ನಿಮ್ಮಲ್ಲಿ, ಬೆರೆಸಿ ಬೇರಿಲ್ಲದಿರ್ದೆನು

 


ತನುವಿನಲ್ಲಿ ಹೊರೆಯಿಲ್ಲ, ಮನದಲ್ಲಿ ವ್ಯಾಕುಳವಿಲ್ಲ. ಭಾವದಲ್ಲಿ ಬಯಕೆಯಿಲ್ಲ, ಅರಿವಿನಲ್ಲಿ ವಿಚಾರವಿಲ್ಲ. ನಿಜದಲ್ಲಿ ಅವಧಾನವಿಲ್ಲ. ನಿರ್ಲೇಪಸಂಗದಲ್ಲಿ ಬಿಚ್ಚಿ ಬೇರಾಗಲಿಲ್ಲ. ಕಲಿದೇವರದೇವಾ, ನಿಮ್ಮಲ್ಲಿ, ಬೆರೆಸಿ ಬೇರಿಲ್ಲದಿರ್ದೆನು.

                      -ಮಡಿವಾಳ ಮಾಚಿದೇವ

ಮಡಿವಾಳ ಮಾಚಿದೇವ ಒಬ್ಬ ಶ್ರೇಷ್ಠ ವಚನಕಾರ ಹನ್ನೆರಡನೆಯ ಶತಮಾನದ ದಿಟ್ಟ ಗಣಾಚಾರಿ.
ಇವರ 360 ಕ್ಕೂ ಅಧಿಕ ವಚನಗಳು ಲಭ್ಯವಾಗಿವೆ.
ಇವನ ಹುಟ್ಟೂರು ವಿಜಾಪುರ ಜಿಲ್ಲೆಯ ಕಲಕೇರಿ.
ಕಲ್ಯಾಣದ ಕ್ರಾಂತಿಯ ನಂತರ ವಚನ ಸಂರಕ್ಷಣಾ ಹೋರಾಟದಲ್ಲಿ ಅಗ್ರ ಪಾತ್ರ ವಹಿಸಿ ಸೋವಿದೇವನ ಸೈನಿಕರ ಜೊತೆಗೆ ಯುದ್ಧ ಮಾಡುತ್ತ ಮುರಗೋಡ ಕಾದ್ರೊಳಿ ಕಟಕೊಳ ಕೊನೆಗೆ ಗೊಡಚಿಗೆ ಅಂದು ಅಲ್ಲಿಯೇ ಐಕ್ಯರಾದರು.

ತನುವಿನಲ್ಲಿ ಹೊರೆಯಿಲ್ಲ,
ಲಿಂಗದ ತನುವೆ ತನ್ನ ತನುವು
ಜಂಗಮದ ಸುಖವೇ ತನ್ನ ಸುಖವೆಂದು ನಂಬಿದ ಲಿಂಗಾಯತರು ಶರಣರು.
ವ್ಯಕ್ತಿಗತ ನೆಲೆಯಲ್ಲಿ ತನುವಿನ ಆಸ್ವಾದಕ್ಕೆ ಯಾವುದೇ ಹೊರೆಯಿಲ್ಲ ಎಂದಿದ್ದಾರೆ.
ಇದು ಸೂಕ್ಷ್ಮವಾಗಿ ಅಂದಿನ ಕಾಲದ ಯಜ್ಞ ಯಾಗಾದಿಗಳನ್ನು ತಿರಸ್ಕರಿಸಿ ಸಮಾಜದ ಹಿತವೇ ಮುಖ್ಯ ಅದು ತನ್ನ ಸುಖ ಹಿತವೆಂದು ಬಯಸಿದ ಮಡಿವಾಳ ಮಾಚಿದೇವ
ವ್ಯಕ್ತಿಗತ ಸುಖಕ್ಕೆ ಯಾವುದೇ ಹೊರೆಯಿಲ್ಲ ಎಂದಿದ್ದಾರೆ.

ಮನದಲ್ಲಿ ವ್ಯಾಕುಳವಿಲ್ಲ.

ಭಕ್ತನ ಮನದಲ್ಲಿ ಯಾವುದೇ
ದುಗುಡ ದುಮ್ಮಾನಳಿಗೆ ಅವಕಾಶ ಇಲ್ಲ.ಮನದಲ್ಲಿ ಚಿಂತೆ ಇಲ್ಲ ವ್ಯಾಕುಲತೆ ಇಲ್ಲದ ನಿಷ್ಕಲ್ಮಶ ಮನಸ್ಸು. ಶೇಖರಣೆ ಕೂಡಿ ಇಡುವ ವಿಚಾರ ಇಲ್ಲದಿರುವುದು ಶರಣರ ವಚನಗಳಲ್ಲಿ ಕಂಡು ಬರುತ್ತದೆ.
ಹೀಗಾಗಿ ಗಳಿಸುವ ಉಳಿಸುವ ಹಪಾಹಪಿ ಇಲ್ಲದಿರುವುದು ವಚನಕಾರರ ಶ್ರೇಷ್ಠ ಗುಣ.

ಅರಿವಿನಲ್ಲಿ ವಿಚಾರವಿಲ್ಲ.

ಅರಿವು ಭಕ್ತನ ಗುರು.ಅರಿವು ಮೂಡಿಸುವ ಸುಂದರ ಭಾವ ಪ್ರಜ್ಞೆ ಶರಣರ ವಿಚಾರವಾಗಿದೆ.
ಇಲ್ಲಿ ವಿಚಾರ ಎಂಬುದು ಲೌಕಿಕ ಜೀವನದ ಹೊಂದಾಣಿಕೆ ಚಿಂತೆ
ಗಳಿಕೆ ಉಳಿಕೆ .ಭಕ್ತನ ಮನ ನಿರ್ಗುಣ ತತ್ವವನ್ನು ಅರಿತವನು ಹೀಗಾಗಿ ಅಂತಹ ಭಕ್ತನ ಅರಿವಿನಲ್ಲಿ ಯಾವುದೇ ವಿಚಾರ ಇರುವದಿಲ್ಲ ಎಂದಿದ್ದಾರೆ ಮಡಿವಾಳ ಮಾಚಿದೇವ

ನಿಜದಲ್ಲಿ ಅವಧಾನವಿಲ್ಲ.

ವಾಸ್ತವಿಕ ನೆಲೆಗಟ್ಟಿನಲ್ಲಿ ತಮ್ಮ ನಿಜದ ಬದುಕನ್ನು ದಾಖಲಿಸುವ ಶರಣರು .
ಯಾವುದೇ ಅವಧಾನವನ್ನು ಕಲ್ಪಿಸಲು ಮುಂದಾಗದೆ.
ಬಂದು ಪರಿಸ್ಥಿತಿಗಳನ್ನು ಸಮರ್ಥವಾಗಿ ಎದುರಿಸಲು ಸಿದ್ಧರಾದವರು.

ನಿರ್ಲೇಪಸಂಗದಲ್ಲಿ ಬಿಚ್ಚಿ ಬೇರಾಗಲಿಲ್ಲ.
ನಿರ್ಲಿಪ್ತತೆ ಹೊಂದಿದ ಭಕ್ತ ತಾನು ವಿಷಯದ ಆಳಾಗಿ ತನ್ನ ಅಳಲನ್ನು ಬಿಚ್ಚಿ ಬೇರಾಗಲಿಲ್ಲ.

ಎಲ್ಲವನ್ನೂ ತ್ಯಜಿಸಿ ಅಪರಿಮಿತ ನೆಮ್ಮದಿ ಶಾಶ್ವತ ಜ್ಞಾನ ಸುಖ ಶಾಂತಿ ಬಯಸುವ ಶರಣ ತನ್ನ ಪ್ರಾಪಂಚಿಕ ಬಂಧನಗಳನ್ನು ತಾನೇ ತೊರೆದು ಮುಕ್ತನಾಗಿ
ಭವಿ ಬಿಟ್ಟು ಭಕ್ತನಾದ.
ಇಂತಹ ಭಕ್ತ ಮತ್ತೆ ತನ್ನ ಸುತ್ತಲಿನ ಸಮಸ್ಯೆಗಳನ್ನು ಹೇಳಿಕೊಂಡು ಭವಿ ಆಗಲಾರ.

ಕಲಿದೇವರದೇವಾ, ನಿಮ್ಮಲ್ಲಿ, ಬೆರೆಸಿ ಬೇರಿಲ್ಲದಿರ್ದೆನು.
ಶರಣರ ಉದಾತ್ತಿಕರಣದ ಚಿಂತನೆ ನಿಜಕ್ಕೂ ಶ್ಲಾಘನೀಯ.
ಮಾಡುವಂತಿರಬೇಕು ಮಾಡದಂತಿರಬೇಕು ಮಾಡುವ ಮಾಟದೊಳಗೆ ತಾನಿಲ್ಲದಂತಿರಬೇಕು ಎಂದಿರುವ ಬಸವಣ್ಣನವರ ವಚನದಂತೆ ಮಡಿವಾಳ ಮಾಚಿದೇವ
ಈ ಭೌತಿಕ ಜಗತ್ತಿನಲ್ಲಿ ಇದ್ದರೂ ಇಲ್ಲದಂತೆ ಕಲಿದೇವರಲ್ಲಿ ಬೆರೆತರೂ ಬೇರೆಯದಂತೆ ತನ್ನ ಅಸ್ಮಿತೆ ಉಳಿಸಿಕೊಂಡ ಭಕ್ತ ತಾನೇ ಶಿವ ಸ್ವರೂಪಿ ಎಂದು ಸಾಧಿಸುತ್ತಾನೆ.
ಭಕ್ತನ ಶಿವಯೋಗ ಸಾಧನ
ಶಿಶು ಕಂಡ ಕನಸು
ಉರಿಯುಂಡ ಕರ್ಪೂರ
ಮೂಗನ ಬಾಯಲ್ಲಿ ಕೇಳಿದ ಕಾವ್ಯ .ಇಂತಹ ಅತ್ಯಂತ ಸುಂದರ ಬಹು ಮುಖಸಿದ್ಧಾಂತವನ್ನು ಪ್ರತಿಪಾದಿಸಿ ತಾನು ಬದುಕಿ ಇತರರಿಗೂ ಬದುಕುವ ಅವಕಾಶ ಮಾಡಿಕೊಟ್ಟ ಶರಣರು ಜಗತ್ತಿನ ಶ್ರೇಷ್ಠ ಚಿಂತಕರು ಸಾಹಿತಿಗಳು ದಾರ್ಶನಿಕರು.


ಡಾ ಶಶಿಕಾಂತ ಪಟ್ಟಣ ರಾಮದುರ್ಗ

One thought on “

  1. ಮಾಚಿದೇವನ ಸಮಾಧಿ ಗೊಡಚಿಯಲ್ಲಿದೆ

    ಎಂಬುದಕ್ಕೆ ಏನಾದರೂ ಕುರುಹುಗಳಿವೆಯಾ

    ಸರ್ ವಿಶ್ಲೇಷಣೆ ಚೆನ್ನಾಗಿದೆ

Comments are closed.

Don`t copy text!