ಮುಕ್ತಿಯ ಮುಮುಕ್ಷು ಮುಕ್ತಾಯಕ್ಕ

ಶರಣರ ಲೇಖನ

ಮುಕ್ತಿಯ ಮುಮುಕ್ಷು ಮುಕ್ತಾಯಕ್ಕ

ಲಿಂಗಾಯತ ತತ್ವ ಕ್ಷೇತ್ರದಲ್ಲಿ ಸುವರ್ಣದ ಘಟ್ಟಿ ಮತ್ತು ಮೌಕ್ತಿಕದ ಅಚ್ಚು ಎಂದರೆ ಅಜಗಣ್ಣನ ತಂಗಿ ಮುಕ್ತಾಯಕ್ಕ . ಈಕೆ ಕಲ್ಯಾಣಕ್ಕೆ ಬಾರದೆ ಇದ್ದರೂ ಬಸವಾದಿ ಪ್ರಮಥರ ಪ್ರಭಾವ ಸಂಪರ್ಕ ಹೊಂದದೆ ಇದ್ದರೂ ಅನುಭವಮಂಟಪದ ಶೂನ್ಯ ಪೀಠಾಧ್ಯಕ್ಷ ಅಲ್ಲಮಪ್ರಭುವಿನ ಜತೆ ನಡೆಸಿದ ತಾತ್ವಿಕ ಸಂಭಾಷಣೆಯ
ಆಧಾರದ ಮೇಲೆಯೇ ಈಕೆ ಅತ್ಯುನ್ನತ ತತ್ವವೇತ್ತಳಾಗಿದ್ದಳೆ0ಬುದು ನಮಗೆ ವಿದಿತವಾಗುತ್ತದೆ.

ಕನ್ನಡಭಾಷೆಯನ್ನು ದುಡಿಸಿಕೊಳ್ಳುವುದರಲ್ಲಿ ಮತ್ತು ಕನ್ನಡದ ಶಕ್ತಿಯುತ ಶಬ್ದಗಳನ್ನ ಕುಣಿಸುವುದರಲ್ಲಿ ಮಹಾದೇವಿಯಕ್ಕಳದು ಕವಿ ಹೃದಯವಾದರೆ ಮುಕ್ತಾಯಕ್ಕಳದು
ವಿದ್ವತ್ ಹೃದಯ. ತಾನೇರಿದ ಅನುಭಾವದೆತ್ತರವನು ಅಸ್ಖಲಿತ ಭಾಷಾ ಪ್ರೌಢಿಮೆಯಿಂದ ಬಿತ್ತರಿಸಿದವಳು ಮುಕ್ತಾಯಕ್ಕ.

ಮುಕ್ತಾಯಕ್ಕ ಈಗಿನ ಗದುಗಿನ ಸಮೀಪದ ಲಕ್ಕು0ಡಿಯ ಕೃಷಿಕ ಅಜಗಣ್ಣನ ಅಚ್ಚುಮೆಚ್ಚಿನ ತಂಗಿಯೆ0ಬುದು ಮಾತ್ರ ತಿಳಿದುಬರುತ್ತದೆ. ಅಜಗಣ್ಣನಾದರೂ ಸಾಮಾನ್ಯ
ಕೃಷಿಕನಾಗಿರಲಿಲ್ಲ. ತನುವ ತೋಟವ ಮಾಡಿ, ಮನವ ಗುದ್ದಲಿ ಮಾಡಿ, ಸಂಸಾರದ ಹೆಂಟೆಗಳನ್ನು ಹೊಡೆದು ಸುಷುಮ್ನ ನಾಳದಿಂದ ಉದಕವನ್ನು ಹರಿಯಿಸಿ ಬ್ರಹ್ಮಬೀಜದ ಬೆಳೆಯನ್ನು ಬೆಳೆದಂತಹ ಅಸಾಮಾನ್ಯ ಕೃಷಿಕ
ನಾಗಿದ್ದ. ಈತನು ಆರೂಢಿಸಿದ ಐಕ್ಯಸ್ಥಲವನ್ನು ಅನೇಕ ಶರಣರು ಮುಕ್ತ ಕಂಠದಿಂದ ಪ್ರಶಂಸಿದ್ದಾರೆ.

ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಜ್ಞಾನೋದಯ ಪಡೆಯುತ್ತಾರೆ. ಅಜಗಣ್ಣನು ಅಲೌಕಿಕ ವ್ಯಕ್ತಿಯಾಗಲು ಕಾರಣವಾದ ಘಟನೆ ಹೀಗಿದೆ.

ಒಮ್ಮೆ ಈತ ರಾತ್ರಿ ಹೊಲ ಕಾಯುತ್ತಿರುವಾಗ ನಿಶ್ಯಬ್ದ ಕ್ಷಣದಲ್ಲಿ ಒಂದು ಹಾವು ಹೊರಬರುತ್ತದೆ. ಅದು ತನ್ನ ಹೆಡೆಯೊಳಗಿನ ರತ್ನವನ್ನು ಒಂದು ಎಡೆಯಲ್ಲಿರಿಸಿ ಅದರ ಬೆಳಕಿನಲ್ಲಿ ಆಹಾರವನ್ನು ಹುಡುಕಿಕೊಳ್ಳುತ್ತಿರತ್ತದೆ. ಶಿವ ಶಿವಾ ಎಂಬ ಅಜಗಣ್ಣನ ಶಬ್ದೋಚ್ಚಾರಣೆಯೇ
ಆ ಹಾವಿಗೆ ಶಬ್ದ ಮಾಲಿನ್ಯವಾಗಿ ತರಾತುರಿಯಿಂದ ತನ್ನ
ರತ್ನವನ್ನು ತನ್ನ ಹೆಡೆಯಲ್ಲಿ ಮಡಗಿಕೊಂಡು ಕಣ್ಮರೆಯಾಗುತ್ತದೆ. ಈ ಘಟನೆ ಅಜಗಣ್ಣನ ಅಂತರ್ವೀಕ್ಷಣೆಗೆ ಕಾರಣವಾಗುತ್ತದೆ. ಒಂದು ಸಾಮಾನ್ಯ ಸರ್ಪ ತನ್ನ ಬೆಳಕಿನ ರತ್ನವನ್ನು ಯಾರಿಗೂ ಕಾಣದಂತೆ ಜತನ ಮಾಡಿ
ಕೊಳ್ಳಬೇಕಾದರೆ ನಾವು ಮಾನವರು ಪರಮಾತ್ಮನು ಕೊಟ್ಟ ಜ್ಞಾನ ರತ್ನವನ್ನು ಬೀದಿಯ ಪಸರ, ಹಾದಿಯ ಅರವಟ್ಟಿಗೆ,ಉಪಜೀವನದ ಉಪಕರಣವನ್ನಾಗಿ ಮಾಡಿ
ಕೊಳ್ಳುವೆವಲ್ಲಾ ಎಂದು ಆಲೋಚನಾ ತತ್ಪರನಾಗಿ ಅಂದಿನಿಂದ ಶಬ್ದಕ್ಕೆ ಹೇಸಿ ಮುಗ್ದನಾಗುತ್ತಾನೆ. ಯಾರಿಗೂ ಕಾಣದ ಗುಪ್ತ ಶಿವ ಭಕ್ತನಾಗುತ್ತಾನೆ.

ಅಜಗಣ್ಣನು ಎಷ್ಟೇ ತನ್ನ ಸಾಮರ್ಥ್ಯವನ್ನು ಅಡಗಿಸಿಟ್ಟು ಕೊಂಡರೂ ತನ್ನ ಒಡಹುಟ್ಟಿದವಳಿಂದ ಮುಚ್ಚಿಡಲಾಗು
ವುದಿಲ್ಲ, ಬಚ್ಚಿಡಲಾಗುವುದಿಲ್ಲ. ತಂಗಿ ಮುಕ್ತಾಯಕ್ಕ ಅಜಗಣ್ಣನನ್ನೇ ಗುರುವೆಂದು ಭಾವಿಸಿ ಆಧ್ಯಾತ್ಮಿಕ ಪಥದಲ್ಲಿ ಸಾಗುತ್ತಾಳೆ. ಕೂರ್ಮ ಮತ್ತು ಕೂರ್ಮಶಿಶುವಿನ
ಸ್ನೇಹ ಸಂಬಂಧ ಅಣ್ಣ ತಂಗಿಯರದಾಗಿರುತ್ತದೆ. ಅಣ್ಣ ಹೇಳುವುದಕ್ಕಿಂತ ಮುಂಚೆ ತಂಗಿ ಗ್ರಹಿಸಿರುತ್ತಾಳೆ. ತಂಗಿ ಕೇಳುವ ಪೂರ್ವದಲ್ಲಿಯೇ ಅಣ್ಣ ವಿವರಿಸುತ್ತಿರುತ್ತಾನೆ.
ಅಜಗಣ್ಣ ಮತ್ತು ಮುಕ್ತಾಯಕ್ಕನ ಕಕ್ಕುಲತೆ ಅದು ಅಪೂರ್ವ ಮತ್ತು ಅನಿರ್ವಚನೀಯ.

ಇಷ್ಟೆಲ್ಲ ಅಲೌಕಿಕ ಜ್ಞಾನ ಸಂಬಂಧಗಳಿದ್ದರೂ ಅಜಗಣ್ಣ ಮತ್ತು ಮುಕ್ತಾಯಕ್ಕನವರಿಗೆ ಲೌಕಿಕ ಕರ್ತವ್ಯಗಳೂ, ಸಾಮಾಜಿಕ ಹೊಣೆಗಾರಿಕೆಗಳೂ ಕಾಡಿರಬೇಕು ಸಂಸಾರದ ಕಟ್ಟುಪಾಡುಗಳಿಂದ ಬಂಧಿತನಾಗಿ ಅಜಗಣ್ಣ, ತಂಗಿ ಮುಕ್ತಾಯಕ್ಕಳನ್ನು ಇಂದಿನ ದೇವದುರ್ಗ ತಾಲೂಕಿನ ಮೊಸರುಕಲ್ಲು ಗ್ರಾಮದ ಅನುರೂಪ ವರನೋರ್ವನಿಗೆ ಧಾರೆಯೆರೆದು ಕೊಟ್ಟಿರುತ್ತಾನೆ. ತಂಗಿ ತವರಿನಿಂದ ಗಂಡನ ಮನೆಗೆ ಹೋಗುವ ದೃಶ್ಯ ಕರುಳು ಮಿಡಿಯು ವುದಾಗಿರುತ್ತದೆ.

ಮುಕ್ತಾಯಕ್ಕ ಅಣ್ಣನನ್ನು ಅಗಲಲಾರದೆ ಅಗಲಿ ಕಣ್ಣು ತುಂಬ ನೀರು ತುಂಬಿಕೊಂಡು “ನಿನಗೇನಾದರೂ ಆಗ
ಬಾರದ್ದು ಆದರೆ ನೂರಾರು ಮೈಲಿ ದೂರವಿರುವ ನನಗೆ
ಹೇಗೆ ತಿಳಿಯಬೇಕು ” ಎಂದು ಕೇಳಲು ಅಜಗಣ್ಣ ಹೇಳುವುದೇನೆ0ದರೆ ” ನೋಡು ತಂಗಿ ಅಂತಹ ಸಂದರ್ಭದಲ್ಲಿ ನಿನ್ನ ಮಲ್ಲಿಗೆ ದಂಡೆ ಮುಡಿದುಕೊಳ್ಳುವ ಮುಂಚೆ ಬಾಡು
ತ್ತದೆ ಮತ್ತು ನೀ ಕಡೆಯುವ ಮೊಸರು ಕಲ್ಲಾಗುತ್ತದೆ. “
ಇವುಗಳ ಭರವಸೆ ಮೇಲೆ ಮುಕ್ತಾಯಕ್ಕ ತನ್ನ ಗಂಡನ ಮನೆಯಲ್ಲಿ ಭಕ್ತಿಯಾಚಾರಣೆಯಲ್ಲಿರುತ್ತಾಳೆ.

ಆದರೆ ಒಂದು ದಿನ ಅಣ್ಣನ ಅನಾಹುತದ ಸೂಚನೆಗಳು ನೈಜವಾಗುತ್ತವೆ. ಹೌಹಾರಿ ಲಕ್ಕುಂಡಿಗೆ ಧಾವಿಸಿದಾಗ ಅಜಗಣ್ಣ ತಲೆಗೆ ಬಾಗಿಲು ಚೌಕಟ್ಟು ಬಡಿದು ಲಿಂಗೈಕ್ಯ
ನಾಗಿರುತ್ತಾನೆ. ಆತನ ಅರಳ್ದ ತಲೆಯನ್ನು ತೊಡೆಯ ಮೇಲಿಟ್ಟುಕೊಂಡು ಕಂಗಳ ಮುತ್ತು ಪೋಣಿಸುವಾಗ ಅಲ್ಲಮಪ್ರಭು ಬರುತ್ತಾನೆ. ಆಕೆ ಅಳುವುದರ ಮೇಲೆಯೇ ಅಲ್ಲಮಪ್ರಭು ಈಕೆ ಮಹಾಜ್ಞಾನಿಯೆಂದು ತಿಳಿದು ಆಕೆಯ
ಅಜ್ಞಾನಜನ್ಯ ದುಃಖವನ್ನು ದೂರ ಮಾಡದೆ ಹೋಗುವುದು
ತರವಲ್ಲವೆಂದು ಬಂದು ಸಮಾಧಾನ ಪಡಿಸುತ್ತಾನೆ ಅಲ್ಲಮ ಪ್ರಭು. ಅಜಗಣ್ಣನ ಆಲಿಪ್ತ ಜೀವನವನ್ನು ಪರಿ ಭಾವಿಸಿಅಲ್ಲಮನು ” ಆತನು ಈಗ ಅಗಲಿದ್ದಾನೆಯೆಂದರೆ
ಇದ್ದುದು ಯಾವಾಗ ? ಶರಣರು ಮಾರ್ಗದರ್ಶನ ನೀಡಿದ್ದಾರೆಯೆಂದ ಮಾತ್ರಕ್ಕೆ ಅವರು ದೇಹದಾರಿಗಳಾಗಿದ್ದರೆಂದು ಭಾವಿಸಲಿಕ್ಕಾಗುವುದಿಲ್ಲ,ಅವರು ಯಾವ ಮಣಿಹ ಪೂರೈಸಲು ಬಂದಿದ್ದರೋ ಅದು ಈಡೇರಿದ ಬಳಿಕ ಇಲ್ಲಿರುವವರಲ್ಲ. ” ಎಂದು ಹೇಳಿದಾಗ ಮುಕ್ತಾಯಕ್ಕನಿಷ್ಠುರ
ವಾಗಿ ” ಮಾತುಗಳ ಬಣವೆಯಲ್ಲಿ ನನ್ನನ್ನು ಹೂಳಲು ಪ್ರಯತ್ನಿಸಬೇಡ ,ಆತನು ನನ್ನೊಡನೆ ಹುಟ್ಟಿದುದೂ ನನಗೆ
ಹೆಜ್ಜೆ ಹೆಜ್ಜೆಗೆ ಹಿತೋಪದೇಶ ನೀಡಿದುದೂ ಸುಳ್ಳಲ್ಲ “ವೆಂದು ವಾದಿಸುತ್ತಾಳೆ. ತನಗೆ ಮುಂದಾರು ಗತಿಯೆಂದಾಗ
ತನ್ನ ತಾನರಿಯುವುದೇ ಸದ್ಗತಿಯೆಂದು ವಿಧವಿಧವಾಗಿ ಅಲ್ಲಮ ಪ್ರಭು ಕಳಕಳಿಯಿಂದ ತಿಳಿಸಿಕೊಡುತ್ತಾನೆ.
ಅವರಿಬ್ಬರ ತಾತ್ವಿಕ ಸಂಭಾಷಣೆಯನ್ನು ಶೂನ್ಯ ಸಂಪಾದನೆಯಲ್ಲಿ ಓದಿಯೇ ಆಸ್ವಾದಿಸಬೇಕು. ಅದು ತಿಳಿಸುವ ಮಾತಲ್ಲ, ತಿಳಿಸದೆ ತಿಳಿಯುವ ಸಂಗತಿಯಲ್ಲ.

ಗುರು ಸ್ವರೂಪನಾಗಿದ್ದ ಅಣ್ಣನಗಲಿದರೂ, ಅಣ್ಣನ ಸ್ವರೂಪದ ಗುರು ಅಲ್ಲಮನ ಮೂಲಕ ದೊರೆತಿದ್ದಾನೆಂದು ಮುಕ್ತಾಯಕ್ಕ ಆಧ್ಯಾತ್ಮದ ಮಾರ್ಗದಲ್ಲಿ ಸಾಗುತ್ತಾಳೆ. ಈ ಗುರು-ಶಿಷ್ಯೆ ಸಂಬಂಧ ಬಹಳ ದಿವಸ ಮುಂದುವರೆದಂತೆ
ಕಾಣುತ್ತದೆ. ಈ ಭಾಗದಲ್ಲಿ ಸುಳಿದಾಗಲೆಲ್ಲ ಅಲ್ಲಮ ಪ್ರಭು ಮೊಸರಕಲ್ಲಿಗೆ ಭೇಟಿ ನೀಡುತ್ತಿದ್ದಿರಬೇಕು. ಮೊಸರ
ಕಲ್ಲಿಗೆ ಮೊದಲು ಯಾವುದೋ ಹೆಸರಿದ್ದು ಅದು ಮುಕ್ತಾಯಕ್ಕಳ ಮೊಸರು ಕಲ್ಲಾದಾಗಲೇನೇ ಪುನರ್ನಾ ಮಕರಣವಾಗಿರಬೇಕು. ಏಕೆಂದರೆ ಅದೇ ದೇವದುರ್ಗ
ತಾಲೂಕಿನಲ್ಲಿ ಪ್ರಭುದೇವರ ಗದ್ದುಗೆ ಇದೆ. ಅದು ಮುಕ್ತಾಯಕ್ಕ ಕಟ್ಟಿಸಿದುದೆ0ಬುದು ಜನಪದರನಂಬಿಕೆ.

ವಚನ ವಿಶ್ಲೇಷಣೆ

ಮೂಗನ ಕೈಯಲ್ಲಿ ಕಾವ್ಯವ ಕೇಳಿದಂತಿರಬೇಕು,
ಅಂಧಕನ ಕೈಯ ಅಂಧಕ ಹಿಡಿದಂತಿರಬೇಕು,
ದರ್ಪಣದೊಳಗಿನ ಪ್ರತಿಬಿಂಬದಂತೆ
ಹಿಡಿಯುವವರಿಗೆ ಆಳವಲ್ಲದಿರಬೇಕು ಅಣ್ಣಾ !
ಕೂರ್ಮನ ಶಿಶುವಿನ ಸ್ನೇಹದಂತಿರಲೊಲ್ಲದೆ
ಆರೂಢಗೆಟ್ಟಿಯೋ ಅಜಗಣ್ಣಾ !

ಅಜಗಣ್ಣ ಮತ್ತು ಮುಕ್ತಾಯಕ್ಕ ಬದುಕಿನಲ್ಲಿ ಅಣ್ಣ-ತಂಗಿ
ಮುಕ್ತಾಯಕ್ಕ ತನ್ನ ಅಣ್ಣನನ್ನೇ ಗುರುವೆಂದು ಭಾವಿಸಿ
ಆಧ್ಯಾತ್ಮಮಾರ್ಗದಲ್ಲಿಮುಂದುವರಿದಿದ್ದಳು.ಅಜಗಣ್ಣನು ಎಂತಹ ಆರೂಢ ಸ್ಥಲಕ್ಕೆ ಏರಿದ್ದನೆಂದರೆ ತಾನೊಬ್ಬರಿಗೆ ಹೇಳಲರಿಯೆನು, ತನಗೇನೂ ಗೊತ್ತೇಯಿಲ್ಲ, ತನ್ನ ರೂಪ ತಿಳಿದು ನೋಡಬೇಕೆಂದು ಕನ್ನಡಿಯನು ಪಾವಸ್ತೆ
ಮಾಡಲು ಆ ಕನ್ನಡಿ ಬೇಕುಬೇಡೆ0ಬುದೇ? ಎಂಬಂತಹ ನಿಲುವಿನವನು ಅಜಗಣ್ಣ. ಅವನದೆಲ್ಲವೂ ಗುಪ್ತಭಕ್ತಿ,
ಗುಪ್ತ ಸಿದ್ಧಿ. ಅಜಗಣ್ಣ ಶಬ್ದಗಳಿಗೆ ಹೇಸಿ ಮುಗ್ದನಾಗಿದ್ದಾನೆಂದೇ ಮಹಾಜ್ಞಾನಿಯಾದ ಮುಕ್ತಾಯಕ್ಕಆತನನ್ನೆ
ಪರಮಗುರು ಎಂದು ಭಾವಿಸಿದ್ದಳು.

ಗುರು-ಶಿಷ್ಯ ಸಂಬಂಧ….ತಂದೆ-ಮಕ್ಕಳ ಸಂಬಂಧವೂ ಅಲ್ಲ ,ಅಣ್ಣ -ತಮ್ಮಂದಿರ ಸಂಬಂಧವೂ ಅಲ್ಲ. ಸಂಸಾರದ
ಪ್ರೇಮ ಸಂಬಂಧಗಳಲ್ಲಿ ಸ್ವಾರ್ಥವೇ ಮೂಲವಾಗಿರುತ್ತದೆ. ಆದರೆ ಗುರು-ಶಿಷ್ಯ ಸಂಬಂಧದಲ್ಲಿ ಸ್ವಾರ್ಥಕ್ಕೆ ಆಸ್ಪದವಿಲ್ಲ
ಗುರುವು ಶಿಷ್ಯನಿಗಾಗಿ ಹಂಬಲಿಸುತ್ತಿರುತ್ತಾನೆ. ಶಿಷ್ಯ ಗುರುವಿಗಾಗಿ ಹಾತೊರೆಯುತ್ತಿರುತ್ತಾನೆ. ಹೇಳಲಿಲ್ಲದ ಬಿನ್ನಪ, ಕೇಳಲಿಲ್ಲದ ಕರ್ಣ ಮಂತ್ರ, ಹೂಸಲಿಲ್ಲದ ವಿಭೂತಿಪಟ್ಟ, ಮುಟ್ಟಲಿಲ್ಲದ ಹಸ್ತ -ಮಸ್ತಕ ಸಂಯೋಗ ಎಂಬ ರೀತಿಯಲ್ಲಿ ಗುರು ಕರುಣೆ ಆಗುತ್ತಿರುತ್ತದೆ. ಬೆಳದಿಂಗಳು ಕುಡಿಯುವ ಚಕೋರದಂತೆ ಶಿಷ್ಯನ ದಾಹ
ಇರಬೇಕು ಅಷ್ಟೆ.

ಅಜಗಣ್ಣ ಮತ್ತು ಮುಕ್ತಾಯಕ್ಕ ಇಂತಹ ಗುರು-ಶಿಷ್ಯ ಸಂಬಂಧ ಹೊಂದಿರಲು ಅಜಗಣ್ಣ ಒಂದು ದಿವಸ ಏಕಾ ಏಕಿ ಲಿಂಗೈಕ್ಯನಾಗುತ್ತಾನೆ. ಮುಕ್ತಾಯಕ್ಕನಿಗೆ ದಿಕ್ಕೇ ತೋಚದಾಗುತ್ತದೆ. ಏನೂ ತಿಳಿಸಿ ಹೇಳದಿದ್ದರೂ ಎಲ್ಲ
ವನ್ನೂ ಆಚರಿಸಿ ತೋರಿಸುತ್ತಿದ್ದ ಅಣ್ಣ ಇನ್ನಿಲ್ಲವಾದಾಗ ಆಧ್ಯಾತ್ಮಿಕ ಪಥದಲ್ಲಿ ಹೇಗೆ ಮುಂದುವರೆಯಬೇಕೆಂದು ತೀವ್ರ ತರವಾದ ವಿವಂಚನೆಯಾಗುತ್ತದೆ. ಆಕೆಯ ರೋಧನವೇ ಅಲ್ಲಮ ಪ್ರಭುವಿಗೆ ಆಕೆಯೊಬ್ಬಳು ಮಹಾ

ಜ್ಞಾನಿಯೆ0ಬುದನ್ನು ಮನದಟ್ಟು ಮಾಡಿಕೊಡಬೇಕಾದರೆ ಆಕೆ ಎಂತಹ ಅರ್ಥತುಂಬಿದ ಶಬ್ದಗಳಿಂದ ಅಳುತ್ತಿದ್ದ
ಳೆ0ಬುದನ್ನು ನಾವು ಪರಿ ಭಾವಿಸಬೇಕು. ಆಕೆಯಹಲವು ಶೋಕಗೀತೆಗಳಲ್ಲಿ ಪ್ರಸ್ತುತ ವಚನವೂ ಒಂದು ಶೋಕ
ಗೀತೆಯಾಗಿದೆ.

ಈ ಮರ್ತ್ಯವೇ ಅಜ್ಞಾನದ ಆಗರ, ಸ್ವಾರ್ಥದ ಸೌಧ. ಪ್ರತಿಯೊಬ್ಬರೂ ಅರಿವನ್ನು ಅಣಲೊಳಗಿಕ್ಕಿ ಆಗಿಯುತ್ತಿರುವಾಗ ಅರಿವು ಉಳಿಯಬಲ್ಲದೇ ? ಇಂತಹಅಜ್ಞಾನಿ
ಗಳ ನಡುವೆ ಹೇಗೆ ಬಾಳಬೇಕು ? ಕತ್ತಲಾವುದು? ಬೆಳಕಾವುದು ಎಂದು ತಿಳಿಯುವ ಮೊದಲೇ ಗುರು ವಾದವನು ಮಧ್ಯದಲ್ಲಿ ಕೈಬಿಟ್ಟು ಹೋದುದು ಹೇಗಾಗಿದೆಯೆಂದರೆ ಕಣ್ಣು ಕಟ್ಟಿ ಕನ್ನಡಿಯನ್ನು ತೋರಿಸಿ ದಂತಾಗಿದೆ. ಇದು ಮುಕ್ತಾಯಕ್ಕನ ಅಳಲು.

ಎಲ್ಲವನ್ನೂ ನಡೆದು ತೋರುವ ಅಜಗಣ್ಣ ಬೆಂಬಲಕ್ಕಿರುವಾಗ ಮುಕ್ತಾಯಕ್ಕಳಿಗೆ ಒಂದು ರೀತಿಯ ಧೈರ್ಯವಿದ್ಧಿತು. ಆತನು ತಿಳಿಸಿ ಹೇಳಲಿ ; ಹೇಳದಿರಲಿ ಅಣ್ಣನ ಸಾನಿದ್ಯದಲ್ಲಿ ಆಕೆ ಪ್ರತಿಯೊಂದು ಸಮಸ್ಯೆಗೂ ಸಾಂತ್ವನ
ಪಡೆಯುತ್ತಿದ್ದಳು. ಅಜಗಣ್ಣನಿಂದ ಹಿತ ವಚನಗಳನ್ನು ಹೇಗೆ ಪಡೆಯುತ್ತಿದ್ದಳೆಂದರೆ ಮೂಗನ ಕೈಯಲ್ಲಿ ಕಾವ್ಯವನ್ನು ಓದಿಸಿ ಅದರ ಭಾವಾರ್ಥವನ್ನು ಅರಿತುಕೊಳ್ಳು
ತ್ತಿದ್ದಳು. ಕಾವ್ಯದ ಭಾವಾರ್ಥವು ಓದುವವನ ಭಾವದಿಂದಲೇ ವ್ಯಕ್ತವಾಗುತ್ತಿತ್ತು. ಮಾತು ಬರುವವರು ಕಾವ್ಯ ಓದಿದರೆ ಚರ್ಚೆಗೆ ಅವಕಾಶವುಂಟಾಗುತ್ತದೆ. ಚರ್ಚೆ
ಘರ್ಷಣೆಗೂ ಕೊ0ಡೊಯ್ಯಬಹುದು. ಅದಕ್ಕಾಗಿ ಮೂಗನ ಕೈಯಲ್ಲಿ ಕಾವ್ಯವನ್ನು ಆಸ್ವಾದಿಸುವುದೇ ಕ್ಷೇಮ ಕರವಾದುದು.

ಅಂಧಕನ ಕೈ ಅಂಧಕ ಹಿಡಿದರೆ ತಗ್ಗಿಗೆ ಬೀಳುವುದು ಖಂಡಿತ ಎಂಬ ಮಾತು ಲೋಕಾರೂಢಿಯಲ್ಲಿದೆ ಯಾದರೂ ತಗ್ಗಿಗೆ ಬೀಳುವವನು ಒಬ್ಬನಿದ್ದರೂ ಬಿದ್ದೇ
ಬೀಳುತ್ತಾನೆ. ಒಬ್ಬನೇ ಹೋಗುವದಕ್ಕಿಂತ ಅಂಧರು ಮತ್ತೊಬ್ಬ ಅಂಧನ ಕೈ ಹಿಡಿದು ಹೋದರೆ ಇಬ್ಬರಿಗೂ ಒಂದು ರೀತಿ ಹೆಚ್ಚಿನ ಭದ್ರತೆ. ಗುರು-ಶಿಷ್ಯರು ಹೀಗೆಯೇ
ಇರಬೇಕು. ಅವರಲ್ಲಿ ಒಬ್ಬ ಮಹಾಜ್ಞಾನಿ ಮತ್ತೊಬ್ಬ ಅಜ್ಞಾನಿಯಾದರೆ ಶೋಷಣೆ ತಪ್ಪಿದ್ದಲ್ಲ. ಮೋಸ ನಡೆಯದಿರುವುದಿಲ್ಲ.

ಕನ್ನಡಿಯೊಳಗೆ ಪ್ರತಿಬಿಂಬವಿರುತ್ತದೆ. ಅದನ್ನು ಹಿಡಿದು ಕೊಳ್ಳುವುದು ಯಾರಿ0ದಲೂ ಸಾಧ್ಯವಿಲ್ಲ. ಕನ್ನಡಿಯೊಳಗಿನ ಪ್ರತಿಬಿಂಬವನ್ನು ಹಿಡಿಯಬೇಕಾದರೆ ಮೂಲಬಿಂಬವನ್ನೇ ಹಿಡಿಯಬೇಕಾಗುತ್ತದೆ. ಗುರುವು ದರ್ಪಣ
ವಿದ್ದಂತೆ. ಶಿಷ್ಯ ಬಿಂಬ ಮತ್ತು ಪ್ರತಿಬಿಂಬ ಇದ್ದಂತೆ ಸರ್ವಸಾಮರ್ಥ್ಯ ಮೂಲ ಬಿಂಬದ್ದೇ.

ಅದೇ ರೀತಿ ಗುರು-ಶಿಷ್ಯರ ಸಂಬಂಧ ಆಮೆ ಮತ್ತು ಆಮೆಯ ಮರಿಯ ರೀತಿಯಲ್ಲಿರಬೇಕು. ತಾಯಿ ಆಮೆ ತನ್ನ ಮಗುವಿಗೆ ಮೊಲೆಯನ್ನೂ ಕೊಡುವುದಿಲ್ಲ. ಗುಟುಕನ್ನೂ ಕೊಡುವುದಿಲ್ಲ , ಕೇವಲ ಮಮತೆಯಿಂದ ನೋಡಿದರೆ ಸಾಕು ಮಗುವಿನ ಹೊಟ್ಟೆ ತುಂಬಿರುತ್ತದೆ.
ಮರಿ ಆಮೆಯೂ ಅಷ್ಟೆಯೇ. ತನಗೆ ಹಸಿವಾದಾಗ ತಾಯಿಯ ಹತ್ತಿರ ಹೋಗಬೇಕಾದುದಿಲ್ಲ.ದೂರದಿಂದಲೇ
ತಾಯಿಯನ್ನು ವಾತ್ಸಲ್ಯದಿಂದ ನೋಡಿದರೆ ಅದರ ಹಸಿವು ಹಿಂಗುತ್ತದೆ. ಅಜಗಣ್ಣ ಮತ್ತು ಮುಕ್ತಾಯಕ್ಕರ ಗುರು -ಶಿಷ್ಯ ಸಂಬಂಧ ಕೂರ್ಮ ಮತ್ತು ಕೂರ್ಮನ ಶಿಶುವಿನ
ಸಂಬಂಧದಂತೆ ಇದ್ದಿತು.ಅದೇ ಈಗ ತಪ್ಪಿಹೋಯಿತಲ್ಲಾ ಎಂಬುದೇ ಮುಕ್ತಾಯಕ್ಕಳ ಶೋಕ.

ಸುಧಾ ಪಾಟೀಲ್
ಬೆಳಗಾವಿ

One thought on “ಮುಕ್ತಿಯ ಮುಮುಕ್ಷು ಮುಕ್ತಾಯಕ್ಕ

  1. ವಿವರವಾದ ವಿಶ್ಲೇಷಣೆ ಅಧ್ಯಯನ ಪೂರ್ಣ ಮಾಹಿತಿಯನ್ನ ಲೇಖನದಲ್ಲಿ ಅತ್ಯಂತ ಸುಂದರವಾಗಿ ಕಟ್ಟಿಕೊಟ್ಟಿದ್ದೀರಿ ಧನ್ಯವಾದಗಳು ಮೇಡಂ

Comments are closed.

Don`t copy text!