ಬಕ್ರೀದ್ ಹಬ್ಬ-ತ್ಯಾಗ,ಬಲಿದಾನದ ಸಂಕೇತ
ಹುಲ್ಲಾಹಲ್ಲಜೀ ಲಾ ಇಲಾಹ ಇಲ್ಲಾ ಹುವ ಅಲ್ ಮಲಿಕುಲ್
ಕುದ್ದೂ ಸುಸ್ಸಲಾಮುಲ್ ಮುಅ’ಮಿನುಲ್ ಮುಹ್ ಮಿನುಲ್
ಅಜೀಜುಲ್ ಜಬ್ಬಾರುಲ್ ಮುತಕಬ್ಬರು ಸುಬ್ ಹಾನಲ್ಲಾಹಿ ಅಮ್ಮಾ ಯುಷ್ ರಿಕೂನ್
ಇಸ್ಲಾಂ ಧರ್ಮಿಯರು ಏಕ ದೇವೋಪಾಸನೆಯನ್ನು ಹೊಂದಿದವರು. ಅವನೇ ಸರ್ವಶಕ್ತನು, ಅವನೇ ಸೃಷ್ಟಿಕರ್ತನು ಅವನ ಆರಾಧನೆ ಅಲ್ಲದೆ ಅನ್ಯದೇವಗಳ ಆರಾಧನೆಯನ್ನು ಕಟುವಾಗಿ ವಿರೋಧಿಸುತ್ತಾರೆ.ಪ್ರಸ್ತುತ ಮೇಲಿನ ಶ್ಲೋಕದಲ್ಲಿ ಹೇಳಿರುವಂತೆ
ಅಲ್ಲಾಹ್ ನ ಹೊರತು ಯಾವ ದೇವರು ಇಲ್ಲ. ಅವನೇ ಸಾರ್ವಭೌಮನು, ಪವಿತ್ರನು, ಶಾಂತಿ ಮೂಲನೂ, ಅಭಯವಚನ ಕೊಡುವವನು, ಸಂರಕ್ಷಕ,ಬಲಾಢ್ಯನು,ಅಪ್ರತಿಹತನು,ಘನವಂತನು ಎಂದು ವರ್ಣಿಸಲಾಗಿದೆ.
ಹುವಲ್ಲಾಹುಲ್ಲಜೀ ಲಾ ಇಲಾಹ ಇಲ್ಲಾ ಹುವ ಆಲಿಮುಲ್ ಗಯ್ ಬಿ ವಷ್ಷಹಾದತಿ ಹುವರ೯ಹ್ ಮಾ ನುರ೯ಹೀಮ್
ಅಲ್ಲಾಹ್ ನ ಹೊರತು ಯಾವ ದೇವರೂ ಇಲ್ಲ. ಅದೃಷ್ಟ ಮತ್ತು ಅದೃಷ್ಟವನ್ನು ಬಲ್ಲವನು ಅವನೇ ದಯಾಸಾಗರನು ದಯಾಕರನೂ ಆಗಿದ್ದಾನೆ.
ದೇವನೊಬ್ಬ ನಾಮ ಹಲವು ಪರಮ ಪತಿವೃತಿಗೆ ಗಂಡನೊಬ್ಬ ಮತ್ತೊಂದಕ್ಕೆರಗಿದರೆ ಕಿವಿ ಮೂಗ ಕೊಯ್ವನು ಹಲವು ದೈವದ ಎಂಜಲ ತಿಂಬವರನೇನೆಂಬೆ, ಕೂಡಲಸಂಗಮದೇವ
ಕಂಡ ಕಂಡವರೆಲ್ಲ ಗಂಡನೆಂದೆಂಬ ದುಂಡೆಯನವಳ ಸಜ್ಜನ ಎಂದೆನ್ನಬಹುದೇ? ಲಿಂಗಪ್ರಸಾದವನುಂಡು ಅನ್ಯದೈವಂಗಳ ಕೊಂಡಾಡುವವರ ನಮ್ಮ ಕೂಡಲಸಂಗಮದೇವನು ಆ ಭಂಡರಿಗೆ ಮಾಡಿದ ಹುಳುಗೊಂಡವ
ನಾನು ಬಕ್ರೀದ್ ಹಬ್ಬದ ಪ್ರಯುಕ್ತ ಬರೆಯುತ್ತಿರುವ ಈ ಲೇಖನವನ್ನು ದೇವರು, ದೈವತ್ವವನ್ನು ಅರಿತುಕೊಂಡು ಮುಂದೆ ಹೇಳಬಯಸಿರುವೆ. ಜಗತ್ತಿನ ಎಲ್ಲ ಧರ್ಮಗಳು ದೇವರ ಅಸ್ತಿತ್ವದ ಬಗ್ಗೆ ವಿಭಿನ್ನ ಅಭಿಪ್ರಾಯಗಳನ್ನು ಹೊಂದಿವೆ.ಆದರೆ ಲಿಂಗಾಯತ ಧರ್ಮ ಮತ್ತು ಇಸ್ಲಾಂ ಧರ್ಮ ದಲ್ಲಿ ಬಹಳಷ್ಟು ಸಾಮ್ಯತೆಗಳಿವೆ ಹಾಗಂತ ಎಲ್ಲವೂ ಒಂದೇ ಎಂದು ಹೇಳಲು ಸಾಧ್ಯವಿಲ್ಲ. ಹಲವು ಆಚರಣೆಗಳು ಒಂದಕ್ಕೊಂದು ವಿರುದ್ಧವಾಗಿ ಇವೆ. ಈಗ ದೇವ ಇದರ ಬಗೆಗೆ ತಿಳಿದುಕೊಳ್ಳುವುದಾದರೆ ದೀವ ಎನ್ನುವ ಮೂಲ ಧಾತುವಿನಿಂದ ಬಂದಿದ್ದು ಆಗಿರುತ್ತದೆ. *ದೀವ* ಎಂದರೆ ಬೆಳಕು ಅದಕ್ಕೆ ಆಕಾರವಿಲ್ಲ,ಸಂಸಾರವಿಲ್ಲ.ಬೆಳಕು ಒಂದು ಶಕ್ತಿ ಆ ಶಕ್ತಿಯೇ ದೇವರು. ಆದ್ದರಿಂದಲೇ ಇಸ್ಲಾಂ ಹಾಗೂ ಬಸವ ಧರ್ಮದಲ್ಲಿ ವಿಗ್ರಹ ಪೂಜೆ ನಿಷಿದ್ಧ.
ಅನಂತ ಕೋಟಿ ಪ್ರಕಾಶವೆಂದು ಗಣಿಸಬಾರದ ಬ್ರಹ್ಮದ ಬೆಳಗು, ನೋಡಬಾರದ ಘನವು, ತೆರೆಯಿಲ್ಲದ ಬೆಳಗು ಮಹಾ ಬೆಳಗು, ತನ್ನಿಂದ ತಾನಾದ ಸ್ವಯಸುಖದ ನಿಜದ ನಿತ್ಯ ನಿಜ ರೂಪ, ನಿರಂಜನ, ನಿಗಮಕ್ಕತೀತ, ಹರಿಯಜರಿಗೆಟ್ಟದ ಜ್ಯೋತಿರ್ಮಯ ತಾನೇ ಲೀಲೆಗೆ ಮೂಲವಾದ ಗುಹೇಶ್ವರಲಿಂಗದ ಘನಕ್ಕೆ ಘನವಾವುದು?
ಭಕ್ತಿಯ ಪರಾಕಾಷ್ಠೆಯೇ ತ್ಯಾಗ ಬಲಿದಾನ
ಪ್ರವಾದಿ ಹಜರತ್ ಇಬ್ರಾಹಿಂ ಮೊಹಮ್ಮದ್ ರವರಿಗೆ ಸ್ವಪ್ನದಲ್ಲಿ ದೇವವಾಣಿಯಾಗಿ “ನಿನಗೆ ಅತಿ ಇಷ್ಟವಾದ ವಸ್ತುವನ್ನು ನನಗೆ ನೀಡಬೇಕೆಂದು ಕೇಳಿಕೊಂಡಾಗ ಪ್ರವಾದಿ ಹಜರತ್ ಇಬ್ರಾಹಿಂ ಮೊಹಮದ್ ರವರು ತಮಗೆ ಅತ್ಯಂತ ಇಷ್ಟವಾದ ಮಗನನ್ನು ಬಲಿಕೊಡಲು ಸಿದ್ದರಾಗಿ ನಿಲ್ಲುತ್ತಾರೆ ಅವರ ಅನನ್ಯ ಭಕ್ತಿಯನ್ನು ಕಂಡು ಸೃಷ್ಟಿಕರ್ತ ಅಲ್ಲಾಹ್ ಅವರ ಮಗನ ಬದಲಾಗಿ ಕುರಿಯನ್ನು ನಿಲ್ಲಿಸುತ್ತಾನೆ. ಆಗ ಕುರಿ ಬಲಿಯಾಗುತ್ತದೆ. ಅಂದಿನಿಂದ ಈ ಒಂದು ದಿನವನ್ನು ಹಬ್ಬವನ್ನಾಗಿ ಆಚರಿಸಲು ಪ್ರಾರಂಭಿಸಲಾಗುತ್ತದೆ. ಕೇವಲ ಪ್ರಾಣಿ ಬಲಿಯಷ್ಟೇ ಇಲ್ಲಿ ಪ್ರಾಮುಖ್ಯತೆ ಪಡೆದಿಲ್ಲ.ಬದಲಾಗಿ ಸುರಕುಂಬಾ ಎಂಬ ಸಿಹಿ ಖಾದ್ಯ ತಯಾರಿಸಿ ಬಂಧು ಬಳಗ, ದೀನ ದಲಿತರಿಗೆ ಹಂಚುವುದಾಗಿದೆ. ಇಂದು ತಯಾರಿಸಿದ ಆಹಾರವನ್ನು ಮೂರು ಭಾಗಗಳನ್ನಾಗಿ ಮಾಡಿ ಎರಡು ಪಾಲು ಕುಟುಂಬದವರು ಅಲ್ಲದವರಿಗೆ ಹಂಚಿ ಸಂಭ್ರಮಿಸುತ್ತಾರೆ. ಮಗನನ್ನೇ ಬಲಿಕೊಟ್ಟು ಆಹಾರ ಸಿದ್ಧಪಡಿಸಿ ಉಣಬಡಿಸಿದ ದೃಷ್ಟಾಂತ ಭಕ್ತ ಸಿರಿಯಾಳ ನ ಕಥೆಯಲ್ಲಿ ಬರುತ್ತಿದೆ. ಬೇಡರ ಕಣ್ಣಪ್ಪ ತನ್ನ ಕಣ್ಣುಗಳನ್ನು ದೇವರಿಗೆ ಅರ್ಪಿಸಿರುವ ಕಥೆ,ರಾವಣ ಶಿವನಿಗಾಗಿ ತನ್ನ ಶಿರಸ್ಸನ್ನೇ ಕತ್ತರಿಸಿಕೊಂಡ ಕಥೆ ಹೀಗೆ ಹತ್ತಾರು ಕಥೆಗಳು ಬರುತ್ತವೆ.ಇದು ಭಕ್ತಿಯ ಪರಾಕಾಷ್ಠೆ ಅಷ್ಟೇ. ಪ್ರಾಣಿ ಬಲಿಯನ್ನು ನಾನು ನನ್ನ ವೈಯಕ್ತಿಕವಾಗಿ ಖಂಡಿಸುತ್ತೇನೆ.ಆದರೆ ದೇಶ, ಪ್ರಾದೇಶಿಕವಾಗಿ ನಡೆದ ಸಂಪ್ರದಾಯಗಳನ್ನು ಅಲ್ಲಾ. ಆಯಾ ಪ್ರದೇಶದಲ್ಲಿ ಮಾಂಸಾಹಾರವೇ ಪ್ರಧಾನವಾಗಿರುವಾಗ ಅವರ ಉಡಿಗೆ ಆಹಾರಕ್ರಮ ಪ್ರಶ್ನಿಸಲು ಸಾಧ್ಯವಿಲ್ಲ. ಹಿಂದೂ ಧರ್ಮದಲ್ಲೂ ಹಲವಾರು ಉಪ ಪಂಗಡಗಳು ಪ್ರಾಣಿ, ಪಕ್ಷಿಗಳನ್ನು ಬಲಿ ಕೊಡುತ್ತಾರೆ. ಆದರೆ ಪ್ರಾಣಿ ಬಲಿಯ ಬಗೆಗೆ ಕುರ್-ಆನ್ ನಲ್ಲಿ ಹೇಳಿರುವ ಸತ್ಯವನ್ನು ಪ್ರತಿಯೊಬ್ಬನೂ ತಿಳಿದುಕೊಳ್ಳಬೇಕಾಗಿದೆ. ಶರೀಅತ್ ನಲ್ಲಿ ಹೇಳಿದ್ದೇನೆಂದರೆ,
ಆಟ ವಿನೋದ ಗಳಿಗಾಗಿ ಯಾವ ಪ್ರಾಣಿಯನ್ನು ವಧಿಸಬಾರದು. ಮಾಂಸಾಹಾರ ಆರೋಗ್ಯಕ್ಕೆ ಪುಷ್ಟಿದಾಯಕವಾಗಿದೆ ಹಾಗಂತ ಅನಾವಶ್ಯಕವಾಗಿ ಪ್ರಾಣಿಹತ್ಯೆಯನ್ನು ಮಾಡಕೊಡುವುದು. ಸಾಕು ಪ್ರಾಣಿಗಳಿಗೆ ಕಾಡು ಪ್ರಾಣಿಗಳಿಗೆ ಕಿರುಕುಳವನ್ನು ನೀಡುವಂತಿಲ್ಲ ಅವುಗಳನ್ನು ಬಂಧನದಲ್ಲಿಡಲು ಅನುಮತಿ ಇಲ್ಲ, ಹಸಿವಿನಿಂದ ಬಳಲುವಂತೆ ಮಾಡುವಂತಿಲ್ಲ ಹಾಗೆ ಫಲಪುಷ್ಪಗಳನ್ನು ಉಪಯೋಗಿಸಬಹುದೇ ಹೊರತು ಅವುಗಳನ್ನು ವ್ಯರ್ಥವಾಗಿ ನಾಶ ಮಾಡಬಾರದು. ಸೃಷ್ಟಿಕರ್ತ ಅಲ್ಲಾಹ್ ನಮಗಾಗಿ ಎಲ್ಲವನ್ನೂ ಕೊಡ ಮಾಡಿದ್ದಾನೆ ಆದರೆ ಅವುಗಳನ್ನು ಇತಿಮಿತಿಯೊಳಗೆ ಬಳಸಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಆಹಾರ ಪದಾರ್ಥಗಳನ್ನು ಕೆಡಿಸುವಂತಿಲ್ಲ ನೀರನ್ನು ಕೂಡ ವ್ಯರ್ಥ ಮಾಡಬಾರದೆಂದು ಹೇಳಲಾಗುತ್ತದೆ.
ಹಬ್ಬಕ್ಕೆ ತಂದ ಹರಿಕೆಯ ಕುರಿ ತೋರಣಕ್ಕೆ ತಂದ ತಳಿರ ಮೇಯಿತ್ತು. ಕೊಂದಹರೆಂಬುದನರಿಯದೆ ಬೆಂದ ಒಡಲ ಹೊರೆವುತ್ತಲ್ಲದೆ. ಅದಂದೆ ಹುಟ್ಟಿತ್ತು ಅದಂದೆ ಹೊಂದಿತ್ತು. ಕೊಂದವರುಳಿದರೆ ಕೂಡಲಸಂಗಮದೇವ
ಪ್ರಾಣಿ ಬಲಿಯ ಬಗೆಗೆ ವಾದ ಮಾಡುವ ಬದಲಾಗಿ ಆಯಾ ಆಯಾ ಹಬ್ಬಗಳ ಹಿನ್ನೆಲೆಯನ್ನು ಅರಿತುಕೊಂಡು ಸಾಧ್ಯವಾದಷ್ಟು ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯಬೇಕಾಗಿದೆ.
ಸರ್ವರಿಗೂ ಬಕ್ರೀದ್ ಹಬ್ಬದ ಶುಭಾಶಯಗಳು 🙏🙏🌹🌹
ರವೀಂದ್ರ ಆರ್. ಪಟ್ಟಣ.
ಮುಳಗುಂದ–ರಾಮದುರ್ಗ