ಸಾಧನೆ -ಸಾರ್ಥಕತೆ – ಸಂತೃಪ್ತಿ
ವೃತ್ತಿಯಿಂದ ನಿವೃತ್ತಿ ಡಾ. ಚೆನ್ನಬಸವಯ್ಯ ಹಿರೇಮಠ
ಚರಿತ್ರೆಯನ್ನು ಯಾರಾದರೂ ನಿರ್ಮಿಸಬಹುದು ಆದರೆ ಸಂಸ್ಕೃತಿ ಬಗ್ಗೆ ಕಳಕಳಿ ಇದ್ದವರು ಮಾತ್ರ ಅದನ್ನು ಸರಿಯಾಗಿ ಕಟ್ಟಿಕೊಡಬಲ್ಲರು ಈ ಮಾತನ್ನು ಹೇಳಿದವರು ಬೇರೆ ಯಾರು ಅಲ್ಲ ಇಂದು ಅಂದರೆ 30 ಜೂನ್ 2023 ಕ್ಕೆ ನಿವೃತ್ತಿ ಹೊಂದುತ್ತಿರುವ ನಮ್ಮ ರಾಯಚೂರಿನ ಹಿರಿಯ ಸಾಹಿತಿಗಳು, ಚರಿತ್ರಾರ್ಹ ಸಂಶೋಧಕರಾದ ಡಾ. ಚನ್ನಬಸವಯ್ಯ ಹಿರೇಮಠ ಸರ್ ರವರು ಬರೆದ ಸಾಲುಗಳಿಂದಲೇ ನನ್ನ ಬರಹ ಆರಂಭಿಸುತ್ತಿದ್ದೇನೆ. ಇತಿಹಾಸ ಮತ್ತು ಸಾಹಿತ್ಯ ಇಂದು ವಿಭಿನ್ನ ಕ್ಷೇತ್ರಗಳಾಗಿದ್ದರೂ ಸಾಹಿತ್ಯ ಇತಿಹಾಸದ ನಂಟು ಬಳಸಿಕೊಂಡು ಒಂದಕ್ಕೊಂದು ಪೂರಕವೆಂಬಂತೆ ಶಾಸನಗಳು ಸಾಹಿತ್ಯದ ನಂಟನ್ನು ಬೆಳೆಸಿಕೊಂಡು ಬಂದಿದೆ. ಹೀಗೆ ಸಾಹಿತ್ಯದಲ್ಲಿ ಇತಿಹಾಸ, ಇತಿಹಾಸದಲ್ಲಿ ಸಾಹಿತ್ಯವನ್ನು ಕಂಡವರು ಡಾ. ಚನ್ನಬಸವಯ್ಯ ಹಿರೇಮಠ ಇವರು. ಕನ್ನಡ ಸಾಹಿತ್ಯದ ಉಪನ್ಯಾಸಕರಾದರೂ ಇತಿಹಾಸದ ಕುರುಗೋಡು ಸಿಂದರು ಒಂದು ಅಧ್ಯಯನ ಪಿ ಹೆಚ್ ಡಿ ಪ್ರಬಂಧ ರೂಪಸಿ ಇತಿಹಾಸ ತಜ್ಞರ ಕೃತಜ್ಞತೆಗೆ ಪಾತ್ರರಾಗಿದ್ದಾರೆ.
ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ಮಸ್ಕಿ ಗ್ರಾಮದವರಾದ ಶ್ರೀ ವೀರಭದ್ರಯ್ಯ ಹಿರೇಮಠ ಮತ್ತು ಗೌರಮ್ಮ ಇವರ ಮಗನಾಗಿ 1963 ಜೂನ್ 8ರಂದು ಜನಿಸಿದ ಇವರು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠದಿಂದ 1986 ರಲ್ಲಿ ಎಂ.ಎ ಪದವಿಯನ್ನು ಮತ್ತು ಅದೇ ಅಧ್ಯಯನ ಪೀಠದಿಂದ 1986 ರಲ್ಲಿ ಬಸವ ಡಿಪ್ಲೋಮಾ ವನ್ನು ಪ್ರಥಮ ದರ್ಜೆಯಲ್ಲಿ ಪಾಸು ಮಾಡಿ ಚಿನ್ನದ ಪದಕವನ್ನುಪಡೆದಿದ್ದಾರೆ. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಪದವಿ ತರಗತಿಗೆ ಸೇರಿದಾಗ ಗೋಕಾಕ್ ಚಳುವಳಿಯು ಆರಂಭವಾಗಿ ಆರಂಭವಾಗಿತ್ತು. ಪ್ರತಿದಿನ ಸಂಜೆ ಕರ್ನಾಟಕ ಸಂಘದಲ್ಲಿ ನಡೆಯುತ್ತಿದ್ದ ವಿದ್ವಾಂಸರ ಭಾಷಣಗಳು ಕನ್ನಡ ಸಾಹಿತ್ಯದ ಕಡೆಗೆ ಎಳೆ ತಂದವು. ಬರವಣಿಗೆ ಅಲ್ಲಿಂದಲೇ ಆರಂಭವಾಯಿತು. ಚಳುವಳಿಯ ಕೊನೆಯ ಹಂತದಲ್ಲಿ ಎಲ್ಲಾ ಹೋರಾಟಗಾರರೊಂದಿಗೆ ಇವರು ಪೊಲೀಸರ ಅತಿಥಿಯಾದ ವಿಷಯ ಇವರಲ್ಲಿರುವ ದೇಶ ಭಾಷಾಭಿಮಾನದ ಕೈಗನ್ನಡಿ.
ಅಭ್ಯಾಸದಿಂದ ಅಧ್ಯಯನದತ್ತ
ಎಂ ಎ ಪದವಿಯಿಂದಲೇ ವಿದ್ವಾಂಸರಾದ ಡಾ. ಎಂ ಎಂ ಕಲ್ಬುರ್ಗಿ ಮತ್ತು ಡಾ. ಬಿ. ವ್ಹಿ ಶಿರೂರ್ ರವರ ವಿದ್ಯಾರ್ಥಿಯಾಗುತ್ತಿದ್ದಂತೆ ಇವರಲ್ಲಿ ಹಳೆಗನ್ನಡ ಕಾವ್ಯ ಶಾಸನಗಳ ಅಧ್ಯಯನದ ಕಡೆಗೆ ಆಸಕ್ತಿ ಮೂಡಿತು. ಶಾಸನಗಳನ್ನು ಕುರಿತು ಉಪನ್ಯಾಸ ನೀಡುವ ಲೇಖನಗಳನ್ನು ಬರೆಯುವ ಅನೇಕ ಸಂದರ್ಭಗಳು ಇವರನ್ನು ಇತಿಹಾಸಕಾರರನ್ನಾಗಿಸಿ ಮಾತ್ರವಲ್ಲ ಸಂಶೋಧಕರಾಗಿ ಬೆಳೆಯುತ್ತಾ ಜನಸಾಮಾನ್ಯರಿಗೆ ಸಂಶೋಧಕರಾಗಿಯೇ ಕಂಡರು.
ಕರ್ನಾಟಕ ಭಾರತದಲ್ಲಿ ಪ್ರಕಟವಾದ ‘ರಾಯಚೂರು ಜಿಲ್ಲೆಯ ಶಾಸನಗಳು’ ಲೇಖನವನ್ನು ಓದಿದ ಗುರುಗಳಾದ ಡಾ.ಎಂ.ಎಂ ಕಲಬುರ್ಗಿಯವರು ಇನ್ನಷ್ಟು ಉತ್ತಮ ಲೇಖನಗಳು ಬರೆಯಬೇಕೆಂದು ಪತ್ರದ ಮೂಲಕ ಬಂದ ಅವರ ಅಭಿಮಾನದ ಮಾತುಗಳು ಇವರ ಅಧ್ಯಯನದ ಶಕ್ತಿಯಾಯಿತು.ಗುರುಗಳ ನಿರೀಕ್ಷೆ ಎಂದೂ ಹುಸಿಯಾಗಲಿಲ್ಲ ಅವರ ಹಾರೈಕೆಯ ಪ್ರತಿಫಲವೇ ನಮ್ಮ ಕೈಯಲ್ಲಿರುವ ರಾಯಚೂರು ಜಿಲ್ಲೆಯ ಶಾಸನಗಳು ಮಹತ್ವದ
ಐತಿಹಾಸಿಕ ಕೃತಿ.
‘ಅನುಭಾವಿಗಳ ಸಂಗ ಲೋಹ ಪರುಷವಾದಂತೆ
ಅನುಭಾವಿಗಳ ಸಂಗ ಕೀಟಕ ಭ್ರಮರವಾದಂತೆ’ ಎನ್ನುವ ಪರಿಕಲ್ಪನೆ
ಅನುಭಾವಿಗಳ ಸಂಗದಿಂದ ಚನ್ನಬಸವಯ್ಯನವರು ಇಂದು ಉನ್ನತ ವ್ಯಕ್ತಿತ್ವದಲ್ಲಿದ್ದಾರೆ.
ಎಂ.ಎ ಮುಗಿಸಿ 1987 ರ ಅಗಸ್ಟ್ ನಿಂದ ಎಲ್.ವಿ.ಡಿ ಮಹಾವಿದ್ಯಾಲಯದಲ್ಲಿ ಉಪನ್ಯಾಸಕ ವೃತ್ತಿಗೆ ನಿಂತ ಬಳಿಕ ಪಿ.ಹೆಚ್.ಡಿ ಅಧ್ಯಯನದ ಆಸೆಯಾಯಿತು.ಅವರ ಗುರುಗಳಾದ ಎಂ.ಎಂ ಕಲ್ಬುರ್ಗಿಯವರು ತಿಳಿಸಿದ ಪಿ ಹೆಚ್ ಡಿ ಅಧ್ಯಯನದ ವಿಷಯ ಕುರುಗೋಡು ಸಿಂದರು ಒಂದು ಅಧ್ಯಯನ ಈ ವಿಷಯಕ್ಕೆ ಡಾ. ಬಿ ವ್ಹಿ ಶಿರೂರವರು ಮಾರ್ಗದರ್ಶನ ಮಾಡಲು ಒಪ್ಪಿದಾಗ 1997ರಿಂದ ಸಂಶೋಧನೆ ಪಯಣ ಆರಂಭವಾಯಿತು. ನಮ್ಮ ಜಿಲ್ಲೆಗೆ ಹಿಂದುಳಿದ ಹಣೆಪಟ್ಟಿ ಶಿಕ್ಷಣ ಸಂಶೋಧನಾ ಕ್ಷೇತ್ರಗಳಿಂದಲೂ ಹೊರತಾಗಿಲ್ಲ. ಅಂತ ರಾಯಚೂರು ಜಿಲ್ಲೆಯಲ್ಲಿದ್ದುಕೊಂಡು ವಿಷಯ ಸಂಗ್ರಹ ಶಾಸನಗಳ ಅಭ್ಯಾಸ ಮಾಡುವ ಕಠಿಣ ಕೆಲಸಕ್ಕೆ ಕೈ ಹಾಕಿದರು.ಪ್ರಮುಖ ಪ್ರದೇಶಗಳಲ್ಲಿ ಸಂಚರಿಸಿ ಕ್ಷೇತ್ರ ಕಾರ್ಯ ಕೈಗೊಂಡರು. ಪ್ರತಿ ಹಂತದಲ್ಲಿ ಡಾ. ಎಂ ಎಂ ಕಲ್ಬುರ್ಗಿ ಮತ್ತು ಶಿರೂರು ರವರ ಮಾರ್ಗದರ್ಶನದಲ್ಲಿ ವಿಶೇಷ ಕಾಳಜಿ ವಹಿಸಿ ಪ್ರಬಂಧ ರಚನೆಗೆ ಮಾಹಿತಿ ನೀಡಿದರು. ಕಳಶ ಪ್ರಾಯವೆಂಬಂತೆ ಮುನ್ನುಡಿ ಬರೆದಿದ್ದು ಈ ಪ್ರಬಂಧ ಮಹಾಪ್ರಬಂಧ ವಾಯಿತು. ಮಾತ್ರವಲ್ಲ ಈ ಮಹಾ ಪ್ರಬಂಧಕ್ಕೆ ಬೆನ್ನುಡಿ ಬರೆದ ಅವರ ಮಾರ್ಗದರ್ಶಕರಾದ ಡಾ. ಬಿ.ವಿ ಶಿರೂರವರ ಅಭಿಮಾನದ ಮಾತುಗಳು ಹೀಗಿವೆ ಡಾ. ಚನ್ನಬಸವಯ್ಯ ಅವರ ಆಳವಾದ ಅಭ್ಯಾಸ, ಪರಿಶ್ರಮ ಪ್ರವೃತ್ತಿ, ಚಿಕಿತ್ಸಕ ಬುದ್ಧಿ, ಸಂಯಮಗಳು ಕಂಡು ಬರುತ್ತವೆ ಎಂದಿದ್ದಾರೆ.
ಹೀಗೆ ಡಾ. ಎಂ ಎಂ ಕಲಬುರ್ಗಿ ಮತ್ತು ಬಿ ವಿ ಶಿರೂರವರ ಕೈಯ ಉಪಕರಣವಾಗಿ ಕೆಲಸ ಮಾಡಿದ ತೃಪ್ತಿ ಇದೆ ಎನ್ನುವ ತೃಪ್ತ ಭಾವ ಚೆನ್ನಬಸವ ಸರ್ ರವರದು.
ಬಹುಮುಖ ವ್ಯಕ್ತಿತ್ವ
ಎಂ.ಎ ಪದವಿ ಹಂತದಿಂದಲೇ ಬರವಣಿಗೆಯನ್ನು ಆರಂಭಿಸಿದ ಇವರು ಬಸವ ಮಾರ್ಗ,ಸಾಧನೆ, ಕರ್ನಾಟಕ ಭಾರತಿ ಇತ್ಯಾದಿ ನಿಯತಕಾಲಿಕೆಗಳಲ್ಲಿ ಪ್ರಕಟವಾದ ಸಂಪ್ರಬಂಧಗಳು ವಿದ್ವಾಂಸರ ಮೆಚ್ಚುಗೆಗೆ ಪಾತ್ರವಾದವು. ಅಲ್ಲದೆ ತಿರುಳ್ಗನ್ನಡ, ಹೊನ್ನಸಿರಿ, ದೇವನಾಂಪ್ರಿಯ ಸ್ಮರಣ ಸಂಚಿಕೆಗಳಲ್ಲಿನ ಇವರ ಲೇಖನಗಳು ಸಂಶೋಧನೆಯ ಸ್ಪರ್ಶವನ್ನು ಕಂಡಿವೆ.ಡಾ.ಚನ್ನಬಸವಯ್ಯ ಹಿರೇಮಠ ಅವರ ಬರವಣಿಗೆ ಬಗ್ಗೆ ನಾಡಿನ ಮಹಾನ್ ವಿದ್ವಾಂಸರು ತಿಳಿಸಿದ ಅಭಿಪ್ರಾಯಗಳನ್ನು ನೋಡಿದಾಗ ಚನ್ನಬಸವಯ್ಯನವರ ವ್ಯಕ್ತಿತ್ವದ ಪರಿಚಯವಾಗುತ್ತದೆ.
ಕುರುಗೋಡು ಸಿಂದರು ಮಹಾ ಪ್ರಬಂಧದ ಬಗ್ಗೆ ಡಾ.ಹಾ.ಮಾ ನಾಯಕ್ ರವರು ರವರ ಅಭಿಪ್ರಾಯ “ನಿಮ್ಮ ಮಹಾಪ್ರಬಂಧದಲ್ಲಿ ಕಣ್ಣಾಡಿಸಿದಾಗ ನಿಮ್ಮ ಅಧ್ಯಯನದ ವ್ಯಾಪ್ತಿ ತಿಳಿಯಿತು ಈ ರೀತಿ ಶ್ರಮವಹಿಸಿ ಕೆಲಸ ಮಾಡುವ ಸಂಶೋಧಕರು ತೀರಾ ವಿರಳ” ಎಂದಿದ್ದಾರೆ. ಈ ಮಾತು ಚೆನ್ನಬಸವಯ್ಯಸರ್ ನವರ ಸಂಶೋಧನಾತ್ಮಕ ಗುಣದ ಪ್ರತೀಕವಾಗಿದೆ. ಅದೇ ರೀತಿಯಾಗಿ ರಾಯಚೂರು ಜಿಲ್ಲೆಯ ಶಾಸನಗಳು ಲೇಖನಕ್ಕೆ ಡಾ. ಎಮ್ ಕಲ್ಬುರ್ಗಿ ಅವರ ಮೆಚ್ಚುಗೆಯ ಮಾತುಗಳು ಮಾತ್ರವಲ್ಲ ನಂದವಾಡಿಗೆ ಶಾಸನ ಭಾವನಗಂಧ ವಾರಣ ಒಂದು ಸ್ಪಷ್ಟನೆ ಕುರಿತಾದ ಲೇಖನದ ಬಗ್ಗೆ ಇದರಲ್ಲಿರುವ ವಿವರಗಳು ಆಧಾರಗಳೊಂದಿಗೆ ಸ್ಪಷ್ಟಪಡಿಸಿದ್ದಾರೆ ಅವರ ಸೂಚನೆ ಸಮರ್ಪಕವಾಗಿದ್ದು ಸ್ವೀಕಾರ ಯೋಗ್ಯವಾಗಿದೆ ಎಂದು ಡಾ. ಹಂಪ ನಾಗರಾಜಯ್ಯರವರು ಅಭಿಪ್ರಾಯ ತಿಳಿಸಿದ್ದಾರೆ. ಹೀಗೆ ನಮ್ಮ ನಾಡಿನ ವಿದ್ವಾಂಸರ ಅಭಿಪ್ರಾಯಗಳು ಸರ್ ಅವರ ಬಹುಮುಖ ವ್ಯಕ್ತಿತ್ವವನ್ನು ಬೆಳಗುತ್ತವೆ.
ಸಾಹಿತ್ಯ ಭಂಡಾರ
ಕನ್ನಡ ಸಾಹಿತ್ಯ ಮತ್ತು ಇತಿಹಾಸ ಕ್ಷೇತ್ರಗಳಿಗೆ ಇವರು ನೀಡಿದ ಅದ್ಭುತ ಕೊಡುಗೆಗಳ ಭಂಡಾರ ಇಲ್ಲಿದೆ.
ಸಂಶೋಧನಾ ಕೃತಿಗಳು
ಕುರುಗೋಡು ಸಿಂದರು ಒಂದು ಅಧ್ಯಯನ 1995 ರಲ್ಲಿ,
ಎಡೆದೊರೆ ನಾಡು 2000 ರಲ್ಲಿ, ಸತ್ಯದ ಹಾದಿ 2008ರಲ್ಲಿ, ಪ್ರಾಚೀನ ಕರ್ನಾಟಕದ ರಾಜಕೀಯ ವಿಭಾಗಗಳು 2014ರಲ್ಲಿ ಪ್ರಕಟಗೊಂಡಿವೆ.
ಜೀವನ ಚರಿತ್ರೆ
ಶಾಸ್ತ್ರಿಮಲ್ಲನಗೌಡ 2004ರಲ್ಲಿ
ಕಾವ್ಯಾನಂದ 2005ರಲ್ಲಿ ಹೊರಬಂದಿವೆ.
ಸಂಪಾದಿತ ಕೃತಿಗಳು
ರಾಯಚೂರು ಕೊಪ್ಪಳ ಜಿಲ್ಲೆಯ ಶಾಸನಗಳು 1999 ರಲ್ಲಿ,ಮಾನ್ವಿ ತಾಲೂಕಿನ ಶಾಸನಗಳು 2000 ರಲ್ಲಿ, ಬಳಗಾನೂರು ಮರಿಸ್ವಾಮಿಗಳ ಸ್ವರ ವಚನಗಳು 2000 ರಲ್ಲಿ, ವಿರಾಟ ಪರ್ವ ಸಂಗ್ರಹ 2004ರಲ್ಲಿ ಪ್ರಕಟಗೊಂಡಿವೆ.
ಅಭಿನಂದನಾ ಗ್ರಂಥಗಳು
ಶರಣಪಥ 2006ರಲ್ಲಿ, (ನ್ಯಾಯಮೂರ್ತಿ ಡಾ.ಶಿವರಾಜ ಪಾಟೀಲ ಅಭಿನಂದನಾ ಗ್ರಂಥ)
ಸ್ಮರಣ ಸಂಚಿಕೆಗಳು
ಪ್ರಿಯದರ್ಶಿ 1999 ರಲ್ಲಿ, ರಾಚೂರು 2007 ರಲ್ಲಿ,
ಗುಲ್ಬರ್ಗ ವಿಶ್ವವಿದ್ಯಾಲಯದ ಪಠ್ಯಪುಸ್ತಕಗಳು
ನಡುಗನ್ನಡ ಕಾವ್ಯ 2009ರಲ್ಲಿ, ಹಳೆಗನ್ನಡ ಕಾವ್ಯ 2014ರಲ್ಲಿ, ವಚನ ಸಂಪಾದನೆ 2019ರಲ್ಲಿ, ಧರ್ಮಾಮೃತ ಸಂಗ್ರಹ 2016 ರಲ್ಲಿ ಪ್ರಕಟಗೊಂಡಿವೆ.
ಇತರೆ
ನಮ್ಮ ಜಿಲ್ಲೆ ಐತಿಹಾಸಿಕ ಪರಿಚಯ 1996 ರಲ್ಲಿ, ರಾಯಚೂರು ಜಿಲ್ಲೆಯ ಶರಣರು 2000 ರಲ್ಲಿ, ಮಸ್ಕಿ ಶಾಸನಗಳು 2006 ರಲ್ಲಿ,ಅನಾವರಣ ಸಂಶೋಧನಾ ಲೇಖನಗಳು 2019 ರಲ್ಲಿ, ಕಲ್ಯಾಣ ಕರ್ನಾಟಕ ಸಂಸ್ಕೃತಿ 2020 ರಲ್ಲಿ ಹೊರಬಂದಿದ್ದು ಪ್ರಸ್ತುತ ವಚನ ಸಾಹಿತ್ಯ ಪರಾಮರ್ಶೆ ದಿಟವ ನುಡಿವುದು ಕೃತಿ ಅಚ್ಚಿನಲ್ಲಿದೆ. ಕಲ್ಯಾಣ ಕ್ರಾಂತಿ ಕುರಿತ ನಾಟಕ ಪ್ರಗತಿಯಲ್ಲಿದೆ.
ಪ್ರಶಸ್ತಿ ಪುರಸ್ಕಾರಗಳು
*ಆದರ್ಶ ಶಿಕ್ಷಕ ಪ್ರಶಸ್ತಿ 1994 ರಲ್ಲಿ ಲಯನ್ಸ್ ಕ್ಲಬ್ ಮಸ್ಕಿಯಿಂದ,
*ಉತ್ತಮ ಸಂಶೋಧಕ ಪ್ರಶಸ್ತಿ 2003 ರಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಮಾನ್ವಿಯಿಂದ,
*ವೀರಶೈವ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷತೆ ಸಿಂಧನೂರು 2008 ರಲ್ಲಿ
*ವೀರಶೈವ ದೀಪ್ತಿ ಇಂಟರ್ನ್ಯಾಷನಲ್ ವೀರಶೈವ ಫೌಂಡೇಶನ್ ಹರಿಹರ 2009 ರಲ್ಲಿ,
*ಲಿಂಗಸುಗೂರು ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷತೆ 2016 ರಲ್ಲಿ,
*ಡಾ.ಎಂ. ನಾಗಪ್ಪ ಸಮಗ್ರ ಸೇವಾ ಪ್ರಶಸ್ತಿ ತಾರಾನಾಥ ಶಿಕ್ಷಣ ಸಂಸ್ಥೆ ರಾಯಚೂರು,
*ರಾಜ್ಯಮಟ್ಟದ ಕಾಯಕ ರತ್ನ ಪ್ರಶಸ್ತಿ ಬೆಳಕು ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಂಸ್ಥೆ ಸಿಂಧನೂರು 2020 ರಲ್ಲಿ, ಅನಾವರಣ ಗ್ರಂಥಕ್ಕೆ
*2019 ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ಇಷ್ಟಕ್ಕೆ ಇವರ ಸೇವೆ ಸೀಮಿತವಾಗದೆ ರಾಯಚೂರು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಯಾಗಿ, ಕನ್ನಡ ಸಾಹಿತ್ಯ ಪರಿಷತ್ತಿನ ಸಂಘಟಕರಾಗಿ, ಕರ್ನಾಟಕ ಇತಿಹಾಸ ಅಕಾಡೆಮಿ ವೀರಶೈವ ಅಧ್ಯಯನ ಕೇಂದ್ರ ಮಸ್ಕಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕನ್ನಡ ಆಡಳಿತ ತರಬೇತಿ ಜಿಲ್ಲಾ ಸಂಪನ್ಮೂಲ ವ್ಯಕ್ತಿಯಾಗಿ, ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಗ್ರಾಮ ಚರಿತ್ರೆ, ಕೋಶದ ರಾಯಚೂರು ಜಿಲ್ಲೆಯ ಸಂಪುಟ ಸಂಪಾದಕರಾಗಿ, ಚುಕ್ಕಿ ಸಾಂಸ್ಕೃತಿಕ ಪ್ರತಿಷ್ಠಾನದ ಪುಸ್ತಕ ಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯರಾಗಿ, ಹತ್ತು ಹಲವು ಸಂಘಟನೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇದುವರೆಗೆ 80 ಸಂಶೋಧನಾ ಪ್ರಬಂಧಗಳು ಪ್ರಕಟಗೊಂಡಿದ್ದು ಒಂದು ಪಿ.ಹೆಚ್.ಡಿ ಮತ್ತು ಎಂ.ಫಿಲ್ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿ ಸೇವೆ ಸಲ್ಲಿಸಿದ್ದಾರೆ.
ಸರಳ ಜೀವನ ಉದಾತ್ತ ಚಿಂತನೆಯಿಂದ ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಂಡಿರುವ ಸರ್ ರವರ ಬಗ್ಗೆ ಒಂದಷ್ಟು ವಿಚಾರಗಳನ್ನು ವಿಚಾರಗಳನ್ನು ಓದುಗರೊಂದಿಗೆ ಹಂಚಿಕೊಳ್ಳಲು ನನಗೆ ಹೆಮ್ಮೆ ಎನಿಸುತ್ತಿದೆ. ಸತತ 37 ವರ್ಷಗಳ ಸುದೀರ್ಘ ಉಪನ್ಯಾಸಕ ವೃತ್ತಿಯೊಂದಿಗೆ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಮಾತ್ರವಲ್ಲ ಇತಿಹಾಸ ಕ್ಷೇತ್ರಕ್ಕೂ ಇವರು ಸಲ್ಲಿಸಿದ ಸೇವೆ ಅಪಾರವಾದದ್ದು. ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಪ್ರಾಧ್ಯಾಪಕರಾಗಿ, ಕಿರಿಯ ನಮ್ಮಂತಹ ಉಪನ್ಯಾಸಕರಿಗೆ ಆದರ್ಶ ಉಪನ್ಯಾಸಕರಾಗಿ, ಪ್ರಾಂಶುಪಾಲರಾಗಿ ಸಹ ಪ್ರಾಧ್ಯಾಪಕರೊಂದಿಗೆ ಸ್ನೇಹಿತರಾಗಿ, ಮಾತ್ರವಲ್ಲ ಸಮಾಜದ ಹಿತ ಚಿಂತಕರಾಗಿ ಸಾಹಿತಿಗಳಾಗಿ ಸಂಶೋಧಕರಾಗಿ ಇಂದು ವೃತ್ತಿಯಿಂದ ನಿವೃತ್ತಿ ಹೊಂದತ್ತಿದ್ದಾರೆ. ಆದರ್ಶ ಕುಟುಂಬದಲ್ಲಿ ಬೆಳೆದ ಇವರು ಅದೇ ಆದರ್ಶ ಕುಟುಂಬದ ಒಡೆಯರಾಗಿ ಸಮಾಜಕ್ಕೆ ಮಾದರಿಯಾಗಿದ್ದಾರೆ. ಬೀಜದಂತೆ ವೃಕ್ಷ ಎನ್ನುವಂತೆ ಅವರ ಮಕ್ಕಳು ವೈದ್ಯಕೀಯ ಕ್ಷೇತ್ರದಲ್ಲಿ ಎಂ ಡಿ ಪದವಿ ಅಧ್ಯಯನ ಮಾಡುತ್ತಿರುವುದು ಹೆಮ್ಮೆಯ ಸಂಗತಿ.
ಒಟ್ಟಾರೆ ಇಂದು ವೃತ್ತಿಯಿಂದ ನಿವೃತ್ತಿ ಹೊಂದುತ್ತಿದ್ದರೂ ಪ್ರವೃತ್ತಿಯಿಂದ ಅವರ ಜ್ಞಾನ ಬರವಣಿಗೆ ರೂಪದಲ್ಲಿ ಹರಿದು ಮುಂದಿನ ಜನಾಂಗಕ್ಕೆ ದಾರಿದೀಪವಾಗಲಿ. ಮತ್ತಷ್ಟು ಉತ್ತಮೋತ್ತಮ ಕೃತಿಗಳಿಂದ ಕನ್ನಡ ಸಾಹಿತ್ಯ ಕ್ಷೇತ್ರ ಶ್ರೀಮಂತವಾಗಲಿ. ಜೀವನದಲ್ಲಿ ಸದಾ ಸಂತೋಷ ಹಾಗೂ ಸಂತೃಪ್ತಿ ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುವೆ.
ಡಾ.ಚನ್ನಬಸವಯ್ಯ ಸರ್ ರವರ ಜೊತೆ ಕೆಲಸ ಮಾಡಿದ್ದು ಕೆಲವೇ ವರ್ಷಗಳಾದರೂ ಕಲಿತದ್ದು ಅಪಾರ. ಅವರ ವೃತ್ತಿಜೀವನದ ನಿವೃತ್ತಿಯ ಸಂಭ್ರಮಕ್ಕೆ ನನ್ನ ಬರಹದ ಉಡುಗೊರೆಯಾಗಿ ಈ ಬರಹ.
–ಶ್ರೀಮತಿ ರೇಖಾ ಪಾಟೀಲ
ಇತಿಹಾಸ ಪ್ರಾಧ್ಯಾಪಕರು
ಎಲ್.ವಿ.ಡಿ ಮಹಾವಿದ್ಯಾಲಯ ರಾಯಚೂರು