ಜಗತ್ತಿಗೆ ಭಾರತದ ಅಮೂಲ್ಯ ಕೊಡುಗೆ ಯೋಗ.
ಒಂಬತ್ತನೆಯ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಶುಭಾಶಯಗಳು. ಯೋಗಕ್ಕೆ ಯೋಗ ಬಂದದ್ದು 2014 ರ ಜೂನ 21 ರಂದು.ಎಲ್ಲರ ಬಾಯಲ್ಲೂ ಒಂದೇ ಮಂತ್ರ ಯೋಗ ಯೋಗ.ಜಗತ್ತಿಗೆ ಭಾರತದ ಅಮೂಲ್ಯ ಕೊಡುಗೆ ಯೋಗ.ಇದು ಋಷಿಮುನಿಗಳ ಬಳುವಳಿ.ಕಣ್ಮುಚ್ಚಿ ಮಾಡುವ ವ್ಯಾಯಾಮ ಧ್ಯಾನಗಳೆ ಯೋಗ ಎನ್ನುತ್ತಿದ್ದರು.ಯೋಗ ಮಹಿಳೆಯರಿಗಲ್ಲ.ಇದು ಸಂನ್ಯಾಸಿಗಳಿಗೆ ಮೀಸಲು,ವೃದ್ಧರಿಗೆ ಧ್ಯಾನ ಜಪ ತಪ ಯೋಗ ಹೇಳಿಸಿದ್ದು.ಯಾರಿಗೆ ರೋಗವಿದೆ ಅವರಿಗೆ ಯೋಗ ಎಂಬ ಸಾಮಾನ್ಯ ಕಲ್ಪನೆಗಳಿಂದ ಹೊರಬಂದು ಇಂದು ವಿವಿಧ ಮತ,ಪಂಥ,ಮಕ್ಕಳು,ಯುವಕರು,ವೃದ್ಧರು, ಸ್ತ್ರಿಯರು,ರೋಗಪೀಡಿತರು ಎಲ್ಲರೂ ಯೋಗ ಮಾಡಿ ಲಾಭ ಪಡೆಯುತ್ತಿದ್ದಾರೆ.
ಯೋಗ ಎಂದರೆ ಕೂಡಿಸು ಎಂದರ್ಥ.ಆತ್ಮಾ ಎಂದರೆ ಅಂತರ್ಯಾಮಿ ಎಂದು.ಪರಮಾತ್ಮಾ ಎಂದರೆ ಸಕಲ ಚೈತನ್ಯ ಶಕ್ತಿ.ಜೀವಾತ್ಮ-ಪರಮಾತ್ಮರ ಸಂಯೋಗವೇ ಯೋಗ.ಇವರಿಬ್ಬರ ಸಾಮ್ಯ ದರ್ಶನವೇ ಸಮಾಧಿ.ಯೋಗದರ್ಶನಕ್ಕೆ ಪತಂಜಲಿ ಯೋಗ ಸೂತ್ರಗಳೇ ಮೂಲ.ಪತಂಜಲಿಯ ಕಾಲವನ್ನು ಇತಿಹಾಸಕಾರರು ಕ್ರಿ.ಪೂ.200 ರಿಂದ ಕ್ರಿ.ಶ.200 ಅವಧಿ ಎಂದಿರುವರು.ಪತಂಜಲಿ ಯೋಗಸೂತ್ರಗಳನ್ನೆ ರಾಜಯೋಗ ಅಥವಾ ಅಷ್ಟಾಂಗಯೋಗ ಎಂದೂ ಕರೆಯುತ್ತಾರೆ.
ಪತಂಜಲಿ ಮಹರ್ಷಿ ಮನಸ್ಸಿನ ವೃತ್ತಿ-ಪೃವೃತ್ತಿಗಳನ್ನು ತಡೆಯಲು ಯೋಗ ದರ್ಶನವನ್ನೂ ಮಾತಿನ ದೋಷ ನಿವಾರಣೆಗೆ ವ್ಯಾಕರಣ ಶಾಸ್ತ್ರವನ್ನು,ಶಾರೀರಿಕ ವ್ಯಾಧಿಗಳನ್ನು ದೂರಗೊಳಿಸಲು ಆಯುರ್ವೇದ ವಿಜ್ಞಾನವನ್ನು ವಿಶ್ವಕ್ಕೆ ನೀಡಿರುವರು.ಹೀಗಾಗಿ ಪತಂಜಲಿ ಮಹರ್ಷಿಯನ್ನು “ಯೋಗ ಪಿತಾಮಹ” ಎನ್ನುವರು.
“ಯೋಗೇನ ಚಿತ್ಯಸ್ಯ ಪದೇನ ವಾಚಾಂ ಮಲಂ ಶರೀರಸ್ಯ ಚ ವೈದ್ಯಕೇನ ಯೋ ಪಾಕರೋತ್ತಂ ಪ್ರವರಂ ಮುನೀನಾ ಪತಂಜಲೀಂ ಪ್ರಾಂಜಲಿರಾನತೋಸ್ಮಿ.”
ಮನಸ್ಸಿನ ಮಲಿನತೆಯನ್ನು ಯೋಗದ ಮೂಲಕವೂ,ಭಾಷೆಯ ಮಲಿನತೆಯನ್ನು ವ್ಯಾಕರಣದ ಮೂಲಕವೂ,ಶರೀರದ ಮಲಿನತೆಯನ್ನು ಆಯುರ್ವೇದದ ಮೂಲಕವೂ ತೊಡೆದು ಹಾಕಿದ ಜ್ಞಾನಿಗಳಲೆಲ್ಲ ಪ್ರಸಿದ್ಧರಾದ ಪತಂಜಲಿಗೆ ಕರಜೋಡಿಸಿ ವಂದಿಸುವೆನು.
ಆರೋಗ್ಯವಂತ ಬದುಕಿನಲ್ಲಿ ಯೋಗದ ಪಾತ್ರವನ್ನು ಗುರುತಿಸಿರುವ ವಿಶ್ವಸಂಸ್ಥೆ,ಜೂನ 21 ರಂದು ವಿಶ್ವಯೋಗ ದಿನ ಘೋಷಿಸಿರುವದು,ಭಾರತೀಯ ಮೂಲದ ಯೋಗಕ್ಕೆ ಸಂದ ಜಾಗತಿಕ ಮನ್ನಣೆ ಎಂದೇ ಹೇಳಬಹುದು.ವಿಶ್ವದ 190 ದೇಶಗಳು ಯೋಗ ದಿನಾಚರಣೆಯಲಿ ಭಾಗವಹಿಸುತ್ತಿವೆ.
ಅಮೇರಿಕ ಸೇರಿದಂತ ಹಲವು ದೇಶಗಳಲ್ಲಿ ಯೋಗ ಜನರ ದೈನಂದಿನ ಭಾಗವೇ ಆಗಿರುವದು ವಿಶೇಷ.ವಿಶ್ವವ್ಯಾಪಿ ಯೋಗಾಭ್ಯಾಸಿಗಳ ಸಂಖ್ಯೆ 200 ಕೋಟಿಗೂ ಅಧಿಕ.
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು 2014ರ ಸೆ.27ರಂದು ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿಯನ್ನು ಉದ್ದೇಶಿಸಿ ಮಾತನಾಡಿದ ವೇಳೆ”ಯೋಗವು ಪುರಾತನ ಭಾರತದ ಅಮೂಲ್ಯ ಕೊಡುಗೆ ಇದು ಮನಸ್ಸು ಹಾಗೂ ಶರೀರದ ನಡುವೆ ಐಕ್ಯತೆಯನ್ನು ಸಾಧಿಸುತ್ತದೆ. ಅದೇ ರೀತಿ ಮನುಷ್ಯ ಹಾಗೂ ಪೃಕೃತಿಯ ನಡುವೆ ಸಾಮರಸ್ಯ ಸ್ಥಾಪಿಸುತ್ತದೆ.ಇದು ವ್ಯಾಯಾಮವಲ್ಲ,ಆದರೆ ಜಗತ್ತು ಪೃಕೃತಿಯೊಳಗೆ ನಿಮ್ಮನ್ನು ನೀವು ಒಂದಾಗಿ ಕಾಣುವುದಕ್ಕೆ ಇದು ಸಹಕಾರಿ” ಎಂದು ಹೇಳಿದ್ದರು. ಇದೇ ಸಂದರ್ಭದಲ್ಲಿ ಪ್ರತಿವರ್ಷ ಜೂನ 21 ರಂದು ಅಂತಾರಾಷ್ಟ್ರೀಯ ಯೋಗ ದಿನ ಆಚರಿಸಬೇಕು ಎಂಬ ಪ್ರಸ್ತಾವನೆಯನ್ನು ಮೋದಿಯವರು ಮುಂದಿಟ್ಟಿದ್ದರು.ಡಿಸೆಂಬರ 11 ರಂದು ವಿಶ್ವಸಂಸ್ಥೆ ಇದನ್ನು ಅಂಗೀಕರಿಸಿತು.ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳ ಪೈಕಿ ಕೆನಡಾ ಹಾಗೂ ಚೀನಾ ಪ್ರಸ್ತಾವಣೆಗೆ ಭಾರತದ ಜೊತೆಗೆ ಸಹ ಠರಾವುದಾರ ರಾಷ್ಟ್ರಗಳಾಗಿದ್ದವು. 193 ರಾಷ್ಟ್ರಗಳ ಪೈಕಿ 175 ದೇಶಗಳು ಬೆಂಬಲ ನೀಡಿದ್ದರಿಂದ ಈ ಪ್ರಸ್ತಾವನೆ ಬೇಗ ಅಂಗೀಕೃತವಾಯಿತು. ವಿಶ್ವಸಂಸ್ಥೆಯ ಯಾವುದೇ ಪ್ರಸ್ತಾವನೆಗೆ ಈ ಮಟ್ಟದ ಅನುಮೋದನೆ ಸಿಕ್ಕಿದ್ದು ಇದೇ ಮೊದಲು.ಅಷ್ಟೆ ಅಲ್ಲ ಪ್ರಸ್ತಾವನೆ ಮಂಡಿಸಿದ 90 ದಿನಗಳೊಳಗೆ ಅದನ್ನು ಕಾರ್ಯಗತಗೊಳಿಸಿದ ಮೊದಲ ದೇಶ ಭಾರತ ಎಂಬುದೂ ಒಂದು ದಾಖಲೆಯಾಗಿದೆ.
ಯೋಗ ದಿನದ ಚಿಹ್ನೆ- ಅಂತಾರಾಷ್ಟ್ರೀಯ ಯೋಗದ ದಿನದ ಚಿಹ್ನೆಯಲ್ಲಿ ವ್ಯಕ್ತಿ ಕೈಯನ್ನು ಮೇಲಕ್ಕೆತ್ತಿ ಮುಗದಿದ್ದು ಐಕ್ಯತೆಯ ಸಂಕೇತ.ವಯಕ್ತಿಕ-ಸಾಮೂಹಿಕ ಐಕ್ಯತೆ,ಶರೀರ-ಮನಸ್ಸು, ಮನುಷ್ಯ-ಪೃಕೃತಿಯ ನಡುವಿನ ಸಾಮರಸ್ಯ,ಆರೋಗ್ಯ ಜೀವನದ ಸಾದೃಶ್ಯವೂ ಇದಾಗಿದೆ.ಕಂದು ವರ್ಣದ ಎಲೆ ಭೂಮಿಯನ್ನು,ಹಸಿರು ಎಲೆ ಪೃಕೃತಿಯನ್ನ, ನೀಲ ವರ್ಣ ಜಲವನ್ನು ಕೆಂಪು ಬಣ್ಣ ಪ್ರಕಾಶವನ್ನು ಮತ್ತು ಸೂರ್ಯನನ್ನು ಪ್ರತಿನಿಧಿಸುತಿದ್ದು,ಶಕ್ತಿ ಮತ್ತು ಪ್ರೇರಣೆಯ ಸಂಕೇತವಾಗಿ ಹೊಮ್ಮಿದೆ.
ಜೂನ್ 21 ರಂದೇ ಏಕೆ ಯೋಗ ದಿನಾಚರಣೆಯನ್ನು ಆಚರಣೆ ಮಾಡಬೇಕು?
ಜೂನ್ 21 ವರ್ಷದಲ್ಲಿ ಅತ್ಯಂತ ಹೆಚ್ಚು ಹಗಲುಳ್ಳ ದಿನವೆಂದು ಕರೆಯಲಾಗುತ್ತದೆ. ಅಲ್ಲದೆ ಇದು ದಕ್ಷಿಣಯಾನಕ್ಕೆ ಪರಿವರ್ತನೆಯಾಗುವ ದಿನವಾಗಿದೆ. ಅದಲ್ಲದೆ ದಕ್ಷಿಣ ಯಾನ ಆಧ್ಯಾತ್ಮಿಕ ಅಭ್ಯಾಸಗಳಿಗೆ ಹೇಳಿ ಮಾಡಿಸಿದ್ದಾಗಿದ್ದು, ಈ ವಾಡಿಕೆ ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿದೆ . ಜೊತೆಗೆ ಹಳೆ ಕಾಲದಿಂದಲೂ ಸಹ ಸೂರ್ಯಾಭಿಮುಖವಾಗಿ ದೃಷ್ಟಿ ಇಟ್ಟು ಯೋಗ ಮಾಡುವುದರಿಂದ ದಿವ್ಯ ಶಕ್ತಿ ಉದ್ದೀಪನಗೊಳಿಸುತ್ತದೆ ಎಂದು ನಂಬಲಾಗಿದೆ. ಯೋಗ ಮಾಡುವವರಿಗೆ ಅನೇಕ ಲಾಭ ನೀಡುವುದರ ಜೊತೆಗೆ ಯೋಗದ ದೃಷ್ಟಿಕೋನದಲ್ಲಿ ಇದು ಅತ್ಯಂತ ಹೆಚ್ಚು ಮಹತ್ವ ಪಡೆದಿದೆ. ಹಾಗಾಗಿ ಈ ದಿನವನ್ನೇ ಆಯ್ಕೆ ಮಾಡಿಕೊಳ್ಳಲಾಗಿದೆ.
ಅಂತರರಾಷ್ಟ್ರೀಯ ಯೋಗ ದಿನಾಚರಣೆ’ಯ ಉದ್ದೇಶವು ಯೋಗದ ಅನೇಕ ಭೌತಿಕ ಮತ್ತು ಆಧ್ಯಾತ್ಮಿಕ ಪ್ರಯೋಜನಗಳ ಬಗ್ಗೆ ಪ್ರಪಂಚದ ಜನರಿಗೆ ಅರಿವು ಮೂಡಿಸುವುದಾಗಿದೆ. ಪ್ರತಿ ವರ್ಷ ಈ ಕಾರ್ಯಕ್ರಮಕ್ಕೆ ವಿಭಿನ್ನ ಥೀಮ್ ಇರುತ್ತದೆ. ‘ಅಂತಾರಾಷ್ಟ್ರೀಯ ಯೋಗ ದಿನ 2023’ ಥೀಮ್ ‘ಮಾನವೀಯತೆ’ ಎಂದಾಗಿದೆ. ಈ ಹಿಂದಿನ ವರ್ಷಗಳಲ್ಲಿ ‘ಹೃದಯಕ್ಕಾಗಿ ಯೋಗ’, ‘ಶಾಂತಿಗಾಗಿ ಯೋಗ’, ಮನೆಯಲ್ಲಿ ಯೋಗ ಮತ್ತು ಕುಟುಂಬದೊಂದಿಗೆ ಯೋಗ ಎಂದು ಥೀಮ್ ಇತ್ತು.
ಅಂತಾರಾಷ್ಟ್ರೀಯ ಯೋಗ ದಿನದ ಥೀಮ್
2022 ರ ಅಂತರರಾಷ್ಟ್ರೀಯ ಯೋಗ ದಿನದ ಥೀಮ್ ‘ಒಟ್ಟಿಗೆ ಯೋಗ’ ಆಗಿತ್ತು.
ಅಂತರಾಷ್ಟ್ರೀಯ ಯೋಗ ದಿನದ 2021 ರ ಥೀಮ್ ‘ಯೋಗ ಯೋಗಕ್ಷೇಮಕ್ಕಾಗಿ’.
ಅಂತರಾಷ್ಟ್ರೀಯ ಯೋಗ ದಿನದ 2020 ರ ಥೀಮ್ ‘ಮನೆಯಲ್ಲಿ ಯೋಗ ಮತ್ತು ಕುಟುಂಬದೊಂದಿಗೆ ಯೋಗ’.
ಅಂತರಾಷ್ಟ್ರೀಯ ಯೋಗ ದಿನದ 2019 ರ ಥೀಮ್ “ಹೃದಯಕ್ಕಾಗಿ ಯೋಗ”.
ಅಂತರಾಷ್ಟ್ರೀಯ ಯೋಗ ದಿನದ 2018 ರ ಥೀಮ್ “ಶಾಂತಿಗಾಗಿ ಯೋಗ”.
ಅಂತರಾಷ್ಟ್ರೀಯ ಯೋಗ ದಿನದ 2017 ರ ಥೀಮ್ “ಆರೋಗ್ಯಕ್ಕಾಗಿ ಯೋಗ”.
ಅಂತರಾಷ್ಟ್ರೀಯ ಯೋಗ ದಿನದ 2016 ರ ಥೀಮ್ “ಯುವಕರನ್ನು ಸಂಪರ್ಕಿಸಿ”.
ಅಂತರಾಷ್ಟ್ರೀಯ ಯೋಗ ದಿನದ 2015 ರ ಥೀಮ್ “ಸಾಮರಸ್ಯ ಮತ್ತು ಶಾಂತಿಗಾಗಿ ಯೋಗ”.
ಯೋಗ ದಿನ ಆಚರಣೆ ಹೇಗೆ?
ಈ 9ನೇ ಅಂತಾರಾಷ್ಟ್ರೀಯ ಯೋಗ ದಿನದಂದು, ಯೋಗ ದಿನದ ಕುರಿತು ಜಾಗೃತಿ ಮೂಡಿಸಲು ಫೇಸ್‌ಬುಕ್, ಟ್ವಿಟರ್, ಇನ್‌ಸ್ಟಾಗ್ರಾಮ್ ಅಥವಾ ವಾಟ್ಸಾಪ್ ಮೂಲಕ ನಿಮ್ಮ ಕುಟುಂಬ ಮತ್ತು ನಿಮ್ಮ ಸುತ್ತಮುತ್ತಲಿನ ಜನರಿಗೆ ಸಂದೇಶಗಳನ್ನು ಕಳುಹಿಸಬಹುದು.
ಸಂದೇಶಗಳು:
*ನೀವು ಜೀವನದ ಚಿಂತೆಗಳನ್ನು ಜಯಿಸಲು ಬಯಸಿದರೆ ಕ್ಷಣದ ಜೀವನಕ್ಕಾಗಿ ಬದುಕಿ.
*ನಿಮ್ಮ ಮನಸ್ಸು ಏನನ್ನಾದರೂ ಮಾಡುವ ಬಯಕೆ ಹೊಂದಿದ್ದರೆ ಸೂಕ್ಷ್ಮವಾಗಿ ಅದೇನೆಂದು ತಿಳಿಯಿರಿ ಮತ್ತು ಪ್ರಯತ್ನಿಸಿ. ಇದು ಯೋಗ ಆಗಿರಬಹುದು.
*ನಾವೆಲ್ಲರೂ ವಿಶ್ವ ಶಾಂತಿಯನ್ನು ಬಯಸುತ್ತೇವೆ, ಆದರೆ ನಾವು ಮೊದಲು ನಮ್ಮ ಮನಸ್ಸಿನಲ್ಲಿ ಶಾಂತಿಯನ್ನು ಸ್ಥಾಪಿಸದ ಹೊರತು ವಿಶ್ವ ಶಾಂತಿ ಎಂದಿಗೂ ಸಾಧಿಸಲಾಗುವುದಿಲ್ಲ”
ಅಂತರರಾಷ್ಟ್ರೀಯ ಯೋಗ ದಿನದ 2023 ರ ಥೀಮ್ ‘ಮಾನವೀಯತೆ’. ಅಂತರರಾಷ್ಟ್ರೀಯ ಯೋಗ ದಿನದ ಆಚರಣೆಗಳು ಯೋಗದ ಸಮಗ್ರ ಸ್ವರೂಪದ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಉತ್ತಮ ಆರೋಗ್ಯಕ್ಕಾಗಿ ಪ್ರಪಂಚದಾದ್ಯಂತ ನಿಯಮಿತ ಆಡಳಿತವಾಗಿ ಪ್ರಚಾರ ಮಾಡುವ ಗುರಿಯನ್ನು ಹೊಂದಿವೆ.
–ಜಯಶ್ರೀ ಭ ಭಂಡಾರಿ.
ಬಾದಾಮಿ