ಲೋಕದೊಳಗಿನ ಏಕಾಂತ

ಅಕ್ಕನೆಡೆಗೆ ವಚನ – 38

ಲೋಕದೊಳಗಿನ ಏಕಾಂತ

ಉಸುರಿನ ಪರಿಮಳವಿರಲು ಕುಸುಮದ ಹಂಗೇಕಯ್ಯಾ? ಕ್ಷಮೆ ದಮೆ ಶಾಂತಿ ಸೈರಣೆಯಿರಲು ಸಮಾಧಿಯ ಹಂಗೇಕಯ್ಯಾ?
ಲೋಕವೆ ತಾನಾದ ಬಳಿಕ ಏಕಾಂತದ ಹಂಗೇಕಯ್ಯಾ ಚೆನ್ನಮಲ್ಲಿಕಾರ್ಜುನಾ?

ಅಕ್ಕಮಹಾದೇವಿ ಅಷ್ಟೇ ಅಲ್ಲ, ಎಲ್ಲಾ ಶರಣರು ಅಮೂಲಾಗ್ರವಾಗಿ ತಮ್ಮ ಗಮನವನ್ನು ಕೇಂದ್ರೀಕರಿಸಿದ್ದು, ವೈಚಾರಿಕ ಪ್ರಜ್ಞೆಯ ತಳಹದಿಯ ಮೇಲೆ, ದೇಹ, ಮನಸು ಮತ್ತು ಭಾವನೆಗಳ ಚಟುವಟಿಕೆ. ಹಾಗೆಯೆ ಮೇಲಿನ ವಚನವು ಈ ಮೂರು ಸಂಗತಿಗಳ ಸುತ್ತ ಅನುಭಾವಪೂರ್ಣವಾಗಿ ಚರ್ಚಿಸುತ್ತದೆ. ವ್ಯಷ್ಟಿಯಿಂದ ಸಮಷ್ಟಿ ಚಿಂತನೆಯೂ ಇಲ್ಲಿ ನಡೆದಿರುವುದು ವೇದ್ಯವಾಗುತ್ತದೆ.

ವೈಯಕ್ತಿಕ ನೆಲೆಯ ಔನತ್ಯವು ಸಾಮಾಜಿಕರಣಗೊಳ್ಳುವ ಆರೋಗ್ಯಪೂರ್ಣ ಸ್ಥಿ‌ತಿ. ಇಂತಹ ಸ್ಥಿತಿ ನಿರ್ಮಿಸಲು ಚಿಂತನೆ ಮಾಡುವತ್ತ ಗಮನ ಹರಿಸಲು ಈ ವಚನ ಅನುವು ಮಾಡಿ ಕೊಡುತ್ತದೆ.

ಮನುಷ್ಯನ ದೇಹ, ಮನಸು, ಭಾವನೆಗಳು ಅಂದರೆ ಆರೋಗ್ಯ ಅಂತಲೂ ಪರಿಭಾವಿಸಬಹುದು. ಆರೋಗ್ಯವಂತ ಶರೀರದಲ್ಲಿ ಆರೋಗ್ಯಪೂರ್ಣ ಮನಸಿರುತ್ತದೆ. ಸಹಜವಾಗಿಯೇ ಆ ಮನಸಿನ ಭಾವನೆಗಳೂ ಆರೋಗ್ಯದಿಂದಲೇ ಕೂಡಿರುತ್ತದೆ. ಆಗ ಇಡೀ ಶರೀರ ಸರ್ಮಾಂಗ ಲಿಂಗವಾಗಿ, ಲಿಂಗಕ್ಕೆ ಸಮಾನವಾಗಿ, ಜಂಗಮ ಸೇವೆಗೆ ಸನ್ನದ್ಧವಾಗುತ್ತದೆ.

ಉಸುರಿನ ಪರಿಮಳವಿರಲು ಕುಸುಮದ ಹಂಗೇಕಯ್ಯಾ?

ಅಕ್ಕಮಹಾದೇವಿಯ ಚಿಂತನೆ ಯಾವತ್ತೂ ವೈಚಾರಿಕ ಹಾಗೂ ವೈಜ್ಞಾನಿಕವಾಗಿಯೇ ಇರುವುದು ತಿಳಿದ ವಿಷಯ. ವ್ಯಕ್ತಿಗೆ ತನ್ನ ಉಸಿರಿನ ಪರಿಮಳ ತನ್ನೊಳಗೇ ಇರುವಾಗ ಬೇರೆ ಪುಷ್ಪದ ಸುವಾಸನೆಯ ಅಗತ್ಯವಿದೆಯೆ? ಎಂದು ಪ್ರಶ್ನಿಸುತ್ತಾಳೆ.

‘ಉಸಿರು’ ಅಂದರೆ ಪ್ರಾಣವಾಯು. ಪ್ರಕೃತಿಯಲ್ಲಿ ಸಕಲ ಜೀವರಾಶಿಗಳು ಚೇತನ್ಯದಿಂದ ಸುಳಿದಾಡುತ್ತಿರಲು ಶುದ್ಧ ಆಮ್ಲಜನಕವೇ ಕಾರಣ. ಆದರೆ ಅದನ್ನು ಪಡೆಯಲು ಶಿವಯೋಗದ ಲಿಂಗ ಧ್ಯಾನಕ್ಕೆ ಮೊರೆ ಹೋಗಬೇಕು. ಈ ಮೂಲಕ ಪಡೆದರೆ ಅದು ವಿಶಿಷ್ಟ ಅನುಭೂತಿ ನೀಡುತ್ತದೆ. ಇಷ್ಟಲಿಂಗ ಪೂಜಾ ವಿಧಾನವನ್ನು ಪ್ರತಿನಿತ್ಯದ ಅಭ್ಯಾಸವಾಗಿಸಿಕೊಂಡು, ಲಿಂಗ ಮತ್ತು ಅಂಗ ಸಾಮರಸ್ಯದ ಅನುಭೂತಿ ಪಡೆದು, ಸಾಧನೆಯ ಮೆಟ್ಟಿಲು ಏರಿದಾಗ, ದೇಹದಲ್ಲಾಗುವ ಸಂಚಲನವೇ ಪ್ರಾಣವಾಯುವಿನ ಚಮತ್ಕಾರಿಕ ಸುಳಿದಾಟ. ಆಗ ನಮ್ಮ ಉಸಿರೇ ನಮ್ಮ ಜೀವಚೈತನ್ಯ. ಯೋಗಧ್ಯಾನವೇ ನಮ್ಮ ಆರೋಗ್ಯದ ಗುಟ್ಟಾದಾಗ ಬೇರೆ ಔಷದೋಪಚಾರದ ಅಗತ್ಯವಿರುವುದಿಲ್ಲ.

ಶರಣ ಲದ್ದೆಯ ಸೋಮಣ್ಣನ ವಚನ ಹೀಗಿದೆ,
“ಆವ ಕಾಯಕವಾದಡೂ ಸ್ವಕಾಯಕವ ಮಾಡಿ
ಗುರು ಲಿಂಗ ಜಂಗಮದ ಮುಂದಿಟ್ಟು
ಒಕ್ಕುದ ಹಾರೈಸಿ ಮಿಕ್ಕುದ ಕೈಕೊಂಡು
ವ್ಯಾಧಿ ಬಂದಡೆ ನರಳು
ಬೇನೆ ಬಂದಡೆ ಒರಲು
ಜೀವ ಹೋದಡೆ ಸಾಯಿ
ಇದಕ್ಕಾ ದೇವರ ಹಂಗೇಕೆ ಭಾಪು ಲದ್ದೆಯ ಸೋಮಾ?”
ಇದನ್ನೇ ಅಕ್ಕ ಬಹಳ ನವಿರಾಗಿ, ಕಾವ್ಯಾತ್ಮಕವಾಗಿ, ಪ್ರತಿಮೆಯ ಮೂಲಕ ತಿಳಿಯ ಪಡಿಸುತ್ತಾಳೆ.

ಶರಣರು, ಸಂತರು, ಮಹಾಪುರುಷರು ತಮ್ಮ ಅನಾರೋಗ್ಯದ ಸಂದರ್ಭದಲ್ಲಿ ಸಾವಿಗೆ ಅಂಜದೆ, ಬದಲಿಗೆ ಅದನ್ನು ಆಹ್ವಾನಿಸಿ, ಉಸಿರನ್ನು ಗಮನಿಸುತ್ತಲೇ ಪ್ರಾಣಕ್ಕೆ ಅಂತ್ಯ ಹಾಡುತ್ತಾರೆ. ಹೀಗೆ ಲಿಂಗೈಕ್ಯರಾಗಿ ಹೋದ ಅನೇಕ ಉದಾಹರಣೆಗಳನ್ನು ಗಮನಿಸಿದ್ದೇವೆ.

ಕ್ಷಮೆ ದಮೆ ಶಾಂತಿ ಸೈರಣೆಯಿರಲು ಸಮಾಧಿಯ ಹಂಗೇಕಯ್ಯಾ?

ಮನುಷ್ಯನೊಳಗಿರುವ ಅರಿಷಡ್ವರ್ಗಗಳು ಎಂದರೆ ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರ. ಇವಿಗಳ ಮೇಲೆ ಮನಸಿನ ಹತೋಟಿ ಇಲ್ಲದಿದ್ದರೆ, ಇವುಗಳೇ ಮನುಷ್ಯನನ್ನು ಆಳುತ್ತವೆ. ಅದನ್ನು ನಿಗ್ರಹಿಸಲು ಜಪ, ತಪ, ಧ್ಯಾನ ರೂಢಿಸಿಕೊಂಡು, ಅದರ ಚರಮಸೀಮೆಯಾದ ಸಮಾಧಿ ಸ್ಥಿತಿಯನ್ನು ತಲುಪಬಹುದು. ಆಗ ಯಾವ ಅವಗುಣಗಳೂ ಬಾಧಿಸುವುದಿಲ್ಲ. ಆದರೆ ಈ ಪ್ರಕ್ರಿಯೆ ಎಲ್ಲರಿಗೂ ಸಾಧ್ಯವಿಲ್ಲ. ಇಂತಹ ಕಷ್ಟಸಾಧ್ಯವನ್ನು ಸರಳೀಕೃತಗೊಳಿಸಲು ಅಕ್ಕನ ಮೇಲಿನ ಪ್ರಶ್ನೆ ಸಹಕಾರಿ.

ವ್ಯಕ್ತಿಯ ಮನಸು ಮತ್ತು ಅದರ ಆರೋಗ್ಯಕರ ಸ್ಥಿತಿಯನ್ನು ಕಾಪಾಡುವ ಕಡೆಗೆ ಈ ಸಾಲು ಗಮನ ಹರಿಸುತ್ತದೆ. ಮನುಷ್ಯನಲ್ಲಿ ಜೀವನ ಪ್ರೀತಿ ಇದ್ದರೆ ತನ್ನನ್ನು ತಾನು ಪ್ರೀತಿಸುತ್ತಾನೆ. ಆಗ ಇನ್ನೊಬ್ಬರೊಂದಿಗೆ ಪ್ರೀತಿಯಿಂದ ವ್ಯವಹರಿಸುತ್ತಾನೆ. ಆಗ ಭಾವನೆಗಳನ್ನು ಹಂಚಿಕೊಳ್ಳಲು ಮನಸು ತಯಾರಾಗುತ್ತದೆ. ಆ ಸ್ವಭಾವ ರೂಢಿಯಾದರೆ ತಾಳ್ಮೆ, ಸಹನೆ, ದಯೆ, ಕ್ಷಮೆಯಂತಹ ಗುಣಗಳು ತನ್ನಿಂದ ತಾನಾಗಿಯೇ ಒಲಿಯುತ್ತವೆ. ಆಗ ಜಪ, ತಪದ ಹಂಗು ಇರುವುದಿಲ್ಲ. ಸಮಾಧಿ ಸ್ಥಿತಿಯ ಅಗತ್ಯ ಎನಿಸುವುದಿಲ್ಲ. ಪ್ರತಿನಿತ್ಯವೂ ಶಾಂತ, ಸಮಾಧಾನ, ಸೌಹಾರ್ದತೆಯಿಂದ ಬದುಕಬಹುದು.

ಲೋಕವೆ ತಾನಾದ ಬಳಿಕ ಏಕಾಂತದ ಹಂಗೇಕಯ್ಯಾ ಚೆನ್ನಮಲ್ಲಿಕಾರ್ಜುನಾ?

ಈ ಜಗತ್ತಿನಲ್ಲಿ ಎರಡು ವಿಧದ ಜನರನ್ನು ಕಾಣುತ್ತೇವೆ. ಒಂದು ಸಂಸಾರಿ, ಇನ್ನೊಂದು ಸನ್ಯಾಸಿ. ಸಂಸಾರಿ ತನ್ನಷ್ಟಕ್ಕೆ ತಾನೇ ಜೀವನ ಸಾಗಿಸುತ್ತಾನೆ. ಅವನಿಗೆ ಲೋಕದ ಚಿಂತೆ ಇರುವುದಿಲ್ಲ. ಸನ್ಯಾಸಿ ಈ ಸಂಸಾರವೇ ಬೇಡ ಎನ್ನುವ ವಿರಕ್ತಭಾವ ತಳೆದು, ಲೋಕೋದ್ಧಾರಕ್ಕಾಗಿ ಇಡೀ ಲೋಕದಿಂದ ದೂರ ಹೋಗಿ ತಪಸ್ಸು ಮಾಡುತ್ತಾನೆ. ಇವರೆಡು ಭಿನ್ನಭಿನ್ನವಾಗಿ ಕಂಡು ಬರುವ ಎರಡು ಮನಸ್ಥಿತಿಗಳು. ಆದರೆ ಶರಣರು ಸಂಸಾರದಲ್ಲಿ ಇದ್ದುಕೊಂಡು ಲೋಕೋದ್ಧಾರ ಮಾಡುವ ಕಲೆಯನ್ನು ಹೇಳಿ ಕೊಟ್ಟರು. ಅಂತೆಯೇ ಅಕ್ಕಮಹಾದೇವಿ ಹೇಳುವ ಈ ಮಾತು ಪೂರಕ. ಇಡೀ ಲೋಕದಲ್ಲಿ ತಾನೂ ಒಬ್ಬಳಾಗಿ, ನಂತರ ಲೋಕವೇ ತಾನಾಗುವ ಮನಸ್ಥಿತಿಯನ್ನು ನಿರ್ಮಿಸಿಕೊಳ್ಳುವುದರ ಕಡೆ ಗಮನ ಸೆಳೆಯುತ್ತಾಳೆ.

ಆರಂಭದಲ್ಲಿ ಹೇಳಿದಂತೆ ಅಕ್ಕಮಹಾದೇವಿಯ ಈ ವಚನದ ಮೂರು ಸಾಲುಗಳು ದೇಹ, ಮನಸು, ಭಾವನೆಗಳ ಸ್ಪಷ್ಟತೆ ನೀಡುತ್ತವೆ. ಮೊದಲನೆಯದು ದೈಹಿಕ ಆರೋಗ್ಯ, ಎರಡು ಮಾನಸಿಕ ಆರೋಗ್ಯ ಮತ್ತು ಮೂರನೆಯದು ಅನುಭಾವದ ಅನುಭೂತಿಯ ಆರೋಗ್ಯ. ಇದನ್ನು ಬೆಳೆಸಲು, ಕಾಪಾಡಲು, ರೂಢಿಯಾಗಿಸಲು ನಮ್ಮೊಳಗಿನ ಆಂತರಿಕ ಶಕ್ತಿ ಹೆಚ್ಚಿಸಿಕೊಳ್ಳುವುದೇ ಪರ‌್ಯಾಯ.

ಅಕ್ಕಮಹಾದೇವಿ, ಅಲ್ಲಮಪ್ರಭು, ಸಿದ್ಧರಾಮ, ಚೆನ್ನಬಸವಣ್ಣ ವಿರಕ್ತರಾಗಿ ಮಾಡಿದ ಕಾರ್ಯವನ್ನು, ಬಸವಾದಿ ಶರಣರು ಸಂಸಾರದಲ್ಲಿ ಇದ್ದುಕೊಂಡೇ ಮಾಡಿರುವುದನ್ನು ಇಲ್ಲಿ ಸ್ಮರಿಸಬಹುದು. ಬುವಿಗೆ ಭಕ್ತಿಯ ಭಂಡಾರವನ್ನೇ ಹೊತ್ತು ತಂದ ಬಸವಣ್ಣ ಸಂಸಾರಿಯಾದರೂ ಸದಾ ಯೋಗಿ. ಆ ಕಾರಣಕ್ಕಾಗಿ ಬಸವಣ್ಣನನ್ನು ಅಷ್ಟೇ ಗೌರವದಿಂದ ಎಲ್ಲಾ ಶರಣರು ಕಂಡರು. ಇಂದಿಗೂ ಅದು ಪರಂಪರೆಯಾಗಿ ಬೆಳೆಯುತ್ತಿರುವುದನ್ನು ಗಮನಿಸುತ್ತಿದ್ದೇವೆ. ಇದನ್ನೇ ಪುಷ್ಟೀಕರಿಸುವ ‘ಮೂರು ಲೋಕದವರಿಗೂ ಬಸವಣ್ಣನೆ ದೇವರು’ ಎಂದು ಹೇಳುವ ಅಕ್ಕಮಹಾದೇವಿಯ ವಚನದ ಸಾಲು ಅದ್ಭುತ.

ಸಿಕಾ

Don`t copy text!