ಅಪ್ಪ
ಅಪ್ಪನಿಲ್ಲದ ಜೀವನ ಸಪ್ಪ
ಮತ್ತೆ ಮರಳಿ ಬೇಗನೆ ಬಾರಪ್ಪ
ನೀನಿಲ್ಲದ ಬದುಕು ಕತ್ತಲು
ಯಾರಿಲ್ಲ ಎನಗೆ ನಿನಗಿಂತ ಮಿಗಿಲು
ಕರುಣೆ ಪ್ರೀತಿ ಮಮತೆಯ ಆಗರ
ಸತ್ಯ ಪ್ರಾಮಾಣಿಕತೆಯ ಹರಿಕಾರ
ವಿಶಾಲ ಹೃದಯದ ದಾನಶೂರ
ಆಡುವ ಮಾತುಗಳು ದಿಟ್ಟ ನೇರ
ನಿನಗಾಗಿ ಏನನ್ನೂ ಬಯಸಲಿಲ್ಲ
ಬಯಸಿದವರಾಸೆ ತೀರಿಸದೆ ಇರಲಿಲ್ಲ
ನಿನ್ನ ನೋವನೆಂದು ತೋರಗೊಡಲಿಲ್ಲ
ನೀನೊಬ್ಬನೆ ಸಹಿಸಿ ಮರೆಯಾದೆಯಲ್ಲ
ನಾನು ತಪ್ಪು ಮಾಡಿದಾಗಲೆಲ್ಲ
ಒಮ್ಮೆಯೂ ಬಯ್ಯಲಿಲ್ಲ ಬಡಿಯಲಿಲ್ಲ
ಬಾಳ ಪಯಣದ ಸಾರವನೆಲ್ಲ
ಮೌನದಿಂದಲೇ ತಿದ್ದಿ ತಿಳಿಸಿದೆಯಲ್ಲ
ಕುಟುಂಬದೇಳ್ಗೆಯಲಿ ದೊಡ್ಡ ಪಾತ್ರ
ಸರಳತನವು ನಿನ್ನ ಜೀವನದ ಸೂತ್ರ
ನೀನಾದೆ ಆಕಾಶದಲ್ಲೊಂದು ನಕ್ಷತ್ರ
ನಮಗೆಲ್ಲ ನೀನು ಬರಿ ನೆನಪು ಮಾತ್ರ
-ಜಯಶ್ರೀ ಎಸ್ ಪಾಟೀಲ
ಧಾರವಾಡ