿಯಲ್ಲಿ ಉಡುತಡಿ, ಕಲ್ಯಾಣ, ಕದಳಿ, ಶ್ರೀಶೈಲ, ಚೆನ್ನಮಲ್ಲಿಕಾರ್ಜುನ ಎಲ್ಲವೂ ಭೌತಿಕ ಸಂಗತಿಗಳು. ಅರಿವಿನ ಮೂಲಕ ಜ್ಞಾನೋದಯದ ಬೆಳಕಿನ ದರ್ಶನ ಪಡೆಯುವುದೇ ಗುರಿಯಾಗಿರುತ್ತದೆ. ಅದು ಬಸವಾದಿ ಶರಣರ ಶಿವಯೋಗದ ಲಿಂಗ ಧ್ಯಾನದಲ್ಲಿ ಸಾಧ್ಯವಾಗಿಸಿಕೊಳ್ಳುತ್ತಾಳೆ. ಎಲ್ಲಾ ಶರಣರೊಂದಿಗೆ ಲಿಂಗಾಂಗ ಸಾಮರಸ್ಯದ ಅನುಭವವಾದರೂ, ಒಂಟಿ ಪಯಣ ಮಾಡುತ್ತ, ಏಕಾಂತದ ನಿಶಬ್ದದಲ್ಲಿ ತನ್ನ ಹುಡುಕಾಟ ಮುಂದುವರಿಸುವ ಮಹತ್ವಾಕಾಂಕ್ಷೆ ಅಕ್ಕನಲ್ಲಿರುತ್ತದೆ. ಅಂತೆಯೇ ಕದಳಿಯ ಪವೇಶ ಮಾಡುವ ತೀವ್ರತೆಯನ್ನು ಅವಳಲ್ಲಿ ಕಾಣಬಹುದು. ಇಲ್ಲಿ ಅರಣ್ಯ ಕದಳಿಗಿಂತಲೂ ಕಾಯ ಕದಳಿಯ ಪ್ರವೇಶಿಸುವ, ಅನುಭವಿಸುವ, ಅನುಭಾವಿಸುವ ಪ್ರಕ್ರಿಯೆ ಅಕ್ಕನಿಗೆ ಬಹಳ ಮುಖ್ಯವಾಗುತ್ತದೆ.

ಈ ವಚನದಿಂದ ಎರಡು ಮಹತ್ವದ ಸಂಗತಿಗಳನ್ನು ನಾವು ಗ್ರಹಿಸಬಹುದು. ಒಂದು ಅಕ್ಕನ ಪರಿಕಲ್ಪನೆಯಲ್ಲಿ ಮನುಷ್ಯ ಮತ್ತು ಪ್ರಕೃತಿ ಎರಡು ಒಂದೇ ಎನ್ನುವ ಭಾವ. ಇನ್ನೊಂದು ಕಾಡಿನಲ್ಲಿ ತಪಸ್ಸಿಗೆ ಕೇವಲ ಋಷಿ ಮುನಿಗಳು ಮಾತ್ರ ಹೋಗಲು ಸಾಧ್ಯ ಎನ್ನುವ ನಿಯಮವನ್ನು ಮುರಿದು ತೋರಿಸಿದ್ದು. ಜೇಡರ ದಾಸಿಮಯ್ಯನ ‘ನಡುವೆ ಸುಳಿವ ಆತ್ಮ ಹೆಣ್ಣೂ ಅಲ್ಲ ಗಂಡೂ ಅಲ್ಲ ಕಾಣಾ ರಾಮನಾಥ’ ಮಾತನ್ನು ಅಕ್ಕ ಸಾಬೀತು ಪಡಿಸಿದ್ದಾಳೆ. ಸಮಾಜದಲ್ಲಿ ಸಾಮೂಹಿಕವಾಗಿ ನಡೆದ ಶರಣ ಚಳುವಳಿಯಲ್ಲಿ ಅಕ್ಕನ ಪಾತ್ರ ಪ್ರಮುಖವಾದುದು. ಅದನ್ನು ವ್ಯಕ್ತಿಯ ವೈಯಕ್ತಿಕ ನೆಲೆಯಲ್ಲಿ ಆರಂಭವಾಗುವುದನ್ನು ಗುರುತಿಸಿ ವಿಕಸನಗೊಳಿಸಬಹುದು. ಅದರಿಂದ ಆಂತರಿಕವಾಗಿ ಸದೃಢವಾಗುವ ಸಾಧ್ಯತೆಗಳನ್ನು ಕಾಣುತ್ತೇವೆ. ಅಂತಹ ವ್ಯಕ್ತಿತ್ವ ವಿಕಾಸದ ತರಬೇತಿಯನ್ನು ನೀಡುವ ಅಕ್ಕನ ವಚನಗಳು ಹೇರಳವಾಗಿವೆ.

ಸಿಕಾ

Don`t copy text!